Thursday, April 19, 2012

Kathopanishad in Kannada Ch-01 Canto-01 Shloka-20-29

ಯೇಯಂ ಪ್ರೇತೇ ವಿಚಿಕಿತ್ಸಾ ಮನುಷ್ಯೇSಸ್ತೀತ್ಯೇಕೇ ನಾಯಮಸ್ತೀತಿ ಚೈಕೇ
ಏತದ್ವಿದ್ಯಾಮನುಶಿಷ್ಟಸ್ತ್ವಯಾSಹಂವರಾಣಾಮೇಷ ವರಸ್ತೃತೀಯಃ                             ೨೦
ಮೂರನೇ ವರವಾಗಿ ನಚಿಕೇತ ಇಡೀ ಮನುಕುಲವನ್ನು ಯಾವಾಗಲೂ ಕಾಡುತ್ತಿರುವ ಒಂದು ವಿಶಿಷ್ಠವಾದ ಪ್ರಶ್ನೆಯನ್ನು ಯಮನ ಮುಂದಿಡುತ್ತಾನೆ. ಇಡೀ ವೈದಿಕ ಚಿಂತನೆಯಲ್ಲಿ ಈ ವಿಷಯ ಇನ್ನೆಲ್ಲೂ ಸಿಗುವುದಿಲ್ಲ. ಅಂಥಹ ಅಪೂರ್ವ ವಿಷಯದ ಬಗ್ಗೆ ಇಲ್ಲಿ ಯಮನಲ್ಲಿ ಪ್ರಶ್ನೆ ಹಾಕುತ್ತಿದ್ದಾನೆ ನಚಿಕೇತ. ಮೇಲ್ನೋಟದಲ್ಲಿ ಈ ಶ್ಲೋಕವನ್ನು ನಾವು ನೋಡಿದರೆ ನಮಗೆ ನಚಿಕೇತನ ಪ್ರಶ್ನೆ ತುಂಬಾ ಸರಳ ಎನಿಸುತ್ತದೆ. ಆದರೆ ಈ ಪ್ರಶ್ನೆಗೆ ಯಮನ ಉತ್ತರವನ್ನು ನೋಡಿದಾಗ ಇಲ್ಲಿ ಕಾಣುವ ಮೇಲ್ನೋಟದ ಅರ್ಥ ನಚಿಕೇತನ ಮೂಲ ಪ್ರಶ್ನೆ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಮೇಲ್ನೋಟಕ್ಕೆ ಈ ಶ್ಲೋಕವನ್ನು ನೋಡಿದರೆ: ‘ಯೇಯಂ ಪ್ರೇತೇ ವಿಚಿಕಿತ್ಸಾ ಮನುಷ್ಯೇ’ – ಸತ್ತ ಮನುಷ್ಯನ ಬಗೆಗೆ ಒಂದು ಸಂದೇಹವಿದೆ; ‘ಅಸ್ತೀತ್ಯೇಕೇ ನಾಯಮಸ್ತೀತಿ ಚೈಕೇ’-ಕೆಲವರು ಹೇಳುತ್ತಾರೆ ಸತ್ತ ಮೇಲೆ ಅಸ್ತಿತ್ವ ಇದೆ ಎಂದು, ಇನ್ನು ಕೆಲವರು ಇಲ್ಲ ಎಂದು; ‘ಏತದ್ವಿದ್ಯಾಮನುಶಿಷ್ಟಸ್ತ್ವಯಾSಹಂ’- ಇದರ ಕುರಿತು ಶಾಸ್ತ್ರಕ್ಕನುಗುಣವಾಗಿ ನಾನು ನಿನ್ನಿಂದ ಕೇಳಿ ತಿಳಿದುಕೊಳ್ಳಬೇಕು’-ಇದು ಮೇಲ್ನೋಟದ ಅರ್ಥ. ಆದರೆ ಈ ರೀತಿ ಈ ಶ್ಲೋಕವನ್ನು ಬಿಡಿಸುವುದು ತಪ್ಪು. ಏಕೆಂದರೆ ಇಲ್ಲಿ ನಚಿಕೇತ ಸತ್ತು ಯಮಲೋಕದಲ್ಲಿದ್ದಾನೆ. ಆದ್ದರಿಂದ ಸತ್ತ ಮೇಲೆ ಅಸ್ತಿತ್ವವಿದೆಯೋ ಅನ್ನುವ ಪ್ರಶ್ನೆಯೇ ಇಲ್ಲಿ ಅಸಂಗತ. ಯಮಲೋಕ ಪಯಣದಲ್ಲಿ ಜೀವಗಳ ಪ್ರವಾಹವನ್ನು ನಚಿಕೇತ ನೋಡಿದ್ದಾನೆ. ಹಾಗಿರುವಾಗ ದೇಹಕ್ಕಿಂತ ಬೇರೆಯಾದ ಅತ್ಮವಿದೆಯೋ ಎಂದು ಆತ ಪ್ರಶ್ನೆ ಹಾಕುವ ಸಾಧ್ಯತೆಯೇ ಇಲ್ಲ.  ಹಾಗಾಗಿ ಇಲ್ಲಿರುವ ನಿಜವಾದ ಮೂಲ ಅರ್ಥ ತಿಳಿಯಲು ನಾವು ಈ ಶ್ಲೋಕವನ್ನು ಬೇರೆ ಆಯಾಮದಲ್ಲಿ ನೋಡಬೇಕು.
‘ಯೇಯಂ ಪ್ರೇತೇ ವಿಚಿಕಿತ್ಸಾ ಮನುಷ್ಯೇ’ ಎನ್ನುವಲ್ಲಿ ‘ಪ್ರೇತ’ ಎನ್ನುವ ಪದದ ಅರ್ಥ ಸತ್ತ ಜೀವವಲ್ಲ. ಸಂಸ್ಕೃತದಲ್ಲಿ ಪ್ರೇತ ಎಂದರೆ ಎತ್ತರಕ್ಕೆ ಏರಿದವನು(ಪ್ರಕೃಷ್ಟಂ ಏತಃ-ಪ್ರೇತಃ) ಅಥವಾ  ಮೇಲಕ್ಕೆ ಹೋದವನು ಎಂದರ್ಥ. ಮೇಲಕ್ಕೆ ಅಂದರೆ ಪುಣ್ಯಲೋಕಕ್ಕೆ ಹೋಗುವುದು. ಪುಣ್ಯಲೋಕದಲ್ಲಿ ಕೊನೆಯ ಎತ್ತರ-ಮೋಕ್ಷ. ಆದ್ದರಿಂದ ಇಲ್ಲಿ ಪ್ರೇತಃ ಅಂದರೆ ಮೋಕ್ಷವನ್ನು ಪಡೆದಿರತಕ್ಕವ. ಇನ್ನು ‘ಮನುಷ್ಯ’ ಎಂದರೆ ಕೇವಲ ಮಾನವ ಅಲ್ಲ. ಮನನಶೀಲವಾದ ಜೀವ-ಮನುಷ್ಯ[ಮಾನವರು, ದೇವತಗಳು, ಇತ್ಯಾದಿ] . ವಿಚಿಕಿತ್ಸೆ- ಎಂದರೆ ವಿಚಾರಣೆ ಅಥವಾ ಚರ್ಚೆ. ‘ಅಸ್ತೀತ್ಯೇಕೇ ನಾಯಮಸ್ತೀತಿ ಚೈಕೇ’ ಎನ್ನುವಲ್ಲಿ ‘ಅಸ್ತಿ’ ಅನ್ನುವುದಕ್ಕೆ ವಿಶೇಷ ಅರ್ಥವಿದೆ. ಅಸ್ತಿ ಅಂದರೆ ಎಲ್ಲಕ್ಕಿಂತ ಶ್ರೇಷ್ಠವಾದ ವಸ್ತು- ಅಂದರೆ ಭಗವಂತ. ಈ ಎಲ್ಲಾ ಅರ್ಥದೊಂದಿಗೆ ಈ ಶ್ಲೋಕವನ್ನು ನೋಡಿದರೆ ಆಗ ನಮಗೆ ನಚಿಕೇತನ ಮೂಲ ಪ್ರಶ್ನೆ ಏನು ಎನ್ನುವುದು ಅರ್ಥವಾಗುತ್ತದೆ.
 “ಸತ್ತ ಜೀವಕ್ಕೆ ಭಗವಂತನ ನಿಯಮನ ಹೇಗೆ?  ಭಗವಂತ ಮೊಕ್ಷದಲ್ಲೂ ನಿಯಾಮಕನಾಗಿರುತ್ತಾನೆ ಎನ್ನುತ್ತಾರೆ ಜ್ಞಾನಿಗಳು, ಇಲ್ಲ ಎನ್ನುತ್ತಾರೆ ಇನ್ನು ಕೆಲವರು. ಹೀಗಿರುವಾಗ ಮೋಕ್ಷದಲ್ಲಿ ಭಗವಂತ ಜೀವನನ್ನು ನಿಯಂತ್ರಿಸುವ ಬಗೆ ಎಂಥದ್ದು? ಮೋಕ್ಷದಲ್ಲಿ ಭಗವಂತನ ಪ್ರೇರಣೆ ಹೇಗಿರುತ್ತದೆ? ಭಗವಂತನ ಧಾರಕಶಕ್ತಿಯನ್ನು ಚನ್ನಾಗಿ ತಿಳಿದ, ಧರ್ಮನಿಯಾಮಕನಾದ ನೀನು, ಇದನ್ನು ಶಾಸ್ತ್ರಕ್ಕೆ ಅನುಗುಣವಾಗಿ ನನಗೆ ಅನುಭವವಾಗುವಂತೆ ಅನುಭವಿಸಿ ಹೇಳು. ಇದು ನಾನು ಕೇಳಬೇಕಾದ ಮೂರನೆಯ ಹಾಗೂ ಕೊನೆಯ ವರ.” ಎಂದು ನಚಿಕೇತ ತನ್ನ ಪ್ರಶ್ನೆಯನ್ನು ಯಮನ ಮುಂದಿಡುತ್ತಾನೆ.
ಅಧ್ಯಾತ್ಮ ವಿದ್ಯೆಯಲ್ಲಿ ಮನುಷ್ಯ ತಿಳಿಯಬೇಕಾದ ಅತ್ಯಂತ ಶ್ರೇಷ್ಠ ವಿಚಾರವಿದು. ಸತ್ತ ನಂತರ ಜೀವ ಮತ್ತು ಭಗವಂತನ ಸಂಬಂಧ, ಮುಕ್ತಿಯಲ್ಲಿ ಭಗವಂತ ಜೀವನನ್ನು ನಿಯಮಿಸುವ ನಡೆ –ಎಲ್ಲವೂ ಬಹಳ ನಿಗೂಢ. ಮೋಕ್ಷವನ್ನು ಕಾಣದವ ಇದನ್ನು ವಿವರಿಸಲಾರ, ಮೋಕ್ಷವನ್ನು ಸೇರಿದವ ಮರಳಿ ಬಂದು ಹೇಳಲಾರ. ಹೀಗಿರುವಾಗ ಈ ವಿಚಾರ ಬಹಳ ರಹಸ್ಯ. ಇಂಥಹ ನಿಗೂಢವಾದ ವಿಷಯವನ್ನು ಯೋಗ್ಯರಲ್ಲದವರಿಗೆ ಯಾರೂ ಹೇಳುವುದಿಲ್ಲ. ಆದ್ದರಿಂದ ಇಲ್ಲಿ ಯಮ ನೇರವಾಗಿ ನಚಿಕೇತನ ಪ್ರಶ್ನೆಗೆ ಉತ್ತರಿಸದೆ, ಆತನ ಯೋಗ್ಯತೆಯನ್ನು ಮತ್ತೆ ವಿವಿಧ ರೀತಿಯಿಂದ ಪರೀಕ್ಷಿಸುವುದನ್ನು ಮುಂದಿನ ಶ್ಲೋಕಗಳಲ್ಲಿ ಕಾಣಬಹುದು.
ದೇವೈರತ್ರಾಪಿ ವಿಚಿಕಿತ್ಸಿತಂ ಪುರಾ  ನ ಹಿ ಸುವಿಜ್ಞೇಯಮಣುರೇಷ ಧರ್ಮಃ
ಅನ್ಯಂ ವರಂ ನಚಿಕೇತೋ ವೃಣೀಷ್ವ  ಮಾ ಮೋಪರೋತ್ಸೀರತಿ ಮಾ ಸೃಜೈನಂ          ೨೧
ಯಮ ಹೇಳುತ್ತಾನೆ: “ನೀನು ಕೇಳಿದ ವಿಚಾರ ದೇವತೆಗಳಿಗೂ ಪೂರ್ಣವಾಗಿ ತಿಳಿದಿಲ್ಲ. ಈ ಬಗ್ಗೆ ದೇವಲೋಕದಲ್ಲಿ ನಿರಂತರ ಚರ್ಚೆ ನಡೆದಿದೆ” ಎಂದು. ಇಲ್ಲಿ ‘ನ ಹಿ ಸುವಿಜ್ಞೇಯಮಣುರೇಷ ಧರ್ಮಃ’ ಎನ್ನುವಲ್ಲಿ ‘ಧರ್ಮಃ’ ಅನ್ನುವುದನ್ನು ದೇವರು ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ‘ಧಾರಯತಿ ಇತಿ ಧರ್ಮಃ’. ಯಾವುದು ನಮ್ಮನ್ನು ಧಾರಣೆ ಮಾಡುತ್ತದೋ ಅದು ಧರ್ಮ. ನಮ್ಮ ಪ್ರಾಮಾಣಿಕ ಬದುಕು ನಮ್ಮನ್ನು ಧಾರಣೆ ಮಾಡಿ ಬಾಳಿನಲ್ಲಿ ಕುಸಿಯದಂತೆ ಮಾಡಿ ಎತ್ತರಕ್ಕೆರಲು ಸಹಾಯ ಮಾಡುತ್ತದೆ. ಅದು ಧರ್ಮ. ಎಲ್ಲವನ್ನೂ(ಇಡೀ ವಿಶ್ವವನ್ನು) ಧಾರಣೆ ಮಾಡಿದ ಆ ಭಗವಂತನನ್ನು ಶಾಸ್ತ್ರಕಾರರು ಧರ್ಮಃ ಎಂದು ಕರೆಯುತ್ತಾರೆ. ವಿಷ್ಣುಸಹಸ್ರನಾಮದಲ್ಲಿ ಭಗವಂತನನ್ನು ‘ಧರ್ಮೋ ಧರ್ಮವಿದುತ್ತಮಃ’ ಎಂದು ಕರೆದಿದ್ದಾರೆ. ಇಂಥಹ ಸ್ಥೂಲ ಪ್ರಪಂಚವನ್ನು ಧಾರಣೆ ಮಾಡಿದ ಭಗವಂತ ಸೂಕ್ಷ್ಮಾತಿ-ಸೂಕ್ಷ್ಮ. ಅದು ನಮ್ಮ ಬುದ್ಧಿಗೆ ನಿಲುಕಲಾರದ ಸಂಗತಿ. “ಇದನ್ನು ದೇವತೆಗಳೂ ಪೂರ್ಣ ಗ್ರಹಿಸಲಾರರು. ಹೀಗಿರುವಾಗ ನೀನು ತಿಳಿಯುವುದು ಕಷ್ಟ. ಹಾಗಾಗಿ ಈ ವರವನ್ನು ಬಿಟ್ಟು ಬೇರೆ ಏನಾದರೂ ವರವನ್ನು ಕೇಳು” ಎನ್ನುತ್ತಾನೆ ಯಮ. “ನನ್ನನ್ನು ಬಲವಂತ ಮಾಡಬೇಡ, ನನಗಾಗಿ ಈ ಪ್ರಶ್ನೆಯನ್ನು ಬಿಟ್ಟುಬಿಡು-ಬೇರೆ ಏನಾದರೂ ವರವನ್ನು ಕೇಳು” ಎಂದು ಯಮ ಹೇಳಿದಾಗ ನಚಿಕೇತ ಹೇಳುತ್ತಾನೆ:     
ದೇವೈರತ್ರಾಪಿ ವಿಚಿಕಿತ್ಸಿತಂ ಕಿಲ  ತ್ವಂ ಚ ಮೃತ್ಯೋ ಯನ್ನ ಸುಜ್ಞೇಯಮಾತ್ಥ
ವಕ್ತಾ ಚಾಸ್ಯ ತ್ವಾದೃಗನ್ಯೋ ನ ಲಭ್ಯೋ  ನಾನ್ಯೋ ವರಸ್ತುಲ್ಯ ಏತಸ್ಯ ಕಶ್ಚಿತ್                         ೨೨

ದೇವತೆಗಳಿಗೂ ಪೂರ್ಣ ತಿಳಿಯದ ವಿಷಯವೊಂದನ್ನು ನಾನು ನಿನ್ನಲ್ಲಿ ಕೇಳಿದ್ದೇನೆ. ನೀನು ಲೋಕದ ಧರ್ಮಾಧರ್ಮವನ್ನು ತೀರ್ಮಾನ ಮಾಡುವ ದೊಡ್ಡ ದೇವತೆ. ಹಾಗಿರುವಾಗ ಇಂಥಹ ನಿಗೂಢ ವಿಷಯವನ್ನು ತಿಳಿದ ನಿನ್ನ ಬಳಿ ಬಂದ ನಾನು ಈ ವಿಷಯವನ್ನು ತಿಳಿದುಕೊಳ್ಳದೆ ಹೋದರೆ ಮೂರ್ಖನಾದಂತೆ. ನಿಜವಾಗಿ ಭಗವಂತನನ್ನು ಕಂಡು ಸಾಕ್ಷಾತ್ಕಾರ ಪಡೆದ ಒಬ್ಬ ಉಪಾಧ್ಯಾಯ ಇಂದು ನನಗೆ ಸಿಕ್ಕಿದ್ದಾನೆ. ಹಾಗಿರುವಾಗ ಈ ಜ್ಞಾನದಿಂದ ನಾನು ವಂಚಿತನಾಗಲಾರೆ.  ಇದಕ್ಕೆ ಸಮನಾದ ಇನ್ನೊಂದು ವರವೇ ಇಲ್ಲ. ಆದ್ದರಿಂದ ನಾನು ಬೇರೆ ವರ ಕೇಳಲಾಗದು-ಎನ್ನುತ್ತಾನೆ ನಚಿಕೇತ.
ಶತಾಯುಷಃ ಪುತ್ರಪೌತ್ರಾನ್ ವೃಣೀಷ್ವಾ  ಬಹೂನ್ ಪಶೂನ್ ಹಸ್ತಿಹಿರಣ್ಯಮಶ್ವಾನ್
ಭೂಮೇರ್ಮಹದಾಯತನಂ ವೃಣೀಷ್ವ   ಸ್ವಯಂ ಚ ಜೀವ ಶರದೋ ಯಾವದಿಚ್ಛಸಿ        ೨೩
ನಚಿಕೇತ ತಾನು ಕೇಳಿದ ಈ ಮೂರನೇ ವರಕ್ಕೆ ಸಮನಾದ ಬೇರೊಂದು ವರವೇ ಇಲ್ಲ ಎಂದು ಹೇಳಿದಾಗ ಯಮ ಹೇಳುತ್ತಾನೆ: “ಒಂದಲ್ಲದಿದ್ದರೆ ಅನೇಕ ವರವನ್ನು ಕೇಳು” ಎಂದು. ಇಲ್ಲಿ ನಚಿಕೇತನಿಗೆ ಯಮ ಲೌಕಿಕ ಪ್ರಲೋಭನೆ ಮಾಡುತ್ತಿರುವುದನ್ನು ನಾವು ಗಮನಿಸಬೇಕು. ಯಮ ಹೇಳುತ್ತಾನೆ: “ನಿನಗೆ ಧೀರ್ಘಾಯಸ್ಸು ಪಡೆದ ಮಕ್ಕಳು, ಮೊಮ್ಮಕ್ಕಳು ಬೇಕಿದ್ದರೆ ಕೇಳು, ಮನೆ ತುಂಬಾ ಹಾಲು ಮೊಸರು ಕೊಡುವಂಥಹ ಗೋವುಗಳನ್ನು ಕೇಳು, ಅಶ್ವ, ಆನೆ, ಬಂಗಾರದ ರಾಶಿಯನ್ನು ಕೇಳು, ನಿನಗೆಷ್ಟು ಭೂಮಿ ಬೇಕೋ ಅದನ್ನು ಕೇಳು; ನಿನಗೆ ಎಷ್ಟು ಸಮಯ ಬದುಕಬೇಕೋ ಅಷ್ಟು ಆಯಸ್ಸನ್ನು ಕೊಡುತ್ತೇನೆ. ಜೀವನದಲ್ಲಿ ಒಬ್ಬ ಸಂಸಾರಿ ಬಯಸುವ ಎಲ್ಲವನ್ನೂ ಕೇಳು- ಕೊಡುತ್ತೇನೆ, ಆದರೆ ಈ ಪ್ರಶ್ನೆಯನ್ನು ಬಿಟ್ಟುಬಿಡು. 
ಏತತ್ತುಲ್ಯಂ ಯದಿ ಮನ್ಯಸೇ ವರಂ  ವೃಣೀಷ್ವ ವಿತ್ತಂ ಚಿರಜೀವಿಕಾಂ ಚ
ಮಹಾಭೂಮೌ ನಚಿಕೇತಸ್ತ್ವಮೇಧಿ  ಕಾಮಾನಾಂ ತ್ವಾ ಕಾಮಭಾಜಂ ಕರೋಮಿ          ೨೪
ಮುಂದುವರಿದು ಯಮ ಹೇಳುತ್ತಾನೆ: ನೀನು ಕೇಳಿದ ಒಂದು ವರಕ್ಕೆ ಲೌಕಿಕವಾಗಿ ಒಬ್ಬ ಮನುಷ್ಯ ಎಷ್ಟು ಬಯಸುತ್ತಾನೋ ಅಷ್ಟನ್ನು ಬೇಡಿಕೋ. ಇಲ್ಲ ಇದೂ ಕಡಿಮೆ ಎನಿಸಿದರೆ- ಇಡೀ ಬ್ರಹ್ಮ ಕಲ್ಪದಲ್ಲಿ ಪೂರ್ತಿ ಜೀವಿಸಲು ಬಯಸು-ಅದನ್ನು ಕೊಡುತ್ತೇನೆ, ಇಡೀ ಭೂಮಂಡಲದ ಚಕ್ರವರ್ತಿಯಾಗಬಯಸುವುದಾದರೆ ಅದನ್ನು ಕೇಳು. ಯಾವ ಚಕ್ರವರ್ತಿಯೂ ಸೇರದ ಎತ್ತರವನ್ನು ನೀನು ಸೇರುವಂತೆ ಮಾಡುತ್ತೇನೆ. ಯಾವಯಾವ ಕಾಮನೆಗಳಿವೆ ಅವೆಲ್ಲವೂ ಬಯಸಿದಾಗ ಕೈಸೇರುವಂತೆ ಮಾಡುತ್ತೇನೆ.
ಯೇ ಯೇ ಕಾಮಾ ದುರ್ಲಭಾ ಮರ್ತ್ಯಲೋಕೇ  ಸರ್ವಾನ್ ಕಾಮಾಂಶ್ಛಂದತಃ ಪ್ರಾರ್ಥಯಸ್ವ
ಇಮಾ ರಾಮಾಃ ಸರಥಾಃ ಸತೂರ್ಯಾ ನ ಹೀದೃಶಾ ಲಂಭನೀಯಾ ಮನುಷ್ಯೈಃ
ಆಭಿರ್ಮತ್ಪ್ರತ್ತಾಭಿಃ ಪರಿಚಾರಯಸ್ವ  ನಚಿಕೇತೋ ಮರಣಂ ಮಾಽನುಪ್ರಾಕ್ಷೀಃ              ೨೫
ಮನುಷ್ಯ ಲೋಕದಲ್ಲಿ ನೀನು ಕಂಡು ಕೇಳರಿಯದ ದೇವಲೋಕದ ಅಪೂರ್ವ ಸಂಪತ್ತನು ಬಯಸು-ಅದನ್ನು ಕೊಡುತ್ತೇನೆ. ದೇವಲೋಕದ ಭೋಗವಾದ, ಮನುಷ್ಯ ಲೋಕದವರು ಎಂದೂ ಕಂಡು ಕೇಳರಿಯದ ಸೌಂದರ್ಯವಾದ  ಅಪ್ಸರ ಸ್ತ್ರೀರನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು, ಅವರು ನಿನ್ನ ಮನೆಯ ಚಾಕರಿ ಮಾಡಿಕೊಂಡಿರುವಂತೆ ಬಯಸು, ಎಲ್ಲಿ ಬೇಕಾದರೂ ಸಂಚರಿಸಬಲ್ಲ ದೇವಲೋಕದ ವಾಹನ ಬೇಕಿದ್ದರೆ ತೆಗೆದುಕೊಂಡು ಹೋಗು, ಭೂ ಲೋಕದಲ್ಲಿ ಇಲ್ಲದೇ ಇರುವ ವಿಶಿಷ್ಠ ತಾಳ ವಾದ್ಯಗಳನ್ನು ದೇವಲೋಕದಿಂದ ಪಡೆ. ಹೀಗೆ ಏನು ಬೇಕಾದರೂ ಕೇಳು. ಆದರೆ ಸಾವಿನ ಆಚೆಗೆ ಜೀವನನ್ನು ನಿಯಂತ್ರಿಸುವ ಭಗವಂತನ ಬಗ್ಗೆ  ಹೇಳು ಎಂದು ಕೇಳಬೇಡ. ಎಂದು ಯಮ ಒತ್ತಡದ ಪ್ರಲೋಭನೆ ಮಾಡುತ್ತಾನೆ. ಇದಕ್ಕೆ ನಚಿಕೇತ ಉತ್ತರಿಸುತ್ತ ಹೇಳುತ್ತಾನೆ:

ಶ್ವೋಭಾವಾ ಮರ್ತ್ಯಸ್ಯ ಯದಂತಕೈತತ್  ಸರ್ವೇಂದ್ರಿಯಾಣಾಂ ಜರಯಂತಿ ತೇಜಃ
ಅಪಿ ಸರ್ವಂ ಜೀವಿತಮಲ್ಪಮೇವ  ತವೈವ ವಾಹಾಸ್ತವ ನೃತ್ಯಗೀತೇ                            ೨೬

ನ ವಿತ್ತೇನ ತರ್ಪಣೀಯೋ ಮನುಷ್ಯೋ  ಲಪ್ಸ್ಯಾಮಹೇ ವಿತ್ತಮದ್ರಾಕ್ಷ್ಮ ಚೇತ್ತ್ವಾ
ಜೀವಿಷ್ಯಾಮೋ ಯಾವದೀಶಿಷ್ಯಸಿ ತ್ವಂ  ವರಸ್ತು ಮೇ ವರಣೀಯಃ ಸ ಏವ                    ೨೭

ಅಜೀರ್ಯತಾಮಮೃತಾನಾಮುಪೇತ್ಯ ಜೀರ್ಯನ್ ಮರ್ತ್ಯಃ ಕ್ವಥಸ್ಥಃ ಪ್ರಜಾನನ್
ಅಭಿಧ್ಯಾಯನ್ ವರ್ಣರತಿಪ್ರಮೋದಾನ್  ಅತಿದೀರ್ಘೇ ಜೀವಿತೇ ಕೋ ರಮೇತ             ೨೮

ಯಸ್ಮಿನ್ನಿದಂ ವಿಚಿಕಿತ್ಸಂತಿ ಮೃತ್ಯೋ ಯತ್ಸಾಂಪರಾಯೇ ಮಹತಿ ಬ್ರೂಹಿ ನಸ್ತತ್
ಯೋಽಯಂ ವರೋ ಗೂಢಮನುಪ್ರವಿಷ್ಟೋ ನಾನ್ಯಂ ತಸ್ಮಾನ್ನಚಿಕೇತಾ ವೃಣೀತೇ        ೨೯

ಇಲ್ಲಿ ನಚಿಕೇತ ಯಮನಿಗೆ ಕೊಟ್ಟ ಉತ್ತರ ಬಹಳ ರೋಚಕವಾದದ್ದು. ನಚಿಕೇತನ ಜ್ಞಾನ ಎಷ್ಟು ಎತ್ತರದ್ದು ಎನ್ನುವುದು ಈ ಶ್ಲೋಕಗಳಲ್ಲಿ ತಿಳಿಯುತ್ತದೆ. ನಚಿಕೇತ ಹೇಳುತ್ತಾನೆ- ನೀನು ಏನನ್ನು ಕೊಡುತ್ತೇನೆ ಎಂದು ಹೇಳಿದೆಯೋ ಅವೆಲ್ಲವೂ ನಶ್ವರ. ಈ ಪ್ರಪಂಚ ಶೋ-ಭಾವಃ ಮತ್ತು ಶೋ-ಅಭಾವಃ. ಇಂದು ಇದ್ದಂತೆ ನಾಳೆ ಇರತ್ತದೆ ಎನ್ನುವ ಭರವಸೆ ಇಲ್ಲ. ಇಂಥಹ ಪ್ರಪಂಚದಲ್ಲಿ ಬದುಕುವ ನಾವು ಮರ್ತ್ಯರು. ಇಲ್ಲಿ ಸಾವಿಲ್ಲದ್ದನ್ನು ನೀನು ಕೊಡಲಾರೆ. ಹೀಗಿರುವಾಗ ಈ ಲೌಕಿಕ ಪ್ರಪಂಚವನ್ನು ಬಯಸಿ ಪ್ರಯೋಜನವೇನು? ಇಲ್ಲಿ ನಾವು ಅನುಭವಿಸುವ ಎಲ್ಲಾ ಭೋಗವೂ ನಮ್ಮ ಇಂದ್ರಿಯಗಳ ತೇಜಸ್ಸನ್ನು ಹೀರಿ ನಮ್ಮನ್ನು ಮುಪ್ಪಿನತ್ತ ಕೊಂಡೊಯ್ಯುತ್ತದೆ. ಮುಪ್ಪಿನಿಂದ ಸಾವುನನ್ನ ಬಯಕೆಯನ್ನು ಇದ್ಯಾವುದೂ ತಣಿಸಲಾರದು. ಆದ್ದರಿಂದ ಇವೆಲ್ಲವೂ ನಿನ್ನಲ್ಲೇ ಇರಲಿ. ನನಗೆ ಬೇಡ.
ಮನುಷ್ಯನಿಗೆ ಎಷ್ಟು ಬೇಕೋ ಅಷ್ಟು ಹಣವನ್ನೂ ಕೊಡುತ್ತೇನೆ ಎಂದರೆ ಅದು ಮೂರ್ಖತನವಾಗುತ್ತದೆ. ಏಕೆಂದರೆ ಮನುಷ್ಯನ ಧನ ಆಸೆಯನ್ನೂ ಪೂರೈಸುವುದು ಯಾರಿಂದಲೂ ಸಾಧ್ಯವಿಲ್ಲ. ನಮಗೆಷ್ಟು ಸಿಕ್ಕಿದರೂ ಅದು ಸಾಕು ಎಂದೆನಿಸುವುದಿಲ್ಲ. ನನಗೆ ನಿನ್ನಂಥ ಜ್ಞಾನಿಯ ದರ್ಶನವಾಗಿರುವಾಗ ಬದುಕಿನ ಚಿಂತೆ ನನಗಿಲ್ಲ. ಅದಕ್ಕಾಗಿ ಈ ಯಾವ ಅಪೇಕ್ಷೆಯೂ ನನಗಿಲ್ಲ. ನನಗೆ ಬೇಕಾಗಿರುವುದು ಜ್ಞಾನ.
ಮುಪ್ಪು-ಸಾವನ್ನು ಗೆದ್ದ ನೀವು ಅಮೃತರು. ನಿಮ್ಮ ಬಳಿ ಬಂದ ನಾನು ಒಂದು ದಿನ ಮುದುಕನಾಗಿ ಸಾಯುವವ. ಹೀಗಾಗಿ ಸಾಯುವ ಮೊದಲು ನಿಮ್ಮಂಥವರಿಂದ ಜ್ಞಾನ ಪಡೆಯದಿದ್ದರೆ ನಾನೆಂಥ ತಿಳಿಗೇಡಿಯಾಗುತ್ತೇನೆ? ನನಗೊದಗಿದ ಇಂಥಹ ಅವಕಾಶದಲ್ಲಿ  ನಾನು ಜ್ಞಾನವನ್ನು ಪಡೆದುಕೊಳ್ಳದಿದ್ದರೆ ಅದು ದೊಡ್ಡ ನಷ್ಟ-ಎನ್ನುತ್ತಾನೆ ನಚಿಕೇತ. ಮಧ್ವಾಚಾರ್ಯರು ಹೇಳಿದಂತೆ “ನಿಜವಾಗಿ ಅಧ್ಯಾತ್ಮದ ರಹಸ್ಯವನ್ನು ಹೇಳಬಲ್ಲ ಜ್ಞಾನಿ ಸಿಕ್ಕಾಗ ಅವನನ್ನು ಉಪಯೋಗಿಸಿಕೊಳ್ಳದೇ ಇರುವವರು ಖಾಯಂ ಆಗಿ ನರಕ ವಾಸ ಮಾಡುತ್ತಾರೆ. ಅವರಿಗೆ ಉದ್ಧಾರದ ದಾರಿಯೇ ಇಲ್ಲ.” ಹೀಗಾಗಿ ಮುಂದುವರಿದು ನಚಿಕೇತ ಹೇಳುತ್ತಾನೆ: ನಿಮ್ಮಂತಹ ಜ್ಞಾನಿಯೊಂದಿಗೆ ಮಾತನಾಡುವ ಭಾಗ್ಯ ಸಿಕ್ಕಿದೆ, ಹಾಗಿರುವಾಗ ನನಗೆ ಸಾಧ್ಯವಾದಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡದಿದ್ದರೆ ಎಂಥಾ ನಷ್ಟ. ಏನೂ ಜ್ಞಾನ ಸಾಧನೆ ಮಾಡದೆ ಕೇವಲ ತಿಂದುಂಡು ಜೀವನ ಕಳೆಯುವುದರಲ್ಲಿ ಯಾವ ಸುಖವಿದೆ? ಕೇವಲ ಬಂಧದ ಬದುಕು, ಭೋಗದ ಆಸಕ್ತಿಯಲ್ಲಿದ್ದು, ಅದರಾಚೆಗಿನ ಅರಿವೇ ಇಲ್ಲದೆ ಬದುಕುವುದರಿಂದ ಮನುಷ್ಯ ಜೀವನ ವ್ಯರ್ಥ. ಈ ರೀತಿ ಬದುಕಿದರೆ ಮನುಷ್ಯ ಜನ್ಮ ಪಡೆದೂ ಪ್ರಾಣಿಯಾಗಿ ಬದುಕಿದಂತೆ. ಹಾಗಾಗಿ ಕೇವಲ ತಿಂದುಂಡು ಬದುಕುವ ಧೀರ್ಘ ಜೀವನ ನನಗೆ ಬೇಡ-ಎನ್ನುತ್ತಾನೆ ನಚಿಕೇತ. ಇಲ್ಲಿ ‘ಜೀರ್ಯನ್ ಮರ್ತ್ಯಃ ಕ್ವಥಸ್ಥಃ ಪ್ರಜಾನನ್’ ಎನ್ನುವಲ್ಲಿ ಕ್ವಥಸ್ಥಃ ಎನ್ನುವ ವಿಶೇಷ ಪದ ಬಳಕೆಯಾಗಿದೆ. ಇದು ಸತ್ತು ನರಕಕ್ಕೆ ಹೋದ ಮನುಷ್ಯನ ಪಾಡನ್ನು ಹೇಳುವ ಪದ. ಕ್ವಥನ ಶೀಲೇ ನರಕೇ ಸ್ಥಿತಃ. ಕ್ವದ ಅಂದರೆ ದುಃಖದ ಮಡುವಿನಲ್ಲಿ ಬಿದ್ದು ಬೇಯುವುದು[ಥ-ಕಾರದ ಬದಲು ಮೂರನೇ ಪದವಾದ ದ-ಕಾರ ಬಳಸುತ್ತಾರೆ]-ತುಂಬಾ ಕಷ್ಟವನ್ನು ಅನುಭವಿಸುವ ನರಕಲೋಕ.  
ಮುಂದುವರಿದು ನಚಿಕೇತ ಹೇಳುತ್ತಾನೆ: ಮರಳಿ ಬಾರದ ಮುಕ್ತಿಯಲ್ಲಿ ಭಗವಂತ ಹೇಗೆ ನಿಯಮಿಸುತ್ತಾನೆ ಎಂದು ಪೂರ್ತಿ ತಿಳಿಯದೆ, ಅದನ್ನು ತಿಳಿಯುವುದಕ್ಕೊಸ್ಕರ ದೇವತೆಗಳು ಏನು ಚರ್ಚೆ ಮಾಡುತ್ತಾರೆ, ಅಂಥಹ ಭಗವಂತನ ಜ್ಞಾನವನ್ನು ನನಗೆ ಕೊಡು. ಭೂಮಿಯಲ್ಲಿ ಸಿಗದ ಈ ಅಪೂರ್ವ ತತ್ವಜ್ಞಾನ ನನಗೆ ಬೇಕು. ಈ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಇನ್ಯಾವುದೂ ಇಲ್ಲ. ನಮ್ಮ ಹೃದಯಗುಹೆಯಲ್ಲೇ ಇದ್ದರೂ, ನಮ್ಮ ಪ್ರಜ್ಞೆಗೆ ನಿಲುಕದ ತತ್ವಜ್ಞಾನ  ನನಗೆ ಬೇಕು. ಯಾರಿಗೂ ತಿಳಿಯದ ಈ ಗುಟ್ಟನ್ನು ಇಂದು ನಿನ್ನಿಂದ ಪಡೆಯುವ ಭಾಗ್ಯ ನನಗೆ ಬಂದಿದೆ. ಆ ಅಧ್ಯಾತ್ಮದ ರಹಸ್ಯವಾದ ಮುಕ್ತನಿಯಾಮಕ ಭಗವಂತನ ಮಹಿಮೆಯನ್ನು ಹೇಳು. ಇದನ್ನು ಬಿಟ್ಟು ನಚಿಕೇತ ಇನ್ನೇನನ್ನೂ ಬಯಸುವುದಿಲ್ಲ. ಎಂದು ನಚಿಕೇತ ಗಟ್ಟಿಯಾಗಿ ಕುಳಿತುಬಿಟ್ಟ.
ಪ್ರೀತಿಯ ಅಧ್ಯಾತ್ಮ ಬಂಧುಗಳೆ, ಒಂದು ಸುಂದರ ಕಥೆಯ ರೂಪದಲ್ಲಿ ಜ್ಞಾನಧಾರೆಯನ್ನು  ಹರಿಸುವ ಈ ಉಪನಿಷತ್ತಿನ ಮೊದಲ ಅಧ್ಯಾಯದ ಮೊದಲ ಬಳ್ಳಿಯನ್ನು ಇಲ್ಲಿ ನಾವು  ನಮ್ಮ ಸಾಮರ್ಥ್ಯಕ್ಕನುಗುಣವಾಗಿ ನೋಡಿದೆವು. ಇಲ್ಲಿ ಬರುವ ಒಂದೊಂದು ಶ್ಲೋಕದಲ್ಲಿನ ಒಂದೊಂದು ಪದದಲ್ಲೂ ಅನೇಕ ಗುಹ್ಯಾರ್ಥಗಳು ಅಡಗಿವೆ. ಕಥಾ ರೂಪದಲ್ಲಿ ಹರಿಯುವಾಗ ಕಥೆಯ ಪಾತ್ರಧಾರಿಗಳ ನಡವಳಿಕೆಯಲ್ಲಿ ಕೂಡಾ ನಾವು ತಿಳಿಯುವುದು ಬಹಳಷ್ಟಿದೆ. ಮೇಲ್ನೋಟದಲ್ಲಿ ನೋಡಿದರೆ ಒಬ್ಬ ಮಹಾನ್ ಜ್ಞಾನಿಯಾದ ಉದ್ಧಾಲಕ ಕೋಪವನ್ನು, ಲೋಭವನ್ನು ಗೆದ್ದಿರಲಿಲ್ಲ ಎಂದು ಕಾಣಿಸಿದರೂ, ನಂತರ ಆತನ ಕೋಪ ಇಂಥಹ ಮಹಾನ್ ಜ್ಞಾನ ಭೂಮಿಗಿಳಿದು ಬರುವಂತೆ ಮಾಡಲು ಭಗವಂತ ಮಾಡಿದ ವ್ಯವಸ್ಥೆ ಇದಾಗಿತ್ತು ಎನ್ನುವುದು ತಿಳಿಯುತ್ತದೆ. ಇನ್ನು ಯಮ ಧರ್ಮರಾಯ. ಈತನ ಪಾತ್ರದ ಮುಖೇನ ಭಗವಂತ  ನಮಗೆ ಅದೆಷ್ಟು ಸಂದೇಶವನ್ನು ಕರುಣಿಸಿದ್ದಾನೆ? ಅತಿಥಿ ಸತ್ಕಾರ ಹೇಗಿರಬೇಕು, ಜ್ಞಾನಿಯನ್ನು ಹೇಗೆ ಗೌರವಿಸಬೇಕು, ಮಹತ್ತಾದ ಜ್ಞಾನವನ್ನು ಕೊಡುವಾಗ ವ್ಯಕ್ತಿಯ ಯೋಗ್ಯತೆಯನ್ನು ಹೇಗೆ ಪರೀಕ್ಷಿಸಬೇಕು ಇತ್ಯಾದಿ. ಇಲ್ಲಿ ನಿಮಗೊಂದು ಪ್ರಶ್ನೆ ಬರಬಹುದು. “ಎಲ್ಲವನ್ನೂ ತಿಳಿದ ಯಮಧರ್ಮನಿಗೆ ನಚಿಕೇತನ ಯೋಗ್ಯತೆ ತಿಳಿದಿರಲಿಲ್ಲವೇ? ಗೊತ್ತಿದ್ದಿದ್ದರೆ ಮತ್ತೆ ಆತನನ್ನು ಲೌಕಿಕವಾಗ ಪ್ರಲೋಭನೆ ಮಾಡುವ ಅಗತ್ಯವೇನಿತ್ತು?” ಎಂದು.  ನಿಜ, ಯಮನಿಗೆ ಎಲ್ಲವೂ ತಿಳಿದಿತ್ತು. ಆದರೂ ಕೂಡ ಆತ ನಚಿಕೇತನನ್ನು ಪರೀಕ್ಷಿಸಿದ. ಇದಕ್ಕೆ ಕಾರಣವೇನೆಂದರೆ- ಮಹಾತ್ಮರಾದವರು ಯಾವಾಗಲೂ ಲೋಕನಿಯಮದಂತೆಯೇ ನೆಡೆದುಕೊಳ್ಳುತ್ತಾರೆ. ಏಕೆಂದರೆ ಮಹಾತ್ಮರ ನಡೆಯನ್ನು ಪ್ರಪಂಚ ಸದಾ ಪ್ರಮಾಣವಾಗಿರಿಸಿಕೊಂಡು ಅನುಸರಿಸುತ್ತದೆ. ಹಾಗಿರುವಾಗ ಮಹಾತ್ಮರ ನಡೆ ಭಿನ್ನವಾಗಿದ್ದರೆ ಇಡೀ ಲೋಕ ಕರ್ಮ ಪ್ರಜ್ಞೆಯನ್ನು ಕಳೆದುಕೊಂಡು ದಾರಿತಪ್ಪಿಬಿಡುತ್ತದೆ, ಸ್ವಚ್ಛಂದತೆ ಬಂದು ನಿರ್ಧಿಷ್ಟ ವ್ಯವಸ್ಥೆ ಹೊರಟು ಹೋಗುತ್ತದೆ. [ಶ್ರೀಕೃಷ್ಣ  ಸಂಧ್ಯಾವಂದನೆ ಇತ್ಯಾದಿ ಮೂಲ ಕರ್ಮವನ್ನು ತಪ್ಪದೆ ಮಾಡುತ್ತಿದ್ದುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು. ಇದು ಆತನಿಗೊಸ್ಕರವಲ್ಲ, ಆತನನ್ನು ಹಿಂಬಾಲಿಸುವ ಜನರಿಗೆ ಮಾರ್ಗದರ್ಶನಕ್ಕೋಸ್ಕರ].   ಹೀಗಾಗಿ ದೇವತೆಗಳು ತಮ್ಮ ಕರ್ಮವನ್ನು ಲೋಕನಿಯಮದಂತೆ ಮಾಡಿ ತೋರಿಸುತ್ತಾರೆ. ಇದು ಅವರ ಶಿಕ್ಷಣ ಕ್ರಮ. ಇಲ್ಲಿ ಯಮ ನಚಿಕೇತನನ್ನು ಪರೀಕ್ಷಿಸುವ ಮುಖೇನ ಆತನ ಯೋಗ್ಯತೆಯನ್ನು  ನಮ್ಮ ಮುಂದೆ ತೆರೆದಿಟ್ಟಿದ್ದಾನೆ. ಇನ್ನು ಈ ಕಥೆಯ ನಾಯಕನಾದ ನಚಿಕೇತ. ಈತ ಜ್ಞಾನ ಸಂಪತ್ತಿನ ಮುಂದೆ ಇತರ ಲೌಕಿಕ ಸಂಪತ್ತು ನಶ್ವರ ಎನ್ನುವುದನ್ನು ಲೋಕಕ್ಕೆ  ತೋರಿಸಿಕೊಟ್ಟ. ಯಮ ಮೂರು ವರವನ್ನು ಕೊಡುತ್ತೇನೆ ಎಂದಾಗ ನಚಿಕೇತ ಧನ-ಕನಕವನ್ನು ಬೇಡದೆ, ಯಾವುದೇ ಪ್ರಲೋಭನೆಗೊಳಗಾಗದೆ ಗಟ್ಟಿಯಾಗಿ ನಿಂತು-ಲೋಕೊದ್ಧಾರಕ್ಕಾಗಿ ಗುರುವಿನಿಂದ ಜ್ಞಾನವನ್ನು ಬೇಡಿದ.  ಹೀಗೆ ಉಪನಿಷತ್ತಿನ ಪ್ರತಿಯೊಂದು ನಡೆಯ ಹಿಂದೆ ಕೂಡ ಅಪೂರ್ವವಾದ ಸಂದೇಶವಡಗಿರುವುದನ್ನು ನಾವು ಗಮನಿಸಬೇಕು. ಬನ್ನಿ ನಚಿಕೇತನ ಮೂರನೇ ಪ್ರಶ್ನೆಗೆ ಉತ್ತರವಾಗಿ ಬಂದಿರುವ ಉಪದೇಶವನ್ನು ಧರ್ಮರಾಯನಿಂದಲೇ ನೇರವಾಗಿ ಆಲಿಸೋಣ.        

ಇತಿ ಕಾಠಕೋಪನಿಷದಿ ಪ್ರಥಮಾಧ್ಯಾಯೇ ಪ್ರಥಮಾ ವಲ್ಲೀ ॥
ಇಲ್ಲಿಗೆ ಕಾಠಕೋಪನಿಷತ್ತಿನ ಮೊದಲ ಅಧ್ಯಾಯದ ಮೊದಲ ಬಳ್ಳಿ(ವಲ್ಲೀ) ಮುಗಿಯಿತು.
           *******      

Saturday, April 14, 2012

Kathopanishad in Kannada Ch-01 Canto-01 Shloka-14-19

             ಪ್ರ ತೇ ಬ್ರವೀಮಿ ತದು ಮೇ ನಿಬೋಧಃ  ಸ್ವರ್ಗ್ಯಮಗ್ನಿಂ ನಚಿಕೇತಃ ಪ್ರಜಾನನ್
             ಅನಂತಲೋಕಾಪ್ತಿಮಥೋ ಪ್ರತಿಷ್ಠಾಂ  ವಿದ್ಧಿ ತ್ವಮೇತಂ ನಿಹಿತಂ ಗುಹಾಯಾಮ್         ೧೪
ನಚಿಕೇತನ ಪ್ರಶ್ನೆಗೆ ಉತ್ತರಿಸುತ್ತಾ ಯಮ ಹೇಳುತ್ತಾನೆ: “ಎಲ್ಲಾ ವಿವರವನ್ನು, ಎಲ್ಲಾ ರಹಸ್ಯವನ್ನು ಬಿಡಿಸಿ ಹೇಳುತ್ತೇನೆ-ಅದನ್ನು ನನ್ನಿಂದ ಕೇಳು” ಎಂದು. ನಮಗೆ ತಿಳಿದಂತೆ ನಾವು ಮಾಡುವ ಕರ್ಮದ ಪಾಪ-ಪುಣ್ಯವನ್ನು ಲೆಕ್ಕ ಹಾಕಿ ಅದಕ್ಕನುಗುಣವಾದ ಫಲವನ್ನು ನಿರ್ಧರಿಸುವವ ಯಮ. ಹಾಗಾಗಿ ಕರ್ಮ ಮಾಡುವುದು ಹೇಗೆ,  ಅದರ ಹಿಂದಿನ ಅನುಸಂಧಾನ ಹೇಗಿರಬೇಕು, ನಾವು ಮಾಡುವ ಕರ್ಮ ಮೋಕ್ಷಪ್ರದವಾಗಬೇಕಾದರೆ ಏನು ಮಾಡಬೇಕು-ಇದನ್ನು ನಿಖರವಾಗಿ ಹೇಳಬಲ್ಲವ ಯಮ. ಆದ್ದರಿಂದ  “ಅದನ್ನು ನನ್ನಿಂದ ನೇರವಾಗಿ ಕೇಳು” ಎಂದಿದ್ದಾನೆ ಯಮ.
ಈ ಶ್ಲೋಕದಲ್ಲಿ ನಚಿಕೇತ ಮತ್ತು ಯಮ ಇಬ್ಬರಿಗೂ ಅನ್ವಯವಾಗುವ ‘ಪ್ರಜಾನನ್’  ಎನ್ನುವ ವಿಶೇಷಣ ಬಳಕೆಯಾಗಿದೆ. “ತಿಳುವಳಿಕೆ ಇಲ್ಲದ ಅಪ್ರಬುದ್ಧ-ನೀನಲ್ಲ, ಈ ‘ಸ್ವರ್ಗ್ಯಗ್ನಿ’ ಬಗ್ಗೆ ತಿಳಿದು ಅನುಷ್ಠಾನ ಮಾಡುವ ಯೋಗ್ಯತೆ ಇರುವವ(ಪ್ರಜಾನನ್) ನೀನು. ಆದರೂ ವಿಶೇಷ ತಿಳುವಳಿಕೆಗಾಗಿ ನನ್ನ ಬಳಿ ಕೇಳುತ್ತಿದ್ದೀಯ. ನನಗೆ ಈ ವಿದ್ಯೆ ಚನ್ನಾಗಿ ತಿಳಿದಿದೆ(ಪ್ರಜಾನನ್ ). ಅಂಥಹ ಮೊಕ್ಷಪ್ರದ ಅಗ್ನಿವಿದ್ಯೆಯನ್ನು ನಾನು ನಿನಗೆ ಹೇಳುತ್ತೇನೆ”. ಎನ್ನುವ ಧ್ವನಿ ಈ ವಿಶೇಷಣದ ಹಿಂದಿದೆ.
ಮುಂದುವರಿದು ಯಮ ಹೇಳುತ್ತಾನೆ: “ಈ ಅಗ್ನಿ ವಿದ್ಯೆಯನ್ನು ಯಾರು ತಿಳಿಯುತ್ತಾರೆ ಅವರಿಗೆ ಬರಿಯ ಸ್ವರ್ಗ ಪ್ರಾಪ್ತಿ ಮಾತ್ರವಲ್ಲ, ಅನಂತ ಲೋಕ ಪ್ರಾಪ್ತಿಯಾಗುತ್ತದೆ. ಆತ ಸಾವಿಲ್ಲದ ಮೋಕ್ಷವನ್ನು ಸೇರುತ್ತಾನೆ” ಎಂದು. ನಿತ್ಯಲೋಕದ ಪ್ರಾಪ್ತಿಗೆ ಕಾರಣವಾಗುವ ಈ ವಿದ್ಯೆಯ ಪ್ರತಿಪಾಧ್ಯ ಭಗವಂತನನ್ನು ಇಲ್ಲಿ  ‘ಅನಂತಲೋಕಾಪ್ತಿ’ ಎಂದು ಸಂಬೋಧಿಸಿದ್ದಾರೆ. ಭಗವಂತ ಅನಂತ ಲೋಕವನ್ನು ಕೊಡುವವನು ಮತ್ತು ಆತ ಎಲ್ಲಾ ಲೋಕಗಳ ಮೂಲಾಧಾರ(ಪ್ರತಿಷ್ಠ). ಸಾಂತವಾದ ಲೋಕವಿರಲಿ, ಅನಂತವಾದ ಲೋಕವಿರಲಿ, ಆ ಲೋಕಕ್ಕೋಸ್ಕರ ಸಾಧನೆ ಮಾಡುವ ಜೀವಜಾತವಿರಲಿ; ಎಲ್ಲವುದರ ಮೂಲಾಧಾರನಾದ, ಅಗ್ನಿಯಲ್ಲಿರತಕ್ಕಂತಹ ಭಗವಂತನ ವಿದ್ಯೆಯನ್ನು ತಿಳಿದು, ಅಗ್ನಿಯಲ್ಲಿ ಆತನ ಉಪಾಸನೆ ಮಾಡಿದರೆ ಅನಂತಲೋಕದ ಆಪ್ತಿಯಾಗುತ್ತದೆ ಮತ್ತು ನಿತ್ಯಲೋಕ ಶಾಶ್ವತವಾಗಿ ಪ್ರಾಪ್ತಿಯಾಗುತ್ತದೆ.
ಭಗವಂತನ ಪ್ರತೀಕದಲ್ಲಿ ಅತ್ಯಂತ ಶ್ರೇಷ್ಠವಾದ ಈ ಅಗ್ನಿ ಎಲ್ಲಿದೆ ಎಂದರೆ- ಇಲ್ಲಿ ಯಮ ಹೇಳುತ್ತಾನೆ: “ವಿದ್ಧಿ ತ್ವಮೇತಂ ನಿಹಿತಂ ಗುಹಾಯಾಮ್” ಎಂದು. ಭಗವಂತ ನಮ್ಮ ಹೃದಯ ಗುಹೆಯಲ್ಲೇ ಇದ್ದಾನೆ. ಕೃಷ್ಣ ಗೀತೆಯಲ್ಲಿ ಇದನ್ನೇ ಹೀಗೆ ಹೇಳಿದ್ದಾನೆ: “ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ” ಎಂದು.  ನಮ್ಮ ದೇಹದಲ್ಲಿ ಅಗ್ನಿ ಅಂತರ್ಗತನಾದ ವೈಶ್ವಾನರ ನಾಮಕ ಭಗವಂತನಿದ್ದಾನೆ. ನಮ್ಮೊಳಗಿದ್ದು ನಮಗೆ ಬದುಕುಕೊಟ್ಟು ರಕ್ಷಣೆ ಮಾಡುವ ಭಗವಂತ ನಮ್ಮ ಹೃದಯದಲ್ಲಿ ಮಾತ್ರವಲ್ಲ ನಮ್ಮ ಸ್ವರೂಪದ ಹೃದಯದಲ್ಲೂ ಇದ್ದಾನೆ. ಈ ಕಾರಣದಿಂದ ಶಾಸ್ತ್ರಕಾರರು ಭಗವಂತನ ಎರಡು ರೂಪಗಳನ್ನು ಈ ರೀತಿ ವರ್ಣಿಸಿದ್ದಾರೆ: “ಆತ್ಮಾಂತರಾತ್ಮೇತಿ ಹರಿಃ ಏಕ ಏವ ದ್ವಿದಾಸ್ಥಿತಃ” ಎಂದು. ದೇಹದ ಹೃದಯದಲ್ಲಿ ‘ಆತ್ಮ’ ನಾಮಕನಾಗಿ, ದೇಹದ ಹೃದಯದಲ್ಲಿರುವ ಜೀವದ ಹೃದಯದಲ್ಲಿ ‘ಅಂತರಾತ್ಮ’ ನಾಮಕನಾಗಿ ಭಗವಂತನಿದ್ದಾನೆ. ಈ ಕಾರಣದಿಂದ “ಭಗವಂತನನ್ನು ಬೇರೆಲ್ಲೂ ಹುಡುಕುವುದು ಬೇಡ, ಆತ ನಿಮ್ಮ ಹೃದಯ ಗುಹೆಯಲ್ಲೇ ಇದ್ದಾನೆ” ಎಂದಿದ್ದಾನೆ ಯಮ.  ಹೀಗಾಗಿ ಭಗವಂತನನ್ನು ಅಗ್ನಿಯಲ್ಲಿ ಉಪಾಸನೆ ಮಾಡುವಾಗ ಎಲ್ಲೋ ಹೊರಗಿನಿಂದ ಉಪಾಸನೆ ಮಾಡಬಾರದು. “ಮದ್ ಹೃದಯಸ್ಥಿತಂ, ವೈಶ್ವಾನರ ನಾಮಂ, ಅಗ್ನಿಯಂತರ್ಗತಂ, ಪರಶುರಾಮಂ, ಕುಂಡ ಮಧ್ಯೇ-ಆವಾಹಯಾಮಿ” ಎಂದು -ಹೃದಯದಲ್ಲಿರುವ ಭಗವಂತನನ್ನು ಕುಂಡದಲ್ಲಿ ಆವಾಹನೆ ಮಾಡಿ ಆರಾಧನೆ ಮಾಡಬೇಕು. ಅದೇ ರೀತಿ ಪ್ರತಿಮೆಯಲ್ಲೂ ಕೂಡ- “ಹೃತ್ಕಮಲಸ್ಥಿತಂ ನಾರಾಯಣಂ ಪ್ರತಿಮಾಯಾಂ ಆವಾಹಯಾಮಿ” ಎಂದು ಆವಾಹನೆ ಮಾಡಿ ಆರಾಧನೆ ಮಾಡಬೇಕು.
ಇಲ್ಲಿ ನಚಿಕೇತನಿಗೆ ಎಲ್ಲಾ ವಿವರವನ್ನೂ ಹೇಳುವುದಾಗಿ ಪ್ರತಿಜ್ಞೆ ಮಾಡಿದ್ದ ಯಮ ಮುಂದೇನು ಹೇಳಿದ ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.
             ಲೋಕಾದಿಮಗ್ನಿಂ ತಮುವಾಚ ತಸ್ಮೈ  ಯಾ ಇಷ್ಟಕಾ ಯಾವತೀರ್ವಾ ಯಥಾ ವಾ
              ಸ ಚಾಪಿ ತತ್ಪ್ರತ್ಯವದದ್ಯಥೋಕ್ತಂ  ಅಥಾಸ್ಯ ಮೃತ್ಯುಃ ಪುನರೇವಾಹ ತುಷ್ಟಃ                  ೧೫

             ತಮಬ್ರವೀತ್ ಪ್ರೀಯಮಾಣೋ ಮಹಾತ್ಮಾ  ವರಂ ತವೇಹಾದ್ಯ ದದಾಮಿ ಭೂಯಃ
             ತವೈವ ನಾಮ್ನಾ ಭವಿತಾSಯಮಗ್ನಿಃ ಸೃಂಕಾಂ ಚೇಮಾಮನೇಕರೂಪಾಂ ಗೃಹಾಣ        ೧೬

             ತ್ರಿಣಾಚಿಕೇತಸ್ತ್ರಿಭಿರೇತ್ಯ ಸಂಧಿಂ ತ್ರಿಕರ್ಮಕೃತ್ತರತಿ ಜನ್ಮಮೃತ್ಯೂ
             ಬ್ರಹ್ಮಜಜ್ಞಂ ದೇವಮೀಡ್ಯಂ ವಿದಿತ್ವಾ ನಿಚಾಯ್ಯೇಮಾಂ ಶಾಂತಿಮತ್ಯಂತಮೇತಿ              ೧೭

            ತ್ರಿಣಾಚಿಕೇತಸ್ತ್ರಯಮೇತದ್ವಿದಿತ್ವಾ  ಯ ಏವಂ ವಿದ್ವಾಂಶ್ಚಿನುತೇ ನಾಚಿಕೇತಂ
            ಸ ಮೃತ್ಯುಪಾಶಾನ್ ಪುರತಃ ಪ್ರಣೋದ್ಯ  ಶೋಕಾತಿಗೋ ಮೋದತೇ ಸ್ವರ್ಗಲೋಕೇ      ೧೮

           ಏಷ ತೇSಗ್ನಿರ್ನಚಿಕೇತಃ ಸ್ವರ್ಗ್ಯೋ  ಯಮವೃಣೀಥಾ ದ್ವಿತೀಯೇನ ವರೇಣ
           ಏತಮಗ್ನಿಂ ತವೈವ ಪ್ರವಕ್ಷ್ಯಂತಿ ಜನಾಸಃ   ತೃತೀಯಂ ವರಂ ನಚಿಕೇತೋ ವೃಣೀಷ್ವ        ೧೯

[ಉಪನಿಷತ್ತಿನಲ್ಲಿರುವ ಈ ಮಂತ್ರಗಳು ಅರ್ಥ ಅನ್ವಯ ಪ್ರಕಾರ ಸ್ವಲ್ಪ ಹಿಂದೆ ಮುಂದೆ ಇರುವುದರಿಂದ, ಮುಂದೆ ಈ ಶ್ಲೋಕಗಳ ಅರ್ಥವಿವರಣೆ ಮಾಡುವಾಗ, ಹೆಚ್ಚು ಸ್ಪಷ್ಟತೆಗಾಗಿ, ಶ್ಲೋಕಗಳ ಅನುಕ್ರಮವನ್ನು ಬದಲಿಸಿ ವಿವರಿಸಿರುವುದನ್ನು ಓದುಗರು ಗಮನಿಸಬೇಕು]  

“ಲೋಕಾದಿಮಗ್ನಿಂ ತಮುವಾಚ ತಸ್ಮೈ  ಯಾ ಇಷ್ಟಕಾ ಯಾವತೀರ್ವಾ ಯಥಾ ವಾ(ಶ್ಲೋ-೧೫_೧). ಇಲ್ಲಿ “ಎಲ್ಲಾ ಲೋಕಗಳಿಗೆ ಕಾರಣಕರ್ತ, ಎಲ್ಲಾ ಲೋಕಗಳ ಆದಿ, ಎಲ್ಲಾ ಜೀವಜಾತಕ್ಕೂ ಕಾರಣನಾದ ಅಗ್ನಿನಾರಾಯಣನನ್ನು ನಚಿಕೇತನಿಗೆ ಯಮ ಉಪದೇಶಿಸಿದ” ಎಂದಿದ್ದಾರೆ. ಆದರೆ ಇಲ್ಲಿ ಏನು ಉಪದೇಶಿಸಿದ ಎಂದು ಬಿಡಿಸಿ ಎಲ್ಲಿಯೂ ಹೇಳಿಲ್ಲ. ಅದು ರಹಸ್ಯ. ಅದನ್ನು ನಾವು ಗುರುಮುಖದಲ್ಲಿ ತಿಳಿದುಕೊಳ್ಳಬೇಕು. ಇಲ್ಲಿ “ಯಾ ಇಷ್ಟಕಾ ಯಾವತೀರ್ವಾ ಯಥಾ ವಾ” ಎಂದಿದ್ದಾರೆ. ಅಗ್ನಿಯನ್ನು ಹೊರಗಿನ ಕುಂಡದಲ್ಲಿ ಉಪಾಸನೆ ಮಾಡಬೇಕಿದ್ದರೆ ಅಲ್ಲಿ ಎಷ್ಟು ಇಟ್ಟಿಗೆಗಳನ್ನು(ಇಷ್ಟಕಾ) ಬಳಸಬೇಕು, ಆ ಇಟ್ಟಿಗೆಗಳಲ್ಲಿ ಏನು ಅನುಸಂಧಾನವಿರಬೇಕು, ಇಟ್ಟಿಗೆಗಳನ್ನು ಹೇಗೆ ಜೋಡಿಸಬೇಕು, ಇತ್ಯಾದಿಯನ್ನು ಯಮ ನಚಿಕೇತನಿಗೆ ವಿವರಿಸಿದ. ಇಲ್ಲಿ ಈ ಕುರಿತು ನೇರವಾಗಿ ವಿವರವನ್ನು ಹೇಳಿಲ್ಲವಾದ್ದರಿಂದ ನಾವು ಇದರ ಹಿಂದಿರುವ ಗಣಿತವನ್ನು ಸ್ವಲ್ಪ ವಿಶ್ಲೇಷಿಸಬೇಕಾಗುತ್ತದೆ.
ಅಗ್ನಿಕುಂಡದ ಮಧ್ಯದಲ್ಲಿರುವ ಅಗ್ನಿಯಲ್ಲಿ ಮಾತ್ರ ನಾರಾಯಣನಿರುವುದಲ್ಲ, ಆ ಕುಂಡವನ್ನು ರಚನೆ ಮಾಡಲು ಇಟ್ಟ ಇಟ್ಟಿಗೆಯಲ್ಲೂ  ಭಗವಂತನ ರೂಪ ಅಡಗಿದೆ. ಇಲ್ಲಿ ಅಗ್ನಿಕುಂಡ ಎನ್ನುವುದು ನಮ್ಮ ಪಿಂಡಾಂಡದ ದ್ಯೋತಕ. ನಮಗೆ ತಿಳಿದಂತೆ ನಮ್ಮ ಹೃದಯದಲ್ಲಿ ಮಾತ್ರ ಭಗವಂತನಿರುವುದಲ್ಲ, ನಮ್ಮ ಇಡೀ ದೇಹದಲ್ಲಿ ವಿವಿಧ ರೂಪದಲ್ಲಿ ಭಗವಂತನಿದ್ದಾನೆ. ಆದ್ದರಿಂದ ಅಗ್ನಿಹೋತ್ರ ಮಾಡುವಾಗ ಅಗ್ನಿಕುಂಡದ ಒಂದೊಂದು ಇಟ್ಟಿಗೆಯಲ್ಲೂ ಭಗವಂತನಿದ್ದಾನೆ ಎನ್ನುವ ಅನುಸಂಧಾನ ಬಹಳ ಮುಖ್ಯ. ಮೇಲಿನ ಶ್ಲೋಕದಲ್ಲಿ ಬಳಸಲಾದ ‘ಇಷ್ಟಕಾ’ ಎನ್ನುವ ಪದ ಬಹಳ ರೋಚಕವಾದ ಪದ. ಮೇಲ್ನೋಟಕ್ಕೆ ಇಟ್ಟಿಗೆ ಎನ್ನುವ ಅರ್ಥ ಕೊಡುವ ಈ ಪದಕ್ಕೆ ವಿಶೇಷ ಅರ್ಥವಿದೆ. ನಮಗೆ ಅತ್ಯಂತ ಪ್ರಿಯವಾದ, ಆನಂದಮಯವಾದ ವಸ್ತು-ಇಷ್ಟಕಾ. ಆದ್ದರಿಂದ ಇಲ್ಲಿ ‘ಇಷ್ಟಕಾ’ ಎನ್ನುವ ಪದ ಬರಿಯ ಇಟ್ಟಿಗೆಯನ್ನು ಹೇಳುವುದಲ್ಲ, ಆ ಇಟ್ಟಿಗೆಯೊಳಗಿನ ಆನಂದಸ್ವರೂಪ  ಭಗವಂತನನ್ನು ಹೇಳುತ್ತದೆ.
ಇನ್ನು ‘ಯಾವತೀಃ’ ಅಂದರೆ ಎಷ್ಟು ಇಟ್ಟಿಗೆಯಿಂದ ಕುಂಡ ಮಾಡಬೇಕು ಮತ್ತು ಯಾವ ರೀತಿ(ಯಥಾ ವಾ) ಉಪಾಸನೆ ಮಾಡಬೇಕು ಎನ್ನುವ ಪ್ರಶ್ನೆ. ಶಾಸ್ತ್ರೀಯವಾಗಿ ಅಗ್ನಿಕುಂಡವನ್ನು ೩೬೦ ಇಟ್ಟಿಗೆಗಳಿಂದ ಮಾಡಬೇಕು. ೩೬೦ ಅನ್ನುವುದು ಒಂದು ವಿಶಿಷ್ಠವಾದ ಸಂಖ್ಯೆ. ಇದರ ಹಿಂದೆ ಮೂರು ವಿಧದ ಉಪಾಸನೆ ಇದೆ. ಅವುಗಳೆಂದರೆ: ಭಗವಂತನನ್ನು ಶರೀರದಲ್ಲಿ ಉಪಾಸನೆ, ಅಗ್ನಿಕುಂಡದಲ್ಲಿ ಉಪಾಸನೆ ಮತ್ತು ಕಾಲದಲ್ಲಿ ಉಪಾಸನೆ. ಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿ ೩೬೦ ಅಸ್ಥಿಗಳಿವೆ, ಅಷ್ಟೇ  ಅಸ್ಥಿಮಜ್ಜೆ[marrows] ಮತ್ತು ಅಸ್ಥಿಸಂಧಿಗಳಿವೆ. [ಆಧುನಿಕ ವೈದ್ಯ ವಿಜ್ಞಾನ ಸುಮಾರು ೩೦೦ ಅಸ್ಥಿಗಳನ್ನು ಗುರುತಿಸುತ್ತದೆ. ಆದರೆ ಪ್ರಾಚೀನರು ಅಸ್ಥಿಸಂಧಿಗಳನ್ನೆಲ್ಲ ಪರಿಗಣಿಸಿ ೩೬೦ ಎನ್ನುತ್ತಾರೆ]. ಇದರಲ್ಲಿ ಭಗವಂತ ೩೬೦ ರೂಪದಲ್ಲಿ ನೆಲೆಸಿ ನಡೆಸುತ್ತಿದ್ದಾನೆ. ಇದನ್ನೇ ನಾವು ಹೊರಪ್ರಪಂಚದಲ್ಲಿ ಯಜ್ಞಕುಂಡದ ೩೬೦ ಇಟ್ಟಿಗೆಯಲ್ಲಿ ಕಾಣಬೇಕು.
ಇನ್ನು ಕಾಲದಲ್ಲಿ ಭಗವಂತನ ಉಪಾಸನೆ. ಬೇರೆಬೇರೆ ಮಾನದ ಪ್ರಕಾರ ವರ್ಷದಲ್ಲಿನ ದಿನಗಳ ಸಂಖ್ಯೆ ಬೇರೆಬೇರೆ. ಸೌರಮಾನದ ಪ್ರಕಾರ ವರ್ಷಕ್ಕೆ  ೩೬೫ ಮತ್ತು ೮/೩೧ ದಿನಗಳು; ಚಾಂದ್ರಮಾನದ ಪ್ರಕಾರ ೩೫೫ ದಿನಗಳು; ನಕ್ಷತ್ರಮಾನದ ಪ್ರಕಾರ ೩೨೪ ದಿನಗಳು; ಬೃಹಸ್ಪತಿಮಾನದ ಪ್ರಕಾರ ೩೯೦ ದಿನಗಳು. ಆದರೆ ಸಾರ್ವತ್ರಿಕವಾಗಿ ಒಂದು ವತ್ಸರ ಎಂದರೆ ೩೬೦ ದಿನಗಳು. ಏಕೆಂದರೆ ೩೬೦ ಡಿಗ್ರಿ(ಕೋನ) ಅಂದರೆ ಒಂದು ಪೂರ್ಣವೃತ್ತ. ಹೀಗೆ ಅಗ್ನಿಕುಂಡದ ೩೬೦ ಇಟ್ಟಿಗೆಗಳಲ್ಲಿ, ದೇಹದ ೩೬೦ ಅಸ್ಥಿಗಳಲ್ಲಿ, ವರ್ಷದ ೩೬೦ ದಿನಗಳಲ್ಲಿ- ೧೦೮೦[೩೬೦+೩೬೦+೩೬೦] ರೂಪಗಳಲ್ಲಿ ಭಗವಂತ ನೆಲೆಸಿದ್ದಾನೆ. ನಾವು ವಿಷ್ಣುಸಹಸ್ರನಾಮದಲ್ಲಿನ  ‘ಚ’, ‘ಏವ’ ಇತ್ಯಾದಿ ಏಕಾಕ್ಷರ ನಾಮಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ನೋಡಿದರೆ ಅಲ್ಲಿ ೧೦೮೦ ನಾಮಗಳನ್ನು ಕಾಣಬಹುದು. ಇದು ಭಗವಂತನ ಈ ೧೦೮೦ ರೂಪಗಳನ್ನು ಹೇಳುವ ವಿಶಿಷ್ಠನಾಮಗಳು. ಇದಕ್ಕಾಗಿ ವಿಷ್ಣುಸಹಸ್ರನಾಮ ಅಷ್ಟು ಶ್ರೇಷ್ಠ. ಅದನ್ನು ಉಚ್ಛರಿಸಿದಾಗ ಅದರ ಕಂಪನದಿಂದ ನಮ್ಮ ದೇಹದ ರೋಗ ನಾಶವಾಗಿ ಆರೋಗ್ಯ ಸುಧಾರಣೆಯಾಗುತ್ತದೆ ಮತ್ತು ಬದುಕಿನಲ್ಲಿ ಸಮಸ್ಯೆ ಇರುವುದಿಲ್ಲ.
ಹೀಗೆ ಇಲ್ಲಿ ಯಮ- 'ಅಗ್ನಿಯಂತರ್ಗತ ಭಗವಂತ-ಕಾಲದಲ್ಲಿ, ಕುಂಡದಲ್ಲಿ ಮತ್ತು ಪಿಂಡ(ದೇಹ)ದಲ್ಲಿ ನೆಲೆಸಿದ್ದಾನೆ ಎಂದು ತಿಳಿದು ಉಪಾಸನೆ ಮಾಡಬೇಕು' ಎನ್ನುವ ವಿಷಯವನ್ನು ನಚಿಕೇತನಿಗೆ ವಿವರಿಸಿದ. ಇದು ವಿಶ್ವದಲ್ಲಿರುವ ಭಗವಂತನನ್ನು ೩೬೦ ಎನ್ನುವ ಸಂಖ್ಯೆಯಲ್ಲಿ ಅಳವಡಿಸಿ ಮಾಡತಕ್ಕಂತಹ ಒಂದು ಅತ್ಯದ್ಭುತವಾದ   ಉಪಾಸನೆ.
ಯಮ ಹೇಳುತ್ತಾನೆ: “ತ್ರಿಣಾಚಿಕೇತಸ್ತ್ರಿಭಿರೇತ್ಯ ಸಂಧಿಂ ತ್ರಿಕರ್ಮಕೃತ್ತರತಿ ಜನ್ಮಮೃತ್ಯೂ (ಶ್ಲೋ:೧೭-೧)ಎಂದು. ಇಲ್ಲಿ ಪ್ರತಿಯೊಬ್ಬನೂ ತ್ರಿಣಾಚಿಕೇತನಾಗಬೇಕು ಎಂದಿದ್ದಾನೆ ಯಮ. ನಚಿಕೇತನ ಮುಖೇನ ಭೂಮಿಗೆ ಪರಿಚಯಿಸಲ್ಪಟ್ಟ ಅಗ್ನಿನಾರಾಯಣನನ್ನು ಮೂರು ಕಡೆ [ಅಗ್ನಿಕುಂಡದಲ್ಲಿ-ಅಗ್ನಿರೂಪ, ಹೃದಯಕುಂಡದಲ್ಲಿ- ವಾಯುರೂಪ, ಕಾಲಕುಂಡದಲ್ಲಿ- ಆದಿತ್ಯರೂಪ] ಉಪಾಸನೆ ಮಾಡುವವರು, ಮೂರರ ಜೊತೆಗೆ ಸಂಧಾನ (ತ್ರಿರೇತ್ಯ ಸಂಧಿಃ) ಮಾಡಿಕೊಂಡು, ಮೂರು ಕರ್ಮಗಳನ್ನು ಮಾಡಿದರೆ(ತ್ರಿಕರ್ಮಕೃತ್), ಆಗ ಜನ್ಮ-ಮೃತ್ಯುವನ್ನು ದಾಟುತ್ತಾರೆ-ಎನ್ನುವುದು ಯಮನ ವಿವರಣೆ. ಇಲ್ಲಿ ‘ತ್ರಿರೇತ್ಯ ಸಂಧಿಃ’ ಎನ್ನುವಲ್ಲಿ ‘ತ್ರಿ’ ಎಂದರೆ ಮೂರು ವೇದಗಳು.[ಗದ್ಯರೂಪ, ಪದ್ಯರೂಪ ಮತ್ತು ಗಾನರೂಪದ ಮೂರು ವೇದಗಳು]. ವೇದ ಶಾಖೆಗಳು/ಸಂಹಿತೆಗಳು[ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ-ಒಟ್ಟು-೪] ಮತ್ತು ವೇದದ ಉಪಶಾಖೆಗಳು[ಋಗ್ವೇದದಲ್ಲಿ-೨೪, ಯಜುರ್ವೇದದಲ್ಲಿ-೧೦೧, ಸಾಮವೇದದಲ್ಲಿ-೧೦೦೦, ಅಥರ್ವವೇದದಲ್ಲಿ-೧೨. ಒಟ್ಟು-೧೧೩೭] ಅನೇಕ. ಆದರೆ ಅವುಗಳಲ್ಲಿ ಒಂದಕ್ಕೊಂದು ವಿರೋಧವಿಲ್ಲ. ಪ್ರತಿಯೊಂದು ವೇದವೂ ಭಗವಂತನನ್ನು, ಆತನ ಮಹಿಮೆಯನ್ನು ಹೇಳುತ್ತದೆ. ಅದರಲ್ಲಿರುವ ವಿಷಯವನ್ನು ಒಂದಕ್ಕೊಂದು ಸಮನ್ವಯ ಮಾಡಿ ತಿಳಿದುಕೊಳ್ಳುವುದು ‘ತ್ರಿರೇತ್ಯ ಸಂಧಿಃ’. ಹೀಗೆ ವೇದದ ಮೂಲಾರ್ಥವನ್ನು ತಿಳಿದುಕೊಂಡು, ದಿನವೂ ಯಜ್ಞ, ದಾನ, ತಪಃ ಎನ್ನುವ   ಮೂರು ಕರ್ಮವನ್ನು ಮಾಡಿಕೊಂಡು ಅಗ್ನಿಕಾರ್ಯ ಮಾಡಿದರೆ ಭಗವಂತ ಒಲಿಯುತ್ತಾನೆ.
ಇಲ್ಲಿ ನಮಗೆ ಒಂದು ಪ್ರಶ್ನೆ ಮೂಡಬಹುದು. ಅದೇನೆಂದರೆ-ಒಬ್ಬ ಸಾಮಾನ್ಯ ಮನುಷ್ಯನಿಗೆ ದಿನವೂ ಯಜ್ಞ, ದಾನ, ತಪಸ್ಸನ್ನು ಮಾಡಲು ಸಾಧ್ಯವೋ ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಶ್ರೀಕೃಷ್ಣ ಗೀತೆಯಲ್ಲಿ ಬಹಳ ಸುಂದರವಾದ ವಿವರಣೆ ಕೊಟ್ಟಿದ್ದಾನೆ(ಅ-೧೭).  ನಾವು ಮಾಡುವ ಪ್ರತಿಯೊಂದು ಕೆಲಸವೂ ಒಂದು ದೇವರಪೂಜೆ, ಅದು ಭಗವಂತನಿಗೆ ಅರ್ಪಿತವಾಗಿ ಅವನು ಪ್ರೀತನಾಗಲಿ ಎಂದು ಮಾಡುವುದು ಯಜ್ಞ. ನಾನು ಆಡಿದ ಮಾತೆಲ್ಲವೂ ನಿನ್ನ ಸ್ತೋತ್ರವಾಗಲಿ, ನಾನು ನಡೆದ ನಡೆಯಲ್ಲವೂ ನಿನ್ನ ಪ್ರದಕ್ಷಿಣೆಯಾಗಲಿ, ನಾನು ಮಲಗಿದ್ದೆಲ್ಲವೂ ನಿನಗೆ ನಮಸ್ಕಾರವಾಗಲಿ, ನಾನು ಮಾಡುವ ಪ್ರತಿಯೊಂದು ಕರ್ಮವೂ ನಿನಗೆ ಪೂಜೆಯಾಗಲಿ ಎನ್ನುವ ಅನುಸಂಧಾನದಿಂದ ಬದುಕಿದಾಗ ಅದು ಯಜ್ಞವಾಗುತ್ತದೆ. ಇನ್ನು ಎರಡನೇ ಕರ್ಮ-ದಾನ. ನಮ್ಮಲ್ಲಿಲ್ಲದ್ದನ್ನು ನಾವು ಇನ್ನೊಬ್ಬರಿಗೆ ಕೊಡಲು ಸಾಧ್ಯವಿಲ್ಲ. ಆದರೆ ಯಾರಿಗೆ ಯಾವಾಗ ಯಾವುದರ ಅಗತ್ಯವಿದೆಯೋ, ಅದು ನಮ್ಮಲ್ಲಿದ್ದರೆ, ಅದನ್ನು ನಿಸ್ವಾರ್ಥವಾಗಿ, ಪ್ರಚಾರದ ಬಯಕೆ ಇಲ್ಲದೆ ಕೊಡುವುದು ದಾನ. ಮೂರನೆಯ ಕರ್ಮ-ತಪಸ್ಸು. ದೊಡ್ಡವರಿಗೆ ಗೌರವಕೊಡುವುದು, ಸ್ವಚ್ಛವಾಗಿರುವುದು, ಪ್ರಾಮಾಣಿಕವಾದ ನೇರ ನಡೆ, ಸ್ವಚ್ಛಂದಕಾಮಕ್ಕೆ ಕಡಿವಾಣ(ಬ್ರಹ್ಮಚರ್ಯ), ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದು, ಇತ್ಯಾದಿ. ಇದು ನಾವು ದೈನಂದಿನ ಜೀವನದಲ್ಲಿ ಆಚರಿಸಬಹುದಾದ ತಪಸ್ಸು.[ಈ ಮೂರು ಕರ್ಮದ ಕುರಿತ ಹೆಚ್ಚಿನ ವಿವರಣೆಯನ್ನು ಗೀತೆಯ ಹದಿನೇಳನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. Refer: http://bhagavadgitakannada.blogspot.in].
ಮುಂದುವರಿದು ಯಮ ಹೇಳುತ್ತಾನೆ: “ತ್ರಿಣಾಚಿಕೇತಸ್ತ್ರಯಮೇತದ್ವಿದಿತ್ವಾ  ಯ ಏವಂ ವಿದ್ವಾಂಶ್ಚಿನುತೇ ನಾಚಿಕೇತಂ” ಎಂದು(ಶ್ಲೋ-೧೮-೧). ಅಗ್ನಿಕುಂಡ, ಕಾಲಕುಂಡ, ದೇಹಕುಂಡ ಎನ್ನುವ ಮೂರು ವಿಧವನ್ನು ತಿಳಿದು, ಮೂರು ಬಗೆಯ ನಾಚಿಕೇತಾಗ್ನಿಯ ಉಪಾಸನೆ ಮಾಡುವವನು, ಹಿಂದೆ ಹೇಳಿದ ರೀತಿಯಲ್ಲಿ ಮೂರು ವೇದಗಳನ್ನು ಸಮನ್ವಯಮಾಡಿ ಅರ್ಥ ಮಾಡಿಕೊಂಡು, ‘ತ್ರಿಕರ್ಮಕೃತ್’ ಆಗಿ, ಅಗ್ನಿಯಲ್ಲಿ ಸ್ಥಿತನಾದ ಅಗ್ನಿನಾರಾಯಣನನ್ನು ಉಪಾಸನೆ ಮಾಡಿದರೆ-ಅಂಥವನು ಮೊದಲು ಸ್ವರ್ಗವನ್ನು ಸೇರಿ, ಅಲ್ಲಿ ಕೆಲಕಾಲ ಇದ್ದು[ಶಾಸ್ತ್ರಕಾರರ ಪ್ರಕಾರ ಕೆಲಕಾಲ ಅಂದರೆ ಒಂದು ಮನ್ವಂತರದಷ್ಟು ದೀರ್ಘಕಾಲ], ಸ್ವರ್ಗಸುಖವನ್ನು ಅನುಭವಿಸಿ, ಆನಂತರ ಅಗ್ನಿಸ್ಥನಾದ ಭಗವಂತನನ್ನು ಉಪಾಸನೆ ಮಾಡಿದ ಫಲವಾಗಿ, ಹುಟ್ಟು-ಸಾವುಗಳ ಎಲ್ಲಾ ಬಂಧವನ್ನು ಕಳಚಿಕೊಂಡು, ನಿತ್ಯಾನಂದ ರೂಪವಾದ, ಸ್ವರೂಪಸುಖವನ್ನು ಕೊಡುವ ಮೋಕ್ಷವನ್ನು ಪಡೆಯುತ್ತಾನೆ.
“ಬ್ರಹ್ಮಜಜ್ಞಂ ದೇವಮೀಡ್ಯಂ ವಿದಿತ್ವಾ ನಿಚಾಯ್ಯೇಮಾಂ ಶಾಂತಿಮತ್ಯಂತಮೇತಿ”(ಶ್ಲೋ-೧೭-೨). ಇಲ್ಲಿ ಯಮ ಭಗವಂತನನ್ನು ‘ಬ್ರಹ್ಮಜಜ್ಞ’ ಎಂದು ಸಂಬೋಧಿಸಿದ್ದಾನೆ. ಶಬ್ದಗಳಲ್ಲಿ ಬೃಹತ್ ಆದದ್ದು ವೇದ. ಆದ್ದರಿಂದ ಅದು ‘ಬ್ರಹ್ಮ’. ವೇದಗಳಿಂದ ಅಭಿವ್ಯಕ್ತನಾಗುವ ಭಗವಂತ ‘ಬ್ರಹ್ಮಜ’. ಇಂಥ ಭಗವಂತ ವೇದವೇದ್ಯ. ಎಲ್ಲವನ್ನು ಬಲ್ಲವನು ಆ ಭಗವಂತನೊಬ್ಬನೆ. ಆದ್ದರಿಂದ ವೇದವೇದ್ಯನೂ ಸರ್ವಜ್ಞನೂ ಆದ  ಆ ಭಗವಂತ ‘ಬ್ರಹ್ಮಜಜ್ಞ’. ಆತನನ್ನು ಎಲ್ಲರೂ ಜಾತಿ ಮತ ಭೇದವಿಲ್ಲದೆ ‘ದೇವರು’ ಎಂದು ಕರೆಯುತ್ತಾರೆ. ಪ್ರಪಂಚದಲ್ಲಿ ಒಬ್ಬೊಬ್ಬರಿಗೆ ಒಂದೊಂದು ದೇವರಿಲ್ಲ. ಎಲ್ಲರಿಗೂ ದೇವರು ಒಬ್ಬನೆ. ಇದನ್ನು ‘ದೇವರು’ ಎನ್ನುವ ಪದವೇ ವಿವರಿಸುತ್ತದೆ. ದೇವರುಎನ್ನುವ ಪದ ದಿವುಎನ್ನುವ ದಾತುವಿನಿಂದ ಬಂದಿರುವುದು. ಪ್ರಾಚೀನ ದಾತು ಪಾಠದಲ್ಲಿ ಈ ದಾತುವಿಗೆ ಏಳು ಅರ್ಥವನ್ನು ನೋಡಬಹುದು. ಅವುಗಳೆಂದರೆ: ೧) ಧ್ಯುತಿ ೨) ವಿಜಿಗೀಶ ೩) ಕಾಂತಿ ೪) ಸ್ತುತಿ ೫) ವ್ಯವಹಾರ ೬) ಕ್ರೀಡಾ ೭) ಗತಿಶು.
೧) ಧ್ಯುತಿ: ಧ್ಯುತಿ ಅಂದರೆ ಬೆಳಕಿನ ಸ್ವರೂಪ. ಬೆಳಕಿನ ಪುಂಜವಾದ ಸೂರ್ಯಚಂದ್ರಾದಿಗಳಿಗೆ ಬೆಳಕನ್ನೀಯುವ ಭಗವಂತ ನಮ್ಮೊಳಗೆ ಜ್ಞಾನದ ಬೆಳಕನ್ನು ತುಂಬುತ್ತಾನೆ.
೨) ವಿಜಿಗೀಶ: ಭಗವಂತ ಎಲ್ಲರಿಗಿಂತ ಎತ್ತರದಲ್ಲಿರುವವನು ಹಾಗೂ ಗೆಲುವಿನ ಸ್ವರೂಪ.
೩) ಕಾಂತಿ: ಕೇವಲ ಇಚ್ಛೆಯಿಂದ ಸೃಷ್ಟಿ ಮಾಡಬಲ್ಲವ. ನಮಗೆ ಇಚ್ಛೆಯನ್ನು ಕೊಟ್ಟವ ಹಾಗೂ ಅದನ್ನು ಅವರವರ ಯೋಗ್ಯತೆಗೆ ತಕ್ಕಂತೆ ಪೂರೈಸುವವ.
೪) ಸ್ತುತಿ: ಎಲ್ಲರಿಂದ ಸ್ತುತನಾದವನು; ಎಲ್ಲರೂ ಯಾರನ್ನು ಸ್ತುತಿಸುತ್ತಾರೋ ಅವನು ಸರ್ವಶಬ್ದ ವಾಚ್ಯನಾದ ಭಗವಂತ.
೫) ವ್ಯವಹಾರ: ಜಗತ್ತಿನ ಸಮಸ್ತ ವ್ಯವಹಾರವನ್ನು ನಿರ್ವಹಿಸುವವ.
೬) ಕ್ರೀಡಾ: ಲೀಲಾ ಮಾತ್ರದಿಂದ ಸೃಷ್ಟಿ-ಸ್ಥಿತಿ-ಸಂಹಾರವನ್ನು ನಿಭಾಯಿಸುವವನು ಭಗವಂತ. ಇದು ಆತನಿಗೊಂದು ಕ್ರೀಡೆ.
೭) ಗತಿಶು: ಚಲನೆ ಮತ್ತು ಜ್ಞಾನ ಕೊಟ್ಟವ. ಯಾರು ಎಲ್ಲಾ ಕಡೆ ಗತನಾಗಿದ್ದಾನೋ; ಎಲ್ಲವನ್ನೂ ತಿಳಿದಿದ್ದಾನೋ; ಎಲ್ಲರೊಳಗೆ ಬಿಂಬ ರೂಪದಲ್ಲಿ ನೆಲೆಸಿದ್ದಾನೋ ಅವನು 'ದೇವ'
ಹೀಗೆ ಇಚ್ಛಾಮಾತ್ರದಿಂದ ಸೃಷ್ಟಿ ಮಾಡಬಲ್ಲ, ಸತ್ಯಸಂಕಲ್ಪ, ಸರ್ವಗತ, ಸರ್ವಜ್ಞ, ಬೆಳಕುಗಳ ಬೆಳಕಾಗಿ ಜಗತ್ತಿನ ಸರ್ವ ವ್ಯವಹಾರವನ್ನು ನಿರ್ವಹಿಸುವ, ಸರ್ವಶ್ರೇಷ್ಠ ಭಗವಂತ 'ದೇವ'. ಈ ರೀತಿ ಅಗ್ನಿಯಲ್ಲಿರುವ ಭಗವಂತನನ್ನು ‘ಬ್ರಹ್ಮಜಜ್ಞಂ ದೇವಮೀಡ್ಯ’ ಎಂದು ಉಪಾಸನೆ ಮಾಡಿದರೆ- ಸಾವಿಲ್ಲದ, ಸುಖದ ಪರಾಕಾಷ್ಠೆಯಾದ ಮೋಕ್ಷವನ್ನು ಪಡೆಯಬಹುದು ಎಂದು ವಿವರಿಸಿದ ಯಮ ಹೇಳುತ್ತಾನೆ: “ಇದೇ ನಿನ್ನ ಎರಡನೇ ಪ್ರಶ್ನೆಗೆ ಉತ್ತರ. ಎಲ್ಲವನ್ನು ಬಿಡಿಸಿ ಹೇಳಿದ್ದೇನೆ” ಎಂದು [ “ಏಷ ತೇSಗ್ನಿರ್ನಚಿಕೇತಃ ಸ್ವರ್ಗ್ಯೋ  ಯಮವೃಣೀಥಾ ದ್ವಿತೀಯೇನ ವರೇಣ (ಶ್ಲೋ-೧೯-೧)]
ಇಷ್ಟು ಹೇಳಿ ಯಮ ನಚಿಕೇತನನ್ನು ಉದ್ದೇಶಿಸಿ ಕೇಳುತ್ತಾನೆ- ನಾನು ಹೇಳಿದ ವಿಚಾರ ನಿನಗೆ ಸರಿಯಾಗಿ ತಿಳಿಯಿತೋ ಎಂದು. ಇದಕ್ಕೆ ಉತ್ತರಿಸಿದ ನಚಿಕೇತ ಯಮನಿಂದ ಪಡೆದ ಜ್ಞಾನದ ಉಪದೇಶವನ್ನು ಪೂರ್ಣವಾಗಿ ಅನುವಾದಿಸಿದ. ಈ ಸಂದರ್ಭವನ್ನು ಇಲ್ಲಿ ವಿವರಿಸುತ್ತಾ ಹೇಳುತ್ತಾರೆ:  “ಸ ಚಾಪಿ ತತ್ಪ್ರತ್ಯವದದ್ಯಥೋಕ್ತಂ  ಅಥಾಸ್ಯ ಮೃತ್ಯುಃ ಪುನರೇವಾಹ ತುಷ್ಟಃ”(ಶ್ಲೋ-೧೫-೨) ಎಂದು. ತಾನು ಹೇಳಿದ ಎಲ್ಲಾ ವಿಚಾರವನ್ನು ಚಾಚೂ ತಪ್ಪದೆ ನಚಿಕೇತ ಗ್ರಹಿಸಿದ್ದನ್ನು ಕಂಡು ಯಮನಿಗೆ ಮಹದಾನಂದವಾಗುತ್ತದೆ.  ಈ ಆನಂದದಲ್ಲಿ ಆತ ತಾನು ಮೊದಲು ಪ್ರತಿಜ್ಞೆ ಮಾಡಿದ್ದ ಮೂರು ವರವಲ್ಲದೆ ಇನ್ನೂ ಒಂದು ವರವನ್ನು ಕೊಡಲು ಮುಂದಾಗುತ್ತಾನೆ. ಇದನ್ನು ವರ್ಣಿಸುತ್ತಾ ಇಲ್ಲಿ ಹೇಳುತ್ತಾರೆ: “ತಮಬ್ರವೀತ್ ಪ್ರೀಯಮಾಣೋ ಮಹಾತ್ಮಾ  ವರಂ ತವೇಹಾದ್ಯ ದದಾಮಿ ಭೂಯಃ”(ಶ್ಲೋ-೧೬-೧) ಎಂದು.  ಸೂರ್ಯ-ಚಂದ್ರರಿಗೆ ಸಮಾನಸ್ಕಂದನಾದ, ದಿವ್ಯಜ್ಞಾನದ ಬೆಳಕನ್ನು ತುಂಬಿಕೊಂಡಿರುವ, ಮಹಾತ್ಮನಾದ ಯಮ ನಚಿಕೇತನ ಗ್ರಹಣ ಶಕ್ತಿಯನ್ನು ಕಂಡು ಸಂತೋಷಪಟ್ಟು ಇನ್ನೊಂದು ವರವನ್ನು ಅದೇ ಕ್ಷಣದಲ್ಲಿ ತಾನೇ ಉಡುಗೊರೆಯಾಗಿ ಕೊಡುತ್ತಾ ಹೇಳುತ್ತಾನೆ:  “ಈ ಅಗ್ನಿ ವಿದ್ಯೆಗೆ ಭೂಮಿಯ ಮೇಲೆ ನಾಚಿಕೇತಾಗ್ನಿ ಎಂದು ಹೆಸರು ಬರಲಿ; ನಿನ್ನ ಹೆಸರಿನಿಂದಲೇ ಈ ಅಗ್ನಿ ಪ್ರಸಿದ್ಧಿಯಾಗಲಿ” ಎಂದು. ಹೀಗೆ ಹೇಳಿ ಯಮ ತನ್ನ ಕೊರಳಿನಿಂದ ಒಂದು ಬಂಗಾರದ ಹಾರವನ್ನು ನಚಿಕೇತನಿಗೆ ಕೊಡಲು ಮುಂದಾಗುತ್ತಾನೆ. [ತವೈವ ನಾಮ್ನಾ ಭವಿತಾSಯಮಗ್ನಿಃ ಸೃಂಕಾಂ ಚೇಮಾಮನೇಕರೂಪಾಂ ಗೃಹಾಣ” (ಶ್ಲೋ-೧೬-೨)]. ಇಲ್ಲಿ ಬಂಗಾರದ ಹಾರವನ್ನು ‘ಸೃಂಕಾಂ’ ಎಂದು ಕರೆದಿದ್ದಾರೆ.  ಈ ಪದಕ್ಕೆ ಸಂಸ್ಕೃತದಲ್ಲಿ ‘ಸಂಕೋಲೆ’ ಎನ್ನುವ ಅರ್ಥವಿದೆ. ಇದು ಯಮ ನಚಿಕೇತನನ್ನು ಪರೀಕ್ಷಿಸುವ ರೀತಿ. ತನ್ನಿಂದ ಪ್ರಶಂಸೆ ಜೊತೆಗೆ ಚಿನ್ನದ ಹಾರ ದೊರೆತಾಗ, ನಚಿಕೇತ ಚಿನ್ನದ ಆಸೆಗೆ ಬಲಿಬೀಳುತ್ತಾನೋ ಎಂದು ಯಮ ನಚಿಕೇತನನ್ನು ಪರೀಕ್ಷಿಸುತ್ತಿದಾನೆ. ಇದಕ್ಕೆ ನಚಿಕೇತ ಹೇಳಿದನಂತೆ: “ಭೂಮಿ ಮೇಲೆ ಆರಾಧನೆ ಮಾಡತಕ್ಕ ಅಗ್ನಿವಿದ್ಯೆಗೆ ನನ್ನ ಹೆಸರು ಬಂತೆಂದರೆ ಅದು ನನ್ನ ಭಾಗ್ಯ. ಆದರೆ ಬಂಗಾರದ ಸರ ನನಗೆ ಬೇಡ.  ಅದು ನಿಮ್ಮಲ್ಲೇ ಇರಲಿ” ಎಂದು. [ನಚಿಕೇತನ ಈ ಪ್ರತಿಕ್ರಿಯೆಯನ್ನು ಕಠ ಉಪನಿಷತ್ತಿನಲ್ಲಿ ವಿವರಿಸಿಲ್ಲ]. ಇದು ಜ್ಞಾನಿಗಳಲ್ಲಿರುವ ದೊಡ್ಡ ಗುಣ. ಏಕೆಂದರೆ ಇಲ್ಲಿ ಯಮ ಕೊಟ್ಟಿದ್ದು ಸಂಸಾರ ಬಂಧದ ಸಂಕೋಲೆ ಎನ್ನುವ ಹಾರ. ಆದ್ದರಿಂದ ಅದನ್ನು ಜ್ಞಾನಿಯಾದ ನಚಿಕೇತ ಸ್ವೀಕಾರ ಮಾಡಲಿಲ್ಲ. ಆಗ ಯಮ ನಚಿಕೇತನಲ್ಲಿ ಹೇಳುತ್ತಾನೆ: “ನಿನ್ನ ಹೆಸರು ವೈದಿಕ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುವಂತೆ ನಿನಗೆ ವರವನ್ನು ಕೊಟ್ಟಿದ್ದೇನೆ. ಈಗ ನೀನು ನಿನ್ನ ಮೂರನೇ ವರವನ್ನು ಕೇಳು” ಎಂದು [ಏತಮಗ್ನಿಂ ತವೈವ ಪ್ರವಕ್ಷ್ಯಂತಿ ಜನಾಸಃ   ತೃತೀಯಂ ವರಂ ನಚಿಕೇತೋ ವೃಣೀಷ್ವ(ಶ್ಲೋ-೧೯-೨)]. ಮೂರನೇ ವರವಾಗಿ ನಚಿಕೇತ ಏನನ್ನು ಕೇಳಿದ ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.