ತದೇತದಿತಿ ಮನ್ಯಂತೇಽನಿರ್ದೇಶ್ಯಂ ಪರಮಂ ಸುಖಮ್ ।
ಕಥಂ ನು ತದ್ವಿಜಾನೀಯಾಂ ಕಿಮು ಭಾತಿ ವಿಭಾತಿ ವಾ ॥೧೪॥
ಭಗವಂತನ ಅರಿವು ಅದೆಷ್ಟು
ನಿಗೂಢ ಎನ್ನುವುದನ್ನು ಇಲ್ಲಿ ಯಮ ವಿವರಿಸಿದ್ದಾನೆ. ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡವರಿಗೇ 'ಭಗವಂತನನ್ನು ಕಂಡಿದ್ದೇನೆ' ಎಂದು ಹೇಳುವಷ್ಟು ಧೈರ್ಯವಿಲ್ಲ. ಏಕೆಂದರೆ ಭಗವಂತ ಅನಂತ. ಈ ಅನಂತದಲ್ಲಿ
ನಾವು ಗ್ರಹಿಸಲು ಸಾಧ್ಯವಾಗುವುದು ಅತ್ಯಂತ ಚಿಕ್ಕ ಅಂಶ ಮಾತ್ರ. ಆದ್ದರಿಂದ ನಾವು ಕಾಣುವ ಭಗವಂತ ಕುರುಡ
ಕಂಡ ಆನೆಯಂತೆ. ಯಮ ಹೇಳುತ್ತಾನೆ: ನಾನು ಧ್ಯಾನದಲ್ಲಿ
ದೇವರನ್ನು ಕಂಡೆನೋ ಅಥವಾ ಇಲ್ಲವೋ ನನಗೇ ತಿಳಿಯದು. ಅವನು ಕಾಣಿಸಿಕೊಳ್ಳುತ್ತಾನೋ ಇಲ್ಲವೋ ನನಗೇ ತಿಳಿಯದು.
ಹೀಗಿರುವಾಗ ಅವನ ವರ್ಣನೆಯನ್ನು ನಿನಗೆಂತು ಹೇಳಲಿ” ಎಂದು. ಭಗವಂತನಲ್ಲಿ ತನ್ಮಯತೆ ಬರುವ ಕ್ಷಣ ಅತ್ಯಂತ
ಆನಂದದ ಕ್ಷಣ. ಲೋಕದಲ್ಲಿ ಆ ಆನಂದಕ್ಕೆ ಸಾಟಿಯಾದ ಆನಂದ ಇನ್ನೊಂದಿಲ್ಲ. ಇಂತಹ ಆನಂದವನ್ನು ಅನುಭವಿಸಬೇಕೇ
ಹೊರತು ವಿವರಿಸಲು ಸಾಧ್ಯವಿಲ್ಲ ಎನ್ನುತ್ತಾನೆ ಯಮ.
ಭಗವಂತ ಅಳೆಯಲಾಗದ ಅನಂತವಾದ
ಸುಖದ ಕಡಲು. "ಇದು ನನ್ನದೇ ಆದ ಮಾನಸಿಕೆ ಭ್ರಮೆ ಅಲ್ಲ. ಪ್ರಪಂಚದಲ್ಲಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ
ಪ್ರತಿಯೊಬ್ಬ ಜ್ಞಾನಿಯ ಅನುಭವವೂ ಇದೇ" ಎನ್ನುತ್ತಾನೆ ಯಮ. ಆದ್ದರಿಂದ ಭಗವಂತನೆಂದರೆ ಅಪರಂಪಾರವಾದ, ಜ್ಞಾನಾನಂದಸ್ವರೂಪವಾದ,
ಯಾರಿಂದಲೂ ಪೂರ್ಣ ಗ್ರಹಿಸಲು ಸಾಧ್ಯವಾಗದ ಸರ್ವಜ್ಞತತ್ವ ಎಂದು ಉಪಾಸನೆ ಮಾಡುವುದು ಶಾಸ್ತ್ರಸಮ್ಮತ.
ನ ತತ್ರ ಸೂರ್ಯೋ ಭಾತಿ ನ ಚಂದ್ರತಾರಕಂ ನೇಮಾ ವಿದ್ಯುತೋ ಭಾಂತಿ ಕುತೋಽಯಮಗ್ನಿಃ ।
ತಮೇವ ಭಾಂತಮನುಭಾತಿ ಸರ್ವಂ ತಸ್ಯ ಭಾಸಾ
ಸರ್ವಮಿದಂ ವಿಭಾತಿ ॥೧೫॥
ಭಗವಂತನನ್ನು ಸೂರ್ಯನಾಗಲಿ,
ಚಂದ್ರನಾಗಲೀ, ಮಿಂಚು-ನಕ್ಷತ್ರವಾಗಲೀ, ಅಗ್ನಿಯಾಗಲೀ ಬೆಳಗಿಸಿ ತೋರಿಸಲಾರವು. ಏಕೆಂದರೆ ಈ ಎಲ್ಲಾ ಬೆಳಕಿನ
ಪುಂಜಗಳಿಗೆ ಬೆಳಕನ್ನೀಯುವ ಮೂಲ ಬೆಳಕು ಆ ಭಗವಂತ. ಭಗವಂತನ ಬೆಳಕಿಗೆ ಅನುಗುಣವಾಗಿ ಕಣ್ಣಿಗೆ ಕಾಣುವ
ಈ ಬೆಳಕುಗಳಿವೆ. ಎಲ್ಲಾ ಬೆಳಕುಗಳ ಒಳಗೆ ಬೆಳಕಾಗಿ ಭಗವಂತ ತುಂಬಿದ್ದಾನೆ. ಎಲ್ಲಾ ಬೆಳಕುಗಳೂ ಭಗವಂತನ
ಬೆಳಕಿನ ಪ್ರತಿಫಲನ. ಭಗವಂತನಲ್ಲದ, ಸ್ವತಂತ್ರವಾದ ಬೆಳಕು ಈ ಪ್ರಪಂಚದಲ್ಲಿಲ್ಲ. ಇದನ್ನೇ ಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ:
ನ ತದ್ ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ ।
ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ ॥೧೫-೬॥
ಅದನ್ನು ಸೂರ್ಯ
ಬೆಳಗಿಸಲಾರ; ಚಂದ್ರ ಬೆಳಗಿಸಲಾರ; ಬೆಂಕಿ ಕೂಡಾ. ಅದರತ್ತ ತೆರಳಿದವರು ಮತ್ತೆ ಮರಳುವುದಿಲ್ಲ. ಅದು ನನ್ನ ಹಿರಿಯ ರೂಪ.
॥ಇತಿ ಕಾಠಕೋಪನಿಷದಿ ದ್ವಿತೀಯಾಧ್ಯಾಯೇ ದ್ವಿತೀಯಾ ವಲ್ಲೀ ॥
ಇಲ್ಲಿಗೆ ಕಾಠಕೋಪನಿಷತ್ತಿನ
ಎರಡನೇ ಅಧ್ಯಾಯದ ಎರಡನೇ ವಲ್ಲೀ ಮುಗಿಯಿತು
No comments:
Post a Comment