Wednesday, August 15, 2012

Kathopanishad in Kannada Chapter-02 Canto-03 Shloka-07-10


ಇಂದ್ರಿಯೇಭ್ಯಃ ಪರಂ ಮನೋ ಮನಸಃ ಸತ್ತ್ವಮುತ್ತಮಮ್
ಸತ್ತ್ವಾದಧಿ ಮಹಾನಾತ್ಮಾ ಮಹತೋಽವ್ಯಕ್ತಮುತ್ತಮಮ್                

ಅವ್ಯಕ್ತಾತ್ತು ಪರಃ ಪುರುಷೋ ವ್ಯಾಪಕೋಽಲಿಂಗ ಏವ ಚ
ಯಂ ಜ್ಞಾತ್ವಾ ಮುಚ್ಯತೇ ಜಂತುರಮೃತತ್ವಂ ಚ ಗಚ್ಛತಿ                    

ದೇವರನ್ನು ಉಪಾಸನೆ ಮಾಡುವಾಗ ಅವನ ಪರಿವಾರ ಸಮೇತ ಉಪಾಸನೆ ಮಾಡಬೇಕು ಎಂದು ಹಿಂದೆ ಹೇಳಿದ್ದನ್ನು ಇನ್ನೂ ಸ್ಪಷ್ಟವಾಗಿ, ತಾರತಮ್ಯ ಪೂರ್ವಕ ಇಲ್ಲಿ ವಿವರಿಸಲಾಗಿದೆ. ಭಗವಂತನ ಪರಿವಾರ ಎಂದರೆ ಅಲ್ಲಿ ಎಲ್ಲರೂ ಸಮಾನ ಸ್ಕಂದರಲ್ಲ. ಈ ವಿಚಾರವನ್ನು ಯಮ ಹಿಂದೆಯೇ ವಿವರಿಸಿದ್ದಾನೆ. ಅದಕ್ಕೆ ಒತ್ತು ಕೊಟ್ಟು ಪುನಃ ಇಲ್ಲಿ ವಿವರಿಸುತ್ತಾನೆ ಯಮ. ದೇವತೆಗಳು ನಮ್ಮ ಮತ್ತು ಭಗವಂತನ ನಡುವಿನ ಮೆಟ್ಟಿಲುಗಳಿದ್ದಂತೆ. ಅವರನ್ನು ತರತಮ ಭಾವದಿಂದ ಅನುಸಂಧಾನ ಮಾಡಿ ಕೊನೇ ಮೆಟ್ಟಿಲಿನಲ್ಲಿ ಭಗವಂತನನ್ನು ಕಾಣಬೇಕು.
ದೇವತಾ ತಾರತಮ್ಯ ಎನ್ನುವುದು ಅಧ್ಯಾತ್ಮದಲ್ಲಿ ಅತ್ಯಂತ ಮುಖ್ಯ ವಿಷಯ. ನಮ್ಮ ದೇಹಕ್ಕಿಂತ ನಮ್ಮ ಇಂದ್ರಿಯಗಳು ಶ್ರೇಷ್ಠ, ಇಂದ್ರಿಯಗಳಿಗಿಂತ ಮನಸ್ಸು ಶ್ರೇಷ್ಠ, ಮನಸ್ಸಿಗಿಂತ ಸತ್ವ(ಬುದ್ಧಿ) ಶ್ರೇಷ್ಠ, ಸತ್ವಕ್ಕಿಂತ ಆತ್ಮ ಶ್ರೇಷ್ಠ, ಆತ್ಮನಿಗಿಂತ ಶ್ರೇಷ್ಠ ಅವ್ಯಕ್ತ, ಅವ್ಯಕ್ತಕ್ಕಿಂತ ಪರಮ ಪುರುಷ ಭಗವಂತ ಶ್ರೇಷ್ಠ. ಇಲ್ಲಿ ಕೊನೆಯಲ್ಲಿ ಅವ್ಯಕ್ತತತ್ವ(ಶ್ರೀಲಕ್ಷ್ಮಿ) ಮತ್ತು ಪರಮಪುರುಷ ಭಗವಂತನನ್ನು ಹೇಳಿರುವುದರಿಂದ, ಈ ಶ್ಲೋಕದಲ್ಲಿ ಹೇಳಲಾದ ಇಂದ್ರಿಯ, ಮನಸ್ಸು, ಬುದ್ಧಿ, ಇತ್ಯಾದಿ ಮೂಲತಃ ಅದರ ಅಭಿಮಾನಿ ದೇವತೆಗಳನ್ನು  ಹೇಳುತ್ತವೆ ಎನ್ನುವುದು ತಿಳಿಯುತ್ತದೆ. ಹಿಂದೆ ಹೇಳಿದಂತೆ, ಇಂದ್ರಾದಿ ಸಮಸ್ತ ದೇವತೆಗಳಿಗಿಂತ ಮನೋಭಿಮಾನಿಗಳಾದ ಗರುಡ-ಶೇಷ-ರುದ್ರರು ಶ್ರೇಷ್ಠ;  ಮನೋಭಿಮಾನಿ ದೇವತೆಗಳಿಗಿಂತ ಬುದ್ಧಿಯ ದೇವತೆಯರಾದ ಸರಸ್ವತಿ-ಭಾರತಿಯರು ಶ್ರೇಷ್ಠ;  ಬುದ್ಧಿಯ ದೇವತೆಗಳಿಗಿಂತ ಶ್ರೇಷ್ಠ ಮಹತತ್ವ ಮತ್ತು ಜೀವಕಲಾಭಿಮಾನಿಗಳಾದ ಬ್ರಹ್ಮ-ವಾಯು. ಎಲ್ಲರಿಗಿಂತ ಶ್ರೇಷ್ಠ ಅವ್ಯಕ್ತತತ್ವ ಶ್ರೀಲಕ್ಷ್ಮಿ ಮತ್ತು ಪರಮಪುರುಷ ಭಗವಂತ.
ಭಗವಂತ ಎಲ್ಲವನ್ನೂ ವ್ಯಾಪಿಸಿ ನಿಂತಿದ್ದಾನೆ. ಅವನನ್ನು ವ್ಯಾಪಿಸುವ ಇನ್ನೊಂದು ಶಕ್ತಿ ಇಲ್ಲ. ಎಲ್ಲವೂ ಅವನ ಅಧೀನ. ಇಂತಹ ಭಗವಂತನನ್ನು  ತರ್ಕ/ಯುಕ್ತಿಯಿಂದ ಅಳೆಯಲು ಸಾಧ್ಯವಿಲ್ಲ. ಹಾಗಾಗಿ ತಾರತಮ್ಯಪೂರ್ವಕವಾಗಿ ದೇವತೆಗಳನ್ನು ತಿಳಿದು, ತಾರತಮ್ಯ ಅಂತಗತನಾಗಿರುವ ಭಗವಂತನನ್ನು ತಿಳಿಯುವ ಪ್ರಯತ್ನ ಮಾಡಬೇಕು. ಭಗವಂತನ ಜ್ಞಾನವಿಲ್ಲದ ನಾವು ಕೇವಲ ಹುಟ್ಟಿ-ಸಾಯುವ ಜಂತುಗಳಿದ್ದಂತೆ. ಎಲ್ಲಾ ತಾರತಮ್ಯವನ್ನು ಮತ್ತು ಅದರ ತುತ್ತತುದಿಯಲ್ಲಿರುವ ಸರ್ವೋತ್ತಮ ತತ್ವ ಭಗವಂತನನ್ನು ತಿಳಿದಾಗ ನಾವು ಸಾವಿಲ್ಲದ ಮೋಕ್ಷ ಮಾರ್ಗವನ್ನು ಕಾಣಬಹುದು.      

ನ ಸಂದೃಶೇ ತಿಷ್ಠತಿ ರೂಪಮಸ್ಯ  ನ ಚಕ್ಷುಷಾ ಪಶ್ಯತಿ ಕಶ್ಚನೈನಮ್
ಹೃದಾ ಮನೀಷಾ ಮನಸಾಽಭಿಕ್ಲೃ್ಪ್ತೋ  ಯ ಏತದ್ವಿದುರಮೃತಾಸ್ತೇ ಭವಂತಿ  

ಭಗವಂತ ನಮ್ಮ ಬಾಹ್ಯ ಇಂದ್ರಿಯಗಳಿಗೆ ಗೋಚರನಾಗುವುದಿಲ್ಲ. ಆತನನ್ನು ಕಾಣಬೇಕೆಂದರೆ ನಾವು ನಮ್ಮ ಒಳಗಣ್ಣಿನಿಂದ ಕಾಣಬೇಕು. ಇಲ್ಲಿ ಒಂದು ಪ್ರಶ್ನೆ ಬರಬಹುದು. ಅದೇನೆಂದರೆ: ಅವತಾರ ರೂಪಿ ಭಗವಂತನನ್ನು ಆ ಕಾಲದಲ್ಲಿ ಎಲ್ಲರೂ ಕಂಡಿದ್ದರು. ಆದರೆ ಶಾಸ್ತ್ರ ಆತ ಹೊರಗಣ್ಣಿಗೆ ಅಗೋಚರ ಎನ್ನುತ್ತದೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎಂದು. ನಿಜ, ಅವತಾರ ರೂಪಿ ಭಗವಂತನನ್ನು ಎಲ್ಲರೂ ಕಾಣುತ್ತಿದ್ದರು. ಕೇವಲ ಸಾತ್ವಿಕರಷ್ಟೇ ಅಲ್ಲ, ರಾಕ್ಷಸರೂ ಕೂಡ! ಆದರೆ ಅದು ಭಗವಂತನ ಸಾಕ್ಷಾತ್ಕಾರವಲ್ಲ. ಭಗವಂತನ ಸಾಕ್ಷಾತ್ಕಾರ ಕೇವಲ ಜ್ಞಾನದೃಷ್ಟಿಯಲ್ಲಿ ಮಾತ್ರ ಸಾಧ್ಯ. ಜ್ಞಾನದೃಷ್ಟಿ ಇಲ್ಲದೇ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿಲ್ಲ.
ಭಗವಂತನನ್ನು ನಾವು ನಮ್ಮ ಶುದ್ಧವಾದ ಮನಸ್ಸಿನಿಂದ ನಮ್ಮೊಳಗೇ ಕಾಣಬೇಕು. ಈ ರೀತಿ ಆತನನ್ನು ಕಾಣಬೇಕಾದರೆ ನಮಗೆ ಶುದ್ಧ, ಸಾತ್ವಿಕವಾದ, ನಿರಂತರ ಭಗವಂತನನ್ನು ಪ್ರೀತಿಸುವ, ಭಕ್ತಿಯಿಂದ ತುಂಬಿರುವ  ಮನಸ್ಸಿರಬೇಕು. ಇಂತಹ ಶುದ್ಧ ಮನಸ್ಸಿನಿಂದ ಭಗವಂತನ ಬಗೆಗೆ ನಿರಂತರ ಅಂತರಂಗ ಮಥನ ನಡೆಯಬೇಕು. ಆಗ ಭಗವಂತನ ನಿಶ್ಚಿತವಾದ ಅನುಭೂತಿ ಬರುತ್ತದೆ.

ಯದಾ ಪಂಚಾವತಿಷ್ಠಂತೇ ಜ್ಞಾನಾನಿ ಮನಸಾ ಸಹ
ಬುದ್ಧಿಶ್ಚ ನ ವಿಚೇಷ್ಟತೇ ತಾಮಾಹುಃ ಪರಮಾಂ ಗತಿಮ್                    ೧೦

ನಮ್ಮ ಮನಸ್ಸು ಭಗವಂತನಲ್ಲಿ ಸಂಯೋಗ ಹೊಂದುವುದಕ್ಕೆ ಯೋಗಸಿದ್ಧಿ ಎನ್ನುತ್ತಾರೆ. ಇದಕ್ಕಾಗಿ ನಾವು ನಮ್ಮ ಬಾಹ್ಯೆಂದ್ರಿಯಗಳನ್ನು ಸ್ಥಬ್ಧ ಮಾಡಬೇಕು. ಐದು ಇಂದ್ರಿಯಗಳನ್ನು ಸ್ಥಗನಗೊಳಿಸಿದ ಮೇಲೆ, ಮನಸ್ಸನ್ನು ಸ್ಥಬ್ಧಗೊಳಿಸಬೇಕು. ಇದನ್ನು ಉನ್ಮನೀಭಾವ ಎನ್ನುತ್ತಾರೆ. ಈ ಸ್ಥಿತಿಯಲ್ಲಿ ಕೇವಲ ನಮ್ಮ ಆತ್ಮಸ್ವರೂಪ ಕೆಲಸ ಮಾಡುತ್ತದೆ. ಕೇವಲ ಆತ್ಮಸ್ವರೂಪದಿಂದ ಸ್ವರೂಪಭೂತನಾದ ಆ ಭಗವಂತನನ್ನು ಕಾಣಲು ಸಾಧ್ಯ. ಇದು ಒಬ್ಬ ಮನುಷ್ಯ ಧ್ಯಾನದಲ್ಲಿ ಸಾಧಿಸಬಹುದಾದ ಅತ್ಯಂತ ಉನ್ನತ ಸ್ಥಿತಿ. 

No comments:

Post a Comment