ಕಠೋಪನಿಷತ್

ಕಠೋಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ.

ಅಗ್ನಿಹೋತ್ರದ ಮಹತ್ವವೇನು? ಅದರ ಹಿಂದಿನ ವಿಜ್ಞಾನವೇನು? ಜೀವ ಅನ್ನುವುದು ಇದೆಯೋ? ಸತ್ತಮೇಲೆ ಜೀವಕ್ಕೆ ಅಸ್ತಿತ್ವವಿದೆಯೋ? ಪರಲೋಕ ಎನ್ನುವುದೊಂದಿದೆಯೋ? ಜೀವನಿಗಿಂತ ಬೇರೆಯಾಗಿ ದೇವರು ಇದ್ದಾನೆಯೇ? ಭಗವಂತ ನಮ್ಮನ್ನು ಸಂಸಾರದಲ್ಲಿ ಮಾತ್ರ ನಿಯಮಿಸುವುದೋ ಅಥವಾ ಮೋಕ್ಷದಲ್ಲೂ ಆತನ ನಿಯಂತ್ರಣವಿದೆಯೋ? ಮೋಕ್ಷಕ್ಕೆ ಹೋದ ಜೀವದ ಇರವು ಹೇಗಿರುತ್ತದೆ? ಮೋಕ್ಷಕ್ಕೆ ಹೋದ ಮೇಲೆ ಏನಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕಠೋಪನಿಷತ್ತು.
Katha Upanishad in Kannada. Reference: Upanishad discourse by Poojya Bannanje Govindacharya

Download pdf: e-Book

Thursday, April 19, 2012

Kathopanishad in Kannada Ch-01 Canto-01 Shloka-20-29

ಯೇಯಂ ಪ್ರೇತೇ ವಿಚಿಕಿತ್ಸಾ ಮನುಷ್ಯೇSಸ್ತೀತ್ಯೇಕೇ ನಾಯಮಸ್ತೀತಿ ಚೈಕೇ
ಏತದ್ವಿದ್ಯಾಮನುಶಿಷ್ಟಸ್ತ್ವಯಾSಹಂವರಾಣಾಮೇಷ ವರಸ್ತೃತೀಯಃ                             ೨೦
ಮೂರನೇ ವರವಾಗಿ ನಚಿಕೇತ ಇಡೀ ಮನುಕುಲವನ್ನು ಯಾವಾಗಲೂ ಕಾಡುತ್ತಿರುವ ಒಂದು ವಿಶಿಷ್ಠವಾದ ಪ್ರಶ್ನೆಯನ್ನು ಯಮನ ಮುಂದಿಡುತ್ತಾನೆ. ಇಡೀ ವೈದಿಕ ಚಿಂತನೆಯಲ್ಲಿ ಈ ವಿಷಯ ಇನ್ನೆಲ್ಲೂ ಸಿಗುವುದಿಲ್ಲ. ಅಂಥಹ ಅಪೂರ್ವ ವಿಷಯದ ಬಗ್ಗೆ ಇಲ್ಲಿ ಯಮನಲ್ಲಿ ಪ್ರಶ್ನೆ ಹಾಕುತ್ತಿದ್ದಾನೆ ನಚಿಕೇತ. ಮೇಲ್ನೋಟದಲ್ಲಿ ಈ ಶ್ಲೋಕವನ್ನು ನಾವು ನೋಡಿದರೆ ನಮಗೆ ನಚಿಕೇತನ ಪ್ರಶ್ನೆ ತುಂಬಾ ಸರಳ ಎನಿಸುತ್ತದೆ. ಆದರೆ ಈ ಪ್ರಶ್ನೆಗೆ ಯಮನ ಉತ್ತರವನ್ನು ನೋಡಿದಾಗ ಇಲ್ಲಿ ಕಾಣುವ ಮೇಲ್ನೋಟದ ಅರ್ಥ ನಚಿಕೇತನ ಮೂಲ ಪ್ರಶ್ನೆ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಮೇಲ್ನೋಟಕ್ಕೆ ಈ ಶ್ಲೋಕವನ್ನು ನೋಡಿದರೆ: ‘ಯೇಯಂ ಪ್ರೇತೇ ವಿಚಿಕಿತ್ಸಾ ಮನುಷ್ಯೇ’ – ಸತ್ತ ಮನುಷ್ಯನ ಬಗೆಗೆ ಒಂದು ಸಂದೇಹವಿದೆ; ‘ಅಸ್ತೀತ್ಯೇಕೇ ನಾಯಮಸ್ತೀತಿ ಚೈಕೇ’-ಕೆಲವರು ಹೇಳುತ್ತಾರೆ ಸತ್ತ ಮೇಲೆ ಅಸ್ತಿತ್ವ ಇದೆ ಎಂದು, ಇನ್ನು ಕೆಲವರು ಇಲ್ಲ ಎಂದು; ‘ಏತದ್ವಿದ್ಯಾಮನುಶಿಷ್ಟಸ್ತ್ವಯಾSಹಂ’- ಇದರ ಕುರಿತು ಶಾಸ್ತ್ರಕ್ಕನುಗುಣವಾಗಿ ನಾನು ನಿನ್ನಿಂದ ಕೇಳಿ ತಿಳಿದುಕೊಳ್ಳಬೇಕು’-ಇದು ಮೇಲ್ನೋಟದ ಅರ್ಥ. ಆದರೆ ಈ ರೀತಿ ಈ ಶ್ಲೋಕವನ್ನು ಬಿಡಿಸುವುದು ತಪ್ಪು. ಏಕೆಂದರೆ ಇಲ್ಲಿ ನಚಿಕೇತ ಸತ್ತು ಯಮಲೋಕದಲ್ಲಿದ್ದಾನೆ. ಆದ್ದರಿಂದ ಸತ್ತ ಮೇಲೆ ಅಸ್ತಿತ್ವವಿದೆಯೋ ಅನ್ನುವ ಪ್ರಶ್ನೆಯೇ ಇಲ್ಲಿ ಅಸಂಗತ. ಯಮಲೋಕ ಪಯಣದಲ್ಲಿ ಜೀವಗಳ ಪ್ರವಾಹವನ್ನು ನಚಿಕೇತ ನೋಡಿದ್ದಾನೆ. ಹಾಗಿರುವಾಗ ದೇಹಕ್ಕಿಂತ ಬೇರೆಯಾದ ಅತ್ಮವಿದೆಯೋ ಎಂದು ಆತ ಪ್ರಶ್ನೆ ಹಾಕುವ ಸಾಧ್ಯತೆಯೇ ಇಲ್ಲ.  ಹಾಗಾಗಿ ಇಲ್ಲಿರುವ ನಿಜವಾದ ಮೂಲ ಅರ್ಥ ತಿಳಿಯಲು ನಾವು ಈ ಶ್ಲೋಕವನ್ನು ಬೇರೆ ಆಯಾಮದಲ್ಲಿ ನೋಡಬೇಕು.
‘ಯೇಯಂ ಪ್ರೇತೇ ವಿಚಿಕಿತ್ಸಾ ಮನುಷ್ಯೇ’ ಎನ್ನುವಲ್ಲಿ ‘ಪ್ರೇತ’ ಎನ್ನುವ ಪದದ ಅರ್ಥ ಸತ್ತ ಜೀವವಲ್ಲ. ಸಂಸ್ಕೃತದಲ್ಲಿ ಪ್ರೇತ ಎಂದರೆ ಎತ್ತರಕ್ಕೆ ಏರಿದವನು(ಪ್ರಕೃಷ್ಟಂ ಏತಃ-ಪ್ರೇತಃ) ಅಥವಾ  ಮೇಲಕ್ಕೆ ಹೋದವನು ಎಂದರ್ಥ. ಮೇಲಕ್ಕೆ ಅಂದರೆ ಪುಣ್ಯಲೋಕಕ್ಕೆ ಹೋಗುವುದು. ಪುಣ್ಯಲೋಕದಲ್ಲಿ ಕೊನೆಯ ಎತ್ತರ-ಮೋಕ್ಷ. ಆದ್ದರಿಂದ ಇಲ್ಲಿ ಪ್ರೇತಃ ಅಂದರೆ ಮೋಕ್ಷವನ್ನು ಪಡೆದಿರತಕ್ಕವ. ಇನ್ನು ‘ಮನುಷ್ಯ’ ಎಂದರೆ ಕೇವಲ ಮಾನವ ಅಲ್ಲ. ಮನನಶೀಲವಾದ ಜೀವ-ಮನುಷ್ಯ[ಮಾನವರು, ದೇವತಗಳು, ಇತ್ಯಾದಿ] . ವಿಚಿಕಿತ್ಸೆ- ಎಂದರೆ ವಿಚಾರಣೆ ಅಥವಾ ಚರ್ಚೆ. ‘ಅಸ್ತೀತ್ಯೇಕೇ ನಾಯಮಸ್ತೀತಿ ಚೈಕೇ’ ಎನ್ನುವಲ್ಲಿ ‘ಅಸ್ತಿ’ ಅನ್ನುವುದಕ್ಕೆ ವಿಶೇಷ ಅರ್ಥವಿದೆ. ಅಸ್ತಿ ಅಂದರೆ ಎಲ್ಲಕ್ಕಿಂತ ಶ್ರೇಷ್ಠವಾದ ವಸ್ತು- ಅಂದರೆ ಭಗವಂತ. ಈ ಎಲ್ಲಾ ಅರ್ಥದೊಂದಿಗೆ ಈ ಶ್ಲೋಕವನ್ನು ನೋಡಿದರೆ ಆಗ ನಮಗೆ ನಚಿಕೇತನ ಮೂಲ ಪ್ರಶ್ನೆ ಏನು ಎನ್ನುವುದು ಅರ್ಥವಾಗುತ್ತದೆ.
 “ಸತ್ತ ಜೀವಕ್ಕೆ ಭಗವಂತನ ನಿಯಮನ ಹೇಗೆ?  ಭಗವಂತ ಮೊಕ್ಷದಲ್ಲೂ ನಿಯಾಮಕನಾಗಿರುತ್ತಾನೆ ಎನ್ನುತ್ತಾರೆ ಜ್ಞಾನಿಗಳು, ಇಲ್ಲ ಎನ್ನುತ್ತಾರೆ ಇನ್ನು ಕೆಲವರು. ಹೀಗಿರುವಾಗ ಮೋಕ್ಷದಲ್ಲಿ ಭಗವಂತ ಜೀವನನ್ನು ನಿಯಂತ್ರಿಸುವ ಬಗೆ ಎಂಥದ್ದು? ಮೋಕ್ಷದಲ್ಲಿ ಭಗವಂತನ ಪ್ರೇರಣೆ ಹೇಗಿರುತ್ತದೆ? ಭಗವಂತನ ಧಾರಕಶಕ್ತಿಯನ್ನು ಚನ್ನಾಗಿ ತಿಳಿದ, ಧರ್ಮನಿಯಾಮಕನಾದ ನೀನು, ಇದನ್ನು ಶಾಸ್ತ್ರಕ್ಕೆ ಅನುಗುಣವಾಗಿ ನನಗೆ ಅನುಭವವಾಗುವಂತೆ ಅನುಭವಿಸಿ ಹೇಳು. ಇದು ನಾನು ಕೇಳಬೇಕಾದ ಮೂರನೆಯ ಹಾಗೂ ಕೊನೆಯ ವರ.” ಎಂದು ನಚಿಕೇತ ತನ್ನ ಪ್ರಶ್ನೆಯನ್ನು ಯಮನ ಮುಂದಿಡುತ್ತಾನೆ.
ಅಧ್ಯಾತ್ಮ ವಿದ್ಯೆಯಲ್ಲಿ ಮನುಷ್ಯ ತಿಳಿಯಬೇಕಾದ ಅತ್ಯಂತ ಶ್ರೇಷ್ಠ ವಿಚಾರವಿದು. ಸತ್ತ ನಂತರ ಜೀವ ಮತ್ತು ಭಗವಂತನ ಸಂಬಂಧ, ಮುಕ್ತಿಯಲ್ಲಿ ಭಗವಂತ ಜೀವನನ್ನು ನಿಯಮಿಸುವ ನಡೆ –ಎಲ್ಲವೂ ಬಹಳ ನಿಗೂಢ. ಮೋಕ್ಷವನ್ನು ಕಾಣದವ ಇದನ್ನು ವಿವರಿಸಲಾರ, ಮೋಕ್ಷವನ್ನು ಸೇರಿದವ ಮರಳಿ ಬಂದು ಹೇಳಲಾರ. ಹೀಗಿರುವಾಗ ಈ ವಿಚಾರ ಬಹಳ ರಹಸ್ಯ. ಇಂಥಹ ನಿಗೂಢವಾದ ವಿಷಯವನ್ನು ಯೋಗ್ಯರಲ್ಲದವರಿಗೆ ಯಾರೂ ಹೇಳುವುದಿಲ್ಲ. ಆದ್ದರಿಂದ ಇಲ್ಲಿ ಯಮ ನೇರವಾಗಿ ನಚಿಕೇತನ ಪ್ರಶ್ನೆಗೆ ಉತ್ತರಿಸದೆ, ಆತನ ಯೋಗ್ಯತೆಯನ್ನು ಮತ್ತೆ ವಿವಿಧ ರೀತಿಯಿಂದ ಪರೀಕ್ಷಿಸುವುದನ್ನು ಮುಂದಿನ ಶ್ಲೋಕಗಳಲ್ಲಿ ಕಾಣಬಹುದು.
ದೇವೈರತ್ರಾಪಿ ವಿಚಿಕಿತ್ಸಿತಂ ಪುರಾ  ನ ಹಿ ಸುವಿಜ್ಞೇಯಮಣುರೇಷ ಧರ್ಮಃ
ಅನ್ಯಂ ವರಂ ನಚಿಕೇತೋ ವೃಣೀಷ್ವ  ಮಾ ಮೋಪರೋತ್ಸೀರತಿ ಮಾ ಸೃಜೈನಂ          ೨೧
ಯಮ ಹೇಳುತ್ತಾನೆ: “ನೀನು ಕೇಳಿದ ವಿಚಾರ ದೇವತೆಗಳಿಗೂ ಪೂರ್ಣವಾಗಿ ತಿಳಿದಿಲ್ಲ. ಈ ಬಗ್ಗೆ ದೇವಲೋಕದಲ್ಲಿ ನಿರಂತರ ಚರ್ಚೆ ನಡೆದಿದೆ” ಎಂದು. ಇಲ್ಲಿ ‘ನ ಹಿ ಸುವಿಜ್ಞೇಯಮಣುರೇಷ ಧರ್ಮಃ’ ಎನ್ನುವಲ್ಲಿ ‘ಧರ್ಮಃ’ ಅನ್ನುವುದನ್ನು ದೇವರು ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ‘ಧಾರಯತಿ ಇತಿ ಧರ್ಮಃ’. ಯಾವುದು ನಮ್ಮನ್ನು ಧಾರಣೆ ಮಾಡುತ್ತದೋ ಅದು ಧರ್ಮ. ನಮ್ಮ ಪ್ರಾಮಾಣಿಕ ಬದುಕು ನಮ್ಮನ್ನು ಧಾರಣೆ ಮಾಡಿ ಬಾಳಿನಲ್ಲಿ ಕುಸಿಯದಂತೆ ಮಾಡಿ ಎತ್ತರಕ್ಕೆರಲು ಸಹಾಯ ಮಾಡುತ್ತದೆ. ಅದು ಧರ್ಮ. ಎಲ್ಲವನ್ನೂ(ಇಡೀ ವಿಶ್ವವನ್ನು) ಧಾರಣೆ ಮಾಡಿದ ಆ ಭಗವಂತನನ್ನು ಶಾಸ್ತ್ರಕಾರರು ಧರ್ಮಃ ಎಂದು ಕರೆಯುತ್ತಾರೆ. ವಿಷ್ಣುಸಹಸ್ರನಾಮದಲ್ಲಿ ಭಗವಂತನನ್ನು ‘ಧರ್ಮೋ ಧರ್ಮವಿದುತ್ತಮಃ’ ಎಂದು ಕರೆದಿದ್ದಾರೆ. ಇಂಥಹ ಸ್ಥೂಲ ಪ್ರಪಂಚವನ್ನು ಧಾರಣೆ ಮಾಡಿದ ಭಗವಂತ ಸೂಕ್ಷ್ಮಾತಿ-ಸೂಕ್ಷ್ಮ. ಅದು ನಮ್ಮ ಬುದ್ಧಿಗೆ ನಿಲುಕಲಾರದ ಸಂಗತಿ. “ಇದನ್ನು ದೇವತೆಗಳೂ ಪೂರ್ಣ ಗ್ರಹಿಸಲಾರರು. ಹೀಗಿರುವಾಗ ನೀನು ತಿಳಿಯುವುದು ಕಷ್ಟ. ಹಾಗಾಗಿ ಈ ವರವನ್ನು ಬಿಟ್ಟು ಬೇರೆ ಏನಾದರೂ ವರವನ್ನು ಕೇಳು” ಎನ್ನುತ್ತಾನೆ ಯಮ. “ನನ್ನನ್ನು ಬಲವಂತ ಮಾಡಬೇಡ, ನನಗಾಗಿ ಈ ಪ್ರಶ್ನೆಯನ್ನು ಬಿಟ್ಟುಬಿಡು-ಬೇರೆ ಏನಾದರೂ ವರವನ್ನು ಕೇಳು” ಎಂದು ಯಮ ಹೇಳಿದಾಗ ನಚಿಕೇತ ಹೇಳುತ್ತಾನೆ:     
ದೇವೈರತ್ರಾಪಿ ವಿಚಿಕಿತ್ಸಿತಂ ಕಿಲ  ತ್ವಂ ಚ ಮೃತ್ಯೋ ಯನ್ನ ಸುಜ್ಞೇಯಮಾತ್ಥ
ವಕ್ತಾ ಚಾಸ್ಯ ತ್ವಾದೃಗನ್ಯೋ ನ ಲಭ್ಯೋ  ನಾನ್ಯೋ ವರಸ್ತುಲ್ಯ ಏತಸ್ಯ ಕಶ್ಚಿತ್                         ೨೨

ದೇವತೆಗಳಿಗೂ ಪೂರ್ಣ ತಿಳಿಯದ ವಿಷಯವೊಂದನ್ನು ನಾನು ನಿನ್ನಲ್ಲಿ ಕೇಳಿದ್ದೇನೆ. ನೀನು ಲೋಕದ ಧರ್ಮಾಧರ್ಮವನ್ನು ತೀರ್ಮಾನ ಮಾಡುವ ದೊಡ್ಡ ದೇವತೆ. ಹಾಗಿರುವಾಗ ಇಂಥಹ ನಿಗೂಢ ವಿಷಯವನ್ನು ತಿಳಿದ ನಿನ್ನ ಬಳಿ ಬಂದ ನಾನು ಈ ವಿಷಯವನ್ನು ತಿಳಿದುಕೊಳ್ಳದೆ ಹೋದರೆ ಮೂರ್ಖನಾದಂತೆ. ನಿಜವಾಗಿ ಭಗವಂತನನ್ನು ಕಂಡು ಸಾಕ್ಷಾತ್ಕಾರ ಪಡೆದ ಒಬ್ಬ ಉಪಾಧ್ಯಾಯ ಇಂದು ನನಗೆ ಸಿಕ್ಕಿದ್ದಾನೆ. ಹಾಗಿರುವಾಗ ಈ ಜ್ಞಾನದಿಂದ ನಾನು ವಂಚಿತನಾಗಲಾರೆ.  ಇದಕ್ಕೆ ಸಮನಾದ ಇನ್ನೊಂದು ವರವೇ ಇಲ್ಲ. ಆದ್ದರಿಂದ ನಾನು ಬೇರೆ ವರ ಕೇಳಲಾಗದು-ಎನ್ನುತ್ತಾನೆ ನಚಿಕೇತ.
ಶತಾಯುಷಃ ಪುತ್ರಪೌತ್ರಾನ್ ವೃಣೀಷ್ವಾ  ಬಹೂನ್ ಪಶೂನ್ ಹಸ್ತಿಹಿರಣ್ಯಮಶ್ವಾನ್
ಭೂಮೇರ್ಮಹದಾಯತನಂ ವೃಣೀಷ್ವ   ಸ್ವಯಂ ಚ ಜೀವ ಶರದೋ ಯಾವದಿಚ್ಛಸಿ        ೨೩
ನಚಿಕೇತ ತಾನು ಕೇಳಿದ ಈ ಮೂರನೇ ವರಕ್ಕೆ ಸಮನಾದ ಬೇರೊಂದು ವರವೇ ಇಲ್ಲ ಎಂದು ಹೇಳಿದಾಗ ಯಮ ಹೇಳುತ್ತಾನೆ: “ಒಂದಲ್ಲದಿದ್ದರೆ ಅನೇಕ ವರವನ್ನು ಕೇಳು” ಎಂದು. ಇಲ್ಲಿ ನಚಿಕೇತನಿಗೆ ಯಮ ಲೌಕಿಕ ಪ್ರಲೋಭನೆ ಮಾಡುತ್ತಿರುವುದನ್ನು ನಾವು ಗಮನಿಸಬೇಕು. ಯಮ ಹೇಳುತ್ತಾನೆ: “ನಿನಗೆ ಧೀರ್ಘಾಯಸ್ಸು ಪಡೆದ ಮಕ್ಕಳು, ಮೊಮ್ಮಕ್ಕಳು ಬೇಕಿದ್ದರೆ ಕೇಳು, ಮನೆ ತುಂಬಾ ಹಾಲು ಮೊಸರು ಕೊಡುವಂಥಹ ಗೋವುಗಳನ್ನು ಕೇಳು, ಅಶ್ವ, ಆನೆ, ಬಂಗಾರದ ರಾಶಿಯನ್ನು ಕೇಳು, ನಿನಗೆಷ್ಟು ಭೂಮಿ ಬೇಕೋ ಅದನ್ನು ಕೇಳು; ನಿನಗೆ ಎಷ್ಟು ಸಮಯ ಬದುಕಬೇಕೋ ಅಷ್ಟು ಆಯಸ್ಸನ್ನು ಕೊಡುತ್ತೇನೆ. ಜೀವನದಲ್ಲಿ ಒಬ್ಬ ಸಂಸಾರಿ ಬಯಸುವ ಎಲ್ಲವನ್ನೂ ಕೇಳು- ಕೊಡುತ್ತೇನೆ, ಆದರೆ ಈ ಪ್ರಶ್ನೆಯನ್ನು ಬಿಟ್ಟುಬಿಡು. 
ಏತತ್ತುಲ್ಯಂ ಯದಿ ಮನ್ಯಸೇ ವರಂ  ವೃಣೀಷ್ವ ವಿತ್ತಂ ಚಿರಜೀವಿಕಾಂ ಚ
ಮಹಾಭೂಮೌ ನಚಿಕೇತಸ್ತ್ವಮೇಧಿ  ಕಾಮಾನಾಂ ತ್ವಾ ಕಾಮಭಾಜಂ ಕರೋಮಿ          ೨೪
ಮುಂದುವರಿದು ಯಮ ಹೇಳುತ್ತಾನೆ: ನೀನು ಕೇಳಿದ ಒಂದು ವರಕ್ಕೆ ಲೌಕಿಕವಾಗಿ ಒಬ್ಬ ಮನುಷ್ಯ ಎಷ್ಟು ಬಯಸುತ್ತಾನೋ ಅಷ್ಟನ್ನು ಬೇಡಿಕೋ. ಇಲ್ಲ ಇದೂ ಕಡಿಮೆ ಎನಿಸಿದರೆ- ಇಡೀ ಬ್ರಹ್ಮ ಕಲ್ಪದಲ್ಲಿ ಪೂರ್ತಿ ಜೀವಿಸಲು ಬಯಸು-ಅದನ್ನು ಕೊಡುತ್ತೇನೆ, ಇಡೀ ಭೂಮಂಡಲದ ಚಕ್ರವರ್ತಿಯಾಗಬಯಸುವುದಾದರೆ ಅದನ್ನು ಕೇಳು. ಯಾವ ಚಕ್ರವರ್ತಿಯೂ ಸೇರದ ಎತ್ತರವನ್ನು ನೀನು ಸೇರುವಂತೆ ಮಾಡುತ್ತೇನೆ. ಯಾವಯಾವ ಕಾಮನೆಗಳಿವೆ ಅವೆಲ್ಲವೂ ಬಯಸಿದಾಗ ಕೈಸೇರುವಂತೆ ಮಾಡುತ್ತೇನೆ.
ಯೇ ಯೇ ಕಾಮಾ ದುರ್ಲಭಾ ಮರ್ತ್ಯಲೋಕೇ  ಸರ್ವಾನ್ ಕಾಮಾಂಶ್ಛಂದತಃ ಪ್ರಾರ್ಥಯಸ್ವ
ಇಮಾ ರಾಮಾಃ ಸರಥಾಃ ಸತೂರ್ಯಾ ನ ಹೀದೃಶಾ ಲಂಭನೀಯಾ ಮನುಷ್ಯೈಃ
ಆಭಿರ್ಮತ್ಪ್ರತ್ತಾಭಿಃ ಪರಿಚಾರಯಸ್ವ  ನಚಿಕೇತೋ ಮರಣಂ ಮಾಽನುಪ್ರಾಕ್ಷೀಃ              ೨೫
ಮನುಷ್ಯ ಲೋಕದಲ್ಲಿ ನೀನು ಕಂಡು ಕೇಳರಿಯದ ದೇವಲೋಕದ ಅಪೂರ್ವ ಸಂಪತ್ತನು ಬಯಸು-ಅದನ್ನು ಕೊಡುತ್ತೇನೆ. ದೇವಲೋಕದ ಭೋಗವಾದ, ಮನುಷ್ಯ ಲೋಕದವರು ಎಂದೂ ಕಂಡು ಕೇಳರಿಯದ ಸೌಂದರ್ಯವಾದ  ಅಪ್ಸರ ಸ್ತ್ರೀರನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು, ಅವರು ನಿನ್ನ ಮನೆಯ ಚಾಕರಿ ಮಾಡಿಕೊಂಡಿರುವಂತೆ ಬಯಸು, ಎಲ್ಲಿ ಬೇಕಾದರೂ ಸಂಚರಿಸಬಲ್ಲ ದೇವಲೋಕದ ವಾಹನ ಬೇಕಿದ್ದರೆ ತೆಗೆದುಕೊಂಡು ಹೋಗು, ಭೂ ಲೋಕದಲ್ಲಿ ಇಲ್ಲದೇ ಇರುವ ವಿಶಿಷ್ಠ ತಾಳ ವಾದ್ಯಗಳನ್ನು ದೇವಲೋಕದಿಂದ ಪಡೆ. ಹೀಗೆ ಏನು ಬೇಕಾದರೂ ಕೇಳು. ಆದರೆ ಸಾವಿನ ಆಚೆಗೆ ಜೀವನನ್ನು ನಿಯಂತ್ರಿಸುವ ಭಗವಂತನ ಬಗ್ಗೆ  ಹೇಳು ಎಂದು ಕೇಳಬೇಡ. ಎಂದು ಯಮ ಒತ್ತಡದ ಪ್ರಲೋಭನೆ ಮಾಡುತ್ತಾನೆ. ಇದಕ್ಕೆ ನಚಿಕೇತ ಉತ್ತರಿಸುತ್ತ ಹೇಳುತ್ತಾನೆ:

ಶ್ವೋಭಾವಾ ಮರ್ತ್ಯಸ್ಯ ಯದಂತಕೈತತ್  ಸರ್ವೇಂದ್ರಿಯಾಣಾಂ ಜರಯಂತಿ ತೇಜಃ
ಅಪಿ ಸರ್ವಂ ಜೀವಿತಮಲ್ಪಮೇವ  ತವೈವ ವಾಹಾಸ್ತವ ನೃತ್ಯಗೀತೇ                            ೨೬

ನ ವಿತ್ತೇನ ತರ್ಪಣೀಯೋ ಮನುಷ್ಯೋ  ಲಪ್ಸ್ಯಾಮಹೇ ವಿತ್ತಮದ್ರಾಕ್ಷ್ಮ ಚೇತ್ತ್ವಾ
ಜೀವಿಷ್ಯಾಮೋ ಯಾವದೀಶಿಷ್ಯಸಿ ತ್ವಂ  ವರಸ್ತು ಮೇ ವರಣೀಯಃ ಸ ಏವ                    ೨೭

ಅಜೀರ್ಯತಾಮಮೃತಾನಾಮುಪೇತ್ಯ ಜೀರ್ಯನ್ ಮರ್ತ್ಯಃ ಕ್ವಥಸ್ಥಃ ಪ್ರಜಾನನ್
ಅಭಿಧ್ಯಾಯನ್ ವರ್ಣರತಿಪ್ರಮೋದಾನ್  ಅತಿದೀರ್ಘೇ ಜೀವಿತೇ ಕೋ ರಮೇತ             ೨೮

ಯಸ್ಮಿನ್ನಿದಂ ವಿಚಿಕಿತ್ಸಂತಿ ಮೃತ್ಯೋ ಯತ್ಸಾಂಪರಾಯೇ ಮಹತಿ ಬ್ರೂಹಿ ನಸ್ತತ್
ಯೋಽಯಂ ವರೋ ಗೂಢಮನುಪ್ರವಿಷ್ಟೋ ನಾನ್ಯಂ ತಸ್ಮಾನ್ನಚಿಕೇತಾ ವೃಣೀತೇ        ೨೯

ಇಲ್ಲಿ ನಚಿಕೇತ ಯಮನಿಗೆ ಕೊಟ್ಟ ಉತ್ತರ ಬಹಳ ರೋಚಕವಾದದ್ದು. ನಚಿಕೇತನ ಜ್ಞಾನ ಎಷ್ಟು ಎತ್ತರದ್ದು ಎನ್ನುವುದು ಈ ಶ್ಲೋಕಗಳಲ್ಲಿ ತಿಳಿಯುತ್ತದೆ. ನಚಿಕೇತ ಹೇಳುತ್ತಾನೆ- ನೀನು ಏನನ್ನು ಕೊಡುತ್ತೇನೆ ಎಂದು ಹೇಳಿದೆಯೋ ಅವೆಲ್ಲವೂ ನಶ್ವರ. ಈ ಪ್ರಪಂಚ ಶೋ-ಭಾವಃ ಮತ್ತು ಶೋ-ಅಭಾವಃ. ಇಂದು ಇದ್ದಂತೆ ನಾಳೆ ಇರತ್ತದೆ ಎನ್ನುವ ಭರವಸೆ ಇಲ್ಲ. ಇಂಥಹ ಪ್ರಪಂಚದಲ್ಲಿ ಬದುಕುವ ನಾವು ಮರ್ತ್ಯರು. ಇಲ್ಲಿ ಸಾವಿಲ್ಲದ್ದನ್ನು ನೀನು ಕೊಡಲಾರೆ. ಹೀಗಿರುವಾಗ ಈ ಲೌಕಿಕ ಪ್ರಪಂಚವನ್ನು ಬಯಸಿ ಪ್ರಯೋಜನವೇನು? ಇಲ್ಲಿ ನಾವು ಅನುಭವಿಸುವ ಎಲ್ಲಾ ಭೋಗವೂ ನಮ್ಮ ಇಂದ್ರಿಯಗಳ ತೇಜಸ್ಸನ್ನು ಹೀರಿ ನಮ್ಮನ್ನು ಮುಪ್ಪಿನತ್ತ ಕೊಂಡೊಯ್ಯುತ್ತದೆ. ಮುಪ್ಪಿನಿಂದ ಸಾವುನನ್ನ ಬಯಕೆಯನ್ನು ಇದ್ಯಾವುದೂ ತಣಿಸಲಾರದು. ಆದ್ದರಿಂದ ಇವೆಲ್ಲವೂ ನಿನ್ನಲ್ಲೇ ಇರಲಿ. ನನಗೆ ಬೇಡ.
ಮನುಷ್ಯನಿಗೆ ಎಷ್ಟು ಬೇಕೋ ಅಷ್ಟು ಹಣವನ್ನೂ ಕೊಡುತ್ತೇನೆ ಎಂದರೆ ಅದು ಮೂರ್ಖತನವಾಗುತ್ತದೆ. ಏಕೆಂದರೆ ಮನುಷ್ಯನ ಧನ ಆಸೆಯನ್ನೂ ಪೂರೈಸುವುದು ಯಾರಿಂದಲೂ ಸಾಧ್ಯವಿಲ್ಲ. ನಮಗೆಷ್ಟು ಸಿಕ್ಕಿದರೂ ಅದು ಸಾಕು ಎಂದೆನಿಸುವುದಿಲ್ಲ. ನನಗೆ ನಿನ್ನಂಥ ಜ್ಞಾನಿಯ ದರ್ಶನವಾಗಿರುವಾಗ ಬದುಕಿನ ಚಿಂತೆ ನನಗಿಲ್ಲ. ಅದಕ್ಕಾಗಿ ಈ ಯಾವ ಅಪೇಕ್ಷೆಯೂ ನನಗಿಲ್ಲ. ನನಗೆ ಬೇಕಾಗಿರುವುದು ಜ್ಞಾನ.
ಮುಪ್ಪು-ಸಾವನ್ನು ಗೆದ್ದ ನೀವು ಅಮೃತರು. ನಿಮ್ಮ ಬಳಿ ಬಂದ ನಾನು ಒಂದು ದಿನ ಮುದುಕನಾಗಿ ಸಾಯುವವ. ಹೀಗಾಗಿ ಸಾಯುವ ಮೊದಲು ನಿಮ್ಮಂಥವರಿಂದ ಜ್ಞಾನ ಪಡೆಯದಿದ್ದರೆ ನಾನೆಂಥ ತಿಳಿಗೇಡಿಯಾಗುತ್ತೇನೆ? ನನಗೊದಗಿದ ಇಂಥಹ ಅವಕಾಶದಲ್ಲಿ  ನಾನು ಜ್ಞಾನವನ್ನು ಪಡೆದುಕೊಳ್ಳದಿದ್ದರೆ ಅದು ದೊಡ್ಡ ನಷ್ಟ-ಎನ್ನುತ್ತಾನೆ ನಚಿಕೇತ. ಮಧ್ವಾಚಾರ್ಯರು ಹೇಳಿದಂತೆ “ನಿಜವಾಗಿ ಅಧ್ಯಾತ್ಮದ ರಹಸ್ಯವನ್ನು ಹೇಳಬಲ್ಲ ಜ್ಞಾನಿ ಸಿಕ್ಕಾಗ ಅವನನ್ನು ಉಪಯೋಗಿಸಿಕೊಳ್ಳದೇ ಇರುವವರು ಖಾಯಂ ಆಗಿ ನರಕ ವಾಸ ಮಾಡುತ್ತಾರೆ. ಅವರಿಗೆ ಉದ್ಧಾರದ ದಾರಿಯೇ ಇಲ್ಲ.” ಹೀಗಾಗಿ ಮುಂದುವರಿದು ನಚಿಕೇತ ಹೇಳುತ್ತಾನೆ: ನಿಮ್ಮಂತಹ ಜ್ಞಾನಿಯೊಂದಿಗೆ ಮಾತನಾಡುವ ಭಾಗ್ಯ ಸಿಕ್ಕಿದೆ, ಹಾಗಿರುವಾಗ ನನಗೆ ಸಾಧ್ಯವಾದಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡದಿದ್ದರೆ ಎಂಥಾ ನಷ್ಟ. ಏನೂ ಜ್ಞಾನ ಸಾಧನೆ ಮಾಡದೆ ಕೇವಲ ತಿಂದುಂಡು ಜೀವನ ಕಳೆಯುವುದರಲ್ಲಿ ಯಾವ ಸುಖವಿದೆ? ಕೇವಲ ಬಂಧದ ಬದುಕು, ಭೋಗದ ಆಸಕ್ತಿಯಲ್ಲಿದ್ದು, ಅದರಾಚೆಗಿನ ಅರಿವೇ ಇಲ್ಲದೆ ಬದುಕುವುದರಿಂದ ಮನುಷ್ಯ ಜೀವನ ವ್ಯರ್ಥ. ಈ ರೀತಿ ಬದುಕಿದರೆ ಮನುಷ್ಯ ಜನ್ಮ ಪಡೆದೂ ಪ್ರಾಣಿಯಾಗಿ ಬದುಕಿದಂತೆ. ಹಾಗಾಗಿ ಕೇವಲ ತಿಂದುಂಡು ಬದುಕುವ ಧೀರ್ಘ ಜೀವನ ನನಗೆ ಬೇಡ-ಎನ್ನುತ್ತಾನೆ ನಚಿಕೇತ. ಇಲ್ಲಿ ‘ಜೀರ್ಯನ್ ಮರ್ತ್ಯಃ ಕ್ವಥಸ್ಥಃ ಪ್ರಜಾನನ್’ ಎನ್ನುವಲ್ಲಿ ಕ್ವಥಸ್ಥಃ ಎನ್ನುವ ವಿಶೇಷ ಪದ ಬಳಕೆಯಾಗಿದೆ. ಇದು ಸತ್ತು ನರಕಕ್ಕೆ ಹೋದ ಮನುಷ್ಯನ ಪಾಡನ್ನು ಹೇಳುವ ಪದ. ಕ್ವಥನ ಶೀಲೇ ನರಕೇ ಸ್ಥಿತಃ. ಕ್ವದ ಅಂದರೆ ದುಃಖದ ಮಡುವಿನಲ್ಲಿ ಬಿದ್ದು ಬೇಯುವುದು[ಥ-ಕಾರದ ಬದಲು ಮೂರನೇ ಪದವಾದ ದ-ಕಾರ ಬಳಸುತ್ತಾರೆ]-ತುಂಬಾ ಕಷ್ಟವನ್ನು ಅನುಭವಿಸುವ ನರಕಲೋಕ.  
ಮುಂದುವರಿದು ನಚಿಕೇತ ಹೇಳುತ್ತಾನೆ: ಮರಳಿ ಬಾರದ ಮುಕ್ತಿಯಲ್ಲಿ ಭಗವಂತ ಹೇಗೆ ನಿಯಮಿಸುತ್ತಾನೆ ಎಂದು ಪೂರ್ತಿ ತಿಳಿಯದೆ, ಅದನ್ನು ತಿಳಿಯುವುದಕ್ಕೊಸ್ಕರ ದೇವತೆಗಳು ಏನು ಚರ್ಚೆ ಮಾಡುತ್ತಾರೆ, ಅಂಥಹ ಭಗವಂತನ ಜ್ಞಾನವನ್ನು ನನಗೆ ಕೊಡು. ಭೂಮಿಯಲ್ಲಿ ಸಿಗದ ಈ ಅಪೂರ್ವ ತತ್ವಜ್ಞಾನ ನನಗೆ ಬೇಕು. ಈ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಇನ್ಯಾವುದೂ ಇಲ್ಲ. ನಮ್ಮ ಹೃದಯಗುಹೆಯಲ್ಲೇ ಇದ್ದರೂ, ನಮ್ಮ ಪ್ರಜ್ಞೆಗೆ ನಿಲುಕದ ತತ್ವಜ್ಞಾನ  ನನಗೆ ಬೇಕು. ಯಾರಿಗೂ ತಿಳಿಯದ ಈ ಗುಟ್ಟನ್ನು ಇಂದು ನಿನ್ನಿಂದ ಪಡೆಯುವ ಭಾಗ್ಯ ನನಗೆ ಬಂದಿದೆ. ಆ ಅಧ್ಯಾತ್ಮದ ರಹಸ್ಯವಾದ ಮುಕ್ತನಿಯಾಮಕ ಭಗವಂತನ ಮಹಿಮೆಯನ್ನು ಹೇಳು. ಇದನ್ನು ಬಿಟ್ಟು ನಚಿಕೇತ ಇನ್ನೇನನ್ನೂ ಬಯಸುವುದಿಲ್ಲ. ಎಂದು ನಚಿಕೇತ ಗಟ್ಟಿಯಾಗಿ ಕುಳಿತುಬಿಟ್ಟ.
ಪ್ರೀತಿಯ ಅಧ್ಯಾತ್ಮ ಬಂಧುಗಳೆ, ಒಂದು ಸುಂದರ ಕಥೆಯ ರೂಪದಲ್ಲಿ ಜ್ಞಾನಧಾರೆಯನ್ನು  ಹರಿಸುವ ಈ ಉಪನಿಷತ್ತಿನ ಮೊದಲ ಅಧ್ಯಾಯದ ಮೊದಲ ಬಳ್ಳಿಯನ್ನು ಇಲ್ಲಿ ನಾವು  ನಮ್ಮ ಸಾಮರ್ಥ್ಯಕ್ಕನುಗುಣವಾಗಿ ನೋಡಿದೆವು. ಇಲ್ಲಿ ಬರುವ ಒಂದೊಂದು ಶ್ಲೋಕದಲ್ಲಿನ ಒಂದೊಂದು ಪದದಲ್ಲೂ ಅನೇಕ ಗುಹ್ಯಾರ್ಥಗಳು ಅಡಗಿವೆ. ಕಥಾ ರೂಪದಲ್ಲಿ ಹರಿಯುವಾಗ ಕಥೆಯ ಪಾತ್ರಧಾರಿಗಳ ನಡವಳಿಕೆಯಲ್ಲಿ ಕೂಡಾ ನಾವು ತಿಳಿಯುವುದು ಬಹಳಷ್ಟಿದೆ. ಮೇಲ್ನೋಟದಲ್ಲಿ ನೋಡಿದರೆ ಒಬ್ಬ ಮಹಾನ್ ಜ್ಞಾನಿಯಾದ ಉದ್ಧಾಲಕ ಕೋಪವನ್ನು, ಲೋಭವನ್ನು ಗೆದ್ದಿರಲಿಲ್ಲ ಎಂದು ಕಾಣಿಸಿದರೂ, ನಂತರ ಆತನ ಕೋಪ ಇಂಥಹ ಮಹಾನ್ ಜ್ಞಾನ ಭೂಮಿಗಿಳಿದು ಬರುವಂತೆ ಮಾಡಲು ಭಗವಂತ ಮಾಡಿದ ವ್ಯವಸ್ಥೆ ಇದಾಗಿತ್ತು ಎನ್ನುವುದು ತಿಳಿಯುತ್ತದೆ. ಇನ್ನು ಯಮ ಧರ್ಮರಾಯ. ಈತನ ಪಾತ್ರದ ಮುಖೇನ ಭಗವಂತ  ನಮಗೆ ಅದೆಷ್ಟು ಸಂದೇಶವನ್ನು ಕರುಣಿಸಿದ್ದಾನೆ? ಅತಿಥಿ ಸತ್ಕಾರ ಹೇಗಿರಬೇಕು, ಜ್ಞಾನಿಯನ್ನು ಹೇಗೆ ಗೌರವಿಸಬೇಕು, ಮಹತ್ತಾದ ಜ್ಞಾನವನ್ನು ಕೊಡುವಾಗ ವ್ಯಕ್ತಿಯ ಯೋಗ್ಯತೆಯನ್ನು ಹೇಗೆ ಪರೀಕ್ಷಿಸಬೇಕು ಇತ್ಯಾದಿ. ಇಲ್ಲಿ ನಿಮಗೊಂದು ಪ್ರಶ್ನೆ ಬರಬಹುದು. “ಎಲ್ಲವನ್ನೂ ತಿಳಿದ ಯಮಧರ್ಮನಿಗೆ ನಚಿಕೇತನ ಯೋಗ್ಯತೆ ತಿಳಿದಿರಲಿಲ್ಲವೇ? ಗೊತ್ತಿದ್ದಿದ್ದರೆ ಮತ್ತೆ ಆತನನ್ನು ಲೌಕಿಕವಾಗ ಪ್ರಲೋಭನೆ ಮಾಡುವ ಅಗತ್ಯವೇನಿತ್ತು?” ಎಂದು.  ನಿಜ, ಯಮನಿಗೆ ಎಲ್ಲವೂ ತಿಳಿದಿತ್ತು. ಆದರೂ ಕೂಡ ಆತ ನಚಿಕೇತನನ್ನು ಪರೀಕ್ಷಿಸಿದ. ಇದಕ್ಕೆ ಕಾರಣವೇನೆಂದರೆ- ಮಹಾತ್ಮರಾದವರು ಯಾವಾಗಲೂ ಲೋಕನಿಯಮದಂತೆಯೇ ನೆಡೆದುಕೊಳ್ಳುತ್ತಾರೆ. ಏಕೆಂದರೆ ಮಹಾತ್ಮರ ನಡೆಯನ್ನು ಪ್ರಪಂಚ ಸದಾ ಪ್ರಮಾಣವಾಗಿರಿಸಿಕೊಂಡು ಅನುಸರಿಸುತ್ತದೆ. ಹಾಗಿರುವಾಗ ಮಹಾತ್ಮರ ನಡೆ ಭಿನ್ನವಾಗಿದ್ದರೆ ಇಡೀ ಲೋಕ ಕರ್ಮ ಪ್ರಜ್ಞೆಯನ್ನು ಕಳೆದುಕೊಂಡು ದಾರಿತಪ್ಪಿಬಿಡುತ್ತದೆ, ಸ್ವಚ್ಛಂದತೆ ಬಂದು ನಿರ್ಧಿಷ್ಟ ವ್ಯವಸ್ಥೆ ಹೊರಟು ಹೋಗುತ್ತದೆ. [ಶ್ರೀಕೃಷ್ಣ  ಸಂಧ್ಯಾವಂದನೆ ಇತ್ಯಾದಿ ಮೂಲ ಕರ್ಮವನ್ನು ತಪ್ಪದೆ ಮಾಡುತ್ತಿದ್ದುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು. ಇದು ಆತನಿಗೊಸ್ಕರವಲ್ಲ, ಆತನನ್ನು ಹಿಂಬಾಲಿಸುವ ಜನರಿಗೆ ಮಾರ್ಗದರ್ಶನಕ್ಕೋಸ್ಕರ].   ಹೀಗಾಗಿ ದೇವತೆಗಳು ತಮ್ಮ ಕರ್ಮವನ್ನು ಲೋಕನಿಯಮದಂತೆ ಮಾಡಿ ತೋರಿಸುತ್ತಾರೆ. ಇದು ಅವರ ಶಿಕ್ಷಣ ಕ್ರಮ. ಇಲ್ಲಿ ಯಮ ನಚಿಕೇತನನ್ನು ಪರೀಕ್ಷಿಸುವ ಮುಖೇನ ಆತನ ಯೋಗ್ಯತೆಯನ್ನು  ನಮ್ಮ ಮುಂದೆ ತೆರೆದಿಟ್ಟಿದ್ದಾನೆ. ಇನ್ನು ಈ ಕಥೆಯ ನಾಯಕನಾದ ನಚಿಕೇತ. ಈತ ಜ್ಞಾನ ಸಂಪತ್ತಿನ ಮುಂದೆ ಇತರ ಲೌಕಿಕ ಸಂಪತ್ತು ನಶ್ವರ ಎನ್ನುವುದನ್ನು ಲೋಕಕ್ಕೆ  ತೋರಿಸಿಕೊಟ್ಟ. ಯಮ ಮೂರು ವರವನ್ನು ಕೊಡುತ್ತೇನೆ ಎಂದಾಗ ನಚಿಕೇತ ಧನ-ಕನಕವನ್ನು ಬೇಡದೆ, ಯಾವುದೇ ಪ್ರಲೋಭನೆಗೊಳಗಾಗದೆ ಗಟ್ಟಿಯಾಗಿ ನಿಂತು-ಲೋಕೊದ್ಧಾರಕ್ಕಾಗಿ ಗುರುವಿನಿಂದ ಜ್ಞಾನವನ್ನು ಬೇಡಿದ.  ಹೀಗೆ ಉಪನಿಷತ್ತಿನ ಪ್ರತಿಯೊಂದು ನಡೆಯ ಹಿಂದೆ ಕೂಡ ಅಪೂರ್ವವಾದ ಸಂದೇಶವಡಗಿರುವುದನ್ನು ನಾವು ಗಮನಿಸಬೇಕು. ಬನ್ನಿ ನಚಿಕೇತನ ಮೂರನೇ ಪ್ರಶ್ನೆಗೆ ಉತ್ತರವಾಗಿ ಬಂದಿರುವ ಉಪದೇಶವನ್ನು ಧರ್ಮರಾಯನಿಂದಲೇ ನೇರವಾಗಿ ಆಲಿಸೋಣ.        

ಇತಿ ಕಾಠಕೋಪನಿಷದಿ ಪ್ರಥಮಾಧ್ಯಾಯೇ ಪ್ರಥಮಾ ವಲ್ಲೀ ॥
ಇಲ್ಲಿಗೆ ಕಾಠಕೋಪನಿಷತ್ತಿನ ಮೊದಲ ಅಧ್ಯಾಯದ ಮೊದಲ ಬಳ್ಳಿ(ವಲ್ಲೀ) ಮುಗಿಯಿತು.
           *******      

No comments:

Post a Comment