Wednesday, August 1, 2012

Kathopanishad in Kannada Chapter-02 Canto-02 Shloka-03-05

ಊರ್ಧ್ವಂ ಪ್ರಾಣಮುನ್ನಯತ್ಯಪಾನಂ ಪ್ರತ್ಯಗಸ್ಯತಿ
ಮಧ್ಯೇ ವಾಮನಮಾಸೀನಂ ವಿಶ್ವೇ ದೇವಾ ಉಪಾಸತೇ

ನಾವು ಬದುಕಲು ಕಾರಣ ಉಸಿರಾಟ. ನಮ್ಮೆಲ್ಲಾ ಚಟುವಟಿಕೆಗಳಿಗೆ, ಅಸ್ತಿತ್ವಕ್ಕೆ  ಕಾರಣ ನಮ್ಮೊಳಗೆ ನಡೆಯುತ್ತಿರುವ ಪ್ರಾಣಾಪಾನರ ಉಸಿರಾಟ ಕ್ರಿಯೆ. ಉಸಿರು ಒಳಕ್ಕೆ ತೆಗೆದುಕೊಳ್ಳುವುದು ಪ್ರಾಣ ಹಾಗೂ ಉಸಿರು ಹೊರಕ್ಕೆ ಬಿಡುವುದು ಅಪಾನ. ಪ್ರಾಣ-ಪಾನ ಎನ್ನುವುದು ಪ್ರಾಣದೇವರ ಎರಡು ಸ್ವರೂಪಭೂತ ರೂಪಗಳು. ಇಂತಹ ಪ್ರಾಣತತ್ವ ಕೂಡಾ ಸ್ವತಂತ್ರನಲ್ಲ ಎನ್ನುತ್ತಾನೆ ಯಮ. ನಮ್ಮ ಹೃದಯ ಮಧ್ಯದಲ್ಲಿ ಭಗವಂತ ‘ವಾಮನ’ ರೂಪಿಯಾಗಿ ಕುಳಿತಿದ್ದಾನೆ ಹಾಗೂ ಆತನ ಆತ್ಮೀಯ ಸಖನಾಗಿ ಪ್ರಾಣದೇವರು ನಿಂತು ಉಸಿರಾಡಿಸುತ್ತಿದ್ದಾರೆ. ಹೃದಯದಲ್ಲಿ ಕುಳಿತು, ಪ್ರಾಣಾಪಾನರಂತೆ ಎಲ್ಲಾ ತತ್ವಾಭಿಮಾನಿ ದೇವತೆಗಳನ್ನು ಭಗವಂತ ನಿಯಂತ್ರಿಸುತ್ತಿದ್ದಾನೆ. ಅವನ ಸುತ್ತ ಸಮಸ್ತ ದೇವತೆಗಳೂ ಅವನನ್ನು ಉಪಾಸನೆ ಮಾಡುತ್ತಿದ್ದಾರೆ.  
                                    ಅಸ್ಯ ವಿಸ್ರಂಸಮಾನಸ್ಯ ಶರೀರಸ್ಥಸ್ಯ ದೇಹಿನಃ
ದೇಹಾದ್ವಿಮುಚ್ಯಮಾನಸ್ಯ ಕಿಮತ್ರ ಪರಿಶಿಷ್ಯತೇ ಏತದ್ವೈ ತತ್

ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ ಇಲ್ಲಿ ಕೆಲವು ಪದಗಳ ಪುನರುಕ್ತಿಯಾಗಿದೆ ಎನ್ನುವಂತಿದೆ. “ಶರೀರಸ್ಥಸ್ಯ ದೇಹಿನಃ”  ಎನ್ನುವಲ್ಲಿ ಎರಡೂ ಪದಗಳು ಒಂದೇ ಅರ್ಥವನ್ನು ಕೊಟ್ಟಂತೆ ಕಾಣುತ್ತದೆ. ಅದೇ ರೀತಿ ‘ವಿಸ್ರಂಸಮಾನಸ್ಯ’ ಎಂದರೂ ‘ದೇಹಾದ್ವಿಮುಚ್ಯಮಾನಸ್ಯ’ ಎಂದರೂ ಅರ್ಥ ಒಂದೇ- ‘ದೇಹದಿಂದ ಕಳಚಿಕೊಳ್ಳುವುದು’ ಎನಿಸುತ್ತದೆ. ಆದರೆ ಇದು ಪುನರುಕ್ತಿ ಅಲ್ಲ. ಇಲ್ಲಿ ಅದ್ಭುತವಾದ ವಿಷಯ ಅಡಗಿದೆ.
ಸ್ವರೂಪಭೂತವಾದ ಜೀವಕ್ಕೆ ಮೂರು ಶರೀರಗಳು. ಅವುಗಳೆಂದರೆ: ಹೊರಗೆ ಕಾಣುವ ಸ್ಥೂಲ ಶರೀರ, ಸೂಕ್ಷ್ಮಶರೀರ ಮತ್ತು ಲಿಂಗಶರೀರ. ಜೀವ ಸೂಕ್ಷ ಶರೀರಿಯಾಗಿ ತಾಯಿಯ ಗರ್ಭವನ್ನು ಸೇರಿ, ಸ್ಥೂಲ ಶರೀರವನ್ನು ಪಡೆದು ಮರಳಿ ಹುಟ್ಟುತ್ತಾನೆ. ಸ್ಥೂಲ ಶರೀರವನ್ನು ಬಿಟ್ಟು ಸೂಕ್ಷ ಶರೀರಿಯಾಗಿ ಹೊರ ಹೋಗುವುದನ್ನು ನಾವು ಸಾವು ಎನ್ನುತ್ತೇವೆ. ಈ ಮೂರು ಶರೀರಗಳನ್ನು ಕಳಚಿಕೊಳ್ಳದೇ ಜೀವನಿಗೆ ಮೋಕ್ಷವಿಲ್ಲ.
ಈ ಮಂತ್ರದಲ್ಲಿ ‘ಶರೀರ’ ಎಂದರೆ ‘ಸತ್ತಾಗ ಯಾವುದು ಬಿದ್ದು ಹೋಗುತ್ತದೋ ಆ ಸ್ಥೂಲ ಶರೀರ’. ಯಾವುದು ಒಂದು ಜನ್ಮದಿಂದ ಇನ್ನೊಂದು ಜನ್ಮಕ್ಕೆ ಹರಿಯುತ್ತಾ ಮೋಕ್ಷದ ತನಕ ಜೀವದ ಜೊತೆಗಿರುತ್ತದೋ ಅದನ್ನು ಇಲ್ಲಿ  ‘ದೇಹ’ ಎಂದಿದ್ದಾರೆ. ಅದೇ ಲಿಂಗಶರೀರ. ಜೀವ ಬದುಕಿನ ಕಾಲದಲ್ಲಿ ಈ ಸ್ಥೂಲ ಶರೀರದೊಳಗಿನ ಲಿಂಗ ಶರೀರದೊಳಗಿರುತ್ತಾನೆ. ಸಂಸಾರ ಚಕ್ರದಲ್ಲಿ ಸುತ್ತಿ, ಅನುಭವ ಪಡೆದು, ಮೋಕ್ಷಯೋಗ್ಯವಾದ ಜೀವ, ತನ್ನ ಸ್ಥೂಲ ಶರೀರವನ್ನಷ್ಟೇ ಅಲ್ಲ, ತನ್ನ ಲಿಂಗ ಶರೀರವನ್ನೂ ಕಳಚಿಕೊಂಡು ಸ್ವರೂಪಭೂತನಾಗಿ ಭಗವಂತನನ್ನು ಸೇರುತ್ತಾನೆ. ಈ ಸ್ಥಿತಿಯಲ್ಲಿ ಜೀವನೊಂದಿಗೆ ಉಳಿಯುವುದು ಕೇವಲ ಭಗವಂತ ಮಾತ್ರ. “ಮೋಕ್ಷದಲ್ಲಿ ಜೀವನನ್ನು ನಿಯಮಿಸುವ ಆ ಭಗವಂತನೇ-ನೀನು ತಿಳಿಯಬಯಸಿದ ಪರತತ್ವ” ಎನ್ನುತ್ತಾನೆ ಯಮ.      
                                   
ನ ಪ್ರಾಣೇನ ನಾಪಾನೇನ ಮರ್ತ್ಯೋ ಜೀವತಿ ಕಶ್ಚನ
ಇತರೇಣ ತು ಜೀವಂತಿ ಯಸ್ಮಿನ್ನೇತಾವುಪಾಶ್ರಿತೌ

ಹಿಂದೆ ಹೇಳಿರುವ ವಿಷಯವನ್ನು ಇಲ್ಲಿ ಉಪಸಂಹಾರ ಮಾಡುತ್ತಾ ಯಮ ಹೇಳುತ್ತಾನೆ: “ಕೇವಲ ಪ್ರಾಣಾಪಾನರು ಉಸಿರಾಡಿಸುವುದರಿಂದ ನಾವು ಬದುಕುವುದಲ್ಲ. ಸರ್ವ ದೇವತೆಗಳನ್ನೂ ನಿಯಮಿಸುತ್ತಾ, ನಮ್ಮ ಹೃದಯದ ಮಧ್ಯದಲ್ಲಿ ಕುಳಿತಿರುವ ಭಗವಂತನಿಂದಾಗಿ ನಾವು ಬದುಕಿದ್ದೇವೆ. ಅವನ ನಿಯತಿಯಂತೆಯೇ ಪ್ರಾಣಾಪಾನರು ಉಸಿರಾಟ ಕ್ರಿಯೆ ನಡೆಸುತ್ತಿದ್ದಾರೆ” ಎಂದು. “ಭಗವಂತನ ಆಜ್ಞೆಯಂತೆ ಉಸಿರಾಡಿಸುವ ಪ್ರಾಣ ದೇವರೇ, ನನಗೆ ಉಸಿರು ಕೊಟ್ಟು ಬದುಕಿಸುವ ಓ ಭಗವಂತನೇ, ನಿನಗೆ ಕೋಟಿ-ಕೋಟಿ ವಂದನೆ ಎನ್ನುವುದು ನಮ್ಮ ಚಿಂತನೆಯಾಗಬೇಕು.
[ಮುಂದಿನ ಮೂರು ಶ್ಲೋಕಗಳನ್ನು ಎರಡನೇ ಅಧ್ಯಾಯದ ಮೊದಲ ವಲ್ಲೀಯಲ್ಲೇ ವಿವರಿಸಿರುವುದರಿಂದ ಇಲ್ಲಿ ನೇರವಾಗಿ ಈ ವಲ್ಲೀಯ ಒಂಬತ್ತನೇ ಶ್ಲೋಕ ವಿಶ್ಲೇಷಣೆ ನೀಡಿರುವುದನ್ನು ಓದುಗರು ಗಮನಿಸಬೇಕು.]     

No comments:

Post a Comment