ಕಠೋಪನಿಷತ್

ಕಠೋಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ.

ಅಗ್ನಿಹೋತ್ರದ ಮಹತ್ವವೇನು? ಅದರ ಹಿಂದಿನ ವಿಜ್ಞಾನವೇನು? ಜೀವ ಅನ್ನುವುದು ಇದೆಯೋ? ಸತ್ತಮೇಲೆ ಜೀವಕ್ಕೆ ಅಸ್ತಿತ್ವವಿದೆಯೋ? ಪರಲೋಕ ಎನ್ನುವುದೊಂದಿದೆಯೋ? ಜೀವನಿಗಿಂತ ಬೇರೆಯಾಗಿ ದೇವರು ಇದ್ದಾನೆಯೇ? ಭಗವಂತ ನಮ್ಮನ್ನು ಸಂಸಾರದಲ್ಲಿ ಮಾತ್ರ ನಿಯಮಿಸುವುದೋ ಅಥವಾ ಮೋಕ್ಷದಲ್ಲೂ ಆತನ ನಿಯಂತ್ರಣವಿದೆಯೋ? ಮೋಕ್ಷಕ್ಕೆ ಹೋದ ಜೀವದ ಇರವು ಹೇಗಿರುತ್ತದೆ? ಮೋಕ್ಷಕ್ಕೆ ಹೋದ ಮೇಲೆ ಏನಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕಠೋಪನಿಷತ್ತು.
Katha Upanishad in Kannada. Reference: Upanishad discourse by Poojya Bannanje Govindacharya

Download pdf: e-Book

Saturday, August 4, 2012

Kathopanishad in Kannada Chapter-02 Canto-02 Shloka-12-13


ಏಕೋ ವಶೀ ಸರ್ವಭೂತಾಂತರಾತ್ಮಾ  ಏಕಂ ರೂಪಂ ಬಹುಧಾ ಯಃ ಕರೋತಿ
ತಮಾತ್ಮಸ್ಥಂ ಯೇಽನುಪಶ್ಯಂತಿ ಧೀರಾಃ  ತೇಷಾಂ ಸುಖಂ ಶಾಶ್ವತಂ ನೇತರೇಷಾಂ ೧೨

ಈ ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನ ಬಯಕೆ ‘ತಾನು ಸುಖ ಪಡಬೇಕು’ ಎನ್ನುವುದು. ನಮಗೆ ತಿಳಿದಂತೆ ಈ ಭೌತಿಕ ಪ್ರಪಂಚದಲ್ಲಿ ಕೇವಲ ಸುಖ ಎನ್ನುವುದೊಂದಿಲ್ಲ. ಇಲ್ಲಿ ಸುಖ ಮತ್ತು ದುಃಖ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಆದ್ದರಿಂದ ವಾಸ್ತವ ಪ್ರಪಂಚದಲ್ಲಿ ಕೇವಲ ಸುಖ ಒಂದು ಮರೀಚಿಕೆ. ಹೀಗಿದ್ದರೂ ಕೂಡ, ಪ್ರತಿಯೊಬ್ಬ ಮಾನವನೂ ಪೂರ್ಣ ನಿದ್ರಾವಸ್ಥೆಯಲ್ಲಿ ದುಃಖವಿಲ್ಲದ ಸುಖವನ್ನು ಅನುಭವಿಸುತ್ತಾನೆ. ಈ ರೀತಿ ನಿದ್ದೆಯಲ್ಲಿ ಸಿಗುವ, ದುಃಖದ ಲೇಪವೇ ಇಲ್ಲದ ಸುಖವನ್ನು ಶಾಶ್ವತವಾಗಿ ಪಡೆಯುವುದು ಹೇಗೆ ಎನ್ನುವ  ಪ್ರಶ್ನೆಗೆ ಉತ್ತರ ರೂಪದಲ್ಲಿದೆ ಈ ಶ್ಲೋಕ.
ಸಾಮಾನ್ಯವಾಗಿ ನಾವು ಎಚ್ಚರದಲ್ಲಿ ‘ನಾನು’ ಎನ್ನುವ ಅಹಂಕಾರ ಮತ್ತು ‘ನನ್ನದು’ ಎನ್ನುವ ಮಮಕಾರದ ದಾಸರಾಗಿ ಬದುಕುತ್ತಿರುತ್ತೇವೆ. ಇದೇ ನಮ್ಮೆಲ್ಲಾ ದುಃಖಗಳಿಗೆ ಮೂಲ ಕಾರಣ. ಈ ಪ್ರಪಂಚದಲ್ಲಿ ಸಮಸ್ತ ಜಗತ್ತನ್ನು ತನ್ನ ವಶದಲ್ಲಿರಿಸಿಕೊಂಡ ಭಗವಂತನ ಇಚ್ಛೆಯಂತೆಯೇ ಎಲ್ಲವೂ ನಡೆಯುತ್ತದೆ. ಒಬ್ಬನೇ ಒಬ್ಬ ಭಗವಂತ ಎಲ್ಲರ ಒಳಗೂ ಬೇರೆಬೇರೆ ರೂಪನಾಗಿ ಅಭಿವ್ಯಕ್ತನಾಗುತ್ತಾನೆ. ಹೀಗೆ ಏಕರೂಪನಾದ ಆತ,  ಅನಂತ ರೂಪದಲ್ಲಿ ಪ್ರಪಂಚದಲ್ಲಿ ತುಂಬಿ ಪ್ರೇರಣೆ ಮಾಡುತ್ತಿದ್ದಾನೆ. ಇದು ಅವನ ಲೀಲೆ.
“ಯಾರು ವಿಶ್ವದಲ್ಲಿ ಎಲ್ಲರ ಒಳಗೂ ಹೊರಗೂ ತುಂಬಿದ್ದಾನೋ, ಅವನೇ ನನ್ನಳಗೂ ಇದ್ದಾನೆ” ಎಂದು ಧೈರ್ಯದಿಂದ ತನ್ನನ್ನು ತಾನು ಭಗವಂತನಿಗೆ ಅರ್ಪಿಸಿಕೊಂಡು ಬದುಕುವವ ಶಾಶ್ವತ ಸುಖವನ್ನು ಕಾಣಬಲ್ಲ ಎನ್ನುತ್ತಾನೆ ಯಮ. ಶಾಶ್ವತ ಸುಖಕ್ಕೆ ಇದೊಂದೇ ಮಾರ್ಗ
ನಾವು ಭಗವಂತನನ್ನು ಪ್ರತಿಮೆಯ ಪ್ರತೀಕದಲ್ಲಿ ಪೂಜಿಸುತ್ತೇವೆ. ಹೀಗೆ ಪೂಜೆ ಮಾಡುವಾಗ ಈ ಪ್ರಪಂಚದ ಎಲ್ಲಾ ಪುಣ್ಯಕ್ಷೇತ್ರಗಳಲ್ಲಿ ಸನ್ನಿಹಿತನಾಗಿರುವ ಭಗವಂತ ಒಬ್ಬನೇ, ಅವನೇ ಈ ವಿಗ್ರಹದಲ್ಲಿ ಸನ್ನಿಹಿತನಾಗಿದ್ದಾನೆ ಎಂದು ಆವಾಹನೆ ಮಾಡಬೇಕು. ಎಲ್ಲಾ ಪ್ರತಿಮೆಯಲ್ಲಿರುವ ಭಗವಂತ ಈ ಪ್ರತಿಮೆಯಲ್ಲೂ ಇದ್ದಾನೆ, ಎಲ್ಲಾ ಕಡೆ ಇರುವ ಭಗವಂತ ನನ್ನೊಳಗೂ ಇದ್ದಾನೆ. ಹೀಗೆ ನನ್ನೊಳಗಿರುವ ಭಗವಂತ ಈ ಪ್ರತಿಮೆಯಲ್ಲಿರುವ ಭಗವಂತನಿಗೆ ನನ್ನನ್ನು ಪ್ರತೀಕವಾಗಿರಿಸಿಕೊಂಡು ಪೂಜೆ ಸಲ್ಲಿಸುತ್ತಿದ್ದಾನೆ ಎನ್ನುವ ಅನುಸಂಧಾನ ಶಾಸ್ತ್ರೀಯ.
ಸಮಸ್ತ ಜಗತ್ತನ್ನು ತನ್ನ ವಶದಲ್ಲಿಟ್ಟುಕೊಂಡ ಭಗವಂತನ ಇಚ್ಛೆಯಂತೆಯೇ ಎಲ್ಲವೂ ನಡೆಯುತ್ತದೆ. ಅವನೊಬ್ಬನೇ ಎಲ್ಲವನ್ನೂ ಮಾಡುವ ಪರಶಕ್ತಿ ಎನ್ನುವ ಸತ್ಯ ತಿಳಿದಾಗ, ನಮ್ಮ ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳೂ ಸಹ್ಯ ಎನಿಸುತ್ತದೆ. ಈ ಜ್ಞಾನದೊಂದಿಗೆ ಹಾಗೂ ಪೂರ್ಣ ಶರಣಾಗತಿಯೊಂದಿಗೆ ಯಾರು ಮುಂದುವರಿಯುತ್ತಾರೋ ಅವರು ಶಾಶ್ವತ ಸುಖವನ್ನು ಹೊಂದುತ್ತಾರೆ.     
                       
ನಿತ್ಯೋಽನಿತ್ಯಾನಾಂ ಚೇತನಶ್ಚೇತನಾನಾಂ ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್
ತಮಾತ್ಮಸ್ಥಂ ಯೇಽನುಪಶ್ಯಂತಿ ಧೀರಾಃ  ತೇಷಾಂ ಶಾಂತಿಃ  ಶಾಶ್ವತೀ ನೇತರೇಷಾಂ ೧೩

ನಮ್ಮೆಲ್ಲಾ ಅಪೇಕ್ಷೆಗಳನ್ನೂ ಈಡೇರಿಸುವ ಭಗವಂತ ನಾವು ಬಯಸಿದ್ದನ್ನು ಕರುಣಿಸುವ ಭಕ್ತವತ್ಸಲ. ಅನಂತ ಜೀವರಿಗೆ ಭಗವಂತ ಒಬ್ಬನೇ  ಹಾಗೂ ಅವನೇ ಎಲ್ಲರ ಬಯಕೆಗಳನ್ನು ಈಡೇರಿಸುವ ಕರುಣಾಸಿಂಧು. ಎಲ್ಲಾ ನಿತ್ಯಗಳಿಗೆ ನಿತ್ಯತ್ವವನ್ನು ಕೊಟ್ಟ, ನಿತ್ಯಗಳ ನಿತ್ಯ, ಚೇತನಗಳ ಚೇತನ, ಆ ಭಗವಂತ. ಸಮಸ್ತ ಜೀವಗಳಿಗೆ ಬುದ್ಧಿಶಕ್ತಿಯನ್ನು ಕೊಟ್ಟು ಅವುಗಳ ಬೆಳವಣಿಗೆಗೆ ಕಾರಣನಾದವ ಆ ಭಗವಂತ. “ಜ್ಞಾನಪ್ರದನಾಗಿ ನನ್ನೊಳಗೆ ಭಗವಂತನಿದ್ದಾನೆ, ಅವನೇ ನನ್ನೊಳಗೆ ಚೈತನ್ಯ ತುಂಬಿ ನನ್ನ ಜ್ಞಾನ ಶಕ್ತಿ ಬೆಳೆಸುತ್ತಿದ್ದಾನೆ ಎಂದು ತಿಳಿದವನು ಶಾಶ್ವತವಾದ ಶಾಂತಿಯನ್ನು ಪಡೆಯುತ್ತಾನೆ” ಎನ್ನುತ್ತಾನೆ ಯಮ.
ಸುಖಕ್ಕೂ ಮತ್ತು ಶಾಂತಿಗೂ ಸ್ವಲ್ಪ ವ್ಯತ್ಯಾಸವಿದೆ. ಶಾಂತಿ ಎನ್ನುವ ಪದಕ್ಕೆ ಲೋಕದಲ್ಲಿ ರೂಢಿಯಲ್ಲಿರುವ ಅರ್ಥ ‘ನೆಮ್ಮದಿ’. ದುಃಖರಹಿತವಾದ ಆನಂದ ಶಾಂತಿ. ಶಾಂತಿ ಸುಖದ ಕೊನೇಯ ಸ್ಥಿತಿ. ಅದೇ ಮೋಕ್ಷ. “ಭಗವಂತ ನನ್ನೊಳಗಿದ್ದು ಎಲ್ಲವನ್ನೂ ಮಾಡುತ್ತಿದ್ದಾನೆ, ಅವನು ಸರ್ವೋತ್ತಮ, ಸರ್ವನಿಯಾಮಕ, ಸರ್ವಕರ್ತಾ, ಸರ್ವಜ್ಞ, ಪೂರ್ಣಾನಂದ ಎಂದು ಯಾರು ತಿಳಿಯುತ್ತಾರೋ, ಅವರು ಪೂರ್ಣಾನಂದವನ್ನು ಪಡೆಯುತ್ತಾರೆ. ಇತರ ಯಾವ ಮಾರ್ಗದಲ್ಲೂ ಪೂರ್ಣಾನಂದ ಸಾಧ್ಯವಿಲ್ಲ.   

No comments:

Post a Comment