ಕಠೋಪನಿಷತ್

ಕಠೋಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ.

ಅಗ್ನಿಹೋತ್ರದ ಮಹತ್ವವೇನು? ಅದರ ಹಿಂದಿನ ವಿಜ್ಞಾನವೇನು? ಜೀವ ಅನ್ನುವುದು ಇದೆಯೋ? ಸತ್ತಮೇಲೆ ಜೀವಕ್ಕೆ ಅಸ್ತಿತ್ವವಿದೆಯೋ? ಪರಲೋಕ ಎನ್ನುವುದೊಂದಿದೆಯೋ? ಜೀವನಿಗಿಂತ ಬೇರೆಯಾಗಿ ದೇವರು ಇದ್ದಾನೆಯೇ? ಭಗವಂತ ನಮ್ಮನ್ನು ಸಂಸಾರದಲ್ಲಿ ಮಾತ್ರ ನಿಯಮಿಸುವುದೋ ಅಥವಾ ಮೋಕ್ಷದಲ್ಲೂ ಆತನ ನಿಯಂತ್ರಣವಿದೆಯೋ? ಮೋಕ್ಷಕ್ಕೆ ಹೋದ ಜೀವದ ಇರವು ಹೇಗಿರುತ್ತದೆ? ಮೋಕ್ಷಕ್ಕೆ ಹೋದ ಮೇಲೆ ಏನಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕಠೋಪನಿಷತ್ತು.
Katha Upanishad in Kannada. Reference: Upanishad discourse by Poojya Bannanje Govindacharya

Download pdf: e-Book

Saturday, August 18, 2012

Kathopanishad in Kannada Chapter-02 Canto-03 Shloka-17-19


ಅಂಗುಷ್ಠಮಾತ್ರಃ ಪುರುಷೋಽನ್ತರಾತ್ಮಾ ಸದಾ ಜನಾನಾಂ ಹೃದಯೇ ಸಂನಿವಿಷ್ಟಃ
ತಂ ಸ್ವಾಚ್ಛರೀರಾತ್ಪ್ರವೃಹೇನ್ಮುಂಜಾದಿವೇಷೀಕಾಂ ಧೈರ್ಯೇಣ
ತಂ ವಿದ್ಯಾಚ್ಛುಕ್ರಮಮೃತಂ ತಂ ವಿದ್ಯಾಚ್ಛುಕ್ರಮಮೃತಮಿತಿ                           ೧೭

ನಮ್ಮೊಳಗೆ ಭಗವಂತನ ಮುಖ್ಯವಾದ ಎರಡು ರೂಪಗಳಿವೆ. ನಮ್ಮ ಅಂಗುಷ್ಠದಷ್ಟು ಗಾತ್ರದಲ್ಲಿ ನಮ್ಮ ಹೃದಯದಲ್ಲಿ ಮತ್ತು  ನಮ್ಮ ಜೀವಸ್ವರೂಪದ ಅಂಗುಷ್ಠದಷ್ಟು ಗಾತ್ರದಲ್ಲಿ ಜೀವಸ್ವರೂಪದ ಹೃದಯದಲ್ಲಿ ಆತ ನೆಲೆಸಿದ್ದಾನೆ. ಇದನ್ನು ನಾವು ಗ್ರಹಿಸುವುದು ಬಹಳ ಕಷ್ಟ. ಏಕೆಂದರೆ ನಮ್ಮ ಜೀವಸ್ವರೂಪವೇ ಒಂದು ಅಣುವಿನ ಗಾತ್ರದ್ದು. ಅದರ ಹೆಬ್ಬೆರಳಿನ ಗಾತ್ರದಲ್ಲಿ ಅಂತರ್ಯಾಮಿಯಾಗಿ ಅಣೋರಣೀಯನಾಗಿ ಪ್ರತಿಯೊಬ್ಬ ಜೀವರ ಹೃದಯದಲ್ಲಿ  ಭಗವಂತ ನೆಲೆಸಿದ್ದಾನೆ.
ನಮ್ಮ ದೇಹದ ಒಳಗೆ ನಮ್ಮ ಜೀವಸ್ವರೂಪವಿದೆ. ಜೀವ ಸ್ವರೂಪದ ಒಳಗೆ ಭಗವಂತನಿದ್ದಾನೆ. ಇಲ್ಲಿ ಜೀವಸ್ವರೂಪ ಮತ್ತು ಭಗವಂತನನ್ನು ಬೇರ್ಪಡಿಸಿ ತಿಳಿದು ಉಪಾಸನೆ ಮಾಡುವುದು ಬಹಳ ಮುಖ್ಯ.  ಭಗವಂತನನ್ನು ಧ್ಯಾನದಲ್ಲಿ ಈ ರೀತಿ ಕಾಣಲು ಅರಿವಿನ ಆನಂದ ಬೇಕು ಮತ್ತು ಛಲ ಬೇಕು. ಜೀವಸ್ವರೂಪ ಮತ್ತು ಭಗವಂತನ್ನು ಹೇಗೆ ಬೇರ್ಪಡಿಸಿ ಕಾಣಬೇಕು ಎನ್ನುವುದನ್ನು ಯಮ ಇಲ್ಲಿ ಒಂದು ದೃಷ್ಟಾಂತದ ಮೂಲಕ ವಿವರಿಸಿದ್ದಾನೆ. ಯಮ ಹೇಳುತ್ತಾನೆ ಹೇಗೆ ‘ಮುಂಜಾ’ ವನ್ನು ‘ಇಷೀಕಾ’ದಿಂದ ಬೇರ್ಪಡಿಸುತ್ತೇವೋ ಹಾಗೇ ಭಗವಂತ ಮತ್ತು ಜೀವಸ್ವರೂಪವನ್ನು ಬೇರ್ಪಡಿಸಿ ಕಾಣಬೇಕು ಎಂದು. ಇಲ್ಲಿ ಮುಂಜಾ ಮತ್ತು ಇಷೀಕ ಎನ್ನುವುದು ದರ್ಭೆ ಜಾತಿಗೆ ಸೇರಿದ ಹುಲ್ಲಿನ ಗಿಡ. ಇವು ದೂರದಿಂದ ನೋಡಲು ಒಂದೇ ತರನಾಗಿರುತ್ತವೆ. ಮುಂಜಾ ಮೃದುವಾಗಿದ್ದರೆ, ಇಷೀಕ ಆಯುಧದಂತೆ ಗಡಸಾಗಿರುತ್ತದೆ. [ಮುಂಜಾವನ್ನು ಉಡುದಾರಕ್ಕಾಗಿ ಬಳಸುತ್ತಾರೆ. ಯಾದವರು ಇಷೀಕದಿಂದ ಒಬ್ಬರನ್ನೊಬ್ಬರು ಚುಚ್ಚಿಕೊಂಡು ನಾಶವಾದರು].
ನಾವು ಉಪಾಸನೆ ಮಾಡುವಾಗ ಭಗವಂತನನ್ನು ನಮ್ಮಿಂದ ಬೇರ್ಪಡಿಸಿ ಉಪಾಸನೆ ಮಾಡಬೇಕು. ನಮ್ಮದು ದುಃಖಮಯವಾದ ಬಾಳು. ಆದರೆ ಭಗವಂತ ದುಃಖದ ಸ್ಪರ್ಶವೇ ಇಲ್ಲದವನು. ಜೀವಸ್ವರೂಪ ಆನಂದ ಸ್ವರೂಪವಾದರೂ ಕೂಡ ದೇಹ ಮತ್ತು ಮನಸ್ಸಿನ ಮೂಲಕ ಅದು ದುಃಖ ಮತ್ತು ಕೊಳೆಯನ್ನು ಅಂಟಿಸಿಕೊಳ್ಳುತ್ತದೆ. ಆದರೆ ಭಗವಂತ ದುಃಖರಹಿತ, ಸ್ವಚ್ಛ, ನಿರ್ಮಲ ಮತ್ತು ಆನಂದಮಯ.
ಇಲ್ಲಿಗೆ ನಚಿಕೇತ ಯಮನಿಂದ ಕೇಳಿ ಪಡೆದ ಅಧ್ಯಾತ್ಮ ವಿದ್ಯೆಯ ಉಪದೇಶದ ಭಾಗ ಮುಗಿಯಿತು(ಇತಿ).

ಮೃತ್ಯುಪ್ರೋಕ್ತಾಂ ನಚಿಕೇತೋಽಥ ಲಬ್ಧ್ವಾ ವಿದ್ಯಾಮೇತಾಂ ಯೋಗವಿಧಿಂ ಚ ಕೃತ್ಸ್ನಮ್
ಬ್ರಹ್ಮಪ್ರಾಪ್ತೋ ವಿರಜೋಽಭೂದ್ವಿಮೃತ್ಯು  ರನ್ಯೋಽಪ್ಯೇವಂ ಯೋ ವಿದಧ್ಯಾತ್ಮಮೇವ   ೧೮

ಕಠೋಪನಿಷತ್ತಿನ ಈ ಕೊನೇಯ ಶ್ಲೋಕದಲ್ಲಿ ಉಪಸಂಹಾರದ ಮಾತಿದೆ. ಮೃತ್ಯುದೇವತೆಯಾದ ಯಮನಿಂದ ಅತ್ಯಂತ ಮಾಂಗಲಿಕವಾದ ಈ ಭಗವದ್ ಜ್ಞಾನವನ್ನು ತಿಳಿದ ನಚಿಕೇತ, ಮುಂದೆ ಪೂರ್ಣಾನಂದವಾದ ಮುಕ್ತಿಯನ್ನು ಪಡೆದ. ಯಾರು ಇಲ್ಲಿ ಯಮ ನಚಿಕೇತನಿಗೆ ಹೇಳಿರುವ ಈ ಜ್ಞಾನವನ್ನು ಪಡೆದು ಅದನ್ನು ಅನುಷ್ಠಾನಕ್ಕೆ ತರುತ್ತಾರೆ, ಅವರೂ ಕೂಡಾ ನಚಿಕೇತನಂತೆ ವಿರಜನೂ, ವಿಮುಕ್ತನೂ ಆಗಿ ಭಗವಂತನನ್ನು ಸೇರಬಲ್ಲರು. ಮೋಕ್ಷ ಸಾಧನವಾದ ಈ ವಿದ್ಯೆಯನ್ನು ಅರ್ಹತೆಯುಳ್ಳ ಸಾತ್ವಿಕರು ಬಳಸಿ ಮೋಕ್ಷ ಮಾರ್ಗವನ್ನು ಕಾಣಬಹುದು. 

ಶಾಂತಿಮಂತ್ರ 

ಸಹ ನಾವವತು ಸಹ ನೌ ಭುನಕ್ತು ಸಹ ವೀರ್ಯಂ ಕರವಾವಹೈ
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ                                 *
ಓಂ ಶಾಂತಿಃ ಶಾಂತಿಃ ಶಾಂತಿಃ

ಇದು ಯಜುರ್ವೇದದ ಶಾಂತಿ ಮಂತ್ರ. ಯಜುರ್ವೇದದಲ್ಲಿ, ತೈತ್ತಿರೀಯ ಶಾಖೆಯಲ್ಲಿ ಮತ್ತು ಕಾಠಕಶಾಖೆ ಮೂರರಲ್ಲೂ ಒಂದೇ ಶಾಂತಿ ಮಂತ್ರವಿದೆ ಮತ್ತು ಅದು ಕಠೋಪನಿಷತ್ತಿನ ಕೊನೆಗೆ ಬಂದಿದೆ. [ಯಜುರ್ವೇದದಲ್ಲಿ ತೈತ್ತಿರೀಯಶಾಖೆಯವರಿಗೆ “ಶಂ ನೋ ಮಿತ್ರಃ ಶಂ ವರುಣಃ...” ಎನ್ನುವ ಎರಡನೇ  ಶಾಂತಿ ಮಂತ್ರವೂ ಇದೆ, ಆದರೆ ಕಠ ಶಾಖೆಯ ಯಜುರ್ವೇದಿಗಳಿಗೆ ಇದೊಂದೇ ಶಾಂತಿ ಮಂತ್ರ]. ಇದು ಪಾಠ ಪ್ರಾರಂಭದಲ್ಲಿ ಶಿಷ್ಯರು ಮಾಡುವ ಪ್ರಾರ್ಥನೆ. ಇದಕ್ಕೆ ಗುರುಗಳೂ ಧ್ವನಿಗೂಡಿಸಬಹುದು.
ಸಹ ನಾವವತು: ‘ಅವತು’ ಎನ್ನುವಲ್ಲಿ ‘ಅವ’ ಎಂದರೆ ಪ್ರವೇಶ. “ಓ ಭಗವಂತ, ನೀನು ನನ್ನ ಗುರುವಿನೊಳಗೆ ಕೂತು, ಅವರಿಗೆ ವಿದ್ಯೆಯನ್ನು ಹೇಳುವ ಶಕ್ತಿ ತುಂಬು. ನನ್ನೊಳಗೆ ಕೂತು ಗುರುಗಳು ಹೇಳುವ ಮಾತು ನನಗೆ ಅರ್ಥವಾಗುವಂತೆ ಮಾಡು”.
ಸಹ ನೌ ಭುನಕ್ತು: ‘ಭುನಕ್ತು’ ಎಂದರೆ ಪಾಲಿಸುವುದು ಅಥವಾ ತಿನ್ನುವುದು. “ಓ ಭಗವಂತ,  ನಮ್ಮ ಅಧ್ಯಯನ ಕಾಲದಲ್ಲಿ ಯಾವುದೇ ವಿಘ್ನ ಬಾರದಂತೆ ನಮ್ಮನ್ನು ಕೊನೇಯತನಕ ಪಾಲಿಸು. ನಿನ್ನ ರಕ್ಷೆ ಸದಾ ನಮ್ಮೊಂದಿಗಿರಲಿ. ನಮ್ಮಿಬ್ಬರಿಗೂ ಉಣ್ಣುವುದಕ್ಕೂ ತಿನ್ನುವುದಕ್ಕೂ ಬೇಕಾಗಿರುವ ಸಮೃದ್ಧಿಯನ್ನು ಕರುಣಿಸು”.
ಸಹ ವೀರ್ಯಂ ಕರವಾವಹೈ: “ಗುರುಗಳಿಗೆ ಈ ಅಧ್ಯಾತ್ಮ ವಿದ್ಯೆಯನ್ನು ನಮಗೆ ಕೊಟ್ಟು ನಮ್ಮನ್ನು ಉದ್ಧರಿಸುವಂತೆ ಮಾಡುವ ಸಾಮರ್ಥ್ಯವನ್ನು ಕೊಡು. ನಮ್ಮ ಅಧ್ಯಯನ ಶಕ್ತಿಶಾಲಿಯಾಗಿರಲಿ. ನಮಗೆ ಈ ವಿದ್ಯೆಯನ್ನು ಲೋಕಕ್ಕೆ ಉಪಯೋಗವಾಗುವಂತೆ ಬಳಸುವ ಸಾಮರ್ಥ್ಯವನ್ನು ಕೊಡು”.
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ: “ನಮ್ಮಿಬ್ಬರ ಕೂಡುವಿಕೆಯಿಂದ ನಡೆಯುವ ಈ ಶಾಸ್ತ್ರಾಧ್ಯಾಯನದಿಂದ ಶಾಸ್ತ್ರದ ವರ್ಚಸ್ಸು ನಮ್ಮಲ್ಲಿ ವ್ಯಕ್ತವಾಗಲಿ. ಶಿಷ್ಯ ಪರಂಪರೆಯಿಂದ ಊರ್ಜಿತವಾಗಿ ವಿದ್ಯೆ ಮುಂದುವರಿಯಲು ಬೇಕಾಗಿರುವ ತೇಜಸ್ಸು ನಮ್ಮಲ್ಲಿ ಬರಲಿ. ಗುರುಗಳು ಹೇಳಿದ್ದನ್ನು ನಾನು ನನ್ನ ಮುಂದಿನ ತಲೆಮಾರಿಗೆ ಕೊಡುವ ಶಕ್ತಿ ಕರುಣಿಸು. ಕೊನೇಯತನಕ ನಾವು ಒಬ್ಬರನ್ನೊಬ್ಬರು ದ್ವೇಷಿಸದೇ, ಗೌರವ ಮತ್ತು ಪ್ರೀತಿಯಿಂದಿರುವಂತೆ ಮಾಡು. ನಾವು ಎಂದೆಂದೂ ಯಾರನ್ನೂ ದ್ವೇಷಿಸದೇ, ಎಲ್ಲರನ್ನೂ ಪ್ರೀತಿಸುತ್ತಾ  ಬದುಕುವಂತೆ ಮಾಡು”.
ಓಂ ಶಾಂತಿಃ ಶಾಂತಿಃ ಶಾಂತಿಃ :   ‘ಓಂ’ ಎನ್ನುವುದು ಅತ್ಯಂತ ಮೂಲಭೂತವಾದ ಬೀಜಾಕ್ಷರ. ಇದು ಭಗವಂತನ ಹೆಸರು. ‘ಶಂ’ ಎಂದರೆ ಆನಂದ; ‘ಇ’ ಎಂದರೆ ಜ್ಞಾನ; ‘ಅಂತ’ ಎಂದರೆ ತುತ್ತತುದಿ. ಆದ್ದರಿಂದ ‘ಓಂ ಶಾಂತಿಃ’ ಎಂದರೆ: ‘ಭಗವಂತ ಜ್ಞಾನಾನಂದಗಳ ತುತ್ತ ತುದಿಯಲ್ಲಿರುವವ’ ಎಂದರ್ಥ.  ಮೂರು ವೇದಗಳಲ್ಲಿ ಪ್ರತಿಪಾಧ್ಯನಾಗಿರುವ, ಮೂರು ಕಾಲಗಳಲ್ಲಿರುವ, ಎಲ್ಲಾಕಡೆ ಇರುವ ಭಗವಂತ ಜ್ಞಾನಾನಂದಪೂರ್ಣ ಎಂದು ಇಲ್ಲಿ ಮೂರು ಬಾರಿ ಹೇಳಲಾಗಿದೆ. “ಈ ಅನುಸಂಧಾನದ ಮೂಲಕ ನಮ್ಮ ಬದುಕಿನಲ್ಲಿ ಕೂಡ ಶಾಂತಿಯನ್ನು ಕೊಡು” ಎನ್ನುವ ಪ್ರಾರ್ಥನೆ ಇಲ್ಲಿದೆ.

“ನಮಗೆ ಜ್ಞಾನಾನಂದದ ಪೂರ್ಣತೆಯನ್ನು ಕೊಡು; ನಮಗೆ  ಆ ಮೋಕ್ಷದ ಸ್ಥಿತಿಯನ್ನು ಕೊಡು; ಸದಾ ನಿನ್ನೊಂದಿಗಿರುವ ಜ್ಞಾನಾನಂದದ ಅನುಭವವನ್ನು ಕೊಡು; ಅಲ್ಲಿಯ ತನಕ ನಮ್ಮ ಬದುಕಿನಲ್ಲಿ ಇನ್ನೊಬ್ಬರನ್ನು ದ್ವೇಷಿಸದೇ ನೆಮ್ಮದಿಯಿಂದ ಬದುಕುವ ಶಾಂತಿಮಯವಾದ ಬದುಕನ್ನು ಕೊಡು; ಎಲ್ಲರೂ ಶಾಂತಿ-ನೆಮ್ಮದಿಯಿಂದ ಬದುಕಲು ಬಿಡೋಣ ಮತ್ತು ನಾವು ನೆಮ್ಮದಿಯಿಂದ ಬದುಕೋಣ; ಯಾರೂ ಯಾರನ್ನೂ ದ್ವೇಷಿಸುವುದು ಬೇಡ” ಎನ್ನುವುದು ಈ ಶಾಂತಿ ಮಂತ್ರದ ಮೂಲ ಸಂದೇಶ. 

ಇತಿ ಕಾಠಕೋಪನಿಷದಿ ದ್ವಿತೀಯಾಧ್ಯಾಯೇ ತೃತೀಯಾ ವಲ್ಲೀ
ಇಲ್ಲಿಗೆ ಕಠೋಪನಿಷತ್ತಿನ ಎರಡನೇ ಅಧ್ಯಾಯದ ಮೂರನೇ ವಲ್ಲೀ  ಮತ್ತು ಕಠೋಪನಿಷತ್ತಿನ ಪಾಠ ಮುಗಿಯಿತು
*******
|| ಸರ್ವೇ ಜನಾಃ ಸುಖಿನೋ ಭವಂತು ||
|| ಶ್ರೀ ಕೃಷ್ಣಾರ್ಪಣಮಸ್ತು ||

8 comments:

 1. I am very fortunate to be seeing this.I am extremely thankful for you for sharing this. I am half way through of the PDF - Kathopanishat.

  Is the above attached PDF book is the only part or is there next PDF or continuation of this upanishat?

  Once again thank you

  Hari OM
  Shilpa

  ReplyDelete
  Replies
  1. ನಮಸ್ಕಾರ,
   ನಿಮ್ಮ ಆಸಕ್ತಿಗೆ ಧನ್ಯವಾದಗಳು.
   ಕಠ ಉಪನಿಷತ್ತು ಬಹಳ ಚಿಕ್ಕ ಉಪನಿಷತ್ತು. ಈ ಉಪನಿಷತ್ತಿನ ಎಲ್ಲಾ ಮಂತ್ರಗಳ ವಿವರಣೆಯನ್ನೂ ಈ 80 ಪುಟಗಳ ಪುಸ್ತಕದಲ್ಲಿ ನೀಡಲಾಗಿದೆ.
   ನಿಮಗೆ ಆಸಕ್ತಿ ಇದ್ದರೆ ಪ್ರಶ್ನೋಪನಿಷತ್ತನ್ನು ಈ ಕೆಳಗಿನ ಕೊಂಡಿಯಲ್ಲಿ ಕಾಣಬಹುದು(ಈಗ ಕೇವಲ ನಾಲ್ಕು ಪ್ರಶ್ನೆಗಳ ವಿವರಣೆ ಲಭ್ಯವಿದೆ)

   ನಿಮಗೆ ಇಲ್ಲಿ ನೀಡಿರುವ ಅಧ್ಯಾತ್ಮ ಸಂದೇಶ ಇಷ್ಟವಾಗಿದ್ದಲ್ಲಿ ಅದನ್ನು ನಿಮ್ಮಂತೆ ಅಧ್ಯಾತ್ಮದಲ್ಲಿ ಆಸಕ್ತಿ ಉಳ್ಳವರೊಂದಿಗೆ ಹಂಚಿಕೊಳ್ಳಿ. ಜ್ಞಾನ ಧಾರೆ ನಿರಂತರ ಹರಿಯುವಂತೆ ಮಾಡಿ.
   ಹರಿಃ ಓಂ

   Delete
  2. ಷಟ್ ಪ್ರಶ್ನ ಉಪನಿಷತ್ತಿನ ಕೊಂಡಿ: http://prashnopanishat-in-kannada.blogspot.in/

   Delete
 2. This comment has been removed by the author.

  ReplyDelete
 3. Thank you will surely be reading other works as well. Bannanje Govindacharya sir is one of those best gems in our kannada literature field. Reading his works and even getting a glimpse of his views is something great for us. I personally thank you for your contribution towards spreading sanatana dharma and mainly essence of our great works (vedas, upanishad, Bhagavadgeetha etc).

  All the best.

  I dont have kanada baraha font so replying to you in English :-)

  Hari om
  Shilpa

  ReplyDelete
 4. Replies
  1. ಧನ್ಯವಾದಗಳು.
   ಆ ದೇವರು ನಿಮ್ಮನ್ನು ಆಶೀರ್ವದಿಸಲಿ
   ವಿ. ಸೂ: ನನಗೂ ಕನ್ನಡ ಟೈಪಿಂಗ್ ಬರುವುದಿಲ್ಲ. ಈ ಎಲ್ಲವನ್ನೂ ಬರೆದಿರುವುದು ಗೂಗಲ್ transliteration tool ಬಳಸಿ.[installed in PC]
   ಸುಲಭವಾಗಿ ಇಂಗ್ಲಿಷ್ ನಲ್ಲಿ ಟೈಪ್ ಮಾಡಿ ಕನ್ನಡ ಪಡೆಯಬಹುದಾದ tool. [Ex: naanu=ನಾನು; alli=ಅಲ್ಲಿ; eilli=ಇಲ್ಲಿ]
   ಹರಿಃ ಓಂ.

   Delete
 5. ನಮಸ್ತೆ
  ನಾನು ಶಿವಶಂಕರ ಬೆಂಗಳೂರಿನಿಂದ ಬರೆಯುತ್ತಿದ್ದೇನೆ. ಶ್ರೀಮತಿ ಸುಧಾಮೂರ್ತಿರವರ ಒಂದು ಸಂದರ್ಶನದ ತುಣುಕಿನಿಂದ ಪ್ರಭಾವಿತನಾಗಿ ಕಠೋಪನಿಷತ್ ನ್ನು ಓದುತ್ತಿದ್ದೇನೆ. ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಸ್ಪುಟವಾಗಿ ಮೂಡಿಬಂದಿದೆ. ಧನ್ಯವಾದಗಳು

  ReplyDelete