ಕಣ್ಣಿಗೆ ಕಾಣದ
ಭಗವಂತನನ್ನು ಹಿಂದಿನವರು ಮೂರು ಪ್ರತೀಕಗಳಲ್ಲಿ ಉಪಾಸನೆ ಮಾಡುತ್ತಿದ್ದರು. ಭೂಮಿಯಲ್ಲಿ ಅಗ್ನಿಪ್ರತೀಕ,
ಅಂತರಿಕ್ಷದಲ್ಲಿ ವಾಯು ಪ್ರತೀಕ ಮತ್ತು ಸ್ವರ್ಗದಲ್ಲಿ ಸೂರ್ಯನ ಪ್ರತೀಕ. ಭಗವಂತನ ಪ್ರತೀಕದ ಈ
ಉಪಾಸನೆ ಹಾಗೂ ಅದರ ಹಿಂದಿರುವ ವಿಶಿಷ್ಠ ಜ್ಞಾನವನ್ನು ಯಮ ಮುಂದಿನ ಮೂರು ಶ್ಲೋಕಗಳಲ್ಲಿ
ವಿವರಿಸಿದ್ದಾನೆ.
ಅಗ್ನಿರ್ಯಥೈಕೋ ಭುವನಂ ಪ್ರವಿಷ್ಟೋ ರೂಪಂ ರೂಪಂ ಪ್ರತಿರೂಪೋ ಬಭೂವ ।
ಏಕಸ್ತಥಾ ಸರ್ವಭೂತಾಂತರಾತ್ಮಾ ರೂಪಂ ರೂಪಂ ಪ್ರತಿರೂಪೋ ಬಹಿಶ್ಚ ॥೯॥
ನಮಗೆ ತಿಳಿದಂತೆ
ಬೆಂಕಿ ಅಥವಾ ಅಗ್ನಿ ಕೇವಲ ಜಡವಲ್ಲ. ಅದರ ಹಿಂದೆ ಅಗ್ನಿ ದೇವತೆ ಇದ್ದಾನೆ. ಪ್ರತಿಯೊಂದು
ಮನೆಯಲ್ಲಿ ಉರಿಯುವ ಬೆಂಕಿಯ ಹಿಂದೆ ಇರುವ ದೇವತೆ ಒಬ್ಬನೇ. ಎಲ್ಲೆಡೆ ಇರುವ ಅಗ್ನಿಯ ರೂಪ ಬೇರೆಬೇರೆ
ಆದರೆ ನಿಯಾಮಕ ಶಕ್ತಿಯಾದ ಅಗ್ನಿದೇವತೆಯ ರೂಪ ಒಂದೇ.
ಅಗ್ನಿ ಬೆಳಕು ನೀಡುತ್ತಾನೆ, ಬೇಯಿಸುತ್ತಾನೆ, ಸುಡುತ್ತಾನೆ. ಇದೇ ರೀತಿ ಭಗವಂತ. ಭಗವಂತ
ಜ್ಞಾನದ ಬೆಳಕನ್ನು ಕೊಡುತ್ತಾನೆ, ನಮ್ಮೊಳಗಿದ್ದು ನಮ್ಮನ್ನು ಪಕ್ವಮಾಡುತ್ತಾನೆ, ನಮ್ಮ ಪಾಪ ಮತ್ತು
ದೋಷಗಳನ್ನು ಸುಡುತ್ತಾನೆ. ಹೇಗೆ ಅಗ್ನಿ ಎಲ್ಲಾ ಕಡೆ ಇದ್ದಾನೋ, ಹಾಗೆ ಭಗವಂತ. ಆತ ಎಲ್ಲೆಡೆ
ಇದ್ದಾನೆ, ಆದರೆ ಆತ ಏಕ. ಹೇಗೆ ಮನೆ ಮನೆಯಲ್ಲಿ ಸಾವಿರಾರು ದೀಪಗಳೋ ಹಾಗೇ ಪ್ರಪಂಚದಲ್ಲಿ
ಸಾವಿರಾರು ಜೀವರಿದ್ದಾರೆ. ಬೆಂಕಿಯೊಳಗೆ ಅಗ್ನಿದೇವನಿದ್ದಂತೆ ಭಗವಂತ ಸಮಸ್ತ ಜೀವರ
ಅಂತರ್ಯಾಮಿಯಾಗಿದ್ದಾನೆ.
ಈ ಶ್ಲೋಕದಲ್ಲಿ ‘ಏಕಃ’
ಎನ್ನುವ ಪದ ಬಳಕೆಯಾಗಿದೆ. ಏಕಃ ಎಂದರೆ: ಒಬ್ಬನೇ, ಇನ್ನೊಬ್ಬನಿಲ್ಲ ಎಂದರ್ಥ. ಎಲ್ಲಾ ಕಡೆ ಇರುವವನೂ
ಒಬ್ಬನೇ ಒಬ್ಬ ಭಗವಂತ. ಎಲ್ಲಾ ಪ್ರತೀಕದ ಒಳಗೂ, ಎಲ್ಲಾ ಜೀವರ ಒಳಗೂ ಇರುವ ಭಗವಂತ ಒಬ್ಬನೇ. ಏಕಃ ಎನ್ನುವುದಕ್ಕೆ
ಇನ್ನೊಂದು ಅರ್ಥ: ‘ಏಷ ಏವ ಕರೋತಿ’ ಅಂದರೆ ಎಲ್ಲವನ್ನೂ ಮಾಡುವವ, ಸರ್ವಕರ್ತಾ. ಇದು ಶಾಸ್ತ್ರೀಯ ನಿರ್ವಚನ.
ನಮ್ಮ ಹೊರಗಿದ್ದು ಧಾರಣೆ ಮಾಡಿರುವ ಭಗವಂತ, ಅಂತರ್ಯಾಮಿಯಾಗಿ ಸಮಸ್ತ ಜೀವರಲ್ಲೂ ನೆಲೆಸಿದ್ದಾನೆ. ಎಲ್ಲಾ ರೂಪಗಳ ಒಳಗೂ ಬಿಂಬರೂಪನಾಗಿ ತುಂಬಿದ್ದಾನೆ, ಆದರೆ
ಯಾವುದರ ಲೇಪವೂ ಇಲ್ಲದೆ ಬೇರೆಯಾಗಿದ್ದಾನೆ. ಅವರವರ ಕರ್ಮಕ್ಕನುಗುಣವಾಗಿ ಏನು ಕರ್ಮ ಆಗಬೇಕೋ ಅದನ್ನು
ಆ ದೇಹದೊಳಗೆ ನಿಂತು ಮಾಡುವ ಭಗವಂತ ನಿರ್ಲಿಪ್ತ.
ವಾಯುರ್ಯಥೈಕೋ ಭುವನಂ ಪ್ರವಿಷ್ಟೋ ರೂಪಂ
ರೂಪಂ ಪ್ರತಿರೂಪೋ ಬಭೂವ ।
ಏಕಸ್ತಥಾ ಸರ್ವಭೂತಾಂತರಾತ್ಮಾ ರೂಪಂ ರೂಪಂ
ಪ್ರತಿರೂಪೋ ಬಹಿಶ್ಚ ॥೧೦॥
ಗಾಳಿ ಅಭಿವ್ಯಕ್ತವಾಗುವ
ಪ್ರತೀಕಗಳು ಅನೇಕ. ಆದರೆ ಅದರ ಒಳಗಿದ್ದು ಸ್ಪರ್ಶ ಸುಖವನ್ನು ಕೊಡುವವ ಒಬ್ಬನೇ ಒಬ್ಬ ದೇವತೆ-ಅವನೇ
ವಾಯು. ಗಾಳಿ ಕಾಣದಿದ್ದರೂ ಹೇಗೆ ಅನುಭವಕ್ಕೆ ಗೋಚರವಾಗುತ್ತದೋ, ಹಾಗೇ ಭಗವಂತ. ಹೇಗೆ ಪ್ರಾಣಶಕ್ತಿ
ಸಮಸ್ತವಾಯುವಿನಲ್ಲಿ ತುಂಬಿದೆಯೋ, ಅದೇ ರೀತಿ ಅನಂತಕೋಟಿ ಜೀವರಲ್ಲಿ ಬಿಂಬರೂಪನಾಗಿ ಭಗವಂತನಿದ್ದಾನೆ.
ಆತ ಎಲ್ಲರ ಒಳಗಿದ್ದು ಎಲ್ಲವನ್ನೂ ಮಾಡುತ್ತಿದ್ದರೂ ಎಲ್ಲಕ್ಕಿಂತ ಭಿನ್ನವಾಗಿದ್ದಾನೆ.
ಸೂರ್ಯೋ ಯಥಾ ಸರ್ವಲೋಕಸ್ಯ ಚಕ್ಷುಃ ನ
ಲಿಪ್ಯತೇ ಚಾಕ್ಷುಷೈರ್ಬಾಹ್ಯದೋಷೈಃ ।
ಏಕಸ್ತಥಾ ಸರ್ವಭೂತಾಂತರಾತ್ಮಾ ನ ಲಿಪ್ಯತೇ ಲೋಕದುಃಖೇನ ಬಾಹ್ಯಃ ॥೧೧॥
ಆಕಾಶದಲ್ಲಿ ಭಗವಂತ ಹಚ್ಚಿದ,
ಎಂದೂ ನಂದದ ದೀಪ ಸೂರ್ಯ. ಜಗತ್ತಿನಲ್ಲಿ ಎಷ್ಟು ಕಣ್ಣುಗಳಿವೆ ಅಷ್ಟೂ ಕಣ್ಣುಗಳಲ್ಲೂ ಕಣ್ಣಿನ ಅಭಿಮಾನಿ
ಸೂರ್ಯನಿದ್ದಾನೆ. ಆತ ಒಂದೊಂದು ಕಣ್ಣಿನಲ್ಲಿ ಒಂದೊಂದು ಶಕ್ತಿಯಾಗಿ ತುಂಬಿದ್ದಾನೆ. ಆತನ ಶಕ್ತಿಯ ಪ್ರತೀಕ
ಅನೇಕ. ಹೇಗೆ ನಮ್ಮ ಕಣ್ಣಿನ ದೋಷ ಸೂರ್ಯನಿಗೆ ಅಂಟುವುದಿಲ್ಲವೋ, ಹಾಗೇ ಭಗವಂತ. ಆತ ಎಲ್ಲರ ಒಳಗೂ ಇದ್ದಾನೆ.
ಆದರೆ ನಮ್ಮ ದೋಷಗಳು ಅವನಿಗೆ ಅಂಟುವುದಿಲ್ಲ. ಏಕೆಂದರೆ ಆತ ಒಳಗಿದ್ದೂ ನಿರ್ಲಿಪ್ತ.
ಭಗವಂತ ಜ್ಞಾನಾನಂದಪೂರ್ಣ,
ಜ್ಞಾನಾನಂದಪ್ರದ. ಪ್ರತೀಕ ಅದೃಷ್ಯವಾಗಿದ್ದರೂ, ಅದೃಶ್ಯವಾದ ಪ್ರತೀಕದ ಒಳಗೂ ಅದೃಷ್ಯನಾಗಿ ಭಗವಂತ ತುಂಬಿದ್ದಾನೆ.
ಈ ರೀತಿ ಅಗ್ನಿ, ವಾಯು ಮತ್ತು ಸೂರ್ಯನ ಪ್ರತೀಕದಲ್ಲಿ ಭಗವಂತನ ಉಪಾಸನೆ ಮಾಡುವುದು ವೈದಿಕ ಸಂಪ್ರದಾಯ.
ಪ್ರತೀಕದ ಚಿಂತನೆಯ ಮೂಲಕ ಅದರ ಮೂಲಕ್ಕೆ ಹೋಗಿ ಮೂಲ ಚಿಂತನೆ ಮಾಡಬೇಕು ಎನ್ನುವ ಮೂಲ ತತ್ವವನ್ನು ಕಠೋಪನಿಷತ್ತು
ನಮ್ಮ ಮುಂದಿಟ್ಟಿದೆ.
No comments:
Post a Comment