ಇಹ ಚೇದಶಕದ್ಬೋದ್ಧುಂ ಪ್ರಾಕ್ಷರೀರಸ್ಯ ವಿಸ್ರಸಃ ।
ತತಃ ಸರ್ಗೇಷು ಲೋಕೇಷು ಶರೀರತ್ವಾಯ ಕಲ್ಪತೇ ॥೪॥
ಭಗವಂತನ ಬಗೆಗಿನ
ಸಾಧನೆಯನ್ನು ಅಭಿರುಚಿ ಇಲ್ಲದೇ ವಿಧಿಬದ್ಧತೆಯ ಭಯದಿಂದ ಮಾಡಿದರೂ ಅದು ನಿಷ್ಫಲವಾಗುವುದಿಲ್ಲ.
ಏಕೆಂದರೆ ಭಗವಂತನ ಅರಿವು ಅಷ್ಟು ತುರ್ತಿನ ಕೆಲಸವಲ್ಲ. ಮೊದಲು ಭಯದಿಂದ ಮಾಡಿದರೂ, ಮುಂದೆ ಅದು
ಅದೆಷ್ಟು ಅಗತ್ಯ ಎಂದು ತಿಳಿದಾಗ, ಸಹಜ ಪ್ರವೃತ್ತಿಗೆ ಅದು ಪೂರಕವಾಗುತ್ತದೆ. ಭಗವಂತನ ಅರಿವು
ಒಂದೇ ಜನ್ಮದಲ್ಲಿ ಸಾಧ್ಯವಿಲ್ಲ. ಎಷ್ಟೋ ಜನ್ಮಗಳ ಸಾಧನೆಯಿಂದ ಆತನ ದರ್ಶನ ಸಾಧ್ಯ. ಆದರೆ ನಾವು ‘ಈ
ಜನ್ಮದಲ್ಲೇ ಭಗವಂತನನ್ನು ಕಾಣಬೇಕು’ ಎನ್ನುವ ಗುರಿ ಹೊಂದಿರಬೇಕು. ಆದ್ದರಿಂದ ಈ ಶ್ಲೋಕದಲ್ಲಿ
‘ಇಹ’ ಎಂದು ಒತ್ತಿ ಹೇಳಲಾಗಿದೆ. ಈ ರೀತಿ ಹಠ ಇದ್ದರೆ ಯಾವುದೋ ಒಂದು ಜನ್ಮದಲ್ಲಿ ಭಗವಂತನನ್ನು
ಕಾಣಲು ಸಾಧ್ಯ.
ಭಗವಂತನನ್ನು
ತಿಳಿಯಲು ಕೇವಲ ಸ್ಥೂಲ ಶರೀರವೊಂದೇ ಸಾಧನ. ಈ ಶರೀರವನ್ನು ಕಳಚಿಕೊಂಡು ಸೂಕ್ಷ್ಮ ಶರೀರದಲ್ಲಿ
ಸ್ವರ್ಗದಲ್ಲಿದ್ದರೂ ಕೂಡ, ಅಲ್ಲಿ ಸಾಧನೆ ಸಾಧ್ಯವಿಲ್ಲ. ಅದಕ್ಕಾಗಿ ಮಾನವ ಶರೀರವನ್ನು ‘ಬ್ರಹ್ಮಣಂ
ಸ್ಥಾನಮ್’ ಎಂದಿದ್ದಾರೆ. ಅದಕ್ಕೋಸ್ಕರ ಈ ಸ್ಥೂಲ ಶರೀರ ಬಿದ್ದು ಹೋಗುವ ಮೊದಲೇ ಭಗವಂತನನ್ನು ತಿಳಿದುಕೊಳ್ಳುವ
ಪ್ರಯತ್ನ ಮಾಡಬೇಕು. ಮುಂದಿನ ಜನ್ಮ ಎಂದು ಕಾದರೆ ಆಗ ಮಾನವ ಶರೀರ ಬಾರದೇ ಹೋದರೆ? ಆದ್ದರಿಂದ ಈ
ಶರೀರ ಬಿದ್ದುಹೋಗುವ ಮೊದಲು ಆದಷ್ಟು ಭಗವಂತನ ಕುರಿತು ಸಾಧನೆ ಮಾಡಿ, ಆತನ ಅರಿವಿನ ದಾರಿಯಲ್ಲಿ
ಸಾಗಬೇಕು. ಮನುಷ್ಯ ಶರೀರ ಬರುವುದೇ ಒಂದು ಭಾಗ್ಯ. ಬಂದಾಗ ಅದನ್ನು ವ್ಯರ್ಥ ಮಾಡಿಕೊಳ್ಳಬಾರದು.
ಹೀಗಾಗಿ “ಇದೇ ಜನ್ಮದಲ್ಲಿ ನಿನಗೆ ಸಿಕ್ಕ ಒಂದೊಂದು ಕ್ಷಣವನ್ನೂ ವ್ಯರ್ಥ ಮಾಡಿಕೊಳ್ಳದೆ
ಉಪಯೋಗಿಸಿಕೋ” ಎಂದಿದ್ದಾನೆ ಯಮ. ನಮ್ಮ ಸಾಧನೆ ಹೇಗಿರಬೇಕು ಎಂದರೆ: ನಾವು ನಮ್ಮ ಈ ಸ್ಥೂಲ
ಶರೀರದಿಂದ ಆಚೆ ಬಂದು, ನಮ್ಮ ಸ್ವರೂಪದ ಮೂಲಕ, ಸ್ವರೂಪ ಇಂದ್ರಿಯದ ಮೂಲಕ ಭಗವಂತನನ್ನು ಕಾಣಬೇಕು.
ಹೀಗೆ ಮಾಡಿದಾಗ ಬ್ರಹ್ಮಲೋಕ ಪ್ರಾಪ್ತಿಯಾಗುತ್ತದೆ. ಅಲ್ಲಿ ಕಲ್ಪದ ಅಂತ್ಯದ ತನಕ ಇದ್ದು, ನಂತರ
ಪ್ರಳಯ ಕಾಲದಲ್ಲಿ ಭಗವಂತನ ಉದರವನ್ನು ಸೇರಿ, ಮುಂದೆ ಲೋಕಗಳ ಸೃಷ್ಟಿ ಪ್ರಾರಂಭವಾಗುವಾಗ ಜೀವನಿಗೆ ಮೋಕ್ಷ
ಪ್ರಾಪ್ತಿಯಾಗುತ್ತದೆ.
ಯಥಾಽಽದರ್ಶೇ ತಥಾಽಽತ್ಮನಿ ಯಥಾ ಸ್ವಪ್ನೇ ತಥಾ ಪಿತೃಲೋಕೇ ।
ಯಥಾಽಪ್ಸು ಪರೀವ ದದೃಶೇ ತಥಾ ಗಂಧರ್ವಲೋಕೇ
ಛಾಯಾತಪಯೋರಿವ ಬ್ರಹ್ಮಲೋಕೇ ॥೫॥
ದೇವರನ್ನು ನೋಡುವುದು
ಹೇಗೆ ಮತ್ತು ಆತ ಎಲ್ಲಿಎಲ್ಲಿ ಹೇಗೆ ಕಾಣಿಸುತ್ತಾನೆ
ಎನ್ನುವುದನ್ನು ಈ ಶ್ಲೋಕದಲ್ಲಿ ಯಮ ವಿವರಿಸಿದ್ದಾನೆ. ಮೊದಲು ನಾವು ಧ್ಯಾನದ ಮೂಲಕ ಭಗವಂತನನ್ನು ನಮ್ಮ
ಅಂತರಂಗದಲ್ಲಿ ಕಾಣಬೇಕು. ಧ್ಯಾನದಲ್ಲಿ ಭಗವಂತ ಕನ್ನಡಿಯಲ್ಲಿನ ಪ್ರತಿಬಿಂಬದಂತೆ ಕಾಣಿಸಿಕೊಳ್ಳುತ್ತಾನೆ.
ಮೃತರಾದ ಜೀವರನ್ನು ನಿಯಮಿಸುವ ದೇವತಾಗಣಗಳಿರುವ ಪಿತೃಲೋಕದಲ್ಲಿ ಭಗವಂತ ‘ಕನಸಿನಲ್ಲಿ ಕಂಡಂತೆ ಕಾಣಿಸಿಕೊಳ್ಳುತ್ತಾನೆ’.
ಇದು ಭೂ-ಲೋಕದಷ್ಟು ಸ್ಪಷ್ಟವಲ್ಲ. ಗಂಧರ್ವ ಲೋಕದಲ್ಲಿ ಭಗವಂತ ನೀರಿನಲ್ಲಿ ಕಾಣುವ ಪ್ರತಿಬಿಂಬದಂತೆ
ಕಾಣುತ್ತಾನೆ. ಎಲ್ಲವುದಕ್ಕಿಂತ ಸ್ಪಷ್ಟವಾಗಿ ಭಗವಂತನನ್ನು ಚತುರ್ಮುಖನ ಲೋಕವಾದ ಸತ್ಯಲೋಕದಲ್ಲಿ ಕಾಣಬಹುದು.
ಅಲ್ಲಿ ಆತ ಹಿತವಾದ ಬೆಳಕಿನಲ್ಲಿ ನಮ್ಮೆದುರು ಇರುವ ವಸ್ತು ಹೇಗೆ ಕಾಣಿಸುತ್ತದೆ, ಹಾಗೆ ಕಾಣಿಸುತ್ತಾನೆ.
ಇದೊಂದು ಅದ್ಭುತ ವಿವರಣೆ. ಇಂತಹ ವಿವರಣೆ ಅಧ್ಯಾತ್ಮ
ಸಾಹಿತ್ಯದಲ್ಲಿ ಇನ್ನೆಲ್ಲೂ ಕಾಣಸಿಗುವುದಿಲ್ಲ. ಈ ವಿವರಣೆಯಲ್ಲಿ ನಾವು ಕಂಡುಕೊಳ್ಳುವ ಸತ್ಯವೇನೆಂದರೆ:
ಮನುಷ್ಯಲೋಕದಲ್ಲಿ ಮಾನವರಾಗಿ ಹುಟ್ಟಿದ ನಾವು ಭಾಗ್ಯಶಾಲಿಗಳು. ಇಲ್ಲಿ ನಮಗೆ ಧ್ಯಾನದ ಮೂಲಕ ಭಗವಂತನನ್ನು
ಸ್ಪಷ್ಟವಾಗಿ ಕಾಣುವ ಅವಕಾಶವನ್ನು ಭಗವಂತ ಕಲ್ಪಿಸಿಕೊಟ್ಟಿದ್ದಾನೆ.
ಇಂದ್ರಿಯಾಣಾಂ ಪೃಥಗ್ಭಾವಮುದಯಾಸ್ತಮಯೌ ಚ ಯತ್ ।
ಪೃಥಗುತ್ಪದ್ಯಮಾನಾನಾಂ ಮತ್ವಾ ಧೀರೋ ನ ಶೋಚತಿ ॥೬॥
ಭಗವಂತನನ್ನು ತಿಳಿಯುವ
ಮೊದಲು ನಾವು ನಮ್ಮ ಇಂದ್ರಿಯಗಳನ್ನು, ಅದರ ಹಿಂದಿರುವ ಇಂದ್ರಿಯಾಭಿಮಾನಿ ದೇವತೆಗಳನ್ನು ತಿಳಿದುಕೊಳ್ಳಬೇಕು.
ಈ ಇಂದ್ರಿಯಾಭಿಮಾನಿ ದೇವತೆಗಳು ಎಲ್ಲಿಂದ ಯಾವ ಕ್ರಮದಲ್ಲಿ ಹುಟ್ಟಿದರು ಎನ್ನುವುದನ್ನು ನಾವು ತಿಳಿಯಬೇಕು.
ಪುರುಷಸೂಕ್ತದಲ್ಲಿ ಹೇಳುವಂತೆ: ಚಂದ್ರಮಾ ಮನಸೋ ಜಾತಶ್ಚಕ್ಷೋಃ ಸೂರ್ಯೋ ಅಜಾಯತ । ಮುಖಾದಿಂದ್ರಶ್ಚಾಗ್ನಿಶ್ಚ
ಪ್ರಾಣಾದ್ವಾಯುರಜಾಯತ ॥ [೧೩] ಅಂದರೆ: ಚಂದ್ರನು ಭಗವಂತನ ಮನಸ್ಸಿನ ಮಗನು, ಸೂರ್ಯನು ಭಗವಂತನ
ಕಣ್ಣಿನಿಂದ ಹುಟ್ಟಿದರೆ, ಬಾಯಿಯಿಂದ ಇಂದ್ರಾಗ್ನಿಗಳ ಜನನವಾಯಿತು. ಪ್ರಾಣದಿಂದ ವಾಯುದೇವನ ಜನನವಾಯಿತು.
ಹೀಗೆ ಮೊದಲು ನಾವು ದೇವತೆಗಳ ಕುರಿತು ಮತ್ತು ಅವರ ತಾರತಮ್ಯದ ಕುರಿತು ತಿಳಿದುಕೊಳ್ಳಬೇಕು. ಹಿಂದೆ
ಹೇಳಿದಂತೆ: ಕಣ್ಣಿನ ಅಭಿಮಾನಿ ದೇವತೆ-ಸೂರ್ಯ,
ಕಿವಿಯ ಅಭಿಮಾನಿ ದೇವತೆ ಚಂದ್ರ, ಮೂಗಿನ ಅಭಿಮಾನಿ ದೇವತೆ ವಾಯು, ಮಾತಿನ ಅಭಿಮಾನಿ ಅಗ್ನಿ, ಕೈಯ ಅಭಿಮಾನಿ
ಇಂದ್ರ, ಕಾಲಿನ ಅಭಿಮಾನಿ ಯಜ್ಞ, ಹೀಗೆ ಪ್ರತಿಯೊಂದು ಇಂದ್ರಿಯಗಳಲ್ಲೂ ಬೇರೆಬೇರೆ ದೇವತಾ ಶಕ್ತಿ ಕೆಲಸ
ಮಾಡುತ್ತಿದೆ. ಎಲ್ಲಾ ದೇವತೆಗಳು ಭಗವಂತನ ನಿಯತಿಗೆ ಬದ್ಧರಾಗಿ ಆತನ ಅಧೀನರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಎಲ್ಲಾ ಶಕ್ತಿಗಳನ್ನು ನಿಯಂತ್ರಿಸುವ ಪರಶಕ್ತಿ ಆ ಭಗವಂತ. ಗೀತೆಯಲ್ಲಿ ಹೇಳುವಂತೆ: ಅಹಂ ಹಿ
ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ [೯-೨೪] ನಮ್ಮ ಒಂದೊಂದು ಇಂದ್ರಿಯಗಳಲ್ಲೂ ಯಜ್ಞ ನಡೆಯುತ್ತಿದೆ. ಇಂದ್ರಿಯಗಳಲ್ಲಿ ಯಜ್ಞ ಮಾಡುವ ದೇವತೆಗಳಿದ್ದಾರೆ.
ಈ ಎಲ್ಲಾ ಯಜ್ಞಗಳನ್ನೂ ಸ್ವೀಕಾರ ಮಾಡುವ ಸರ್ವಭೋಕ್ತಾರ, ಸರ್ವಾಧ್ಯಕ್ಷ ಆ ಭಗವಂತ.
ಭಗವಂತ ಎಲ್ಲಾ ದೇವತೆಗಳನ್ನೂ
ಒಮ್ಮೆಲೆ ಸೃಷ್ಟಿ ಮಾಡಿಲ್ಲ. ಪ್ರತಿಯೊಬ್ಬ ತತ್ವಾಭಿಮಾನಿ
ದೇವತೆಗಳಿಗೂ ಪ್ರತ್ಯೇಕ ಹುಟ್ಟಿದೆ. ಎಲ್ಲರಿಗಿಂತ ಮೊದಲು ಭಗವಂತ ಚತುರ್ಮುಖ ಬ್ರಹ್ಮನನ್ನು ಸೃಷ್ಟಿ
ಮಾಡಿದ. ಚತುರ್ಮುಖನಿಂದ ಗರುಡ-ಶೇಷ-ರುದ್ರರ ಸೃಷ್ಟಿಯಾಯಿತು. ಶಿವನಿಂದ ಇಂದ್ರ-ಕಾಮರ ಸೃಷ್ಟಿಯಾಯಿತು.
ಹೀಗೆ ಪ್ರತಿಯೊಬ್ಬ ದೇವತೆಯೂ ತಮ್ಮ ಸ್ವರೂಪಯೋಗ್ಯತೆಗೆ ತಕ್ಕಂತೆ ಸೃಷ್ಟಿಯಾದರು. ಹೀಗೆ ಸೃಷ್ಟಿಯಾದ
ದೇವತೆಗಳು ಪ್ರಳಯ ಕಾಲದಲ್ಲಿ ಹುಟ್ಟಿದ ಕ್ರಮಕ್ಕೆ ವಿರುದ್ಧ ಕ್ರಮದಲ್ಲಿ ಸಂಹಾರವಾಗುತ್ತಾರೆ.
ನಾವು ಭಗವಂತನನ್ನು ತಿಳಿಯಬೇಕಾದರೆ
ಮೊದಲು ಅವನ ಪರಿವಾರ ದೇವತೆಗಳನ್ನು ತಿಳಿಯಬೇಕು. ಎಲ್ಲಾ ದೇವತೆಗಳ ಚಿಂತನೆ ಮಾಡಿ, ಆ ಎಲ್ಲಾ ದೇವತೆಗಳನ್ನು
ನಿಯಂತ್ರಿಸುವ ಪರದೇವತೆಯಾದ ಭಗವಂತನನ್ನು ಕಾಣಬೇಕು. ಇದು ಉಪಾಸನೆಯ ಕ್ರಮ. ಹೀಗೆ ನಾವು ಭಗವಂತನನ್ನು
ತಿಳಿದಾಗ ನಮ್ಮಲ್ಲಿ ಧೈರ್ಯ ಹುಟ್ಟುತ್ತದೆ. ಇದರಿಂದಾಗಿ ನಾವೆಂದೂ ದುಃಖ ಶೋಕವನ್ನು ಅನುಭವಿಸುವುದಿಲ್ಲ.
No comments:
Post a Comment