ಕಠೋಪನಿಷತ್

ಕಠೋಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ.

ಅಗ್ನಿಹೋತ್ರದ ಮಹತ್ವವೇನು? ಅದರ ಹಿಂದಿನ ವಿಜ್ಞಾನವೇನು? ಜೀವ ಅನ್ನುವುದು ಇದೆಯೋ? ಸತ್ತಮೇಲೆ ಜೀವಕ್ಕೆ ಅಸ್ತಿತ್ವವಿದೆಯೋ? ಪರಲೋಕ ಎನ್ನುವುದೊಂದಿದೆಯೋ? ಜೀವನಿಗಿಂತ ಬೇರೆಯಾಗಿ ದೇವರು ಇದ್ದಾನೆಯೇ? ಭಗವಂತ ನಮ್ಮನ್ನು ಸಂಸಾರದಲ್ಲಿ ಮಾತ್ರ ನಿಯಮಿಸುವುದೋ ಅಥವಾ ಮೋಕ್ಷದಲ್ಲೂ ಆತನ ನಿಯಂತ್ರಣವಿದೆಯೋ? ಮೋಕ್ಷಕ್ಕೆ ಹೋದ ಜೀವದ ಇರವು ಹೇಗಿರುತ್ತದೆ? ಮೋಕ್ಷಕ್ಕೆ ಹೋದ ಮೇಲೆ ಏನಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕಠೋಪನಿಷತ್ತು.
Katha Upanishad in Kannada. Reference: Upanishad discourse by Poojya Bannanje Govindacharya

Download pdf: e-Book

Sunday, July 29, 2012

Kathopanishad in Kannada Chapter-02 Canto-02 Shloka-01-02


ಅಧ್ಯಾಯ-೨

ವಲ್ಲೀ-೨

ಪುರಮೇಕಾದಶದ್ವಾರಮಜಸ್ಯಾವಕ್ರಚೇತಸಃ
ಅನುಷ್ಠಾಯ ನ ಶೋಚತಿ ವಿಮುಕ್ತಶ್ಚ ವಿಮುಚ್ಯತೇ ಏತದ್ವೈ ತತ್

ನಾವು ಈ ದೇಹದಲ್ಲಿರುವಾಗ ನಮ್ಮ ಅನುಷ್ಠಾನ ಹೇಗಿರಬೇಕು ಎನ್ನುವುದನ್ನು ಯಮ ಇಲ್ಲಿ ವಿವರಿಸಿದ್ದಾನೆ. ಮಾನವ ಶರೀರವನ್ನು ‘ಪುರ’ ಎಂದು ಕರೆಯುತ್ತಾರೆ. ಇತರ ಎಲ್ಲಾ ಪ್ರಾಣಿಗಳ ಶರೀರಕ್ಕಿಂತ ಮನುಷ್ಯ ಶರೀರ ಪೂರ್ಣ ವಿಕಸನ ಹೊಂದಿರುವ ಶರೀರವಾಗಿರುವುದರಿಂದ ಇದನ್ನು ‘ಪುರ’ ಎನ್ನುತ್ತಾರೆ. ಈ ಶರೀರ ಜೀವ ವಾಸ ಮಾಡುವ ಮನೆ. ಈ ಶರೀರವನ್ನು ಯಮ ‘ಹನ್ನೊಂದು ದ್ವಾರಗಳ ಪುರ’ ಎಂದಿದ್ದಾನೆ. ಗೀತೆಯಲ್ಲಿ ಕೃಷ್ಣ  “ನವದ್ವಾರೇ ಪುರೇ ದೇಹೀ” ಎಂದು ವಿವರಿಸಿರುವುದು ನಮಗೆ ತಿಳಿದಿದೆ(ಗೀತಾ: ೫-೧೩). ಈ ನವ ದ್ವಾರಗಳಲ್ಲದೇ[ಎರಡು ಕಿವಿಗಳು, ಎರಡು ಕಣ್ಣುಗಳು, ಎರಡು ಮೂಗಿನ ಹೊರಳೆಗಳು, ಬಾಯಿ, ಪಾಯು ಮತ್ತು ಉಪಸ್ಥ]  ಜೀವಕ್ಕೆ ಸಂಬಂಧಿಸಿದ ಇನ್ನೂ ಎರಡು ದ್ವಾರಗಳಿವೆ.  (೧) ಹುಟ್ಟುವ ತನಕ ತಾಯಿಯ ಹೊಟ್ಟೆಯಲ್ಲಿ ಆಹಾರವನ್ನು ಸೇವಿಸುವ ನಾಭಿ, (೨) ಸತ್ತ ಮೇಲೆ(ಕೊನೇಯ ಸಾವು) ಊರ್ಧ್ವ ಲೋಕಕ್ಕೆ ಹೋಗುವ ಸುಷುಮ್ನ ನಾಡಿಯ ತುದಿ-ಸಹಸ್ರಾರ. ಈ ಎರಡು ದ್ವಾರಗಳನ್ನು ಸೇರಿಸಿದರೆ ನಮ್ಮ ದೇಹಕ್ಕೆ ಹನ್ನೊಂದು ದ್ವಾರಗಳು. ಇಂತಹ ಶರೀರ ಆ ಭಗವಂತನಿಗೆ ಸೇರಿದ್ದು. ಯಾರಿಗೆ ಹುಟ್ಟಿಲ್ಲವೋ(ಅಜ) ಮತ್ತು ಯಾರು ಅವಕ್ರಚೇತನವೋ(ಎಲ್ಲವನ್ನೂ ಸಹಜವಾಗಿ ಗ್ರಹಿಸುವವ) ಅಂತಹ ಭಗವಂತ ನಮಗೆ ಕೊಟ್ಟ ಸಾಧನಾ ಶರೀರವಿದು. ಈ ಅಂಶವನ್ನು ತಿಳಿದು ನಿತ್ಯಾನುಷ್ಠಾನ ಮಾಡುವವರು ಎಂದೂ ದುಃಖಕ್ಕೊಳಗಾಗುವುದಿಲ್ಲ. ಈ ರೀತಿ ಭಗವಂತನನ್ನು ಕಾಣುವವನಿಗೆ ಜೀವನ್ಮುಕ್ತಿ ದೊರೆಯುತ್ತದೆ ಹಾಗೂ ಕೊನೇಯದಾಗಿ ದೇಹ ಬಿಟ್ಟು ಹೊರಬಂದ ಮೇಲೆ ಆತ ಆನಂದಸ್ವರೂಪನಾಗಿ ಭಗವಂತನನ್ನು ಸೇರುತ್ತಾನೆ. “ನೀನು ಕೇಳಿದ ಮುಕ್ತಾಮುಕ್ತ ಭಗವದ್ ತತ್ವ ಇದೇ” ಎನ್ನುತ್ತಾನೆ ಯಮ.
ಇಲ್ಲಿ ನಾವು ಒಂದು ವಿಷಯವನ್ನು ಗಮನಿಸಬೇಕು. ಹೆಜ್ಜೆಹೆಜ್ಜೆಗೂ ಯಮ ಭಗವಂತನನ್ನು ತಿಳಿದು ಅನುಷ್ಠಾನ ಮಾಡಿದರೆ ದುಃಖರಹಿತನಾಗಬಹುದು ಎಂದು ಒತ್ತಿ ಹೇಳಿದ್ದಾನೆ. ನಾವು ಭಗವಂತನನ್ನು ತಿಳಿದಾಗ, ತಿಳಿದು ಅನುಷ್ಠಾನ ಮಾಡಿದಾಗ ನಮ್ಮ ಆತ್ಮಬಲ ಗಟ್ಟಿಗೊಳ್ಳುತ್ತದೆ. ಆಗ ಜೀವನದಲ್ಲಿ ಏನೇ ಕಷ್ಟ ಬಂದರೂ ನಮಗೆ ನೋವಾಗುವುದಿಲ್ಲ. “ನನ್ನೊಳಗೆ ಭಗವಂತನಿದ್ದಾನೆ, ಅವನು ನಡೆಸುತ್ತಾನೆ” ಎನ್ನುವ ಆತ್ಮಬಲ ನಮ್ಮ ದುಃಖವನ್ನು ಪರಿಹರಿಸುತ್ತದೆ. ಜ್ಞಾನಿಗಳು ಹೇಳುವಂತೆ: ಎಂದೂ ದೇವರ ಹತ್ತಿರ ನಾವು ಕಷ್ಟ ಬರಬಾರದು ಎಂದು ಕೇಳಿಕೊಳ್ಳಬಾರದು ಮತ್ತು  ಕಷ್ಟ ಬಂದಾಗ ‘ಅಯ್ಯೋ’ ಎನ್ನಬಾರದು. ಭಗವಂತನ ಮೇಲೆ ನಂಬಿಕೆಯಿಟ್ಟು ಬಂದದ್ದನ್ನು ಬಂದಂತೆ ಧೈರ್ಯದಿಂದ ಎದುರಿಸಬೇಕು. ನಾವು ಎಷ್ಟು ಹೆಚ್ಚು ಕಷ್ಟ ಅನುಭವಿಸುತ್ತೇವೋ ಅಷ್ಟೇ ಹೆಚ್ಚು ಪೂರ್ವ ಜನ್ಮದ ಪಾಪವನ್ನು ಕಳೆದುಕೊಳ್ಳುತ್ತೇವೆ. ಈ ಜೀವ ಎಷ್ಟು ಮಾಗಿತೋ ಅಷ್ಟು ಪಾಪ ಕ್ಷಯವಾಗುತ್ತದೆ. ಕಷ್ಟಗಳು ನಾವು ತಿನ್ನುವ ಔಷಧದಂತೆ. ಅದು ಯಾವಾಗಲೂ  ಕಹಿ. ಹೇಗೆ ಕಹಿ ಔಷಧದಿಂದ ರೋಗ ಗುಣವಾಗುತ್ತದೋ, ಹಾಗೇ ಕಷ್ಟಗಳು ನಮ್ಮ ಪಾಪವನ್ನು ತೊಳೆದು ನಮ್ಮನ್ನು ಭಗವಂತನತ್ತ ಕೊಂಡೊಯ್ಯುತ್ತವೆ.    
                       
ಹಂಸಃ ಶುಚಿಷದ್ವಸುರಾಂತರಿಕ್ಷಸದ್ ಹೋತಾ ವೇದಿಷದತಿಥಿರ್ದುರೋಣಸತ್
ನೃಷದ್ವರಸದೃತಸದ್ವ್ಯೋಮಸದ್  ಅಬ್ಜಾ ಗೋಜಾ ಅದ್ರಿಜಾ ಋತಜಾ ಋತಂ ಬೃಹತ್

ಇದು ಬಹಳ ಪ್ರಸಿದ್ಧವಾದ ಹಂಸ ಗಾಯತ್ತ್ರಿ ಮಂತ್ರ. ಇಲ್ಲಿ ಎರಡು ಗಾಯತ್ತ್ರಿಗಳಿವೆ. ಎರಡೂ ಒಟ್ಟಿಗೆ ಸೇರಿದಾಗ ಇದು ಜಗತೀ ಛಂದಸ್ಸಾಗುತ್ತದೆ. [ಗಾಯತ್ತ್ರಿಯಲ್ಲಿ ೨೪ ಅಕ್ಷರ, ಜಗತೀಯಲ್ಲಿ ೪೮ ಅಕ್ಷರ. ಇಲ್ಲಿ ಎರಡು ಅಧಿಕ ಅಕ್ಷರಗಳಿವೆ] ಇದನ್ನು ನಿತ್ಯೋಪಾಸನೆಗೆ ಬಳಸುತ್ತಾರೆ. ಪ್ರಸಿದ್ಧವಾದ ವಿಶ್ವಾಮಿತ್ರ ಗಾಯತ್ತ್ರಿಯಲ್ಲಿ ೨೪ ಅಕ್ಷರಗಳ ಹತ್ತು ಶಬ್ದಗಳಿದ್ದರೆ, ಇಲ್ಲಿ ಒಟ್ಟು ಹದಿನೆಂಟು ಶಬ್ದಗಳಿದ್ದು, ಮೊದಲ ಗಾಯತ್ತ್ರಿಯಲ್ಲಿ ಎಂಟು ಶಬ್ದಗಳು[ಹಂಸಃ, ಶುಚಿಷತ್, ವಸುಃ, ಅಂತರಿಕ್ಷಸತ್, ಹೋತಾ, ವೇದಿಷತ್, ಅತಿಥಿಃ, ದುರೋಣಸತ್] ಹಾಗೂ ಎರಡನೇ ಗಾಯತ್ತ್ರಿಯಲ್ಲಿ ಹತ್ತು ಶಬ್ದಗಳಿವೆ[ನೃಷತ್, ವರಸತ್, ಋತಸತ್, ವ್ಯೋಮಸತ್, ಅಬ್ಜಾಃ, ಗೋಜಾಃ, ಅದ್ರಿಜಾಃ, ಋತಜಾಃ,  ಋತಮ್, ಬೃಹತ್].
ಈವರೆಗೆ ಯಮ ನಮ್ಮ ಹೃದಯ ಗುಹೆಯಲ್ಲಿ ಭಗವಂತನಿದ್ದಾನೆ ಎಂದು ಹೇಳಿದ. ಈ ಶರೀರ ನಮಗೆ ಭಗವಂತ ಕೊಟ್ಟ ವಾಹನ, ಈ ವಾಹನವನ್ನು ಉಪಯೋಗಿಸಿಕೊಂಡು ಸಾಧನೆಯ ಮೂಲಕ ಭಗವಂತನತ್ತ  ಪಯಣ ಮಾಡಬೇಕು ಎಂತಲೂ ಯಮ ಹೇಳಿದ. ಸಾಧನೆ ಮೂಲಕ ಪಯಣ ಅಂದರೆ ನಿರಂತರ ಉಪಾಸನೆ. ಅಂತಹ ಉಪಾಸನೆಗಾಗಿಯೇ ಅಪೂರ್ವ ವಿಷಯಗಳನ್ನೊಳಗೊಂಡ ಈ ಹಂಸ ಗಾಯತ್ತ್ರಿಯನ್ನು ಇಲ್ಲಿ ವಿವರಿಸಲಾಗಿದೆ. ಈ ಮಂತ್ರದ ಪೂರ್ವಾರ್ಧ ಒಂದು ರೀತಿಯಿಂದ ಹಾಗೂ ಉತ್ತರಾರ್ಧ ಇನ್ನೊಂದು ರೀತಿಯಿಂದ ಉಪಾಸನೆಯನ್ನು ಹೇಳುತ್ತದೆ.
ಇಲ್ಲಿ ಭಗವಂತನನ್ನು ಹಂಸಃ ಎಂದು ಉಪಾಸನೆ ಮಾಡಬೇಕು ಎಂದಿದ್ದಾರೆ. ಹಂಸ ಎಂದರೆ ಹಂಸಪಕ್ಷಿಯಲ್ಲ. ಹಂಸಃ ಎಂದರೆ: ಯಾವ ದೋಷವೂ ಇಲ್ಲದ ಹಾಗೂ ಎಲ್ಲಾ ಗುಣಗಳ ಸಾರ ಸಂಗ್ರಹನಾದ ಭಗವಂತ. ಇಲ್ಲಿ ನಾವು ಉಚ್ಛಾರಕ್ಕೆ ಸಂಬಂಧಿಸಿದ ಒಂದು ಮುಖ್ಯ ವಿಚಾರವನ್ನು ಗಮನಿಸಬೇಕು. ಯಜುರ್ವೇದದಲ್ಲಿ ‘ಸ’ ಅಥವಾ ಶ-ಕಾರ ಇದ್ದಾಗ ಮೊದಲಿನ ಅನುಸ್ವಾರವನ್ನು ಮ-ಕಾರವಾಗಿ ಉಚ್ಛಾರ ಮಾಡುವುದಿಲ್ಲ/ಮಾಡಬಾರದು. ಆದ್ದರಿಂದ ಹಂಸಃ ಎನ್ನುವಲ್ಲಿ ಮ್-ಕಾರದ ಬದಲು ಕ-ವರ್ಗದ ಅನುನಾಸಿಕವನ್ನು[ಕ, ಖ, ಗ, ಘ, ಙ] ಉಪಯೋಗಿಸಬೇಕು. ಆದ್ದರಿಂದ ಉಚ್ಛಾರ ಹಙಸಃ ಎಂದಾಗುತ್ತದೆ. [ಇದನ್ನು ಕೆಲವರು ಹಗುಂಸಃ ಎಂದು ಉಚ್ಛರಿಸುತ್ತಾರೆ. ಆದರೆ ಅದು ಸರಿಯಾದ ಉಚ್ಛಾರವಲ್ಲ].
‘ಹಂಸಃ ಶುಚಿಷತ್’ ಅಂದರೆ:  ಹಂಸಃ ನಾಮಕ ಭಗವಂತ ಶುಚಿಯಾದ ಚೇತನದಲ್ಲಿದ್ದಾನೆ ಎಂದರ್ಥ. ಚೇತನಗಳಲ್ಲಿ ಸದಾ ಶುಚಿಯಾಗಿರುವವರು ಪ್ರಾಣದೇವರು. ಉಪನಿಷತ್ತಿನಲ್ಲಿ ಹೇಳುವಂತೆ ಅಸುರರು ದೇವತೆಗಳ ಒಳಗೆ ಸೇರಿ ಅವರ ಬುದ್ಧಿ ಕೆಡಿಸಿ ಅವರಿಗೆ ಅಸುರಾವೇಶ ಬರುವಂತೆ ಮಾಡಬಲ್ಲರು.[ಉದಾಹರಣೆಗೆ: ತನಗೆ ಪೂಜೆ ಸಲ್ಲಿಸಲಿಲ್ಲ ಎಂದು ಇಂದ್ರ ಅಸುರಾವೇಶದಿಂದ ಮಳೆ ಬರಿಸಿದ್ದು-ಕೃಷ್ಣ ಗೋವರ್ಧನ ಗಿರಿ ಬೆಟ್ಟವನ್ನು ಎತ್ತಿ ರಕ್ಷಣೆ ಮಾಡಿದ ಕಥೆ] ಇಂದ್ರಾದಿ ದೇವತೆಗಳಿಗೆ ಅಸುರಾವೇಶ ಬರಬಹುದು ಆದರೆ ಪ್ರಾಣದೇವರಿಗೆ ಎಂದೂ ಅಸುರಾವೇಶ ಇಲ್ಲವಂತೆ. ಪ್ರಾಣದೇವರ ಮೇಲೆ ಆಕ್ರಮಿಸಬೇಕು ಎಂದು ಪ್ರಯತ್ನಿಸುವ ಅಸುರರು ಕಲ್ಲು ಬಂಡೆಗೆ ತಲೆ ಚಚ್ಚಿಕೊಂಡಂತೆ ಚಚ್ಚಿಕೊಂಡು ನಾಶವಾಗಿ ಹೋಗುತ್ತಾರೆ. ಹೀಗೆ ಯಾವ ಆಸುರೀ ಶಕ್ತಿಯ ಪ್ರಭಾವಕ್ಕೂ ಒಳಗಾಗದ ಶುದ್ಧತತ್ವ ‘ಪ್ರಾಣ ದೇವರು’. ಇಂತಹ ಶುಚಿಯಾದ ಪ್ರಾಣದೇವರಲ್ಲಿ ಸನ್ನಿಹಿತನಾಗಿ ಹಂಸಃ ನಾಮಕ ಭಗವಂತನಿದ್ದಾನೆ.
ಹೃತ್ಕಮಲದಲ್ಲಿ ಜೀವನಿದ್ದಾನೆ. ಆ ಜೀವನೊಳಗೆ ಜೀವ ಕಲಾಭಿಮಾನಿಯಾಗಿ ಪ್ರಾಣದೇವರಿದ್ದಾರೆ. ಪ್ರಾಣದೇವರ ಒಳಗೆ ಹಂಸಃ ನಾಮಕ ಭಗವಂತನಿದ್ದಾನೆ. ಈ ಕಾರಣಕ್ಕಾಗಿ ಪ್ರಾಣದೇವರಿಗೂ ಕೂಡ ಹಂಸಃ ಎನ್ನುವ ಹೆಸರಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಭಗವಂತ ಎಲ್ಲರ ಒಳಗೂ ಬಿಂಬರೂಪನಾಗಿ ನೆಲೆಸಿದ್ದಾನೆ.
‘ವಸುಃ ಅಂತರಿಕ್ಷಸತ್’ ಅಂದರೆ ಅಂತರಿಕ್ಷದಲ್ಲಿ ವಸುಃ ನಾಮಕನಾಗಿ ಭಗವಂತನಿದ್ದಾನೆ ಎಂದರ್ಥ. ವಸುಃ ಎಂದರೆ ಶ್ರೇಷ್ಠವಾದ ಆನಂದಸ್ವರೂಪ.[ವ=ವರ=ಶ್ರೇಷ್ಠ; ಸು= ಸುಖ=ಆನಂದ]. ಹೀಗೆ ಜೀವ ಜಡಾತ್ಮಕವಾದ ಪ್ರಪಂಚದಲ್ಲಿ ಎಲ್ಲಾ ಕಡೆ ಆನಂದ ಸ್ವರೂಪನಾಗಿ ಭಗವಂತ ತುಂಬಿದ್ದಾನೆ.
‘ಹೋತಾ ವೇದಿಷತ್’ : ಇಲ್ಲಿ ‘ವೇದಿ’ ಎಂದರೆ ಯಜ್ಞ ವೇದಿಕೆ. ಅಂದರೆ ಯಜ್ಞಕುಂಡ. ವೇದಿಯಲ್ಲಿರುವವನು ಅಗ್ನಿ. ಅಗ್ನಿಯಲ್ಲಿ ಅಗ್ನಿ ಅಂತರ್ಗತನಾಗಿ ಅಗ್ನಿನಾರಾಯಣ ಭಗವಂತ ತುಂಬಿದ್ದಾನೆ. ಅಗ್ನಿಯಲ್ಲಿದ್ದು ನಾವು ಅರ್ಪಿಸುವ ಹವಿಸ್ಸುಗಳನ್ನು ತಿನ್ನುವವ ಆ ಭಗವಂತ. ಯಜ್ಞ ಮಾಡುವಾಗ ಹವನ ಮಂತ್ರಗಳನ್ನು ಹೇಳುವವರನ್ನು  ‘ಹೋತೃ’ ಎಂದು ಕರೆಯುತ್ತಾರೆ. ಇವರು ಹವನ ಮಾಡುವಾಗ ‘ಶಸ್ತ್ರ’ ಮಂತ್ರಗಳನ್ನು ಹೇಳುವವರು. ಇಂತಹ ಹೋತೃಗಳ ಒಳಗೆ ಹೋತಾಃ  ನಾಮಕನಾಗಿ ಭಗವಂತ ತುಂಬಿದ್ದಾನೆ. ನಮ್ಮ ಇಂದ್ರಿಯಗಳಲ್ಲಿ ನಿರಂತರ ವಿಷಯಗಳ ಹೋಮ ನಡೆಯುತ್ತಿರುತ್ತದೆ. ಅಗ್ನಿಯಲ್ಲಿದ್ದು ಆಹುತಿಯನ್ನು ಸ್ವೀಕರಿಸುವ ಭಗವಂತನೇ ನಮ್ಮ ಇಂದ್ರಿಯಗಳಲ್ಲಿದ್ದು ಅವುಗಳನ್ನು ನಿಯಮಿಸುವ ಸರ್ವಾಂತರ್ಯಾಮಿ.
‘ಅತಿಥಿಃ ದುರೋಣಸತ್’: ದುರೋಣ ಎಂದರೆ ಸೋಮರಸ ಪಾತ್ರೆ ಅಥವಾ ಮರದ ದೊನ್ನೆ. ಭಗವಂತನಿಗೆ ಅರ್ಪಿಸುವ ಸೋಮರಸದಲ್ಲೂ ಹಾಗೂ ಎಲ್ಲಾ ಹವಿಸ್ಸುಗಳಲ್ಲೂ ಭಗವಂತ ತುಂಬಿದ್ದಾನೆ. ಯಾಗಶಾಲೆಯಲ್ಲಿ ಬಂದು ಕುಳಿತಿರುವ ಅತಿಥಿಯೊಳಗೆ ಕೂಡಾ ಭಗವಂತ ತುಂಬಿದ್ದಾನೆ.[ಅತಿಥಿ ಪದದ ಅರ್ಥವನ್ನು ಮೊದಲ ಅಧ್ಯಾಯದಲ್ಲಿ(೧-೧-೭) ವಿವರಿಸಲಾಗಿದೆ].
ಹಂಸ ಗಾಯತ್ತ್ರಿಯ ಉತ್ತರಾರ್ಧ ಹೀಗೆ ಹೇಳುತ್ತದೆ: “ನೃಷದ್ವರಸದೃತಸದ್ವ್ಯೋಮಸದ್  ಅಬ್ಜಾ ಗೋಜಾ ಅದ್ರಿಜಾ ಋತಜಾ ಋತಂ ಬೃಹತ್”.  ಈಗ ಮುದ್ರಣವಾಗಿರುವ ಎಲ್ಲಾ ಪುಸ್ತಕಗಳಲ್ಲೂ “ಅಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತ್” ಎಂದು ಮುದ್ರಣವಾಗಿರುವುದನ್ನು ಕಾಣುತ್ತೇವೆ. ಆದರೆ ಇದು ಋಗ್ವೇದದ ಮಂತ್ರ. [ಋಗ್ವೇದದಲ್ಲಿ- “ಅಬ್ಜಾ ಗೋಜಾ ಋತಜಾ ಅದ್ರಿಜಾ ಋತಮ್” ಎಂದಿದೆ(ಋಗ್ವೇದ- ೪-೦೪೦-೦೫). ಅಲ್ಲಿ ‘ಬೃಹತ್’ ಪದ ಬಳಸಿಲ್ಲ]. ಪ್ರಾಚೀನ ವ್ಯಾಖ್ಯಾನಗಳ ಪ್ರಕಾರ ಮತ್ತು ಅರ್ಥ ಔಚಿತ್ಯದಿಂದ ಕಠ ಉಪನಿಷತ್ತಿನಲ್ಲಿ  “ಅಬ್ಜಾ ಗೋಜಾ ಅದ್ರಿಜಾ ಋತಜಾ ಋತಂ ಬೃಹತ್”  ಸರಿಯಾದ ಪಾಠ ಎನಿಸುತ್ತದೆ.
ನೃಷತ್: ಪ್ರತಿಯೊಬ್ಬ ಮನುಷ್ಯನಲ್ಲಿಯೂ ಆ ಭಗವಂತನಿದ್ದಾನೆ. ಆದ್ದರಿಂದ ಯಾರೂ ಯಾರನ್ನು ನೋಡಿಯೂ ಅಸಹ್ಯಪಡುವಂತಿಲ್ಲ. ಆದ್ದರಿಂದ ನಾವು ನಿತ್ಯ ವ್ಯವಹಾರದಲ್ಲಿ ಕಾಣುವ ಪ್ರತಿಯೊಬ್ಬನಲ್ಲೂ ಭಗವಂತನನ್ನು ಕಾಣಬೇಕು.
ವರಸತ್: ಮನುಷ್ಯನಿಗಿಂತ ಮೇಲಿರುವವರು ದೇವತೆಗಳು. ಬ್ರಹ್ಮಾದಿ ಸಮಸ್ತ ದೇವತೆಗಳಲ್ಲೂ ಆ ಭಗವಂತನಿದ್ದಾನೆ.
ಋತಸತ್, ವ್ಯೋಮಸತ್: ಬ್ರಹ್ಮನಿಗಿಂತ ಎತ್ತರದಲ್ಲಿ ಮೂಲ ಪ್ರಕೃತಿಮಾನಿನಿ ಲಕ್ಷ್ಮಿ ಇದ್ದಾಳೆ. ಮೂಲ ಪ್ರಕೃತಿಗೆ ಎರಡು ಮುಖ. ಜಡಪ್ರಕೃತಿ ಮತ್ತು ಚೇತನ ಪ್ರಕೃತಿ. ಇದನ್ನೇ ಇಲ್ಲಿ ಋತಸತ್ ವ್ಯೋಮಸತ್ ಎಂದಿದ್ದಾರೆ. ಋತ ಎಂದರೆ ಎಂದೂ ಬದಲಾವಣೆ ಹೊಂದದೆ ಏಕರೂಪವಾಗಿರುವ ಮೂಲಪ್ರಕೃತಿ. ವ್ಯೋಮ ಎಂದರೆ ಎಲ್ಲಾ ಕಡೆ ತುಂಬಿರುವ ಶಕ್ತಿ. ಹೀಗೆ ಚೇತನಾಚೇತನಾತ್ಮಕ ಪ್ರಪಂಚದಲ್ಲಿ ಮತ್ತು ಅದಕ್ಕೆ ನಿಯಾಮಕಳಾದ ಚಿತ್ ಪ್ರಕೃತಿ ಲಕ್ಷ್ಮಿಯಲ್ಲಿ ಸನ್ನಿಹಿತನಾಗಿದ್ದಾನೆ ಆ ಭಗವಂತ.  
ಅಬ್ಜಾಃ : ನೀರಿನಲ್ಲಿ ಹುಟ್ಟಿದವನು ಅಬ್ಜಾಃ. ಇದು ಚತುರ್ಮುಖನ ಹೆಸರು. ಭಗವಂತ ಚತುರ್ಮುಖನಲ್ಲಿ ನೆಲೆಸಿದ್ದಾನೆ.
ಗೋಜಾಃ: ಗೌಃ ಎಂದರೆ ಸರಸ್ವತಿ. ಸರಸ್ವತಿಯ ಮಕ್ಕಳಾದ ಗರುಡ-ಶೇಷ-ರುದ್ರರಲ್ಲಿ ನೆಲೆಸಿರುವ ಭಗವಂತ ಗೋಜಾಃ.
ಅದ್ರಿಜಾಃ: ಅದ್ರಿ ಎಂದರೆ ಎಲ್ಲರೂ ಆದರಿಸಬೇಕಾದ ಶಿವತತ್ವ. ಶಿವನಿಂದ ಹುಟ್ಟಿದ ಇಂದ್ರಾದಿ ಸಮಸ್ತ ದೇವತೆಗಳಲ್ಲಿ ನೆಲೆಸಿರುವ ಭಗವಂತ ಅದ್ರಿಜಾಃ. 
ಋತಜಾಃ: ಜ್ಞಾನವನ್ನು ಪಡೆದು ಮುಕ್ತಿಯನ್ನು ಪಡೆದವರಲ್ಲಿ ಸನ್ನಿಹಿತನಾಗಿರುವ ಭಗವಂತ ಋತಜಾಃ.
ಋತಮ್, ಬೃಹತ್: ಎಂದೂ ಬದಲಾಗದ ಜ್ಞಾನ ಸ್ವರೂಪ ಭಗವಂತ ಋತಮ್.  ಇಂತಹ ಭಗವಂತನಿಗೆ ಸಾಟಿಯಾದ ಇನ್ನೊಂದು ವಸ್ತುವಿಲ್ಲ. ಆದ್ದರಿಂದ ಆತ ಬೃಹತ್.
ಈ ಮಂತ್ರಕ್ಕೆ ಇನ್ನೊಂದು ಮುಖವಿದೆ. ಅದು ವೇದದಲ್ಲೇ ಬಂದ ಅರ್ಥ ವಿವರಣೆ. ತೈತ್ತಿರೀಯ ಅರಣ್ಯಕದಲ್ಲಿ ಈ ಮಂತ್ರಕ್ಕೆ ಅರ್ಥ ಬರೆದಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಮಂತ್ರದ ಅರ್ಥ ವಿವರಣೆಯನ್ನು ನೋಡೋಣ.
ಈ ಮಂತ್ರದಲ್ಲಿ ‘ಋತ’ ಎನ್ನುವ ಶಬ್ದ ಮೂರು ಬಾರಿ ಬಂದಿದೆ ಹಾಗೂ  ಮೂರಕ್ಕೂ ಬೇರೆ ಬೇರೆ ಅರ್ಥವಿದೆ. ಆದರೆ ಸಂಸ್ಕೃತದಲ್ಲಿ ಒಂದು ನಿಯಮವಿದೆ. ಅದೇನೆಂದರೆ: ಒಂದು ಶಬ್ದವನ್ನು ಒಂದು ಸಂದರ್ಭದಲ್ಲಿ ಒಂದು ಪ್ರಕರಣದಲ್ಲಿ ಅನೇಕ ಬಾರಿ ಉಚ್ಛಾರ ಮಾಡಿದರೆ ಅದು ಒಂದೇ ಅರ್ಥವನ್ನು ಹೇಳಬೇಕೇ ಹೊರತು ಅರ್ಥಾಂತರ ಮಾಡಬಾರದು ಎಂದು. ಇದು ಭಾಷಾಶಾಸ್ತ್ರದ  ನಿಯಮ. ಆದರೆ  ಈ ನಿಯಮ ಇಲ್ಲಿ ಅನ್ವಯಿಸುವುದಿಲ್ಲ. ಏಕೆಂದರೆ ಇಲ್ಲಿ ಋತ ಎನ್ನುವ ಶಬ್ದ ಮೂರು ಬಾರಿ ಬಂದಿದ್ದಲ್ಲ, ಬದಲಿಗೆ ಋತಸತ್, ಋತಜಾಃ, ಋತಮ್ ಎನ್ನುವ ಬೇರೆ ಬೇರೆ ಶಬ್ದಗಳು ಬಳಕೆಯಾಗಿರುವುದು. ಹಾಗಾಗಿ ಈ ಮೂರು ಶಬ್ದಗಳಿಗೂ ಇಲ್ಲಿ ಬೇರೆ ಬೇರೆ ಅರ್ಥಗಳಿವೆ.
ಋತಸತ್ ಎಂದರೆ ಋತಗಳಲ್ಲಿ ಇರುವವನು. ಸಮಸ್ತ ವೇದಗಳಲ್ಲಿ ಪ್ರತಿಪಾಧ್ಯನಾದ ಭಗವಂತ ಋತಸತ್. ವೇದ ಎಂದೂ ಅಪಾರ್ಥಕ್ಕೆ ಎಡೆ ಮಾಡಿಕೊಡುವುದಿಲ್ಲ. ಯಥಾರ್ಥ ಜ್ಞಾನವನ್ನು ಕೊಡುವುದರಿಂದ ವೇದವನ್ನು ‘ಋತ’ ಎನ್ನುತ್ತಾರೆ. ಭಗವಂತ ಸರ್ವವೇದ ಪ್ರತಿಪಾಧ್ಯನಾಗಿ, ಸಮಸ್ತ ಶಬ್ದವಾಚ್ಯನಾಗಿ, ಸಮಸ್ತ ಅಕ್ಷರ ವಾಚ್ಯನಾಗಿ ವೇದದಲ್ಲಿ ನೆಲೆಸಿದ್ದಾನೆ.
ಸಂಸ್ಕೃತ ಭಾಷಾಶಾಸ್ತ್ರದಲ್ಲಿ ಇನ್ನೊಂದು ನಿಯಮವಿದೆ. ಯಾವ ಅರ್ಥ ಒಂದು ಶಬ್ದಕ್ಕೆ ಪ್ರಸಿದ್ಧವೋ, ಅದನ್ನು ಬಿಟ್ಟು ಅಪ್ರಸಿದ್ಧ ಅರ್ಥವನ್ನು ಹೇಳಬಾರದು ಎಂದು. ‘ವ್ಯೋಮ’ ಎನ್ನುವಲ್ಲಿ ಪ್ರಸಿದ್ಧ ಅರ್ಥ ಆಕಾಶ. ಆದರೆ ಇಲ್ಲಿ ಆ ಅರ್ಥವನ್ನು ಬಳಸಿಲ್ಲ. ಇದಕ್ಕೆ ಕಾರಣ: ಪ್ರಸಿದ್ಧ ಅರ್ಥ ಬಾಧಕವಾಗಿದ್ದಲ್ಲಿ ಅಪ್ರಸಿದ್ಧ ಅರ್ಥವನ್ನು ಹೇಳಬಹುದು ಎಂದು ಭಾಷಾಶಾಸ್ತ್ರ ಹೇಳುತ್ತದೆ. ಇಲ್ಲಿ ಪೂರ್ವಾರ್ಧದಲ್ಲಿ ‘ಅಂತರಿಕ್ಷ’ ಎನ್ನುವ ಶಬ್ದ ಬಂದಿರುವುದರಿಂದ, ಅದು ಉತ್ತರಾರ್ಧದಲ್ಲಿ ಪುನರುಕ್ತಿ ಆಗುವುದಿಲ್ಲ. ಆದ್ದರಿಂದ ವ್ಯೋಮ ಎನ್ನುವ ಶಬ್ದಕ್ಕೆ ಎಲ್ಲಾ ಕಡೆ ವ್ಯಾಪ್ತವಾಗಿರುವ ತತ್ವ ಎನ್ನುವ ಅರ್ಥ ವಿವರಣೆ ಕೊಡಲಾಗಿದೆ. ಎಲ್ಲಾ ಕಡೆ ವ್ಯಾಪ್ತವಾಗಿರುವ ತತ್ವ ಎರಡೇ. ಲಕ್ಷ್ಮೀ ಮತ್ತು ನಾರಾಯಣ. ಇಲ್ಲಿ ‘ವ್ಯೋಮದಲ್ಲಿ ನೆಲೆಸಿರುವ ಭಗವಂತ’ ಎಂದು ಹೇಳಿರುವುದರಿಂದ ವ್ಯೋಮ ಎಂದರೆ ಶ್ರೀಲಕ್ಷ್ಮಿ[ವಿಷ್ಣುವಿನ ಜೊತೆಗೆ ಓತಳಾದವಳು].
ಹಂಸ ಗಾಯತ್ತ್ರಿಯನ್ನು ಸೂರ್ಯೋಪಸ್ಥಾನಕ್ಕಾಗಿ ಉಪಯೋಗಿಸುತ್ತಾರೆ. ಹೇಗೆ ಗಾಯತ್ತ್ರಿಯನ್ನು ಜಪ ಮಾಡುವಾಗ ಸೂರ್ಯೋಪಸ್ಥಾನವೋ ಹಾಗೇ ಹಂಸ ಗಾಯತ್ತ್ರಿಗೂ ದೇವತೆ ಸೂರ್ಯ ಎಂದು ಆರಾಧನೆ ಮಾಡುವ ಕ್ರಮವಿದೆ. ಹೀಗಾಗಿ ತೈತ್ತಿರೀಯ ಅರಣ್ಯಕದಲ್ಲಿ ಅರ್ಥವಿವರಣೆಯನ್ನು ಸೂರ್ಯನಾರಾಯಣನ ಪರವಾಗಿ ಹೇಳಲಾಗಿದೆ. ಮುಂಜಾನೆ ಪೂರ್ವ ಸಮುದ್ರದಲ್ಲಿ ಕುಳಿತು ಸೂರ್ಯನನ್ನು ನೋಡಿದರೆ ಆತ ನೀರಿನಿಂದ ಮೇಲೆದ್ದು ಬಂದಂತೆ ಕಾಣುತ್ತಾನೆ. ಹೀಗೆ ನೀರಿನಿಂದ ಮೇಲೆದ್ದು ಬಂದಂತೆ ಕಾಣುವ ಸೂರ್ಯನಾರಾಯಣ ಅಬ್ಜಾಃ. ಸಾವಿರ ಕಿರಣ ಹೊತ್ತು ಬರುವನಾದ್ದರಿಂದ ಆತ ಗೋಜಾಃ. ಸತ್ಯ ಸ್ವರೂಪನಾಗಿ ಆವಿರ್ಭಾವನಾಗುವ ಹಾಗೂ ಮುಕ್ತರಲ್ಲಿ ನೆಲೆಸಿರುವ ಭಗವಂತ ಋತಜಾಃ. ಸದಾ ಒಂದೇ ರೀತಿ ಇರುವ ನಿರ್ವೀಕಾರ ಬ್ರಹ್ಮತತ್ವ ಭಗವಂತ ಋತಮ್. ಹೀಗೆ ಎಲ್ಲಾ ಗುಣಗಳನ್ನೂ ಹೊಂದಿರುವ, ಎಲ್ಲಕ್ಕಿಂತ ಹಿರಿದಾದ ತತ್ವ ಭಗವಂತ ‘ಬೃಹತ್’.

No comments:

Post a Comment