ಯದೇವೇಹ ತದಮುತ್ರ ಯದಮುತ್ರ ತದನ್ವಿಹ ।
ಮೃತ್ಯೋಃ ಸ ಮೃತ್ಯುಮಾಪ್ನೋತಿ ಯ ಇಹ ನಾನೇವ ಪಶ್ಯತಿ ॥೧೦॥
ಭಗವಂತನ ಅವತಾರ ರೂಪ
ಮತ್ತು ಆತನ ಮೂಲರೂಪದ ಬಗ್ಗೆ ಯಮ ಈ ಶ್ಲೋಕದಲ್ಲಿ ಒಂದು ಉತ್ತಮ ವಿವರಣೆಯನ್ನು ಕೊಟ್ಟಿದ್ದಾನೆ.
ಸಾಮಾನ್ಯವಾಗಿ ಭಗವಂತ ಅವತಾರರೂಪಿಯಾಗಿ ಭೂಮಿಗಿಳಿದು ಬಂದಾಗ ಒಬ್ಬ ಸಾಮಾನ್ಯ ಮನುಷ್ಯನಂತೆ ಕಾಣುತ್ತಾನೆ.
ಉದಾಹರಣೆಗೆ ಶ್ರೀರಾಮಚಂದ್ರ. ರಾಮಾಯಣದಲ್ಲಿ ಒಂದು ಕಡೆ “ನಾನೊಬ್ಬ ಸಾಮಾನ್ಯ ಮನುಷ್ಯ” ಎಂದು ಶ್ರೀರಾಮನೇ
ಹೇಳುವುದನ್ನು ಕಾಣುತ್ತೇವೆ. ಇದೆಲ್ಲವನ್ನು ನೋಡಿದಾಗ ನಮಗೆ ಭಗವಂತನ ಮೂಲರೂಪಕ್ಕೂ ಮತ್ತು ಅವತಾರರೂಪಕ್ಕೂ
ವ್ಯತ್ಯಾಸವಿದೆ ಎನಿಸಬಹುದು. ಆದರೆ ಅದು ಸರಿಯಲ್ಲ. ಇಲ್ಲಿ ಯಮ ಹೇಳುತ್ತಾನೆ: “ಭಗವಂತನ ಮೂಲರೂಪ ಎಷ್ಟು
ಪೂರ್ಣವೋ ಅಷ್ಟೇ ಪೂರ್ಣ ಆತನ ಅವತಾರ ರೂಪ” ಎಂದು. ಆದ್ದರಿಂದ ಮೂಲರೂಪಕ್ಕೂ ಅವತಾರ ರೂಪಕ್ಕೂ ಭೇದ ಚಿಂತನೆ
ತಪ್ಪು. “ಭಗವಂತನ ರೂಪಗಳಲ್ಲಿ ಕಿಂಚಿತ್ ವ್ಯತ್ಯಾಸವಿದೆ ಎಂದು ಚಿಂತನೆ ಮಾಡುವವರು ಸತ್ತ ಮೇಲೆ ದುಃಖಮಾಯವಾದ
ತಮಸ್ಸನ್ನು ಸೇರುತ್ತಾರೆ” ಎಂದಿದ್ದಾನೆ ಯಮ. ಭಗವಂತನ ಬಗೆಗೆ ತಪ್ಪು ಕಲ್ಪನೆ ಮಾಡುವುದರಿಂದ ಎಂದೂ
ಶ್ರೇಯಸ್ಸಿಲ್ಲ.
ಅವತಾರ ರೂಪದಲ್ಲಿ ಭಗವಂತ
ಕಷ್ಟಪಟ್ಟಂತೆ ನಮಗೆ ಕಾಣುವುದು(ಉದಾ: ಶ್ರೀ ರಾಮ) ಅವನ ಲೀಲೆಯ ಒಂದು ಅಂಗ. ಜೀವನ ಎನ್ನುವುದು ಒಂದು
ನಾಟಕ. ಇಲ್ಲಿ ನಾವು ಪಾತ್ರಧಾರಿಗಳು ಹಾಗೂ ಭಗವಂತ ನಿರ್ದೇಶಕ. ಕೆಲವೊಮ್ಮೆ ಈ ನಾಟಕದಲ್ಲಿ ಭಗವಂತನೇ
ನೇರವಾಗಿ ಬಂದು ಅಭಿನಯಿಸುತ್ತಾನೆ. ಆಗ ಆ ಪಾತ್ರಕ್ಕನುಗುಣವಾಗಿ ಭಗವಂತ ತನ್ನ ಲೀಲೆಗಳನ್ನು ತೋರಿಸುತ್ತಾನೆ.
ಅದನ್ನು ನಾವು ತಪ್ಪಾಗಿ ತಿಳಿದುಕೊಂಡು ಭೇದ
ಚಿಂತನೆ ಮಾಡುವುದು ತಪ್ಪು. ಭಗವಂತನ ಲೀಲೆಯನ್ನು ಅರ್ಥ ಮಾಡಿಕೊಳ್ಳದೇ ಆತನಿಗೂ ನಮ್ಮಂತೆ ಪಾಂಚಭೌತಿಕ
ಶರೀರವಿದೆ, ಆತನಿಗೂ ಹುಟ್ಟು-ಸಾವುಗಳಿವೆ, ಅವತಾರ ರೂಪದಲ್ಲಿ ಆತನಿಗೂ ಕಷ್ಟಗಳು ಬರುತ್ತವೆ, ಆತನೂ
ದುಃಖವನ್ನು ಅನುಭವಿಸುತ್ತಾನೆ, ಇತ್ಯಾದಿ ಚಿಂತನೆ
ಅಕ್ಷಮ್ಯ ಅಪರಾಧ. ಅವತಾರ ರೂಪದಲ್ಲಿ ಆರು ಅಡಿ ಎತ್ತರದ ಪಾಂಚಭೌತಿಕ ಶರೀರದಂತೆ ನಮಗೆ ಕಾಣಿಸಿಕೊಳ್ಳುವ
ಭಗವಂತನನ್ನು, ನಮ್ಮ ಪರಿಮಿತಿಯಲ್ಲಿ ಅಳೆಯುವುದು ನಮ್ಮ ಅಜ್ಞಾನದ ಪರಮಾವಧಿ. ವೈಕುಂಠಾದಿಗಳಲ್ಲಿ ಭಗವಂತನ
ರೂಪ ಎಷ್ಟು ಪರಿಪೂರ್ಣವೋ, ಆತನ ಎಲ್ಲಾ ರೂಪಗಳು ಅಷ್ಟೇ
ಪರಿಪೂರ್ಣ. ಇಲ್ಲಿ ಭೇದ ಚಿಂತನೆ ಮಾಡುವುದು ತಮಸ್ಸಿಗೆ ಆಹ್ವಾನ. ಇದನ್ನು ಇನ್ನೂ ವಿವರವಾಗಿ ಮುಂದಿನ
ಶ್ಲೋಕದಲ್ಲಿ ಯಮ ವಿವರಿಸುತ್ತಾನೆ.
ಮನಸೈವೇದಮಾಪ್ತವ್ಯಂ ನೇಹ ನಾನಾಸ್ತಿ ಕಿಂಚನ ।
ಮೃತ್ಯೋಃ ಸ ಮೃತ್ಯುಂ ಗಚ್ಛತಿ ಯ ಇಹ ನಾನೇವ ಪಶ್ಯತಿ ॥೧೧॥
ತರ್ಕ ಮಾಡುವುದನ್ನು
ಬಿಟ್ಟು, ಮನಸ್ಸಿನಲ್ಲಿ ಮನನ ಮಾಡುತ್ತಾ, ವೇದಾರ್ಥ ಚಿಂತನೆ ಮಾಡುವುದರಿಂದ ಭಗವಂತನ ದೇಹ, ಅವನ ಅವಯವ,
ಅವನ ಕ್ರಿಯೆ ಇದ್ಯಾವುದೂ ಭಿನ್ನವಾಗಿಲ್ಲ, ಎಲ್ಲವೂ ಅಖಂಡ, ಯಾವುದೂ ಆತನ ಸ್ವರೂಪಕ್ಕಿಂತ ಭಿನ್ನವಲ್ಲ
ಹಾಗೂ ಎಲ್ಲವೂ ಜ್ಞಾನಾನಂದಮಯ ಎನ್ನುವ ಸತ್ಯ ಸ್ಪುರಣವಾಗುತ್ತದೆ. ಇದನ್ನು ಬಿಟ್ಟು ಭಗವಂತನ ದೇಹ,
ಗುಣ, ಕ್ರಿಯೆ, ರೂಪಗಳಲ್ಲಿ ಭಿನ್ನ ಚಿಂತನೆ ಮಾಡಿದರೆ ಸಾವಿನ ಸುಳಿಯಲ್ಲಿ ಸಿಲುಕಬೇಕಾಗುತ್ತದೆ
ಎಂದು ಎಚ್ಚರಿಸುತ್ತಾನೆ ಯಮ.
ಇಲ್ಲಿ ನಾವು ತಿಳಿಯಬೇಕಾದ
ಮುಖ್ಯ ಅಂಶ ಎಂದರೆ: ಭಗವಂತನ ಬೇರೆಬೇರೆ ರೂಪಗಳಲ್ಲಿ
ಯಾವ ವ್ಯತ್ಯಾಸವೂ ಇಲ್ಲ. ನಾವು ಭಗವಂತನನ್ನು ರಾಮನಾಗಿ, ಕೃಷ್ಣನಾಗಿ, ನರಸಿಂಹನಾಗಿ ಅಥವಾ ನಮಗೆ ಇಷ್ಟವಾಗುವ
ಮತ್ತು ಹಿಡಿಸುವ ಇತರ ಯಾವುದೇ ರೂಪದಲ್ಲಿ ಉಪಾಸನೆ
ಮಾಡಬಹುದು. ಸರ್ವಸಮರ್ಥನೂ, ಸರ್ವಜ್ಞನೂ ಆದ ಭಗವಂತ ಏಕ. ಆದ್ದರಿಂದ ಭಿನ್ನ ಮತ್ತು ಭೇದ ಚಿಂತನೆ ಸರಿಯಲ್ಲ.
ಅಂಗುಷ್ಠಮಾತ್ರಃ ಪುರುಷೋ ಮಧ್ಯ ಆತ್ಮನಿ ತಿಷ್ಠತಿ ।
ಈಶಾನೋ ಭೂತಭವ್ಯಸ್ಯ ನ ತತೋ ವಿಜುಗುಪ್ಸತೇ । ಏತದ್ವೈ ತತ್ ॥೧೨॥
ಭಗವಂತನನ್ನು ಒಳಗಣ್ಣಿನಿಂದ
ಧ್ಯಾನದಲ್ಲಿ ನೋಡಿದರೆ ಆತ ನಮ್ಮ ಅಂಗುಷ್ಠದ ಆಕಾರದಲ್ಲಿ ನಮ್ಮ ಹೃದಯದಲ್ಲಿ ಕಾಣಿಸಿಕೊಳ್ಳುತ್ತಾನೆ.
ಇಂತಹ ಸಮಸ್ತ ವಿಶ್ವದ ಸ್ವಾಮಿಯಾದ ಭಗವಂತನನ್ನು ತಿಳಿದರೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು
ಎನ್ನುವ ಭಯ, ಅಜ್ಞಾನ ಹೊರುಟು ಹೋಗುತ್ತದೆ. “ನೀನು ತಿಳಿಯಲು ಬಯಸಿರುವ ಜಗತ್ತಿನ ಸ್ವಾಮಿ ಇವನೇ” ಎನ್ನುತ್ತಾನೆ ಯಮ.
ಅಂಗುಷ್ಠಮಾತ್ರಃ ಪುರುಷೋ ಜ್ಯೋತಿರಿವಾಧೂಮಕಃ ।
ಈಶಾನೋ ಭೂತಭವ್ಯಸ್ಯ ಸ ಏವಾದ್ಯ ಸ ಉ ಶ್ವಃ । ಏತದ್ವೈ ತತ್ ॥೧೩॥
ನಮ್ಮ ಹೃದಯದಲ್ಲಿ ಕಾಣುವ ಅಂಗುಷ್ಠಾಕಾರದ ಭಗವಂತನ ರೂಪ ಹೊಗೆ ಇರದ ದೀಪದ ಶಿಖೆಯಂತೆ. ಅತ್ಯಂತ ಪರಿಶುದ್ಧವಾದ, ದೋಷದ ಸ್ಪರ್ಶವೇ ಇಲ್ಲದ ಭಗವಂತನೆಂಬ ಬೆಳಕನ್ನು ಅಂತರಂಗದಲ್ಲಿ ಮನನ ಮಾಡುವುದರಿಂದ ಕಾಣಬಹುದು. ಈ ಸಂಸಾರದಲ್ಲಿರುವಾಗ ಹಾಗೂ ನಾಳೆ ಈ ಸಂಸಾರದಿಂದ ಪಾರಾಗಿ ಮೋಕ್ಷವನ್ನು ಸೇರಿದಾಗಲೂ, ಎಲ್ಲರಿಗೂ ಆತನೇ ಗತಿ. “ನೀನು ತಿಳಿಯಲು ಬಯಸಿರುವ ನಮ್ಮೆಲ್ಲರ ಸ್ವಾಮಿ-ಈ ಭಗವಂತ” ಎನ್ನುತ್ತಾನೆ ಯಮ.
ಅಂಗುಷ್ಠಮಾತ್ರಃ ಪುರುಷೋ ಜ್ಯೋತಿರಿವಾಧೂಮಕಃ ।
ಈಶಾನೋ ಭೂತಭವ್ಯಸ್ಯ ಸ ಏವಾದ್ಯ ಸ ಉ ಶ್ವಃ । ಏತದ್ವೈ ತತ್ ॥೧೩॥
ನಮ್ಮ ಹೃದಯದಲ್ಲಿ ಕಾಣುವ ಅಂಗುಷ್ಠಾಕಾರದ ಭಗವಂತನ ರೂಪ ಹೊಗೆ ಇರದ ದೀಪದ ಶಿಖೆಯಂತೆ. ಅತ್ಯಂತ ಪರಿಶುದ್ಧವಾದ, ದೋಷದ ಸ್ಪರ್ಶವೇ ಇಲ್ಲದ ಭಗವಂತನೆಂಬ ಬೆಳಕನ್ನು ಅಂತರಂಗದಲ್ಲಿ ಮನನ ಮಾಡುವುದರಿಂದ ಕಾಣಬಹುದು. ಈ ಸಂಸಾರದಲ್ಲಿರುವಾಗ ಹಾಗೂ ನಾಳೆ ಈ ಸಂಸಾರದಿಂದ ಪಾರಾಗಿ ಮೋಕ್ಷವನ್ನು ಸೇರಿದಾಗಲೂ, ಎಲ್ಲರಿಗೂ ಆತನೇ ಗತಿ. “ನೀನು ತಿಳಿಯಲು ಬಯಸಿರುವ ನಮ್ಮೆಲ್ಲರ ಸ್ವಾಮಿ-ಈ ಭಗವಂತ” ಎನ್ನುತ್ತಾನೆ ಯಮ.
No comments:
Post a Comment