ಅರಣ್ಯೋರ್ನಿಹಿತೋ ಜಾತವೇದಾ ಗರ್ಭ ಇವ ಸುಭೃತೋ ಗರ್ಭಿಣೀಭಿಃ ।
ದಿವೇ ದಿವೇ ಈಡ್ಯೋ ಜಾಗೃವದ್ಭಿರ್ಹವಿಷ್ಮದ್ಭಿರ್ಮನುಷ್ಯೇಭಿರಗ್ನಿಃ । ಏತದ್ವೈ ತತ್ ॥೮॥
ಭಗವಂತನ ಬಗೆಗೆ
ಅಪೂರ್ವವಾದ ವಿಷಯಗಳನ್ನು ಹೇಳಿದ ಯಮ, ಇಲ್ಲಿ ಒಂದು ವಿಶೇಷವಾದ ಸಂಗತಿಯನ್ನು ಒಂದು ದೃಷ್ಟಾಂತದ
ಮೂಲಕ ವಿವರಿಸಿದ್ದಾನೆ. ಹಿಂದಿನ ಕಾಲದಲ್ಲಿ ಯಜ್ಞ ಮಾಡುವಾಗ ಅರಣೀ ಕಾಷ್ಠವನ್ನು ವಿಶೇಷವಾಗಿ ಮಥನ
ಮಾಡಿ ಅದರಿಂದ ಬೆಂಕಿಯನ್ನು ತೆಗೆದು ಅಗ್ನಿಪ್ರತಿಷ್ಠೆ ಮಾಡುತ್ತಿದ್ದರು. ಈ ವಿಚಾರವನ್ನು
ಸೂಕ್ಷ್ಮವಾಗಿ ನೋಡಿದರೆ: ಅರಣೀ ಕಾಷ್ಠದಲ್ಲಿ ಅಗ್ನಿ ಇದೆ, ಆದರೆ ಅದು ಮಥನ ಮಾಡದೇ ನಮಗೆ
ಗೋಚರವಾಗುವುದಿಲ್ಲ. ಅದೇ ರೀತಿ ಭಗವಂತ. ಗುರು ಮತ್ತು ಶಿಷ್ಯರು ನಿರಂತರ ಶಾಸ್ತ್ರಾರ್ಥ ಮಥನ
ಮಾಡದೇ ಆತ ಗೋಚರನಾಗುವುದಿಲ್ಲ. ಸರ್ವಜ್ಞನಾದ ಭಗವಂತ ವೇದ ಮಂತ್ರಗಳ ಅರ್ಥವನ್ನು ಬಲ್ಲ ಗುರು
ಶಿಷ್ಯರ(ರಣ=ಶಬ್ದ=ವೇದಮಂತ್ರಗಳು; ಆರ್ಯರು=ಬಲ್ಲವರು; ಅರಣೀಗಳು=ವೇದ ಮಂತ್ರವನ್ನು ಬಲ್ಲವರು)
ಶಾಸ್ತ್ರಾರ್ಥ ಮಥನದಿಂದ ಮೂಡಿಬರುತ್ತಾನೆ.
ಬೆಂಕಿ
ಉತ್ಪತ್ತಿಯಾಗುವಾಗ ಹೇಗೆ ಮೊದಲು ಹೊಗೆ, ನಂತರ ಕಿಡಿ, ಆನಂತರ ಬೆಂಕಿಯೋ, ಅದೇ ರೀತಿ
ಒಮ್ಮಿಂದೊಮ್ಮೆಗೆ ಭಗವಂತ ಪ್ರತ್ಯಕ್ಷನಾಗಿ ಕಾಣಲಾರ. ಆದರೆ ಆತನ ಇರವು ತಿಳಿಯುತ್ತದೆ. ಉದಾಹರಣೆಗೆ
ಹೇಗೆ ಒಬ್ಬ ಗರ್ಭಿಣಿ ಹೆಣ್ಣಿನ ಹೊಟ್ಟೆಯನ್ನು ಬಾಹ್ಯವಾಗಿ ನೋಡಿ ಅಲ್ಲಿ ಬೆಳೆಯುತ್ತಿರುವ
ಮಗುವನ್ನು ಗುರುತಿಸಬಹುದೋ ಹಾಗೇ ಶಾಸ್ತ್ರ ಮಥನದಿಂದ ಭಗವಂತನ ಇರವಿನ ಅರಿವು
ಗಟ್ಟಿಗೊಳ್ಳುತ್ತದೆ ಮತ್ತು ಖಚಿತವಾಗುತ್ತದೆ. ಚಿಂತನಶೀಲರಾದ ಜೀವರು(ಮನುಷ್ಯ/ಮನನಶೀಲ) ಅನುದಿನವೂ ಜ್ಞಾನ
ಮಾರ್ಗದ ಉಪಾಸನೆಯ ಮೂಲಕ ಮತ್ತು ಯಜ್ಞರೂಪವಾದ ಕರ್ಮದ ಮೂಲಕ ಭಗವಂತನನ್ನು ಆರಾಧಿಸಬೇಕು. ಒಂದು ಜ್ಞಾನಯಜ್ಞ
ಹಾಗೂ ಇನ್ನೊಂದು ಕರ್ಮಯಜ್ಞ.
ಇಲ್ಲಿ ವಿಶೇಷವಾಗಿ
ಜ್ಞಾನಯಜ್ಞ ಮತ್ತು ಕರ್ಮಯಜ್ಞವನ್ನು ಜೊತೆ-ಜೊತೆಯಾಗಿ ಹೇಳಿರುವುದನ್ನು ನಾವು ಗಮನಿಸಬೇಕು.
ನಮ್ಮಲ್ಲಿ ಅನೇಕ ವಾದಗಳಿವೆ. ಕೇವಲ ಕರ್ಮಾನುಷ್ಠಾನದಿಂದಲೇ ಭಗವಂತನನ್ನು ಒಲಿಸಬಹುದು ಎನ್ನುವುದು
ಒಂದು ವಾದ; ಜ್ಞಾನವಿಲ್ಲದೆ ಕರ್ಮದಿಂದ ದೇವರು ಒಲಿಯುವುದಿಲ್ಲ ಎನ್ನುವುದು ಇನ್ನೊಂದು ವಾದ.
ಜ್ಞಾನ ಒಂದೇ ಸಾಕು, ಕರ್ಮ ಬೇಡವೇ ಬೇಡ ಅಥವಾ ಜ್ಞಾನಿಗಳಿಗೆ ಕರ್ಮ ಮಾಡಲು ಸಾಧ್ಯವಿಲ್ಲ ಎನ್ನುವುದು
ಮತ್ತೊಂದು ವಾದ. ಕೃಷ್ಣ ಈ ರೀತಿಯ ವಾದಗಳಿಗೆ ಗೀತೆಯಲ್ಲಿ ಸ್ಪಷ್ಟವಾದ ಉತ್ತರ ಕೊಟ್ಟಿದ್ದಾನೆ.
ಜ್ಞಾನಪೂರ್ವಕವಾದ ಕರ್ಮವೇ-ಕರ್ಮ. ನಾವು ಏನೇ ಮಾಡುವುದಿದ್ದರೂ ತಿಳಿದು ಮಾಡಬೇಕು. ಜ್ಞಾನ ಬಂದ
ಮೇಲೆ ಕರ್ಮ ಬೇಡ ಎನ್ನುವುದು ಅಸಂಗತ. ಜ್ಞಾನಿಗಳು ಮಾಡುವ ಕರ್ಮವೇ ಹೆಚ್ಚು ಸಾರ್ಥಕ. ಜ್ಞಾನಿಗಳು
ಕರ್ಮ ಮಾಡದಿದ್ದರೆ ಅವರನ್ನು ಅನುಸರಿಸುವ ಸಮಾಜ ತಪ್ಪು ದಾರಿ ಹಿಡಿಯುವ ಅಪಾಯ ಕೂಡಾ ಇದೆ. ಭಗವಂತನ ಬಗೆಗೆ ಎಚ್ಚರವಾದವರು, ಭಗವಂತನ ಬಗೆಗಿನ ಎಚ್ಚರದ ಪ್ರಜ್ಞೆಯಿಂದ ಕರ್ಮ ಮಾಡುವವರು, ಕರ್ಮವೆಲ್ಲವೂ ಭಗವದ್ ಅರ್ಪಿತ ಎಂದು ಕರ್ಮ ಮಾಡುವವರು ಉಪಾಸನೆ ಮಾಡುವುದು ಈ ‘ಅಗ್ನಿಃ’ ನಾಮಕ ಭಗವಂತನನ್ನು.
ಇಲ್ಲಿ ಭಗವಂತನನ್ನು ‘ಅಗ್ನಿಃ’ ಎನ್ನುವ ನಾಮದಿಂದ ಸಂಬೋಧಿಸಿದ್ದಾರೆ. ಇದು ಹಿಂದಿನ ಶ್ಲೋಕದಲ್ಲಿ ಹೇಳಿರುವ ‘ಅದಿತಿ’ ಎನ್ನುವ ಅರ್ಥವನ್ನೂ ಕೊಡುತ್ತದೆ. ಅಗ್ನಿ ಎಂದರೆ : ಎಲ್ಲಕ್ಕಿಂತ ಎತ್ತರದಲ್ಲಿರುವವನು, ಎಲ್ಲಕ್ಕಿಂತ ಮೊದಲು ಪೂಜಿಸಲ್ಪಡುವವನು, ಎಲ್ಲಕ್ಕಿಂತ ಎತ್ತರಕ್ಕೆ ನಮ್ಮನ್ನು ಕೊಂಡೊಯ್ಯುವವನು, ಇಂದ್ರಿಯಗಳನ್ನು ನಿಯಂತ್ರಿಸುವವನು(ಅಗನಿ), ಚಲಿಸಲಾಗದ ಇಡೀ ವಿಶ್ವಕ್ಕೆ ಚಾಲನ ಶಕ್ತಿ ಕೊಟ್ಟು ನಡೆಸುವವನು, ಎಲ್ಲಕ್ಕಿಂತ ಮೊದಲಿನವನು, ಇತ್ಯಾದಿ. “ನೀನು ಯಾವುದನ್ನು ತಿಳಿಯಬೇಕು ಎಂದು ಪ್ರಶ್ನೆ ಹಾಕಿದೆಯೋ ಆ ಭಗವದ್ ತತ್ವ ಇದೇ” ಎನ್ನುತ್ತಾನೆ ಯಮ.
ಇಲ್ಲಿ ಭಗವಂತನನ್ನು ‘ಅಗ್ನಿಃ’ ಎನ್ನುವ ನಾಮದಿಂದ ಸಂಬೋಧಿಸಿದ್ದಾರೆ. ಇದು ಹಿಂದಿನ ಶ್ಲೋಕದಲ್ಲಿ ಹೇಳಿರುವ ‘ಅದಿತಿ’ ಎನ್ನುವ ಅರ್ಥವನ್ನೂ ಕೊಡುತ್ತದೆ. ಅಗ್ನಿ ಎಂದರೆ : ಎಲ್ಲಕ್ಕಿಂತ ಎತ್ತರದಲ್ಲಿರುವವನು, ಎಲ್ಲಕ್ಕಿಂತ ಮೊದಲು ಪೂಜಿಸಲ್ಪಡುವವನು, ಎಲ್ಲಕ್ಕಿಂತ ಎತ್ತರಕ್ಕೆ ನಮ್ಮನ್ನು ಕೊಂಡೊಯ್ಯುವವನು, ಇಂದ್ರಿಯಗಳನ್ನು ನಿಯಂತ್ರಿಸುವವನು(ಅಗನಿ), ಚಲಿಸಲಾಗದ ಇಡೀ ವಿಶ್ವಕ್ಕೆ ಚಾಲನ ಶಕ್ತಿ ಕೊಟ್ಟು ನಡೆಸುವವನು, ಎಲ್ಲಕ್ಕಿಂತ ಮೊದಲಿನವನು, ಇತ್ಯಾದಿ. “ನೀನು ಯಾವುದನ್ನು ತಿಳಿಯಬೇಕು ಎಂದು ಪ್ರಶ್ನೆ ಹಾಕಿದೆಯೋ ಆ ಭಗವದ್ ತತ್ವ ಇದೇ” ಎನ್ನುತ್ತಾನೆ ಯಮ.
ಯತಶ್ಚೋದೇತಿ ಸೂರ್ಯೋಽಸ್ತಂ ಯತ್ರ ಚ ಗಚ್ಛತಿ ।
ತಂ ದೇವಾಃ ಸರ್ವೇ ಅರ್ಪಿತಾಸ್ತದು ನಾತ್ಯೇತಿ ಕಶ್ಚನ । ಏತದ್ವೈ ತತ್ ॥೯॥
ಹಿಂದಿನ ಶ್ಲೋಕದಲ್ಲಿ
‘ಮನುಷ್ಯ’ ಎನ್ನುವ ಪದವನ್ನು ಬಳಸಿರುವುದನ್ನು ನೋಡಿದ್ದೇವೆ. ಈ ಹಿಂದೆ ವಿವರಿಸಿದಂತೆ ಇಲ್ಲಿ ಮನುಷ್ಯರು
ಎಂದರೆ ಮನನದಿಂದ ಭಗವಂತನನ್ನು ತಿಳಿದವರು. ಆದ್ದರಿಂದ ಭಗವಂತ ದೇವತೆಗಳು, ಮಾನವರು, ಎಲ್ಲರಿಂದಲೂ
ಸ್ತುತ್ಯನಾದವನು. ಇಲ್ಲಿ ನಮಗೆ “ಏಕೆ ದೇವತೆಗಳು ಭಗವಂತನನ್ನು ಸ್ತೋತ್ರ ಮಾಡುತ್ತಾರೆ” ಎನ್ನುವ ಪ್ರಶ್ನೆ
ಬರಬಹುದು. ಈ ಪ್ರಶ್ನೆಗೆ ಉತ್ತರ ರೂಪವಾಗಿ ಯಮ ತನ್ನ ತಂದೆಯಾದ ಸೂರ್ಯನನ್ನು ದೃಷ್ಟಾಂತವಾಗಿ ಬಳಸಿ,
ಭಗವಂತನ ಮಹತ್ವವನ್ನು ವಿವರಿಸಿದ್ದಾನೆ.
ನಾವು ಪ್ರತೀದಿನ ಸೂರ್ಯೋದಯ
ಮತ್ತು ಸೂರ್ಯಾಸ್ತವನ್ನು ಕಾಣುತ್ತೇವೆ. ಯಾರು ಈ ಪ್ರಪಂಚಕ್ಕೆ ಇಂತಹ ನಿರ್ದಿಷ್ಟ ಚಲನೆ ಕೊಟ್ಟವರು?
ಗ್ರಹ-ಗೋಲಗಳು ಇಷ್ಟೊಂದು ಗಣಿತಬದ್ಧವಾಗಿ ಚಲಿಸುವಂತೆ ವ್ಯವಸ್ಥೆ ಮಾಡಿದವನು ಯಾರು?
ಅವನೇ ಸರ್ವ ನಿಯಾಮಕ ಭಗವಂತ. ಪುರುಷಸೂಕ್ತದಲ್ಲಿ ಹೇಳುವಂತೆ: ಚಕ್ಷೋಃ ಸೂರ್ಯೋ ಅಜಾಯತ(೧೩)-
ಅಂದರೆ ಸೃಷ್ಟಿ ಕಾಲದಲ್ಲಿ ಸೂರ್ಯ ಭಗವಂತನ ಕಣ್ಣಿನಿಂದ
ಹುಟ್ಟಿದ. ಅದೇ ರೀತಿ ಪ್ರಳಯ ಕಾಲದಲ್ಲಿ ಆತ ಭಗವಂತನ ಉದರವನ್ನು ಸೇರುತ್ತಾನೆ. ಕೇವಲ ಸೂರ್ಯನಷ್ಟೇ
ಅಲ್ಲ, ಸಮಸ್ತ ದೇವತೆಗಳೂ ಕೂಡ ಭಗವಂತನ ನಿಯತಿಗೊಳಪಟ್ಟಿದ್ದಾರೆ. ಆತನ ನಿಯತಿಯನ್ನು ಯಾರೂ ಮೀರಲು ಸಾಧ್ಯವಿಲ್ಲ.
“ಈ ವಿಶ್ವದ ಚಲನೆಗೆ ಯಾರು ಕಾರಣನೋ, ಎಲ್ಲಾ ದೇವತೆಗಳು ಯಾರನ್ನು ಆಶ್ರಯಿಸಿಕೊಂಡಿದ್ದಾರೋ, ಅವನೇ ನೀನು
ತಿಳಿಯಲು ಬಯಸಿರುವ ಪರತತ್ವ” ಎನ್ನುತ್ತಾನೆ ಯಮ.
No comments:
Post a Comment