ಕಠೋಪನಿಷತ್

ಕಠೋಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ.

ಅಗ್ನಿಹೋತ್ರದ ಮಹತ್ವವೇನು? ಅದರ ಹಿಂದಿನ ವಿಜ್ಞಾನವೇನು? ಜೀವ ಅನ್ನುವುದು ಇದೆಯೋ? ಸತ್ತಮೇಲೆ ಜೀವಕ್ಕೆ ಅಸ್ತಿತ್ವವಿದೆಯೋ? ಪರಲೋಕ ಎನ್ನುವುದೊಂದಿದೆಯೋ? ಜೀವನಿಗಿಂತ ಬೇರೆಯಾಗಿ ದೇವರು ಇದ್ದಾನೆಯೇ? ಭಗವಂತ ನಮ್ಮನ್ನು ಸಂಸಾರದಲ್ಲಿ ಮಾತ್ರ ನಿಯಮಿಸುವುದೋ ಅಥವಾ ಮೋಕ್ಷದಲ್ಲೂ ಆತನ ನಿಯಂತ್ರಣವಿದೆಯೋ? ಮೋಕ್ಷಕ್ಕೆ ಹೋದ ಜೀವದ ಇರವು ಹೇಗಿರುತ್ತದೆ? ಮೋಕ್ಷಕ್ಕೆ ಹೋದ ಮೇಲೆ ಏನಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕಠೋಪನಿಷತ್ತು.
Katha Upanishad in Kannada. Reference: Upanishad discourse by Poojya Bannanje Govindacharya

Download pdf: e-Book

Thursday, July 5, 2012

Kathopanishad in Kannada Chapter-01 Canto-03 Shloka 1-4


ವಲ್ಲೀ-೩

ಋತಂ ಪಿಬಂತೌ ಸುಕೃತಸ್ಯ ಲೋಕೇ  ಗುಹಾಂ ಪ್ರವಿಷ್ಟೌ ಪರಮೇ ಪರಾರ್ಧೇ
ಛಾಯಾತಪೌ ಬ್ರಹ್ಮವಿದೋ ವದಂತಿ ಪಂಚಾಗ್ನಯೋ ಯೇ ಚ ತ್ರಿಣಾಚಿಕೇತಾಃ

ಈ ಶ್ಲೋಕದಲ್ಲಿ “ಗುಹಾಂ ಪ್ರವಿಷ್ಟೌ” ಎಂದರೆ ಗುಹೆಯ ಒಳಗೆ  ಇಬ್ಬರಿದ್ದಾರೆ ಎಂದರ್ಥ. ಈ ಇಬ್ಬರು ಯಾರು ಎನ್ನುವುದನ್ನು ಉಪನಿಷತ್ತು ಎಲ್ಲೂ ಸ್ಪಷ್ಟವಾಗಿ ಹೇಳುವುದಿಲ್ಲ. ಹಾಗಾಗಿ ಹೆಚ್ಚಿನವರು ಈ ಶ್ಲೋಕವನ್ನು ಗೊಂದಲ ಮಾಡಿಕೊಳ್ಳುತ್ತಾರೆ.  ಈ ಮಂತ್ರ ನಿರ್ಣಯಕ್ಕಾಗಿ ವೇದವ್ಯಾಸರು ಒಂದು ಸೂತ್ರವನ್ನು ರಚಿಸಿದ್ದಾರೆ. ಅಲ್ಲಿ ಹೀಗೆ ಹೇಳಲಾಗಿದೆ : ಗುಹಾಂ ಪ್ರವಿಷ್ಟೌ ಆತ್ಮಾನೌ ತದ್ ದರ್ಶನಾತ್ (ವೇದಾಂತ ಸೂತ್ರ ೧.೨.೧೧). ಇದರಿಂದ ನಮಗೆ ಸ್ಪಷ್ಟವಾಗುವುದೇನೆಂದರೆ: ಹೃದಯ ಗುಹೆಯಲ್ಲಿ ಭಗವಂತ ಎರಡು ರೂಪದಲ್ಲಿ ನೆಲೆಸಿದ್ದಾನೆ ಎಂದು. ಶಾಸ್ತ್ರಕಾರರು ಹೇಳುವಂತೆ: ಆತ್ಮಾಂತರಾತ್ಮೇತಿ ಹರಿಃ ಏಕ ಏವ ದ್ವಿದಾಸ್ಥಿತಃ. ಅಂದರೆ ಭಗವಂತ ನಮ್ಮ ಹೃದಯ ಗುಹೆಯಲ್ಲಿ 'ಆತ್ಮ' ಮತ್ತು 'ಅಂತರಾತ್ಮ' ನಾಮಕನಾಗಿ ಎರಡು ರೂಪದಲ್ಲಿ ನೆಲೆಸಿದ್ದಾನೆ.
ಇಲ್ಲಿ ಗುಹೆ ಎಂದರೆ ನಮ್ಮ ಹೃದಯ ಗುಹೆ. ಅದು ಹೃತ್ಕಮಲ ಮಧ್ಯದಲ್ಲಿನ ಅನಾಹತ ಚಕ್ರ(thymus gland)ವೆಂಬ ಶಕ್ತಿ ಕೇಂದ್ರ. ಅಲ್ಲಿ ಜೀವಸ್ವರೂಪವನ್ನು ಧಾರಣೆ ಮಾಡಿಕೊಂಡು ಜೀವಸ್ವರೂಪದ ಹೊರಗೆ ಆತ್ಮ ನಾಮಕನಾಗಿ,  ಮತ್ತು  ಜೀವ ಸ್ವರೂಪದ ಒಳಗೆ ಅಂತರಾತ್ಮ ನಾಮಕನಾಗಿ ಭಗವಂತ ನೆಲೆಸಿದ್ದಾನೆ. ಆತ ಎಲ್ಲಾ ಯಥಾರ್ಥ ಕ್ರಿಯೆಗಳಿಂದ ಬರುವ ಪುಣ್ಯಫಲ ಮತ್ತು ಆನಂದವನ್ನು ಪಾನ ಮಾಡಿಕೊಂಡು, ಇಂದ್ರಿಯಗಳ ಅನುಭವವನ್ನು ಸುಖಮಯನಾಗಿ ಆಸ್ವಾಧಿಸಿಕೊಂಡು, ಆ ಆನಂದದ ಭಾಗವನ್ನು ನಮಗೂ ಪಾನ ಮಾಡಿಸುತ್ತಾ ನೆಲೆಸಿದ್ದಾನೆ. ಪುಣ್ಯ ಫಲವಾಗಿ ಬಂದಿರುವ ಮನುಷ್ಯ ಶರೀರ ಭಗವಂತನ ಮನೆ. ಅಲ್ಲಿ ದೇಹದ ಮಧ್ಯಭಾಗವಾದ ಹೃತ್ಕಮಲ ಭಗವಂತನ ಅಂತಃಪುರ. ಅದು ಆತನ ವಾಸಸ್ಥಾನ.
ಈ ಶ್ಲೋಕವನ್ನು ಉಪಾಸನೆಯ ಇನ್ನೊಂದು ಮುಖದಲ್ಲಿ ನೋಡಬಹುದು. ಪುಣ್ಯದಿಂದ ನಿರ್ಮಿತವಾದ ಶರೀರ ಎಂದರೆ ಪ್ರಾಣದೇವರು. ಜೀವನ ಜೊತೆಗೆ ಪ್ರಾಣ ತತ್ವವಿದೆ. ಆ ಪ್ರಾಣತತ್ವದ ಒಳಗೆ ಭಗವಂತ ಎರಡು ರೂಪದಲ್ಲಿ ನೆಲೆಸಿದ್ದಾನೆ. ಇಂತಹ ಭಗವಂತನ ಎರಡು ರೂಪಗಳನ್ನು ಜ್ಞಾನಿಗಳು ಛಾಯ ಮತ್ತು ಆತಪ ಎಂದು ಕರೆದಿದ್ದಾರೆ. ಅಂದರೆ ನೆರಳು ಮತ್ತು ಬಿಸಿಲು  ಅಥವಾ ಕತ್ತಲು ಮತ್ತು ಬೆಳಕು. ಭಗವಂತ ಜ್ಞಾನಿಗಳಿಗೆ ಬೆಳಕು, ಸಂಸಾರ ತಾಪದಿಂದ ಒದ್ದಾಡುತ್ತಿರುವವರಿಗೆ ನೆರಳು.   ಆತ ಭಕ್ತರಿಗೆ ನೆರಳು, ಅಭಕ್ತರಿಗೆ ಕತ್ತಲು.
ನಮ್ಮ ದೇಹದಲ್ಲಿ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು  ಸಮಾನ ನಾಮಕನಾಗಿರುವ ಪ್ರಾಣತತ್ವದಲ್ಲಿ ಭಗವಂತ ಪಂಚಾತ್ಮಕ (ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ, ನಾರಾಯಣ) ರೂಪನಾಗಿ ನೆಲೆಸಿದ್ದಾನೆ. ದೇಹದ ಹೊರಗೆ ಉಪಾಸನೆ ಮಾಡುವ ಪಂಚ ಯಾಗಾಗ್ನಿ  (ಗಾರ್ಹಪತ್ಯ, ಆಹವನೀಯ, ದಕ್ಷಿಣಾಗ್ನಿ, ಸಭ್ಯ, ಅವಸಥ್ಯ)ಯಲ್ಲಿ ಪಂಚರೂಪನಾಗಿ ಭಗವಂತ ನೆಲೆಸಿದ್ದಾನೆ.
ನಮ್ಮ ಹೃದಯ ಗುಹೆಯಲ್ಲಿ ನೆಲೆಸಿರುವ ಭಗವಂತನೇ ಅಗ್ನಿಮುಖದಲ್ಲಿ ಉಪಾಸನೆ ಮಾಡುವವರಿಗೆ ಹಾಗೂ ಎಲ್ಲರಿಗೂ ಆಶ್ರಯಧಾತ. ಅದುವೇ ಎಲ್ಲೆಡೆ ತುಂಬಿರುವ ನಾಶವಿಲ್ಲದ ಪರತತ್ವ. ಅಂತಹ ಪರತತ್ವದ ಬಗೆಗೆ “ನನಗೆ ತಿಳಿದಿರುವುದರಲ್ಲಿ ನಿನಗೆ ಗ್ರಹಣ ಮಾಡಲು ಸಾಧ್ಯವಾಗುವಷ್ಟನ್ನು ಹೇಳುತ್ತೇನೆ” ಎಂದಿದ್ದಾನೆ ಯಮ.

                  ಯಃ ಸೇತುರೀಜಾನಾನಾಮಕ್ಷರಂ ಬ್ರಹ್ಮಯತ್ ಪರಮ್
                  ಅಭಯಂ ತಿತೀರ್ಷತಾಂ ಪಾರಂ ನಾಚಿಕೇತಂ ಶಕೇಮಹಿ     

ಯಾರು ಸಂಸಾರ ಸಾಗರದ ಸೇತುವೆಯೋ, ಯಾರನ್ನು ‘ಅಕ್ಷರ’, ‘ಪರಬ್ರಹ್ಮ’ ಎಂದು ಶ್ರುತಿಗಳು ಹೇಳುತ್ತವೋ, ಅವನೇ ಎರಡು ರೂಪದಲ್ಲಿ ನಮ್ಮ ಹೃದಯ ಗುಹೆಯಲ್ಲಿ ನೆಲೆಸಿರುವವನು. ನಮ್ಮ  ಭಯವನ್ನು ಪರಿಹರಿಸುವವ ಆ ಭಗವಂತನೊಬ್ಬನೇ. ಅವನನ್ನು ಮೋಕ್ಷದಲ್ಲಿ ಸೇರಿದಾಗ ಜೀವ 'ಅಭಯ'ವನ್ನು ಪಡೆಯುತ್ತಾನೆ. ಭಯಕಾರಕವಾದ, ಅಜ್ಞಾನದಿಂದ ತುಂಬಿದ ಈ ಸಂಸಾರವೆಂಬ ಕಡಲನ್ನು ದಾಟಬಯಸುವವರಿಗೆ ಆಚೆಯ ದಡ ಆ ಭಗವಂತ.
ಯಾರು ನಮ್ಮೊಳಗೆ ಆತ್ಮ-ಅಂತರಾತ್ಮಾ ನಾಮಕನಾಗಿ ಎರಡು ರೂಪದಲ್ಲಿ ನೆಲೆಸಿದ್ದಾನೋ, ಯಾರು ಪಂಚಾಗ್ನಿಯಲ್ಲಿ ಉಪಾಸನೆ ಮಾಡುವವರಿಗೆ ಸನ್ನಿಹಿತನಾಗುತ್ತಾನೋ, ಯಾರು ನಾಚಿಕೇತಾಗ್ನಿಯಲ್ಲಿ ಹವನ ಮಾಡುವವರಲ್ಲಿ ಉಪಾಸ್ಯನಾಗಿದ್ದಾನೋ, ಅಂತಹ ಭಗವಂತನ ಬಗೆಗೆ ನಿನಗೆ ಎಷ್ಟು ಜೀರ್ಣಿಸಿಕೊಳ್ಳಲು ಸಾಧ್ಯವೋ ಅಷ್ಟನ್ನು ಹೇಳುತ್ತೇನೆ ಎನ್ನುತ್ತಾನೆ ಯಮ.  

                    ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವ ಚ
                    ಬುದ್ಧಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ ಚ              

                    ಇಂದ್ರಿಯಾಣಿ ಹಯಾನಾಹುರ್ವಿಷಯಾಂಸ್ತೇಷು ಗೋಚರಾನ್
                    ಆತ್ಮೇಂದ್ರಿಯಮನೋಯುಕ್ತಂ ಭೋಕ್ತೇತ್ಯಾಹುರ್ಮನೀಷಿಣಃ

ಭಗವಂತನ ಸ್ವರೂಪದ ಚಿತ್ರಣವನ್ನು ಕೊಟ್ಟ ಯಮ, ಇಲ್ಲಿ ಭಗವಂತನ ಕಡೆಗೆ ಸಾಗುವ ಬಗೆಯನ್ನು ಸುಂದರವಾಗಿ ವಿವರಿಸಿದ್ದಾನೆ. “ ‘ಜೀವ’ ಭಗವಂತನ ಕಡೆಗೆ ಸಾಗುವ ಪಯಣಿಗ. ಸಾಧನಾ ಶರೀರವೇ ಅವನ  ರಥ” ಎನ್ನುತ್ತಾನೆ ಯಮ. ಇಲ್ಲಿ ಸಾಧನಾ ಶರೀರ ಎಂದರೆ ಮನುಷ್ಯ ಶರೀರ. ಮಾನವ ಜನ್ಮ ಬಾರದೇ, ಮರವೋ ಪ್ರಾಣಿಯೋ ಆಗಿ ಹುಟ್ಟಿದರೆ ಆ ಶರೀರ ಭಗವಂತನೆಡೆಗೆ ಸಾಗುವ ರಥವಾಗುವುದಿಲ್ಲ. ಆ ಶರೀರದ ಮೂಲಕ ಜೀವಕ್ಕೆ ಸಾಧನೆ ಸಾಧ್ಯವಿಲ್ಲ. ಹಾಗಾಗಿ ಮನುಷ್ಯ ಜನ್ಮ ಬಹಳ ಶ್ರೇಷ್ಠ ಜನ್ಮ. ಈ ಅರಿವು ಇಲ್ಲದ ನಾವು ಇಂದು ನಮಗೆ ಭಗವಂತ ನೀಡಿದ ಶ್ರೇಷ್ಠ ಜನ್ಮವನ್ನು ಯಾವುದೋ ಲೌಕಿಕ ವಿನೋದದಲ್ಲಿ ಕಳೆಯುತ್ತಾ ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ. ಇದರಿಂದಾಗಿ ನಮಗೆ ಭಗವಂತ ನೀಡಿದ ರಥವನ್ನು ನಾವು ಸರಿಯಾದ ದಿಕ್ಕಿನಲ್ಲಿ ಬಳಸುತ್ತಿಲ್ಲ. ಹೀಗೆ ಬೇಜವಾಬ್ಧಾರಿಯುತವಾಗಿ ಸಾಗುವ ಮನುಷ್ಯನ ಜೀವನ ಪ್ರಾಣಿ ಜೀವನಕ್ಕಿಂತ ಕಡೆ. ಭಗವಂತ ‘ನನ್ನೆಡೆಗೆ ಬಾ’ ಎಂದು ಕಳುಹಿಸಿಕೊಟ್ಟ ಈ ಶರೀರವೆಂಬ ರಥದಲ್ಲಿ ಕೂತು, ಭಗವಂತನೆಡೆಗೆ ಸಾಗಬೇಕು ಎನ್ನುವ ಸಂದೇಶವನ್ನು ಯಮ ನಚಿಕೇತನ ಮೂಲಕ ನಮಗೆ ನೀಡಿದ್ದಾನೆ.
ನಮ್ಮ ರಥ ದಾರಿ ತಪ್ಪದೇ ಸೇರಬೇಕಾದ ಗುರಿಯನ್ನು ತಲುಪಲು ನಮಗೆ ಒಬ್ಬ ಸಾರಥಿ ಬೇಕು. ನಮಗೆ ಆ ಸಾರಥಿಯನ್ನೂ ಕೂಡಾ ಭಗವಂತ ಕೊಟ್ಟಿದ್ದಾನೆ. "ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಣಯಿಸುವ ವಿವೇಕ ಪ್ರಜ್ಞೆಯೇ ಸಾರಥಿ ಹಾಗೂ ಮನಸ್ಸೇ ಕಡಿವಾಣ" ಎನ್ನುತ್ತಾನೆ ಯಮ.
ಭಗವಂತನೆಡೆಗೆ 'ಜೀವ' ಸಾಗಲು ಭಗವಂತ ಕೊಟ್ಟ ರಥಕ್ಕೆ ಐದು ಕುದುರೆಗಳು. ಎರಡು ಕಿವಿ, ಎರಡು ಕಣ್ಣು ಹಾಗೂ ಒಂದು ಬಾಯಿ-ಇವೇ ಆ ಐದು ಕುದುರೆಗಳು. ಶಬ್ದ, ರೂಪ ಮತ್ತು ಮಾತು ಈ ಕುದುರೆಗಳು ಮೇಯುವ ಹುಲ್ಲುಗಾವಲು. ಹಾಗಾಗಿ ನಾವು ನಮ್ಮ ಕಣ್ಣನ್ನು ಭಗವಂತನ ಕ್ಷೇತ್ರವನ್ನು ನೋಡುವುದಕ್ಕೆ ಉಪಯೋಗಿಸಬೇಕು, ಕಿವಿಯನ್ನು ಭಗವಂತನ ಮಹಿಮೆಯನ್ನು ಕೇಳಿ ತಿಳಿದುಕೊಳ್ಳುವುದಕ್ಕಾಗಿ ಹಾಗೂ ಮಾತು ಭಗವಂತನ ಮಹಿಮೆಯನ್ನು ಇನ್ನೊಬ್ಬರಿಗೆ ಹೇಳುವುದಕ್ಕಾಗಿ ಉಪಯೋಗಿಸಬೇಕು. 
ಈ ಶ್ಲೋಕದಲ್ಲಿ ನಾವು ಗಮನಿಸಬೇಕಾದ ಒಂದು ಅಂಶವೆಂದರೆ ಇಲ್ಲಿ ವಿವರಿಸಿದ ಇಂದ್ರಿಯಗಳು, ಮನಸ್ಸು, ಬುದ್ಧಿ ಎಂದರೆ ಅದರ ಅಭಿಮಾನಿ ದೇವತೆಗಳು ಕೂಡಾ ಹೌದು. ಉದಾಹರಣೆಗೆ ನಮ್ಮ ಮನಸ್ಸು. ಮನೋಭಿಮಾನಿಯಾದ ಶಿವನ ಅನುಗ್ರಹ ಇಲ್ಲದೇ ಏಕಾಗ್ರತೆ ಸಾಧ್ಯವಿಲ್ಲ. ಇಂದ್ರಿಯಾಭಿಮಾನಿಗಳಾದ ಸೂರ್ಯ ಚಂದ್ರರ ನೆರವಿಲ್ಲದೇ ಭಗವಂತನತ್ತ ಪಯಣ ಸಾಧ್ಯವಿಲ್ಲ. ಹಾಗಾಗಿ ದೇವತೆಗಳ ನೆರವಿನಿಂದ, ಸಾಧನಾ ಶರೀರವನ್ನು ಬಳಸಿ, ಭಗವಂತನತ್ತ ಪಯಣಿಸಬೇಕು ಎನ್ನುವುದು ಈ ಶ್ಲೋಕದ ಅಂತರಂಗದ ಇನ್ನೊಂದು ಅರ್ಥ.  
ನಮಗೆ ತಿಳಿದಂತೆ ಸಶರೀರವಾಗಿ ಭಗವಂತನನ್ನು ಸೇರಲು ಸಾಧ್ಯವಿಲ್ಲ. ಹಾಗಾಗಿ ಇಲ್ಲಿ ಯಮ ಹೇಳುತ್ತಾನೆ: ಭಗವಂತನ ಒಳಮನೆಯನ್ನು ಸೇರಲು ನಾವು ನಮ್ಮ ಆತ್ಮಸ್ವರೂಪವನ್ನೇ ರಥವನ್ನಾಗಿ ಬಳಸಬೇಕು ಎಂದು. ಇದು ನಾವು ಧ್ಯಾನದಲ್ಲಿ ತಿಳಿದಿರಬೇಕಾದ ಬಹಳ ಮುಖ್ಯ ವಿಚಾರ. ಇಂದ್ರಿಯಗಳ ಮೂಲಕ ಭಗವಂತನ ನಿರಂತರ ಚಿಂತನೆ, ಬುದ್ಧಿಯೆಂಬ  ಸಾರಥಿಯಿಂದ ಮನಸ್ಸನ್ನು ಏಕಾಗ್ರಗೊಳಿಸಿ, ಸಾಧನ ಶರೀರದ ಮೂಲಕ ಭಗವಂತನ ಧ್ಯಾನ ಮಾಡುತ್ತಾ, ಕೊನೆಗೆ ಭೌತಿಕವಾದ ಶರೀರದಿಂದಾಚೆಗೆ ಬಂದು ಜ್ಞಾನಾನಂದಸ್ವರೂಪಭೂತವಾದ ಇಂದ್ರಿಯದಿಂದ,  ಜ್ಞಾನಾನಂದಸ್ವರೂಪಭೂತನಾದ ಭಗವಂತನನ್ನು ಕಂಡು ಆತನನ್ನು ಸೇರಬೇಕು. ಮನಸ್ಸು-ಬುದ್ಧಿಯನ್ನು ದಾಟಿ, ತುರಿಯಾವಸ್ಥೆಯಲ್ಲಿ ಭಗವಂತನನ್ನು ಕಾಣುವುದೇ ನಿಜವಾದ ಸಾಕ್ಷಾತ್ಕಾರ. ಆತ್ಮಸ್ವರೂಪದಿಂದ ಭಗವಂತನ ಸ್ವರೂಪಾನಂದವನ್ನು ಅನುಭವಿಸುವವನೇ ನಿಜವಾದ ಭೋಕ್ತ. ಆದ್ದರಿಂದ ನಿಜವಾದ ಆನಂದದ ಭೋಗ ಸಿಗುವುದು ಭಗವಂತನ ಸಾಕ್ಷಾತ್ಕಾರವಾದಾಗ ಮತ್ತು ಮೋಕ್ಷ ಸ್ಥಿತಿಯಲ್ಲಿ  ಮಾತ್ರ.     

No comments:

Post a Comment