ಕಠೋಪನಿಷತ್

ಕಠೋಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ.

ಅಗ್ನಿಹೋತ್ರದ ಮಹತ್ವವೇನು? ಅದರ ಹಿಂದಿನ ವಿಜ್ಞಾನವೇನು? ಜೀವ ಅನ್ನುವುದು ಇದೆಯೋ? ಸತ್ತಮೇಲೆ ಜೀವಕ್ಕೆ ಅಸ್ತಿತ್ವವಿದೆಯೋ? ಪರಲೋಕ ಎನ್ನುವುದೊಂದಿದೆಯೋ? ಜೀವನಿಗಿಂತ ಬೇರೆಯಾಗಿ ದೇವರು ಇದ್ದಾನೆಯೇ? ಭಗವಂತ ನಮ್ಮನ್ನು ಸಂಸಾರದಲ್ಲಿ ಮಾತ್ರ ನಿಯಮಿಸುವುದೋ ಅಥವಾ ಮೋಕ್ಷದಲ್ಲೂ ಆತನ ನಿಯಂತ್ರಣವಿದೆಯೋ? ಮೋಕ್ಷಕ್ಕೆ ಹೋದ ಜೀವದ ಇರವು ಹೇಗಿರುತ್ತದೆ? ಮೋಕ್ಷಕ್ಕೆ ಹೋದ ಮೇಲೆ ಏನಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕಠೋಪನಿಷತ್ತು.
Katha Upanishad in Kannada. Reference: Upanishad discourse by Poojya Bannanje Govindacharya

Download pdf: e-Book

Saturday, July 21, 2012

Kathopanishad in Kannada Chapter-02 Canto-01 Shloka-04-07


ಸ್ವಪ್ನಾಂತಂ ಜಾಗರಿತಾಂತಂ ಚೋಭೌ ಯೇನಾನುಪಶ್ಯತಿ
ಮಹಾಂತಂ ವಿಭುಮಾತ್ಮಾನಂ ಮತ್ವಾ ಧೀರೋ ನ ಶೋಚತಿ

ಎಚ್ಚರ, ಕನಸು ಮತ್ತು ಎಚ್ಚರ-ಕನಸಿನ ಉಭಯಸ್ಥಿತಿ, ಈ ಎಲ್ಲಾ ಅವಸ್ಥೆಗಳೂ ಭಗವದಧೀನ. ಈ ವಿಶ್ವದಲ್ಲಿನ ಕೋಟಿ-ಕೋಟಿ ಜೀವಗಳ ಅವಸ್ಥೆಯನ್ನು ನಿಯಂತ್ರಿಸುವವ ಒಬ್ಬನೇ ಒಬ್ಬ ಭಗವಂತ. ಈ ರೀತಿ ಎಲ್ಲವನ್ನೂ ನಿಯಂತ್ರಿಸಬೇಕಾದರೆ ಆತ ಎಲ್ಲಾ ಕಡೆ ಇರಬೇಕು ಮತ್ತು ಎಲ್ಲರಿಗಿಂತ ಸಮರ್ಥನಾಗಿರಬೇಕು.  ಅದಕ್ಕಾಗಿ ಯಮ ಇಲ್ಲಿ ಭಗವಂತನನ್ನು “ಮಹಾಂತಂ ವಿಭುಃ” ಎಂದು ಸಂಬೋಧಿಸಿದ್ದಾನೆ. ಸರ್ವಸಮರ್ಥನೂ, ಸರ್ವೋತ್ಕೃಷ್ಟನೂ, ಸರ್ವವ್ಯಾಪಕನೂ ಆಗಿರುವ ಇಂತಹ ಆತ್ಮತತ್ವ ಭಗವಂತನನ್ನು ಯಾರು ತಿಳಿದುಕೊಳ್ಳುತ್ತಾನೋ, ಅವನು ಎಂದೂ ಜೀವನದಲ್ಲಿ ದುಃಖಕ್ಕೊಳಗಾಗುವುದಿಲ್ಲ. ಅವನಿಗೆ ಜೀವನದ ಎಲ್ಲಾ ಸಮಸ್ಯೆಯನ್ನು ಎದುರಿಸುವ ಧೈರ್ಯ ಬರುತ್ತದೆ. ಭಗವಂತ ದುಃಖ ಕೊಟ್ಟರೂ ಕೂಡಾ ಅದು ನನ್ನ ಉದ್ಧಾರಕ್ಕಾಗಿ ಎನ್ನುವ ಮನವರಿಕೆ(Conviction) ಆತನಲ್ಲಿರುತ್ತದೆ. ಭಗವಂತನ ಮೇಲೆ ಭರವಸೆ ಇರುವುದರಿಂದ ಅವನು ಎಂದೂ ದುಃಖಿತನಾಗುವುದಿಲ್ಲ.  

ಯ ಇಮಂ ಮಧ್ವದಂ ವೇದ ಆತ್ಮಾನಂ ಜೀವಮಂತಿಕಾತ್
ಈಶಾನಂ ಭೂತಭವ್ಯಸ್ಯ ನ ತತೋ ವಿಜುಗುಪ್ಸತೇ ಏತದ್ವೈ ತತ್

ಭಗವಂತ ನಮ್ಮ ಅಂತರ್ಯಾಮಿಯಾಗಿ ನಮ್ಮನ್ನು ನಿಯಮಿಸುವ ಸ್ವಾಮಿ. ಜೀವದ ಸಮೀಪದಲ್ಲೇ ಭಗವಂತನಿದ್ದರೂ ಸಹ ಆತನಿಗೆ ಯಾವುದೇ ದುಃಖದ ಲೇಪವಿಲ್ಲ. ಆತ ಎಲ್ಲಾ ಇಂದ್ರಿಯಗಳಲ್ಲಿದ್ದು, ಸದಾ ಆನಂದ ರಸವನ್ನು(ಮಧು) ಅನುಭವಿಸುತ್ತಿರುತ್ತಾನೆ. ಭಗವಂತ ಹಿಂದೆ, ಇಂದು ಹಾಗೂ ಮುಂದೆ ಎಂದೆಂದಿಗೂ ಜೀವದ ಜೊತೆಗೇ ನಿತ್ಯಸಂಗಾತಿಯಾಗಿದ್ದು, ಜೀವನನ್ನು ರಕ್ಷಿಸುತ್ತಿರುತ್ತಾನೆ. ಈ ಸತ್ಯವನ್ನು ತಿಳಿದವನು ತನ್ನನ್ನು ತಾನು ಮುಚ್ಚಿಡಲು(ಜಿಗುಪ್ಸ) ಬಯಸುವುದಿಲ್ಲ.  ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕು ಎಂದು ಭಯದಿಂದ ಬದುಕುವುದು ಅಜ್ಞಾನ. ಭಗವಂತ ಸದಾ ನನ್ನೊಂದಿಗಿದ್ದಾನೆ, ಅವನು ನನ್ನನ್ನು ರಕ್ಷಿಸುತ್ತಾನೆ ಎನ್ನುವ ಸತ್ಯ ತಿಳಿದಾಗ ಯಾವ ಭಯವೂ ಇಲ್ಲ. “ಯಾವ ಮುಕ್ತಿ ನಿಯಾಮಕ ಭಗವಂತನ ಬಗ್ಗೆ ನೀನು ತಿಳಿಯ ಬಯಸಿದ್ದೀಯೋ-ಅವನೇ ಇವನು” ಎನ್ನುತ್ತಾನೆ ಯಮ.

ಯಃ ಪೂರ್ವಂ ತಪಸೋ ಜಾತಮದ್ಭ್ಯಃ ಪೂರ್ವಮಜಾಯತ
ಗುಹಾಂ ಪ್ರವಿಶ್ಯ ತಿಷ್ಠಂತಂ ಯೋ ಭೂತೇಭಿರ್ವ್ಯಪಶ್ಯತ ಏತದ್ವೈ ತತ್

ಸೃಷ್ಟಿಯ ಆದಿಯಲ್ಲಿ,  ಪಂಚಭೂತಗಳ ಸೃಷ್ಟಿಗಿಂತಲೂ ಮೊದಲು, ಪಂಚಭೂತಗಳ ಅಭಿಮಾನಿ ಶಿವನಿಗಿಂತಲೂ ಮೊದಲು, ಜೀವಜಾತದಲ್ಲೇ ಸರ್ವಶ್ರೇಷ್ಠನಾದ ಚತುರ್ಮುಖನನ್ನು ಸೃಷ್ಟಿ ಮಾಡಿದವ ಆ ಭಗವಂತ. [ಉಪನಿಷತ್ತು ಮತ್ತು ಪುರಾಣಗಳಲ್ಲಿ ಶಿವನನ್ನು ತಪಸ್ಸು ಎಂದು ಕರೆಯುತ್ತಾರೆ]. ಭಗವಂತ ತಾನು ಸೃಷ್ಟಿಮಾಡಿದ ಸರ್ವ ಜೀವಜಾತಗಳ ಹೃದಯಗುಹೆಯಲ್ಲಿ ನೆಲೆಸಿದ. ಈ ರೀತಿ ನೆಲೆಸಿರುವ ಭಗವಂತ ತನ್ನನ್ನೇ ತಾನು ಕಾಣುತ್ತಾನೆ, ಆದರೆ ಇನ್ನೊಬ್ಬರಿಗೆ ಕಾಣಸಿಗುವುದಿಲ್ಲ.  “ಹೀಗೆ ಬ್ರಹ್ಮಾದಿ ದೇವತೆಗಳಿಂದ ಹಿಡಿದು, ಒಂದು ಹುಲ್ಲುಗರಿಯತನಕ ಸಮಸ್ತವನ್ನೂ ಸೃಷ್ಟಿಮಾಡಿ, ಜೀವದ ಹೃದಯಗುಹೆಯಲ್ಲಿ ಅಂತರ್ಯಾಮಿಯಾಗಿ ಪ್ರವೇಶಮಾಡಿ, ತನ್ನ ವೈಭವವನ್ನು ತಾನೇ ನೋಡುತ್ತಿರುವ ಭಗವಂತನೇ ನೀನು ಕೇಳಿರುವ ಪರತತ್ವ.” ಎನ್ನುತ್ತಾನೆ ಯಮ.

ಯಾ ಪ್ರಾಣೇನ ಸಂಭವತ್ಯದಿತಿರ್ದೇವತಾಮಯೀ
ಗುಹಾಂ ಪ್ರವಿಶ್ಯ ತಿಷ್ಠಂತೀಂ ಯಾ ಭೂತೇಭಿರ್ವ್ಯಜಾಯತ ಏತದ್ವೈ ತತ್

ಭಗವಂತ ಸೃಷ್ಟಿ ಮಾಡುವುದು ಮಾತ್ರವಲ್ಲ, ಸಂಹಾರ ಮಾಡುವವನೂ ಅವನೇ. ಇದು ಲೋಕ ರೂಢಿಗೂ ಭಗವಂತನಿಗೂ ಇರುವ ವ್ಯತ್ಯಾಸ. ಲೋಕದಲ್ಲಿ ನಾವು ನೆಟ್ಟ ಒಂದು ಗಿಡವನ್ನು ನಮ್ಮ ಕೈಯಾರೆ  ನಾಶ ಮಾಡಲು ನಮಗೆ ಇಷ್ಟವಾಗುವುದಿಲ್ಲ. ಆದರೆ ಭಗವಂತ ಯಾವುದೇ ಮೋಹವಿಲ್ಲದೆ ತಾನು ಸೃಷ್ಟಿಸಿದ್ದನ್ನು ಪ್ರಳಯ ಕಾಲದಲ್ಲಿ ತಾನೇ ನಾಶಮಾಡುತ್ತಾನೆ. ಇದಕ್ಕಾಗಿ ಇಲ್ಲಿ ಭಗವಂತನನ್ನು ‘ಅದಿತಿ’ ಎಂದು ಸ್ತ್ರೀ ರೂಪದಲ್ಲಿ ಹೇಳಿದ್ದಾರೆ.
ಅದಿತಿ ಎಂದರೆ ಎಲ್ಲವನ್ನೂ ತಿನ್ನುವವ ಎಂದರ್ಥ. ನಮ್ಮೊಳಗಿದ್ದು, ಸಮಸ್ತ ವಿಷಯಗಳನ್ನು ಅನುಭವಿಸುವವ ಮತ್ತು ಸಮಸ್ತ ವಿಶ್ವವನ್ನು ಸಂಹಾರ ಮಾಡುವ ಭಗವಂತ ‘ಅದಿತಿ’. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ-ಭಗವಂತನನ್ನು  ಸ್ತ್ರೀಲಿಂಗದಿಂದ ಸಂಬೋಧಿಸಿರುವುದು. ಲೋಕದಲ್ಲಿ ಕೆಲವೊಮ್ಮೆ ಪುಲ್ಲಿಂಗದಿಂದ ಹೆಣ್ಣನ್ನೂ, ಸ್ತ್ರೀಲಿಂಗದಿಂದ ಗಂಡನ್ನೂ ಸಂಬೋಧಿಸುತ್ತಾರೆ. ಉದಾಹರಣೆಗೆ ಸಂಸ್ಕೃತದಲ್ಲಿ  ಹೆಂಡತಿಯನ್ನು ‘ದಾರಾ’  ಎಂದು ಪುಲ್ಲಿಂಗ ಮತ್ತು ಬಹುವಚನದಿಂದ ಕರೆಯುತ್ತಾರೆ. ಇದು ಕೇವಲ ಶಬ್ದದ ಸ್ವಭಾವ ಮತ್ತು ವ್ಯಾಕರಣಕ್ಕೆ ಸಂಬಂಧಿಸಿದ ವಿಚಾರ. ಆದರೆ ಎಲ್ಲಾ ಲಿಂಗಗಳೂ ಸಾರ್ಥಕವಾಗುವುದು ಕೇವಲ ಭಗವಂತನಲ್ಲಿ ಮಾತ್ರ. ಏಕೆಂದರೆ ಭಗವಂತ ಪುರುಷರೂಪನೂ ಹೌದು, ಸ್ತ್ರೀ ರೂಪನೂ ಹೌದು. ಹಾಗಾಗಿ ಪುಲ್ಲಿಂಗ-ಸ್ತ್ರೀಲಿಂಗ ಶಬ್ದ ಅವನಲ್ಲಿ ಅನ್ವಯವಾಗುತ್ತದೆ. ಧನ್ವಂತರೀಯೂ ಅವನೇ, ಮೋಹಿನಿಯೂ ಅವನೇ. ಸ್ತ್ರೀಯರಲ್ಲಿ ಅಂತರ್ಯಾಮಿಯಾಗಿ ಬಿಂಬರೂಪದಲ್ಲಿ ಸ್ತ್ರೀರೂಪ, ಪುರುಷರಲ್ಲಿ ಅಂತರ್ಯಾಮಿಯಾಗಿ ಬಿಂಬರೂಪದಲ್ಲಿ  ಪುರುಷ ರೂಪನಾಗಿದ್ದಾನೆ ಭಗವಂತ.  ಇಲ್ಲಿ ‘ಅದಿತಿ’ ಎನ್ನುವ ಪದ ಸ್ತ್ರೀ ಲಿಂಗ. ಇದಕ್ಕೆ ಕಾರಣ ಭಗವಂತ ಸಂಹಾರ ಮಾಡಲು ಮಾಧ್ಯಮವಾಗಿ ಬಳಸುವುದು ತಾಯಿ ದುರ್ಗೆಯನ್ನು. ಸಂಹಾರಶಕ್ತಿಯಾಗಿ ದುರ್ಗೆಯಲ್ಲಿ ಸನ್ನಿಹಿತವಾದ ರೂಪವಾದ್ದರಿಂದ ಇಲ್ಲಿ ಸ್ತ್ರೀ ಲಿಂಗ ಬಳಕೆಯಾಗಿದೆ.
ಭಗವಂತನನ್ನು ನಪುಂಸಕ ಲಿಂಗದಿಂದಲೂ ವಾಚಿಸುತ್ತಾರೆ. ಅಂದರೆ ಭಗವಂತ ಸ್ತ್ರೀ-ಪುರುಷ ಅಲ್ಲದವನು ಎಂದರ್ಥವಲ್ಲ. ಸ್ತ್ರೀ-ಪುರುಷರಲ್ಲಿರುವ ಯಾವ ದೋಷವೂ ಭಗವಂತನಲ್ಲಿಲ್ಲ ಎನ್ನುವುದನ್ನು ನಪುಂಸಕ ವಾಚಕ ಪದ ಸೂಚಿಸುತ್ತದೆ. ಹೀಗೆ ಮೂರೂ ಲಿಂಗಗಳನ್ನು ಭಗವಂತನ ಪರವಾಗಿ ಮಾತ್ರ ಅನ್ವಯಿಸಬಹುದು. ಉದಾಹರಣೆಗೆ: ಗಾಯತ್ತ್ರಿ ಮಂತ್ರದಲ್ಲಿ ಸ್ತ್ರೀರೂಪದಲ್ಲಿ ಭಗವಂತನಿದ್ದಾನೆ. ಯಾವುದು ಸ್ತ್ರೀಲಿಂಗ ಶಬ್ದವಿದೆಯೋ ಅದು ಭಗವಂತನ ಸ್ತ್ರೀರೂಪ, ಪುಲ್ಲಿಂಗ ಶಬ್ದ ಭಗವಂತನ ಪುರುಷರೂಪ. ಇದನ್ನು ಸ್ಪಷ್ಟಪಡಿಸುವುದಕ್ಕೊಸ್ಕರವೇ ಹಿಂದಿನ ಶ್ಲೋಕದಲ್ಲಿ “ಗುಹಾಂ ಪ್ರವಿಶ್ಯ ತಿಷ್ಠಂತಂ” ಎಂದು ಪುಲ್ಲಿಂಗದಲ್ಲಿ ಹೇಳಿ, ಇಲ್ಲಿ  “ಗುಹಾಂ ಪ್ರವಿಶ್ಯ ತಿಷ್ಠಂತೀಂ” ಎಂದು ಸ್ತ್ರೀಲಿಂಗ ಪ್ರಯೋಗಿಸಿ ಹೇಳಿದ್ದಾರೆ.
ಯಮ ಹೇಳುತ್ತಾನೆ: “ಸೃಷ್ಟಿ –ಸಂಹಾರದಲ್ಲಿ ಭಗವಂತನ ನಿತ್ಯ ಸಂಗಾತಿಯಾಗಿ  ಪ್ರಾಣದೇವರಿರುತ್ತಾರೆ” ಎಂದು. ವಿಷ್ಣು ಸಹಸ್ರನಾಮದಲ್ಲಿ ಭಗವಂತನನ್ನು ವಾಯು ವಾಹನಃ ಎಂದು ಕರೆದಿರುವುದು ಇದಕ್ಕಾಗಿ. ಪ್ರಾಣ ದೇವರು ಭಗವಂತನ ಸಾರಥಿ ಇದ್ದಂತೆ.
ಸ್ತ್ರೀಯರಲ್ಲಿ ಸ್ತ್ರೀರೂಪದಲ್ಲಿ,  ಪುರುಷರಲ್ಲಿ ಪುರುಷ ರೂಪದಲ್ಲಿರುವ ಭಗವಂತ, ಪಂಚಭೂತಗಳನ್ನು ಸೃಷ್ಟಿ ಮಾಡಿ, ಪಂಚಭೂತಾತ್ಮಕವಾದ ಪ್ರಪಂಚದಲ್ಲಿ ತಾನು ಅವತಾರ ಮಾಡಿ, ನಾನಾ ವಿಧದ ಲೀಲೆಗಳನ್ನು ತೋರಿಸುತ್ತಾನೆ. ಯಾವುದು ಭೂಮಿಯಲ್ಲಿ ಅವತರಿಸಿ ನಾನಾ ಲೀಲೆಗಳನ್ನು ತೋರಿಸುತ್ತದೋ, ಯಾವುದು ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣವೋ, ಯಾವುದು ಸ್ತ್ರೀರೂಪದಲ್ಲಿ ಸ್ತ್ರೀಯರಲ್ಲಿ, ಪುರುಷರೂಪದಲ್ಲಿ ಪುರುಷರೊಳಗೆ ಅಂತರ್ಯಾಮಿಯಾಗಿದೆಯೋ, ಅದೇ ತತ್ವ ಮುಕ್ತಿ ನಿಯಾಮಕವಾದುದ್ದು. “ನಿನ್ನ ಪ್ರಶ್ನೆಗೆ ಉತ್ತರ ರೂಪವಾದ ಭಗವದ್ ತತ್ವ ಇದೇ” ಎನ್ನುತ್ತಾನೆ ಯಮ.

No comments:

Post a Comment