ಕಠೋಪನಿಷತ್

ಕಠೋಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ.

ಅಗ್ನಿಹೋತ್ರದ ಮಹತ್ವವೇನು? ಅದರ ಹಿಂದಿನ ವಿಜ್ಞಾನವೇನು? ಜೀವ ಅನ್ನುವುದು ಇದೆಯೋ? ಸತ್ತಮೇಲೆ ಜೀವಕ್ಕೆ ಅಸ್ತಿತ್ವವಿದೆಯೋ? ಪರಲೋಕ ಎನ್ನುವುದೊಂದಿದೆಯೋ? ಜೀವನಿಗಿಂತ ಬೇರೆಯಾಗಿ ದೇವರು ಇದ್ದಾನೆಯೇ? ಭಗವಂತ ನಮ್ಮನ್ನು ಸಂಸಾರದಲ್ಲಿ ಮಾತ್ರ ನಿಯಮಿಸುವುದೋ ಅಥವಾ ಮೋಕ್ಷದಲ್ಲೂ ಆತನ ನಿಯಂತ್ರಣವಿದೆಯೋ? ಮೋಕ್ಷಕ್ಕೆ ಹೋದ ಜೀವದ ಇರವು ಹೇಗಿರುತ್ತದೆ? ಮೋಕ್ಷಕ್ಕೆ ಹೋದ ಮೇಲೆ ಏನಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕಠೋಪನಿಷತ್ತು.
Katha Upanishad in Kannada. Reference: Upanishad discourse by Poojya Bannanje Govindacharya

Download pdf: e-Book

Friday, July 6, 2012

Kathopanishad in Kannada Chapter-01 Canto-03 Shloka 5-8


ಯಮನ ಈ ಎಲ್ಲಾ ವಿವರಣೆಯನ್ನು ಕೇಳಿದಾಗ ನಮ್ಮಲ್ಲಿ ಒಂದು ಪ್ರಶ್ನೆ ಮೂಡಬಹುದು. ಅದೇನೆಂದರೆ: ಈ ಹಿಂದೆ ಹೇಳಿದ ರಥ, ಸಾರಥಿ, ಕುದುರೆ, ಲಗಾಮು ಎಲ್ಲವೂ ಎಲ್ಲರಲ್ಲೂ ಇದ್ದರೂ ಕೂಡ, ಏಕೆ ಎಲ್ಲರಿಗೂ ಭಗವಂತನೆಡೆಗೆ  ಸಾಗಲು ಸಾಧ್ಯವಾಗುವುದಿಲ್ಲ? ಅದನ್ನು ಏಕೆ ನಾವು ಬೇರೆ ವ್ಯವಹಾರಕ್ಕಾಗಿ ಉಪಯೋಗಿಸಿ ಭಗವಂತನನ್ನು ಮರೆತುಬಿಡುತ್ತೇವೆ? ಈ ಪ್ರಶ್ನೆಗೆ ಯಮ ಮುಂದಿನ ಎರಡು  ಶ್ಲೋಕಗಳಲ್ಲಿ ಉತ್ತರಿಸಿದ್ದಾನೆ.   
 
ಯಸ್ತ್ವವಿಜ್ಞಾನವಾನ್ ಭವತ್ಯಯುಕ್ತೇನ ಮನಸಾ ಸದಾ
ತಸ್ಯೇಂದ್ರಿಯಾಣ್ಯವಶ್ಯಾನಿ ದುಷ್ಟಾಶ್ವಾ ಇವ ಸಾರಥೇಃ        

ಯಾರ ಮನಸ್ಸು ಬುದ್ಧಿಯ ಹಿಡಿತದಲ್ಲಿಲ್ಲವೋ, ಯಾರಿಗೆ ಸರಿಯಾದ ಬುದ್ಧಿಯೇ ಇಲ್ಲವೋ, ಅಂತವನ ಇಂದ್ರಿಯಗಳು ನಿಯಂತ್ರಣದಲ್ಲಿರುವುದಿಲ್ಲ. ಅವುಗಳ ನಡೆ ಪಳಗದ ಕೆಟ್ಟ ಕುದುರೆಗಳನ್ನು ರಥಕ್ಕೆ ಕಟ್ಟಿ  ಓಡಿಸಿದಾಗ ಹೇಗೆ ದಿಕ್ಕೆಟ್ಟು ಓಡುತ್ತವೋ  ಹಾಗಿರುತ್ತದೆ. ಕುದುರೆಗಳನ್ನು ನಿಯಂತ್ರಿಸಬೇಕು ಎನ್ನುವ ಅರಿವು, ಅದಕ್ಕೆ ಬೇಕಾದ ಸರಿಯಾದ ಕಡಿವಾಣ ಇಲ್ಲದೇ ಭಗವಂತನಡೆಗೆ ಪಯಣ ಅಸಾಧ್ಯ.  ಅಂದರೆ ಮನಸ್ಸು ಮತ್ತು ಬುದ್ಧಿ ನಮ್ಮ ನಿಯಂತ್ರಣದಲ್ಲಿಲ್ಲದಿದ್ದರೆ ಇಂದ್ರಿಯಗಳು ದಾರಿ ತಪ್ಪುತ್ತವೆ. ಹಾಗಾಗಿ ರಥ ಇದ್ದರೂ ಕೂಡ, ಆ ರಥದಲ್ಲಿ ಭಗವಂತನೆಡೆಗೆ ಸಾಗಲು ಸಾಧ್ಯವಾಗುವುದಿಲ್ಲ. ಸಾರಥಿ, ಕಡಿವಾಣ ಸರಿ ಇಲ್ಲದ ರಥವುಳ್ಳವನು ಅಧ್ಯಾತ್ಮ ಸಾಧನೆಯಲ್ಲಿ ಮುಂದೆ ಸಾಗಲಾರ.  

ಯಸ್ತು ವಿಜ್ಞಾನವಾನ್ ಭವತಿ ಯುಕ್ತೇನ ಮನಸಾ ಸದಾ
ತಸ್ಯೇಂದ್ರಿಯಾಣಿ ವಶ್ಯಾನಿ ಸದಶ್ವಾ ಇವ ಸಾರಥೇಃ                       

ಮೊದಲು ನಮ್ಮಲ್ಲಿ ಸರಿಯಾದ ಅರಿವು ಇರಬೇಕು. ವಿಶಿಷ್ಟವಾದ ಜ್ಞಾನವಿದ್ದು, ಯಾವುದು ಸರಿ ಯಾವುದು ತಪ್ಪು ಎಂದು ಅರ್ಥ ಮಾಡಿಕೊಂಡು ನಡೆಸುವಂತಹ ಒಬ್ಬ ಸಾರಥಿ ಯಾರಲ್ಲಿದ್ದಾನೆ ಮತ್ತು ಮನಸ್ಸು ಎನ್ನುವ ಕಡಿವಾಣದ ನಿಯಂತ್ರಣ ಯಾರಲ್ಲಿದೆ, ಅವರು ಸಾಧನಾ ಮಾರ್ಗದಲ್ಲಿ  ಉತ್ತಮವಾದ  ಪಳಗಿದ ಕುದುರೆಗಳನ್ನು ಹೊಂದಿದ ರಥಿಕನಂತೆ ಮುನ್ನೆಡೆಯಬಲ್ಲರು. ಹಾಗಾಗಿ ಅಧ್ಯಾತ್ಮದ ಸಾಧನೆಗೆ ಮೊದಲು ಬೇಕಾಗಿರುವುದು ವಿವೇಕ ಜ್ಞಾನ(ವಿಜ್ಞಾನ). ಯಾವುದು ಸರಿ ಯಾವುದು ತಪ್ಪು ಎಂದು ತಿಳಿದು ಸರಿಯಾದ ದಾರಿಯಲ್ಲೇ ಸಾಗಬೇಕು ಎನ್ನುವ ತೀರ್ಮಾನ ಮಾಡಿದಾಗ, ಪಳಗಿದ ಕುದುರೆಗಳಂತೆ ನಮ್ಮ ಇಂದ್ರಿಯ  ನಮ್ಮ ನಿಯಂತ್ರಣದಲ್ಲಿರುತ್ತವೆ.       

ಯಸ್ತ್ವವಿಜ್ಞಾನವಾನ್ ಭವತ್ಯಮನಸ್ಕಃ ಸದಾಽಶುಚಿಃ
ನ ಸ ತತ್ಪದಮಾಪ್ನೋತಿ ಸಂಸಾರಂ ಚಾಧಿಗಚ್ಛತಿ               

ಯಾರಲ್ಲಿ ವಿವೇಕಪ್ರಜ್ಞೆ ಇಲ್ಲ, ಶುದ್ಧವಾದ ಮನಸ್ಸಿಲ್ಲ, ಅವರು ಸದಾ ‘ಅಶುಚಿ’ ಎನ್ನುತ್ತಾನೆ ಯಮ. ನಾವು ನಮ್ಮ ಮನಸ್ಸಿನಲ್ಲಿ ಕೊಳೆ ತುಂಬಿಸಿಕೊಂಡು ಯಾವುದೇ ಬಾಹ್ಯ ಶುಚಿತ್ವ ಪಾಲಿಸಿದರೂ, ಅದರಿಂದ ಮಡಿಯಾಗಲು ಸಾಧ್ಯವಿಲ್ಲ. ಇಂತವರು ಎಷ್ಟೇ ಅನುಷ್ಠಾನ ಮಾಡಿದರೂ, ಯಾವ ಪುಣ್ಯಕ್ಷೇತ್ರ ಯಾತ್ರೆ ಮಾಡಿದರೂ, ಅದರಿಂದ ಉಪಯೋಗವಿಲ್ಲ. ಅಂತವರು ಈ  ಸಂಸಾರ ಚಕ್ರದಲ್ಲೇ ಸುತ್ತುತ್ತಿರುತ್ತಾರೆಯೇ  ಹೊರತು ಮರಳಿಬಾರದ ಭಗವಂತನ ಬಳಿ ಸಾಗುವುದಿಲ್ಲ.

ಯಸ್ತು ವಿಜ್ಞಾನವಾನ್ ಭವತಿ ಸಮನಸ್ಕಃ ಸದಾ ಶುಚಿಃ
ಸ ತು ತತ್ಪದಮಾಪ್ನೋತಿ ಯಸ್ಮಾದ್ಭೂಯೋ ನ ಜಾಯತೇ

ಯಾರಲ್ಲಿ ಒಳ್ಳೆಯದ್ಯಾವುದು, ಕೆಟ್ಟದ್ದ್ಯಾವುದು ಎಂದು ನಿರ್ಧಾರ ಮಾಡಿ ಮುನ್ನೆಡೆಯುವ ವಿವೇಕಪ್ರಜ್ಞೆ ಇರುತ್ತದೋ, ಯಾರ ಮನಸ್ಸು ಬುದ್ಧಿಯ ಅಧೀನದಲ್ಲಿದ್ದು ಏಕಾಗ್ರವಾಗಿರುತ್ತದೋ,  ಅವರು ಸದಾ ಶುಚಿ(ಮಡಿ). ಇಂತವರು ಎಲ್ಲಿಗೆ ಹೋದರೆ ಮರಳಿ ಹುಟ್ಟುವ ಅಗತ್ಯವಿಲ್ಲವೋ ಅಂತಹ ತಾಣವನ್ನು ಸೇರುತ್ತಾರೆ.

ಈ ಮೇಲಿನ ಎರಡು ಶ್ಲೋಕಗಳಲ್ಲಿ ನಿಜವಾದ ಮಡಿ ಎಂದರೇನು ಎನ್ನುವುದರ ಸ್ಪಷ್ಟ ವಿವರಣೆ ಕಾಣಬಹುದು. ಮಡಿ ಎಂದರೆ ಅದು ನಮ್ಮ ಅಂತರಂಗ ಶುದ್ಧಿ ಹೊರತು ಬಾಹ್ಯಶುದ್ಧಿ ಅಲ್ಲ. ಬಾಹ್ಯ ಶುದ್ಧಿ ಕೇವಲ ಅಂತರಂಗ ಶುದ್ಧಿಗೆ ಪೂರಕ. ಮನಃ ಶುದ್ಧಿ ಇಲ್ಲದೇ ಮಾಡುವ ಯಾವ ಬಾಹ್ಯ ಶುದ್ಧಿಯೂ ಶುಚಿ ಎನಿಸಲಾರದು.

No comments:

Post a Comment