ಕಠೋಪನಿಷತ್

ಕಠೋಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ.

ಅಗ್ನಿಹೋತ್ರದ ಮಹತ್ವವೇನು? ಅದರ ಹಿಂದಿನ ವಿಜ್ಞಾನವೇನು? ಜೀವ ಅನ್ನುವುದು ಇದೆಯೋ? ಸತ್ತಮೇಲೆ ಜೀವಕ್ಕೆ ಅಸ್ತಿತ್ವವಿದೆಯೋ? ಪರಲೋಕ ಎನ್ನುವುದೊಂದಿದೆಯೋ? ಜೀವನಿಗಿಂತ ಬೇರೆಯಾಗಿ ದೇವರು ಇದ್ದಾನೆಯೇ? ಭಗವಂತ ನಮ್ಮನ್ನು ಸಂಸಾರದಲ್ಲಿ ಮಾತ್ರ ನಿಯಮಿಸುವುದೋ ಅಥವಾ ಮೋಕ್ಷದಲ್ಲೂ ಆತನ ನಿಯಂತ್ರಣವಿದೆಯೋ? ಮೋಕ್ಷಕ್ಕೆ ಹೋದ ಜೀವದ ಇರವು ಹೇಗಿರುತ್ತದೆ? ಮೋಕ್ಷಕ್ಕೆ ಹೋದ ಮೇಲೆ ಏನಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕಠೋಪನಿಷತ್ತು.
Katha Upanishad in Kannada. Reference: Upanishad discourse by Poojya Bannanje Govindacharya

Download pdf: e-Book

Saturday, August 18, 2012

Kathopanishad in Kannada Chapter-02 Canto-03 Shloka-17-19


ಅಂಗುಷ್ಠಮಾತ್ರಃ ಪುರುಷೋಽನ್ತರಾತ್ಮಾ ಸದಾ ಜನಾನಾಂ ಹೃದಯೇ ಸಂನಿವಿಷ್ಟಃ
ತಂ ಸ್ವಾಚ್ಛರೀರಾತ್ಪ್ರವೃಹೇನ್ಮುಂಜಾದಿವೇಷೀಕಾಂ ಧೈರ್ಯೇಣ
ತಂ ವಿದ್ಯಾಚ್ಛುಕ್ರಮಮೃತಂ ತಂ ವಿದ್ಯಾಚ್ಛುಕ್ರಮಮೃತಮಿತಿ                           ೧೭

ನಮ್ಮೊಳಗೆ ಭಗವಂತನ ಮುಖ್ಯವಾದ ಎರಡು ರೂಪಗಳಿವೆ. ನಮ್ಮ ಅಂಗುಷ್ಠದಷ್ಟು ಗಾತ್ರದಲ್ಲಿ ನಮ್ಮ ಹೃದಯದಲ್ಲಿ ಮತ್ತು  ನಮ್ಮ ಜೀವಸ್ವರೂಪದ ಅಂಗುಷ್ಠದಷ್ಟು ಗಾತ್ರದಲ್ಲಿ ಜೀವಸ್ವರೂಪದ ಹೃದಯದಲ್ಲಿ ಆತ ನೆಲೆಸಿದ್ದಾನೆ. ಇದನ್ನು ನಾವು ಗ್ರಹಿಸುವುದು ಬಹಳ ಕಷ್ಟ. ಏಕೆಂದರೆ ನಮ್ಮ ಜೀವಸ್ವರೂಪವೇ ಒಂದು ಅಣುವಿನ ಗಾತ್ರದ್ದು. ಅದರ ಹೆಬ್ಬೆರಳಿನ ಗಾತ್ರದಲ್ಲಿ ಅಂತರ್ಯಾಮಿಯಾಗಿ ಅಣೋರಣೀಯನಾಗಿ ಪ್ರತಿಯೊಬ್ಬ ಜೀವರ ಹೃದಯದಲ್ಲಿ  ಭಗವಂತ ನೆಲೆಸಿದ್ದಾನೆ.
ನಮ್ಮ ದೇಹದ ಒಳಗೆ ನಮ್ಮ ಜೀವಸ್ವರೂಪವಿದೆ. ಜೀವ ಸ್ವರೂಪದ ಒಳಗೆ ಭಗವಂತನಿದ್ದಾನೆ. ಇಲ್ಲಿ ಜೀವಸ್ವರೂಪ ಮತ್ತು ಭಗವಂತನನ್ನು ಬೇರ್ಪಡಿಸಿ ತಿಳಿದು ಉಪಾಸನೆ ಮಾಡುವುದು ಬಹಳ ಮುಖ್ಯ.  ಭಗವಂತನನ್ನು ಧ್ಯಾನದಲ್ಲಿ ಈ ರೀತಿ ಕಾಣಲು ಅರಿವಿನ ಆನಂದ ಬೇಕು ಮತ್ತು ಛಲ ಬೇಕು. ಜೀವಸ್ವರೂಪ ಮತ್ತು ಭಗವಂತನ್ನು ಹೇಗೆ ಬೇರ್ಪಡಿಸಿ ಕಾಣಬೇಕು ಎನ್ನುವುದನ್ನು ಯಮ ಇಲ್ಲಿ ಒಂದು ದೃಷ್ಟಾಂತದ ಮೂಲಕ ವಿವರಿಸಿದ್ದಾನೆ. ಯಮ ಹೇಳುತ್ತಾನೆ ಹೇಗೆ ‘ಮುಂಜಾ’ ವನ್ನು ‘ಇಷೀಕಾ’ದಿಂದ ಬೇರ್ಪಡಿಸುತ್ತೇವೋ ಹಾಗೇ ಭಗವಂತ ಮತ್ತು ಜೀವಸ್ವರೂಪವನ್ನು ಬೇರ್ಪಡಿಸಿ ಕಾಣಬೇಕು ಎಂದು. ಇಲ್ಲಿ ಮುಂಜಾ ಮತ್ತು ಇಷೀಕ ಎನ್ನುವುದು ದರ್ಭೆ ಜಾತಿಗೆ ಸೇರಿದ ಹುಲ್ಲಿನ ಗಿಡ. ಇವು ದೂರದಿಂದ ನೋಡಲು ಒಂದೇ ತರನಾಗಿರುತ್ತವೆ. ಮುಂಜಾ ಮೃದುವಾಗಿದ್ದರೆ, ಇಷೀಕ ಆಯುಧದಂತೆ ಗಡಸಾಗಿರುತ್ತದೆ. [ಮುಂಜಾವನ್ನು ಉಡುದಾರಕ್ಕಾಗಿ ಬಳಸುತ್ತಾರೆ. ಯಾದವರು ಇಷೀಕದಿಂದ ಒಬ್ಬರನ್ನೊಬ್ಬರು ಚುಚ್ಚಿಕೊಂಡು ನಾಶವಾದರು].
ನಾವು ಉಪಾಸನೆ ಮಾಡುವಾಗ ಭಗವಂತನನ್ನು ನಮ್ಮಿಂದ ಬೇರ್ಪಡಿಸಿ ಉಪಾಸನೆ ಮಾಡಬೇಕು. ನಮ್ಮದು ದುಃಖಮಯವಾದ ಬಾಳು. ಆದರೆ ಭಗವಂತ ದುಃಖದ ಸ್ಪರ್ಶವೇ ಇಲ್ಲದವನು. ಜೀವಸ್ವರೂಪ ಆನಂದ ಸ್ವರೂಪವಾದರೂ ಕೂಡ ದೇಹ ಮತ್ತು ಮನಸ್ಸಿನ ಮೂಲಕ ಅದು ದುಃಖ ಮತ್ತು ಕೊಳೆಯನ್ನು ಅಂಟಿಸಿಕೊಳ್ಳುತ್ತದೆ. ಆದರೆ ಭಗವಂತ ದುಃಖರಹಿತ, ಸ್ವಚ್ಛ, ನಿರ್ಮಲ ಮತ್ತು ಆನಂದಮಯ.
ಇಲ್ಲಿಗೆ ನಚಿಕೇತ ಯಮನಿಂದ ಕೇಳಿ ಪಡೆದ ಅಧ್ಯಾತ್ಮ ವಿದ್ಯೆಯ ಉಪದೇಶದ ಭಾಗ ಮುಗಿಯಿತು(ಇತಿ).

ಮೃತ್ಯುಪ್ರೋಕ್ತಾಂ ನಚಿಕೇತೋಽಥ ಲಬ್ಧ್ವಾ ವಿದ್ಯಾಮೇತಾಂ ಯೋಗವಿಧಿಂ ಚ ಕೃತ್ಸ್ನಮ್
ಬ್ರಹ್ಮಪ್ರಾಪ್ತೋ ವಿರಜೋಽಭೂದ್ವಿಮೃತ್ಯು  ರನ್ಯೋಽಪ್ಯೇವಂ ಯೋ ವಿದಧ್ಯಾತ್ಮಮೇವ   ೧೮

ಕಠೋಪನಿಷತ್ತಿನ ಈ ಕೊನೇಯ ಶ್ಲೋಕದಲ್ಲಿ ಉಪಸಂಹಾರದ ಮಾತಿದೆ. ಮೃತ್ಯುದೇವತೆಯಾದ ಯಮನಿಂದ ಅತ್ಯಂತ ಮಾಂಗಲಿಕವಾದ ಈ ಭಗವದ್ ಜ್ಞಾನವನ್ನು ತಿಳಿದ ನಚಿಕೇತ, ಮುಂದೆ ಪೂರ್ಣಾನಂದವಾದ ಮುಕ್ತಿಯನ್ನು ಪಡೆದ. ಯಾರು ಇಲ್ಲಿ ಯಮ ನಚಿಕೇತನಿಗೆ ಹೇಳಿರುವ ಈ ಜ್ಞಾನವನ್ನು ಪಡೆದು ಅದನ್ನು ಅನುಷ್ಠಾನಕ್ಕೆ ತರುತ್ತಾರೆ, ಅವರೂ ಕೂಡಾ ನಚಿಕೇತನಂತೆ ವಿರಜನೂ, ವಿಮುಕ್ತನೂ ಆಗಿ ಭಗವಂತನನ್ನು ಸೇರಬಲ್ಲರು. ಮೋಕ್ಷ ಸಾಧನವಾದ ಈ ವಿದ್ಯೆಯನ್ನು ಅರ್ಹತೆಯುಳ್ಳ ಸಾತ್ವಿಕರು ಬಳಸಿ ಮೋಕ್ಷ ಮಾರ್ಗವನ್ನು ಕಾಣಬಹುದು. 

ಶಾಂತಿಮಂತ್ರ 

ಸಹ ನಾವವತು ಸಹ ನೌ ಭುನಕ್ತು ಸಹ ವೀರ್ಯಂ ಕರವಾವಹೈ
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ                                 *
ಓಂ ಶಾಂತಿಃ ಶಾಂತಿಃ ಶಾಂತಿಃ

ಇದು ಯಜುರ್ವೇದದ ಶಾಂತಿ ಮಂತ್ರ. ಯಜುರ್ವೇದದಲ್ಲಿ, ತೈತ್ತಿರೀಯ ಶಾಖೆಯಲ್ಲಿ ಮತ್ತು ಕಾಠಕಶಾಖೆ ಮೂರರಲ್ಲೂ ಒಂದೇ ಶಾಂತಿ ಮಂತ್ರವಿದೆ ಮತ್ತು ಅದು ಕಠೋಪನಿಷತ್ತಿನ ಕೊನೆಗೆ ಬಂದಿದೆ. [ಯಜುರ್ವೇದದಲ್ಲಿ ತೈತ್ತಿರೀಯಶಾಖೆಯವರಿಗೆ “ಶಂ ನೋ ಮಿತ್ರಃ ಶಂ ವರುಣಃ...” ಎನ್ನುವ ಎರಡನೇ  ಶಾಂತಿ ಮಂತ್ರವೂ ಇದೆ, ಆದರೆ ಕಠ ಶಾಖೆಯ ಯಜುರ್ವೇದಿಗಳಿಗೆ ಇದೊಂದೇ ಶಾಂತಿ ಮಂತ್ರ]. ಇದು ಪಾಠ ಪ್ರಾರಂಭದಲ್ಲಿ ಶಿಷ್ಯರು ಮಾಡುವ ಪ್ರಾರ್ಥನೆ. ಇದಕ್ಕೆ ಗುರುಗಳೂ ಧ್ವನಿಗೂಡಿಸಬಹುದು.
ಸಹ ನಾವವತು: ‘ಅವತು’ ಎನ್ನುವಲ್ಲಿ ‘ಅವ’ ಎಂದರೆ ಪ್ರವೇಶ. “ಓ ಭಗವಂತ, ನೀನು ನನ್ನ ಗುರುವಿನೊಳಗೆ ಕೂತು, ಅವರಿಗೆ ವಿದ್ಯೆಯನ್ನು ಹೇಳುವ ಶಕ್ತಿ ತುಂಬು. ನನ್ನೊಳಗೆ ಕೂತು ಗುರುಗಳು ಹೇಳುವ ಮಾತು ನನಗೆ ಅರ್ಥವಾಗುವಂತೆ ಮಾಡು”.
ಸಹ ನೌ ಭುನಕ್ತು: ‘ಭುನಕ್ತು’ ಎಂದರೆ ಪಾಲಿಸುವುದು ಅಥವಾ ತಿನ್ನುವುದು. “ಓ ಭಗವಂತ,  ನಮ್ಮ ಅಧ್ಯಯನ ಕಾಲದಲ್ಲಿ ಯಾವುದೇ ವಿಘ್ನ ಬಾರದಂತೆ ನಮ್ಮನ್ನು ಕೊನೇಯತನಕ ಪಾಲಿಸು. ನಿನ್ನ ರಕ್ಷೆ ಸದಾ ನಮ್ಮೊಂದಿಗಿರಲಿ. ನಮ್ಮಿಬ್ಬರಿಗೂ ಉಣ್ಣುವುದಕ್ಕೂ ತಿನ್ನುವುದಕ್ಕೂ ಬೇಕಾಗಿರುವ ಸಮೃದ್ಧಿಯನ್ನು ಕರುಣಿಸು”.
ಸಹ ವೀರ್ಯಂ ಕರವಾವಹೈ: “ಗುರುಗಳಿಗೆ ಈ ಅಧ್ಯಾತ್ಮ ವಿದ್ಯೆಯನ್ನು ನಮಗೆ ಕೊಟ್ಟು ನಮ್ಮನ್ನು ಉದ್ಧರಿಸುವಂತೆ ಮಾಡುವ ಸಾಮರ್ಥ್ಯವನ್ನು ಕೊಡು. ನಮ್ಮ ಅಧ್ಯಯನ ಶಕ್ತಿಶಾಲಿಯಾಗಿರಲಿ. ನಮಗೆ ಈ ವಿದ್ಯೆಯನ್ನು ಲೋಕಕ್ಕೆ ಉಪಯೋಗವಾಗುವಂತೆ ಬಳಸುವ ಸಾಮರ್ಥ್ಯವನ್ನು ಕೊಡು”.
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ: “ನಮ್ಮಿಬ್ಬರ ಕೂಡುವಿಕೆಯಿಂದ ನಡೆಯುವ ಈ ಶಾಸ್ತ್ರಾಧ್ಯಾಯನದಿಂದ ಶಾಸ್ತ್ರದ ವರ್ಚಸ್ಸು ನಮ್ಮಲ್ಲಿ ವ್ಯಕ್ತವಾಗಲಿ. ಶಿಷ್ಯ ಪರಂಪರೆಯಿಂದ ಊರ್ಜಿತವಾಗಿ ವಿದ್ಯೆ ಮುಂದುವರಿಯಲು ಬೇಕಾಗಿರುವ ತೇಜಸ್ಸು ನಮ್ಮಲ್ಲಿ ಬರಲಿ. ಗುರುಗಳು ಹೇಳಿದ್ದನ್ನು ನಾನು ನನ್ನ ಮುಂದಿನ ತಲೆಮಾರಿಗೆ ಕೊಡುವ ಶಕ್ತಿ ಕರುಣಿಸು. ಕೊನೇಯತನಕ ನಾವು ಒಬ್ಬರನ್ನೊಬ್ಬರು ದ್ವೇಷಿಸದೇ, ಗೌರವ ಮತ್ತು ಪ್ರೀತಿಯಿಂದಿರುವಂತೆ ಮಾಡು. ನಾವು ಎಂದೆಂದೂ ಯಾರನ್ನೂ ದ್ವೇಷಿಸದೇ, ಎಲ್ಲರನ್ನೂ ಪ್ರೀತಿಸುತ್ತಾ  ಬದುಕುವಂತೆ ಮಾಡು”.
ಓಂ ಶಾಂತಿಃ ಶಾಂತಿಃ ಶಾಂತಿಃ :   ‘ಓಂ’ ಎನ್ನುವುದು ಅತ್ಯಂತ ಮೂಲಭೂತವಾದ ಬೀಜಾಕ್ಷರ. ಇದು ಭಗವಂತನ ಹೆಸರು. ‘ಶಂ’ ಎಂದರೆ ಆನಂದ; ‘ಇ’ ಎಂದರೆ ಜ್ಞಾನ; ‘ಅಂತ’ ಎಂದರೆ ತುತ್ತತುದಿ. ಆದ್ದರಿಂದ ‘ಓಂ ಶಾಂತಿಃ’ ಎಂದರೆ: ‘ಭಗವಂತ ಜ್ಞಾನಾನಂದಗಳ ತುತ್ತ ತುದಿಯಲ್ಲಿರುವವ’ ಎಂದರ್ಥ.  ಮೂರು ವೇದಗಳಲ್ಲಿ ಪ್ರತಿಪಾಧ್ಯನಾಗಿರುವ, ಮೂರು ಕಾಲಗಳಲ್ಲಿರುವ, ಎಲ್ಲಾಕಡೆ ಇರುವ ಭಗವಂತ ಜ್ಞಾನಾನಂದಪೂರ್ಣ ಎಂದು ಇಲ್ಲಿ ಮೂರು ಬಾರಿ ಹೇಳಲಾಗಿದೆ. “ಈ ಅನುಸಂಧಾನದ ಮೂಲಕ ನಮ್ಮ ಬದುಕಿನಲ್ಲಿ ಕೂಡ ಶಾಂತಿಯನ್ನು ಕೊಡು” ಎನ್ನುವ ಪ್ರಾರ್ಥನೆ ಇಲ್ಲಿದೆ.

“ನಮಗೆ ಜ್ಞಾನಾನಂದದ ಪೂರ್ಣತೆಯನ್ನು ಕೊಡು; ನಮಗೆ  ಆ ಮೋಕ್ಷದ ಸ್ಥಿತಿಯನ್ನು ಕೊಡು; ಸದಾ ನಿನ್ನೊಂದಿಗಿರುವ ಜ್ಞಾನಾನಂದದ ಅನುಭವವನ್ನು ಕೊಡು; ಅಲ್ಲಿಯ ತನಕ ನಮ್ಮ ಬದುಕಿನಲ್ಲಿ ಇನ್ನೊಬ್ಬರನ್ನು ದ್ವೇಷಿಸದೇ ನೆಮ್ಮದಿಯಿಂದ ಬದುಕುವ ಶಾಂತಿಮಯವಾದ ಬದುಕನ್ನು ಕೊಡು; ಎಲ್ಲರೂ ಶಾಂತಿ-ನೆಮ್ಮದಿಯಿಂದ ಬದುಕಲು ಬಿಡೋಣ ಮತ್ತು ನಾವು ನೆಮ್ಮದಿಯಿಂದ ಬದುಕೋಣ; ಯಾರೂ ಯಾರನ್ನೂ ದ್ವೇಷಿಸುವುದು ಬೇಡ” ಎನ್ನುವುದು ಈ ಶಾಂತಿ ಮಂತ್ರದ ಮೂಲ ಸಂದೇಶ. 

ಇತಿ ಕಾಠಕೋಪನಿಷದಿ ದ್ವಿತೀಯಾಧ್ಯಾಯೇ ತೃತೀಯಾ ವಲ್ಲೀ
ಇಲ್ಲಿಗೆ ಕಠೋಪನಿಷತ್ತಿನ ಎರಡನೇ ಅಧ್ಯಾಯದ ಮೂರನೇ ವಲ್ಲೀ  ಮತ್ತು ಕಠೋಪನಿಷತ್ತಿನ ಪಾಠ ಮುಗಿಯಿತು
*******
|| ಸರ್ವೇ ಜನಾಃ ಸುಖಿನೋ ಭವಂತು ||
|| ಶ್ರೀ ಕೃಷ್ಣಾರ್ಪಣಮಸ್ತು ||

Friday, August 17, 2012

Kathopanishad in Kannada Chapter-02 Canto-03 Shloka-11-16


ತಾಂ ಯೋಗಮಿತಿ ಮನ್ಯಂತೇ ಸ್ಥಿರಾಮಿಂದ್ರಿಯಧಾರಣಾಮ್
ಅಪ್ರಮತ್ತಸ್ತದಾ ಭವತಿ ಯೋಗೋ ಹಿ ಪ್ರಭವಾಪ್ಯಯೌ                     ೧೧

ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳನ್ನು ಪೂರ್ಣವಾಗಿ ನಮ್ಮ ಹಿಡಿತದಲ್ಲಿಟ್ಟು ಭಗವಂತನನ್ನು ಕಾಣುವುದನ್ನು ಧ್ಯಾನಯೋಗ ಎನ್ನುತ್ತಾರೆ. ಈ ಸ್ಥಿತಿಯಲ್ಲಿರುವ ಜೀವ ಎಲ್ಲೂ ಪ್ರಮಾದ(ಎಚ್ಚರ ತಪ್ಪುವುದು, ತಿಳಿಯದೇ ತಪ್ಪು ಮಾಡುವುದು) ಮಾಡುವುದಿಲ್ಲ ಮತ್ತು ಆತ ದುಃಖದ ಸ್ಪರ್ಶವೇ ಇಲ್ಲದ ಸುಖವನ್ನು ಅನುಭವಿಸುತ್ತಾನೆ. ಇದು ಆನಂದ ಸಮುದ್ರದಲ್ಲಿ ಮುಳುಗುವ ಅನುಭವ. ಇಂತಹ ಸುಖ ಕೇವಲ ಧ್ಯಾನಯೋಗದಿಂದ ಮಾತ್ರ ಪಡೆಯಲು ಸಾಧ್ಯ. ಜಗತ್ತಿನ ಸೃಷ್ಟಿ-ಸಂಹಾರಕ್ಕೆ ಕಾರಣನಾದ ಆ ಭಗವಂತನನ್ನು ನಮ್ಮ ಒಳಗಣ್ಣಿನಿಂದ ಕಂಡಾಗ ಆನಂದದ ಸೃಷ್ಟಿಯಾಗುತ್ತದೆ ಮತ್ತು ದುಃಖದ ಸಂಹಾರವಾಗುತ್ತದೆ. ಇದನ್ನು ನಾಲ್ಕನೇ ಸ್ಥಿತಿ ಅಥವಾ ತುರಿಯಾವಸ್ಥೆ ಎಂದೂ ಕರೆಯುತ್ತಾರೆ.

ನೈವ ವಾಚಾ ನ ಮನಸಾ ಪ್ರಾಪ್ತುಂ ಶಕ್ಯೋ ನ ಚಕ್ಷುಷಾ
ಅಸ್ತೀತಿ ಬ್ರುವತೋಽನ್ಯತ್ರ ಕಥಂ ತದುಪಲಭ್ಯತೇ                            ೧೨

ಒಂದು ವಿಶೇಷವಾದ ಉಪಾಸನೆಯನ್ನು ಇಲ್ಲಿ ವಿವರಿಸಲಾಗಿದೆ. ಗೀತೆಯಲ್ಲಿ ಒಂದು ಮಾತು ಬಂದಿದೆ: ಓಂ ತತ್ ಸದಿತಿ ನಿರ್ದೇಶೋ ಬ್ರಹ್ಮಣಸ್ತ್ರಿವಿಧಃ ಸ್ಮೃತಃ । [೧೭-೨೩]. ಇದು ಭಗವಂತನ ಉಪಾಸನೆಯಲ್ಲಿ ಅವನನ್ನು ‘ಸತ್’ ಎಂದು ಉಪಾಸನೆ ಮಾಡುವುದನ್ನು ವಿವರಿಸುತ್ತದೆ. ಇಲ್ಲಿ ‘ಸತ್’ ಎನ್ನುವ ಉಪಾಸನೆಯ ಒಂದು ವಿಶೇಷ ಮುಖವನ್ನು ವಿವರಿಸಿದ್ದಾನೆ ಯಮ.
ಭಗವಂತನನ್ನು ಮಾತಿನ ಮೂಲಕ ತಿಳಿಯಲು ಸಾಧ್ಯವಿಲ್ಲ. ಗುರುಗಳ ಉಪದೇಶ ಕೂಡಾ ನೇರವಾಗಿ ಭಗವಂತನನ್ನು ತೋರಿಸಲಾರದು. ಪ್ರವಚನ ಕೇಳಿದಾಗ ಅದರಿಂದ ಭಗವಂತನನ್ನು ಹೇಗೆ ಉಪಾಸನೆ ಮಾಡಬೇಕು ಎನ್ನುವ ಮಾರ್ಗದರ್ಶನವಷ್ಟೇ ಸಿಗುತ್ತದೆ ಹೊರತು, ಅದರಿಂದ ದೇವರು ಕಾಣಿಸಿಕೊಳ್ಳುವುದಿಲ್ಲ. ಸಾಂತವಾದ ಮಾತು ಮತ್ತು ಮನಸ್ಸುಗಳಿಗೆ ಅನಂತವಾದ ಭಗವಂತನನ್ನು ಗ್ರಹಿಸಲು ಸಾಧ್ಯವಿಲ್ಲ. ಹೀಗಿರುವಾಗ ನಮ್ಮ ಕಣ್ಣಿನಿಂದ ಅವನನ್ನು ಕಾಣುವುದು ಸಾಧ್ಯವೇ? ಎಂದು ಪ್ರಶ್ನಿಸುತ್ತಾನೆ ಯಮ. ಇಂತಹ ಭಗವಂತನನ್ನು ಯಾರು ಕಾಣಬಲ್ಲರು ಎಂದರೆ ಯಮ ಹೇಳುತ್ತಾನೆ: “ಅಸ್ತೀತಿ ಬ್ರುವತಃ” ಎಂದು. ಅಂದರೆ: ‘ಭಗವಂತ ಇದ್ದಾನೆ’ ಎಂದು ಹೇಳುವವರು ಕಾಣಬಲ್ಲರು ಎಂದರ್ಥ. ಯಾರು ದೇವರು ಇಲ್ಲಾ ಎನ್ನುತ್ತಾನೋ, ಅವನ ಪಾಲಿಗೆ ದೇವರು ಖಂಡಿತಾ ಗೋಚರನಾಗುವುದಿಲ್ಲ. ದೇವರು ಇದ್ದಾನೆ ಎನ್ನುವ ಭಾವ ಒಳಗಿನಿಂದ ದೃಢವಾಗುವ ತನಕ ಏನೇ ಸಾಧನೆ ಮಾಡಿದರೂ ಭಗವಂತನ ಸಾಕ್ಷಾತ್ಕಾರವಾಗುವುದಿಲ್ಲ. ಹಾಗಾಗಿ ಮೊದಲು ದೇವರು ಇದ್ದಾನೆ ಎನ್ನುವುದು ನಮ್ಮ ಮನಸ್ಸಿನಲ್ಲಿ ಗಟ್ಟಿಯಾಗಬೇಕು. ಗಟ್ಟಿಯಾದ ನಂತರ ಅವನನ್ನು ತಿಳಿಯಲು ಪ್ರಯತ್ನ ಮಾಡಬೇಕು.
ಭಗವಂತ ‘ಅಸ್ತಿಃ=ಅ+ಸತ್+ಇ’ ಇಲ್ಲಿ ‘ಅ’ ಎನ್ನುವುದು ‘ಅಧಿಕ’ ಎನ್ನುವುದರ ಸಂಕ್ಷಿಪ್ತರೂಪ(Abbreviations). ಅಧಿಕ ಎಂದರೆ ದೊಡ್ಡವನು, ಮೇಲಿನವನು, ಎತ್ತರದಲ್ಲಿರುವವನು, ಇತ್ಯಾದಿ. ಆದ್ದರಿಂದ ಇಲ್ಲಿ ಅಸ್ತಿಃ ಎಂದರೆ: ಈ ಜಗತ್ತಿನಲ್ಲಿ ನಮಗೆ ತಿಳಿದಿರುವ/ತಿಳಿಯದಿರುವ  ಯಾವ ಯಾವ ವಸ್ತುಗಳಿವೆ, ಆ ಎಲ್ಲಾ ವಸ್ತುಗಳಿಗಿಂತ ಭಗವಂತ ಅಧಿಕ ಎಂದರ್ಥ. ಯಾರು ಭಗವಂತನನ್ನು ‘ಅಸ್ತಿಃ’ ಎಂದು ತಿಳಿದಿದ್ದಾರೋ, ಅವರು ಭಗವಂತನನ್ನು ಕಾಣಬಲ್ಲರು.

ಅಸ್ತೀತ್ಯೇವೋಪಲಬ್ಧವ್ಯಸ್ತತ್ತ್ವಭಾವೇನ ಚೋಭಯೋಃ
ಅಸ್ತೀತ್ಯೇವೋಪಲಬ್ಧಸ್ಯ ತತ್ತ್ವಭಾವಃ ಪ್ರಸೀದತಿ                               ೧೩

ಅನಂತನಾದ ಭಗವಂತನನ್ನು ಸಾಂತರಾದ ನಾವು ತಿಳಿಯುವುದು ಹೇಗೆ ಎಂದರೆ ಯಮ ಹೇಳುತ್ತಾನೆ: “ಭಗವಂತ ಎಲ್ಲಕ್ಕಿಂತ ವಿಲಕ್ಷಣ ಮತ್ತು ಎಲ್ಲಕ್ಕಿಂತ ಅಧಿಕ ಎಂದು ಗ್ರಹಣ ಮಾಡಬೇಕು” ಎಂದು. ಈ ಜಗತ್ತಿನಲ್ಲಿ ಇರುವ ತತ್ವ ಎರಡೇ. ಒಂದು ಜಡ ಮತ್ತು ಒಂದು ಚೇತನ ಅಥವಾ ಒಂದು ಕ್ಷರ ಒಂದು ಅಕ್ಷರ ಅಥವಾ ಒಂದು ಚರ ಒಂದು ಅಚರ. ಈ ಎರಡು ತತ್ವವನ್ನು ನಿಯಂತ್ರಿಸುವ ಮಹಾತತ್ವ ಆ ಪರಮ ಪುರುಷ ಭಗವಂತ. ಹೀಗಾಗಿ ಆತ ಎಲ್ಲಕ್ಕಿಂತ ಅಧಿಕ. ಭಗವಂತನೊಬ್ಬನೇ ಸ್ವತಂತ್ರತತ್ವ. ಉಳಿದಿದ್ದೆಲ್ಲವೂ ಆತನಿಗೆ ಅಧೀನ.
‘ಭಗವಂತ ಚರಾಚರಗಳಿಗಿಂತ ಅಧಿಕನಾಗಿ, ಚರಾಚರ ಪ್ರಪಂಚವನ್ನು ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷಗಳಿಂದ ನಿಯಂತ್ರಿಸುತ್ತಾನೆ’ ಎನ್ನುವ ಜ್ಞಾನ ಯಾರಿಗೆ ಬಂತೋ, ಅವರಿಗೆ ಭಗವಂತ ಪ್ರಸನ್ನನಾಗುತ್ತಾನೆ. ಹಾಗಾಗಿ ‘ಭಗವಂತ ಸಮಸ್ತ ಪ್ರಪಂಚವನ್ನು ನಿಯಮಿಸಿಕೊಂಡು ಎಲ್ಲವುದಕ್ಕಿಂತ ಮೇಲೆ ಸರ್ವೋತ್ತಮನಾಗಿದ್ದಾನೆ’ ಎನ್ನುವ ಎಚ್ಚರವೇ ಭಗವಂತನ ಕೃಪೆಗೆ ಪಾತ್ರರಾಗಲು ಇರುವ ಏಕಮಾತ್ರ ಮಾರ್ಗ.

ಯದಾ ಸರ್ವೇ ಪ್ರಮುಚ್ಯಂತೇ ಕಾಮಾ ಯೇಽಸ್ಯ ಹೃದಿ ಶ್ರಿತಾಃ
ಅಥ ಮರ್ತ್ಯೋಽಮೃತೋ ಭವತ್ಯತ್ರ ಬ್ರಹ್ಮ ಸಮಶ್ನುತೇ                   ೧೪

ಹಿಂದಿನ ಶ್ಲೋಕದಲ್ಲಿ ಯಮ ಹೇಳಿದ: ನಾವು ಭಗವಂತನ ಸರ್ವೋತ್ತಮತ್ತ್ವವನ್ನು ತಿಳಿದಾಗ ಆತ ಪ್ರಸನ್ನನಾಗುತ್ತಾನೆ” ಎಂದು. ಇಲ್ಲಿ ನಮಗೊಂದು ಪ್ರಶ್ನೆ ಬರಬಹುದು. “ಭಗವಂತನ ಅನುಗ್ರಹ ನಮ್ಮ ಮೇಲೆ ಆಗುವುದು ನಮಗೆ ತಿಳಿಯುವುದು ಹೇಗೆ” ಎಂದು. ಈ ನಮ್ಮ ಪ್ರಶ್ನೆಗೆ ಈ ಶ್ಲೋಕವೇ ಉತ್ತರ. ಯಮ ಹೇಳುತ್ತಾನೆ: “ಭಗವಂತ ನಮ್ಮ ಮೇಲೆ ಪ್ರಸನ್ನನಾದಾಗ ನಮ್ಮ ಲೌಕಿಕವಾದ ಎಲ್ಲಾ ಕ್ಷುದ್ರ ಕಾಮನೆಗಳು ಹೊರಟು ಹೋಗುತ್ತವೆ” ಎಂದು. ಈ ಸ್ಥಿತಿಯಲ್ಲಿ ನಮಗೆ ಕೇವಲ ನಮ್ಮ ಆತ್ಮಸ್ವರೂಪದ ಬಯಕೆಗಳಾದ ಜ್ಞಾನ, ಭಕ್ತಿ, ವೈರಾಗ್ಯ, ಭಗವಂತ ಇಷ್ಟೇ ಇರುತ್ತವೆ. ಇಂತಹ ಸ್ಥಿತಿಯನ್ನು ತಲುಪಿದ ಜೀವ ಸಾವಿಲ್ಲದ ಪೂರ್ಣಾನಂದ ಸ್ಥಿತಿಯನ್ನು ಪಡೆಯುತ್ತಾನೆ.  

ಯದಾ ಸರ್ವೇ ಪ್ರಭಿದ್ಯಂತೇ ಹೃದಯಸ್ಯೇಹ ಗ್ರಂಥಯಃ
ಅಥ ಮರ್ತ್ಯೋಽಮೃತೋ ಭವತ್ಯೇತಾವದ್ಧ್ಯನುಶಾಸನಮ್               ೧೫

ಭಗವಂತನ ಅನುಗ್ರಹದಿಂದ ಹೇಗೆ ನಮ್ಮ ಬಯಕೆಗಳೆಲ್ಲಾ ಕರಗಿ ಹೋಗುತ್ತವೆಯೋ, ಹಾಗೇ ನಮ್ಮ ಹೃದಯದಲ್ಲಿ ಹುದುಗಿರುವ ಅಜ್ಞಾನದ ಗಂಟುಗಳೂ ಕರಗಿ ಹೋಗುತ್ತವೆ ಮತ್ತು ನಮ್ಮೊಳಗೆ ಜ್ಞಾನದ ಬೆಳಕು ತುಂಬುತ್ತದೆ. ಈ ಸ್ಥಿತಿಯಲ್ಲಿ ಏನನ್ನಾದರೂ ಬಯಸಬೇಕು ಅನಿಸುವುದೇ ಇಲ್ಲ. ಕೊಪ ಇಲ್ಲವಾಗುತ್ತದೆ, ಲೋಭ ಕಾಣೆಯಾಗುತ್ತದೆ. ಹೀಗೆ ಎಲ್ಲಾ ಮಾನಸಿಕ ದೌರ್ಬಲ್ಯಗಳನ್ನು ಕಳೆದುಕೊಂಡ ಮನುಷ್ಯ, ಭಗವಂತನ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ. ಈ ಸ್ಥಿತಿಯನ್ನು ತಲುಪಿದ ಸಿದ್ಧನಿಗೆ  ಯಾವ ಶಾಸ್ತ್ರದ ಅನುಶಾಸನಗಳೂ ಇಲ್ಲ.  ಅಂತವನು ಮೋಕ್ಷವನ್ನು ಪಡೆಯುತ್ತಾನೆ.

ಶತಂ ಚೈಕಾ ಚ ಹೃದಯಸ್ಯ ನಾಡ್ಯಸ್ತಾಸಾಂ ಮೂರ್ಧಾನಮಭಿನಿಃಸೃತೈಕಾ
ತಯೋರ್ಧ್ವಮಾಯನ್ನಮೃತತ್ವಮೇತಿ ವಿಷ್ವಙ್ಙನ್ಯಾ ಉತ್ಕ್ರಮಣೇ ಭವಂತಿ         ೧೬

ಜೀವ ತನ್ನ ದೇಹವನ್ನು ಕಳಚಿ ಮೋಕ್ಷಕ್ಕೆ ಹೋಗುವ ಪ್ರಕ್ರಿಯೆಯನ್ನು ಯಮ ಇಲ್ಲಿ ವಿವರಿಸಿದ್ದಾನೆ. ನಮ್ಮ ದೇಹದ ಎಡಭಾಗದಲ್ಲಿ ಐವತ್ತು ಮತ್ತು ಬಲಭಾಗದಲ್ಲಿ ಐವತ್ತು ಮುಖ್ಯ ನಾಡಿಗಳಿವೆ. ನಡುವಿನಲ್ಲಿ ಹೃದಯದಿಂದ ಮೇಲೆ ಹೋಗುವ ಸುಷುಮ್ನಾ ಅಥವಾ ಬ್ರಹ್ಮನಾಡಿ ಇದೆ. ಅದರ ತುದಿ ನಮ್ಮ ನೆತ್ತಿಯಲ್ಲಿದೆ. ಅದನ್ನೇ ಸಹಸ್ರಾರ ಎನ್ನುತ್ತಾರೆ. ಈ ನಾಡಿಯ ಮೂಲಕ, ಸಹಸ್ರಾರದಿಂದ ಜೀವ ದೇಹದಿಂದ ಹೊರ ಹೋದರೆ, ಆ ಜೀವ ಮತ್ತೆ ಮರಳಿ ಹುಟ್ಟುವುದಿಲ್ಲ. ಇದು ಜೀವ  ಹುಟ್ಟು ಸಾವಿನ ಚಕ್ರದಿಂದ ಕಳಚಿಕೊಂಡು ಮೋಕ್ಷವನ್ನು ಸೇರುವ ಮಾರ್ಗ.  ದೇಹದಲ್ಲಿನ ಇತರ ನಾಡಿಗಳು ಸಂಸಾರಕ್ಕೆ ಕಾರಣವಾಗಿರುತ್ತವೆ. ಅಂದರೆ ಸಹಸ್ರಾರವಲ್ಲದೇ ದೇಹದ ಇತರ ಯಾವುದೇ ದ್ವಾರದ ಮೂಲಕ ಜೀವ ಹೊರ ಹೋದರೂ, ಮರಳಿ ಸಂಸಾರ ಚಕ್ರದಲ್ಲಿ ಸಿಲುಕುತ್ತಾನೆ.

Wednesday, August 15, 2012

Kathopanishad in Kannada Chapter-02 Canto-03 Shloka-07-10


ಇಂದ್ರಿಯೇಭ್ಯಃ ಪರಂ ಮನೋ ಮನಸಃ ಸತ್ತ್ವಮುತ್ತಮಮ್
ಸತ್ತ್ವಾದಧಿ ಮಹಾನಾತ್ಮಾ ಮಹತೋಽವ್ಯಕ್ತಮುತ್ತಮಮ್                

ಅವ್ಯಕ್ತಾತ್ತು ಪರಃ ಪುರುಷೋ ವ್ಯಾಪಕೋಽಲಿಂಗ ಏವ ಚ
ಯಂ ಜ್ಞಾತ್ವಾ ಮುಚ್ಯತೇ ಜಂತುರಮೃತತ್ವಂ ಚ ಗಚ್ಛತಿ                    

ದೇವರನ್ನು ಉಪಾಸನೆ ಮಾಡುವಾಗ ಅವನ ಪರಿವಾರ ಸಮೇತ ಉಪಾಸನೆ ಮಾಡಬೇಕು ಎಂದು ಹಿಂದೆ ಹೇಳಿದ್ದನ್ನು ಇನ್ನೂ ಸ್ಪಷ್ಟವಾಗಿ, ತಾರತಮ್ಯ ಪೂರ್ವಕ ಇಲ್ಲಿ ವಿವರಿಸಲಾಗಿದೆ. ಭಗವಂತನ ಪರಿವಾರ ಎಂದರೆ ಅಲ್ಲಿ ಎಲ್ಲರೂ ಸಮಾನ ಸ್ಕಂದರಲ್ಲ. ಈ ವಿಚಾರವನ್ನು ಯಮ ಹಿಂದೆಯೇ ವಿವರಿಸಿದ್ದಾನೆ. ಅದಕ್ಕೆ ಒತ್ತು ಕೊಟ್ಟು ಪುನಃ ಇಲ್ಲಿ ವಿವರಿಸುತ್ತಾನೆ ಯಮ. ದೇವತೆಗಳು ನಮ್ಮ ಮತ್ತು ಭಗವಂತನ ನಡುವಿನ ಮೆಟ್ಟಿಲುಗಳಿದ್ದಂತೆ. ಅವರನ್ನು ತರತಮ ಭಾವದಿಂದ ಅನುಸಂಧಾನ ಮಾಡಿ ಕೊನೇ ಮೆಟ್ಟಿಲಿನಲ್ಲಿ ಭಗವಂತನನ್ನು ಕಾಣಬೇಕು.
ದೇವತಾ ತಾರತಮ್ಯ ಎನ್ನುವುದು ಅಧ್ಯಾತ್ಮದಲ್ಲಿ ಅತ್ಯಂತ ಮುಖ್ಯ ವಿಷಯ. ನಮ್ಮ ದೇಹಕ್ಕಿಂತ ನಮ್ಮ ಇಂದ್ರಿಯಗಳು ಶ್ರೇಷ್ಠ, ಇಂದ್ರಿಯಗಳಿಗಿಂತ ಮನಸ್ಸು ಶ್ರೇಷ್ಠ, ಮನಸ್ಸಿಗಿಂತ ಸತ್ವ(ಬುದ್ಧಿ) ಶ್ರೇಷ್ಠ, ಸತ್ವಕ್ಕಿಂತ ಆತ್ಮ ಶ್ರೇಷ್ಠ, ಆತ್ಮನಿಗಿಂತ ಶ್ರೇಷ್ಠ ಅವ್ಯಕ್ತ, ಅವ್ಯಕ್ತಕ್ಕಿಂತ ಪರಮ ಪುರುಷ ಭಗವಂತ ಶ್ರೇಷ್ಠ. ಇಲ್ಲಿ ಕೊನೆಯಲ್ಲಿ ಅವ್ಯಕ್ತತತ್ವ(ಶ್ರೀಲಕ್ಷ್ಮಿ) ಮತ್ತು ಪರಮಪುರುಷ ಭಗವಂತನನ್ನು ಹೇಳಿರುವುದರಿಂದ, ಈ ಶ್ಲೋಕದಲ್ಲಿ ಹೇಳಲಾದ ಇಂದ್ರಿಯ, ಮನಸ್ಸು, ಬುದ್ಧಿ, ಇತ್ಯಾದಿ ಮೂಲತಃ ಅದರ ಅಭಿಮಾನಿ ದೇವತೆಗಳನ್ನು  ಹೇಳುತ್ತವೆ ಎನ್ನುವುದು ತಿಳಿಯುತ್ತದೆ. ಹಿಂದೆ ಹೇಳಿದಂತೆ, ಇಂದ್ರಾದಿ ಸಮಸ್ತ ದೇವತೆಗಳಿಗಿಂತ ಮನೋಭಿಮಾನಿಗಳಾದ ಗರುಡ-ಶೇಷ-ರುದ್ರರು ಶ್ರೇಷ್ಠ;  ಮನೋಭಿಮಾನಿ ದೇವತೆಗಳಿಗಿಂತ ಬುದ್ಧಿಯ ದೇವತೆಯರಾದ ಸರಸ್ವತಿ-ಭಾರತಿಯರು ಶ್ರೇಷ್ಠ;  ಬುದ್ಧಿಯ ದೇವತೆಗಳಿಗಿಂತ ಶ್ರೇಷ್ಠ ಮಹತತ್ವ ಮತ್ತು ಜೀವಕಲಾಭಿಮಾನಿಗಳಾದ ಬ್ರಹ್ಮ-ವಾಯು. ಎಲ್ಲರಿಗಿಂತ ಶ್ರೇಷ್ಠ ಅವ್ಯಕ್ತತತ್ವ ಶ್ರೀಲಕ್ಷ್ಮಿ ಮತ್ತು ಪರಮಪುರುಷ ಭಗವಂತ.
ಭಗವಂತ ಎಲ್ಲವನ್ನೂ ವ್ಯಾಪಿಸಿ ನಿಂತಿದ್ದಾನೆ. ಅವನನ್ನು ವ್ಯಾಪಿಸುವ ಇನ್ನೊಂದು ಶಕ್ತಿ ಇಲ್ಲ. ಎಲ್ಲವೂ ಅವನ ಅಧೀನ. ಇಂತಹ ಭಗವಂತನನ್ನು  ತರ್ಕ/ಯುಕ್ತಿಯಿಂದ ಅಳೆಯಲು ಸಾಧ್ಯವಿಲ್ಲ. ಹಾಗಾಗಿ ತಾರತಮ್ಯಪೂರ್ವಕವಾಗಿ ದೇವತೆಗಳನ್ನು ತಿಳಿದು, ತಾರತಮ್ಯ ಅಂತಗತನಾಗಿರುವ ಭಗವಂತನನ್ನು ತಿಳಿಯುವ ಪ್ರಯತ್ನ ಮಾಡಬೇಕು. ಭಗವಂತನ ಜ್ಞಾನವಿಲ್ಲದ ನಾವು ಕೇವಲ ಹುಟ್ಟಿ-ಸಾಯುವ ಜಂತುಗಳಿದ್ದಂತೆ. ಎಲ್ಲಾ ತಾರತಮ್ಯವನ್ನು ಮತ್ತು ಅದರ ತುತ್ತತುದಿಯಲ್ಲಿರುವ ಸರ್ವೋತ್ತಮ ತತ್ವ ಭಗವಂತನನ್ನು ತಿಳಿದಾಗ ನಾವು ಸಾವಿಲ್ಲದ ಮೋಕ್ಷ ಮಾರ್ಗವನ್ನು ಕಾಣಬಹುದು.      

ನ ಸಂದೃಶೇ ತಿಷ್ಠತಿ ರೂಪಮಸ್ಯ  ನ ಚಕ್ಷುಷಾ ಪಶ್ಯತಿ ಕಶ್ಚನೈನಮ್
ಹೃದಾ ಮನೀಷಾ ಮನಸಾಽಭಿಕ್ಲೃ್ಪ್ತೋ  ಯ ಏತದ್ವಿದುರಮೃತಾಸ್ತೇ ಭವಂತಿ  

ಭಗವಂತ ನಮ್ಮ ಬಾಹ್ಯ ಇಂದ್ರಿಯಗಳಿಗೆ ಗೋಚರನಾಗುವುದಿಲ್ಲ. ಆತನನ್ನು ಕಾಣಬೇಕೆಂದರೆ ನಾವು ನಮ್ಮ ಒಳಗಣ್ಣಿನಿಂದ ಕಾಣಬೇಕು. ಇಲ್ಲಿ ಒಂದು ಪ್ರಶ್ನೆ ಬರಬಹುದು. ಅದೇನೆಂದರೆ: ಅವತಾರ ರೂಪಿ ಭಗವಂತನನ್ನು ಆ ಕಾಲದಲ್ಲಿ ಎಲ್ಲರೂ ಕಂಡಿದ್ದರು. ಆದರೆ ಶಾಸ್ತ್ರ ಆತ ಹೊರಗಣ್ಣಿಗೆ ಅಗೋಚರ ಎನ್ನುತ್ತದೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎಂದು. ನಿಜ, ಅವತಾರ ರೂಪಿ ಭಗವಂತನನ್ನು ಎಲ್ಲರೂ ಕಾಣುತ್ತಿದ್ದರು. ಕೇವಲ ಸಾತ್ವಿಕರಷ್ಟೇ ಅಲ್ಲ, ರಾಕ್ಷಸರೂ ಕೂಡ! ಆದರೆ ಅದು ಭಗವಂತನ ಸಾಕ್ಷಾತ್ಕಾರವಲ್ಲ. ಭಗವಂತನ ಸಾಕ್ಷಾತ್ಕಾರ ಕೇವಲ ಜ್ಞಾನದೃಷ್ಟಿಯಲ್ಲಿ ಮಾತ್ರ ಸಾಧ್ಯ. ಜ್ಞಾನದೃಷ್ಟಿ ಇಲ್ಲದೇ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿಲ್ಲ.
ಭಗವಂತನನ್ನು ನಾವು ನಮ್ಮ ಶುದ್ಧವಾದ ಮನಸ್ಸಿನಿಂದ ನಮ್ಮೊಳಗೇ ಕಾಣಬೇಕು. ಈ ರೀತಿ ಆತನನ್ನು ಕಾಣಬೇಕಾದರೆ ನಮಗೆ ಶುದ್ಧ, ಸಾತ್ವಿಕವಾದ, ನಿರಂತರ ಭಗವಂತನನ್ನು ಪ್ರೀತಿಸುವ, ಭಕ್ತಿಯಿಂದ ತುಂಬಿರುವ  ಮನಸ್ಸಿರಬೇಕು. ಇಂತಹ ಶುದ್ಧ ಮನಸ್ಸಿನಿಂದ ಭಗವಂತನ ಬಗೆಗೆ ನಿರಂತರ ಅಂತರಂಗ ಮಥನ ನಡೆಯಬೇಕು. ಆಗ ಭಗವಂತನ ನಿಶ್ಚಿತವಾದ ಅನುಭೂತಿ ಬರುತ್ತದೆ.

ಯದಾ ಪಂಚಾವತಿಷ್ಠಂತೇ ಜ್ಞಾನಾನಿ ಮನಸಾ ಸಹ
ಬುದ್ಧಿಶ್ಚ ನ ವಿಚೇಷ್ಟತೇ ತಾಮಾಹುಃ ಪರಮಾಂ ಗತಿಮ್                    ೧೦

ನಮ್ಮ ಮನಸ್ಸು ಭಗವಂತನಲ್ಲಿ ಸಂಯೋಗ ಹೊಂದುವುದಕ್ಕೆ ಯೋಗಸಿದ್ಧಿ ಎನ್ನುತ್ತಾರೆ. ಇದಕ್ಕಾಗಿ ನಾವು ನಮ್ಮ ಬಾಹ್ಯೆಂದ್ರಿಯಗಳನ್ನು ಸ್ಥಬ್ಧ ಮಾಡಬೇಕು. ಐದು ಇಂದ್ರಿಯಗಳನ್ನು ಸ್ಥಗನಗೊಳಿಸಿದ ಮೇಲೆ, ಮನಸ್ಸನ್ನು ಸ್ಥಬ್ಧಗೊಳಿಸಬೇಕು. ಇದನ್ನು ಉನ್ಮನೀಭಾವ ಎನ್ನುತ್ತಾರೆ. ಈ ಸ್ಥಿತಿಯಲ್ಲಿ ಕೇವಲ ನಮ್ಮ ಆತ್ಮಸ್ವರೂಪ ಕೆಲಸ ಮಾಡುತ್ತದೆ. ಕೇವಲ ಆತ್ಮಸ್ವರೂಪದಿಂದ ಸ್ವರೂಪಭೂತನಾದ ಆ ಭಗವಂತನನ್ನು ಕಾಣಲು ಸಾಧ್ಯ. ಇದು ಒಬ್ಬ ಮನುಷ್ಯ ಧ್ಯಾನದಲ್ಲಿ ಸಾಧಿಸಬಹುದಾದ ಅತ್ಯಂತ ಉನ್ನತ ಸ್ಥಿತಿ. 

Monday, August 13, 2012

Kathopanishad in Kannada Chapter-02 Canto-03 Shloka-04-06


ಇಹ ಚೇದಶಕದ್ಬೋದ್ಧುಂ ಪ್ರಾಕ್ಷರೀರಸ್ಯ ವಿಸ್ರಸಃ
ತತಃ ಸರ್ಗೇಷು ಲೋಕೇಷು ಶರೀರತ್ವಾಯ ಕಲ್ಪತೇ                                    

ಭಗವಂತನ ಬಗೆಗಿನ ಸಾಧನೆಯನ್ನು ಅಭಿರುಚಿ ಇಲ್ಲದೇ ವಿಧಿಬದ್ಧತೆಯ ಭಯದಿಂದ ಮಾಡಿದರೂ ಅದು ನಿಷ್ಫಲವಾಗುವುದಿಲ್ಲ. ಏಕೆಂದರೆ ಭಗವಂತನ ಅರಿವು ಅಷ್ಟು ತುರ್ತಿನ ಕೆಲಸವಲ್ಲ. ಮೊದಲು ಭಯದಿಂದ ಮಾಡಿದರೂ, ಮುಂದೆ ಅದು ಅದೆಷ್ಟು ಅಗತ್ಯ ಎಂದು ತಿಳಿದಾಗ, ಸಹಜ ಪ್ರವೃತ್ತಿಗೆ ಅದು ಪೂರಕವಾಗುತ್ತದೆ. ಭಗವಂತನ ಅರಿವು ಒಂದೇ ಜನ್ಮದಲ್ಲಿ ಸಾಧ್ಯವಿಲ್ಲ. ಎಷ್ಟೋ ಜನ್ಮಗಳ ಸಾಧನೆಯಿಂದ ಆತನ ದರ್ಶನ ಸಾಧ್ಯ. ಆದರೆ ನಾವು ‘ಈ ಜನ್ಮದಲ್ಲೇ ಭಗವಂತನನ್ನು ಕಾಣಬೇಕು’ ಎನ್ನುವ ಗುರಿ ಹೊಂದಿರಬೇಕು. ಆದ್ದರಿಂದ ಈ ಶ್ಲೋಕದಲ್ಲಿ ‘ಇಹ’ ಎಂದು ಒತ್ತಿ ಹೇಳಲಾಗಿದೆ. ಈ ರೀತಿ ಹಠ ಇದ್ದರೆ ಯಾವುದೋ ಒಂದು ಜನ್ಮದಲ್ಲಿ ಭಗವಂತನನ್ನು ಕಾಣಲು ಸಾಧ್ಯ.
ಭಗವಂತನನ್ನು ತಿಳಿಯಲು ಕೇವಲ ಸ್ಥೂಲ ಶರೀರವೊಂದೇ ಸಾಧನ. ಈ ಶರೀರವನ್ನು ಕಳಚಿಕೊಂಡು ಸೂಕ್ಷ್ಮ ಶರೀರದಲ್ಲಿ ಸ್ವರ್ಗದಲ್ಲಿದ್ದರೂ ಕೂಡ, ಅಲ್ಲಿ ಸಾಧನೆ ಸಾಧ್ಯವಿಲ್ಲ. ಅದಕ್ಕಾಗಿ ಮಾನವ ಶರೀರವನ್ನು ‘ಬ್ರಹ್ಮಣಂ ಸ್ಥಾನಮ್’ ಎಂದಿದ್ದಾರೆ. ಅದಕ್ಕೋಸ್ಕರ ಈ ಸ್ಥೂಲ ಶರೀರ ಬಿದ್ದು ಹೋಗುವ ಮೊದಲೇ ಭಗವಂತನನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಮುಂದಿನ ಜನ್ಮ ಎಂದು ಕಾದರೆ ಆಗ ಮಾನವ ಶರೀರ ಬಾರದೇ ಹೋದರೆ? ಆದ್ದರಿಂದ ಈ ಶರೀರ ಬಿದ್ದುಹೋಗುವ ಮೊದಲು ಆದಷ್ಟು ಭಗವಂತನ ಕುರಿತು ಸಾಧನೆ ಮಾಡಿ, ಆತನ ಅರಿವಿನ ದಾರಿಯಲ್ಲಿ ಸಾಗಬೇಕು. ಮನುಷ್ಯ ಶರೀರ ಬರುವುದೇ ಒಂದು ಭಾಗ್ಯ. ಬಂದಾಗ ಅದನ್ನು ವ್ಯರ್ಥ ಮಾಡಿಕೊಳ್ಳಬಾರದು. ಹೀಗಾಗಿ “ಇದೇ ಜನ್ಮದಲ್ಲಿ ನಿನಗೆ ಸಿಕ್ಕ ಒಂದೊಂದು ಕ್ಷಣವನ್ನೂ ವ್ಯರ್ಥ ಮಾಡಿಕೊಳ್ಳದೆ ಉಪಯೋಗಿಸಿಕೋ” ಎಂದಿದ್ದಾನೆ ಯಮ. ನಮ್ಮ ಸಾಧನೆ ಹೇಗಿರಬೇಕು ಎಂದರೆ: ನಾವು ನಮ್ಮ ಈ ಸ್ಥೂಲ ಶರೀರದಿಂದ ಆಚೆ ಬಂದು, ನಮ್ಮ ಸ್ವರೂಪದ ಮೂಲಕ, ಸ್ವರೂಪ ಇಂದ್ರಿಯದ ಮೂಲಕ ಭಗವಂತನನ್ನು ಕಾಣಬೇಕು. ಹೀಗೆ ಮಾಡಿದಾಗ ಬ್ರಹ್ಮಲೋಕ ಪ್ರಾಪ್ತಿಯಾಗುತ್ತದೆ. ಅಲ್ಲಿ ಕಲ್ಪದ ಅಂತ್ಯದ ತನಕ ಇದ್ದು, ನಂತರ ಪ್ರಳಯ ಕಾಲದಲ್ಲಿ ಭಗವಂತನ ಉದರವನ್ನು ಸೇರಿ, ಮುಂದೆ ಲೋಕಗಳ ಸೃಷ್ಟಿ ಪ್ರಾರಂಭವಾಗುವಾಗ ಜೀವನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.        

ಯಥಾಽಽದರ್ಶೇ ತಥಾಽಽತ್ಮನಿ ಯಥಾ ಸ್ವಪ್ನೇ ತಥಾ ಪಿತೃಲೋಕೇ
ಯಥಾಽಪ್ಸು ಪರೀವ ದದೃಶೇ ತಥಾ ಗಂಧರ್ವಲೋಕೇ
ಛಾಯಾತಪಯೋರಿವ ಬ್ರಹ್ಮಲೋಕೇ                                           

ದೇವರನ್ನು ನೋಡುವುದು ಹೇಗೆ  ಮತ್ತು ಆತ ಎಲ್ಲಿಎಲ್ಲಿ ಹೇಗೆ ಕಾಣಿಸುತ್ತಾನೆ ಎನ್ನುವುದನ್ನು ಈ ಶ್ಲೋಕದಲ್ಲಿ ಯಮ ವಿವರಿಸಿದ್ದಾನೆ. ಮೊದಲು ನಾವು ಧ್ಯಾನದ ಮೂಲಕ ಭಗವಂತನನ್ನು ನಮ್ಮ ಅಂತರಂಗದಲ್ಲಿ ಕಾಣಬೇಕು. ಧ್ಯಾನದಲ್ಲಿ ಭಗವಂತ ಕನ್ನಡಿಯಲ್ಲಿನ ಪ್ರತಿಬಿಂಬದಂತೆ ಕಾಣಿಸಿಕೊಳ್ಳುತ್ತಾನೆ. ಮೃತರಾದ ಜೀವರನ್ನು ನಿಯಮಿಸುವ ದೇವತಾಗಣಗಳಿರುವ ಪಿತೃಲೋಕದಲ್ಲಿ ಭಗವಂತ ‘ಕನಸಿನಲ್ಲಿ ಕಂಡಂತೆ ಕಾಣಿಸಿಕೊಳ್ಳುತ್ತಾನೆ’. ಇದು ಭೂ-ಲೋಕದಷ್ಟು ಸ್ಪಷ್ಟವಲ್ಲ. ಗಂಧರ್ವ ಲೋಕದಲ್ಲಿ ಭಗವಂತ ನೀರಿನಲ್ಲಿ ಕಾಣುವ ಪ್ರತಿಬಿಂಬದಂತೆ ಕಾಣುತ್ತಾನೆ. ಎಲ್ಲವುದಕ್ಕಿಂತ ಸ್ಪಷ್ಟವಾಗಿ ಭಗವಂತನನ್ನು ಚತುರ್ಮುಖನ ಲೋಕವಾದ ಸತ್ಯಲೋಕದಲ್ಲಿ ಕಾಣಬಹುದು. ಅಲ್ಲಿ ಆತ ಹಿತವಾದ ಬೆಳಕಿನಲ್ಲಿ ನಮ್ಮೆದುರು ಇರುವ ವಸ್ತು ಹೇಗೆ ಕಾಣಿಸುತ್ತದೆ, ಹಾಗೆ ಕಾಣಿಸುತ್ತಾನೆ.  ಇದೊಂದು ಅದ್ಭುತ ವಿವರಣೆ. ಇಂತಹ ವಿವರಣೆ ಅಧ್ಯಾತ್ಮ ಸಾಹಿತ್ಯದಲ್ಲಿ ಇನ್ನೆಲ್ಲೂ ಕಾಣಸಿಗುವುದಿಲ್ಲ. ಈ ವಿವರಣೆಯಲ್ಲಿ ನಾವು ಕಂಡುಕೊಳ್ಳುವ ಸತ್ಯವೇನೆಂದರೆ: ಮನುಷ್ಯಲೋಕದಲ್ಲಿ ಮಾನವರಾಗಿ ಹುಟ್ಟಿದ ನಾವು ಭಾಗ್ಯಶಾಲಿಗಳು. ಇಲ್ಲಿ ನಮಗೆ ಧ್ಯಾನದ ಮೂಲಕ ಭಗವಂತನನ್ನು ಸ್ಪಷ್ಟವಾಗಿ ಕಾಣುವ ಅವಕಾಶವನ್ನು ಭಗವಂತ ಕಲ್ಪಿಸಿಕೊಟ್ಟಿದ್ದಾನೆ.

ಇಂದ್ರಿಯಾಣಾಂ ಪೃಥಗ್ಭಾವಮುದಯಾಸ್ತಮಯೌ ಚ ಯತ್
ಪೃಥಗುತ್ಪದ್ಯಮಾನಾನಾಂ ಮತ್ವಾ ಧೀರೋ ನ ಶೋಚತಿ                

ಭಗವಂತನನ್ನು ತಿಳಿಯುವ ಮೊದಲು ನಾವು ನಮ್ಮ ಇಂದ್ರಿಯಗಳನ್ನು, ಅದರ ಹಿಂದಿರುವ ಇಂದ್ರಿಯಾಭಿಮಾನಿ ದೇವತೆಗಳನ್ನು ತಿಳಿದುಕೊಳ್ಳಬೇಕು. ಈ ಇಂದ್ರಿಯಾಭಿಮಾನಿ ದೇವತೆಗಳು ಎಲ್ಲಿಂದ ಯಾವ ಕ್ರಮದಲ್ಲಿ ಹುಟ್ಟಿದರು ಎನ್ನುವುದನ್ನು ನಾವು ತಿಳಿಯಬೇಕು. ಪುರುಷಸೂಕ್ತದಲ್ಲಿ ಹೇಳುವಂತೆ: ಚಂದ್ರಮಾ ಮನಸೋ ಜಾತಶ್ಚಕ್ಷೋಃ ಸೂರ್ಯೋ ಅಜಾಯತ ಮುಖಾದಿಂದ್ರಶ್ಚಾಗ್ನಿಶ್ಚ  ಪ್ರಾಣಾದ್ವಾಯುರಜಾಯತ [೧೩] ಅಂದರೆ: ಚಂದ್ರನು ಭಗವಂತನ ಮನಸ್ಸಿನ ಮಗನು, ಸೂರ್ಯನು ಭಗವಂತನ ಕಣ್ಣಿನಿಂದ ಹುಟ್ಟಿದರೆ, ಬಾಯಿಯಿಂದ ಇಂದ್ರಾಗ್ನಿಗಳ ಜನನವಾಯಿತು. ಪ್ರಾಣದಿಂದ ವಾಯುದೇವನ ಜನನವಾಯಿತು. ಹೀಗೆ ಮೊದಲು ನಾವು ದೇವತೆಗಳ ಕುರಿತು ಮತ್ತು ಅವರ ತಾರತಮ್ಯದ ಕುರಿತು ತಿಳಿದುಕೊಳ್ಳಬೇಕು. ಹಿಂದೆ ಹೇಳಿದಂತೆ:  ಕಣ್ಣಿನ ಅಭಿಮಾನಿ ದೇವತೆ-ಸೂರ್ಯ, ಕಿವಿಯ ಅಭಿಮಾನಿ ದೇವತೆ ಚಂದ್ರ, ಮೂಗಿನ ಅಭಿಮಾನಿ ದೇವತೆ ವಾಯು, ಮಾತಿನ ಅಭಿಮಾನಿ ಅಗ್ನಿ, ಕೈಯ ಅಭಿಮಾನಿ ಇಂದ್ರ, ಕಾಲಿನ ಅಭಿಮಾನಿ ಯಜ್ಞ, ಹೀಗೆ ಪ್ರತಿಯೊಂದು ಇಂದ್ರಿಯಗಳಲ್ಲೂ ಬೇರೆಬೇರೆ ದೇವತಾ ಶಕ್ತಿ ಕೆಲಸ ಮಾಡುತ್ತಿದೆ. ಎಲ್ಲಾ ದೇವತೆಗಳು ಭಗವಂತನ ನಿಯತಿಗೆ ಬದ್ಧರಾಗಿ ಆತನ ಅಧೀನರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಎಲ್ಲಾ ಶಕ್ತಿಗಳನ್ನು ನಿಯಂತ್ರಿಸುವ ಪರಶಕ್ತಿ ಆ ಭಗವಂತ. ಗೀತೆಯಲ್ಲಿ ಹೇಳುವಂತೆ: ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ [೯-೨೪] ನಮ್ಮ ಒಂದೊಂದು ಇಂದ್ರಿಯಗಳಲ್ಲೂ  ಯಜ್ಞ ನಡೆಯುತ್ತಿದೆ. ಇಂದ್ರಿಯಗಳಲ್ಲಿ ಯಜ್ಞ ಮಾಡುವ ದೇವತೆಗಳಿದ್ದಾರೆ. ಈ ಎಲ್ಲಾ ಯಜ್ಞಗಳನ್ನೂ ಸ್ವೀಕಾರ ಮಾಡುವ ಸರ್ವಭೋಕ್ತಾರ, ಸರ್ವಾಧ್ಯಕ್ಷ ಆ ಭಗವಂತ.
ಭಗವಂತ ಎಲ್ಲಾ ದೇವತೆಗಳನ್ನೂ ಒಮ್ಮೆಲೆ ಸೃಷ್ಟಿ ಮಾಡಿಲ್ಲ.  ಪ್ರತಿಯೊಬ್ಬ ತತ್ವಾಭಿಮಾನಿ ದೇವತೆಗಳಿಗೂ ಪ್ರತ್ಯೇಕ ಹುಟ್ಟಿದೆ. ಎಲ್ಲರಿಗಿಂತ ಮೊದಲು ಭಗವಂತ ಚತುರ್ಮುಖ ಬ್ರಹ್ಮನನ್ನು ಸೃಷ್ಟಿ ಮಾಡಿದ. ಚತುರ್ಮುಖನಿಂದ ಗರುಡ-ಶೇಷ-ರುದ್ರರ ಸೃಷ್ಟಿಯಾಯಿತು. ಶಿವನಿಂದ ಇಂದ್ರ-ಕಾಮರ ಸೃಷ್ಟಿಯಾಯಿತು. ಹೀಗೆ ಪ್ರತಿಯೊಬ್ಬ ದೇವತೆಯೂ ತಮ್ಮ ಸ್ವರೂಪಯೋಗ್ಯತೆಗೆ ತಕ್ಕಂತೆ ಸೃಷ್ಟಿಯಾದರು. ಹೀಗೆ ಸೃಷ್ಟಿಯಾದ ದೇವತೆಗಳು ಪ್ರಳಯ ಕಾಲದಲ್ಲಿ ಹುಟ್ಟಿದ ಕ್ರಮಕ್ಕೆ ವಿರುದ್ಧ ಕ್ರಮದಲ್ಲಿ ಸಂಹಾರವಾಗುತ್ತಾರೆ.
ನಾವು ಭಗವಂತನನ್ನು ತಿಳಿಯಬೇಕಾದರೆ ಮೊದಲು ಅವನ ಪರಿವಾರ ದೇವತೆಗಳನ್ನು ತಿಳಿಯಬೇಕು. ಎಲ್ಲಾ ದೇವತೆಗಳ ಚಿಂತನೆ ಮಾಡಿ, ಆ ಎಲ್ಲಾ ದೇವತೆಗಳನ್ನು ನಿಯಂತ್ರಿಸುವ ಪರದೇವತೆಯಾದ ಭಗವಂತನನ್ನು ಕಾಣಬೇಕು. ಇದು ಉಪಾಸನೆಯ ಕ್ರಮ. ಹೀಗೆ ನಾವು ಭಗವಂತನನ್ನು ತಿಳಿದಾಗ ನಮ್ಮಲ್ಲಿ ಧೈರ್ಯ ಹುಟ್ಟುತ್ತದೆ. ಇದರಿಂದಾಗಿ ನಾವೆಂದೂ ದುಃಖ ಶೋಕವನ್ನು ಅನುಭವಿಸುವುದಿಲ್ಲ.

Sunday, August 12, 2012

Kathopanishad in Kannada Chapter-02 Canto-03 Shloka-02-03


ಯದಿದಂ ಕಿಂ ಚ ಜಗತ್ ಸರ್ವಂ ಪ್ರಾಣ ಏಜತಿ ನಿಃಸೃತಮ್
ಮಹದ್ಭಯಂ ವಜ್ರಮುದ್ಯತಂ ಯ ಏತದ್ವಿದುರಮೃತಾಸ್ತೇ ಭವಂತಿ    

ಭಗವಂತನಿಂದ ನಿರ್ಮಿತವಾದ ಈ ಸಮಸ್ತ ಜಗತ್ತೂ ಕೂಡಾ ಚಲನಶೀಲವಾಗಿದೆ. ಆಕಾಶದಲ್ಲಿ ಗ್ರಹ-ಗೋಲಗಳು ನಿರ್ಧಿಷ್ಟವಾಗಿ ನಿಂತು ನಿಯಮಿತವಾಗಿ ಚಲಿಸುತ್ತಿವೆ. ಯಾರು ಇದನ್ನು ಧರಿಸಿದವನು? ಯಾರಿಂದ ಈ ಜಡಲೋಕಕ್ಕೆ ಚಲನೆ ಬಂತು? ಈ ಪ್ರಶ್ನೆಗೆ ಉತ್ತರ ಈ ಶ್ಲೋಕದಲ್ಲಿದೆ. ಇಡೀ ಪ್ರಪಂಚದ ಕ್ರಿಯಾ-ಕಲಾಪಗಳನ್ನು ನಿರ್ವಹಿಸುವವನು ಪ್ರಾಣಾಂತರ್ಗತ ಭಗವಂತ. ಪ್ರಾಚೀನರು ಹೇಳುವಂತೆ: ಇಡೀ ಬ್ರಹ್ಮಾಂಡವನ್ನು ಶೇಷ(ಸಂಕರ್ಷಣ) ಧಾರಣೆ ಮಾಡಿದ್ದಾನೆ. ಇಂತಹ ಶೇಷನನ್ನು ಪ್ರಾಣ ಧಾರಣೆ ಮಾಡಿದ್ದಾನೆ. ಪ್ರಾಣನನ್ನು ಭಗವಂತ ಧಾರಣೆ ಮಾಡಿದ್ದಾನೆ.    ಎಲ್ಲವೂ ಸರ್ವಚೇಷ್ಟಕನಾದ ಭಗವಂತನನ್ನು ಅವಲಂಭಿಸಿ ನಿಂತಿವೆ.
ಜಡ ತಾನೇ ತಾನಾಗಿ ಚಲಿಸುವುದಿಲ್ಲ. ಅದು ಚಲಿಸಬೇಕಾದರೆ ಅದಕ್ಕೆ ಚಲನಶಕ್ತಿ ಕೊಡುವ ಚೇತನ ಒಂದಿರಬೇಕು. ಚೇತನವಿಲ್ಲದೇ ಯಾವುದೇ ಕ್ರಿಯೆ ನಿಷ್ಫನ್ನವಾಗುವುದಿಲ್ಲ. ಇಂದಿನ ವಿಜ್ಞಾನದಲ್ಲಿ ಭೂಮಿ ಅಥವಾ ಇತರ ಗ್ರಹ ಗೋಲಗಳು ಏಕೆ ನಿಯಮಿತವಾಗಿ ತಮ್ಮ ಕಕ್ಷೆಯಲ್ಲಿ ನಿಂತು ತಿರುಗುತ್ತಿವೆ ಎನ್ನುವುದಕ್ಕೆ ಉತ್ತರವಿಲ್ಲ. ‘ಪ್ರತಿಯೊಂದು ವಸ್ತುವಿನ ಹಿಂದೆ ಒಂದು ಚೈತನ್ಯ ಶಕ್ತಿ ಅಡಗಿದೆ.  ಅದನ್ನೇ  ಆ ವಸ್ತುವಿನ ಅಭಿಮಾನಿ ದೇವತೆ ಎನ್ನುತ್ತಾರೆ. ಆ ಚೈತನ್ಯವೇ ಜಡ ವಸ್ತುವಿಗೆ ಚಲನೆ ಕೊಡುವ ಶಕ್ತಿ’. ಇದು  ನಮ್ಮ ಪ್ರಾಚೀನರು ಬಹಳ ಹಿಂದೆ ಕಂಡುಕೊಂಡ ಸತ್ಯ. ಉದಾಹರಣೆಗೆ ಬೆಂಕಿಯ ಅಭಿಮಾನಿ ದೇವತೆ ಅಗ್ನಿ, ಮಳೆಯ ಅಭಿಮಾನಿ ದೇವತೆ ಪರ್ಜನ್ಯ ಇತ್ಯಾದಿ.  ಇಂತಹ ಅನೇಕ ಚೇತನಗಳಿಗೆ ಶಕ್ತಿ ಕೊಡುವ ಮೂಲ ಚೇತನ ಆ ಭಗವಂತ.
ಎಲ್ಲಾ ದೇವತೆಗಳು ವಿಧಿ ನಿಯತಿಯ ಭಯದಲ್ಲಿ ಬದ್ಧತೆಯಿಂದ ತಮ್ಮ ಕಾರ್ಯ ನಿರ್ವಹಿಸುತ್ತಾರೆ. ಇಲ್ಲಿ ಭಯ ಎಂದರೆ ಭಗವಂತನ ಮಹಿಮೆಯನ್ನರಿತು ಬದ್ಧತೆಯಿಂದ ಕಾರ್ಯ ನಿರ್ವಹಿಸುವುದು. ತಮ್ಮ ಕರ್ತವ್ಯ ಕರ್ಮವನ್ನು ಪ್ರಾಮಾಣಿಕವಾಗಿ ಮಾಡುವವರಿಗೆ ಭಗವಂತ ಕರುಣಾಳು. ಆದರೆ ದುರ್ಜನರಿಗೆ ಆತ ಮಹಾ ಭಯಂಕರ. ತಪ್ಪು ಮಾಡುವವರನ್ನು ಆತ ನಿಸ್ಸಂಕೋಚವಾಗಿ ಶಿಕ್ಷಿಸುತ್ತಾನೆ. ಇದಕ್ಕೆ ಮಹಾಭಾರತದ ಕೆಲವು ಘಟನೆಗಳೇ ಸಾಕ್ಷಿ. ದುಷ್ಟ ದುರ್ಯೋಧನನ ಬೆಂಬಲಕ್ಕೆ ನಿಂತು, ಒಂಟಿ ಅಭಿಮನ್ಯುವನ್ನು ನಿರ್ಧಯವಾಗಿ ಬೆನ್ನ ಹಿಂದೆ ಬಂದು ಬಡಿದು ಕೊಂದ ಕರ್ಣನನ್ನು ಕೃಷ್ಣ ಅದೇ ರೀತಿಯಲ್ಲಿ ಶಿಕ್ಷಿಸುತ್ತಾನೆ.  ಅದೇ ರೀತಿ ದುರ್ಯೋಧನ. ತುಂಬಿದ ಸಭೆಯಲ್ಲಿ ತನ್ನ ತೊಡೆಯ ಮೇಲೆ ಬಂದು ಕೂರುವಂತೆ ದ್ರೌಪದಿಯನ್ನು ಆಗ್ರಹಿಸಿದ ತಪ್ಪಿಗಾಗಿ, ಭೀಮನ ಮೂಲಕ ಆತನ ತೊಡೆಯನ್ನು ಮುರಿಸುತ್ತಾನೆ ಕೃಷ್ಣ. ಮೇಲ್ನೋಟಕ್ಕೆ ಇವೆಲ್ಲವೂ ಅಧರ್ಮ ಎನಿಸುತ್ತದೆ. ಆಳವಾಗಿ ನೋಡಿದರೆ ವಿಶ್ವದ ಮೂಲ ನಿಯಮ ಒಂದಿದೆ. ಯಾರು ಅಧರ್ಮ ಮಾಡಿದ್ದಾರೋ ಅವರಿಗೆ ಧರ್ಮದ ಸಾವು ಅಪೇಕ್ಷಿಸುವ ಹಕ್ಕು ಇರುವುದಿಲ್ಲ. ಅಂತವರನ್ನು ನಿರ್ಧಯವಾಗಿ ಸಂಹಾರ ಮಾಡುವುದೇ ಧರ್ಮ.
ಭಗವಂತ ದುಷ್ಟರಿಗೆ ಎಷ್ಟು ಭಯಾನಕ ಎಂದರೆ: ಆತ ಎತ್ತಿ ಹಿಡಿದ ವಜ್ರಾಯುಧ. ಲೋಕದಲ್ಲಿ ವಜ್ರಾಯುಧ ಎಂದರೆ ಸಿಡಿಲು. ಶತ್ರುಗಳ ಪಾಲಿಗೆ ಸಿದ್ಧವಾಗಿ ನಿಂತ ಬರಸಿಡಿಲು ಆ ಭಗವಂತ. ‘ವಜ್ರ’ ಎನ್ನುವುದರ ಶಬ್ದ ನಿಷ್ಫತ್ತಿ  ‘ವೃಜತಿ ಇತಿ ವಜ್ರಃ’. ಅಂದರೆ ಶತ್ರುಗಳು ಎಲ್ಲೇ ಇರಲಿ, ಅವರನ್ನು ಹುಡುಕಿ  ಸಂಹಾರ ಮಾಡುವ ಶಕ್ತಿ. ತತ್ವಶಾಸ್ತ್ರದಲ್ಲಿ ವಜ್ರ ಎನ್ನುವ ಪದಕ್ಕೆ ಇನ್ನೊಂದು ಅರ್ಥವಿದೆ. ‘ವರ್ಜಯತೀತಿ ವಜ್ರಃ’. ಅಂದರೆ   ಸಜ್ಜನರನ್ನು ಕಾಪಾಡುವ, ನಿರ್ದುಷ್ಟವಾದ, ಸ್ವಯಂ ದೋಷಗಳಿದ ದೂರನಾದ, ದುರ್ಜನರ ಪಾಲಿಗೆ ಅತ್ಯಂತ ಭಯಾನಕವಾದ ಶಕ್ತಿ ಆ ಭಗವಂತ.
ಇಲ್ಲಿ ನಮಗೊಂದು ಪ್ರಶ್ನೆ ಬರಬಹುದು. ದೇವರು ಭಯಾನಕ ಎಂದು ಏಕೆ ಹೇಳಿದ್ದಾರೆ ಎಂದು. ಏಕೆಂದರೆ ತಪ್ಪು ಮಾಡಿದವನಿಗೆ ಭಗವಂತನ ಲೋಕದಲ್ಲಿ ಎಂದೂ ಕ್ಷೆಮೆ ಇಲ್ಲ. ಅವನು ಶಿಕ್ಷೆ ಅನುಭವಿಸಲೇ ಬೇಕು. ನಾನು ಬಿತ್ತಿದ್ದನ್ನು ನಾನು ಅನುಭವಿಸಲೇ ಬೇಕು ಎನ್ನುವ ಎಚ್ಚರಕ್ಕಾಗಿ ಇಲ್ಲಿ ಹೀಗೆ ಹೇಳಿದ್ದಾರೆ. ಈ ಶ್ಲೋಕ – ಒಳ್ಳೆಯದನ್ನು ಮಾಡಬೇಕು, ಮಾಡಿ ಜ್ಞಾನ ಮಾರ್ಗದಲ್ಲಿ ಮುಂದೆ ಸಾಗಬೇಕು ಎನ್ನುವ ಸಂದೇಶವನ್ನು ಕೊಡುತ್ತದೆ. ಇದನ್ನು ಯಾರು ತಿಳಿಯುತ್ತಾರೆ, ತಿಳಿದು ಭಗವಂತನ ಮಾರ್ಗದಲ್ಲಿ ಸಾಗುತ್ತಾರೆ, ಅವರು ಸಾವಿಲ್ಲದ ಸ್ಥಿತಿಯನ್ನು ಪಡೆಯುತ್ತಾರೆ.
ಹಿಂದೆ ಹೇಳಿದಂತೆ ಎಲ್ಲಾ ದೇವತೆಗಳೂ ಭಗವಂತನ ನಿಯತಿಗೆ ಹೆದರಿ ತಮ್ಮ ಕರ್ತವ್ಯವನ್ನು ನಿಯಮಬದ್ಧವಾಗಿ ಮಾಡುತ್ತಾರೆ. ಇದನ್ನು ಇನ್ನೂ ಸ್ಪಷ್ಟವಾಗಿ ಮುಂದಿನ ಶ್ಲೋಕದಲ್ಲಿ ಯಮ ವಿವರಿಸುತ್ತಾನೆ.      

ಭಯಾದಸ್ಯಾಗ್ನಿಸ್ತಪತಿ ಭಯಾತ್ತಪತಿ ಸೂರ್ಯಃ
ಭಯಾದಿಂದ್ರಶ್ಚ ವಾಯುಶ್ಚ ಮೃತ್ಯುರ್ಧಾವತಿ ಪಂಚಮಃ                  

ಇದೇ ಅರ್ಥವನ್ನು ಕೊಡುವ ಶ್ಲೋಕ ತೈತ್ತಿರೀಯ ಉಪನಿಷತ್ತಿನಲ್ಲಿ ಕೂಡಾ ಬರುತ್ತದೆ. ಅಲ್ಲಿ ಹೇಳುತ್ತಾರೆ: ಭೀಷಾSಸ್ಮಾದ್ವಾತಃ ಪವತೇ ಭೀಷೋದೇತಿ ಸೂರ್ಯಃ ಭೀಷಾSಸ್ಮಾದಗ್ನಿಶ್ಚೇಂದ್ರಶ್ಚ ಮೃತ್ಯುರ್ಧಾವತಿ ಪಂಚಮ ಇತಿ [ಬ್ರಹ್ಮಾನಂದವಲ್ಲಿ ಎಂಟನೇ ಅನುವಾಕ]. “ಭಗವಂತನ ಭಯದಿಂದಲೇ ಅಗ್ನಿ, ಸೂರ್ಯ, ಇಂದ್ರ, ವಾಯು, ಯಮ, ಎಲ್ಲರೂ ನಿಯಮಬದ್ಧವಾಗಿ ಕಾರ್ಯ ನಿರ್ವಹಿಸುತ್ತಾರೆ” ಎನ್ನುತ್ತಾನೆ ಯಮ. ಇದೇ ವಿವರಣೆ ಗೀತೆಯಲ್ಲಿ ಕೂಡಾ ಬಂದಿದೆ.  ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ  । ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ ॥ [ಅ-೯ ಶ್ಲೋ-೧೯]. ಅಲ್ಲಿ ಭಗವಂತ ಹೇಳುತ್ತಾನೆ: “ನಾನು ಸುಡುತ್ತೇನೆ. ನಾನು ಮಳೆ ಬರದಂತೆ ತಡೆಯುತ್ತೇನೆ; ಮಳೆಗರೆಸುತ್ತೇನೆ. ಸಾವು ಬರದಂತೆ ಮಾಡುತ್ತೇನೆ; ಸಾಯಿಸುತ್ತೇನೆ. ಓ ಅರ್ಜುನ, ಕಾಣುವ ಕಾರ್ಯ, ಕಾಣದ ಕಾರಣ ಎಲ್ಲವೂ ನನ್ನಿಂದ” ಎಂದು. ಹೀಗೆ ಬ್ರಹ್ಮಾದಿ ಸಮಸ್ತ ದೇವತೆಗಳೂ ಭಗವಂತನ ನಿಯತಿಗೆ ಬದ್ಧರಾಗಿ, ಎಚ್ಚರದಿಂದ ಕಾರ್ಯ ನಿರ್ವಹಿಸುತ್ತಾರೆ. ಎಲ್ಲರ ಧಾರಕಶಕ್ತಿಯಾಗಿ ಭಗವಂತ ಈ ಪ್ರಪಂಚವೆಂಬ ವೃಕ್ಷವನ್ನು ನಿಯಮಿಸುತ್ತಾನೆ.  

Saturday, August 11, 2012

Kathopanishad in Kannada Chapter-02 Canto-03 Shloka-01


ಅಧ್ಯಾಯ-೨

ವಲ್ಲೀ-೩

ಊರ್ಧ್ವಮೂಲೋಽವಾಕ್ಶಾಖ ಏಷೋಽಶ್ವತ್ಥಃ ಸನಾತನಃ
ತದೇವ ಶುಕ್ರಂ ತದ್ಬ್ರಹ್ಮ ತದೇವಾಮೃತಮುಚ್ಯತೇ
ತಸ್ಮಿಂಲ್ಲೋಕಾಃ ಶ್ರಿತಾಃ ಸರ್ವೇ ತದು ನಾತ್ಯೇತಿ ಕಶ್ಚನ ಏತದ್ವೈ ತತ್

ನಾವು ಭಗವಂತನನ್ನು ತಿಳಿದುಕೊಳ್ಳಬೇಕಾದರೆ ಮೊದಲು ಅವನು ಸೃಷ್ಟಿ ಮಾಡಿದ ಈ ವಿಶ್ವವನ್ನು ತಿಳಿದುಕೊಳ್ಳಬೇಕು. ಒಮ್ಮೆ ಈ ಸೃಷ್ಟಿ ತಿಳಿದರೆ ಆ ಸೃಷ್ಟಿಯ ಹಿಂದಿರುವ ಸೃಷ್ಟಿಕರ್ತ ತನ್ನಿಂದ ತಾನೇ ತಿಳಿಯುತ್ತಾನೆ. ಇಲ್ಲಿ ಯಮ ಭಗವಂತ ನಿರ್ಮಿಸಿದ ಈ ಸೃಷ್ಟಿಯನ್ನು ಒಂದು ಮರದ ರೂಪದಲ್ಲಿ ವಿವರಿಸಿದ್ದಾನೆ. ಇಲ್ಲಿ ಬಂದಿರುವ ವಿವರಣೆಯನ್ನೇ ಕೃಷ್ಣ ಗೀತೆಯ ಹದಿನೈದನೇ ಅಧ್ಯಾಯದಲ್ಲಿ ವಿವರಿಸಿ ಹೇಳಿರುವುದನ್ನು ಕಾಣುತ್ತೇವೆ.  ಇಲ್ಲಿ ಯಮ ಹೇಳುತ್ತಾನೆ: ಈ ಪ್ರಪಂಚ ಒಂದು ಅಶ್ವತ್ಥ ವೃಕ್ಷದಂತೆ ಎಂದು. ‘ಅಶ್ವತ್ಥ’ ಎನ್ನುವ ಪದ ಈ ಪ್ರಪಂಚದ ವಿಶಿಷ್ಠವಾದ ಸ್ವಭಾವವನ್ನು ಅನೇಕ ರೀತಿಯಲ್ಲಿ ಎತ್ತಿ ಹೇಳುತ್ತದೆ.
(೧) ‘ಅಶ್ವತ್ಥ’ ಎನ್ನುವುದರ ಸ್ಥೂಲ ಅರ್ಥ ಅರಳಿ ಮರ. ಇದನ್ನು ಪಿಪ್ಪಲ ಎಂದೂ ಕರೆಯುತ್ತಾರೆ. ಪ್ರಪಂಚದಲ್ಲಿರುವ ಎಲ್ಲಾ ಮರಗಳಿಗಿಂತ ಈ ಮರ ಭಿನ್ನ. ಗಾಳಿಯ ಸುಳಿಯೇ ಇಲ್ಲದೆ ಎಲ್ಲಾ ಮರಗಳೂ ಸ್ಥಬ್ಧವಾಗಿರುವಾಗ, ಸಣ್ಣ ಗಾಳಿಯ ಎಳೆ ಬಂದರೆ ಯಾವ ಮರವೂ ಅಲ್ಲಾಡುವುದಿಲ್ಲ. ಆದರೆ ಅಶ್ವತ್ಥಮರದ ಎಲೆಗಳು ಗಿಲಿ-ಗಿಲಿ ಎಂದು ಹಂದಾಡಲು ಆರಂಭಿಸುತ್ತವೆ. ಅಶ್ವತ್ಥಕ್ಕೆ ಸಂಸ್ಕೃತದಲ್ಲಿ ಚಲದಲಃಎಂದೂ ಕರೆಯುತ್ತಾರೆ. ಅಂದರೆ ಯಾವಾಗಲೂ ಚಲನಶೀಲವಾದ ಎಲೆಗಳುಳ್ಳ ಮರ ಎಂದರ್ಥ. ಇದೇ ಪ್ರಪಂಚಕ್ಕೂ ಮತ್ತು ಅಶ್ವತ್ಥಮರಕ್ಕೂ ಇರುವ ಸಾಮ್ಯ. ಪ್ರಪಂಚ ಕೂಡಾ ಯಾವಾಗಲೂ ಚಲನಶೀಲ. ಅದು ಸದಾ ಚಲಿಸುತ್ತಾ ಬದಲಾಗುತ್ತಾ ಇರುತ್ತದೆ.
(೨) ಅಶ್ವ+ತ್ಥ: ಇಲ್ಲಿ ಅಶ್ವ ಎಂದರೆ ಕುದುರೆ. ಪ್ರಪಂಚ ಅಶ್ವದ ಹಾಗೆ ಇರುವಂತಹದ್ದು. ಕುದುರೆಯನ್ನು ಗಮನಿಸಿದರೆ ನಮಗೆ ಈ ಅರ್ಥ ತಿಳಿಯುತ್ತದೆ. ಇತರ ಪ್ರಾಣಿಗಳಿಗೂ ಕುದುರೆಗೂ ಒಂದು ವ್ಯತ್ಯಾಸವಿದೆ. ಎಲ್ಲಾ ಪ್ರಾಣಿಗಳೂ ವಿಶ್ರಾಮದ ಕಾಲದಲ್ಲಿ ನಿಶ್ಚಲವಾಗಿ ನಿಲ್ಲಬಲ್ಲವು. ಆದರೆ ಕುದುರೆ ಒಂದು ಕ್ಷಣವೂ ನಿಶ್ಚಲವಾಗಿ ನಿಲ್ಲದು. ಈ ಜಗತ್ತೂ ಕೂಡಾ ಅಶ್ವದಂತೆ. ಇದು ಎಂದೂ  ಸ್ಥಿರವಾಗಿ ನಿಲ್ಲುವುದಿಲ್ಲ.
(೩) ಅ+ಶ್ವಃ+ತ್ಥ ಇಲ್ಲಿ ಶ್ವಃಅಂದರೆ ನಾಳೆ, ‘ತ್ಥಅಂದರೆ ಇರುವಂಥದ್ದು. ಅಶ್ವತ್ಥ ಅಂದರೆ  ನ ಶ್ವಃ ತಿಷ್ಠತಿ”. ಇಂದು ಇದೆ ಆದರೆ ನಾಳೆ ಇರುತ್ತದೆ ಎನ್ನುವ ಖಾತರಿ ಇಲ್ಲ. ಅಂದರೆ ಈ ಪ್ರಪಂಚ ಕ್ಷಣಿಕ. ಬದಲಾವಣೆಯೇ ಜಗದ ನಿಯಮ. ಸೃಷ್ಟಿಯಾದ ಈ ಪ್ರಪಂಚ ಒಂದು ದಿನ ನಾಶವಾಗುತ್ತದೆ.
(೪) ಅಶ್ವತ್ಥದ ಶಾಸ್ತ್ರೀಯ ನಿರ್ವಚನ ಅರ್ಥವನ್ನು ನೋಡಿದರೆ(etymologicaly)- ಅಶು+ವಾ+ತ+ಥ. ಇಲ್ಲಿ ಅಶು+ವಾ ಎಂದರೆ ಎಲ್ಲಕ್ಕಿಂತ ವೇಗವಾಗಿ ಹೋಗುವಂತಹದ್ದು-ಅದು ಭಗವಂತ. ಅದಕ್ಕಾಗಿ ಭಗವಂತನನ್ನು ಅಶ್ವಎಂದೂ ಕರೆಯುತ್ತಾರೆ. ಕುದುರೆ ಮುಖದ ಹಯಗ್ರೀವ ರೂಪದಲ್ಲಿ ಭಗವಂತ ಸಮಸ್ತ ವೇದ ವಿದ್ಯೆಯನ್ನು ಪ್ರಪಂಚಕ್ಕೆ ಕೊಟ್ಟ. ಎಲ್ಲವನ್ನೂ ಎಲ್ಲಕ್ಕಿಂತ ಮೊದಲು ತಿಳಿದ ಭಗವಂತ ಈ ಜಗತ್ತಿನಲ್ಲಿ, ಇದರ ಒಳಗೂ ಹೊರಗೂ ನಿಯಮನ ಮಾಡುವುದಕ್ಕೋಸ್ಕರ ಅಶ್ವನಾಮಕನಾಗಿ ಕೂತಿದ್ದಾನೆ(ತ್ಥ). ಈತ ಇಡೀ ಪ್ರಪಂಚದಲ್ಲಿ ತತ’(ತುಂಬಿದ್ದಾನೆ) ಮತ್ತು ಕೊನೆಗೆ ಇಡೀ ಜಗತ್ತು ಆತನಿಗೆ ಥಂ.(ಥಂ =ಆಹಾರ -ಇಡೀ ಜಗತ್ತನ್ನು ಕಬಳಿಸುವ ಶಕ್ತಿ, ಇದು ಪ್ರಳಯದ ವಿವರಣೆ).
ಇಂತಹ ಈ ಪ್ರಪಂಚ ಸನಾತನವಾದುದು ಎನ್ನುತ್ತಾನೆ ಯಮ. ಏಕೆಂದರೆ ಭಗವಂತನ ಸೃಷ್ಟಿ ಮತ್ತು ಸಂಹಾರ ಕ್ರಿಯೆ ನಿರಂತರ. ಈ ರೀತಿ ಭಗವಂತನಿಂದ ಸೃಷ್ಟಿಯಾಗುವ ಈ ಪ್ರಪಂಚ ಅಶ್ವತ್ಥ ಮರದಂತಿದೆ. ಹೇಗೆ ಬೀಜ, ಅದರೊಳಗಿನ ಚೈತನ್ಯ, ಭೂಮಿ, ಬೇರುಗಳು ಮರಕ್ಕೆ ಮೂಲವೋ ಹಾಗೇ ಈ ಪ್ರಪಂಚವೆಂಬ ಮರದ ಮೂಲ ಅದರ ಟೊಂಗೆ-ಟಿಸಿಲುಗಳ್ಯಾವುದು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಇಲ್ಲಿ ಈ ಮರದ ಮೂಲ ಮೇಲಿದೆ(ಊರ್ಧ್ವಮೂಲ)ಎಂದಿದ್ದಾರೆ. ಮೇಲೆ ಅಂದರೆ ಎಲ್ಲಕ್ಕಿಂತ ಹಿರಿದಾದ ಭಗವಂತ. ಈ ಪ್ರಪಂಚ ಎನ್ನುವ ಮರಕ್ಕೆ ಮೂಲ ಆ  ಭಗವಂತ. ಪ್ರಪಂಚದ ಮೂಲದಲ್ಲಿ ಎಲ್ಲಕ್ಕಿಂತ ಎತ್ತರದಲ್ಲಿ ತಂದೆ-ತಾಯಿಯಾಗಿ ಲಕ್ಷ್ಮೀ-ನಾರಾಯಣರಿದ್ದಾರೆ. ಜಡಪ್ರಕೃತಿಯಿಂದ ಈ ಮರ ವಿಕಸನವಾಗುತ್ತದೆ. ಭಗವಂತನ ನಂತರ  ಚತುರ್ಮುಖ ಬ್ರಹ್ಮ ಪ್ರಾಣದೇವರು. ಇವರೇ ಈ ಮರದ ಪ್ರದಾನ ಕಾಂಡ. ನಂತರ ಗರುಡ-ಶೇಷ-ರುದ್ರರು, ಇಂದ್ರಾದಿ ದೇವತೆಗಳು ಈ ಮರದ ಟೊಂಗೆಗಳು. ಆನಂತರ ಅವಾಂತರ ದೇವತೆಗಳು, ಗಂಧರ್ವರು, ಮನುಷ್ಯರು, ಪ್ರಾಣಿಗಳು, ಪಕ್ಷಿಗಳು, ಹೀಗೆ ಒಂದರ ನಂತರ ಒಂದು ಶಾಖೆಗಳು. ಇವೆಲ್ಲವೂ ಸೇರಿ ಒಂದು ಮರವಾಯಿತು. ಇಲ್ಲಿ ಅವಾಕ್ಶಾಖ’ ಅಂದರೆ  ಮೇಲಿನಿಂದ ಕೆಳಕ್ಕೆ ಬೆಳೆಯುವುದು. ಇದು ದೇವತಾ ತಾರತಮ್ಯವನ್ನು ಸೂಚಿಸುತ್ತದೆ. ಆದ್ದರಿಂದ ಭಗವಂತನನ್ನು ಉಪಾಸನೆ ಮಾಡುವಾಗ ಆತ ಈ ಇಡೀ ವಿಶ್ವಕ್ಕೆ ಆಧಾರಸ್ತಂಭ ಎನ್ನುವ ಸತ್ಯವನ್ನು ತಿಳಿದು ಉಪಾಸನೆ ಮಾಡಬೇಕು.
ಎಲ್ಲರಿಗೂ ಅಧಾರನಾಗಿರುವ ಭಗವಂತ ಶೋಕರಹಿತ. ಆತ ನಿರ್ಮಲ ಮತ್ತು ನಿಷ್ಕಳಂಕ. ಎಲ್ಲಕ್ಕಿಂತ ದೊಡ್ಡದಾಗಿರುವ ಮತ್ತು ತನ್ನನ್ನು ಆಶ್ರಯಿಸಿದವರನ್ನು ಎತ್ತರಕ್ಕೆ ಕೊಂಡೊಯ್ಯುವ ಭಗವಂತನನ್ನು ಬ್ರಹ್ಮಃ ಎಂದೂ ಕರೆಯುತ್ತಾರೆ. ಇಂತಹ ಭಗವಂತನನ್ನು ಯಾರೂ ತಿರಸ್ಕರಿಸಿ ಬದುಕಲು ಸಾಧ್ಯವಿಲ್ಲ. ಯಾರು ಈ ಸಂಸಾರ ವೃಕ್ಷದಲ್ಲಿದ್ದು ನಮ್ಮನ್ನು ಕಾಪಾಡುತ್ತಾನೋ ಅವನೇ ಸಂಸಾರದಿಂದ ಪಾರಾಗಿ ಮೋಕ್ಷಕ್ಕೆ ಹೋದಾಗಲೂ ನಮ್ಮನ್ನು ರಕ್ಷಣೆ ಮಾಡುವ ಸ್ವಾಮಿ. "ನೀನು ತಿಳಿಯಬಯಸಿದ ಭಗವದ್ ತತ್ವ ಇದೇ"  ಎನ್ನುತ್ತಾನೆ ಯಮ.
ಈ ಶ್ಲೋಕದಲ್ಲಿ ನಾವು ಗಮನಿಸಬೇಕಾದ ಒಂದು ಅಂಶವೆಂದರೆ ಇಲ್ಲಿ ಮರದ ಎಲೆಗಳನ್ನು ವಿವರಿಸಿಲ್ಲ.  ಆದರೆ ಈ ವಿವರಣೆಯನ್ನು ಕೃಷ್ಣ ಗೀತೆಯಲ್ಲಿ ಬಿಡಿಸಿತ್ತಿದ್ದಾನೆ. ಅಲ್ಲಿ ವಿವರಿಸಿರುವಂತೆ ವೇದಗಳೇ ಮರದ ಎಲೆಗಳು. ಪ್ರಳಯ ಕಾಲದಲ್ಲಿ ಭಗವಂತ ಈ ವೇದವೆಂಬ ಎಲೆಯ ಮೇಲೆ ಮಲಗಿರುತ್ತಾನೆ. ಆ ಕಾಲದಲ್ಲಿ ಸಂಪೂರ್ಣ ಪ್ರಪಂಚ ಸೂಕ್ಷರೂಪದ ಪ್ರಳಯ ಜಲ ರೂಪದಲ್ಲಿರುತ್ತದೆ.  ಸೃಷ್ಟಿಯಾದ ಪ್ರಪಂಚ ಪ್ರಳಯ ಕಾಲದಲ್ಲಿ ಪ್ರಳಯ ಜಲವಾಗಿ ರೂಪಾಂತರ ಹೊಂದುತ್ತದೆ. ಆದರೆ ವೇದಗಳು ಮಾತ್ರ ಎಂದೂ ನಾಶವಾಗುವುದಿಲ್ಲ. ಹಾಗಾಗಿ ಪ್ರಳಯ ಜಲದಲ್ಲಿ ಎಲೆಯ ಮೇಲೆ ಮಲಗಿರುವ ಭಗವಂತನ ಕಲ್ಪನೆಯನ್ನು ಶಾಸ್ತ್ರ ಚಿತ್ರಿಸುತ್ತದೆ.

Sunday, August 5, 2012

Kathopanishad in Kannada Chapter-02 Canto-02 Shloka-14-15


ತದೇತದಿತಿ ಮನ್ಯಂತೇಽನಿರ್ದೇಶ್ಯಂ ಪರಮಂ ಸುಖಮ್
ಕಥಂ ನು ತದ್ವಿಜಾನೀಯಾಂ ಕಿಮು ಭಾತಿ ವಿಭಾತಿ ವಾ ೧೪

ಭಗವಂತನ ಅರಿವು ಅದೆಷ್ಟು ನಿಗೂಢ ಎನ್ನುವುದನ್ನು ಇಲ್ಲಿ ಯಮ ವಿವರಿಸಿದ್ದಾನೆ. ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡವರಿಗೇ 'ಭಗವಂತನನ್ನು ಕಂಡಿದ್ದೇನೆ' ಎಂದು ಹೇಳುವಷ್ಟು ಧೈರ್ಯವಿಲ್ಲ. ಏಕೆಂದರೆ ಭಗವಂತ ಅನಂತ. ಈ ಅನಂತದಲ್ಲಿ ನಾವು ಗ್ರಹಿಸಲು ಸಾಧ್ಯವಾಗುವುದು ಅತ್ಯಂತ ಚಿಕ್ಕ ಅಂಶ ಮಾತ್ರ. ಆದ್ದರಿಂದ ನಾವು ಕಾಣುವ ಭಗವಂತ ಕುರುಡ ಕಂಡ ಆನೆಯಂತೆ.  ಯಮ ಹೇಳುತ್ತಾನೆ: ನಾನು ಧ್ಯಾನದಲ್ಲಿ ದೇವರನ್ನು ಕಂಡೆನೋ ಅಥವಾ ಇಲ್ಲವೋ ನನಗೇ ತಿಳಿಯದು. ಅವನು ಕಾಣಿಸಿಕೊಳ್ಳುತ್ತಾನೋ ಇಲ್ಲವೋ ನನಗೇ ತಿಳಿಯದು. ಹೀಗಿರುವಾಗ ಅವನ ವರ್ಣನೆಯನ್ನು ನಿನಗೆಂತು ಹೇಳಲಿ” ಎಂದು. ಭಗವಂತನಲ್ಲಿ ತನ್ಮಯತೆ ಬರುವ ಕ್ಷಣ ಅತ್ಯಂತ ಆನಂದದ ಕ್ಷಣ. ಲೋಕದಲ್ಲಿ ಆ ಆನಂದಕ್ಕೆ ಸಾಟಿಯಾದ ಆನಂದ ಇನ್ನೊಂದಿಲ್ಲ. ಇಂತಹ ಆನಂದವನ್ನು ಅನುಭವಿಸಬೇಕೇ  ಹೊರತು ವಿವರಿಸಲು ಸಾಧ್ಯವಿಲ್ಲ ಎನ್ನುತ್ತಾನೆ ಯಮ.
ಭಗವಂತ ಅಳೆಯಲಾಗದ ಅನಂತವಾದ ಸುಖದ ಕಡಲು. "ಇದು ನನ್ನದೇ ಆದ ಮಾನಸಿಕೆ ಭ್ರಮೆ ಅಲ್ಲ. ಪ್ರಪಂಚದಲ್ಲಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಪ್ರತಿಯೊಬ್ಬ ಜ್ಞಾನಿಯ ಅನುಭವವೂ ಇದೇ" ಎನ್ನುತ್ತಾನೆ ಯಮ.  ಆದ್ದರಿಂದ ಭಗವಂತನೆಂದರೆ ಅಪರಂಪಾರವಾದ, ಜ್ಞಾನಾನಂದಸ್ವರೂಪವಾದ, ಯಾರಿಂದಲೂ ಪೂರ್ಣ ಗ್ರಹಿಸಲು ಸಾಧ್ಯವಾಗದ ಸರ್ವಜ್ಞತತ್ವ ಎಂದು ಉಪಾಸನೆ ಮಾಡುವುದು ಶಾಸ್ತ್ರಸಮ್ಮತ.  
                                   
ನ ತತ್ರ ಸೂರ್ಯೋ ಭಾತಿ ನ ಚಂದ್ರತಾರಕಂ ನೇಮಾ ವಿದ್ಯುತೋ ಭಾಂತಿ ಕುತೋಽಯಮಗ್ನಿಃ
ತಮೇವ ಭಾಂತಮನುಭಾತಿ ಸರ್ವಂ  ತಸ್ಯ ಭಾಸಾ ಸರ್ವಮಿದಂ ವಿಭಾತಿ ೧೫

ಭಗವಂತನನ್ನು ಸೂರ್ಯನಾಗಲಿ, ಚಂದ್ರನಾಗಲೀ, ಮಿಂಚು-ನಕ್ಷತ್ರವಾಗಲೀ, ಅಗ್ನಿಯಾಗಲೀ ಬೆಳಗಿಸಿ ತೋರಿಸಲಾರವು. ಏಕೆಂದರೆ ಈ ಎಲ್ಲಾ ಬೆಳಕಿನ ಪುಂಜಗಳಿಗೆ ಬೆಳಕನ್ನೀಯುವ ಮೂಲ ಬೆಳಕು ಆ ಭಗವಂತ. ಭಗವಂತನ ಬೆಳಕಿಗೆ ಅನುಗುಣವಾಗಿ ಕಣ್ಣಿಗೆ ಕಾಣುವ ಈ ಬೆಳಕುಗಳಿವೆ. ಎಲ್ಲಾ ಬೆಳಕುಗಳ ಒಳಗೆ ಬೆಳಕಾಗಿ ಭಗವಂತ ತುಂಬಿದ್ದಾನೆ. ಎಲ್ಲಾ ಬೆಳಕುಗಳೂ ಭಗವಂತನ ಬೆಳಕಿನ ಪ್ರತಿಫಲನ. ಭಗವಂತನಲ್ಲದ, ಸ್ವತಂತ್ರವಾದ ಬೆಳಕು ಈ ಪ್ರಪಂಚದಲ್ಲಿಲ್ಲ.  ಇದನ್ನೇ ಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ:
ನ ತದ್ ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ ।
ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ  ॥೧೫-೬॥  
ಅದನ್ನು ಸೂರ್ಯ ಬೆಳಗಿಸಲಾರ; ಚಂದ್ರ ಬೆಳಗಿಸಲಾರ; ಬೆಂಕಿ ಕೂಡಾ. ಅದರತ್ತ ತೆರಳಿದವರು ಮತ್ತೆ ಮರಳುವುದಿಲ್ಲ. ಅದು ನನ್ನ ಹಿರಿಯ ರೂಪ.
                                                           
ಇತಿ ಕಾಠಕೋಪನಿಷದಿ ದ್ವಿತೀಯಾಧ್ಯಾಯೇ ದ್ವಿತೀಯಾ ವಲ್ಲೀ
ಇಲ್ಲಿಗೆ ಕಾಠಕೋಪನಿಷತ್ತಿನ ಎರಡನೇ ಅಧ್ಯಾಯದ ಎರಡನೇ ವಲ್ಲೀ ಮುಗಿಯಿತು