ಕಠೋಪನಿಷತ್

ಕಠೋಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ.

ಅಗ್ನಿಹೋತ್ರದ ಮಹತ್ವವೇನು? ಅದರ ಹಿಂದಿನ ವಿಜ್ಞಾನವೇನು? ಜೀವ ಅನ್ನುವುದು ಇದೆಯೋ? ಸತ್ತಮೇಲೆ ಜೀವಕ್ಕೆ ಅಸ್ತಿತ್ವವಿದೆಯೋ? ಪರಲೋಕ ಎನ್ನುವುದೊಂದಿದೆಯೋ? ಜೀವನಿಗಿಂತ ಬೇರೆಯಾಗಿ ದೇವರು ಇದ್ದಾನೆಯೇ? ಭಗವಂತ ನಮ್ಮನ್ನು ಸಂಸಾರದಲ್ಲಿ ಮಾತ್ರ ನಿಯಮಿಸುವುದೋ ಅಥವಾ ಮೋಕ್ಷದಲ್ಲೂ ಆತನ ನಿಯಂತ್ರಣವಿದೆಯೋ? ಮೋಕ್ಷಕ್ಕೆ ಹೋದ ಜೀವದ ಇರವು ಹೇಗಿರುತ್ತದೆ? ಮೋಕ್ಷಕ್ಕೆ ಹೋದ ಮೇಲೆ ಏನಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕಠೋಪನಿಷತ್ತು.
Katha Upanishad in Kannada. Reference: Upanishad discourse by Poojya Bannanje Govindacharya

Download pdf: e-Book

Saturday, April 7, 2012

Kathopanishad in Kannada Ch-01 Canto-01 Shloka-5-8


              ಬಹೂನಾಮೇಮಿ ಪ್ರಥಮೋ  ಬಹೂನಾಮೇಮಿ ಮಧ್ಯಮಃ
              ಕಿಂ ಸ್ವಿದ್ಯಮಸ್ಯ ಕರ್ತವ್ಯಂ ಯನ್ಮಯಾSದ್ಯ ಕರಿಷ್ಯತಿ        


“ನಿನ್ನನ್ನು ಮೃತ್ಯುವಿಗೆ ದಾನ ಮಾಡಿದ್ದೇನೆ-ಅಲ್ಲಿಗೆ ಹೋಗು” ಎನ್ನುವ ತಂದೆಯ ಕೋಪದ ಮಾತನ್ನು ನಚಿಕೇತ ಆದೇಶವಾಗಿ ಸ್ವೀಕರಿಸಿ, ಸ್ಥೂಲ ದೇಹವನ್ನು ತೊರೆದು ಪರಲೋಕದತ್ತ ತನ್ನ ಸೂಕ್ಷ್ಮಶರೀರದ ಮೂಲಕ ಪಯಣಿಸುತ್ತಾನೆ. ಹೀಗೆ ಸಾಗುವಾಗ ಆತನ ಹಿಂದೆ ಆತನ ನಂತರ ಸತ್ತವರು ಹಾಗೂ ಆತನಿಗಿಂತ  ಮುಂದೆ ಆತನಿಗಿಂತ ಮೊದಲು ಸತ್ತ ಜೀವಗಳ ಪ್ರವಾಹವೇ ಸಾಗುತ್ತಿತ್ತು. ಆತನ ಹಿಂದಿರುವ ಜೀವಗಳ ಮುಂದಾಳಾಗಿ, ಆತನಿಗಿಂತ ಮುಂದಿರುವ ಜೀವಗಳ ಗುಂಪಿನಲ್ಲಿ ಒಬ್ಬನಾಗಿ ನಚಿಕೇತ ಪರಲೋಕದತ್ತ ತೆರಳುತ್ತಿದ್ದ. ಹೀಗೆ ಸಾಗುತ್ತಿದ್ದ ಆತನಿಗೆ ತನ್ನ ತಂದೆಯ ಮೇಲೆ ಯಾವುದೇ ಕೊಪವಿರಲಿಲ್ಲ. ತಾನು ಚಿಕ್ಕ ವಯಸ್ಸಿನಲ್ಲೇ ಸಾಯಬೇಕಾಗಿ ಬಂತಲ್ಲಾ ಎನ್ನುವ ದುಃಖವೂ ಇರಲಿಲ್ಲ. ಆದರೆ ತಂದೆ ನನ್ನನ್ನು ಯಮನಿಗೆ ದಾನವಾಗಿ ಕೊಟ್ಟು ಈ ದಾನವನ್ನೂ ವ್ಯರ್ಥ ಮಾಡಿದನಲ್ಲ ಎನ್ನುವ ಬೇಸರವಿತ್ತು. ಏಕೆಂದರೆ ಒಂದು ವೇಳೆ ಇನ್ಯಾರಿಗೋ ದಾನ ಮಾಡುತ್ತಿದ್ದರೆ ನಚಿಕೇತ ಅವರ ಸೇವೆ ಮಾಡಿಕೊಂಡು ಬದುಕುತಿದ್ದ ಮತ್ತು ಅದರ ಪುಣ್ಯ ತಂದೆಗೆ ಸೇರುತ್ತಿತ್ತು. ಆದರೆ ಇಲ್ಲಿ ಯಮನಿಗೆ ದಾನ ಮಾಡಿರುವುದರಿಂದ- ಯಮನಿಗೆ ತನ್ನಿಂದ ಯಾವ ಉಪಯೋಗವೂ ಇಲ್ಲ, ಆದ್ದರಿಂದ ಈ ದಾನವೂ ವ್ಯರ್ಥವಾಯಿತಲ್ಲ ಎನ್ನುವುದು ಆತನ ಚಿಂತನೆ.

ಅನುಪಶ್ಯ ಯಥಾ ಪೂರ್ವೇ ಪ್ರತಿಪಶ್ಯ ತಥಾSಪರೇ
ಸಸ್ಯಮಿವ ಮರ್ತ್ಯಃ ಪಚ್ಯತೇ ಸಸ್ಯಮಿವಾಜಾಯತೇ ಪುನಃ               

ಯಮಲೋಕದತ್ತ ಸಾಗುತ್ತಿರುವ ನಚಿಕೇತ ಯಮಧೂತರ ಮಾತುಗಳನ್ನೂ ಕೇಳಿಸಿಕೊಳ್ಳುತ್ತಾನೆ. ಅವರು ಹೇಳುತ್ತಾರೆ: ಪಾಪಿಗಳು ಯಮಲೋಕದಲ್ಲಿ ಯಾವ ರೀತಿ ಯಾತನೆ ಅನುಭವಿಸುತ್ತಾರೆ ಅನ್ನುವುದನ್ನು ಅನುಭವಿಸಿ ನೋಡು” ಎಂದು. “ಹಿಂದೆ ಬಂದವರು ಅನುಭವಿಸಿದ್ದೂ ಇದನ್ನೇ, ಮುಂದೆ ಬರುವವರು ಅನುಭವಿಸುವುದೂ ಇದನ್ನೆ. ಸಸ್ಯವನ್ನು(ತರಕಾರಿಯನ್ನು) ಹೇಗೆ ಪಾತ್ರೆಯಲ್ಲಿ ಹಾಕಿ ಕುದಿಸುತ್ತಾರೆ, ಹಾಗೆ ಪಾಪಿಗಳನ್ನು ನರಕದ ಕುಂಡದಲ್ಲಿ ಕುದಿಸುತ್ತಾರೆ. ಅವರು ಈ ರೀತಿ ದುಃಖದಲ್ಲಿ ಬೆಂದು, ದುಃಖವನ್ನು ಅನುಭವಿಸಿ ಪಕ್ವವಾಗಿ ಪುನಃ ಭೂಮಿಯಲ್ಲಿ ಹುಟ್ಟುತ್ತಾರೆ”.

ವೈಶ್ವಾನರಃ ಪ್ರವಿಶತ್ಯತಿಥಿರ್ಬ್ರಾಹ್ಮಣೋ ಗೃಹಾನ್
ತಸ್ಯೈತಾಂ  ಶಾಂತಿಂ ಕುರ್ವಂತಿ ಹರ ವೈವಸ್ವತೋದಕಂ                

ಹಿಂದೆ ಹೇಳಿದಂತೆ ಯಮಲೋಕವನ್ನು ತಲುಪಿದ ನಚಿಕೇತನಿಗೆ ತಕ್ಷಣ ಯಮನ ದರ್ಶನ ಆಗುವುದಿಲ್ಲ. ಜ್ಞಾನಿಯಾದ ನಚಿಕೇತನನ್ನು ಯಮನ ಪತ್ನಿ ಉಪಚರಿಸುತ್ತಾಳೆ. ಆದರೆ ನಚಿಕೇತ ಯಮನ ದರ್ಶನ ಆಗುವ ತನಕ ಯಾವುದೇ ಆಹಾರವನ್ನು ಸ್ವೀಕರಿಸುವುದಿಲ್ಲ. ಈ ರೀತಿ ಕಾಯುತ್ತಿರುವಾಗ ಯಮನ ಆಗಮನವಾಗುತ್ತದೆ. ಹೀಗೆ ಬಂದ ಯಮನಲ್ಲಿ ಯಮನ ಪತ್ನಿ ಹೇಳುತ್ತಾಳೆ: “ಹಸಿದು ಬಂದ ಒಬ್ಬ ಬ್ರಹ್ಮ ಜ್ಞಾನಿ ನಮ್ಮ ಮನೆ ಮುಂದೆ ಉಪವಾಸ ಕೂತಿದ್ದಾನೆ. ತನ್ನ ಹೊಟ್ಟೆಯಲ್ಲಿ ವೈಶ್ವಾನರ(ಬೆಂಕಿ, ಅಗ್ನಿ ನಾರಾಯಣ)ನನ್ನು ಹೊತ್ತು ಬಂದಿರುವ ಅತಿಥಿಯ ಹಸಿವನ್ನು ಮೊದಲು ಹಿಂಗಿಸು. ಇಲ್ಲದಿದ್ದರೆ ನಮ್ಮ ಇಡೀ ದೇವಲೋಕ ಬಸ್ಮವಾದೀತು” ಎಂದು. ಇಲ್ಲಿ ಅತಿಥಿ ಎಂದರೆ ಆಕಸ್ಮಿಕವಾಗಿ ಹಸಿದು ಆಹಾರ ಬಯಸಿ ಬರುವವರು. ಇವರಿಗೆ ತಿಥಿ(ದಿನಾಂಕ ಅಥವಾ ಸಮಯ) ಇಲ್ಲ. [ನಾವು ಕರೆದಾಗ ಬರುವವರು, ನೆಂಟರಿಷ್ಟರು  ಅತಿಥಿಗಳಲ್ಲ-ಅವರು ಅಭ್ಯಾಗತರು]. ಹಿಂದೆ ಇಂದಿನ ರೀತಿ ವಸತಿಗೃಹ, ಉಪಹಾರ ಗೃಹಗಳಿರಲಿಲ್ಲ. ಪ್ರತಿಯೊಂದು ಮನೆಯಲ್ಲಿ ಹಸಿದು ಬರುವವನಿಗೆ ಅನ್ನ-ನೀರು ಕೊಡುವ ಅದ್ಭುತ ಸಂಪ್ರದಾಯ ಈ ದೇಶದಲ್ಲಿತ್ತು. ಶಾಸ್ತ್ರಕಾರರ ಪ್ರಕಾರ  ಯಾರೇ ಹಸಿದವರು ಬಂದರೂ ನಾವು ಅವರ ಹೊಟ್ಟೆ ತಣಿಸದೆ ಕಳುಹಿಸಬಾರದು. ಅವನ ಕುಲ-ಗೋತ್ರ ಯಾವುದೂ ಇಲ್ಲಿ ಪ್ರಮುಖವಲ್ಲ, ಹಸಿದು ಬಂದವ ಅತಿಥಿ ಅಷ್ಟೇ. “ಹಸಿದು ಬಂದವನ ಹಸಿವನ್ನು ತಣಿಸದಿದ್ದರೆ ಆತನ ಹೊಟ್ಟೆಯಲ್ಲಿನ ಬೆಂಕಿ ನಿನ್ನ ಮನೆಯನ್ನು ಸುಡುತ್ತದೆ” ಎನ್ನುವುದು ನಮ್ಮ ಪ್ರಾಚೀನರು ಕಂಡುಕೊಂಡ ಸತ್ಯವಾಗಿತ್ತು. ಅತಿಥಿ ರೂಪದಲ್ಲಿ ಭಗವಂತ ಬೆಂಕಿಯಾಗಿ ಮನೆಗೆ ಬಂದಾಗ ಮೊದಲು ಮೂರು ಬಗೆಯ ನೀರನ್ನು ಕೊಟ್ಟು ಬೆಂಕಿಯನ್ನು ಶಾಂತಗೊಳಿಸಬೇಕು. ಕೈ ತೊಳೆಯುವ ನೀರು-ಅರ್ಗ್ಯ, ಕಾಲು ತೊಳೆಯುವ ನೀರು-ಪಾದ್ಯ ಮತ್ತು ಕುಡಿಯುವ ನೀರು-ಆಚಮನ. ಇಲ್ಲಿ ಒಬ್ಬ ಜ್ಞಾನಿ ಅತಿಥಿಯಾಗಿ ಬಂದು ಯಮನಿಗಾಗಿ ಕಾದು ಕುಳಿತಿದ್ದಾನೆ. ಅದಕ್ಕಾಗಿ ಯಮನ ಹೆಂಡತಿ ಕಾದು ಕುಳಿತಿರುವ ಅತಿಥಿಯ ಸತ್ಕಾರ ಮಾಡಿ ಆತನ ಹೊಟ್ಟೆಯಲ್ಲಿನ ಅಗ್ನಿಯನ್ನು ತಣಿಸು” ಎಂದು ವಿವಸ್ವತನ(ಸೂರ್ಯನ) ಮಗನಾದ ಯಮನಿಗೆ ಹೇಳುತ್ತಾಳೆ.[ಕೆಲವು ಅನುವಾದಕಾರರು ಈ ಮಾತನ್ನು ಯಮನ ಮಂತ್ರಿಗಳು ಹೇಳಿದರು ಎಂದು ಬರೆಯುತ್ತಾರೆ. ಆದರೆ ಹಿಂದೆ ಹೇಳಿದಂತೆ ನಾವು ಮಹಾಭಾರತ, ತೈತ್ತಿರೀಯ ಬ್ರಾಹ್ಮಣ ಮತ್ತು ಪುರಾಣದಲ್ಲಿ ಬರುವ ನಚಿಕೇತನ ಕಥೆಯನ್ನು ಸಮಷ್ಟಿಯಾಗಿ ನೋಡಿದಾಗ- ಈ ಮಾತನ್ನು ಯಮನ ಪತ್ನಿ-ಶ್ಯಾಮಲ ಹೇಳಿರುವುದು ಸ್ಪಷ್ಟವಾಗುತ್ತದೆ].
     
            ಆಶಾಪ್ರತೀಕ್ಷೇ ಸಂಗತಂ ಸೂನೃತಾಂ   ಚೇಷ್ಟಾಪೂರ್ತೇ ಪುತ್ರಪಶೂಂಶ್ಚ ಸರ್ವಾನ್
           ಏತದ್ವೃಂಕ್ತೇ ಪುರುಷಸ್ಯಾಲ್ಪಮೇಧಸೋ   ಯಸ್ಯಾನಶ್ನನ್ ವಸತಿ ಬ್ರಾಹ್ಮಣೋ ಗೃಹೇ   

ಹಸಿದು ಬಂದ ಅತಿಥಿಯನ್ನು ಸತ್ಕರಿಸದೆ ತಿರಸ್ಕರಿಸುವುದರ ಪರಿಣಾಮ ಏನು ಎನ್ನುವುದನ್ನು ಈ ಶ್ಲೋಕದಲ್ಲಿ ಯಮನ ಪತ್ನಿ ವಿವರಿಸುತ್ತಾಳೆ. “ಒಂದು ವೇಳೆ ಅತಿಥಿಯನ್ನು ಬೈದು ಕಳುಹಿಸಿದರೆ ನಿಮ್ಮ ಆಶಾ ಪ್ರತೀಕ್ಷಗಳು ಮಣ್ಣುಪಾಲಾಗುತ್ತವೆ, ಗೆಳೆಯರು ನಿಮ್ಮಿಂದ ದೂರವಾಗುತ್ತಾರೆ, ಯಾರೂ ನಿನ್ನನ್ನು ನೋಡಿ ಒಳ್ಳೆಯ ಮಾತನಾಡುವುದಿಲ್ಲ. ನಿಮ್ಮ ಇಷ್ಟಾ-ಪೂರ್ತಾ-ಸರ್ವಸ್ವವೂ ನಾಶವಾಗುತ್ತದೆ” ಎನ್ನುತ್ತಾಳೆ ಆಕೆ. ಇಲ್ಲಿ ‘ಇಷ್ಟಾ’ ಎಂದರೆ ನಮ್ಮ ಬೆಳವಣಿಗೆಗಾಗಿ ನಾವು ಮಾಡುವ ಕ್ರಿಯೆ ಮತ್ತು ‘ಪೂರ್ತಾ’ ಎಂದರೆ ಸಮಾಜದ ಋಣವನ್ನು ತೀರಿಸುವುದಕ್ಕೊಸ್ಕರ ಮಾಡುವ ಕ್ರಿಯೆ. ಒಟ್ಟು ಆರು ಇಷ್ಟಗಳು ಹಾಗೂ ಆರು ಪೂರ್ತಗಳನ್ನು ಶಾಸ್ತ್ರಕಾರರು ಪಟ್ಟಿ ಮಾಡಿದ್ದಾರೆ.  “ಅಗ್ನಿಹೋತ್ರಂ ತಪಃ ಸತ್ಯಂ ವೇದಾನಾಂಚಾನುಪಾಲನಂ ಆತಿಥ್ಯಂ ವೈಶ್ವಾದೇವಂ ಚ ಇಷ್ಟಂ ಇತಿ ಅಭಿಧೀಯತೆ” – (೧) ನಿತ್ಯ ಅಗ್ನಿ ಮುಖದಲ್ಲಿ ಆರಾಧನೆ(ಅಗ್ನಿಹೋತ್ರ), (೨) ಉಪವಾಸ, ಬ್ರಹ್ಮಚರ್ಯ, ಇತ್ಯಾದಿ ನೈಷ್ಠಿಕ ಜೀವನ ಬದುಕುವುದು(ತಪಃ), (೩) ಪ್ರಾಮಾಣಿಕವಾದ ಬದುಕು(ಸತ್ಯ), (೪) ನಿರಂತರ ವೇದಾಧ್ಯಯನ ಹಾಗೂ ವೇದೋಕ್ತ ಕರ್ಮಾನುಷ್ಠಾನ, (೫) ಹಸಿದವರಿಗೆ ಅನ್ನ ನೀಡಿ ಸತ್ಕರಿಸುವುದು(ಆತಿಥ್ಯ), (೬) ದೇವತೆಗಳ ಆತಿಥ್ಯ –ಇವು ಆರು ಇಷ್ಟಗಳು.  ಹಾಗೆ (೧) ಸಮಾಜದ ಉಪಯೋಗಕ್ಕಾಗಿ  ಬಾವಿ ತೊಡಿಸುವುದು, (೨) ಇಳಿಬಾವಿಯನ್ನು ಕಟ್ಟುವುದು, (೩) ಸ್ನಾನದ ಕೆರೆಯನ್ನು ಕಟ್ಟುವುದು, (೪) ಊರಿನ ಕ್ಷೇಮಕ್ಕೋಸ್ಕರ ದೇವಸ್ಥಾನ ಕಟ್ಟುವುದು, (೫) ಸಾರ್ವಜನಿಕ ಅನ್ನದಾನ ಮತ್ತು (೬) ಗಿಡ ಮರಗಳನ್ನು ಬೆಳೆಸುವುದು- ಇವು ಆರು ಪೂರ್ತಗಳು. ಇಲ್ಲಿ ಯಮನ ಪತ್ನಿ ಹೇಳುತ್ತಾಳೆ: “ಒಂದು ವೇಳೆ ಅತಿಥಿಯನ್ನು ತಿರಸ್ಕರಿಸಿದರೆ ಅದರಿಂದ ಇಷ್ಟಾ ಮತ್ತು ಪೂರ್ತಾದ ಎಲ್ಲಾ ಪುಣ್ಯ ಫಲಗಳೂ ನಷ್ಟವಾಗುತ್ತದೆ” ಎಂದು. 

No comments:

Post a Comment