Saturday, March 31, 2012

Katha upanishad in kannada chapter-01 Canto-01 Shloka 01-04


ಅಧ್ಯಾಯ-೧

ವಲ್ಲೀ-೧ 


ಉಶನ್ ಹ ವೈ ವಾಜಶ್ರವಸಃ ಸರ್ವವೇದಸಂ ದದೌ
ತಸ್ಯ ಹ ನಚಿಕೇತಾ ನಾಮ ಪುತ್ರ ಆಸ                              

ವಾಜಶ್ರವಸ್ಸು ಎನ್ನುವ ಋಷಿಯ ಮಗಳು ಅರುಣೆಯ ಮಗ ಉದ್ಧಾಲಕ.(ಈತನನ್ನು ಔದ್ದಾಲಕಿ ಆರುಣಿ ಎಂದೂ ಕರೆಯುತ್ತಾರೆ.) ಈತನಿಗೆ ಶ್ವೇತಕೇತು ಮತ್ತು ನಚಿಕೇತ ಎನ್ನುವ ಇಬ್ಬರು ಪುತ್ರರಿದ್ದರು.[ಈ ಶ್ಲೋಕದಲ್ಲಿ ‘ವಾಜಶ್ರವಸಃ’ ಎನ್ನುವುದನ್ನು ಅನುವಾದಕಾರರು ಸಾಮಾನ್ಯವಾಗಿ ‘ವಾಜಶ್ರವಸ್ಸಿನ ಮಗ-ನಚಿಕೇತ’ ಎಂದು ತಪ್ಪಾಗಿ ಅನುವಾದಿಸುವುದನ್ನು ಕಾಣುತ್ತೇವೆ. ಆದರೆ ಅದು ಸರಿಯಲ್ಲ. ] ತತ್ವಚಿಂತನೆ, ಜಿಜ್ಞಾಸೆ, ಅನ್ನದಾನಕ್ಕೆ ಹೆಸರಾದ ವಾಜಶ್ರವಸ್ಸಿನ ಕುಟುಂಬದಲ್ಲಿ ಹುಟ್ಟಿಬೆಳೆದ ಉದ್ಧಾಲಕ ಸಮಗ್ರ ಶಾಸ್ತ್ರಜ್ಞನಾಗಿದ್ದ. ಜ್ಞಾನಿಯಾಗಿದ್ದ ಈತ   ಸ್ವರ್ಗದ ‘ಬಯಕೆ’ಯಿಂದ ಒಂದು ಯಜ್ಞ ಮಾಡಿದ. ಮಹಾನ್ ಜ್ಞಾನಿಯೊಬ್ಬ ಫಲಾಪೇಕ್ಷೆಯಿಂದ ಕರ್ಮ ಮಾಡುವುದನ್ನು ಈ ಶ್ಲೋಕದಲ್ಲಿ “ಹ ವೈ” ಎನ್ನುವಲ್ಲಿ  ಆಶ್ಚರ್ಯ ಸೂಚಕವಾಗಿ ಪ್ರಸ್ತುತಪಡಿಸಲಾಗಿದೆ. ಶಾಸ್ತ್ರಕಾರರು ಹೇಳುವಂತೆ ನಾವು ಯಾವುದೇ ಪೂಜೆಯನ್ನಾಗಲಿ  ಅಲ್ಪಫಲದ ಆಸೆಯಿಂದ ಮಾಡದೆ ಭಗವದ್ ಪ್ರೀತ್ಯರ್ಥವಾಗಿ ಮಾಡಬೇಕು. ಭಗವದ್  ಪ್ರೀತ್ಯರ್ಥವಾಗಿ ಮಾಡುವ ಕರ್ಮ ಎಲ್ಲಾ ಫಲಗಳನ್ನೊಳಗೊಂಡ  ‘ಭಗವಂತನ ಅನುಗ್ರಹ’ ಎನ್ನುವ ಮಹಾಫಲವನ್ನು ಕೊಡುವಾಗ, ಅಲ್ಪ ಫಲದ ಆಸೆಯಿಂದ ಪೂಜೆ ಮಾಡಿದರೆ ಮಹಾಫಲವನ್ನು ಕಳೆದುಕೊಂಡಂತೆ. ಇಲ್ಲಿ ಜ್ಞಾನಿಯಾಗಿದ್ದ ಉದ್ಧಾಲಕ ನಿಷ್ಕಾಮಕರ್ಮ ಮಾಡುವುದನ್ನು ಬಿಟ್ಟು, ಆಶ್ಚರ್ಯವೆಂಬಂತೆ ಫಲವನ್ನು ಬಯಸಿ ‘ಸರ್ವವೇದಸ್’ ಎನ್ನುವ ಯಜ್ಞ ಮಾಡಿದ. 'ವೇದಸ್' ಎಂದರೆ ‘ಸಂಪತ್ತು’.  ‘ಸರ್ವವೇದಸ್’ ಎಂದರೆ ತನ್ನಲ್ಲಿರುವ ಸರ್ವಸ್ವವನ್ನೂ ದಾನ ಮಾಡುವುದು. ಉದ್ಧಾಲಕ ಇಂತಹ ಮಹಾನ್ ಯಜ್ಞವನ್ನು ಮಾಡುವಾಗಲೂ ಕೂಡ ಲೋಭತನದಿಂದ ಮಾಡಿದ! 

ತಂ ಹ ಕುಮಾರಂ ಸಂತಂ ದಕ್ಷಿಣಾಸು ನೀಯಮಾನಾಸು
ಶ್ರದ್ಧಾSSವಿವೇಶ ಸೋSಮನ್ಯತ                                       

ಪೀತೋದಕಾ ಜಗ್ಧತೃಣಾ ದುಗ್ಧದೋಹಾ ನಿರಿಂದ್ರಿಯಾಃ
ಅನಂದಾ ನಾಮ ತೇ ಲೋಕಾಸ್ತಾನ್ ಸ ಗಚ್ಛತಿ ತಾ ದದತ್  

ಸಾಮಾನ್ಯವಾಗಿ ಕಾಡಿನಲ್ಲಿ ವಾಸಿಸುವ ಋಷಿಗಳ ಸಂಪತ್ತು-ಹಸುಗಳು. ಲೋಭದಿಂದಾಗಿ ಹಸುಗಳಲ್ಲಿ ಒಳ್ಳೆಯ ಹಸುಗಳನ್ನು ಬಿಟ್ಟು ಗೊಡ್ಡು ಹಸುಗಳನ್ನು ಉದ್ಧಾಲಕ ದಾನ ಮಾಡುತ್ತಿದ್ದ. ಈ ದೃಶ್ಯವನ್ನು ಹೊರನೋಟಕ್ಕೆ ಮಂದ ಬುದ್ಧಿಯವನಂತೆ ಕಾಣುವ ಪುಣ್ಯಜೀವಿ-ಆತನ ಮಗ ನಚಿಕೇತ ನೋಡುತ್ತಿದ್ದ. ಮಾಹಾತ್ಮನಾದ ಆತನಿಗೆ ತನ್ನ ತಂದೆ ಮಾಡುತ್ತಿರುವ ತಪ್ಪಿನ ಅರಿವಾಗುತ್ತದೆ. ಯಜ್ಞವೆಂಬ ಮಹತ್ಕಾರ್ಯ ಮಾಡಿ ಅಲ್ಲಿ ತನ್ನ ಲೋಭಕ್ಕೆ ವಶವಾಗಿರುವ ತಂದೆ ಅನ್ಯಾಯವಾಗಿ ಪಾಪ ಕಾರ್ಯವನ್ನು ಮಾಡುವುದನ್ನು ಕಂಡು ಆತ ಮರಗುತ್ತಾನೆ. ಚಿಕ್ಕವನಾದ್ದರಿಂದ ಆತನಿಗೆ ತಂದೆಗೆ ಬುದ್ಧಿವಾದ ಹೇಳಲು ಸಾಧ್ಯವಾಗುವುದಿಲ್ಲ. ಈ ರೀತಿ ದಾನ ಮಾಡಿದ್ದರಿಂದ ಪಾಪ ಬರುತ್ತದೆ ಎಂದು ಹೇಳುವ ಬದಲು “ನನ್ನನ್ನು ಯಾರಿಗಾದರೂ ದಾನ ಮಾಡು” ಎಂದು ಹೇಳುವುದಕ್ಕಾಗಿ ಆತ ತಂದೆಯ ಬಳಿ ಹೋಗುತ್ತಾನೆ.

ಸ ಹೋವಾಚ ಪಿತರಂ ತತ ಕಸ್ಮೈ ಮಾಂ ದಾಸ್ಯಸೀತಿ
ದ್ವಿತೀಯಂ ತೃತೀಯಂ ತಂ ಹೋವಾಚ ಮೃತ್ಯವೇ ತ್ವಾ ದದಾಮೀತಿ

ತಂದೆಯ ಬಳಿ ಹೋದ ನಚಿಕೇತ ಹೇಳುತ್ತಾನೆ: “ಅಪ್ಪಾ, ಇದು ಸರ್ವಸ್ವವನ್ನೂ ದಾನ ಮಾಡುವ ಯಜ್ಞವಾಗಿರುವುದರಿಂದ ನನ್ನನ್ನು ಯಾರಿಗಾದರೂ ದಾನ ಮಾಡು. ನಾನು ಅವರ ಮನೆಯ ಚಾಕರಿ ಮಾಡಿಕೊಂಡು ಇದ್ದು ಬಿಡುತ್ತೇನೆ. ನನ್ನನ್ನು ದಾನ ಮಾಡಿದುದರ ಫಲ ನಿನಗೆ ಬರುತ್ತದೆ” ಎಂದು. ಈ ಹಿಂದೆ ಹೇಳಿದಂತೆ ನಚಿಕೇತನನ್ನು ಆತನ ತಂದೆ-ತಾಯಿ ಒಬ್ಬ ಬುದ್ಧಿಹೀನ ಹುಡುಗ ಎಂದು ತಿಳಿದಿದ್ದರು. ಆದ್ದರಿಂದ ಇಲ್ಲಿ ಆತನ ಮಾತನ್ನು ಉದ್ಧಾಲಕ ಕಿವಿಗೊಡದೆ-ನಿರ್ಲಕ್ಷಿಸಿದ.  ತನ್ನನ್ನು ಗಮನಿಸದ ತಂದೆಯ ಬಳಿ ನಚಿಕೇತ: “ನನ್ನನ್ನು ಯಾರಿಗೆ ಕೊಡುತ್ತೀಯ ಅಪ್ಪಾ” ಎಂದು ಎರಡನೇ ಬಾರಿ ಕೇಳುತ್ತಾನೆ. ಇದನ್ನೂ ಉದ್ಧಾಲಕ ಅಲಕ್ಷಿಸಿದಾಗ, ನಚಿಕೇತ ಮೂರನೇ ಬಾರಿ: “ಅಪ್ಪಾ –ನನ್ನನ್ನು ಯಾರಿಗೆ ದಾನ ಮಾಡುತ್ತೀಯ” ಎಂದು ಕೇಳುತ್ತಾನೆ. ಮಗ ಮೂರನೇ ಬಾರಿ ಈ ರೀತಿ ಕೇಳಿದಾಗ ಉದ್ಧಾಲಕನಿಗೆ ಕೋಪ ಬರುತ್ತದೆ. ಕೋಪದ ಬರದಲ್ಲಿ ಆತ ಹೇಳುತ್ತಾನೆ: “ಮೃತ್ಯವೇ ತ್ವಾ ದದಾಮಿ” ಎಂದು. ಅಂದರೆ “ನಿನ್ನನ್ನು ಮೃತ್ಯುವಿಗೆ(ಯಮನಿಗೆ) ಕೊಟ್ಟಿದ್ದೇನೆ” ಎಂದು. ಮೃತ್ಯುವಿಗೆ ದಾನ ಕೊಟ್ಟರೆ ಅಲ್ಲಿಗೆ ಈ ಸ್ಥೂಲ ಶರೀರದಿಂದ ಹೋಗಲು ಸಾಧ್ಯವಿಲ್ಲ. ದೇಹ ತ್ಯಜಿಸಿ ಸೂಕ್ಷ್ಮ ಶರೀರಿಯಾಗಿ ಮಾತ್ರ ಸೂಕ್ಷ್ಮಲೋಕ ಪಯಣ ಸಾಧ್ಯ. ನಮ್ಮಲ್ಲಿ ಪ್ರತಿಯೊಬ್ಬರ ಶರೀರದೊಳಗೂ ಒಂದು ಸೂಕ್ಷ್ಮ ಶರೀರವಿದೆ. ಅದನ್ನು ಅನಿರುದ್ಧ ಶರೀರ ಎನ್ನುತ್ತಾರೆ. ಮನಃಶಾಸ್ತ್ರಜ್ಞರು ಇದನ್ನು Arial Body ಎಂದು ಕರೆಯುತ್ತಾರೆ. ಸ್ಥೂಲ ದೇಹದಿಂದ ನಾವು ಸೂಕ್ಷ್ಮಲೋಕವನ್ನು ಕಾಣಲು ಸಾಧ್ಯವಿಲ್ಲವಾದ್ದರಿಂದ ಇಲ್ಲಿ ಉದ್ಧಾಲಕ ಹೇಳಿರುವ ಮಾತು “ನೀನು ಸತ್ತು ಹೋಗು” ಎನ್ನುವ ಶಾಪ!  ತಂದೆಯ ಬಾಯಿಯಿಂದ ‘ಸಾಯಬೇಕು’ ಎನ್ನುವ ಆದೇಶ ಬಂದಾಗ ನಚಿಕೇತ ಅದನ್ನು ಪಾಲಿಸಲು ತನ್ನ ಸ್ಥೂಲ ದೇಹವನ್ನು ತ್ಯಾಗಮಾಡಿ ಹೊರಟುಹೋದ.  [ವಿದೇಶದಲ್ಲಿ ಇತ್ತೀಚೆಗೆ ಸಂಮೋಹನ ವಿದ್ಯೆಯನ್ನು(Hypnotism)  ಪ್ರದರ್ಶಿಸುತ್ತಿದ್ದಾಗ ನಡೆದ ಒಂದು ಘಟನೆ ಈ ಮೇಲಿನ ಕಥೆಗೆ ಪೂರಕ. ಪ್ರದರ್ಶನದ ಒಂದು ಹಂತದಲ್ಲಿ ಸಂಮೋಹನ ಮಾಡುತ್ತಿದ್ದ ವ್ಯಕ್ತಿಯ(hypnotiser) ಮಾತನ್ನು ಸಂಮೋಹನಕ್ಕೊಳಗಾದ ವ್ಯಕ್ತಿ(person under hypnosis) ತಕ್ಷಣ ಪಾಲಿಸಲಿಲ್ಲ. ಆಗ ಕೋಪಗೊಂಡ ಆತ(hypnotiser) “Go to Hell” ಎಂದು ಬಯ್ಯುತ್ತಾನೆ. ತಕ್ಷಣ  ಸಂಮೋಹನಕ್ಕೊಳಗಾದ ವ್ಯಕ್ತಿ ಅಲ್ಲೇ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾನೆ].
ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ಇಲ್ಲಿ ನಚಿಕೇತನ ಕಥೆಯ ಬಗ್ಗೆ ಸ್ವಲ್ಪ ವಿಶ್ಲೇಷಣೆ ಮಾಡೋಣ. ನಚಿಕೇತನ ಕಥೆ ಕೇವಲ ಕಠೋಪನಿಷತ್ತಿನಲ್ಲಿ ಮಾತ್ರವಲ್ಲದೆ ತೈತ್ತಿರೀಯ ಬ್ರಾಹ್ಮಣ[೩-೧-೮], ಮಹಾಭಾರತ[ಅನುಶಾಸನ ಪರ್ವ] ಹಾಗೂ ಪುರಾಣದಲ್ಲಿ ಕೂಡ ಪ್ರಸ್ತಾಪವಾಗಿದೆ. ಒಂದನ್ನೊಂದು ತಾಳೆ ಹಾಕಿದಾಗ ನಮಗೆ ಅಲ್ಲಿ ಕೆಲವೊಂದು ಹೊಸ ವಿಷಯಗಳು, ಇನ್ನು ಕೆಲವು ವ್ಯತ್ಯಾಸಗಳು ಕಂಡು ಬರುತ್ತವೆ. ನಾವು  ಎಲ್ಲವನ್ನೂ ಸಮಷ್ಟಿಯಾಗಿ ನೋಡಿದಾಗ ಮಾತ್ರ ನಮಗೆ ಕಥೆ ವಿಸ್ತಾರವಾಗಿ ಮತ್ತು ಪೂರ್ಣವಾಗಿ ತಿಳಿಯುತ್ತದೆ.  ಪ್ರಾಚೀನರು ಯಾವ ವಿಷಯವನ್ನೂ ಒಂದೇ ಕಡೆ ಬಿಡಿಸಿ ಹೇಳುತ್ತಿರಲಿಲ್ಲ. ಅವರು ತುಂಬಾ ಗೋಪ್ಯವಾದ ವಿಚಾರ ಕೇವಲ ಯೋಗ್ಯರಾದವರಿಗೆ ಮಾತ್ರ ಸಿಗಬೇಕು ಎನ್ನುವ ಉದ್ದೇಶದಿಂದ ಒಂದು ವಿಷಯವನ್ನು ಅನೇಕ ಗ್ರಂಥಗಳಲ್ಲಿ ಹುದುಗಿಡುತ್ತಿದ್ದರು. ಹಾಗಾಗಿ ನಾವು ಕೇವಲ ಒಂದು ಅಧ್ಯಾತ್ಮ ಗ್ರಂಥವನ್ನು ನೋಡಿದರೆ ನಮಗೆ ಆ ಕೃತಿಯ ಆಳ ಪೂರ್ಣವಾಗಿ ತಿಳಿಯುವುದಿಲ್ಲ. ಹೆಚ್ಚುಹೆಚ್ಚು ಅಧ್ಯಯನ ಮಾಡಿದಾಗ, ಭಗವದನುಗ್ರಹ ಇದ್ದಾಗ ಮಾತ್ರ ಸತ್ಯದ ಸ್ಪುರಣವಾಗುತ್ತದೆ.
ಇಲ್ಲಿ ಕಥೆ ಮುಂದುವರಿದು –ನಚಿಕೇತ ದೇಹತ್ಯಾಗ ಮಾಡಿ ಯಮಲೋಕಕ್ಕೆ ಹೋಗಿ ಅಲ್ಲಿ ಮೂರು ದಿನ ಆಹಾರ ಸೇವಿಸದೆ ಯಮನಿಗಾಗಿ ಕಾದ, ಅತಿಥಿಯನ್ನು ಕಾಯಿಸಿದ್ದಕ್ಕಾಗಿ ಯಮ ನಚಿಕೇತನಲ್ಲಿ “ಮೂರು ವರವನ್ನು ಕೇಳು”  ಎಂದು ಹೇಳಿದ ಎಂದಿದೆ. ಆದರೆ ತೈತ್ತಿರೀಯ ಬ್ರಾಹ್ಮಣದಲ್ಲಿ ಇದೇ ಕಥೆ ಸ್ವಲ್ಪ ಭಿನ್ನವಾಗಿದೆ. ದೇಹತ್ಯಾಗ ಮಾಡಿ ಮೃತ್ಯುಲೋಕಕ್ಕೆ ಹೊರಟ ನಚಿಕೇತನಿಗೆ ದಾರಿಯಲ್ಲಿ ವಾಗ್ದೇವತೆಯ ದರ್ಶನವಾಗುತ್ತದೆ. ಆಕೆ “ನಿನಗೆ ಮೂರು ದಿನ ಯಮನ ದರ್ಶನವಾಗುವುದಿಲ್ಲ, ನಿನ್ನನ್ನು ಕಾಯಿಸಿದ್ದಕ್ಕಾಗಿ ಯಮ ನಿನಗೆ ಮೂರು ವರವನ್ನು ಕೇಳು ಎಂದು ಹೇಳುತ್ತಾನೆ, ಆಗ- ಬಿಟ್ಟು ಬಂದ ದೇಹದಲ್ಲಿ ಮರಳಿ ಹುಟ್ಟುವಂತೆ, ಅಗ್ನಿವಿದ್ಯೆ ಪರಮಾತ್ಮನ ವಿದ್ಯೆಯಾಗಿ ಮೋಕ್ಷ ಸಾಧನವಾಗುವ ಅರಿವು ಕೊಡುವಂತೆ ಮತ್ತು ಮೋಕ್ಷದ ಇರವಿನ ಅರಿವು ತಿಳಿಸುವಂತೆ ವರ ಕೇಳು” ಎಂದು ತರಭೇತಿ ಕೊಟ್ಟು ಕಳುಹಿಸುತ್ತಾಳೆ ಎಂದಿದೆ. ಇದೇ ಕಥೆ ಮಹಾಭಾರತದಲ್ಲಿ ಇನ್ನೂ ಸ್ವಲ್ಪ ಭಿನ್ನವಾಗಿದೆ. ಒಂದು ದಿನ ಉದ್ಧಾಲಕ ಮಗನೊಂದಿಗೆ ಸ್ನಾನಕ್ಕಾಗಿ ನದಿ ತೀರಕ್ಕೆ ಹೋದ. ಅಲ್ಲಿಂದ ಮರಳುವಾಗ ಆತ ತನ್ನ ಸ್ನಾನದ ಕಲಶವನ್ನು ಮರೆತು ಬಂದ. ಮನೆಗ ಬಂದ ಮೇಲೆ ಇದನ್ನು ಗಮನಿಸಿದ ಆತ ತನ್ನ ಮಗ ನಚಿಕೇತನನ್ನು ಕರೆದು ನದಿ ತೀರಕ್ಕೆ ಹೋಗಿ ಮರೆತು ಬಂದ ಸ್ನಾನದ ಕಲಶವನ್ನು ತರುವಂತೆ ಹೇಳುತ್ತಾನೆ. ಆದರೆ ನಚಿಕೇತ ಕಲಶವನ್ನು ತರದೆ ಬರಿಗೈಯಲ್ಲಿ ಹಿಂದಿರುಗುತ್ತಾನೆ. ಈ ಕಾರಣದಿಂದಾಗಿ “ಮಗನಲ್ಲಿ ಸ್ವಲ್ಪವೂ ಜವಾಬ್ಧಾರಿ ಇಲ್ಲ” ಎನ್ನುವ ಅಸಮದಾನ ಉದ್ಧಾಲಕನಲ್ಲಿ ಮೂಡುತ್ತದೆ. ಇದಲ್ಲದೆ ‘ಆ ಸಮಯದಲ್ಲಿ ಆತ ಹಸಿದಿದ್ದ’ ಎನ್ನುತ್ತದೆ ಪುರಾಣ. ಇಂಥಹ ಸಂದರ್ಭದಲ್ಲಿ ನಚಿಕೇತ   ಪದೇಪದೇ “ನನ್ನನ್ನು ಯಾರಿಗೆ ದಾನ ಕೊಡುತ್ತಿ” ಎಂದು ಕೇಳಿದ್ದರಿಂದ ಉದ್ಧಾಲಕ  ಕೋಪದಿಂದ “ಮೃತ್ಯುವಿಗೆ ದಾನ ಮಾಡಿದ್ದೇನೆ” ಎನ್ನುತ್ತಾನೆ.
ಮಹಾಭಾರತದಲ್ಲಿ ಹೇಳುವಂತೆ: - ಯಮಲೋಕಕ್ಕೆ ಬಂದ ಪುಣ್ಯಜೀವಿ ನಚಿಕೇತನನ್ನು ಯಮ ಸತ್ಕರಿಸಿ ಯೋಗ-ಕ್ಷೇಮ ವಿಚಾರಿಸಿದ. ‘ನಿನಗೇನುಬೇಕು’ ಎಂದು ಕೇಳಿದ್ದಕ್ಕೆ “ಸೂಕ್ಷ್ಮಲೋಕವನ್ನೊಮ್ಮೆ ನೋಡಬೇಕು” ಎನ್ನುವ ತನ್ನ ಅಭಿಲಾಷೆಯನ್ನು ನಚಿಕೇತ ಯಮನ ಮುಂದಿಟ್ಟ. ಅತನ ಬಯಕೆಯನ್ನು ಪುರಸ್ಕರಿಸಿದ ಯಮ ಆತನನ್ನು ರಥದಲ್ಲಿ ಕುಳ್ಳಿರಿಸಿ, ಸೂಕ್ಷ್ಮಲೋಕ ವೀಕ್ಷಣೆಗೆ ಕಳುಹಿಸಿಕೊಟ್ಟ. ಎಲ್ಲವನ್ನೂ ನೋಡಿ ಬಂದ ಮೇಲೆ ಯಮ ನಚಿಕೇತನಲ್ಲಿ  “ನಿನ್ನ ಆಯಸ್ಸು ಇನ್ನೂ ಮುಗಿದಿಲ್ಲ, ತಂದೆಯ ಆಜ್ಞೆ ಪಾಲಿಸುವುದಕ್ಕೊಸ್ಕರ ಬಂದಿರುವ ನೀನು, ಮರಳಿ ಹೋಗು” ಎಂದು ಹೇಳಿ ಕಳುಹಿಸಿ ಕೊಟ್ಟನಂತೆ. ಹೀಗೆ ಕಳುಹಿಸುವಾಗ ಯಮ “ಗೋದಾನ ಬಹಳ ವಿಶೇಷವಾದದ್ದು, ಅದನ್ನು ಲೋಭದಿಂದ ಮಾಡಿ ವ್ಯರ್ಥ ಮಾಡಬೇಡ” ಎನ್ನುವ ಸಂದೇಶವನ್ನು ಉದ್ಧಾಲಕನಿಗೆ ಕಳುಹಿಸಿಕೊಟ್ಟ ಎಂದಿದೆ. –ಇದು ಕಥೆ.
ಕಥೆಯಲ್ಲಿ ಹೇಳಲಾದ ‘ಮೂರು ದಿನಗಳು’  ಕೇವಲ ನಚಿಕೇತನ ಅಂತರ್ದೃಷ್ಟಿಯಲ್ಲಿ ಮೂಡಿ ಬಂದ ಮೂರು ದಿನಗಳೇ ಹೊರತು ಇದು ದೇವಲೋಕದ ಅಥವಾ ಭೂಲೋಕದ ಮೂರು ದಿನಗಳಲ್ಲ. ಏಕೆಂದರೆ ದೇವಲೋಕದ ಮೂರು ದಿನ ಎಂದರೆ ನಮ್ಮ ಮೂರು ವರ್ಷ. ಸತ್ತ ಮಗನ ಶರೀರವನ್ನು ಮುಂದಿಟ್ಟುಕೊಂಡು ಉದ್ಧಾಲಕ ರಾತ್ರಿಯೆಲ್ಲಾ ಪಶ್ಚಾತ್ತಾಪಪಟ್ಟ, ಮುಂಜಾನೆ ಸತ್ತ ಮಗ ಜೀವಂತವಾಗಿ ಎದ್ದು ನಿಂತ ಎಂದು ಒಂದು ಕಡೆ ಹೇಳಿರುವುದರಿಂದ, ನಚಿಕೇತನ ಸೂಕ್ಷ್ಮಲೋಕದ ಪಯಣ ಕೇವಲ ಕೆಲವು ಘಳಿಗೆಯಷ್ಟಾಗಿತ್ತು ಎನ್ನುವುದು ಇಲ್ಲಿ ಸ್ಪಷ್ಟ. ನಮ್ಮ ಒಳಗಿನ ನೋಟಕ್ಕೆ ಸಮಯದ ಅಪೇಕ್ಷೆ ಇಲ್ಲ. ಒಂದು ಕ್ಷಣದಲ್ಲಿ ಹತ್ತಾರು ದಿನದ ಕಥೆಯನ್ನು  ಅಂತರ್ದೃಷ್ಟಿಯಲ್ಲಿ ಕಾಣಬಹುದು. ಇಲ್ಲಿ ನಚಿಕೇತನಿಗಾಗಿರುವುದು  ಅಂತಃದರ್ಶನ.   ಬನ್ನಿ, ಈ ಎಲ್ಲಾ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಶ್ಲೋಕಗಳನ್ನು ನೋಡೋಣ. 

No comments:

Post a Comment