Tuesday, April 10, 2012

Kathopanishad in Kannada Ch-01 Canto-01 Shloka-9-13


              ತಿಸ್ರೋ ರಾತ್ರೀರ್ಯದವಾತ್ಸೀರ್ಗೃಹೇ ಮೇSನಶ್ನನ್ ಬ್ರಹ್ಮನ್ನತಿಥಿರ್ನಮಸ್ಯಃ
              ನಮಸ್ತೇSಸ್ತು ಬ್ರಹ್ಮನ್ ಸ್ವಸ್ತಿ ಮೇSಸ್ತು  ತಸ್ಮಾತ್ಪ್ರತಿ ತ್ರೀನ್ವರಾನ್ವೃಣೀಷ್ವ                    

ತನಗಾಗಿ ಅನ್ನ-ನೀರನ್ನು ಬಿಟ್ಟು ಕಾಯುತ್ತಿದ್ದ ನಚಿಕೇತನನ್ನು ಕುರಿತು ಯಮ ಹೇಳುತ್ತಾನೆ: “ತಂದೆಯ ಅಣತಿಯಂತೆ ನನ್ನನ್ನು ಕಾಣಲು ಬಂದ ನೀನು ನನಗೆ ಅತಿಥಿ. ಹೀಗಿರುವಾಗ ಅತಿಥಿಯನ್ನು ಮೂರು ದಿನ  ಕಾಯಿಸಿದ ಪಾಪ ನನಗೆ ಬಂತು” ಎಂದು. “ನನ್ನ ಗೃಹದಲ್ಲಿ ನನ್ನ ಅತಿಥಿಯಾಗಿ ಉಪವಾಸ ಕುಳಿತ ನಮಸ್ಕಾರ ಯೋಗ್ಯ  ಜ್ಞಾನಿ ನೀನು, ನಮ್ಮಿಂದ ಅದೆಷ್ಟು ದೊಡ್ಡ ಅಪರಾಧವಾಗಿ ಹೋಗಿದೆ, ನಿನ್ನ ಕಾಲಿಗೆ ಬಿದ್ದು  ಕ್ಷಮೆ ಕೇಳಬೇಕು ನಾವು, ನಿನಗೆ ನನ್ನ ನಮಸ್ಕಾರ” ಎನ್ನುತ್ತಾನೆ ಯಮ. ಎಷ್ಟು ದೊಡ್ಡ ಮಾತು! ಪುಣ್ಯ ಪಾಪಗಳ ನಿರ್ಣಯ ಮಾಡಿ ಪಾಪಿಗಳಿಗೆ ದುಃಖವನ್ನೂ ಪುಣ್ಯಜೀವಿಗಳಿಗೆ ಸುಖವನ್ನೂ ಕೊಡುವ, ಲೋಕದ ಸುಖ-ದುಃಖಗಳ ನಿಯಾಮಕ ದೇವತೆ ಯಮ ಇಲ್ಲಿ  “ನನ್ನ ಅಪರಾಧವನ್ನು ಕ್ಷಮಿಸು, ನಿನಗೆ ನಮಸ್ಕಾರ” ಎನ್ನುತ್ತಿದ್ದಾನೆ. ಇದು ಹಿರಿಯರ ದೊಡ್ಡ ಗುಣ. ಶ್ರದ್ಧಾವಾನ್ ಲಭತೇ ಜ್ಞಾನಂ(೪-೩೯) ಎಂದು ಕೃಷ್ಣ ಗೀತೆಯಲ್ಲಿ ಹೇಳಿರುವಂತೆ-ಜ್ಞಾನಿಗಳಿಗೆ ಅಪಮಾನ ಮಾಡಿದರೆ ಅದು ಭಗವಂತನನ್ನು ಅಪಮಾನ ಮಾಡಿದಂತೆ. ಜ್ಞಾನಿಗಳು ಭಗವಂತನಿಗೆ ಪರಮ ಪ್ರೀಯರು. ಈ ಕಾರಣದಿಂದ ಜ್ಞಾನಿಯನ್ನು ಕಾಯಿಸಿದ್ದಕ್ಕೆ ಇಲ್ಲಿ ಯಮ ಕ್ಷಮೆ ಕೇಳುತ್ತಿದ್ದಾನೆ.   “ನನಗೆ ಅನಿಷ್ಟವಾಗದಂತೆ ಹರಸು; ಅಷ್ಟೇ ಅಲ್ಲ,  ನಿನ್ನನ್ನು ಮೂರು ದಿನ ಕಾಯಿಸಿದ್ದಕ್ಕೆ ನೀನು ಬಯಸಿದ ಮೂರು ವರವನ್ನು ಕೊಡುತ್ತೇನೆ –ಏನು ಬೇಕಾದರೂ ಕೇಳು” ಎನ್ನುತ್ತಾನೆ ಯಮ.   

              ಶಾಂತಸಂಕಲ್ಪಃ ಸುಮನಾ ಯಥಾ ಸ್ಯಾದ್ ವೀತಮನ್ಯುರ್ಗೌತಮೋ ಮಾSಭಿ ಮೃತ್ಯೋ
             ತ್ವತ್ಪ್ರಸೃಷ್ಟಂ ಮಾSಭಿವದೇತ್ಪ್ರತೀತ  ಏತತ್ ತ್ರಯಾಣಾಂ ಪ್ರಥಮಂ ವರಂ ವೃಣೇ        ೧೦

 ನಚಿಕೇತ ಯಮನಲ್ಲಿ ಕೇಳುವ ಮೊದಲ ವರವನ್ನು ಈ ಶ್ಲೋಕದಲ್ಲಿ ವರ್ಣಿಸಲಾಗಿದೆ. “ನಾನು ಪುನಃ ನನ್ನ ತಂದೆಗೆ ಮಗನಾಗಿ ಅದೇ ದೇಹದಲ್ಲಿ ಹುಟ್ಟಬೇಕು; ನನ್ನ ತಂದೆ ಸತ್ತು ಬದುಕಿದ ನನ್ನನ್ನು ಗುರುತಿಸಬೇಕು; ನನ್ನನ್ನು ನೋಡಿ ಸಂತೋಷಪಡಬೇಕು; ಒಳ್ಳೆಯ ಮಾತನ್ನಾಡಿ ಸ್ವಾಗತಿಸಬೇಕು; ನನ್ನ ತಂದೆಗೆ ‘ಕೆಟ್ಟದ್ದನ್ನು ಮಾಡುವ’ ಬಯಕೆ ಎಂದೂ ಬರಬಾರದು; ಆತನ ಮನಸ್ಸು ಸದಾ ಒಳ್ಳೆಯ ಕೆಲಸ ಮಾಡಲು ಚಡಪಡಿಸಬೇಕು ಮತ್ತು ಆತ ಎಂದೂ ಕೋಪ ಮಾಡಬಾರದು” ಎಂದು ನಚಿಕೇತ ಯಮನನ್ನು ಕೇಳುತ್ತಾನೆ. ಇದು ನಚಿಕೇತ ಕೇಳುವ ಮೊದಲ ವರ.
            
            ಯಥಾ ಪುರಸ್ತಾದ್ ಭವಿತಾ ಪ್ರತೀತಃ  ಔದ್ದಾಲಕಿರಾರುಣಿರ್ಮತ್ಪ್ರಸೃಷ್ಟಃ
             ಸುಖಂ ರಾತ್ರೀಃ ಶಯಿತಾ ವೀತಮನ್ಯುಃ  ತ್ವಾಂ ದದೃಶಿವಾನ್ ಮೃತ್ಯುಮುಖಾತ್ ಪ್ರಮುಕ್ತಂ ೧೧

ನಚಿಕೇತ ಕೇಳಿದ ವರವನ್ನು ಯಮ ಪುರಸ್ಕರಿಸುತ್ತಾನೆ ಮತ್ತು ಹೇಳುತ್ತಾನೆ: “ನೀನು ಹಿಂದಿರುಗಿ ಹೋದಾಗ  ನಿನ್ನ ತಂದೆ ನಿನ್ನನ್ನು ಅಷ್ಟೇ ಸ್ಪಷ್ಟವಾಗಿ ಗುರುತಿಸುತ್ತಾನೆ. ನಿನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತಾನೆ. ಮರಳಿ ಹೋದ ನಿನ್ನನ್ನು ಕಂಡ ಮೇಲೆ ಆತನ ಕೋಪ ನಾಶವಾಗಿ ಆತ ಶಾಂತನಾಗುತ್ತಾನೆ ಮತ್ತು ಆತ ರಾತ್ರಿ ಸುಖ ನಿದ್ದೆಯನ್ನು ಪಡೆಯುತ್ತಾನೆ” ಎಂದು.
ಇಲ್ಲಿ ಉದ್ದಾಲಕನನ್ನು ಔದ್ದಾಲಕಿ ಆರುಣಿ ಎಂದು ಕರೆದಿದ್ದಾರೆ. ಔದ್ದಾಲಕಿ ಎಂದರೆ ಉದ್ದಾಲಕನ ಮೊಮ್ಮಗ. ಹಿಂದೆ ಅಜ್ಜನ ಹೆಸರನ್ನು ಮೊಮ್ಮೊಗನಿಗೆ ಇಡುವುದು ಸಂಪ್ರದಾಯವಾಗಿತ್ತು. ಇಲ್ಲಿ ಉದ್ದಾಲಕನ ತಾತನ ಹೆಸರೂ ಉದ್ದಾಲಕ ಎನ್ನುವುದನ್ನು ನಾವು ಗಮನಿಸಬೇಕು. ಅರುಣೆಯ ಮಗ ಹಾಗೂ ಉದ್ದಾಲಕನ ಮೊಮ್ಮಗನಾದ ನಚಿಕೇತನ ತಂದೆ- ಔದ್ದಾಲಕಿ ಆರುಣಿ. 

          ಸ್ವರ್ಗೇ ಲೋಕೇ ನ ಭಯಂ ಕಿಂಚನಾಸ್ತಿ   ನ ತತ್ರ ತ್ವಂ ನ ಜರಯಾ ಬಿಭೇತಿ
          ಉಭೇ ತೀರ್ತ್ವಾ ಅಶನಾಯಾಪಿಪಾಸೇ  ಶೋಕಾತಿಗೋ ಮೋದತೇ ಸ್ವರ್ಗಲೋಕೇ       ೧೨

         ಸ ತ್ವಮಗ್ನಿಂ ಸ್ವರ್ಗ್ಯಮಧ್ಯೇಷಿ ಮೃತ್ಯೋ  ಪ್ರಬ್ರೂಹಿ ತ್ವಂ ಶ್ರದ್ಧಧಾನಾಯ ಮಹ್ಯಂ
         ಸ್ವರ್ಗಲೋಕಾ ಅಮೃತತ್ವಂ ಭಜಂತ  ಏತದ್ ದ್ವಿತೀಯೇನ ವೃಣೇ ವರೇಣ                  ೧೩


ಇಲ್ಲಿ “ಸ್ವರ್ಗೇ ಲೋಕೇ ನ ಭಯಂ ಕಿಂಚನಾಸ್ತಿ” ಎನ್ನುವಲ್ಲಿ ಬಂದಿರುವ ‘ಸ್ವರ್ಗ ಲೋಕ’ ಅಂದರೆ ದೇವತೆಗಳಿರುವ ದೇವೇಂದ್ರನ ಲೋಕವಲ್ಲ. ಏಕೆಂದರೆ ಇಲ್ಲಿ  ‘ನ ಭಯಂ ಕಿಂಚನಾಸ್ತಿ’ ಎಂದಿದ್ದಾರೆ. ಅಂದರೆ ಇದು ಯಾವ ಭಯವೂ ಇಲ್ಲದ ಸ್ವರ್ಗಲೋಕ. ದೇವೇಂದ್ರನ ಲೋಕ ಕೇವಲ ತಾತ್ಕಾಲಿಕ ಸುಖವನ್ನು ಅನುಭವಿಸಿ ಭೂಮಿಗೆ ಮರಳುವ ಲೋಕ. ಅಲ್ಲಿ ದೇವತೆಗಳಿಗೂ ಕೂಡ ಪತನದ ಭಯವಿದೆ. ಆದ್ದರಿಂದ ಇಲ್ಲಿ ಹೇಳುವ ಸ್ವರ್ಗಲೋಕ-ಭಗವಂತನ ಲೋಕವಾದ ಮೋಕ್ಷ.  ಮೋಕ್ಷದಲ್ಲಿ ಮೃತ್ಯುವಿನ ಭಯವಿಲ್ಲ, ಜರಾ-ವ್ಯಾಧಿಯ ಭಯವಿಲ್ಲ [ನ ತತ್ರ ತ್ವಂ ನ ಜರಯಾ ಬಿಭೇತಿ]. ಸಹಜವಾಗಿ ಸ್ವರ್ಗ=ಸ್ವ+ರ+ಗ. ಇಲ್ಲಿ ‘ಸ್ವಃ’ ಅಂದರೆ ಎಲ್ಲಾ ಸ್ವರಗಳಿಂದ ವಾಚ್ಯನಾದ ಭಗವಂತನ ರೂಪ. ಸ್ವರಃ ಅಂದರೆ-ಸ್ವಯಮೇವ ರಮತಿ ಇತಿ ಸ್ವರಃ. ಸ್ವಯಂ ಆನಂದಸ್ವರೂಪನಾದ ಭಗವಂತ. ಆತನ ಆನಂದಕ್ಕೆ ಇನ್ನೊಂದು ಸಾಧನ ಅಥವಾ ಅಧಿಷ್ಠಾನ ಬೇಡ. ಇಂಥಹ ಭಗವಂತ ಎಲ್ಲಿ ಸದಾ ಗತನಾಗಿದ್ದಾನೋ [ಸದಾ ವ್ಯಕ್ತನಾಗಿರುತ್ತಾನೋ] ಅದು ಸ್ವರ್ಗಲೋಕ. ಅಂದರೆ ಮುಕ್ತಸ್ಥಾನ. ಇನ್ನೊಂದು ರೀತಿಯಲ್ಲಿ ಈ ಪದವನ್ನು ಬಿಡಿಸಿದರೆ ಸು+ವ+ರ್ಗ=ಸ್ವರ್ಗ. ಇಲ್ಲಿ ಸುವಃ ಅಂದರೆ ಜ್ಞಾನಾನಂದಸ್ವರೂಪನಾದ ಭಗವಂತ. [ಈ ವಿವರಣೆ ಗಾಯತ್ರಿಯಲ್ಲಿದೆ]. ಅಂತಹ ಭಗವಂತ ಗತನಾದ ಲೋಕ ಸ್ವರ್ಗಲೋಕ-ಅದು ಮೋಕ್ಷ ಸ್ಥಾನ. ಈ ಹಿನ್ನೆಲೆಯನ್ನು ತಿಳಿದು ಈ ಶ್ಲೋಕವನ್ನು ವಿಶ್ಲೇಷಿಸೋಣ.

ಯಮನ ಅನುಗ್ರಹಕ್ಕೆ ಪಾತ್ರನಾದ ನಚಿಕೇತ ಮುಂದುವರಿದು ಹೇಳುತ್ತಾನೆ: “ಮೋಕ್ಷದಲ್ಲಿ ಸಾವಿನ ಭಯವಿಲ್ಲ. ಅಲ್ಲಿ ಹುಟ್ಟು ಸಾವಿನ ನಡುವಿನ ತರಂಗಗಳಾದ ಶೋಕ, ಮೋಹ, ಹಸಿವು, ಬಾಯಾರಿಕೆ, ಮುಪ್ಪು, ರೋಗ ಯಾವುದೂ ಇಲ್ಲದೆ ಎಲ್ಲರೂ ಆನಂದವಾಗಿರುತ್ತಾರೆ ಎಂದು ಕೇಳಿದ್ದೇನೆ. ಸ್ವರ್ಗ ಲೋಕಕ್ಕೆ ಹೋಗಿ ಅಲ್ಲಿಂದ ವೈಕುಂಠಕ್ಕೆ ಹೋಗಬೇಕಾದರೆ ಸ್ವರ್ಗ ನಿಯಾಮಕನಾದ ಮತ್ತು ಅಗ್ನಿಸ್ಥನಾದ ಭಗವಂತನನ್ನು ತಿಳಿದುಕೊಳ್ಳಬೇಕು ಎನ್ನುವ ವಿಚಾರ ಗೊತ್ತಿದೆ. ನೀನು ಮೊಕ್ಷಪ್ರದನಾದ ನಾರಾಯಣನನ್ನು ಉಪಾಸನೆ ಮಾಡಿದ್ದೀಯ. ಈ ಅಗ್ನಿಸ್ಥನಾದ ಭಗವಂತನನ್ನು ನಾನು ಹೇಗೆ ಉಪಾಸನೆ ಮಾಡಬೇಕು-ಅದನ್ನು ಹೇಳು. ನನಗೆ ಶ್ರದ್ಧೆ ಇದೆ. ನಾನು ಶ್ರದ್ಧೆಯಿಂದ ಕೇಳುತ್ತಿದ್ದೇನೆ. ಭಗವಂತನೆಂಬ ಅಮೃತತ್ವವನ್ನು ಉಪಾಸನೆ ಮಾಡಿ, ಸ್ವರ್ಗವನ್ನು ಸೇರಿ ಅಲ್ಲಿ ಸ್ವಲ್ಪ ಕಾಲ ಇದ್ದು, ಆಮೇಲೆ ವೈಕುಂಠವನ್ನು ಸೇರುತ್ತಾರೆ ಎನ್ನುವುದನ್ನು ತಿಳಿದವರು ಹೇಳುತ್ತಾರೆ. ಮೋಕ್ಷ ಸಾಧನೆಗಾಗಿ ಉಪಾಸನೆ ಮಾಡಬೇಕಾದ ಭಗವಂತನನ್ನು ಅಗ್ನಿ ಮುಖದಲ್ಲೇ ಏಕೆ ಉಪಾಸನೆ ಮಾಡಬೇಕು ಮತ್ತು ಹೇಗೆ ಮಾಡಬೇಕು. ಅಗ್ನಿಮುಖದಲ್ಲಿ ಆರಾಧನೆ ಮಾಡುವ, ಅದರ ಹಿಂದಿನ ವಿಜ್ಞಾನ ಮತ್ತು ಉಪಾಸನೆಯ ರಹಸ್ಯವನ್ನು ನನಗೆ ಹೇಳು” ಎಂದು ನಚಿಕೇತ ತನ್ನ ಎರಡನೇ ವರವನ್ನು ಯಮನಲ್ಲಿ ಕೇಳುತ್ತಾನೆ.  
ಇಲ್ಲಿ ನಚಿಕೇತ ‘ನನಗೆ ಶ್ರದ್ಧೆ ಇದೆ, ನಾನು ಶ್ರದ್ಧೆಯಿಂದ ಕೇಳುತ್ತಿದ್ದೇನೆ’ ಎಂದಿದ್ದಾನೆ.  ಸಂಸ್ಕೃತದಲ್ಲಿ ‘ಶ್ರದ್ಧಾ’ ಎನ್ನುವ ಶಬ್ದಕ್ಕೆ ಅಪೂರ್ವವಾದ ಅರ್ಥವಿದೆ. ‘ಶ್ರತ್’ ಎಂದರೆ ಆಸ್ತಿಕ್ಯ. ಆಸ್ತಿಕ್ಯ ಅಂದರೆ ನಮಗೆ ಗೊತ್ತಿಲ್ಲದ, ನಾವು ಕಾಣದ ಸತ್ಯವೂ ಇದೆ ಅನ್ನುವುದನ್ನು ನಂಬುವುದು. ನಮಗೆ ಯಾವುದು ಗೊತ್ತಿಲ್ಲವೋ, ನಾವು ಯಾವುದನ್ನು ಕಾಣಲಿಲ್ಲವೋ ಅದೂ ಕೂಡ ಈ ಬ್ರಹ್ಮಾಂಡದಲ್ಲಿದೆ, ಇಲ್ಲಿ ನಾವು ಕಂಡದಷ್ಟೇ ಇರುವುದಲ್ಲ ಅನ್ನುವ ನಂಬಿಕೆ ಆಸ್ತಿಕ್ಯ. ಇಂಥಹ ಆಸ್ತಿಕ್ಯವನ್ನು ಹೊಂದಿರುವುದು ಶ್ರದ್ಧಾ. ಶ್ರದ್ಧೆ ಉಳ್ಳವರು ಪರಲೋಕವನ್ನು, ಭಗವಂತನನ್ನು ಎಂದೂ ನಿರಾಕರಣೆ ಮಾಡುವುದಿಲ್ಲ.
ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ಇಲ್ಲಿ ಅಗ್ನಿಯ ಪ್ರತೀಕದಲ್ಲಿ ಭಗವಂತನ ಆರಾಧನೆಯ ಕುರಿತು ವಿಶೇಷವಾಗಿ ನಚಿಕೇತ ಏಕೆ ಪ್ರಶ್ನೆ ಮಾಡಿದ ಎನ್ನುವುದನ್ನು ಒಮ್ಮೆ ವಿಶ್ಲೇಷಿಸೋಣ. ವೇದದಲ್ಲಿ ಭಗವಂತನ ಆರಾನೆಗೆ ಅತ್ಯಂತ ಮುಖ್ಯವಾದ ಪ್ರತೀಕ ಅಗ್ನಿ ಎನ್ನುತ್ತಾರೆ. ಅಗ್ನಿ ಎಂದೂ ಅಪವಿತ್ರವಲ್ಲ. ಅಗ್ನಿ ಸ್ಪರ್ಶದಿಂದ ಅಪವಿತ್ರ ಕೂಡಾ ಪವಿತ್ರವಾಗುತ್ತದೆ. ನಮಗೆ ಭಗವಂತನಿಗೆ ಏನನ್ನಾದರೂ ತಿನ್ನಿಸಬೇಕು ಎನ್ನುವ ಅಭಿಲಾಷೆ ಇದ್ದರೆ ಅದನ್ನು ಕೇವಲ ಅಗ್ನಿ ಮುಖೇನ ಅರ್ಪಿಸಬೇಕು. ನಮ್ಮ ಕಣ್ಣ ಮುಂದೆ ಇರುವ ಎಲ್ಲಾ ಪ್ರತೀಕಗಳಲ್ಲಿ ಅಗ್ನಿ ಅತ್ಯಂತ ಶ್ರೇಷ್ಠ ಎನ್ನುವುದು ವೇದ ಕಾಲದ ಋಷಿಗಳ ತೀರ್ಮಾನ. ಸುಡುವ ಅಗ್ನಿಯಲ್ಲಿ ಅಗ್ನಿದೇವ, ಅವನೊಳಗೆ ಪ್ರಾಣ, ಪ್ರಾಣನೊಳಗೆ  ಭಗವಂತ. ಈ ಅನುಸಂಧಾನದಲ್ಲಿ ಅಗ್ನಿಮುಖದಲ್ಲಿ ಮಾಡುವ ಪೂಜೆ ಯಜ್ಞ. ಇದು ಯಜ್ಞ ನಾಮಕ ಭಗವಂತನನ್ನು, ಯಜ್ಞದಿಂದ, ಜ್ಞಾನ-ಭಕ್ತಿ-ವೈರಾಗ್ಯದಿಂದ ಕೂಡಿದ ಉತ್ಕೃಷ್ಟವಾದ ಆಹ್ವಾನದಿಂದ ಮಾಡುವ ಆರಾನೆ. ಬದುಕಿದ್ದಷ್ಟು ಕಾಲ ಭಗವಂತನನ್ನು ಅಗ್ನಿ ಮುಖದಲ್ಲಿ ಆರಾಧನೆ ಮಾಡುವುದು ನಮ್ಮ ಪ್ರಾಚೀನ ಸಂಪ್ರದಾಯವಾಗಿತ್ತು. ಒಟ್ಟಿನಲ್ಲಿ  ಭಗವಂತನನ್ನು ಅಗ್ನಿ ಪ್ರತೀಕದಲ್ಲಿ ಆರಾಧನೆ ಮಾಡುವುದು ಬಹಳ ಶ್ರೇಷ್ಠ.  ಇಲ್ಲಿ ನಚಿಕೇತನಿಗೆ ಭೂಸ್ತರದಲ್ಲಿ ಅಗ್ನಿಹೋತ್ರದ ಮಹತ್ವ ತಿಳಿದಿತ್ತು. ಅದಕ್ಕಾಗಿ ಆತ ಅದರ ಹಿಂದಿನ ವಿಜ್ಞಾನವನ್ನು, ಅಗ್ನಿಮುಖದಲ್ಲಿ ಭಗವಂತನ ಉಪಾಸನೆ ಮಾಡುವ ಪೂರ್ಣ ರಹಸ್ಯವನ್ನು ಹೇಳಿಕೊಡು ಎಂದು ವರಕೇಳಿದ.
ನಾವು ಯಾವ ಕ್ರಿಯೆಯನ್ನು ಮಾಡುವುದಾದರೂ ತಿಳಿದು ಮಾಡುವುದು ಬಹಳ ಮುಖ್ಯ. ಸಾಮಾನ್ಯವಾಗಿ ಇಂದು ನಮ್ಮ ಮನೆಗಳಲ್ಲಿ ನಡೆಯುವ ಧಾರ್ಮಿಕ ಕ್ರಿಯೆಗಳನ್ನು ನೋಡಿದರೆ ಅಲ್ಲಿ ತಿಳುವಳಿಕೆ ಇದ್ದು ಮಾಡುವವರು ತುಂಬಾ ವಿರಳ. ತಿಳಿಯದೆ ಮಾಡುವ ಕ್ರಿಯೆ ಮೂಢತನವಾಗಿರುವ ಸಾಧ್ಯತೆ ಬಹಳ ಹೆಚ್ಚು.  ತಿಳಿಯದೆ ಹಿಂದಿನವರು ಮಾಡಿಕೊಂಡು ಬಂದ ಸಂಪ್ರದಾಯ ಎಂದು ಕಣ್ಮುಚ್ಚಿ ನಡೆಸಿಕೊಂಡು ಬರುವುದರ ಅಪಾಯವನ್ನು ಒಂದು ಕಥೆಯಲ್ಲಿ ಈ ರೀತಿ ವರ್ಣಿಸಿದ್ದಾರೆ:  ಒಂದು ಊರಿನಲ್ಲಿ ಒಬ್ಬ ಯುವಕನಿದ್ದ. ಆತನ ತಂದೆ ಒಮ್ಮೆ ತಮ್ಮ  ಹಿರಿಯರ ಶ್ರಾದ್ಧ ಮಾಡುತ್ತಿದ್ದರು. ಆ ಸಮಯದಲ್ಲಿ ಮನೆಯಲ್ಲಿದ್ದ ಬೆಕ್ಕು ಅಲ್ಲಿ-ಇಲ್ಲಿ ಬಂದು ತೊಂದರೆ ಕೊಡುತ್ತಿತ್ತು. ಇದನ್ನು ಗಮನಿಸಿದ ಅವರು ಆ ಬೆಕ್ಕನ್ನು ಕಟ್ಟಿ ಹಾಕುವಂತೆ ಮನೆಯವರಿಗೆ ಹೇಳುತ್ತಾರೆ. ಈ ರೀತಿ ಅವರು ಬೆಕ್ಕನ್ನು ಕಟ್ಟಿಹಾಕಿ ಶ್ರಾದ್ಧ ಮಾಡುತ್ತಾರೆ. ಕಾಲಕ್ರಮೇಣ ಯುವಕ ದೊಡ್ಡವನಾದ ಹಾಗೂ ಒಂದು ದಿನ ಆತ ತನ್ನ ತಂದೆಯ ಶ್ರಾದ್ಧ ಮಾಡಬೇಕಾಗಿ ಬಂತು. ಆಗ ಅವರ ಮನೆಯಲ್ಲಿ ಬೆಕ್ಕು ಇರಲಿಲ್ಲ. ಅದಕ್ಕಾಗಿ ಆತ ಎಲ್ಲಿಂದಲೋ ಒಂದು ಬೆಕ್ಕನ್ನು ತಂದು ಕಟ್ಟಿಹಾಕಿಕೊಂಡು ಶ್ರಾದ್ಧ ಮಾಡುತ್ತಾನೆ. ಆತನಿಗೆ ತನ್ನ ತಂದೆ ಏಕೆ ಬೆಕ್ಕನ್ನು ಕಟ್ಟಿ ಹಾಕಿದ್ದರು ಎನ್ನುವುದು ತಿಳಿದಿರಲಿಲ್ಲ. ಆತ ತಿಳಿದುಕೊಂಡಿದ್ದದ್ದು ‘ಶ್ರಾದ್ಧ ಮಾಡಬೇಕಾದರೆ ಬೆಕ್ಕನ್ನು ಕಟ್ಟಿಹಾಕಬೇಕು’ ಎಂದು!.  ಇಂದು ನಮ್ಮ ಪ್ರತಿಯೊಂದು ಆಚರಣೆಯಲ್ಲಿ ಇಂತಹ ಮೂಢನಂಬಿಕೆಗಳು ತುಂಬಿಹೋಗಿವೆ. ಇದಕ್ಕಾಗಿ ಹಿಂದಿನವರು ಮಾಡಿದ್ದನ್ನು ಏಕೆ-ಏನು ಎಂದು ಗೊತ್ತಿಲ್ಲದೆ ಮಾಡಬಾರದು. ಪ್ರತಿಯೊಂದು ಕ್ರಿಯೆಯ ಹಿಂದಿನ ವೈಶಿಷ್ಟ್ಯವನ್ನು ತಿಳಿದು ಮಾಡುವುದು ಬಹಳ ಮುಖ್ಯ. ಈ ಕಾರಣದಿಂದಲೇ ನಚಿಕೇತನ ಪ್ರಶ್ನೆಯನ್ನು ಕೇಳಿ ಯಮನಿಗೆ ಬಹಳ ಸಂತೋಷವಾಯಿತು. ಚಿಕ್ಕ ಹುಡುಗನಾದರೂ ಆತ ತಾನು ತಿಳಿದು ಮಾಡಬೇಕು ಮತ್ತು ಜಗತ್ತಿಗೆ ತಿಳಿಸಬೇಕು ಎನ್ನುವ ಆಸೆಯಿಂದ ಕೇಳಿದ್ದರಿಂದ ಯಮ  ಸಂತೋಷದಿಂದ ಆತನ ಪ್ರಶ್ನೆಗೆ ಉತ್ತರಿಸುತ್ತಾನೆ.         

No comments:

Post a Comment