ಪ್ರ ತೇ ಬ್ರವೀಮಿ ತದು ಮೇ ನಿಬೋಧಃ
ಸ್ವರ್ಗ್ಯಮಗ್ನಿಂ ನಚಿಕೇತಃ ಪ್ರಜಾನನ್ ।
ಅನಂತಲೋಕಾಪ್ತಿಮಥೋ ಪ್ರತಿಷ್ಠಾಂ ವಿದ್ಧಿ
ತ್ವಮೇತಂ ನಿಹಿತಂ ಗುಹಾಯಾಮ್ ॥೧೪॥
ನಚಿಕೇತನ
ಪ್ರಶ್ನೆಗೆ ಉತ್ತರಿಸುತ್ತಾ ಯಮ ಹೇಳುತ್ತಾನೆ: “ಎಲ್ಲಾ ವಿವರವನ್ನು, ಎಲ್ಲಾ ರಹಸ್ಯವನ್ನು ಬಿಡಿಸಿ
ಹೇಳುತ್ತೇನೆ-ಅದನ್ನು ನನ್ನಿಂದ ಕೇಳು” ಎಂದು. ನಮಗೆ ತಿಳಿದಂತೆ ನಾವು ಮಾಡುವ ಕರ್ಮದ
ಪಾಪ-ಪುಣ್ಯವನ್ನು ಲೆಕ್ಕ ಹಾಕಿ ಅದಕ್ಕನುಗುಣವಾದ ಫಲವನ್ನು ನಿರ್ಧರಿಸುವವ ಯಮ. ಹಾಗಾಗಿ ಕರ್ಮ
ಮಾಡುವುದು ಹೇಗೆ, ಅದರ ಹಿಂದಿನ ಅನುಸಂಧಾನ
ಹೇಗಿರಬೇಕು, ನಾವು ಮಾಡುವ ಕರ್ಮ ಮೋಕ್ಷಪ್ರದವಾಗಬೇಕಾದರೆ ಏನು ಮಾಡಬೇಕು-ಇದನ್ನು ನಿಖರವಾಗಿ
ಹೇಳಬಲ್ಲವ ಯಮ. ಆದ್ದರಿಂದ “ಅದನ್ನು ನನ್ನಿಂದ
ನೇರವಾಗಿ ಕೇಳು” ಎಂದಿದ್ದಾನೆ ಯಮ.
ಈ ಶ್ಲೋಕದಲ್ಲಿ
ನಚಿಕೇತ ಮತ್ತು ಯಮ ಇಬ್ಬರಿಗೂ ಅನ್ವಯವಾಗುವ ‘ಪ್ರಜಾನನ್’
ಎನ್ನುವ ವಿಶೇಷಣ ಬಳಕೆಯಾಗಿದೆ. “ತಿಳುವಳಿಕೆ ಇಲ್ಲದ ಅಪ್ರಬುದ್ಧ-ನೀನಲ್ಲ, ಈ ‘ಸ್ವರ್ಗ್ಯಗ್ನಿ’
ಬಗ್ಗೆ ತಿಳಿದು ಅನುಷ್ಠಾನ ಮಾಡುವ ಯೋಗ್ಯತೆ ಇರುವವ(ಪ್ರಜಾನನ್) ನೀನು. ಆದರೂ ವಿಶೇಷ
ತಿಳುವಳಿಕೆಗಾಗಿ ನನ್ನ ಬಳಿ ಕೇಳುತ್ತಿದ್ದೀಯ. ನನಗೆ ಈ ವಿದ್ಯೆ ಚನ್ನಾಗಿ ತಿಳಿದಿದೆ(ಪ್ರಜಾನನ್
). ಅಂಥಹ ಮೊಕ್ಷಪ್ರದ ಅಗ್ನಿವಿದ್ಯೆಯನ್ನು ನಾನು ನಿನಗೆ ಹೇಳುತ್ತೇನೆ”. ಎನ್ನುವ ಧ್ವನಿ ಈ
ವಿಶೇಷಣದ ಹಿಂದಿದೆ.
ಮುಂದುವರಿದು ಯಮ
ಹೇಳುತ್ತಾನೆ: “ಈ ಅಗ್ನಿ ವಿದ್ಯೆಯನ್ನು ಯಾರು ತಿಳಿಯುತ್ತಾರೆ ಅವರಿಗೆ ಬರಿಯ ಸ್ವರ್ಗ ಪ್ರಾಪ್ತಿ
ಮಾತ್ರವಲ್ಲ, ಅನಂತ ಲೋಕ ಪ್ರಾಪ್ತಿಯಾಗುತ್ತದೆ. ಆತ ಸಾವಿಲ್ಲದ ಮೋಕ್ಷವನ್ನು ಸೇರುತ್ತಾನೆ” ಎಂದು.
ನಿತ್ಯಲೋಕದ ಪ್ರಾಪ್ತಿಗೆ ಕಾರಣವಾಗುವ ಈ ವಿದ್ಯೆಯ ಪ್ರತಿಪಾಧ್ಯ ಭಗವಂತನನ್ನು ಇಲ್ಲಿ ‘ಅನಂತಲೋಕಾಪ್ತಿ’ ಎಂದು ಸಂಬೋಧಿಸಿದ್ದಾರೆ. ಭಗವಂತ ಅನಂತ
ಲೋಕವನ್ನು ಕೊಡುವವನು ಮತ್ತು ಆತ ಎಲ್ಲಾ ಲೋಕಗಳ ಮೂಲಾಧಾರ(ಪ್ರತಿಷ್ಠ). ಸಾಂತವಾದ ಲೋಕವಿರಲಿ,
ಅನಂತವಾದ ಲೋಕವಿರಲಿ, ಆ ಲೋಕಕ್ಕೋಸ್ಕರ ಸಾಧನೆ ಮಾಡುವ ಜೀವಜಾತವಿರಲಿ; ಎಲ್ಲವುದರ ಮೂಲಾಧಾರನಾದ,
ಅಗ್ನಿಯಲ್ಲಿರತಕ್ಕಂತಹ ಭಗವಂತನ ವಿದ್ಯೆಯನ್ನು ತಿಳಿದು, ಅಗ್ನಿಯಲ್ಲಿ ಆತನ ಉಪಾಸನೆ ಮಾಡಿದರೆ
ಅನಂತಲೋಕದ ಆಪ್ತಿಯಾಗುತ್ತದೆ ಮತ್ತು ನಿತ್ಯಲೋಕ ಶಾಶ್ವತವಾಗಿ ಪ್ರಾಪ್ತಿಯಾಗುತ್ತದೆ.
ಭಗವಂತನ
ಪ್ರತೀಕದಲ್ಲಿ ಅತ್ಯಂತ ಶ್ರೇಷ್ಠವಾದ ಈ ಅಗ್ನಿ ಎಲ್ಲಿದೆ ಎಂದರೆ- ಇಲ್ಲಿ ಯಮ ಹೇಳುತ್ತಾನೆ: “ವಿದ್ಧಿ
ತ್ವಮೇತಂ ನಿಹಿತಂ ಗುಹಾಯಾಮ್” ಎಂದು. ಭಗವಂತ ನಮ್ಮ ಹೃದಯ ಗುಹೆಯಲ್ಲೇ ಇದ್ದಾನೆ. ಕೃಷ್ಣ
ಗೀತೆಯಲ್ಲಿ ಇದನ್ನೇ ಹೀಗೆ ಹೇಳಿದ್ದಾನೆ: “ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ”
ಎಂದು. ನಮ್ಮ ದೇಹದಲ್ಲಿ ಅಗ್ನಿ ಅಂತರ್ಗತನಾದ
ವೈಶ್ವಾನರ ನಾಮಕ ಭಗವಂತನಿದ್ದಾನೆ. ನಮ್ಮೊಳಗಿದ್ದು ನಮಗೆ ಬದುಕುಕೊಟ್ಟು ರಕ್ಷಣೆ ಮಾಡುವ ಭಗವಂತ
ನಮ್ಮ ಹೃದಯದಲ್ಲಿ ಮಾತ್ರವಲ್ಲ ನಮ್ಮ ಸ್ವರೂಪದ ಹೃದಯದಲ್ಲೂ ಇದ್ದಾನೆ. ಈ ಕಾರಣದಿಂದ
ಶಾಸ್ತ್ರಕಾರರು ಭಗವಂತನ ಎರಡು ರೂಪಗಳನ್ನು ಈ ರೀತಿ ವರ್ಣಿಸಿದ್ದಾರೆ: “ಆತ್ಮಾಂತರಾತ್ಮೇತಿ ಹರಿಃ
ಏಕ ಏವ ದ್ವಿದಾಸ್ಥಿತಃ” ಎಂದು. ದೇಹದ ಹೃದಯದಲ್ಲಿ ‘ಆತ್ಮ’ ನಾಮಕನಾಗಿ, ದೇಹದ ಹೃದಯದಲ್ಲಿರುವ
ಜೀವದ ಹೃದಯದಲ್ಲಿ ‘ಅಂತರಾತ್ಮ’ ನಾಮಕನಾಗಿ ಭಗವಂತನಿದ್ದಾನೆ. ಈ ಕಾರಣದಿಂದ “ಭಗವಂತನನ್ನು
ಬೇರೆಲ್ಲೂ ಹುಡುಕುವುದು ಬೇಡ, ಆತ ನಿಮ್ಮ ಹೃದಯ ಗುಹೆಯಲ್ಲೇ ಇದ್ದಾನೆ” ಎಂದಿದ್ದಾನೆ ಯಮ. ಹೀಗಾಗಿ ಭಗವಂತನನ್ನು ಅಗ್ನಿಯಲ್ಲಿ ಉಪಾಸನೆ ಮಾಡುವಾಗ
ಎಲ್ಲೋ ಹೊರಗಿನಿಂದ ಉಪಾಸನೆ ಮಾಡಬಾರದು. “ಮದ್ ಹೃದಯಸ್ಥಿತಂ, ವೈಶ್ವಾನರ ನಾಮಂ, ಅಗ್ನಿಯಂತರ್ಗತಂ,
ಪರಶುರಾಮಂ, ಕುಂಡ ಮಧ್ಯೇ-ಆವಾಹಯಾಮಿ” ಎಂದು -ಹೃದಯದಲ್ಲಿರುವ ಭಗವಂತನನ್ನು ಕುಂಡದಲ್ಲಿ ಆವಾಹನೆ
ಮಾಡಿ ಆರಾಧನೆ ಮಾಡಬೇಕು. ಅದೇ ರೀತಿ ಪ್ರತಿಮೆಯಲ್ಲೂ ಕೂಡ- “ಹೃತ್ಕಮಲಸ್ಥಿತಂ ನಾರಾಯಣಂ
ಪ್ರತಿಮಾಯಾಂ ಆವಾಹಯಾಮಿ” ಎಂದು ಆವಾಹನೆ ಮಾಡಿ ಆರಾಧನೆ ಮಾಡಬೇಕು.
ಇಲ್ಲಿ ನಚಿಕೇತನಿಗೆ
ಎಲ್ಲಾ ವಿವರವನ್ನೂ ಹೇಳುವುದಾಗಿ ಪ್ರತಿಜ್ಞೆ ಮಾಡಿದ್ದ ಯಮ ಮುಂದೇನು ಹೇಳಿದ ಎನ್ನುವುದನ್ನು ಮುಂದಿನ
ಶ್ಲೋಕಗಳಲ್ಲಿ ನೋಡೋಣ.
ಲೋಕಾದಿಮಗ್ನಿಂ ತಮುವಾಚ ತಸ್ಮೈ ಯಾ ಇಷ್ಟಕಾ
ಯಾವತೀರ್ವಾ ಯಥಾ ವಾ ।
ಸ ಚಾಪಿ ತತ್ಪ್ರತ್ಯವದದ್ಯಥೋಕ್ತಂ ಅಥಾಸ್ಯ
ಮೃತ್ಯುಃ ಪುನರೇವಾಹ ತುಷ್ಟಃ ॥೧೫॥
ತಮಬ್ರವೀತ್ ಪ್ರೀಯಮಾಣೋ ಮಹಾತ್ಮಾ ವರಂ
ತವೇಹಾದ್ಯ ದದಾಮಿ ಭೂಯಃ ।
ತವೈವ ನಾಮ್ನಾ ಭವಿತಾSಯಮಗ್ನಿಃ ಸೃಂಕಾಂ ಚೇಮಾಮನೇಕರೂಪಾಂ ಗೃಹಾಣ ॥೧೬॥
ತ್ರಿಣಾಚಿಕೇತಸ್ತ್ರಿಭಿರೇತ್ಯ ಸಂಧಿಂ ತ್ರಿಕರ್ಮಕೃತ್ತರತಿ ಜನ್ಮಮೃತ್ಯೂ ।
ಬ್ರಹ್ಮಜಜ್ಞಂ ದೇವಮೀಡ್ಯಂ ವಿದಿತ್ವಾ ನಿಚಾಯ್ಯೇಮಾಂ ಶಾಂತಿಮತ್ಯಂತಮೇತಿ ॥೧೭॥
ತ್ರಿಣಾಚಿಕೇತಸ್ತ್ರಯಮೇತದ್ವಿದಿತ್ವಾ ಯ ಏವಂ
ವಿದ್ವಾಂಶ್ಚಿನುತೇ ನಾಚಿಕೇತಂ ।
ಸ ಮೃತ್ಯುಪಾಶಾನ್ ಪುರತಃ ಪ್ರಣೋದ್ಯ ಶೋಕಾತಿಗೋ ಮೋದತೇ ಸ್ವರ್ಗಲೋಕೇ ॥೧೮॥
ಏಷ ತೇSಗ್ನಿರ್ನಚಿಕೇತಃ ಸ್ವರ್ಗ್ಯೋ ಯಮವೃಣೀಥಾ ದ್ವಿತೀಯೇನ ವರೇಣ ।
ಏತಮಗ್ನಿಂ ತವೈವ ಪ್ರವಕ್ಷ್ಯಂತಿ ಜನಾಸಃ ತೃತೀಯಂ ವರಂ ನಚಿಕೇತೋ ವೃಣೀಷ್ವ ॥೧೯॥
[ಉಪನಿಷತ್ತಿನಲ್ಲಿರುವ
ಈ ಮಂತ್ರಗಳು ಅರ್ಥ ಅನ್ವಯ ಪ್ರಕಾರ ಸ್ವಲ್ಪ ಹಿಂದೆ ಮುಂದೆ ಇರುವುದರಿಂದ, ಮುಂದೆ ಈ ಶ್ಲೋಕಗಳ
ಅರ್ಥವಿವರಣೆ ಮಾಡುವಾಗ, ಹೆಚ್ಚು ಸ್ಪಷ್ಟತೆಗಾಗಿ, ಶ್ಲೋಕಗಳ ಅನುಕ್ರಮವನ್ನು ಬದಲಿಸಿ ವಿವರಿಸಿರುವುದನ್ನು
ಓದುಗರು ಗಮನಿಸಬೇಕು]
“ಲೋಕಾದಿಮಗ್ನಿಂ
ತಮುವಾಚ ತಸ್ಮೈ ಯಾ ಇಷ್ಟಕಾ ಯಾವತೀರ್ವಾ ಯಥಾ ವಾ(ಶ್ಲೋ-೧೫_೧).
ಇಲ್ಲಿ “ಎಲ್ಲಾ ಲೋಕಗಳಿಗೆ ಕಾರಣಕರ್ತ, ಎಲ್ಲಾ ಲೋಕಗಳ ಆದಿ, ಎಲ್ಲಾ ಜೀವಜಾತಕ್ಕೂ ಕಾರಣನಾದ
ಅಗ್ನಿನಾರಾಯಣನನ್ನು ನಚಿಕೇತನಿಗೆ ಯಮ ಉಪದೇಶಿಸಿದ” ಎಂದಿದ್ದಾರೆ. ಆದರೆ ಇಲ್ಲಿ ಏನು ಉಪದೇಶಿಸಿದ
ಎಂದು ಬಿಡಿಸಿ ಎಲ್ಲಿಯೂ ಹೇಳಿಲ್ಲ. ಅದು ರಹಸ್ಯ. ಅದನ್ನು ನಾವು ಗುರುಮುಖದಲ್ಲಿ
ತಿಳಿದುಕೊಳ್ಳಬೇಕು. ಇಲ್ಲಿ “ಯಾ ಇಷ್ಟಕಾ ಯಾವತೀರ್ವಾ ಯಥಾ ವಾ” ಎಂದಿದ್ದಾರೆ. ಅಗ್ನಿಯನ್ನು
ಹೊರಗಿನ ಕುಂಡದಲ್ಲಿ ಉಪಾಸನೆ ಮಾಡಬೇಕಿದ್ದರೆ ಅಲ್ಲಿ ಎಷ್ಟು ಇಟ್ಟಿಗೆಗಳನ್ನು(ಇಷ್ಟಕಾ) ಬಳಸಬೇಕು,
ಆ ಇಟ್ಟಿಗೆಗಳಲ್ಲಿ ಏನು ಅನುಸಂಧಾನವಿರಬೇಕು, ಇಟ್ಟಿಗೆಗಳನ್ನು ಹೇಗೆ ಜೋಡಿಸಬೇಕು, ಇತ್ಯಾದಿಯನ್ನು
ಯಮ ನಚಿಕೇತನಿಗೆ ವಿವರಿಸಿದ. ಇಲ್ಲಿ ಈ ಕುರಿತು ನೇರವಾಗಿ ವಿವರವನ್ನು ಹೇಳಿಲ್ಲವಾದ್ದರಿಂದ ನಾವು
ಇದರ ಹಿಂದಿರುವ ಗಣಿತವನ್ನು ಸ್ವಲ್ಪ ವಿಶ್ಲೇಷಿಸಬೇಕಾಗುತ್ತದೆ.
ಅಗ್ನಿಕುಂಡದ ಮಧ್ಯದಲ್ಲಿರುವ ಅಗ್ನಿಯಲ್ಲಿ ಮಾತ್ರ ನಾರಾಯಣನಿರುವುದಲ್ಲ, ಆ ಕುಂಡವನ್ನು ರಚನೆ
ಮಾಡಲು ಇಟ್ಟ ಇಟ್ಟಿಗೆಯಲ್ಲೂ ಭಗವಂತನ ರೂಪ
ಅಡಗಿದೆ. ಇಲ್ಲಿ ಅಗ್ನಿಕುಂಡ ಎನ್ನುವುದು ನಮ್ಮ ಪಿಂಡಾಂಡದ ದ್ಯೋತಕ. ನಮಗೆ ತಿಳಿದಂತೆ ನಮ್ಮ
ಹೃದಯದಲ್ಲಿ ಮಾತ್ರ ಭಗವಂತನಿರುವುದಲ್ಲ, ನಮ್ಮ ಇಡೀ ದೇಹದಲ್ಲಿ ವಿವಿಧ ರೂಪದಲ್ಲಿ ಭಗವಂತನಿದ್ದಾನೆ.
ಆದ್ದರಿಂದ ಅಗ್ನಿಹೋತ್ರ ಮಾಡುವಾಗ ಅಗ್ನಿಕುಂಡದ ಒಂದೊಂದು ಇಟ್ಟಿಗೆಯಲ್ಲೂ ಭಗವಂತನಿದ್ದಾನೆ ಎನ್ನುವ
ಅನುಸಂಧಾನ ಬಹಳ ಮುಖ್ಯ. ಮೇಲಿನ ಶ್ಲೋಕದಲ್ಲಿ ಬಳಸಲಾದ ‘ಇಷ್ಟಕಾ’ ಎನ್ನುವ ಪದ ಬಹಳ ರೋಚಕವಾದ ಪದ.
ಮೇಲ್ನೋಟಕ್ಕೆ ಇಟ್ಟಿಗೆ ಎನ್ನುವ ಅರ್ಥ ಕೊಡುವ ಈ ಪದಕ್ಕೆ ವಿಶೇಷ ಅರ್ಥವಿದೆ. ನಮಗೆ ಅತ್ಯಂತ
ಪ್ರಿಯವಾದ, ಆನಂದಮಯವಾದ ವಸ್ತು-ಇಷ್ಟಕಾ. ಆದ್ದರಿಂದ ಇಲ್ಲಿ ‘ಇಷ್ಟಕಾ’ ಎನ್ನುವ ಪದ ಬರಿಯ
ಇಟ್ಟಿಗೆಯನ್ನು ಹೇಳುವುದಲ್ಲ, ಆ ಇಟ್ಟಿಗೆಯೊಳಗಿನ ಆನಂದಸ್ವರೂಪ ಭಗವಂತನನ್ನು ಹೇಳುತ್ತದೆ.
ಇನ್ನು ‘ಯಾವತೀಃ’
ಅಂದರೆ ಎಷ್ಟು ಇಟ್ಟಿಗೆಯಿಂದ ಕುಂಡ ಮಾಡಬೇಕು ಮತ್ತು ಯಾವ ರೀತಿ(ಯಥಾ ವಾ) ಉಪಾಸನೆ ಮಾಡಬೇಕು ಎನ್ನುವ
ಪ್ರಶ್ನೆ. ಶಾಸ್ತ್ರೀಯವಾಗಿ ಅಗ್ನಿಕುಂಡವನ್ನು ೩೬೦ ಇಟ್ಟಿಗೆಗಳಿಂದ ಮಾಡಬೇಕು. ೩೬೦ ಅನ್ನುವುದು
ಒಂದು ವಿಶಿಷ್ಠವಾದ ಸಂಖ್ಯೆ. ಇದರ ಹಿಂದೆ ಮೂರು ವಿಧದ ಉಪಾಸನೆ ಇದೆ. ಅವುಗಳೆಂದರೆ: ಭಗವಂತನನ್ನು ಶರೀರದಲ್ಲಿ
ಉಪಾಸನೆ, ಅಗ್ನಿಕುಂಡದಲ್ಲಿ ಉಪಾಸನೆ ಮತ್ತು ಕಾಲದಲ್ಲಿ ಉಪಾಸನೆ. ಶಾಸ್ತ್ರದ ಪ್ರಕಾರ ನಮ್ಮ
ದೇಹದಲ್ಲಿ ೩೬೦ ಅಸ್ಥಿಗಳಿವೆ, ಅಷ್ಟೇ
ಅಸ್ಥಿಮಜ್ಜೆ[marrows] ಮತ್ತು ಅಸ್ಥಿಸಂಧಿಗಳಿವೆ. [ಆಧುನಿಕ ವೈದ್ಯ ವಿಜ್ಞಾನ ಸುಮಾರು
೩೦೦ ಅಸ್ಥಿಗಳನ್ನು ಗುರುತಿಸುತ್ತದೆ. ಆದರೆ ಪ್ರಾಚೀನರು ಅಸ್ಥಿಸಂಧಿಗಳನ್ನೆಲ್ಲ ಪರಿಗಣಿಸಿ ೩೬೦
ಎನ್ನುತ್ತಾರೆ]. ಇದರಲ್ಲಿ ಭಗವಂತ ೩೬೦ ರೂಪದಲ್ಲಿ ನೆಲೆಸಿ ನಡೆಸುತ್ತಿದ್ದಾನೆ. ಇದನ್ನೇ ನಾವು
ಹೊರಪ್ರಪಂಚದಲ್ಲಿ ಯಜ್ಞಕುಂಡದ ೩೬೦ ಇಟ್ಟಿಗೆಯಲ್ಲಿ ಕಾಣಬೇಕು.
ಇನ್ನು ಕಾಲದಲ್ಲಿ
ಭಗವಂತನ ಉಪಾಸನೆ. ಬೇರೆಬೇರೆ ಮಾನದ ಪ್ರಕಾರ ವರ್ಷದಲ್ಲಿನ ದಿನಗಳ ಸಂಖ್ಯೆ ಬೇರೆಬೇರೆ. ಸೌರಮಾನದ
ಪ್ರಕಾರ ವರ್ಷಕ್ಕೆ ೩೬೫ ಮತ್ತು ೮/೩೧ ದಿನಗಳು;
ಚಾಂದ್ರಮಾನದ ಪ್ರಕಾರ ೩೫೫ ದಿನಗಳು; ನಕ್ಷತ್ರಮಾನದ ಪ್ರಕಾರ ೩೨೪ ದಿನಗಳು; ಬೃಹಸ್ಪತಿಮಾನದ
ಪ್ರಕಾರ ೩೯೦ ದಿನಗಳು. ಆದರೆ ಸಾರ್ವತ್ರಿಕವಾಗಿ ಒಂದು ವತ್ಸರ ಎಂದರೆ ೩೬೦ ದಿನಗಳು. ಏಕೆಂದರೆ ೩೬೦
ಡಿಗ್ರಿ(ಕೋನ) ಅಂದರೆ ಒಂದು ಪೂರ್ಣವೃತ್ತ. ಹೀಗೆ ಅಗ್ನಿಕುಂಡದ ೩೬೦ ಇಟ್ಟಿಗೆಗಳಲ್ಲಿ, ದೇಹದ ೩೬೦
ಅಸ್ಥಿಗಳಲ್ಲಿ, ವರ್ಷದ ೩೬೦ ದಿನಗಳಲ್ಲಿ- ೧೦೮೦[೩೬೦+೩೬೦+೩೬೦] ರೂಪಗಳಲ್ಲಿ ಭಗವಂತ
ನೆಲೆಸಿದ್ದಾನೆ. ನಾವು ವಿಷ್ಣುಸಹಸ್ರನಾಮದಲ್ಲಿನ ‘ಚ’,
‘ಏವ’ ಇತ್ಯಾದಿ ಏಕಾಕ್ಷರ ನಾಮಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ನೋಡಿದರೆ ಅಲ್ಲಿ ೧೦೮೦ ನಾಮಗಳನ್ನು
ಕಾಣಬಹುದು. ಇದು ಭಗವಂತನ ಈ ೧೦೮೦ ರೂಪಗಳನ್ನು ಹೇಳುವ ವಿಶಿಷ್ಠನಾಮಗಳು. ಇದಕ್ಕಾಗಿ
ವಿಷ್ಣುಸಹಸ್ರನಾಮ ಅಷ್ಟು ಶ್ರೇಷ್ಠ. ಅದನ್ನು ಉಚ್ಛರಿಸಿದಾಗ ಅದರ ಕಂಪನದಿಂದ ನಮ್ಮ ದೇಹದ ರೋಗ
ನಾಶವಾಗಿ ಆರೋಗ್ಯ ಸುಧಾರಣೆಯಾಗುತ್ತದೆ ಮತ್ತು ಬದುಕಿನಲ್ಲಿ ಸಮಸ್ಯೆ ಇರುವುದಿಲ್ಲ.
ಹೀಗೆ ಇಲ್ಲಿ ಯಮ- 'ಅಗ್ನಿಯಂತರ್ಗತ
ಭಗವಂತ-ಕಾಲದಲ್ಲಿ, ಕುಂಡದಲ್ಲಿ ಮತ್ತು ಪಿಂಡ(ದೇಹ)ದಲ್ಲಿ ನೆಲೆಸಿದ್ದಾನೆ ಎಂದು ತಿಳಿದು ಉಪಾಸನೆ ಮಾಡಬೇಕು' ಎನ್ನುವ ವಿಷಯವನ್ನು ನಚಿಕೇತನಿಗೆ ವಿವರಿಸಿದ. ಇದು ವಿಶ್ವದಲ್ಲಿರುವ ಭಗವಂತನನ್ನು ೩೬೦ ಎನ್ನುವ
ಸಂಖ್ಯೆಯಲ್ಲಿ ಅಳವಡಿಸಿ ಮಾಡತಕ್ಕಂತಹ ಒಂದು ಅತ್ಯದ್ಭುತವಾದ ಉಪಾಸನೆ.
ಯಮ ಹೇಳುತ್ತಾನೆ: “ತ್ರಿಣಾಚಿಕೇತಸ್ತ್ರಿಭಿರೇತ್ಯ
ಸಂಧಿಂ ತ್ರಿಕರ್ಮಕೃತ್ತರತಿ ಜನ್ಮಮೃತ್ಯೂ (ಶ್ಲೋ:೧೭-೧)ಎಂದು. ಇಲ್ಲಿ ಪ್ರತಿಯೊಬ್ಬನೂ ತ್ರಿಣಾಚಿಕೇತನಾಗಬೇಕು
ಎಂದಿದ್ದಾನೆ ಯಮ. ನಚಿಕೇತನ ಮುಖೇನ ಭೂಮಿಗೆ ಪರಿಚಯಿಸಲ್ಪಟ್ಟ ಅಗ್ನಿನಾರಾಯಣನನ್ನು ಮೂರು ಕಡೆ [ಅಗ್ನಿಕುಂಡದಲ್ಲಿ-ಅಗ್ನಿರೂಪ,
ಹೃದಯಕುಂಡದಲ್ಲಿ- ವಾಯುರೂಪ, ಕಾಲಕುಂಡದಲ್ಲಿ- ಆದಿತ್ಯರೂಪ] ಉಪಾಸನೆ ಮಾಡುವವರು, ಮೂರರ ಜೊತೆಗೆ
ಸಂಧಾನ (ತ್ರಿರೇತ್ಯ ಸಂಧಿಃ) ಮಾಡಿಕೊಂಡು, ಮೂರು ಕರ್ಮಗಳನ್ನು ಮಾಡಿದರೆ(ತ್ರಿಕರ್ಮಕೃತ್), ಆಗ
ಜನ್ಮ-ಮೃತ್ಯುವನ್ನು ದಾಟುತ್ತಾರೆ-ಎನ್ನುವುದು ಯಮನ ವಿವರಣೆ. ಇಲ್ಲಿ ‘ತ್ರಿರೇತ್ಯ ಸಂಧಿಃ’
ಎನ್ನುವಲ್ಲಿ ‘ತ್ರಿ’ ಎಂದರೆ ಮೂರು ವೇದಗಳು.[ಗದ್ಯರೂಪ, ಪದ್ಯರೂಪ ಮತ್ತು ಗಾನರೂಪದ ಮೂರು
ವೇದಗಳು]. ವೇದ ಶಾಖೆಗಳು/ಸಂಹಿತೆಗಳು[ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ-ಒಟ್ಟು-೪]
ಮತ್ತು ವೇದದ ಉಪಶಾಖೆಗಳು[ಋಗ್ವೇದದಲ್ಲಿ-೨೪, ಯಜುರ್ವೇದದಲ್ಲಿ-೧೦೧, ಸಾಮವೇದದಲ್ಲಿ-೧೦೦೦,
ಅಥರ್ವವೇದದಲ್ಲಿ-೧೨. ಒಟ್ಟು-೧೧೩೭] ಅನೇಕ. ಆದರೆ ಅವುಗಳಲ್ಲಿ ಒಂದಕ್ಕೊಂದು ವಿರೋಧವಿಲ್ಲ.
ಪ್ರತಿಯೊಂದು ವೇದವೂ ಭಗವಂತನನ್ನು, ಆತನ ಮಹಿಮೆಯನ್ನು ಹೇಳುತ್ತದೆ. ಅದರಲ್ಲಿರುವ ವಿಷಯವನ್ನು
ಒಂದಕ್ಕೊಂದು ಸಮನ್ವಯ ಮಾಡಿ ತಿಳಿದುಕೊಳ್ಳುವುದು ‘ತ್ರಿರೇತ್ಯ ಸಂಧಿಃ’. ಹೀಗೆ ವೇದದ
ಮೂಲಾರ್ಥವನ್ನು ತಿಳಿದುಕೊಂಡು, ದಿನವೂ ಯಜ್ಞ, ದಾನ, ತಪಃ ಎನ್ನುವ ಮೂರು ಕರ್ಮವನ್ನು ಮಾಡಿಕೊಂಡು ಅಗ್ನಿಕಾರ್ಯ ಮಾಡಿದರೆ
ಭಗವಂತ ಒಲಿಯುತ್ತಾನೆ.
ಇಲ್ಲಿ ನಮಗೆ ಒಂದು
ಪ್ರಶ್ನೆ ಮೂಡಬಹುದು. ಅದೇನೆಂದರೆ-ಒಬ್ಬ ಸಾಮಾನ್ಯ ಮನುಷ್ಯನಿಗೆ ದಿನವೂ ಯಜ್ಞ, ದಾನ, ತಪಸ್ಸನ್ನು
ಮಾಡಲು ಸಾಧ್ಯವೋ ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಶ್ರೀಕೃಷ್ಣ ಗೀತೆಯಲ್ಲಿ ಬಹಳ ಸುಂದರವಾದ
ವಿವರಣೆ ಕೊಟ್ಟಿದ್ದಾನೆ(ಅ-೧೭). ನಾವು ಮಾಡುವ
ಪ್ರತಿಯೊಂದು ಕೆಲಸವೂ ಒಂದು ದೇವರಪೂಜೆ, ಅದು ಭಗವಂತನಿಗೆ ಅರ್ಪಿತವಾಗಿ ಅವನು ಪ್ರೀತನಾಗಲಿ ಎಂದು
ಮಾಡುವುದು ಯಜ್ಞ. ನಾನು ಆಡಿದ ಮಾತೆಲ್ಲವೂ ನಿನ್ನ ಸ್ತೋತ್ರವಾಗಲಿ, ನಾನು ನಡೆದ ನಡೆಯಲ್ಲವೂ
ನಿನ್ನ ಪ್ರದಕ್ಷಿಣೆಯಾಗಲಿ, ನಾನು ಮಲಗಿದ್ದೆಲ್ಲವೂ ನಿನಗೆ ನಮಸ್ಕಾರವಾಗಲಿ, ನಾನು ಮಾಡುವ
ಪ್ರತಿಯೊಂದು ಕರ್ಮವೂ ನಿನಗೆ ಪೂಜೆಯಾಗಲಿ ಎನ್ನುವ ಅನುಸಂಧಾನದಿಂದ ಬದುಕಿದಾಗ ಅದು
ಯಜ್ಞವಾಗುತ್ತದೆ. ಇನ್ನು ಎರಡನೇ ಕರ್ಮ-ದಾನ. ನಮ್ಮಲ್ಲಿಲ್ಲದ್ದನ್ನು ನಾವು ಇನ್ನೊಬ್ಬರಿಗೆ ಕೊಡಲು
ಸಾಧ್ಯವಿಲ್ಲ. ಆದರೆ ಯಾರಿಗೆ ಯಾವಾಗ ಯಾವುದರ ಅಗತ್ಯವಿದೆಯೋ, ಅದು ನಮ್ಮಲ್ಲಿದ್ದರೆ, ಅದನ್ನು
ನಿಸ್ವಾರ್ಥವಾಗಿ, ಪ್ರಚಾರದ ಬಯಕೆ ಇಲ್ಲದೆ ಕೊಡುವುದು ದಾನ. ಮೂರನೆಯ ಕರ್ಮ-ತಪಸ್ಸು. ದೊಡ್ಡವರಿಗೆ
ಗೌರವಕೊಡುವುದು, ಸ್ವಚ್ಛವಾಗಿರುವುದು, ಪ್ರಾಮಾಣಿಕವಾದ ನೇರ ನಡೆ, ಸ್ವಚ್ಛಂದಕಾಮಕ್ಕೆ
ಕಡಿವಾಣ(ಬ್ರಹ್ಮಚರ್ಯ), ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದು, ಇತ್ಯಾದಿ. ಇದು ನಾವು ದೈನಂದಿನ
ಜೀವನದಲ್ಲಿ ಆಚರಿಸಬಹುದಾದ ತಪಸ್ಸು.[ಈ ಮೂರು ಕರ್ಮದ ಕುರಿತ ಹೆಚ್ಚಿನ ವಿವರಣೆಯನ್ನು ಗೀತೆಯ
ಹದಿನೇಳನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. Refer: http://bhagavadgitakannada.blogspot.in].
ಮುಂದುವರಿದು ಯಮ
ಹೇಳುತ್ತಾನೆ: “ತ್ರಿಣಾಚಿಕೇತಸ್ತ್ರಯಮೇತದ್ವಿದಿತ್ವಾ ಯ ಏವಂ ವಿದ್ವಾಂಶ್ಚಿನುತೇ ನಾಚಿಕೇತಂ” ಎಂದು(ಶ್ಲೋ-೧೮-೧).
ಅಗ್ನಿಕುಂಡ, ಕಾಲಕುಂಡ, ದೇಹಕುಂಡ ಎನ್ನುವ ಮೂರು ವಿಧವನ್ನು ತಿಳಿದು, ಮೂರು ಬಗೆಯ ನಾಚಿಕೇತಾಗ್ನಿಯ
ಉಪಾಸನೆ ಮಾಡುವವನು, ಹಿಂದೆ ಹೇಳಿದ ರೀತಿಯಲ್ಲಿ ಮೂರು ವೇದಗಳನ್ನು ಸಮನ್ವಯಮಾಡಿ ಅರ್ಥ
ಮಾಡಿಕೊಂಡು, ‘ತ್ರಿಕರ್ಮಕೃತ್’ ಆಗಿ, ಅಗ್ನಿಯಲ್ಲಿ ಸ್ಥಿತನಾದ ಅಗ್ನಿನಾರಾಯಣನನ್ನು ಉಪಾಸನೆ
ಮಾಡಿದರೆ-ಅಂಥವನು ಮೊದಲು ಸ್ವರ್ಗವನ್ನು ಸೇರಿ, ಅಲ್ಲಿ ಕೆಲಕಾಲ ಇದ್ದು[ಶಾಸ್ತ್ರಕಾರರ ಪ್ರಕಾರ
ಕೆಲಕಾಲ ಅಂದರೆ ಒಂದು ಮನ್ವಂತರದಷ್ಟು ದೀರ್ಘಕಾಲ], ಸ್ವರ್ಗಸುಖವನ್ನು ಅನುಭವಿಸಿ, ಆನಂತರ
ಅಗ್ನಿಸ್ಥನಾದ ಭಗವಂತನನ್ನು ಉಪಾಸನೆ ಮಾಡಿದ ಫಲವಾಗಿ, ಹುಟ್ಟು-ಸಾವುಗಳ ಎಲ್ಲಾ ಬಂಧವನ್ನು
ಕಳಚಿಕೊಂಡು, ನಿತ್ಯಾನಂದ ರೂಪವಾದ, ಸ್ವರೂಪಸುಖವನ್ನು ಕೊಡುವ ಮೋಕ್ಷವನ್ನು ಪಡೆಯುತ್ತಾನೆ.
“ಬ್ರಹ್ಮಜಜ್ಞಂ
ದೇವಮೀಡ್ಯಂ ವಿದಿತ್ವಾ ನಿಚಾಯ್ಯೇಮಾಂ ಶಾಂತಿಮತ್ಯಂತಮೇತಿ”(ಶ್ಲೋ-೧೭-೨). ಇಲ್ಲಿ ಯಮ ಭಗವಂತನನ್ನು ‘ಬ್ರಹ್ಮಜಜ್ಞ’ ಎಂದು
ಸಂಬೋಧಿಸಿದ್ದಾನೆ. ಶಬ್ದಗಳಲ್ಲಿ ಬೃಹತ್ ಆದದ್ದು ವೇದ. ಆದ್ದರಿಂದ ಅದು ‘ಬ್ರಹ್ಮ’. ವೇದಗಳಿಂದ
ಅಭಿವ್ಯಕ್ತನಾಗುವ ಭಗವಂತ ‘ಬ್ರಹ್ಮಜ’. ಇಂಥ ಭಗವಂತ ವೇದವೇದ್ಯ. ಎಲ್ಲವನ್ನು ಬಲ್ಲವನು ಆ
ಭಗವಂತನೊಬ್ಬನೆ. ಆದ್ದರಿಂದ ವೇದವೇದ್ಯನೂ ಸರ್ವಜ್ಞನೂ ಆದ ಆ ಭಗವಂತ ‘ಬ್ರಹ್ಮಜಜ್ಞ’. ಆತನನ್ನು ಎಲ್ಲರೂ ಜಾತಿ ಮತ ಭೇದವಿಲ್ಲದೆ ‘ದೇವರು’ ಎಂದು
ಕರೆಯುತ್ತಾರೆ. ಪ್ರಪಂಚದಲ್ಲಿ ಒಬ್ಬೊಬ್ಬರಿಗೆ ಒಂದೊಂದು ದೇವರಿಲ್ಲ. ಎಲ್ಲರಿಗೂ ದೇವರು ಒಬ್ಬನೆ.
ಇದನ್ನು ‘ದೇವರು’ ಎನ್ನುವ ಪದವೇ ವಿವರಿಸುತ್ತದೆ. ‘ದೇವರು’ ಎನ್ನುವ ಪದ ‘ದಿವು’ ಎನ್ನುವ ದಾತುವಿನಿಂದ ಬಂದಿರುವುದು. ಪ್ರಾಚೀನ
ದಾತು ಪಾಠದಲ್ಲಿ ಈ ದಾತುವಿಗೆ ಏಳು ಅರ್ಥವನ್ನು ನೋಡಬಹುದು. ಅವುಗಳೆಂದರೆ: ೧) ಧ್ಯುತಿ ೨) ವಿಜಿಗೀಶ ೩) ಕಾಂತಿ ೪) ಸ್ತುತಿ ೫) ವ್ಯವಹಾರ ೬) ಕ್ರೀಡಾ
೭) ಗತಿಶು.
೧) ಧ್ಯುತಿ: ಧ್ಯುತಿ ಅಂದರೆ ಬೆಳಕಿನ
ಸ್ವರೂಪ. ಬೆಳಕಿನ ಪುಂಜವಾದ ಸೂರ್ಯಚಂದ್ರಾದಿಗಳಿಗೆ ಬೆಳಕನ್ನೀಯುವ ಭಗವಂತ ನಮ್ಮೊಳಗೆ ಜ್ಞಾನದ
ಬೆಳಕನ್ನು ತುಂಬುತ್ತಾನೆ.
೨) ವಿಜಿಗೀಶ: ಭಗವಂತ ಎಲ್ಲರಿಗಿಂತ ಎತ್ತರದಲ್ಲಿರುವವನು ಹಾಗೂ ಗೆಲುವಿನ ಸ್ವರೂಪ.
೩) ಕಾಂತಿ: ಕೇವಲ ಇಚ್ಛೆಯಿಂದ ಸೃಷ್ಟಿ
ಮಾಡಬಲ್ಲವ. ನಮಗೆ ಇಚ್ಛೆಯನ್ನು ಕೊಟ್ಟವ ಹಾಗೂ ಅದನ್ನು ಅವರವರ ಯೋಗ್ಯತೆಗೆ ತಕ್ಕಂತೆ ಪೂರೈಸುವವ.
೪) ಸ್ತುತಿ: ಎಲ್ಲರಿಂದ ಸ್ತುತನಾದವನು; ಎಲ್ಲರೂ ಯಾರನ್ನು ಸ್ತುತಿಸುತ್ತಾರೋ ಅವನು ಸರ್ವಶಬ್ದ ವಾಚ್ಯನಾದ ಭಗವಂತ.
೫) ವ್ಯವಹಾರ: ಜಗತ್ತಿನ ಸಮಸ್ತ ವ್ಯವಹಾರವನ್ನು ನಿರ್ವಹಿಸುವವ.
೬) ಕ್ರೀಡಾ: ಲೀಲಾ ಮಾತ್ರದಿಂದ ಸೃಷ್ಟಿ-ಸ್ಥಿತಿ-ಸಂಹಾರವನ್ನು ನಿಭಾಯಿಸುವವನು ಭಗವಂತ. ಇದು ಆತನಿಗೊಂದು ಕ್ರೀಡೆ.
೭) ಗತಿಶು: ಚಲನೆ ಮತ್ತು ಜ್ಞಾನ ಕೊಟ್ಟವ. ಯಾರು ಎಲ್ಲಾ ಕಡೆ ಗತನಾಗಿದ್ದಾನೋ; ಎಲ್ಲವನ್ನೂ ತಿಳಿದಿದ್ದಾನೋ; ಎಲ್ಲರೊಳಗೆ ಬಿಂಬ ರೂಪದಲ್ಲಿ ನೆಲೆಸಿದ್ದಾನೋ ಅವನು 'ದೇವ'
ಹೀಗೆ ಇಚ್ಛಾಮಾತ್ರದಿಂದ
ಸೃಷ್ಟಿ ಮಾಡಬಲ್ಲ, ಸತ್ಯಸಂಕಲ್ಪ, ಸರ್ವಗತ, ಸರ್ವಜ್ಞ, ಬೆಳಕುಗಳ ಬೆಳಕಾಗಿ ಜಗತ್ತಿನ ಸರ್ವ ವ್ಯವಹಾರವನ್ನು
ನಿರ್ವಹಿಸುವ, ಸರ್ವಶ್ರೇಷ್ಠ ಭಗವಂತ 'ದೇವ'. ಈ ರೀತಿ ಅಗ್ನಿಯಲ್ಲಿರುವ ಭಗವಂತನನ್ನು ‘ಬ್ರಹ್ಮಜಜ್ಞಂ
ದೇವಮೀಡ್ಯ’ ಎಂದು ಉಪಾಸನೆ ಮಾಡಿದರೆ- ಸಾವಿಲ್ಲದ, ಸುಖದ ಪರಾಕಾಷ್ಠೆಯಾದ ಮೋಕ್ಷವನ್ನು ಪಡೆಯಬಹುದು
ಎಂದು ವಿವರಿಸಿದ ಯಮ ಹೇಳುತ್ತಾನೆ: “ಇದೇ ನಿನ್ನ ಎರಡನೇ ಪ್ರಶ್ನೆಗೆ ಉತ್ತರ. ಎಲ್ಲವನ್ನು
ಬಿಡಿಸಿ ಹೇಳಿದ್ದೇನೆ” ಎಂದು [ “ಏಷ ತೇSಗ್ನಿರ್ನಚಿಕೇತಃ ಸ್ವರ್ಗ್ಯೋ ಯಮವೃಣೀಥಾ ದ್ವಿತೀಯೇನ ವರೇಣ (ಶ್ಲೋ-೧೯-೧)]
ಇಷ್ಟು ಹೇಳಿ ಯಮ ನಚಿಕೇತನನ್ನು
ಉದ್ದೇಶಿಸಿ ಕೇಳುತ್ತಾನೆ- ನಾನು ಹೇಳಿದ ವಿಚಾರ ನಿನಗೆ ಸರಿಯಾಗಿ ತಿಳಿಯಿತೋ ಎಂದು. ಇದಕ್ಕೆ ಉತ್ತರಿಸಿದ
ನಚಿಕೇತ ಯಮನಿಂದ ಪಡೆದ ಜ್ಞಾನದ ಉಪದೇಶವನ್ನು ಪೂರ್ಣವಾಗಿ ಅನುವಾದಿಸಿದ. ಈ ಸಂದರ್ಭವನ್ನು ಇಲ್ಲಿ ವಿವರಿಸುತ್ತಾ
ಹೇಳುತ್ತಾರೆ: “ಸ ಚಾಪಿ
ತತ್ಪ್ರತ್ಯವದದ್ಯಥೋಕ್ತಂ ಅಥಾಸ್ಯ ಮೃತ್ಯುಃ
ಪುನರೇವಾಹ ತುಷ್ಟಃ”(ಶ್ಲೋ-೧೫-೨) ಎಂದು. ತಾನು ಹೇಳಿದ ಎಲ್ಲಾ ವಿಚಾರವನ್ನು ಚಾಚೂ ತಪ್ಪದೆ ನಚಿಕೇತ
ಗ್ರಹಿಸಿದ್ದನ್ನು ಕಂಡು ಯಮನಿಗೆ ಮಹದಾನಂದವಾಗುತ್ತದೆ. ಈ ಆನಂದದಲ್ಲಿ ಆತ ತಾನು ಮೊದಲು ಪ್ರತಿಜ್ಞೆ ಮಾಡಿದ್ದ ಮೂರು
ವರವಲ್ಲದೆ ಇನ್ನೂ ಒಂದು ವರವನ್ನು ಕೊಡಲು ಮುಂದಾಗುತ್ತಾನೆ. ಇದನ್ನು ವರ್ಣಿಸುತ್ತಾ ಇಲ್ಲಿ ಹೇಳುತ್ತಾರೆ:
“ತಮಬ್ರವೀತ್ ಪ್ರೀಯಮಾಣೋ ಮಹಾತ್ಮಾ ವರಂ ತವೇಹಾದ್ಯ
ದದಾಮಿ ಭೂಯಃ”(ಶ್ಲೋ-೧೬-೧) ಎಂದು. ಸೂರ್ಯ-ಚಂದ್ರರಿಗೆ
ಸಮಾನಸ್ಕಂದನಾದ, ದಿವ್ಯಜ್ಞಾನದ ಬೆಳಕನ್ನು ತುಂಬಿಕೊಂಡಿರುವ, ಮಹಾತ್ಮನಾದ ಯಮ ನಚಿಕೇತನ ಗ್ರಹಣ ಶಕ್ತಿಯನ್ನು
ಕಂಡು ಸಂತೋಷಪಟ್ಟು ಇನ್ನೊಂದು ವರವನ್ನು ಅದೇ ಕ್ಷಣದಲ್ಲಿ ತಾನೇ ಉಡುಗೊರೆಯಾಗಿ ಕೊಡುತ್ತಾ ಹೇಳುತ್ತಾನೆ:
“ಈ ಅಗ್ನಿ ವಿದ್ಯೆಗೆ ಭೂಮಿಯ ಮೇಲೆ ನಾಚಿಕೇತಾಗ್ನಿ
ಎಂದು ಹೆಸರು ಬರಲಿ; ನಿನ್ನ ಹೆಸರಿನಿಂದಲೇ ಈ ಅಗ್ನಿ ಪ್ರಸಿದ್ಧಿಯಾಗಲಿ” ಎಂದು. ಹೀಗೆ ಹೇಳಿ ಯಮ ತನ್ನ
ಕೊರಳಿನಿಂದ ಒಂದು ಬಂಗಾರದ ಹಾರವನ್ನು ನಚಿಕೇತನಿಗೆ ಕೊಡಲು ಮುಂದಾಗುತ್ತಾನೆ. [ತವೈವ ನಾಮ್ನಾ
ಭವಿತಾSಯಮಗ್ನಿಃ ಸೃಂಕಾಂ ಚೇಮಾಮನೇಕರೂಪಾಂ ಗೃಹಾಣ” (ಶ್ಲೋ-೧೬-೨)]. ಇಲ್ಲಿ ಬಂಗಾರದ ಹಾರವನ್ನು ‘ಸೃಂಕಾಂ’
ಎಂದು ಕರೆದಿದ್ದಾರೆ. ಈ ಪದಕ್ಕೆ ಸಂಸ್ಕೃತದಲ್ಲಿ ‘ಸಂಕೋಲೆ’
ಎನ್ನುವ ಅರ್ಥವಿದೆ. ಇದು ಯಮ ನಚಿಕೇತನನ್ನು ಪರೀಕ್ಷಿಸುವ ರೀತಿ. ತನ್ನಿಂದ ಪ್ರಶಂಸೆ ಜೊತೆಗೆ
ಚಿನ್ನದ ಹಾರ ದೊರೆತಾಗ, ನಚಿಕೇತ ಚಿನ್ನದ ಆಸೆಗೆ ಬಲಿಬೀಳುತ್ತಾನೋ ಎಂದು ಯಮ ನಚಿಕೇತನನ್ನು ಪರೀಕ್ಷಿಸುತ್ತಿದಾನೆ.
ಇದಕ್ಕೆ ನಚಿಕೇತ ಹೇಳಿದನಂತೆ: “ಭೂಮಿ ಮೇಲೆ ಆರಾಧನೆ ಮಾಡತಕ್ಕ ಅಗ್ನಿವಿದ್ಯೆಗೆ ನನ್ನ ಹೆಸರು ಬಂತೆಂದರೆ
ಅದು ನನ್ನ ಭಾಗ್ಯ. ಆದರೆ ಬಂಗಾರದ ಸರ ನನಗೆ ಬೇಡ. ಅದು ನಿಮ್ಮಲ್ಲೇ ಇರಲಿ” ಎಂದು. [ನಚಿಕೇತನ ಈ ಪ್ರತಿಕ್ರಿಯೆಯನ್ನು
ಕಠ ಉಪನಿಷತ್ತಿನಲ್ಲಿ ವಿವರಿಸಿಲ್ಲ]. ಇದು ಜ್ಞಾನಿಗಳಲ್ಲಿರುವ ದೊಡ್ಡ ಗುಣ. ಏಕೆಂದರೆ ಇಲ್ಲಿ ಯಮ ಕೊಟ್ಟಿದ್ದು
ಸಂಸಾರ ಬಂಧದ ಸಂಕೋಲೆ ಎನ್ನುವ ಹಾರ. ಆದ್ದರಿಂದ ಅದನ್ನು ಜ್ಞಾನಿಯಾದ ನಚಿಕೇತ ಸ್ವೀಕಾರ ಮಾಡಲಿಲ್ಲ. ಆಗ ಯಮ ನಚಿಕೇತನಲ್ಲಿ
ಹೇಳುತ್ತಾನೆ: “ನಿನ್ನ ಹೆಸರು ವೈದಿಕ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುವಂತೆ ನಿನಗೆ ವರವನ್ನು ಕೊಟ್ಟಿದ್ದೇನೆ.
ಈಗ ನೀನು ನಿನ್ನ ಮೂರನೇ ವರವನ್ನು ಕೇಳು” ಎಂದು [ಏತಮಗ್ನಿಂ ತವೈವ ಪ್ರವಕ್ಷ್ಯಂತಿ ಜನಾಸಃ ತೃತೀಯಂ ವರಂ ನಚಿಕೇತೋ ವೃಣೀಷ್ವ(ಶ್ಲೋ-೧೯-೨)]. ಮೂರನೇ
ವರವಾಗಿ ನಚಿಕೇತ ಏನನ್ನು ಕೇಳಿದ ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.