Thursday, June 21, 2012

Kathopanishad in Kannada Chapter-01 Canto-02 Shloka 16-20


              ಏತದ್ಧ್ಯೇವಾಕ್ಷರಂ ಬ್ರಹ್ಮ ಏತದ್ಧ್ಯೇವಾಕ್ಷರಂ ಪರಮ್
              ಏತದ್ಧ್ಯೇವಾಕ್ಷರಂ ಜ್ಞಾತ್ವಾ ಯೋ ಯದಿಚ್ಛತಿ ತಸ್ಯ ತತ್                         ೧೬

ಅರ್ಥಗಳಲ್ಲೇ  ಮಹಾ ಅರ್ಥವಾದ, ಅಕ್ಷರ ಶಬ್ದ ವಾಚ್ಯನಾದ, ಆ ಪರಬ್ರಹ್ಮ  ಭಗವಂತನನ್ನು ಹೇಳುವ ಓಂಕಾರ ಅಕ್ಷರಗಳಲ್ಲೇ ಶ್ರೇಷ್ಠ ಅಕ್ಷರ.  ಈ ಶ್ಲೋಕದಲ್ಲಿ ಬಂದ 'ಅಕ್ಷರ' ಪದಕ್ಕೆ  ವಿಶೇಷ ಅರ್ಥವಿದೆ. ಭಗವದ್ ಪರವಾಗಿ ನೋಡಿದಾಗ: ಅಶ್ನುತೇ ಇತಿ ಅಕ್ಷರಃ. ಅಂದರೆ  ಎಲ್ಲಾ  ಕಡೆ ವ್ಯಾಪಿಸಿರುವವ; ಅ+ಕ್ಷರ-ಅಕ್ಷರ. ಅಂದರೆ ನಾಶವಿಲ್ಲದ ತತ್ವ; ಅಧಿಕಂ ಕ್ಷರತಿ ಇತಿ ಅಕ್ಷರಃ. ಅಂದರೆ  ಸರ್ವಾಭೀಷ್ಠಪ್ರದ; ಅಕ್ಷ+ರ-ಅಕ್ಷರ. ಅಂದರೆ ಅಕ್ಷಗಳಲ್ಲಿ(ಇಂದ್ರಿಯಗಳಲ್ಲಿ)ದ್ದು, ಅವುಗಳನ್ನು ನಿಯಂತ್ರಿಸುತ್ತಾ ರಮಿಸುವವ; ಅ+ಕ್ಷ+ರ-ಅಕ್ಷರ. ಇಲ್ಲಿ ಅ ಅಂದರೆ ಅಲ್ಲ/ಇಲ್ಲ. ಭಗವಂತನಲ್ಲಿ ಯಾವುದೇ ದೋಷವಿಲ್ಲ. ಅವನು ಈ ಜಗತ್ತಿನಲ್ಲಿ ಕಾಣುವ ಯಾವ ವಸ್ತುವಿನಂತೆಯೂ ಇಲ್ಲ( ಸರ್ವವಿಲಕ್ಷಣ ಹಾಗೂ ಸರ್ವದೋಷ ದೂರ); ‘ಕ್ಷ’ ಅಂದರೆ ಕ್ಷತಿ ಅಥವಾ ಆಶ್ರಯದಾತ. ಭಗವಂತ ಎಲ್ಲವುದಕ್ಕೂ ಆಶ್ರಯದಾತ; ‘ರ’ ಅಂದರೆ ರಮಿಸುವುದು. ಸೃಷ್ಟಿ ಮತ್ತು ಸಂಹಾರ ಕರ್ತನಾದ ಭಗವಂತ ಸದಾ ಆನಂದಮಯ. ಇಂತಹ ಓಂಕಾರವಾಚ್ಯ ಭಗವಂತನನ್ನು ತಿಳಿದು ತನ್ಮಯತೆಯಿಂದ ಉಪಾಸನೆ ಮಾಡುವವರು ಬಯಸಿದ್ದನ್ನು ಪಡೆಯುತ್ತಾರೆ. 
ಓಂಕಾರ ಬಯಸಿದ್ದನ್ನು ಕೊಡುವ ಕಲ್ಪವೃಕ್ಷ. ಮಂತ್ರಗಳಲ್ಲಿ ಇದಕ್ಕೆ ಸಮನಾದ ಇನ್ನೊಂದು ಪದವಿಲ್ಲ. ಆದರೆ ಇಲ್ಲಿ ಶುದ್ಧ ಮನಸ್ಸು, ಏಕಾಗ್ರತೆ ಬಹಳ ಮುಖ್ಯ. ಫಲ ಕೊಡುವುದು ತುಟಿಯ ಉಚ್ಛಾರವಲ್ಲ, ಮನಸ್ಸಿನ ತನ್ಮಯತೆ. ಇಲ್ಲಿ ಒಂದು ಮುಖ್ಯವಾದ ವಿಚಾರವೆಂದರೆ: ಅನಂತ ಫಲವನ್ನು ಕೊಡುವ ಕಲ್ಪವೃಕ್ಷವಾದ ಓಂಕಾರವನ್ನು ಅಲ್ಪ ಫಲ ಬಯಸಿ ಉಪಾಸನೆ ಮಾಡುವುದು ಸರಿಯಲ್ಲ.           

            ಏತದಾಲಂಬನಂ ಶ್ರೇಷ್ಠಮೇತದಾಲಂಬನಂ ಪರಮ್
            ಏತದಾಲಂಬನಂ ಜ್ಞಾತ್ವಾ ಬ್ರಹ್ಮಲೋಕೇ ಮಹೀಯತೇ         `                 ೧೭

ಸರ್ವಶ್ರೇಷ್ಠನಾದ ಭಗವಂತನೇ ಜಗತ್ತಿಗೆ ಎಲ್ಲವುದಕ್ಕಿಂತ ವಿಲಕ್ಷಣವಾದ, ಸರ್ವಶ್ರೇಷ್ಠ ಆಧಾರ. ಓಂಕಾರದಿಂದ ಉಪಾಸನೆ ಮಾಡಿ, ಈ ಜಗತ್ತಿನ ಆಧಾರಭೂತನಾದ ಭಗವಂತನನ್ನು ಕೃತಜ್ಞತೆಯಿಂದ ತಿಳಿದರೆ “ನಿನ್ನೆಲ್ಲಾ ಸಂಸಾರ ಬಂಧವನ್ನು ಕಳಚಿಕೊಂಡು ವೈಕುಂಠದಲ್ಲಿ ಭಗವಂತನನ್ನು ಸೇರುತ್ತೀಯ” ಎಂದಿದ್ದಾನೆ ಯಮ.

         ನ ಜಾಯತೇ ಮ್ರಿಯತೇ ವಾ ವಿಪಶ್ಚಿನ್ನಾಯಂ ಕುತಶ್ಚಿನ್ನ ಬಭೂವ ಕಶ್ಚಿತ್
        ಅಜೋ ನಿತ್ಯಃ ಶಾಶ್ವತೋಽಯಂ ಪುರಾಣೋ   ನ ಹನ್ಯತೇ ಹನ್ಯಮಾನೇ ಶರೀರೇ ೧೮

ಭಗವಂತನನ್ನು ಜ್ಞಾನದ ಕಣ್ಣಿನಿಂದ ಕಂಡ ಅಪರೋಕ್ಷ ಜ್ಞಾನಿ ಹುಟ್ಟು ಸಾವಿನಿಂದ ಮುಕ್ತನಾಗುತ್ತಾನೆ. ಮೋಕ್ಷವನ್ನು ಪಡೆದ ಜೀವ ಮುಂದೆಂದೂ ದೈಹಿಕವಾಗಿ ಹುಟ್ಟು-ಸಾವಿಗೊಳಗಾಗುವುದಿಲ್ಲ. ನಮ್ಮ ಹೃತ್ಕಮಲದಲ್ಲಿ ನೆಲೆಸಿರುವ ಭಗವಂತನಿಗೆ ಹುಟ್ಟು-ಸಾವುಗಳಿಲ್ಲ. ಆದ್ದರಿಂದ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವನೂ ಕೂಡಾ, ದೇಹದಿಂದಲೂ ಹುಟ್ಟು-ಸಾವು ಹೊಂದುವುದಿಲ್ಲ. ಅಸಾಧಾರಣವಾದ ಈ ಸ್ಥಿತಿ ಸಿಗುವುದು  ಭೌತಿಕ ದೇಹ ತ್ಯಾಗ ಮಾಡಿ ಮೋಕ್ಷವನ್ನು ಸೇರಿದಾಗ ಮಾತ್ರ.
ವಸ್ತುತಃ ಜೀವಸ್ವರೂಪಕ್ಕೆ ಎಂದೂ ಹುಟ್ಟು-ಸಾವುಗಳಿಲ್ಲ. ನಾವು ಕಾಣುವ ಹುಟ್ಟು-ಸಾವು ಕೇವಲ ಭೌತಿಕ ಶರೀರಕ್ಕೆ ಸಂಬಂಧಪಟ್ಟಿದ್ದು. ಹುಟ್ಟುವುದು ಒಂದು ವಿಕಾರ, ಸಾಯುವುದು ಇನ್ನೊಂದು ಬದಲಾವಣೆ ಅಷ್ಟೇ. ಒಬ್ಬ ವ್ಯಕ್ತಿ ಸತ್ತಾಗ ಅವನ ದೇಹ ನಾಶವಾಗುವುದೇ ಹೊರತು ಆತನ ಜೀವ ನಾಶವಾಗುವುದಿಲ್ಲ. ಅನಾದಿ-ಅನಂತವಾಗಿರುವ ಜೀವ ತನ್ನ ಪುರವನ್ನು(ದೇಹವನ್ನು) ಬದಲಿಸುವುದೇ ನಾವು ಕಾಣುವ ಹುಟ್ಟು-ಸಾವು.  ಮೋಕ್ಷದಲ್ಲಿ ಇಂತಹ ನಾಶವಾಗುವ ದೇಹವಿಲ್ಲ. ಆದ್ದರಿಂದ ದೇಹ ನಾಶವೂ ಇಲ್ಲದ ಸ್ಥಿತಿ ಮೋಕ್ಷ. 

            ಹಂತಾ ಚೇನ್ಮನ್ಯತೇ ಹಂತುಂ ಹತಶ್ಚೇನ್ಮನ್ಯತೇ ಹತಮ್
            ಉಭೌ ತೌ ನ ವಿಜಾನೀತೋ ನಾಯಂ ಹಂತಿ ನ ಹನ್ಯತೇ                       ೧೯

ಒಬ್ಬ ಕೊಲೆಗಡುಕ ಇನ್ನೊಬ್ಬನನ್ನು ಕೊಂದೆ ಎಂದುಕೊಂಡರೆ, ಯಾರೋ ಒಬ್ಬ ಸತ್ತಾಗ ಇನ್ನೊಬ್ಬ ಇವನು ಸತ್ತ ಎಂದು ತಿಳಿದುಕೊಂಡರೆ- ಇವರೆಲ್ಲರನ್ನೂ ಭ್ರಮೆಗೊಳಗಾದವರು ಎನ್ನಬಹುದು. ಕೇವಲ ದೇಹ ನಾಶವಾದಾಗ ಆ ಜೀವವೇ ನಾಶವಾಯಿತು ಎಂದು ತಿಳಿದುಕೊಳ್ಳುವುದು ನಮ್ಮ ಭ್ರಮೆ. ದೇಹವನ್ನೂ ಕೂಡ ಕೊಲ್ಲಬೇಕು ಎಂದರೆ ಅದು ಭಗವಂತನ ಇಚ್ಛೆ ಇಲ್ಲದೇ ಸಾಧ್ಯವಿಲ್ಲ. ಏಕೆಂದರೆ ನಮ್ಮ ಜೀವಸ್ವರೂಪದೊಳಗೆ ಭಗವಂತನಿದ್ದಾನೆ.

                      ಅಣೋರಣೀಯಾನ್ ಮಹತೋ ಮಹೀಯಾನ್ ಆತ್ಮಾಽಸ್ಯ ಜಂತೋರ್ನಿಹಿತೋ ಗುಹಾಯಾಮ್
                      ತಮಕ್ರತುಃ ಪಶ್ಯತಿ ವೀತಶೋಕೋ  ಧಾತುಪ್ರಸಾದಾನ್ಮಹಿಮಾನಮಾತ್ಮನಃ                 ೨೦

ಮಹತೋಮಯನಾದ ಭಗವಂತ ಅಣೋರಣೀಯನಾಗಿ ಜೀವ ಸ್ವರೂಪದ ಹೃದಯಗುಹೆಯಲ್ಲಿ ನೆಲೆಸಿದ್ದಾನೆ. ದೈಹಿಕವಾಗಿ ಪದೇ ಪದೇ ಹುಟ್ಟಿ ಸಾಯುವ ಜೀವ, ಸಾವನ್ನು ಗೆಲ್ಲಬೇಕಾದರೆ ಮೊದಲು ತನ್ನ ಅಂತರಾತ್ಮದಲ್ಲಿರುವ ಆ ಪರಮಾತ್ಮನನ್ನು ಕಾಣಬೇಕು. ಯಾರ ಮನಸ್ಸು ನಿಶ್ಚಯವಾಗಿ ಅ-ಕಾರವಾಚ್ಯನಾದ ಭಗವಂತನಲ್ಲಿ ನೆಲೆಗೊಳ್ಳುತ್ತದೋ ಅವನು ಎಲ್ಲಾ ಶೋಕಗಳಿಂದಲೂ ಮುಕ್ತನಾಗುತ್ತಾನೆ. ಆದ್ದರಿಂದ ಪ್ರಾಪಂಚಿಕ ವಿಷಯದಲ್ಲಿ ಮನಸ್ಸನ್ನು ನೆಟ್ಟು ದುಃಖಿಸುವುದಕ್ಕಿಂತ, ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸಿ ಚಿಂತೆಯಿಂದ ಪಾರಾಗಬಹುದು. ನಮ್ಮೊಳಗಿದ್ದು ನಮ್ಮನ್ನು ಧಾರಣೆ ಮಾಡಿರುವ ಆ ಭಗವಂತ ಅನುಗ್ರಹಿಸಿದರೆ ಮಾತ್ರ ನಾವು ಅವನನ್ನು ತಿಳಿಯಲು ಸಾಧ್ಯ. ಈ ರೀತಿ ಭಗವಂತನನ್ನು ತಿಳಿದವನು ಭಗವಂತನನ್ನು ಸೇರಬಲ್ಲ. “ಭಗವಂತನ ಅನುಗ್ರಹದಿಂದ ಒಳಗಣ್ಣಿನಿಂದ ಆತನನ್ನು ನೋಡು, ಅದರಿಂದ ದುಃಖರಹಿತ ಮೋಕ್ಷ ಸಿಗುತ್ತದೆ” ಎಂದು ಯಮ ನಚಿಕೇತನಿಗೆ ಉಪದೇಶ ಮಾಡುತ್ತಾನೆ.

No comments:

Post a Comment