ಆಸೀನೋ ದೂರಂ ವ್ರಜತಿ ಶಯಾನೋ ಯಾತಿ ಸರ್ವತಃ ।
ಕಸ್ತಂ ಮದಾಮದಂ ದೇವಂ ಮದನ್ಯೋ ಜ್ಞಾತುಮರ್ಹತಿ ॥೨೧॥
ಭಗವಂತ ಎಲ್ಲಿಯೋ
ಒಂದು ಕಡೆ ಇರುತ್ತಾನೆ. ಆದರೆ ಅಲ್ಲಿರುವುದು ಮಾತ್ರವಲ್ಲ, ಅಲ್ಲಿಂದ ದೂರ ಹೋದರೆ ಅಲ್ಲಿಯೂ
ಇರುತ್ತಾನೆ. ಸ್ಥೂಲವಾಗಿ ನೋಡಿದರೆ ಆಕಾಶದಂತೆ. ಮೂಲರೂಪದಲ್ಲಿ ನಿತ್ಯ ದೃಷ್ಟನಾಗಿ ವೈಕುಂಠಾದಿ
ಸ್ಥಾನಗಳಲ್ಲಿ ಆಸೀನ. ಆದರೆ ಅಲ್ಲಿದ್ದುಕೊಂಡೇ ಇನ್ನೊಂದು ಕಡೆ ಹೋಗುತ್ತಾನೆ ಭಗವಂತ. ಇದು ಭಗವಂತನ
ಸರ್ವಶಕ್ತ, ಮತ್ತು ಸರ್ವವ್ಯಾಪ್ತ ಗುಣವನ್ನು ಹೇಳುತ್ತದೆ.[ಇಲ್ಲಿ ಆಕಾಶ ಕೇವಲ ಸ್ಥೂಲ ದೃಷ್ಟಾಂತ
ಅಷ್ಟೇ. ಆಕಾಶ ಕೇವಲ ಸರ್ವವ್ಯಾಪ್ತ ಆದರೆ ಸರ್ವಸಮರ್ಥವಲ್ಲ]. ನಮ್ಮ ಹೃದಯಗುಹೆಯೊಳಗೆ ಅಣೋರಣೀಯನಾಗಿ
ಮಲಗಿರುವ ಭಗವಂತ, ಮಹತೊಮಯನಾಗಿ ಎಲ್ಲೆಡೆ ತುಂಬಿದ್ದಾನೆ. ಜೀವಜಾತಗಳಿಗೆ ಜೀವಸ್ವಭಾವದ ಯೋಗ್ಯತೆಗೆ
ತಕ್ಕಂತೆ ಆನಂದ ಮತ್ತು ದುಃಖ ಕೊಡುವವನು ಭಗವಂತ. ಇಂತಹ ಭಗವಂತನ ಈ ವಿಶೇಷ ಗುಣವನ್ನು ನನ್ನಿಂದ ಕೆಳಗಿರುವ ಯಾವ ಮಾನವನೂ ತಿಳಿದಿರಲು
ಸಾಧ್ಯವಿಲ್ಲ. [ಇಲ್ಲಿ ಬಂದಿರುವ ‘ಕಃ’ ಪದ ಬ್ರಹ್ಮ, ವಾಯುವನ್ನು ಸೂಚಿಸುತ್ತದೆ. “ನನ್ನಿಂದ ಎತ್ತರದಲ್ಲಿರುವ ದೇವತೆಗಳಷ್ಟೇ ತಿಳಿದಿರಲು
ಸಾಧ್ಯ” ಎನ್ನುವುದು ಇಲ್ಲಿ ಕಾಣುವ ಇನ್ನೊಂದು ಅರ್ಥ]. “ನಿನಗೆ ಈ ಜ್ಞಾನವನ್ನು ತಿಳಿಯುವ
ಭಾಗ್ಯವಿತ್ತು ಆದ್ದರಿಂದ ನೀನು ನನ್ನ ಬಳಿ ಬಂದೆ. ನೀನು ಭಾಗ್ಯಶಾಲಿ. ಮನುಷ್ಯ ಲೋಕದಲ್ಲಿ
ಇದಕ್ಕಿಂತ ಹೆಚ್ಚಿನ ರಹಸ್ಯವನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಸಾಮಾನ್ಯವಾಗಿ ಯಾರಿಗೂ
ಅರಿವಾಗದ ರಹಸ್ಯವನ್ನು ನಾನು ತಿಳಿದುಕೊಂಡೆ ಹಾಗೂ ನಿನಗೆ ಕೊಟ್ಟೆ. ಮನುಷ್ಯಲೋಕದಲ್ಲಿ ಇಂತಹ ಅರಿವನ್ನು ಮೊದಲು ತಿಳಿದವನು ನೀನು, ಕೊಟ್ಟವನು
ನಾನು ಎನ್ನುತ್ತಾನೆ ಯಮ.
ಅಶರೀರಂ ಶರೀರೇಷ್ವನವಸ್ಥೇಷ್ವವಸ್ಥಿತಮ್
।
ಮಹಾಂತಂ ವಿಭುಮಾತ್ಮಾನಂ ಮತ್ವಾ ಧೀರೋ ನ ಶೋಚತಿ ॥೨೨॥
ಎಲ್ಲರನ್ನೂ ಕಾಡುವ
ಒಂದು ಸರ್ವೇ ಸಾಮಾನ್ಯವಾದ ಪ್ರಶ್ನೆ ಎಂದರೆ: ದೇವರಿಗೆ ಶರೀರ/ಆಕಾರವಿದೆಯೋ ಎನ್ನುವುದು. ಈ ಶ್ಲೋಕ ನಮ್ಮ ಪ್ರಶ್ನೆಗೆ ಉತ್ತರ ರೂಪದಲ್ಲಿದೆ:
ದೇವರಿಗೆ
ಶರೀರವಿಲ್ಲ, ಆಕಾರವಿಲ್ಲ. ಆದರೆ ಆತ ಎಲ್ಲರ ಶರೀರದೊಳಗೂ ಇದ್ದಾನೆ. ನಮಗೆ ಒಂದು ಶರೀರವಾದರೆ –ಎಲ್ಲಾ
ಶರೀರವೂ ಅವನ ಶರೀರ! ಈ ರೀತಿ ಎಲ್ಲಾ ಶರೀರದಲ್ಲೂ ಇರುವ ಭಗವಂತನಿಗೆ ಆ ಶರೀರದ ಲೋಪವಾಗಲಿ,
ದುಃಖಾನುಭವವಾಗಲಿ, ಅಭಿಮಾನವಾಗಲೀ ಇಲ್ಲ. ಆದ್ದರಿಂದ ಭಗವಂತ ಅಶರೀರ. ನಮ್ಮ ಶರೀರಕ್ಕೆ ನೆಲೆ
ಇಲ್ಲ. ಒಂದು ದಿನ ಬಿದ್ದು ಹೋಗುವ ಈ ಶರೀರ ಗಟ್ಟಿಯಾಗಿ ನಿಲ್ಲುವಂತಹುದಲ್ಲ. ಇಂತಹ ನೆಲೆ ಇಲ್ಲದ
ಶರೀರದಲ್ಲಿ ನೆಲೆಸಿ, ಅದಕ್ಕೊಂದು ನೆಲೆ ಕೊಟ್ಟು, ನಿಲ್ಲಲಾಗದ ದೇಹವನ್ನು ನಿಲ್ಲುವಂತೆ ಮಾಡಿ,
ಚಲಿಸಲಾಗದ ದೇಹವನ್ನು ಚಲಿಸುವಂತೆ ಮಾಡುವವ ಆ ಭಗವಂತ. ಇಂತಹ ಭಗವಂತ ದೇಹದಿಂದ ಹೊರಟು ಹೋದಾಗ ಈ
ಶರೀರ ಬಿದ್ದು ಹೋಗುತ್ತದೆ.
ಶರೀರದಲ್ಲಿ ವಾಸಿಸುವ
ಭಗವಂತ ಶರೀರದ ಪರಿಮಿತಿಯಲ್ಲಿಲ್ಲ. ಅವನು ‘ಮಹಾಂತ’. ದೇಹದೊಳಗಿರುವ ಭಗವಂತ ದೇಹ ಬಿದ್ದು ಹೋದಾಗ
ಬಿದ್ದು ಹೋಗುವುದಿಲ್ಲ. ಏಕೆಂದರೆ ದೇಹ ಬಿದ್ದು ಹೋದಾಗ ದೇಹದ ಒಳಗಿರುವ ಭಗವಂತ ಮತ್ತು ಹೊರಗಿರುವ
ಭಗವಂತ ಏಕರೂಪನಾಗುತ್ತಾನೆ ಅಷ್ಟೇ. “ಇಂತಹ ಭಗವಂತ ವಿಭುಃ” ಎನ್ನುತ್ತಾನೆ ಯಮ. ಅಂದರೆ ಆತ
ಸರ್ವಗತ, ಸರ್ವಸಮರ್ಥ ಮತ್ತು ಅನೇಕ ರೂಪ(ವಿವಿದೋ ಭವತಿ). ಆತ ಎಲ್ಲಾ ಜೀವ ಜಂತುಗಳಲ್ಲೂ ನಿಂತು
ನಡೆಸುತ್ತಿದ್ದಾನೆ. ನಮ್ಮೊಳಗೆ ಅಂತರ್ಯಾಮಿಯಾಗಿದ್ದು, ನಮ್ಮನ್ನು ನಿಯಮಿಸುವ ನಮ್ಮ ಸ್ವಾಮಿ ಆ
ಭಗವಂತನ ಅರಿವು ಯಾರಿಗಿದೆಯೋ, ಅವನಿಗೆ ಎಂದೂ ಭಯ-ಶೋಕವಿರುವುದಿಲ್ಲ.
ಇಂತಹ ಭಗವಂತನನ್ನು
ಸಾಮಾನ್ಯ ಮಾನವ ಹೇಗೆ ತಿಳಿಯಬೇಕು ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ಯಮ ಬಹಳ ಸುಂದರವಾಗಿ
ವರ್ಣಿಸಿದ್ದಾನೆ.
ನಾಯಮಾತ್ಮಾ ಪ್ರವಚನೇನ ಲಭ್ಯೋ ನ ಮೇಧಯಾ ನ
ಬಹುನಾ ಶ್ರುತೇನ ।
ಯಮೇವೈಷ ವೃಣುತೇ ತೇನ ಲಭ್ಯಃ ತಸ್ಯೈಷ ಆತ್ಮಾ
ವಿವೃಣುತೇ ತನುಂ ಸ್ವಾಮ್ ॥೨೩॥
ಕೇವಲ ಪ್ರವಚನ
ಮಾಡುವುದರಿಂದ, ಪ್ರವಚನ ಕೇಳುವುದರಿಂದ, ಅಸಾಧಾರಣ ಸ್ಮರಣಶಕ್ತಿ ಹೊಂದಿರುವುದರಿಂದ ಭಗವಂತನ ಸಾಕ್ಷಾತ್ಕಾರವಾಗುವುದಿಲ್ಲ. ಅಧ್ಯಯನದ
ಅಹಂಕಾರವಿದ್ದಲ್ಲಿ ಭಗವಂತ ಎಂದೂ ತೆರೆದುಕೊಳ್ಳುವುದಿಲ್ಲ. ಯಾರನ್ನು ಭಗವಂತ “ಇವನು ನನ್ನ ಭಕ್ತ,
ನನ್ನ ಆತ್ಮೀಯ, ಇವನಿಗೆ ತತ್ವಜ್ಞಾನದ ಅರಿವು ಬರಲಿ” ಎಂದು ಸ್ವೀಕಾರ ಮಾಡುವುದಿಲ್ಲವೋ, ಅಲ್ಲಿಯ ತನಕ ಭಗವಂತ ಅವರಿಗೆ ತಿಳಿಯಲಾರ. ಯಾವಾಗ ಭಗವಂತ
ಪ್ರಸನ್ನನಾಗುತ್ತಾನೋ, ಆಗ ಆತ ನಮ್ಮ ತಲೆಯಲ್ಲಿ ಬಂದು ಕೂರುತ್ತಾನೆ. ಅಹಂಕಾರವಿಲ್ಲದ ತನ್ಮಯತೆ,
ಭಕ್ತಿಗೆ ಭಗವಂತ ತೆರೆದುಕೊಳ್ಳುತ್ತಾನೆ. ಆಗ ಆತನ ಜ್ಞಾನಾನಂದಮಯವಾದ ಸ್ವರೂಪ ದರ್ಶನ ನಮ್ಮ ಆತ್ಮಸ್ವರೂಪಕ್ಕಾಗುತ್ತದೆ.
ನಾವಿರತೋ ದುಶ್ಚರಿತಾನ್ನಾಶಾಂತೋ ನಾಸಮಾಹಿತಃ ।
ನಾಶಾಂತಮಾನಸೋ ವಾಽಪಿ ಪ್ರಜ್ಞಾನೇನೈನಮಾಪ್ನುಯಾತ್ ॥೨೪॥
ಇಲ್ಲಿ ವಿವರಿಸಿದ ಈ
ವಿದ್ಯೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಉಪಾಸನೆ ಮಾಡಿ ಎತ್ತರಕ್ಕೇರಬೇಕಾದರೆ ನಮ್ಮಲ್ಲಿರಬೇಕಾದ
ಅರ್ಹತೆಗಳೇನು ಎನ್ನುವುದನ್ನು ಯಮ ಇಲ್ಲಿ ವಿವರಿಸಿದ್ದಾನೆ. ಒಬ್ಬ ಮನುಷ್ಯ ಜ್ಞಾನವನ್ನು ಗಳಿಸಿ,
ದೊಡ್ಡ ವಿಜ್ಞಾನಿ(ವಿಶಿಷ್ಠ ಜ್ಞಾನಿ)ಯಾಗಿ, ಜ್ಞಾನದ ಎತ್ತರಕ್ಕೇರಿದರೂ(ಪ್ರಜ್ಞಾನ) ಕೂಡ, ಅಲ್ಲಿ ಭಕ್ತಿ
ಇಲ್ಲದಿದ್ದರೆ ಭಗವಂತನನ್ನು ಸೇರಲು ಸಾಧ್ಯವಿಲ್ಲ. ಎಷ್ಟೇ
ಶಾಸ್ತ್ರ ಪಾರಾಂಗತರಾದರೂ ಕೂಡಾ, ನಮ್ಮ ಜೀವನದಲ್ಲಿ ಕೆಲವು ನಿಯತ್ತು/ಶಿಸ್ತನ್ನು
ಅಳವಡಿಸಿಕೊಳ್ಳದೇ ನಾವು ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಸಾಧ್ಯವಿಲ್ಲ. ಯಾವುದು
ಸಾಮಾಜಿಕವಾಗಿ ಅನ್ಯಾಯವೋ, ಯಾವುದನ್ನು ಶಾಸ್ತ್ರಗಳು ಅಧರ್ಮ ಎಂದು ಕರೆಯುತ್ತವೋ, ಅದನ್ನು ನಾವು ಮೊದಲು ಬಿಡಬೇಕು. ನಮ್ಮ ನಡತೆ ಸ್ವಚ್ಛವಿಲ್ಲದಿದ್ದರೆ
ನಮ್ಮ ಯಾವ ಪಾಂಡಿತ್ಯವೂ ನಮ್ಮನ್ನು ಉದ್ಧಾರ ಮಾಡುವುದಿಲ್ಲ. ಜೀವನದಲ್ಲಿ ನಾವು ತಪ್ಪು
ಮಾಡಿರಬಹುದು, ಆದರೆ ಆ ತಪ್ಪಿನ ಅರಿವಾದಾಗ, ಹಿಂದಿನ ಘಟನೆಗಳನ್ನು ಮೆಲುಕು ಹಾಕುತ್ತಾ
ಕುಳಿತುಕೊಳ್ಳುವ ಬದಲು, ಮುಂದೆ ನಮ್ಮಿಂದ ಅಂತಹ ತಪ್ಪು ಘಟಿಸದಂತೆ ಎಚ್ಚರವಹಿಸಿ ಬದುಕಬೇಕು.
ಎಲ್ಲಿಯ ತನಕ ನಾವು ನಮ್ಮ ನಡತೆಯಲ್ಲಿನ ದೋಷವನ್ನು ತಿದ್ದಿಕೊಳ್ಳುವುದಿಲ್ಲವೋ, ಅಲ್ಲಿಯ ತನಕ ಭಗವಂತ ಅನುಗ್ರಹಿಸುವುದಿಲ್ಲ.
ಎಲ್ಲಕ್ಕೂ
ಮಿಗಿಲಾಗಿ ನಮಗೆ ದೇವರ ಮೇಲೆ ನಂಬಿಕೆ ಇರಬೇಕು. ಮೊದಲು ನಾವು ಭಗವಂತನನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು.
ಪ್ರಾಮಾಣಿಕ ನಡೆ, ಅಂತರಂಗದಲ್ಲಿ ನಿಶ್ಚಲವಾದ ಭಗವನ್ ನಿಷ್ಠೆ - ಇವು ಅಧ್ಯಾತ್ಮ ಸಾಧನೆ ಮಾಡುವವರಲ್ಲಿ ಇರಬೇಕಾದ ಮೂಲ ಅರ್ಹತೆ.
ಶಾಂತವಾದ, ದೃಡವಾದ,
ಗೊಂದಲಕ್ಕೊಳಗಾಗದ, ಸ್ಥಿರವಾದ ಮನಸ್ಸು; ಅಚಲವಾದ
ಭಗವನ್ ನಿಷ್ಠೆ; ಪ್ರಾಮಾಣಿಕ ನಡತೆ-ಇವು ಭಗವಂತನ ಅನುಗ್ರಹ ಪಡೆಯಲು ಬೇಕಾದ ಅರ್ಹತೆಗಳು.
ಇದಿಲ್ಲದಿದ್ದರೆ ಅಧ್ಯಾತ್ಮದಲ್ಲಿ ತತ್ವಜ್ಞಾನ ಸಿದ್ಧಿಸುವುದಿಲ್ಲ.
ಯಸ್ಯ ಬ್ರಹ್ಮ ಚ ಕ್ಷತ್ರಂ ಚ ಉಭೇ ಭವತ ಓದನಃ ।
ಮೃತ್ಯುರ್ಯಸ್ಯೋಪಸೇಚನಂ ಕಃ ಇತ್ಥಾ ವೇದ ಯತ್ರ ಸಃ ॥೨೫॥
ಭಗವಂತನಿಗೆ ಇಡೀ
ವಿಶ್ವ ಪ್ರಳಯ ಕಾಲದಲ್ಲಿ ಒಂದು ತುತ್ತು ಅನ್ನವಿದ್ದಂತೆ. ಬ್ರಾಹ್ಮಣ ವರ್ಣದ ಅಭಿಮಾನಿ ದೇವತೆ
ಚತುರ್ಮುಖ ಬ್ರಹ್ಮ, ಕ್ಷತ್ರೀಯ ವರ್ಣದ ಅಭಿಮಾನಿ ದೇವತೆಯಾದ ವಾಯುದೇವರು ಭಗವಂತನಿಗೆ
ಪ್ರಳಯಕಾಲದಲ್ಲಿ ಒಂದು ತುತ್ತು ಅನ್ನ.
ಮೃತ್ಯು(ಗರುಡ-ಶೇಷ-ರುದ್ರರು), ಭೂಲೋಕದಲ್ಲಿರುವ ಎಲ್ಲಾ ಜೀವರಿಗೂ ಮೃತ್ಯುವಾಗಿರುವ
ಯಮ- ಪ್ರಳಯಕಾಲದಲ್ಲಿ ಭಗವಂತನಿಗೆ
ಊಟಕ್ಕೆ ಕಲಸಿಕೊಳ್ಳುವ ವ್ಯಂಜನವಿದ್ದಂತೆ.
“ಇಂತಹ ಭಗವಂತನ ಎತ್ತರವನ್ನು ಅರಿತವರು ಯಾರಿದ್ದಾರೆ ?” ಎನ್ನುತ್ತಾನೆ ಯಮ. ಭಗವಂತನ ಸಮಗ್ರ ದರ್ಶನದ ಕಿಂಚಿತ್
ಅರಿವು ಇರುವುದಾದರೆ ಆ ಬ್ರಹ್ಮ-ವಾಯುವಿಗೆ(ಕಃ) ಮಾತ್ರ. “ಇಂತಹ ಭಗವಂತನ ಬಗೆಗೆ ನನಗೆ ತಿಳಿದಿರುವುದನ್ನು ನಿನಗೆ ಹೇಳುತ್ತೇನೆ”
ಎನ್ನುವ ಭಾವ ಈ ಶ್ಲೋಕದಲ್ಲಿ
ವ್ಯಕ್ತವಾಗಿದೆ.
ಇತಿ ಕಾಠಕೋಪನಿಷದಿ
ಪ್ರಥಮಾಧ್ಯಾಯೇ ದ್ವಿತೀಯಾ ವಲ್ಲೀ ॥
ಇಲ್ಲಿಗೆ
ಕಾಠಕೋಪನಿಷತ್ತಿನ ಮೊದಲ ಅಧ್ಯಾಯದ ಎರಡನೇ ಬಳ್ಳಿ(ವಲ್ಲೀ) ಮುಗಿಯಿತು.