ಕಠೋಪನಿಷತ್

ಕಠೋಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ.

ಅಗ್ನಿಹೋತ್ರದ ಮಹತ್ವವೇನು? ಅದರ ಹಿಂದಿನ ವಿಜ್ಞಾನವೇನು? ಜೀವ ಅನ್ನುವುದು ಇದೆಯೋ? ಸತ್ತಮೇಲೆ ಜೀವಕ್ಕೆ ಅಸ್ತಿತ್ವವಿದೆಯೋ? ಪರಲೋಕ ಎನ್ನುವುದೊಂದಿದೆಯೋ? ಜೀವನಿಗಿಂತ ಬೇರೆಯಾಗಿ ದೇವರು ಇದ್ದಾನೆಯೇ? ಭಗವಂತ ನಮ್ಮನ್ನು ಸಂಸಾರದಲ್ಲಿ ಮಾತ್ರ ನಿಯಮಿಸುವುದೋ ಅಥವಾ ಮೋಕ್ಷದಲ್ಲೂ ಆತನ ನಿಯಂತ್ರಣವಿದೆಯೋ? ಮೋಕ್ಷಕ್ಕೆ ಹೋದ ಜೀವದ ಇರವು ಹೇಗಿರುತ್ತದೆ? ಮೋಕ್ಷಕ್ಕೆ ಹೋದ ಮೇಲೆ ಏನಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕಠೋಪನಿಷತ್ತು.
Katha Upanishad in Kannada. Reference: Upanishad discourse by Poojya Bannanje Govindacharya

Download pdf: e-Book

Wednesday, May 9, 2012

Kathopanishad in Kannada Chapter-01 Canto-02 Shloka 10-12

ಜಾನಾಮ್ಯಹಂ ಶೇವಧಿರಿತ್ಯನಿತ್ಯಂ  ನ ಹ್ಯಧ್ರುವೈಃ ಪ್ರಾಪ್ಯತೇ ಹಿ ಧ್ರುವಂ ತತ್
ತತೋ ಮಯಾ ನಾಚಿಕೇತಶ್ಚಿತೋಽಗ್ನಿಃ   ಅನಿತ್ಯೈರ್ದ್ರವ್ಯೈಃ ಪ್ರಾಪ್ತವಾನಸ್ಮಿ ನಿತ್ಯಮ್ ೧೦

“ಹಣದ ರಾಶಿ ದೊಡ್ಡ ಸಂಪತ್ತಲ್ಲ. ಅದು ನಮ್ಮನ್ನು ಸಾರ್ವಕಾಲಿಕವಾಗಿ ರಕ್ಷಣೆ ಮಾಡುವುದಿಲ್ಲ. ಇನ್ನೊಬ್ಬರಿಗೆ ಕೊಟ್ಟು ಕರಗದ ನಿತ್ಯವಾದ, ನಿರಂತರವಾದ ಶಾಶ್ವತವಾದ ಸಂಪತ್ತೆಂದರೆ ಭಗವಂತನ ಜ್ಞಾನ. ಅದು ಮಾತ್ರ ತಾರಕ ಅನ್ನುವುದು ನನಗೆ ತಿಳಿದಿದೆ” ಎನ್ನುತ್ತಾನೆ ಯಮ. ನಿತ್ಯನಾದ ಭಗವಂತನನ್ನು ಮರೆತವರು, ಭಗವಂತನಲ್ಲಿ ನಂಬಿಕೆ ಇಲ್ಲದೇ ಇದ್ದವರಿಗೆ ಎಷ್ಟು ಶಾಸ್ತ್ರ ಓದಿದರೂ ಭಗವಂತನ ಅರಿವು ಬರುವುದಿಲ್ಲ. ದೇವರನ್ನು ತಿಳಿದುಕೊಳ್ಳಬೇಕು ಅನ್ನುವ ಕಳಕಳಿ ಇಲ್ಲದ ನಾಸ್ತಿಕರು ಯಾವ ಧರ್ಮಗ್ರಂಥ ಓದಿದರೂ ಭಗವಂತ ಅವರಿಗೆ ತಿಳಿಯುವುದಿಲ್ಲ. ದೇವರೇ ಇಲ್ಲಾ ಎಂದು ಸಿದ್ಧಾಂತ ಮಾಡಿಕೊಂಡು ಯಾವ ಅಧ್ಯಾಯನ ಮಾಡಿದರೂ ಅದನ್ನು ಗ್ರಹಿಸಲು ಸಾಧ್ಯವಿಲ್ಲ. ನಿತ್ಯವಾದ ಸತ್ಯ ಭಗವಂತ. ಅವನನ್ನು ತಿಳಿದುಕೊಳ್ಳಬೇಕು ಎನ್ನುವ ಎಚ್ಚರ ಇಲ್ಲದಿದ್ದರೆ  ಆ ನಿತ್ಯಸತ್ಯದ ಅರಿವು ಮೂಡುವುದಿಲ್ಲ. ಆದ್ದರಿಂದ ಭಗವಂತನಲ್ಲಿ ಶ್ರದ್ಧೆ ಇದ್ದವನಿಗೆ ಮಾತ್ರ ಭಗವಂತ ಅರ್ಥವಾಗುವುದು ಸಾಧ್ಯ. ಹಾಗಾಗಿ ನಮಗೆ ಮೊದಲು ನಂಬಿಕೆ ಬೇಕು, ಅದರಿಂದ  ತಿಳಿದುಕೊಳ್ಳಬೇಕು ಎನ್ನುವ  ಅಭಿಲಾಷೆ, ತಿಳಿದಾಗ ನಮ್ಮ ನಂಬಿಕೆ ಗಟ್ಟಿಯಾಗುತ್ತದೆ. ಇದರಿಂದ ಇನ್ನಷ್ಟು ತಿಳಿಯಲು ಸಾಧ್ಯವಾಗುತ್ತದೆ. “ನಾನೂ ಕೂಡ   ನಿನಗೆ ಉಪದೇಶ ಮಾಡಿದ ಅಗ್ನಿ ವಿದ್ಯೆಯಿಂದ ಭಗವಂತನನ್ನು ಆರಾಧಿಸಿದೆ. ‘ಅ’-ಕಾರ ವಾಚ್ಯನಾದ ಭಗವಂತನನ್ನು ಸದಾ ನನ್ನ ಮನಸ್ಸಿನಲ್ಲಿ ತುಂಬಿಕೊಂಡು, ನನ್ನ ಇಂದ್ರಿಯಗಳನ್ನು ಭಗವಂತನ ಸೇವೆಗೆ ಮೀಸಲಿಟ್ಟೆ. ಇದರಿಂದಾಗಿ ನನ್ನ ಇಂದ್ರಿಯಗಳು ಭಗವಂತನ ಕಡೆಗೆ ಸಾಗಿದವು. ಹೀಗೆ ಅನಿತ್ಯವಾದ ರಥದಲ್ಲಿ ಕುಳಿತು ನಾನು ನಿತ್ಯದತ್ತ ಸಾಗಿ, ಭಗವಂತನ ಅರಿವನ್ನು ಪಡೆದೆ” ಎನ್ನುತ್ತಾನೆ ಯಮ.

ಕಾಮಸ್ಯಾಪ್ತಿಂ ಜಗತಃ ಪ್ರತಿಷ್ಠಾಂ   ಕ್ರತೋರಾನಂತ್ಯಮಭಯಸ್ಯ ಪಾರಮ್ 
ಸ್ತೋಮಂ ಮಹದುರುಗಾಯಂ ಪ್ರತಿಷ್ಠಾಂ ದೃಷ್ಟ್ವಾ   ಧೃತ್ಯಾ ಧೀರೋ ನಚಿಕೇತೋಽತ್ಯಸ್ರಾಕ್ಷೀಃ ೧೧

ಸತ್ಯವನ್ನು ಪಡೆಯಲು ಬೇಕಾಗಿರುವುದು  ‘ಜ್ಞಾನವಲ್ಲದೆ ಇನ್ನೇನೂ ಬೇಡ’ ಎನ್ನುವ ತನ್ಮಯತೆ. ಅದು ನಿನ್ನಲ್ಲಿದೆ. ನಿನಗೆ ಏನು ಬೇಕೋ ಅದನ್ನು ಕೊಡುತ್ತೇನೆ ಎಂದಾಗ, ನಿನ್ನ ಕಾಲ ಬುಡದಲ್ಲಿ  ಎಲ್ಲಾ  ಭೋಗಗಳು ಸಿಗುವಂತಿದ್ದರೂ ಸಹ, ಜಗತ್ತನ್ನು ಧಾರಣೆ ಮಾಡಿದ ಆ ಮೂಲಶಕ್ತಿ ಭಗವಂತನನ್ನು ತಿಳಿದುಕೊಳ್ಳುವುದಕ್ಕೋಸ್ಕರ, ಎಲ್ಲಾ ಬಯಕೆಗಳನ್ನು ತೊರೆದೆ ನೀನುಎನ್ನುತ್ತಾನೆ ಯಮ.
ಜೀವನವೆಂದರೆ ಭಯದ ಸರಮಾಲೆ. ಪ್ರತಿಯೊಬ್ಬ ಮಾನುಷ್ಯನೂ ಭಯದಿಂದ ಮುಕ್ತಿ ಪಡೆಯಲು ಬಯಸುತ್ತಾನೆ. ಆದರೆ ಆತ ಜೀವನಪರ್ಯಂತ ಭಯದಲ್ಲೇ ಬದುಕುತ್ತಿರುತ್ತಾನೆ. ಭಗವದ್ ವಿಷಯಕವಾದ ಜ್ಞಾನ ಮಾತ್ರ ನಮಗೆ ಭಯದಿಂದ ಮುಕ್ತಿ ಕೊಡಬಲ್ಲದು. ನಾವು ಎಷ್ಟೇ ವೇದಾಧ್ಯಯನ ಮಾಡಿದರೂ ಭಗವಂತನನ್ನು ಪೂರ್ಣವಾಗಿ ತಿಳಿಯುವುದು ಸಾಧ್ಯವಿಲ್ಲ. ಅಂತಹ ಜಗತ್ತಿಗೆಲ್ಲಾ ಆಸರೆಯಾಗಿರುವ ಭಗವಂತ ನನಗೆ ಆಸರೆಯಾಗಿ ನನ್ನೊಳಗಿದ್ದಾನೆ ಎಂದು ತಿಳಿದಾಗ ಭಯ ದೂರವಾಗಿ ಧೈರ್ಯ ಬರುತ್ತದೆ. ನಾವು ಮಾಡುವ ಪ್ರತಿಯೊಂದು ಕರ್ಮವನ್ನು ಭಗವಂತನ ಅರಿವಿನಿಂದ ಮಾಡಿದಾಗ ಆ ಕರ್ಮ ಅನಂತ ಫಲವನ್ನು ಕೊಡುತ್ತದೆ. “ಈ ಸತ್ಯವನ್ನು ಅರಿತುದರಿಂದ  ನಿನಗೆ ಇಂತಹ ಧೈರ್ಯ ಬಂತು” ಎನ್ನುತ್ತಾನೆ ಯಮ.    

ತಂ ದುರ್ದರ್ಶಂ ಗೂಢಮನುಪ್ರವಿಷ್ಟಂ   ಗುಹಾಹಿತಂ ಗಹ್ವರೇಷ್ಠಂ ಪುರಾಣಮ್ 
ಅಧ್ಯಾತ್ಮಯೋಗಾಧಿಗಮೇನ ದೇವಂ  ಮತ್ವಾ ಧೀರೋ ಹರ್ಷಶೋಕೌ ಜಹಾತಿ ೧೨

ಭಗವಂತ ಜ್ಞಾನಾನಂದಗಳ ಮೊತ್ತ. ಅವನನ್ನು ನಮ್ಮ ಹೊರಗಣ್ಣಿನಿಂದ ಕಾಣಲು ಅಸಾಧ್ಯ. ಆತ ಸಮಸ್ತ ಜೀವಗಳ ಹೃದಯಗುಹೆಯಲ್ಲಿ ಗೂಢವಾಗಿ ನೆಲೆಸಿದ್ದಾನೆ. ಇಂತಹ ಭಗವಂತ ಅತ್ಯಂತ ಪುರಾತನ(ಪುರಾಣ). ಅಂದರೆ ಎಲ್ಲಕ್ಕಿಂತ ಪ್ರಾಚೀನ. ಎಲ್ಲವೂ ಇಲ್ಲದಿದ್ದಾಗ ಅವನಿದ್ದ ಹಾಗೂ ಈ ಸೃಷ್ಟಿಯಾದ ಮೇಲೆ ಬ್ರಹ್ಮಾಂಡ-ಪಿಂಡಾಂಡದೊಳಗೆ ಅಂತರ್ಯಾಮಿಯಾಗಿ ಆತ ತುಂಬಿದ. ಇಂತಹ ಅಂತರ್ಯಾಮಿ ಭಗವಂತನನ್ನು ತಿಳಿಯಲು ಇರುವ  ಒಂದೇ ಒಂದು ಉಪಾಯವೆಂದರೆ ಅಧ್ಯಾತ್ಮದ ಅರಿವು. ಒಮ್ಮೆ ಭಗವಂತನ ಅರಿವು ಬಂತೆಂದರೆ ಆಗ ನಾವು ಲೌಕಿಕ ಹರ್ಷ-ಶೋಕವನ್ನು ಮೀರಿ ನಿಲ್ಲಬಹುದು. ಇಂತಹ ಸ್ಥಿತಿಯಲ್ಲಿ ಸ್ವರೂಪಾನಂದದ ಸುಖ ಸಿಗುತ್ತದೆ. “ಅಂತಹ ಸ್ಥಿತಿಯನ್ನು ನೀನು ಪಡೆದಿದ್ದೀಯ” ಎಂದು ನಚಿಕೇತನನ್ನು ಯಮ ಪ್ರಶಂಸಿಸುತ್ತಾನೆ.

No comments:

Post a Comment