Sunday, July 29, 2012

Kathopanishad in Kannada Chapter-02 Canto-02 Shloka-01-02


ಅಧ್ಯಾಯ-೨

ವಲ್ಲೀ-೨

ಪುರಮೇಕಾದಶದ್ವಾರಮಜಸ್ಯಾವಕ್ರಚೇತಸಃ
ಅನುಷ್ಠಾಯ ನ ಶೋಚತಿ ವಿಮುಕ್ತಶ್ಚ ವಿಮುಚ್ಯತೇ ಏತದ್ವೈ ತತ್

ನಾವು ಈ ದೇಹದಲ್ಲಿರುವಾಗ ನಮ್ಮ ಅನುಷ್ಠಾನ ಹೇಗಿರಬೇಕು ಎನ್ನುವುದನ್ನು ಯಮ ಇಲ್ಲಿ ವಿವರಿಸಿದ್ದಾನೆ. ಮಾನವ ಶರೀರವನ್ನು ‘ಪುರ’ ಎಂದು ಕರೆಯುತ್ತಾರೆ. ಇತರ ಎಲ್ಲಾ ಪ್ರಾಣಿಗಳ ಶರೀರಕ್ಕಿಂತ ಮನುಷ್ಯ ಶರೀರ ಪೂರ್ಣ ವಿಕಸನ ಹೊಂದಿರುವ ಶರೀರವಾಗಿರುವುದರಿಂದ ಇದನ್ನು ‘ಪುರ’ ಎನ್ನುತ್ತಾರೆ. ಈ ಶರೀರ ಜೀವ ವಾಸ ಮಾಡುವ ಮನೆ. ಈ ಶರೀರವನ್ನು ಯಮ ‘ಹನ್ನೊಂದು ದ್ವಾರಗಳ ಪುರ’ ಎಂದಿದ್ದಾನೆ. ಗೀತೆಯಲ್ಲಿ ಕೃಷ್ಣ  “ನವದ್ವಾರೇ ಪುರೇ ದೇಹೀ” ಎಂದು ವಿವರಿಸಿರುವುದು ನಮಗೆ ತಿಳಿದಿದೆ(ಗೀತಾ: ೫-೧೩). ಈ ನವ ದ್ವಾರಗಳಲ್ಲದೇ[ಎರಡು ಕಿವಿಗಳು, ಎರಡು ಕಣ್ಣುಗಳು, ಎರಡು ಮೂಗಿನ ಹೊರಳೆಗಳು, ಬಾಯಿ, ಪಾಯು ಮತ್ತು ಉಪಸ್ಥ]  ಜೀವಕ್ಕೆ ಸಂಬಂಧಿಸಿದ ಇನ್ನೂ ಎರಡು ದ್ವಾರಗಳಿವೆ.  (೧) ಹುಟ್ಟುವ ತನಕ ತಾಯಿಯ ಹೊಟ್ಟೆಯಲ್ಲಿ ಆಹಾರವನ್ನು ಸೇವಿಸುವ ನಾಭಿ, (೨) ಸತ್ತ ಮೇಲೆ(ಕೊನೇಯ ಸಾವು) ಊರ್ಧ್ವ ಲೋಕಕ್ಕೆ ಹೋಗುವ ಸುಷುಮ್ನ ನಾಡಿಯ ತುದಿ-ಸಹಸ್ರಾರ. ಈ ಎರಡು ದ್ವಾರಗಳನ್ನು ಸೇರಿಸಿದರೆ ನಮ್ಮ ದೇಹಕ್ಕೆ ಹನ್ನೊಂದು ದ್ವಾರಗಳು. ಇಂತಹ ಶರೀರ ಆ ಭಗವಂತನಿಗೆ ಸೇರಿದ್ದು. ಯಾರಿಗೆ ಹುಟ್ಟಿಲ್ಲವೋ(ಅಜ) ಮತ್ತು ಯಾರು ಅವಕ್ರಚೇತನವೋ(ಎಲ್ಲವನ್ನೂ ಸಹಜವಾಗಿ ಗ್ರಹಿಸುವವ) ಅಂತಹ ಭಗವಂತ ನಮಗೆ ಕೊಟ್ಟ ಸಾಧನಾ ಶರೀರವಿದು. ಈ ಅಂಶವನ್ನು ತಿಳಿದು ನಿತ್ಯಾನುಷ್ಠಾನ ಮಾಡುವವರು ಎಂದೂ ದುಃಖಕ್ಕೊಳಗಾಗುವುದಿಲ್ಲ. ಈ ರೀತಿ ಭಗವಂತನನ್ನು ಕಾಣುವವನಿಗೆ ಜೀವನ್ಮುಕ್ತಿ ದೊರೆಯುತ್ತದೆ ಹಾಗೂ ಕೊನೇಯದಾಗಿ ದೇಹ ಬಿಟ್ಟು ಹೊರಬಂದ ಮೇಲೆ ಆತ ಆನಂದಸ್ವರೂಪನಾಗಿ ಭಗವಂತನನ್ನು ಸೇರುತ್ತಾನೆ. “ನೀನು ಕೇಳಿದ ಮುಕ್ತಾಮುಕ್ತ ಭಗವದ್ ತತ್ವ ಇದೇ” ಎನ್ನುತ್ತಾನೆ ಯಮ.
ಇಲ್ಲಿ ನಾವು ಒಂದು ವಿಷಯವನ್ನು ಗಮನಿಸಬೇಕು. ಹೆಜ್ಜೆಹೆಜ್ಜೆಗೂ ಯಮ ಭಗವಂತನನ್ನು ತಿಳಿದು ಅನುಷ್ಠಾನ ಮಾಡಿದರೆ ದುಃಖರಹಿತನಾಗಬಹುದು ಎಂದು ಒತ್ತಿ ಹೇಳಿದ್ದಾನೆ. ನಾವು ಭಗವಂತನನ್ನು ತಿಳಿದಾಗ, ತಿಳಿದು ಅನುಷ್ಠಾನ ಮಾಡಿದಾಗ ನಮ್ಮ ಆತ್ಮಬಲ ಗಟ್ಟಿಗೊಳ್ಳುತ್ತದೆ. ಆಗ ಜೀವನದಲ್ಲಿ ಏನೇ ಕಷ್ಟ ಬಂದರೂ ನಮಗೆ ನೋವಾಗುವುದಿಲ್ಲ. “ನನ್ನೊಳಗೆ ಭಗವಂತನಿದ್ದಾನೆ, ಅವನು ನಡೆಸುತ್ತಾನೆ” ಎನ್ನುವ ಆತ್ಮಬಲ ನಮ್ಮ ದುಃಖವನ್ನು ಪರಿಹರಿಸುತ್ತದೆ. ಜ್ಞಾನಿಗಳು ಹೇಳುವಂತೆ: ಎಂದೂ ದೇವರ ಹತ್ತಿರ ನಾವು ಕಷ್ಟ ಬರಬಾರದು ಎಂದು ಕೇಳಿಕೊಳ್ಳಬಾರದು ಮತ್ತು  ಕಷ್ಟ ಬಂದಾಗ ‘ಅಯ್ಯೋ’ ಎನ್ನಬಾರದು. ಭಗವಂತನ ಮೇಲೆ ನಂಬಿಕೆಯಿಟ್ಟು ಬಂದದ್ದನ್ನು ಬಂದಂತೆ ಧೈರ್ಯದಿಂದ ಎದುರಿಸಬೇಕು. ನಾವು ಎಷ್ಟು ಹೆಚ್ಚು ಕಷ್ಟ ಅನುಭವಿಸುತ್ತೇವೋ ಅಷ್ಟೇ ಹೆಚ್ಚು ಪೂರ್ವ ಜನ್ಮದ ಪಾಪವನ್ನು ಕಳೆದುಕೊಳ್ಳುತ್ತೇವೆ. ಈ ಜೀವ ಎಷ್ಟು ಮಾಗಿತೋ ಅಷ್ಟು ಪಾಪ ಕ್ಷಯವಾಗುತ್ತದೆ. ಕಷ್ಟಗಳು ನಾವು ತಿನ್ನುವ ಔಷಧದಂತೆ. ಅದು ಯಾವಾಗಲೂ  ಕಹಿ. ಹೇಗೆ ಕಹಿ ಔಷಧದಿಂದ ರೋಗ ಗುಣವಾಗುತ್ತದೋ, ಹಾಗೇ ಕಷ್ಟಗಳು ನಮ್ಮ ಪಾಪವನ್ನು ತೊಳೆದು ನಮ್ಮನ್ನು ಭಗವಂತನತ್ತ ಕೊಂಡೊಯ್ಯುತ್ತವೆ.    
                       
ಹಂಸಃ ಶುಚಿಷದ್ವಸುರಾಂತರಿಕ್ಷಸದ್ ಹೋತಾ ವೇದಿಷದತಿಥಿರ್ದುರೋಣಸತ್
ನೃಷದ್ವರಸದೃತಸದ್ವ್ಯೋಮಸದ್  ಅಬ್ಜಾ ಗೋಜಾ ಅದ್ರಿಜಾ ಋತಜಾ ಋತಂ ಬೃಹತ್

ಇದು ಬಹಳ ಪ್ರಸಿದ್ಧವಾದ ಹಂಸ ಗಾಯತ್ತ್ರಿ ಮಂತ್ರ. ಇಲ್ಲಿ ಎರಡು ಗಾಯತ್ತ್ರಿಗಳಿವೆ. ಎರಡೂ ಒಟ್ಟಿಗೆ ಸೇರಿದಾಗ ಇದು ಜಗತೀ ಛಂದಸ್ಸಾಗುತ್ತದೆ. [ಗಾಯತ್ತ್ರಿಯಲ್ಲಿ ೨೪ ಅಕ್ಷರ, ಜಗತೀಯಲ್ಲಿ ೪೮ ಅಕ್ಷರ. ಇಲ್ಲಿ ಎರಡು ಅಧಿಕ ಅಕ್ಷರಗಳಿವೆ] ಇದನ್ನು ನಿತ್ಯೋಪಾಸನೆಗೆ ಬಳಸುತ್ತಾರೆ. ಪ್ರಸಿದ್ಧವಾದ ವಿಶ್ವಾಮಿತ್ರ ಗಾಯತ್ತ್ರಿಯಲ್ಲಿ ೨೪ ಅಕ್ಷರಗಳ ಹತ್ತು ಶಬ್ದಗಳಿದ್ದರೆ, ಇಲ್ಲಿ ಒಟ್ಟು ಹದಿನೆಂಟು ಶಬ್ದಗಳಿದ್ದು, ಮೊದಲ ಗಾಯತ್ತ್ರಿಯಲ್ಲಿ ಎಂಟು ಶಬ್ದಗಳು[ಹಂಸಃ, ಶುಚಿಷತ್, ವಸುಃ, ಅಂತರಿಕ್ಷಸತ್, ಹೋತಾ, ವೇದಿಷತ್, ಅತಿಥಿಃ, ದುರೋಣಸತ್] ಹಾಗೂ ಎರಡನೇ ಗಾಯತ್ತ್ರಿಯಲ್ಲಿ ಹತ್ತು ಶಬ್ದಗಳಿವೆ[ನೃಷತ್, ವರಸತ್, ಋತಸತ್, ವ್ಯೋಮಸತ್, ಅಬ್ಜಾಃ, ಗೋಜಾಃ, ಅದ್ರಿಜಾಃ, ಋತಜಾಃ,  ಋತಮ್, ಬೃಹತ್].
ಈವರೆಗೆ ಯಮ ನಮ್ಮ ಹೃದಯ ಗುಹೆಯಲ್ಲಿ ಭಗವಂತನಿದ್ದಾನೆ ಎಂದು ಹೇಳಿದ. ಈ ಶರೀರ ನಮಗೆ ಭಗವಂತ ಕೊಟ್ಟ ವಾಹನ, ಈ ವಾಹನವನ್ನು ಉಪಯೋಗಿಸಿಕೊಂಡು ಸಾಧನೆಯ ಮೂಲಕ ಭಗವಂತನತ್ತ  ಪಯಣ ಮಾಡಬೇಕು ಎಂತಲೂ ಯಮ ಹೇಳಿದ. ಸಾಧನೆ ಮೂಲಕ ಪಯಣ ಅಂದರೆ ನಿರಂತರ ಉಪಾಸನೆ. ಅಂತಹ ಉಪಾಸನೆಗಾಗಿಯೇ ಅಪೂರ್ವ ವಿಷಯಗಳನ್ನೊಳಗೊಂಡ ಈ ಹಂಸ ಗಾಯತ್ತ್ರಿಯನ್ನು ಇಲ್ಲಿ ವಿವರಿಸಲಾಗಿದೆ. ಈ ಮಂತ್ರದ ಪೂರ್ವಾರ್ಧ ಒಂದು ರೀತಿಯಿಂದ ಹಾಗೂ ಉತ್ತರಾರ್ಧ ಇನ್ನೊಂದು ರೀತಿಯಿಂದ ಉಪಾಸನೆಯನ್ನು ಹೇಳುತ್ತದೆ.
ಇಲ್ಲಿ ಭಗವಂತನನ್ನು ಹಂಸಃ ಎಂದು ಉಪಾಸನೆ ಮಾಡಬೇಕು ಎಂದಿದ್ದಾರೆ. ಹಂಸ ಎಂದರೆ ಹಂಸಪಕ್ಷಿಯಲ್ಲ. ಹಂಸಃ ಎಂದರೆ: ಯಾವ ದೋಷವೂ ಇಲ್ಲದ ಹಾಗೂ ಎಲ್ಲಾ ಗುಣಗಳ ಸಾರ ಸಂಗ್ರಹನಾದ ಭಗವಂತ. ಇಲ್ಲಿ ನಾವು ಉಚ್ಛಾರಕ್ಕೆ ಸಂಬಂಧಿಸಿದ ಒಂದು ಮುಖ್ಯ ವಿಚಾರವನ್ನು ಗಮನಿಸಬೇಕು. ಯಜುರ್ವೇದದಲ್ಲಿ ‘ಸ’ ಅಥವಾ ಶ-ಕಾರ ಇದ್ದಾಗ ಮೊದಲಿನ ಅನುಸ್ವಾರವನ್ನು ಮ-ಕಾರವಾಗಿ ಉಚ್ಛಾರ ಮಾಡುವುದಿಲ್ಲ/ಮಾಡಬಾರದು. ಆದ್ದರಿಂದ ಹಂಸಃ ಎನ್ನುವಲ್ಲಿ ಮ್-ಕಾರದ ಬದಲು ಕ-ವರ್ಗದ ಅನುನಾಸಿಕವನ್ನು[ಕ, ಖ, ಗ, ಘ, ಙ] ಉಪಯೋಗಿಸಬೇಕು. ಆದ್ದರಿಂದ ಉಚ್ಛಾರ ಹಙಸಃ ಎಂದಾಗುತ್ತದೆ. [ಇದನ್ನು ಕೆಲವರು ಹಗುಂಸಃ ಎಂದು ಉಚ್ಛರಿಸುತ್ತಾರೆ. ಆದರೆ ಅದು ಸರಿಯಾದ ಉಚ್ಛಾರವಲ್ಲ].
‘ಹಂಸಃ ಶುಚಿಷತ್’ ಅಂದರೆ:  ಹಂಸಃ ನಾಮಕ ಭಗವಂತ ಶುಚಿಯಾದ ಚೇತನದಲ್ಲಿದ್ದಾನೆ ಎಂದರ್ಥ. ಚೇತನಗಳಲ್ಲಿ ಸದಾ ಶುಚಿಯಾಗಿರುವವರು ಪ್ರಾಣದೇವರು. ಉಪನಿಷತ್ತಿನಲ್ಲಿ ಹೇಳುವಂತೆ ಅಸುರರು ದೇವತೆಗಳ ಒಳಗೆ ಸೇರಿ ಅವರ ಬುದ್ಧಿ ಕೆಡಿಸಿ ಅವರಿಗೆ ಅಸುರಾವೇಶ ಬರುವಂತೆ ಮಾಡಬಲ್ಲರು.[ಉದಾಹರಣೆಗೆ: ತನಗೆ ಪೂಜೆ ಸಲ್ಲಿಸಲಿಲ್ಲ ಎಂದು ಇಂದ್ರ ಅಸುರಾವೇಶದಿಂದ ಮಳೆ ಬರಿಸಿದ್ದು-ಕೃಷ್ಣ ಗೋವರ್ಧನ ಗಿರಿ ಬೆಟ್ಟವನ್ನು ಎತ್ತಿ ರಕ್ಷಣೆ ಮಾಡಿದ ಕಥೆ] ಇಂದ್ರಾದಿ ದೇವತೆಗಳಿಗೆ ಅಸುರಾವೇಶ ಬರಬಹುದು ಆದರೆ ಪ್ರಾಣದೇವರಿಗೆ ಎಂದೂ ಅಸುರಾವೇಶ ಇಲ್ಲವಂತೆ. ಪ್ರಾಣದೇವರ ಮೇಲೆ ಆಕ್ರಮಿಸಬೇಕು ಎಂದು ಪ್ರಯತ್ನಿಸುವ ಅಸುರರು ಕಲ್ಲು ಬಂಡೆಗೆ ತಲೆ ಚಚ್ಚಿಕೊಂಡಂತೆ ಚಚ್ಚಿಕೊಂಡು ನಾಶವಾಗಿ ಹೋಗುತ್ತಾರೆ. ಹೀಗೆ ಯಾವ ಆಸುರೀ ಶಕ್ತಿಯ ಪ್ರಭಾವಕ್ಕೂ ಒಳಗಾಗದ ಶುದ್ಧತತ್ವ ‘ಪ್ರಾಣ ದೇವರು’. ಇಂತಹ ಶುಚಿಯಾದ ಪ್ರಾಣದೇವರಲ್ಲಿ ಸನ್ನಿಹಿತನಾಗಿ ಹಂಸಃ ನಾಮಕ ಭಗವಂತನಿದ್ದಾನೆ.
ಹೃತ್ಕಮಲದಲ್ಲಿ ಜೀವನಿದ್ದಾನೆ. ಆ ಜೀವನೊಳಗೆ ಜೀವ ಕಲಾಭಿಮಾನಿಯಾಗಿ ಪ್ರಾಣದೇವರಿದ್ದಾರೆ. ಪ್ರಾಣದೇವರ ಒಳಗೆ ಹಂಸಃ ನಾಮಕ ಭಗವಂತನಿದ್ದಾನೆ. ಈ ಕಾರಣಕ್ಕಾಗಿ ಪ್ರಾಣದೇವರಿಗೂ ಕೂಡ ಹಂಸಃ ಎನ್ನುವ ಹೆಸರಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಭಗವಂತ ಎಲ್ಲರ ಒಳಗೂ ಬಿಂಬರೂಪನಾಗಿ ನೆಲೆಸಿದ್ದಾನೆ.
‘ವಸುಃ ಅಂತರಿಕ್ಷಸತ್’ ಅಂದರೆ ಅಂತರಿಕ್ಷದಲ್ಲಿ ವಸುಃ ನಾಮಕನಾಗಿ ಭಗವಂತನಿದ್ದಾನೆ ಎಂದರ್ಥ. ವಸುಃ ಎಂದರೆ ಶ್ರೇಷ್ಠವಾದ ಆನಂದಸ್ವರೂಪ.[ವ=ವರ=ಶ್ರೇಷ್ಠ; ಸು= ಸುಖ=ಆನಂದ]. ಹೀಗೆ ಜೀವ ಜಡಾತ್ಮಕವಾದ ಪ್ರಪಂಚದಲ್ಲಿ ಎಲ್ಲಾ ಕಡೆ ಆನಂದ ಸ್ವರೂಪನಾಗಿ ಭಗವಂತ ತುಂಬಿದ್ದಾನೆ.
‘ಹೋತಾ ವೇದಿಷತ್’ : ಇಲ್ಲಿ ‘ವೇದಿ’ ಎಂದರೆ ಯಜ್ಞ ವೇದಿಕೆ. ಅಂದರೆ ಯಜ್ಞಕುಂಡ. ವೇದಿಯಲ್ಲಿರುವವನು ಅಗ್ನಿ. ಅಗ್ನಿಯಲ್ಲಿ ಅಗ್ನಿ ಅಂತರ್ಗತನಾಗಿ ಅಗ್ನಿನಾರಾಯಣ ಭಗವಂತ ತುಂಬಿದ್ದಾನೆ. ಅಗ್ನಿಯಲ್ಲಿದ್ದು ನಾವು ಅರ್ಪಿಸುವ ಹವಿಸ್ಸುಗಳನ್ನು ತಿನ್ನುವವ ಆ ಭಗವಂತ. ಯಜ್ಞ ಮಾಡುವಾಗ ಹವನ ಮಂತ್ರಗಳನ್ನು ಹೇಳುವವರನ್ನು  ‘ಹೋತೃ’ ಎಂದು ಕರೆಯುತ್ತಾರೆ. ಇವರು ಹವನ ಮಾಡುವಾಗ ‘ಶಸ್ತ್ರ’ ಮಂತ್ರಗಳನ್ನು ಹೇಳುವವರು. ಇಂತಹ ಹೋತೃಗಳ ಒಳಗೆ ಹೋತಾಃ  ನಾಮಕನಾಗಿ ಭಗವಂತ ತುಂಬಿದ್ದಾನೆ. ನಮ್ಮ ಇಂದ್ರಿಯಗಳಲ್ಲಿ ನಿರಂತರ ವಿಷಯಗಳ ಹೋಮ ನಡೆಯುತ್ತಿರುತ್ತದೆ. ಅಗ್ನಿಯಲ್ಲಿದ್ದು ಆಹುತಿಯನ್ನು ಸ್ವೀಕರಿಸುವ ಭಗವಂತನೇ ನಮ್ಮ ಇಂದ್ರಿಯಗಳಲ್ಲಿದ್ದು ಅವುಗಳನ್ನು ನಿಯಮಿಸುವ ಸರ್ವಾಂತರ್ಯಾಮಿ.
‘ಅತಿಥಿಃ ದುರೋಣಸತ್’: ದುರೋಣ ಎಂದರೆ ಸೋಮರಸ ಪಾತ್ರೆ ಅಥವಾ ಮರದ ದೊನ್ನೆ. ಭಗವಂತನಿಗೆ ಅರ್ಪಿಸುವ ಸೋಮರಸದಲ್ಲೂ ಹಾಗೂ ಎಲ್ಲಾ ಹವಿಸ್ಸುಗಳಲ್ಲೂ ಭಗವಂತ ತುಂಬಿದ್ದಾನೆ. ಯಾಗಶಾಲೆಯಲ್ಲಿ ಬಂದು ಕುಳಿತಿರುವ ಅತಿಥಿಯೊಳಗೆ ಕೂಡಾ ಭಗವಂತ ತುಂಬಿದ್ದಾನೆ.[ಅತಿಥಿ ಪದದ ಅರ್ಥವನ್ನು ಮೊದಲ ಅಧ್ಯಾಯದಲ್ಲಿ(೧-೧-೭) ವಿವರಿಸಲಾಗಿದೆ].
ಹಂಸ ಗಾಯತ್ತ್ರಿಯ ಉತ್ತರಾರ್ಧ ಹೀಗೆ ಹೇಳುತ್ತದೆ: “ನೃಷದ್ವರಸದೃತಸದ್ವ್ಯೋಮಸದ್  ಅಬ್ಜಾ ಗೋಜಾ ಅದ್ರಿಜಾ ಋತಜಾ ಋತಂ ಬೃಹತ್”.  ಈಗ ಮುದ್ರಣವಾಗಿರುವ ಎಲ್ಲಾ ಪುಸ್ತಕಗಳಲ್ಲೂ “ಅಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತ್” ಎಂದು ಮುದ್ರಣವಾಗಿರುವುದನ್ನು ಕಾಣುತ್ತೇವೆ. ಆದರೆ ಇದು ಋಗ್ವೇದದ ಮಂತ್ರ. [ಋಗ್ವೇದದಲ್ಲಿ- “ಅಬ್ಜಾ ಗೋಜಾ ಋತಜಾ ಅದ್ರಿಜಾ ಋತಮ್” ಎಂದಿದೆ(ಋಗ್ವೇದ- ೪-೦೪೦-೦೫). ಅಲ್ಲಿ ‘ಬೃಹತ್’ ಪದ ಬಳಸಿಲ್ಲ]. ಪ್ರಾಚೀನ ವ್ಯಾಖ್ಯಾನಗಳ ಪ್ರಕಾರ ಮತ್ತು ಅರ್ಥ ಔಚಿತ್ಯದಿಂದ ಕಠ ಉಪನಿಷತ್ತಿನಲ್ಲಿ  “ಅಬ್ಜಾ ಗೋಜಾ ಅದ್ರಿಜಾ ಋತಜಾ ಋತಂ ಬೃಹತ್”  ಸರಿಯಾದ ಪಾಠ ಎನಿಸುತ್ತದೆ.
ನೃಷತ್: ಪ್ರತಿಯೊಬ್ಬ ಮನುಷ್ಯನಲ್ಲಿಯೂ ಆ ಭಗವಂತನಿದ್ದಾನೆ. ಆದ್ದರಿಂದ ಯಾರೂ ಯಾರನ್ನು ನೋಡಿಯೂ ಅಸಹ್ಯಪಡುವಂತಿಲ್ಲ. ಆದ್ದರಿಂದ ನಾವು ನಿತ್ಯ ವ್ಯವಹಾರದಲ್ಲಿ ಕಾಣುವ ಪ್ರತಿಯೊಬ್ಬನಲ್ಲೂ ಭಗವಂತನನ್ನು ಕಾಣಬೇಕು.
ವರಸತ್: ಮನುಷ್ಯನಿಗಿಂತ ಮೇಲಿರುವವರು ದೇವತೆಗಳು. ಬ್ರಹ್ಮಾದಿ ಸಮಸ್ತ ದೇವತೆಗಳಲ್ಲೂ ಆ ಭಗವಂತನಿದ್ದಾನೆ.
ಋತಸತ್, ವ್ಯೋಮಸತ್: ಬ್ರಹ್ಮನಿಗಿಂತ ಎತ್ತರದಲ್ಲಿ ಮೂಲ ಪ್ರಕೃತಿಮಾನಿನಿ ಲಕ್ಷ್ಮಿ ಇದ್ದಾಳೆ. ಮೂಲ ಪ್ರಕೃತಿಗೆ ಎರಡು ಮುಖ. ಜಡಪ್ರಕೃತಿ ಮತ್ತು ಚೇತನ ಪ್ರಕೃತಿ. ಇದನ್ನೇ ಇಲ್ಲಿ ಋತಸತ್ ವ್ಯೋಮಸತ್ ಎಂದಿದ್ದಾರೆ. ಋತ ಎಂದರೆ ಎಂದೂ ಬದಲಾವಣೆ ಹೊಂದದೆ ಏಕರೂಪವಾಗಿರುವ ಮೂಲಪ್ರಕೃತಿ. ವ್ಯೋಮ ಎಂದರೆ ಎಲ್ಲಾ ಕಡೆ ತುಂಬಿರುವ ಶಕ್ತಿ. ಹೀಗೆ ಚೇತನಾಚೇತನಾತ್ಮಕ ಪ್ರಪಂಚದಲ್ಲಿ ಮತ್ತು ಅದಕ್ಕೆ ನಿಯಾಮಕಳಾದ ಚಿತ್ ಪ್ರಕೃತಿ ಲಕ್ಷ್ಮಿಯಲ್ಲಿ ಸನ್ನಿಹಿತನಾಗಿದ್ದಾನೆ ಆ ಭಗವಂತ.  
ಅಬ್ಜಾಃ : ನೀರಿನಲ್ಲಿ ಹುಟ್ಟಿದವನು ಅಬ್ಜಾಃ. ಇದು ಚತುರ್ಮುಖನ ಹೆಸರು. ಭಗವಂತ ಚತುರ್ಮುಖನಲ್ಲಿ ನೆಲೆಸಿದ್ದಾನೆ.
ಗೋಜಾಃ: ಗೌಃ ಎಂದರೆ ಸರಸ್ವತಿ. ಸರಸ್ವತಿಯ ಮಕ್ಕಳಾದ ಗರುಡ-ಶೇಷ-ರುದ್ರರಲ್ಲಿ ನೆಲೆಸಿರುವ ಭಗವಂತ ಗೋಜಾಃ.
ಅದ್ರಿಜಾಃ: ಅದ್ರಿ ಎಂದರೆ ಎಲ್ಲರೂ ಆದರಿಸಬೇಕಾದ ಶಿವತತ್ವ. ಶಿವನಿಂದ ಹುಟ್ಟಿದ ಇಂದ್ರಾದಿ ಸಮಸ್ತ ದೇವತೆಗಳಲ್ಲಿ ನೆಲೆಸಿರುವ ಭಗವಂತ ಅದ್ರಿಜಾಃ. 
ಋತಜಾಃ: ಜ್ಞಾನವನ್ನು ಪಡೆದು ಮುಕ್ತಿಯನ್ನು ಪಡೆದವರಲ್ಲಿ ಸನ್ನಿಹಿತನಾಗಿರುವ ಭಗವಂತ ಋತಜಾಃ.
ಋತಮ್, ಬೃಹತ್: ಎಂದೂ ಬದಲಾಗದ ಜ್ಞಾನ ಸ್ವರೂಪ ಭಗವಂತ ಋತಮ್.  ಇಂತಹ ಭಗವಂತನಿಗೆ ಸಾಟಿಯಾದ ಇನ್ನೊಂದು ವಸ್ತುವಿಲ್ಲ. ಆದ್ದರಿಂದ ಆತ ಬೃಹತ್.
ಈ ಮಂತ್ರಕ್ಕೆ ಇನ್ನೊಂದು ಮುಖವಿದೆ. ಅದು ವೇದದಲ್ಲೇ ಬಂದ ಅರ್ಥ ವಿವರಣೆ. ತೈತ್ತಿರೀಯ ಅರಣ್ಯಕದಲ್ಲಿ ಈ ಮಂತ್ರಕ್ಕೆ ಅರ್ಥ ಬರೆದಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಮಂತ್ರದ ಅರ್ಥ ವಿವರಣೆಯನ್ನು ನೋಡೋಣ.
ಈ ಮಂತ್ರದಲ್ಲಿ ‘ಋತ’ ಎನ್ನುವ ಶಬ್ದ ಮೂರು ಬಾರಿ ಬಂದಿದೆ ಹಾಗೂ  ಮೂರಕ್ಕೂ ಬೇರೆ ಬೇರೆ ಅರ್ಥವಿದೆ. ಆದರೆ ಸಂಸ್ಕೃತದಲ್ಲಿ ಒಂದು ನಿಯಮವಿದೆ. ಅದೇನೆಂದರೆ: ಒಂದು ಶಬ್ದವನ್ನು ಒಂದು ಸಂದರ್ಭದಲ್ಲಿ ಒಂದು ಪ್ರಕರಣದಲ್ಲಿ ಅನೇಕ ಬಾರಿ ಉಚ್ಛಾರ ಮಾಡಿದರೆ ಅದು ಒಂದೇ ಅರ್ಥವನ್ನು ಹೇಳಬೇಕೇ ಹೊರತು ಅರ್ಥಾಂತರ ಮಾಡಬಾರದು ಎಂದು. ಇದು ಭಾಷಾಶಾಸ್ತ್ರದ  ನಿಯಮ. ಆದರೆ  ಈ ನಿಯಮ ಇಲ್ಲಿ ಅನ್ವಯಿಸುವುದಿಲ್ಲ. ಏಕೆಂದರೆ ಇಲ್ಲಿ ಋತ ಎನ್ನುವ ಶಬ್ದ ಮೂರು ಬಾರಿ ಬಂದಿದ್ದಲ್ಲ, ಬದಲಿಗೆ ಋತಸತ್, ಋತಜಾಃ, ಋತಮ್ ಎನ್ನುವ ಬೇರೆ ಬೇರೆ ಶಬ್ದಗಳು ಬಳಕೆಯಾಗಿರುವುದು. ಹಾಗಾಗಿ ಈ ಮೂರು ಶಬ್ದಗಳಿಗೂ ಇಲ್ಲಿ ಬೇರೆ ಬೇರೆ ಅರ್ಥಗಳಿವೆ.
ಋತಸತ್ ಎಂದರೆ ಋತಗಳಲ್ಲಿ ಇರುವವನು. ಸಮಸ್ತ ವೇದಗಳಲ್ಲಿ ಪ್ರತಿಪಾಧ್ಯನಾದ ಭಗವಂತ ಋತಸತ್. ವೇದ ಎಂದೂ ಅಪಾರ್ಥಕ್ಕೆ ಎಡೆ ಮಾಡಿಕೊಡುವುದಿಲ್ಲ. ಯಥಾರ್ಥ ಜ್ಞಾನವನ್ನು ಕೊಡುವುದರಿಂದ ವೇದವನ್ನು ‘ಋತ’ ಎನ್ನುತ್ತಾರೆ. ಭಗವಂತ ಸರ್ವವೇದ ಪ್ರತಿಪಾಧ್ಯನಾಗಿ, ಸಮಸ್ತ ಶಬ್ದವಾಚ್ಯನಾಗಿ, ಸಮಸ್ತ ಅಕ್ಷರ ವಾಚ್ಯನಾಗಿ ವೇದದಲ್ಲಿ ನೆಲೆಸಿದ್ದಾನೆ.
ಸಂಸ್ಕೃತ ಭಾಷಾಶಾಸ್ತ್ರದಲ್ಲಿ ಇನ್ನೊಂದು ನಿಯಮವಿದೆ. ಯಾವ ಅರ್ಥ ಒಂದು ಶಬ್ದಕ್ಕೆ ಪ್ರಸಿದ್ಧವೋ, ಅದನ್ನು ಬಿಟ್ಟು ಅಪ್ರಸಿದ್ಧ ಅರ್ಥವನ್ನು ಹೇಳಬಾರದು ಎಂದು. ‘ವ್ಯೋಮ’ ಎನ್ನುವಲ್ಲಿ ಪ್ರಸಿದ್ಧ ಅರ್ಥ ಆಕಾಶ. ಆದರೆ ಇಲ್ಲಿ ಆ ಅರ್ಥವನ್ನು ಬಳಸಿಲ್ಲ. ಇದಕ್ಕೆ ಕಾರಣ: ಪ್ರಸಿದ್ಧ ಅರ್ಥ ಬಾಧಕವಾಗಿದ್ದಲ್ಲಿ ಅಪ್ರಸಿದ್ಧ ಅರ್ಥವನ್ನು ಹೇಳಬಹುದು ಎಂದು ಭಾಷಾಶಾಸ್ತ್ರ ಹೇಳುತ್ತದೆ. ಇಲ್ಲಿ ಪೂರ್ವಾರ್ಧದಲ್ಲಿ ‘ಅಂತರಿಕ್ಷ’ ಎನ್ನುವ ಶಬ್ದ ಬಂದಿರುವುದರಿಂದ, ಅದು ಉತ್ತರಾರ್ಧದಲ್ಲಿ ಪುನರುಕ್ತಿ ಆಗುವುದಿಲ್ಲ. ಆದ್ದರಿಂದ ವ್ಯೋಮ ಎನ್ನುವ ಶಬ್ದಕ್ಕೆ ಎಲ್ಲಾ ಕಡೆ ವ್ಯಾಪ್ತವಾಗಿರುವ ತತ್ವ ಎನ್ನುವ ಅರ್ಥ ವಿವರಣೆ ಕೊಡಲಾಗಿದೆ. ಎಲ್ಲಾ ಕಡೆ ವ್ಯಾಪ್ತವಾಗಿರುವ ತತ್ವ ಎರಡೇ. ಲಕ್ಷ್ಮೀ ಮತ್ತು ನಾರಾಯಣ. ಇಲ್ಲಿ ‘ವ್ಯೋಮದಲ್ಲಿ ನೆಲೆಸಿರುವ ಭಗವಂತ’ ಎಂದು ಹೇಳಿರುವುದರಿಂದ ವ್ಯೋಮ ಎಂದರೆ ಶ್ರೀಲಕ್ಷ್ಮಿ[ವಿಷ್ಣುವಿನ ಜೊತೆಗೆ ಓತಳಾದವಳು].
ಹಂಸ ಗಾಯತ್ತ್ರಿಯನ್ನು ಸೂರ್ಯೋಪಸ್ಥಾನಕ್ಕಾಗಿ ಉಪಯೋಗಿಸುತ್ತಾರೆ. ಹೇಗೆ ಗಾಯತ್ತ್ರಿಯನ್ನು ಜಪ ಮಾಡುವಾಗ ಸೂರ್ಯೋಪಸ್ಥಾನವೋ ಹಾಗೇ ಹಂಸ ಗಾಯತ್ತ್ರಿಗೂ ದೇವತೆ ಸೂರ್ಯ ಎಂದು ಆರಾಧನೆ ಮಾಡುವ ಕ್ರಮವಿದೆ. ಹೀಗಾಗಿ ತೈತ್ತಿರೀಯ ಅರಣ್ಯಕದಲ್ಲಿ ಅರ್ಥವಿವರಣೆಯನ್ನು ಸೂರ್ಯನಾರಾಯಣನ ಪರವಾಗಿ ಹೇಳಲಾಗಿದೆ. ಮುಂಜಾನೆ ಪೂರ್ವ ಸಮುದ್ರದಲ್ಲಿ ಕುಳಿತು ಸೂರ್ಯನನ್ನು ನೋಡಿದರೆ ಆತ ನೀರಿನಿಂದ ಮೇಲೆದ್ದು ಬಂದಂತೆ ಕಾಣುತ್ತಾನೆ. ಹೀಗೆ ನೀರಿನಿಂದ ಮೇಲೆದ್ದು ಬಂದಂತೆ ಕಾಣುವ ಸೂರ್ಯನಾರಾಯಣ ಅಬ್ಜಾಃ. ಸಾವಿರ ಕಿರಣ ಹೊತ್ತು ಬರುವನಾದ್ದರಿಂದ ಆತ ಗೋಜಾಃ. ಸತ್ಯ ಸ್ವರೂಪನಾಗಿ ಆವಿರ್ಭಾವನಾಗುವ ಹಾಗೂ ಮುಕ್ತರಲ್ಲಿ ನೆಲೆಸಿರುವ ಭಗವಂತ ಋತಜಾಃ. ಸದಾ ಒಂದೇ ರೀತಿ ಇರುವ ನಿರ್ವೀಕಾರ ಬ್ರಹ್ಮತತ್ವ ಭಗವಂತ ಋತಮ್. ಹೀಗೆ ಎಲ್ಲಾ ಗುಣಗಳನ್ನೂ ಹೊಂದಿರುವ, ಎಲ್ಲಕ್ಕಿಂತ ಹಿರಿದಾದ ತತ್ವ ಭಗವಂತ ‘ಬೃಹತ್’.

Friday, July 27, 2012

Kathopanishad in Kannada Chapter-02 Canto-01 Shloka-14-15


ಯಥೋದಕಂ ದುರ್ಗೇ ವೃಷ್ಟಂ ಪರ್ವತೇಷು ವಿಧಾವತಿ
ಏವಂ ಧರ್ಮಾನ್ ಪೃಥಕ್ ಪಶ್ಯಂಸ್ತಾನೇವಾನುವಿಧಾವತಿ ೧೪

ಭಗವಂತನ ಗುಣಧರ್ಮವನ್ನು ಬೇರೆಬೇರೆಯಾಗಿ ಚಿಂತನೆ ಮಾಡಬಾರದು ಎನ್ನುವುದನ್ನು ಇನ್ನೂ ಒತ್ತುಕೊಟ್ಟು ಈ ಶ್ಲೋಕದಲ್ಲಿ ಯಮ ವಿವರಿಸಿದ್ದಾನೆ.  ಜ್ಞಾನಾನಂದಾದಿಗಳನ್ನು ಭಗವಂತನಿಂದ ಭಿನ್ನ ಎಂದು ಉಪಾಸನೆ ಮಾಡುವವರು ಹೇಗೆ ಎತ್ತರವಾದ ಹಾಗೂ ದುರ್ಗಮವಾದ ಪರ್ವತದ ತುದಿಯಲ್ಲಿ ಸುರಿದ ನೀರು ಹರಿದು ಕೆಳಗೆ ಬರುತ್ತದೋ, ಹಾಗೇ ಭಗವಂತನ ವಿರುದ್ಧದಿಕ್ಕಿನಲ್ಲಿ ಚಲಿಸಿ ತಮಸ್ಸನ್ನು ಸೇರುತ್ತಾರೆ ಎಂದಿದ್ದಾನೆ ಯಮ.
ಭಗವಂತ ಜ್ಞಾನಾನಂದಸ್ವರೂಪ. ಆದ್ದರಿಂದ ಅವನಲ್ಲಿ ಯಾವ ರೀತಿಯ ತಾರತಮ್ಯ ಚಿಂತನೆ ಮಾಡಬಾರದು. ನಾವು ಒಂದು ಕ್ರಿಯೆ ಮಾಡಬೇಕಿದ್ದರೆ ಮೊದಲು ಅದರ ಬಗ್ಗೆ ತಿಳಿದುಕೊಳ್ಳುತ್ತೇವೆ. ನಂತರ ತಿಳಿದುಕೊಂಡು ಮಾಡುತ್ತೇವೆ. ನಮ್ಮ ಇಚ್ಛೆ-ಜ್ಞಾನ-ಕ್ರಿಯೆ ಇವು ಮೂರನ್ನು ತ್ರಿನೇತ್ರ ಎನ್ನುತ್ತಾರೆ. ಆದರೆ ಭಗವಂತನಲ್ಲಿ ಇವು ಮೂರು ಬೇರೆಬೇರೆ ಅಲ್ಲ. ಆತನಲ್ಲಿ ಜ್ಞಾನ-ಇಚ್ಛೆ-ಕ್ರಿಯೆ ಎಲ್ಲವೂ ಅಖಂಡ. ಇಷ್ಟೇ ಅಲ್ಲದೇ ಭಗವಂತನ ಅವಯವಗಳೂ ಕೂಡ ಸ್ವರೂಪಭೂತವಾಗಿ ಅಖಂಡವಾದುದು. ಅವನ ಕೈ-ಕಾಲು-ಕಣ್ಣು ಎಲ್ಲವೂ ಬೇರೆಬೇರೆ ಅಲ್ಲ. ಅದೊಂದು ಅಖಂಡವಾದ ವಿಲಕ್ಷಣವಾದ ಶಕ್ತಿ. ಆತ ಕಾಲದಿಂದ ಅಂತವಿಲ್ಲದವನು; ದೇಶದಿಂದ ಅಂತವಿಲ್ಲದವನು; ಗುಣಗಳಿಂದ ಅಂತವಿಲ್ಲದವನು ಹಾಗೂ ಶಕ್ತಿಯಲ್ಲಿ ಅಂತವಿಲ್ಲದವನು. ಇದು ನಾವು ಯೋಚಿಸಲೂ ಸಾಧ್ಯವಾಗದ ಭಗವಂತನ ಗುಣಧರ್ಮ.

ಯಥೋದಕಂ ಶುದ್ಧೇ ಶುದ್ಧಮಾಸಿಕ್ತಂ ತಾದೃಗೇವ ಭವತಿ
ಏವಂ ಮುನೇರ್ವಿಜಾನತ ಆತ್ಮಾ ಭವತಿ ಗೌತಮ ೧೫

ಹೇಗೆ ಭಗವಂತನ ಗುಣಧರ್ಮಗಳನ್ನು ಬೇರೆಬೇರೆಯಾಗಿ ಚಿಂತನೆ ಮಾಡಬಾರದೋ, ಹಾಗೇ ಎಲ್ಲವೂ ಭಗವಂತನ ಸ್ವರೂಪ ಎಂದೂ ಚಿಂತನೆ ಮಾಡಬಾರದು. ಭಗವಂತನ ಉಪಾಸನೆ ಮಾಡುವವರು ಭಗವಂತನೇ ಆಗಿಬಿಡುತ್ತಾರೆ ಎನ್ನುವ ಚಿಂತನೆ ಸಲ್ಲದು. ಜ್ಞಾನಾನಂದಮಯನಾದ ಜೀವ ಮೋಕ್ಷದಲ್ಲಿ ಜ್ಞಾನಾನಂದಮಯನಾದ ಭಗವಂತನನ್ನು ಸೇರುತ್ತಾನೆ. ಅಲ್ಲಿ ಜೀವ ಮತ್ತು ಭಗವಂತ ಒಂದಾಗುತ್ತಾರೆ. ಇಲ್ಲಿ ಒಂದಾಗುವುದು ಎಂದರೆ ಒಟ್ಟಾಗುವುದು, ಒಂದೇ ಆಗುವುದಲ್ಲ. ಶುದ್ಧವಾದ ಎರಡು ಲೋಟ ನೀರನ್ನು ಬೆರೆಸಿದರೆ ಹೇಗೆ ಬೇರ್ಪಡಿಸಲು ಸಾಧ್ಯವಿಲ್ಲವೋ ಹಾಗೆ ಒಂದಾಗುವುದು. ಭಗವಂತನನ್ನು ಕಂಡ ಜ್ಞಾನಿಯ ಸ್ವರೂಪ ಭಗವಂತನ ಜೊತೆಗೆ ಸೇರಿಕೊಳ್ಳುವುದೇ ಹೊರತು ಭಗವಂತನೇ ಆಗುವುದಲ್ಲ.
ಮೋಕ್ಷವನ್ನು ಸೇರಿದ ಜೀವರು ಮಾನಸಿಕವಾಗಿಯೂ ಕೂಡ ಭಗವಂತನೊಡನೆ ಒಂದಾಗಿರುತ್ತಾರೆ. ಅಂದರೆ ಭಗವಂತನಿಗೂ ಹಾಗು ಅವನ ಭಕ್ತರಿಗೂ ಅಲ್ಲಿ ಅಭಿಪ್ರಾಯ ಭೇದವಿರುವುದಿಲ್ಲ. ಮೋಕ್ಷದಲ್ಲಿ ಸ್ತ್ರೀಯರಿದ್ದಾರೆ, ಪುರುಷರಿದ್ದಾರೆ. ಅಲ್ಲಿ ಅಜ್ಞಾನ-ದುಃಖವಿಲ್ಲ. ಎಲ್ಲರೂ ಜ್ಞಾನಾನಂದ ಸ್ಥಿತಿಯಲ್ಲಿ ಭಗವಂತನೊಂದಿಗಿರುತ್ತಾರೆ. “ಇವರೆಲ್ಲರನ್ನೂ ನಿಯಮಿಸುವ ಸ್ವಾಮಿ ನೀನು ತಿಳಿಯ ಬಯಸಿರುವ ಆ ಭಗವಂತ” ಎನ್ನುತ್ತಾನೆ ಯಮ.   

ಇತಿ ಕಾಠಕೋಪನಿಷದಿ ದ್ವಿತೀಯಾಧ್ಯಾಯೇ ಪ್ರಥಮಾ ವಲ್ಲೀ
ಇಲ್ಲಿಗೆ ಕಾಠಕೋಪನಿಷತ್ತಿನ ಎರಡನೇ ಅಧ್ಯಾಯದ ಮೊದಲ ವಲ್ಲೀ ಮುಗಿಯಿತು

Thursday, July 26, 2012

Kathopanishad in Kannada Chapter-02 Canto-01 Shloka-10-13

ಯದೇವೇಹ ತದಮುತ್ರ ಯದಮುತ್ರ ತದನ್ವಿಹ
ಮೃತ್ಯೋಃ ಸ ಮೃತ್ಯುಮಾಪ್ನೋತಿ ಯ ಇಹ ನಾನೇವ ಪಶ್ಯತಿ ೧೦

ಭಗವಂತನ ಅವತಾರ ರೂಪ ಮತ್ತು ಆತನ ಮೂಲರೂಪದ ಬಗ್ಗೆ ಯಮ ಈ ಶ್ಲೋಕದಲ್ಲಿ ಒಂದು ಉತ್ತಮ ವಿವರಣೆಯನ್ನು ಕೊಟ್ಟಿದ್ದಾನೆ. ಸಾಮಾನ್ಯವಾಗಿ ಭಗವಂತ ಅವತಾರರೂಪಿಯಾಗಿ ಭೂಮಿಗಿಳಿದು ಬಂದಾಗ ಒಬ್ಬ ಸಾಮಾನ್ಯ ಮನುಷ್ಯನಂತೆ ಕಾಣುತ್ತಾನೆ. ಉದಾಹರಣೆಗೆ ಶ್ರೀರಾಮಚಂದ್ರ. ರಾಮಾಯಣದಲ್ಲಿ ಒಂದು ಕಡೆ “ನಾನೊಬ್ಬ ಸಾಮಾನ್ಯ ಮನುಷ್ಯ” ಎಂದು ಶ್ರೀರಾಮನೇ ಹೇಳುವುದನ್ನು ಕಾಣುತ್ತೇವೆ. ಇದೆಲ್ಲವನ್ನು ನೋಡಿದಾಗ ನಮಗೆ ಭಗವಂತನ ಮೂಲರೂಪಕ್ಕೂ ಮತ್ತು ಅವತಾರರೂಪಕ್ಕೂ ವ್ಯತ್ಯಾಸವಿದೆ ಎನಿಸಬಹುದು. ಆದರೆ ಅದು ಸರಿಯಲ್ಲ. ಇಲ್ಲಿ ಯಮ ಹೇಳುತ್ತಾನೆ: “ಭಗವಂತನ ಮೂಲರೂಪ ಎಷ್ಟು ಪೂರ್ಣವೋ ಅಷ್ಟೇ ಪೂರ್ಣ ಆತನ ಅವತಾರ ರೂಪ” ಎಂದು. ಆದ್ದರಿಂದ ಮೂಲರೂಪಕ್ಕೂ ಅವತಾರ ರೂಪಕ್ಕೂ ಭೇದ ಚಿಂತನೆ ತಪ್ಪು. “ಭಗವಂತನ ರೂಪಗಳಲ್ಲಿ ಕಿಂಚಿತ್ ವ್ಯತ್ಯಾಸವಿದೆ ಎಂದು ಚಿಂತನೆ ಮಾಡುವವರು ಸತ್ತ ಮೇಲೆ ದುಃಖಮಾಯವಾದ ತಮಸ್ಸನ್ನು ಸೇರುತ್ತಾರೆ” ಎಂದಿದ್ದಾನೆ ಯಮ. ಭಗವಂತನ ಬಗೆಗೆ ತಪ್ಪು ಕಲ್ಪನೆ ಮಾಡುವುದರಿಂದ ಎಂದೂ ಶ್ರೇಯಸ್ಸಿಲ್ಲ.
ಅವತಾರ ರೂಪದಲ್ಲಿ ಭಗವಂತ ಕಷ್ಟಪಟ್ಟಂತೆ ನಮಗೆ ಕಾಣುವುದು(ಉದಾ: ಶ್ರೀ ರಾಮ) ಅವನ ಲೀಲೆಯ ಒಂದು ಅಂಗ. ಜೀವನ ಎನ್ನುವುದು ಒಂದು ನಾಟಕ. ಇಲ್ಲಿ ನಾವು ಪಾತ್ರಧಾರಿಗಳು ಹಾಗೂ ಭಗವಂತ ನಿರ್ದೇಶಕ. ಕೆಲವೊಮ್ಮೆ ಈ ನಾಟಕದಲ್ಲಿ ಭಗವಂತನೇ ನೇರವಾಗಿ ಬಂದು ಅಭಿನಯಿಸುತ್ತಾನೆ. ಆಗ ಆ ಪಾತ್ರಕ್ಕನುಗುಣವಾಗಿ ಭಗವಂತ ತನ್ನ ಲೀಲೆಗಳನ್ನು ತೋರಿಸುತ್ತಾನೆ.  ಅದನ್ನು ನಾವು ತಪ್ಪಾಗಿ ತಿಳಿದುಕೊಂಡು ಭೇದ ಚಿಂತನೆ ಮಾಡುವುದು ತಪ್ಪು. ಭಗವಂತನ ಲೀಲೆಯನ್ನು ಅರ್ಥ ಮಾಡಿಕೊಳ್ಳದೇ ಆತನಿಗೂ ನಮ್ಮಂತೆ ಪಾಂಚಭೌತಿಕ ಶರೀರವಿದೆ, ಆತನಿಗೂ ಹುಟ್ಟು-ಸಾವುಗಳಿವೆ, ಅವತಾರ ರೂಪದಲ್ಲಿ ಆತನಿಗೂ ಕಷ್ಟಗಳು ಬರುತ್ತವೆ, ಆತನೂ  ದುಃಖವನ್ನು ಅನುಭವಿಸುತ್ತಾನೆ, ಇತ್ಯಾದಿ ಚಿಂತನೆ ಅಕ್ಷಮ್ಯ ಅಪರಾಧ. ಅವತಾರ ರೂಪದಲ್ಲಿ ಆರು ಅಡಿ ಎತ್ತರದ ಪಾಂಚಭೌತಿಕ ಶರೀರದಂತೆ ನಮಗೆ ಕಾಣಿಸಿಕೊಳ್ಳುವ ಭಗವಂತನನ್ನು, ನಮ್ಮ ಪರಿಮಿತಿಯಲ್ಲಿ ಅಳೆಯುವುದು ನಮ್ಮ ಅಜ್ಞಾನದ ಪರಮಾವಧಿ. ವೈಕುಂಠಾದಿಗಳಲ್ಲಿ ಭಗವಂತನ ರೂಪ ಎಷ್ಟು ಪರಿಪೂರ್ಣವೋ, ಆತನ  ಎಲ್ಲಾ ರೂಪಗಳು ಅಷ್ಟೇ ಪರಿಪೂರ್ಣ. ಇಲ್ಲಿ ಭೇದ ಚಿಂತನೆ ಮಾಡುವುದು ತಮಸ್ಸಿಗೆ ಆಹ್ವಾನ. ಇದನ್ನು ಇನ್ನೂ ವಿವರವಾಗಿ ಮುಂದಿನ ಶ್ಲೋಕದಲ್ಲಿ ಯಮ ವಿವರಿಸುತ್ತಾನೆ.

ಮನಸೈವೇದಮಾಪ್ತವ್ಯಂ ನೇಹ ನಾನಾಸ್ತಿ ಕಿಂಚನ
ಮೃತ್ಯೋಃ ಸ ಮೃತ್ಯುಂ ಗಚ್ಛತಿ ಯ ಇಹ ನಾನೇವ ಪಶ್ಯತಿ ೧೧

ತರ್ಕ ಮಾಡುವುದನ್ನು ಬಿಟ್ಟು, ಮನಸ್ಸಿನಲ್ಲಿ ಮನನ ಮಾಡುತ್ತಾ, ವೇದಾರ್ಥ ಚಿಂತನೆ ಮಾಡುವುದರಿಂದ ಭಗವಂತನ ದೇಹ, ಅವನ ಅವಯವ, ಅವನ ಕ್ರಿಯೆ ಇದ್ಯಾವುದೂ ಭಿನ್ನವಾಗಿಲ್ಲ, ಎಲ್ಲವೂ ಅಖಂಡ, ಯಾವುದೂ ಆತನ ಸ್ವರೂಪಕ್ಕಿಂತ ಭಿನ್ನವಲ್ಲ ಹಾಗೂ ಎಲ್ಲವೂ ಜ್ಞಾನಾನಂದಮಯ ಎನ್ನುವ ಸತ್ಯ ಸ್ಪುರಣವಾಗುತ್ತದೆ. ಇದನ್ನು ಬಿಟ್ಟು ಭಗವಂತನ ದೇಹ, ಗುಣ, ಕ್ರಿಯೆ, ರೂಪಗಳಲ್ಲಿ ಭಿನ್ನ ಚಿಂತನೆ ಮಾಡಿದರೆ ಸಾವಿನ ಸುಳಿಯಲ್ಲಿ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಸುತ್ತಾನೆ ಯಮ.
ಇಲ್ಲಿ ನಾವು ತಿಳಿಯಬೇಕಾದ ಮುಖ್ಯ ಅಂಶ ಎಂದರೆ:  ಭಗವಂತನ ಬೇರೆಬೇರೆ ರೂಪಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ. ನಾವು ಭಗವಂತನನ್ನು ರಾಮನಾಗಿ, ಕೃಷ್ಣನಾಗಿ, ನರಸಿಂಹನಾಗಿ ಅಥವಾ ನಮಗೆ ಇಷ್ಟವಾಗುವ ಮತ್ತು ಹಿಡಿಸುವ ಇತರ ಯಾವುದೇ ರೂಪದಲ್ಲಿ  ಉಪಾಸನೆ ಮಾಡಬಹುದು. ಸರ್ವಸಮರ್ಥನೂ, ಸರ್ವಜ್ಞನೂ ಆದ ಭಗವಂತ ಏಕ. ಆದ್ದರಿಂದ ಭಿನ್ನ ಮತ್ತು ಭೇದ ಚಿಂತನೆ ಸರಿಯಲ್ಲ.  

ಅಂಗುಷ್ಠಮಾತ್ರಃ ಪುರುಷೋ ಮಧ್ಯ ಆತ್ಮನಿ ತಿಷ್ಠತಿ
ಈಶಾನೋ ಭೂತಭವ್ಯಸ್ಯ ನ ತತೋ ವಿಜುಗುಪ್ಸತೇ ಏತದ್ವೈ ತತ್ ೧೨

ಭಗವಂತನನ್ನು ಒಳಗಣ್ಣಿನಿಂದ ಧ್ಯಾನದಲ್ಲಿ ನೋಡಿದರೆ ಆತ ನಮ್ಮ ಅಂಗುಷ್ಠದ ಆಕಾರದಲ್ಲಿ ನಮ್ಮ ಹೃದಯದಲ್ಲಿ ಕಾಣಿಸಿಕೊಳ್ಳುತ್ತಾನೆ. ಇಂತಹ ಸಮಸ್ತ ವಿಶ್ವದ ಸ್ವಾಮಿಯಾದ ಭಗವಂತನನ್ನು ತಿಳಿದರೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು ಎನ್ನುವ ಭಯ, ಅಜ್ಞಾನ ಹೊರುಟು ಹೋಗುತ್ತದೆ. “ನೀನು ತಿಳಿಯಲು ಬಯಸಿರುವ ಜಗತ್ತಿನ ಸ್ವಾಮಿ ಇವನೇ” ಎನ್ನುತ್ತಾನೆ ಯಮ.

                                   ಅಂಗುಷ್ಠಮಾತ್ರಃ ಪುರುಷೋ ಜ್ಯೋತಿರಿವಾಧೂಮಕಃ ।
                                   ಈಶಾನೋ ಭೂತಭವ್ಯಸ್ಯ ಸ ಏವಾದ್ಯ ಸ ಉ ಶ್ವಃ । ಏತದ್ವೈ ತತ್ ॥೧೩॥

ನಮ್ಮ ಹೃದಯದಲ್ಲಿ ಕಾಣುವ ಅಂಗುಷ್ಠಾಕಾರದ ಭಗವಂತನ ರೂಪ ಹೊಗೆ ಇರದ ದೀಪದ ಶಿಖೆಯಂತೆ. ಅತ್ಯಂತ ಪರಿಶುದ್ಧವಾದ, ದೋಷದ ಸ್ಪರ್ಶವೇ ಇಲ್ಲದ ಭಗವಂತನೆಂಬ ಬೆಳಕನ್ನು ಅಂತರಂಗದಲ್ಲಿ ಮನನ ಮಾಡುವುದರಿಂದ ಕಾಣಬಹುದು. ಈ ಸಂಸಾರದಲ್ಲಿರುವಾಗ ಹಾಗೂ ನಾಳೆ ಈ ಸಂಸಾರದಿಂದ ಪಾರಾಗಿ ಮೋಕ್ಷವನ್ನು ಸೇರಿದಾಗಲೂ, ಎಲ್ಲರಿಗೂ ಆತನೇ ಗತಿ.  “ನೀನು ತಿಳಿಯಲು ಬಯಸಿರುವ ನಮ್ಮೆಲ್ಲರ ಸ್ವಾಮಿ-ಈ ಭಗವಂತ” ಎನ್ನುತ್ತಾನೆ ಯಮ. 

Tuesday, July 24, 2012

Kathopanishad in Kannada Chapter-02 Canto-01 Shloka-08-09


ಅರಣ್ಯೋರ್ನಿಹಿತೋ ಜಾತವೇದಾ ಗರ್ಭ ಇವ ಸುಭೃತೋ ಗರ್ಭಿಣೀಭಿಃ
ದಿವೇ ದಿವೇ ಈಡ್ಯೋ ಜಾಗೃವದ್ಭಿರ್ಹವಿಷ್ಮದ್ಭಿರ್ಮನುಷ್ಯೇಭಿರಗ್ನಿಃ ಏತದ್ವೈ ತತ್

ಭಗವಂತನ ಬಗೆಗೆ ಅಪೂರ್ವವಾದ ವಿಷಯಗಳನ್ನು ಹೇಳಿದ ಯಮ, ಇಲ್ಲಿ ಒಂದು ವಿಶೇಷವಾದ ಸಂಗತಿಯನ್ನು ಒಂದು ದೃಷ್ಟಾಂತದ ಮೂಲಕ ವಿವರಿಸಿದ್ದಾನೆ. ಹಿಂದಿನ ಕಾಲದಲ್ಲಿ ಯಜ್ಞ ಮಾಡುವಾಗ ಅರಣೀ ಕಾಷ್ಠವನ್ನು ವಿಶೇಷವಾಗಿ ಮಥನ ಮಾಡಿ ಅದರಿಂದ ಬೆಂಕಿಯನ್ನು ತೆಗೆದು ಅಗ್ನಿಪ್ರತಿಷ್ಠೆ ಮಾಡುತ್ತಿದ್ದರು. ಈ ವಿಚಾರವನ್ನು ಸೂಕ್ಷ್ಮವಾಗಿ ನೋಡಿದರೆ: ಅರಣೀ ಕಾಷ್ಠದಲ್ಲಿ ಅಗ್ನಿ ಇದೆ, ಆದರೆ ಅದು ಮಥನ ಮಾಡದೇ ನಮಗೆ ಗೋಚರವಾಗುವುದಿಲ್ಲ. ಅದೇ ರೀತಿ ಭಗವಂತ. ಗುರು ಮತ್ತು ಶಿಷ್ಯರು ನಿರಂತರ ಶಾಸ್ತ್ರಾರ್ಥ ಮಥನ ಮಾಡದೇ ಆತ ಗೋಚರನಾಗುವುದಿಲ್ಲ. ಸರ್ವಜ್ಞನಾದ ಭಗವಂತ ವೇದ ಮಂತ್ರಗಳ ಅರ್ಥವನ್ನು ಬಲ್ಲ ಗುರು ಶಿಷ್ಯರ(ರಣ=ಶಬ್ದ=ವೇದಮಂತ್ರಗಳು; ಆರ್ಯರು=ಬಲ್ಲವರು; ಅರಣೀಗಳು=ವೇದ ಮಂತ್ರವನ್ನು ಬಲ್ಲವರು) ಶಾಸ್ತ್ರಾರ್ಥ ಮಥನದಿಂದ ಮೂಡಿಬರುತ್ತಾನೆ.
ಬೆಂಕಿ ಉತ್ಪತ್ತಿಯಾಗುವಾಗ ಹೇಗೆ ಮೊದಲು ಹೊಗೆ, ನಂತರ ಕಿಡಿ, ಆನಂತರ ಬೆಂಕಿಯೋ, ಅದೇ ರೀತಿ ಒಮ್ಮಿಂದೊಮ್ಮೆಗೆ ಭಗವಂತ ಪ್ರತ್ಯಕ್ಷನಾಗಿ ಕಾಣಲಾರ. ಆದರೆ ಆತನ ಇರವು ತಿಳಿಯುತ್ತದೆ. ಉದಾಹರಣೆಗೆ ಹೇಗೆ ಒಬ್ಬ ಗರ್ಭಿಣಿ ಹೆಣ್ಣಿನ ಹೊಟ್ಟೆಯನ್ನು ಬಾಹ್ಯವಾಗಿ ನೋಡಿ ಅಲ್ಲಿ ಬೆಳೆಯುತ್ತಿರುವ ಮಗುವನ್ನು ಗುರುತಿಸಬಹುದೋ ಹಾಗೇ ಶಾಸ್ತ್ರ ಮಥನದಿಂದ ಭಗವಂತನ ಇರವಿನ ಅರಿವು ಗಟ್ಟಿಗೊಳ್ಳುತ್ತದೆ ಮತ್ತು ಖಚಿತವಾಗುತ್ತದೆ. ಚಿಂತನಶೀಲರಾದ ಜೀವರು(ಮನುಷ್ಯ/ಮನನಶೀಲ) ಅನುದಿನವೂ ಜ್ಞಾನ ಮಾರ್ಗದ ಉಪಾಸನೆಯ ಮೂಲಕ ಮತ್ತು ಯಜ್ಞರೂಪವಾದ ಕರ್ಮದ ಮೂಲಕ ಭಗವಂತನನ್ನು ಆರಾಧಿಸಬೇಕು. ಒಂದು ಜ್ಞಾನಯಜ್ಞ ಹಾಗೂ ಇನ್ನೊಂದು ಕರ್ಮಯಜ್ಞ.
ಇಲ್ಲಿ ವಿಶೇಷವಾಗಿ ಜ್ಞಾನಯಜ್ಞ ಮತ್ತು ಕರ್ಮಯಜ್ಞವನ್ನು ಜೊತೆ-ಜೊತೆಯಾಗಿ ಹೇಳಿರುವುದನ್ನು ನಾವು ಗಮನಿಸಬೇಕು. ನಮ್ಮಲ್ಲಿ ಅನೇಕ ವಾದಗಳಿವೆ. ಕೇವಲ ಕರ್ಮಾನುಷ್ಠಾನದಿಂದಲೇ ಭಗವಂತನನ್ನು ಒಲಿಸಬಹುದು ಎನ್ನುವುದು ಒಂದು ವಾದ; ಜ್ಞಾನವಿಲ್ಲದೆ ಕರ್ಮದಿಂದ ದೇವರು ಒಲಿಯುವುದಿಲ್ಲ ಎನ್ನುವುದು ಇನ್ನೊಂದು ವಾದ. ಜ್ಞಾನ ಒಂದೇ ಸಾಕು, ಕರ್ಮ ಬೇಡವೇ ಬೇಡ ಅಥವಾ ಜ್ಞಾನಿಗಳಿಗೆ ಕರ್ಮ ಮಾಡಲು ಸಾಧ್ಯವಿಲ್ಲ ಎನ್ನುವುದು ಮತ್ತೊಂದು ವಾದ. ಕೃಷ್ಣ ಈ ರೀತಿಯ ವಾದಗಳಿಗೆ ಗೀತೆಯಲ್ಲಿ ಸ್ಪಷ್ಟವಾದ ಉತ್ತರ ಕೊಟ್ಟಿದ್ದಾನೆ. ಜ್ಞಾನಪೂರ್ವಕವಾದ ಕರ್ಮವೇ-ಕರ್ಮ. ನಾವು ಏನೇ ಮಾಡುವುದಿದ್ದರೂ ತಿಳಿದು ಮಾಡಬೇಕು. ಜ್ಞಾನ ಬಂದ ಮೇಲೆ ಕರ್ಮ ಬೇಡ ಎನ್ನುವುದು ಅಸಂಗತ. ಜ್ಞಾನಿಗಳು ಮಾಡುವ ಕರ್ಮವೇ ಹೆಚ್ಚು ಸಾರ್ಥಕ. ಜ್ಞಾನಿಗಳು ಕರ್ಮ ಮಾಡದಿದ್ದರೆ ಅವರನ್ನು ಅನುಸರಿಸುವ ಸಮಾಜ ತಪ್ಪು ದಾರಿ ಹಿಡಿಯುವ ಅಪಾಯ ಕೂಡಾ ಇದೆ. ಭಗವಂತನ ಬಗೆಗೆ ಎಚ್ಚರವಾದವರು, ಭಗವಂತನ ಬಗೆಗಿನ ಎಚ್ಚರದ ಪ್ರಜ್ಞೆಯಿಂದ ಕರ್ಮ ಮಾಡುವವರು, ಕರ್ಮವೆಲ್ಲವೂ ಭಗವದ್ ಅರ್ಪಿತ ಎಂದು ಕರ್ಮ ಮಾಡುವವರು ಉಪಾಸನೆ ಮಾಡುವುದು ಈ ‘ಅಗ್ನಿಃ’ ನಾಮಕ ಭಗವಂತನನ್ನು.

ಇಲ್ಲಿ ಭಗವಂತನನ್ನು ‘ಅಗ್ನಿಃ’ ಎನ್ನುವ ನಾಮದಿಂದ ಸಂಬೋಧಿಸಿದ್ದಾರೆ. ಇದು ಹಿಂದಿನ ಶ್ಲೋಕದಲ್ಲಿ ಹೇಳಿರುವ ‘ಅದಿತಿ’ ಎನ್ನುವ ಅರ್ಥವನ್ನೂ ಕೊಡುತ್ತದೆ. ಅಗ್ನಿ ಎಂದರೆ : ಎಲ್ಲಕ್ಕಿಂತ ಎತ್ತರದಲ್ಲಿರುವವನು, ಎಲ್ಲಕ್ಕಿಂತ ಮೊದಲು ಪೂಜಿಸಲ್ಪಡುವವನು, ಎಲ್ಲಕ್ಕಿಂತ ಎತ್ತರಕ್ಕೆ ನಮ್ಮನ್ನು ಕೊಂಡೊಯ್ಯುವವನು, ಇಂದ್ರಿಯಗಳನ್ನು ನಿಯಂತ್ರಿಸುವವನು(ಅಗನಿ), ಚಲಿಸಲಾಗದ ಇಡೀ ವಿಶ್ವಕ್ಕೆ ಚಾಲನ ಶಕ್ತಿ ಕೊಟ್ಟು ನಡೆಸುವವನು, ಎಲ್ಲಕ್ಕಿಂತ ಮೊದಲಿನವನು, ಇತ್ಯಾದಿ. “ನೀನು ಯಾವುದನ್ನು ತಿಳಿಯಬೇಕು ಎಂದು ಪ್ರಶ್ನೆ ಹಾಕಿದೆಯೋ ಆ ಭಗವದ್ ತತ್ವ ಇದೇ” ಎನ್ನುತ್ತಾನೆ ಯಮ.

ಯತಶ್ಚೋದೇತಿ ಸೂರ್ಯೋಽಸ್ತಂ ಯತ್ರ ಚ ಗಚ್ಛತಿ
ತಂ ದೇವಾಃ ಸರ್ವೇ ಅರ್ಪಿತಾಸ್ತದು ನಾತ್ಯೇತಿ ಕಶ್ಚನ ಏತದ್ವೈ ತತ್

ಹಿಂದಿನ ಶ್ಲೋಕದಲ್ಲಿ ‘ಮನುಷ್ಯ’ ಎನ್ನುವ ಪದವನ್ನು ಬಳಸಿರುವುದನ್ನು ನೋಡಿದ್ದೇವೆ. ಈ ಹಿಂದೆ ವಿವರಿಸಿದಂತೆ ಇಲ್ಲಿ ಮನುಷ್ಯರು ಎಂದರೆ ಮನನದಿಂದ ಭಗವಂತನನ್ನು ತಿಳಿದವರು. ಆದ್ದರಿಂದ ಭಗವಂತ ದೇವತೆಗಳು, ಮಾನವರು, ಎಲ್ಲರಿಂದಲೂ ಸ್ತುತ್ಯನಾದವನು. ಇಲ್ಲಿ ನಮಗೆ “ಏಕೆ ದೇವತೆಗಳು ಭಗವಂತನನ್ನು ಸ್ತೋತ್ರ ಮಾಡುತ್ತಾರೆ” ಎನ್ನುವ ಪ್ರಶ್ನೆ ಬರಬಹುದು. ಈ ಪ್ರಶ್ನೆಗೆ ಉತ್ತರ ರೂಪವಾಗಿ ಯಮ ತನ್ನ ತಂದೆಯಾದ ಸೂರ್ಯನನ್ನು ದೃಷ್ಟಾಂತವಾಗಿ ಬಳಸಿ, ಭಗವಂತನ ಮಹತ್ವವನ್ನು ವಿವರಿಸಿದ್ದಾನೆ.
ನಾವು ಪ್ರತೀದಿನ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಾಣುತ್ತೇವೆ. ಯಾರು ಈ ಪ್ರಪಂಚಕ್ಕೆ ಇಂತಹ ನಿರ್ದಿಷ್ಟ ಚಲನೆ ಕೊಟ್ಟವರು?  ಗ್ರಹ-ಗೋಲಗಳು ಇಷ್ಟೊಂದು  ಗಣಿತಬದ್ಧವಾಗಿ ಚಲಿಸುವಂತೆ ವ್ಯವಸ್ಥೆ ಮಾಡಿದವನು ಯಾರು? ಅವನೇ ಸರ್ವ ನಿಯಾಮಕ ಭಗವಂತ. ಪುರುಷಸೂಕ್ತದಲ್ಲಿ ಹೇಳುವಂತೆ: ಚಕ್ಷೋಃ ಸೂರ್ಯೋ ಅಜಾಯತ(೧೩)- ಅಂದರೆ  ಸೃಷ್ಟಿ ಕಾಲದಲ್ಲಿ ಸೂರ್ಯ ಭಗವಂತನ ಕಣ್ಣಿನಿಂದ ಹುಟ್ಟಿದ. ಅದೇ ರೀತಿ ಪ್ರಳಯ ಕಾಲದಲ್ಲಿ ಆತ ಭಗವಂತನ ಉದರವನ್ನು ಸೇರುತ್ತಾನೆ. ಕೇವಲ ಸೂರ್ಯನಷ್ಟೇ ಅಲ್ಲ, ಸಮಸ್ತ ದೇವತೆಗಳೂ ಕೂಡ ಭಗವಂತನ ನಿಯತಿಗೊಳಪಟ್ಟಿದ್ದಾರೆ. ಆತನ ನಿಯತಿಯನ್ನು ಯಾರೂ ಮೀರಲು ಸಾಧ್ಯವಿಲ್ಲ. “ಈ ವಿಶ್ವದ ಚಲನೆಗೆ ಯಾರು ಕಾರಣನೋ, ಎಲ್ಲಾ ದೇವತೆಗಳು ಯಾರನ್ನು ಆಶ್ರಯಿಸಿಕೊಂಡಿದ್ದಾರೋ, ಅವನೇ ನೀನು ತಿಳಿಯಲು ಬಯಸಿರುವ ಪರತತ್ವ” ಎನ್ನುತ್ತಾನೆ ಯಮ.

Saturday, July 21, 2012

Kathopanishad in Kannada Chapter-02 Canto-01 Shloka-04-07


ಸ್ವಪ್ನಾಂತಂ ಜಾಗರಿತಾಂತಂ ಚೋಭೌ ಯೇನಾನುಪಶ್ಯತಿ
ಮಹಾಂತಂ ವಿಭುಮಾತ್ಮಾನಂ ಮತ್ವಾ ಧೀರೋ ನ ಶೋಚತಿ

ಎಚ್ಚರ, ಕನಸು ಮತ್ತು ಎಚ್ಚರ-ಕನಸಿನ ಉಭಯಸ್ಥಿತಿ, ಈ ಎಲ್ಲಾ ಅವಸ್ಥೆಗಳೂ ಭಗವದಧೀನ. ಈ ವಿಶ್ವದಲ್ಲಿನ ಕೋಟಿ-ಕೋಟಿ ಜೀವಗಳ ಅವಸ್ಥೆಯನ್ನು ನಿಯಂತ್ರಿಸುವವ ಒಬ್ಬನೇ ಒಬ್ಬ ಭಗವಂತ. ಈ ರೀತಿ ಎಲ್ಲವನ್ನೂ ನಿಯಂತ್ರಿಸಬೇಕಾದರೆ ಆತ ಎಲ್ಲಾ ಕಡೆ ಇರಬೇಕು ಮತ್ತು ಎಲ್ಲರಿಗಿಂತ ಸಮರ್ಥನಾಗಿರಬೇಕು.  ಅದಕ್ಕಾಗಿ ಯಮ ಇಲ್ಲಿ ಭಗವಂತನನ್ನು “ಮಹಾಂತಂ ವಿಭುಃ” ಎಂದು ಸಂಬೋಧಿಸಿದ್ದಾನೆ. ಸರ್ವಸಮರ್ಥನೂ, ಸರ್ವೋತ್ಕೃಷ್ಟನೂ, ಸರ್ವವ್ಯಾಪಕನೂ ಆಗಿರುವ ಇಂತಹ ಆತ್ಮತತ್ವ ಭಗವಂತನನ್ನು ಯಾರು ತಿಳಿದುಕೊಳ್ಳುತ್ತಾನೋ, ಅವನು ಎಂದೂ ಜೀವನದಲ್ಲಿ ದುಃಖಕ್ಕೊಳಗಾಗುವುದಿಲ್ಲ. ಅವನಿಗೆ ಜೀವನದ ಎಲ್ಲಾ ಸಮಸ್ಯೆಯನ್ನು ಎದುರಿಸುವ ಧೈರ್ಯ ಬರುತ್ತದೆ. ಭಗವಂತ ದುಃಖ ಕೊಟ್ಟರೂ ಕೂಡಾ ಅದು ನನ್ನ ಉದ್ಧಾರಕ್ಕಾಗಿ ಎನ್ನುವ ಮನವರಿಕೆ(Conviction) ಆತನಲ್ಲಿರುತ್ತದೆ. ಭಗವಂತನ ಮೇಲೆ ಭರವಸೆ ಇರುವುದರಿಂದ ಅವನು ಎಂದೂ ದುಃಖಿತನಾಗುವುದಿಲ್ಲ.  

ಯ ಇಮಂ ಮಧ್ವದಂ ವೇದ ಆತ್ಮಾನಂ ಜೀವಮಂತಿಕಾತ್
ಈಶಾನಂ ಭೂತಭವ್ಯಸ್ಯ ನ ತತೋ ವಿಜುಗುಪ್ಸತೇ ಏತದ್ವೈ ತತ್

ಭಗವಂತ ನಮ್ಮ ಅಂತರ್ಯಾಮಿಯಾಗಿ ನಮ್ಮನ್ನು ನಿಯಮಿಸುವ ಸ್ವಾಮಿ. ಜೀವದ ಸಮೀಪದಲ್ಲೇ ಭಗವಂತನಿದ್ದರೂ ಸಹ ಆತನಿಗೆ ಯಾವುದೇ ದುಃಖದ ಲೇಪವಿಲ್ಲ. ಆತ ಎಲ್ಲಾ ಇಂದ್ರಿಯಗಳಲ್ಲಿದ್ದು, ಸದಾ ಆನಂದ ರಸವನ್ನು(ಮಧು) ಅನುಭವಿಸುತ್ತಿರುತ್ತಾನೆ. ಭಗವಂತ ಹಿಂದೆ, ಇಂದು ಹಾಗೂ ಮುಂದೆ ಎಂದೆಂದಿಗೂ ಜೀವದ ಜೊತೆಗೇ ನಿತ್ಯಸಂಗಾತಿಯಾಗಿದ್ದು, ಜೀವನನ್ನು ರಕ್ಷಿಸುತ್ತಿರುತ್ತಾನೆ. ಈ ಸತ್ಯವನ್ನು ತಿಳಿದವನು ತನ್ನನ್ನು ತಾನು ಮುಚ್ಚಿಡಲು(ಜಿಗುಪ್ಸ) ಬಯಸುವುದಿಲ್ಲ.  ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕು ಎಂದು ಭಯದಿಂದ ಬದುಕುವುದು ಅಜ್ಞಾನ. ಭಗವಂತ ಸದಾ ನನ್ನೊಂದಿಗಿದ್ದಾನೆ, ಅವನು ನನ್ನನ್ನು ರಕ್ಷಿಸುತ್ತಾನೆ ಎನ್ನುವ ಸತ್ಯ ತಿಳಿದಾಗ ಯಾವ ಭಯವೂ ಇಲ್ಲ. “ಯಾವ ಮುಕ್ತಿ ನಿಯಾಮಕ ಭಗವಂತನ ಬಗ್ಗೆ ನೀನು ತಿಳಿಯ ಬಯಸಿದ್ದೀಯೋ-ಅವನೇ ಇವನು” ಎನ್ನುತ್ತಾನೆ ಯಮ.

ಯಃ ಪೂರ್ವಂ ತಪಸೋ ಜಾತಮದ್ಭ್ಯಃ ಪೂರ್ವಮಜಾಯತ
ಗುಹಾಂ ಪ್ರವಿಶ್ಯ ತಿಷ್ಠಂತಂ ಯೋ ಭೂತೇಭಿರ್ವ್ಯಪಶ್ಯತ ಏತದ್ವೈ ತತ್

ಸೃಷ್ಟಿಯ ಆದಿಯಲ್ಲಿ,  ಪಂಚಭೂತಗಳ ಸೃಷ್ಟಿಗಿಂತಲೂ ಮೊದಲು, ಪಂಚಭೂತಗಳ ಅಭಿಮಾನಿ ಶಿವನಿಗಿಂತಲೂ ಮೊದಲು, ಜೀವಜಾತದಲ್ಲೇ ಸರ್ವಶ್ರೇಷ್ಠನಾದ ಚತುರ್ಮುಖನನ್ನು ಸೃಷ್ಟಿ ಮಾಡಿದವ ಆ ಭಗವಂತ. [ಉಪನಿಷತ್ತು ಮತ್ತು ಪುರಾಣಗಳಲ್ಲಿ ಶಿವನನ್ನು ತಪಸ್ಸು ಎಂದು ಕರೆಯುತ್ತಾರೆ]. ಭಗವಂತ ತಾನು ಸೃಷ್ಟಿಮಾಡಿದ ಸರ್ವ ಜೀವಜಾತಗಳ ಹೃದಯಗುಹೆಯಲ್ಲಿ ನೆಲೆಸಿದ. ಈ ರೀತಿ ನೆಲೆಸಿರುವ ಭಗವಂತ ತನ್ನನ್ನೇ ತಾನು ಕಾಣುತ್ತಾನೆ, ಆದರೆ ಇನ್ನೊಬ್ಬರಿಗೆ ಕಾಣಸಿಗುವುದಿಲ್ಲ.  “ಹೀಗೆ ಬ್ರಹ್ಮಾದಿ ದೇವತೆಗಳಿಂದ ಹಿಡಿದು, ಒಂದು ಹುಲ್ಲುಗರಿಯತನಕ ಸಮಸ್ತವನ್ನೂ ಸೃಷ್ಟಿಮಾಡಿ, ಜೀವದ ಹೃದಯಗುಹೆಯಲ್ಲಿ ಅಂತರ್ಯಾಮಿಯಾಗಿ ಪ್ರವೇಶಮಾಡಿ, ತನ್ನ ವೈಭವವನ್ನು ತಾನೇ ನೋಡುತ್ತಿರುವ ಭಗವಂತನೇ ನೀನು ಕೇಳಿರುವ ಪರತತ್ವ.” ಎನ್ನುತ್ತಾನೆ ಯಮ.

ಯಾ ಪ್ರಾಣೇನ ಸಂಭವತ್ಯದಿತಿರ್ದೇವತಾಮಯೀ
ಗುಹಾಂ ಪ್ರವಿಶ್ಯ ತಿಷ್ಠಂತೀಂ ಯಾ ಭೂತೇಭಿರ್ವ್ಯಜಾಯತ ಏತದ್ವೈ ತತ್

ಭಗವಂತ ಸೃಷ್ಟಿ ಮಾಡುವುದು ಮಾತ್ರವಲ್ಲ, ಸಂಹಾರ ಮಾಡುವವನೂ ಅವನೇ. ಇದು ಲೋಕ ರೂಢಿಗೂ ಭಗವಂತನಿಗೂ ಇರುವ ವ್ಯತ್ಯಾಸ. ಲೋಕದಲ್ಲಿ ನಾವು ನೆಟ್ಟ ಒಂದು ಗಿಡವನ್ನು ನಮ್ಮ ಕೈಯಾರೆ  ನಾಶ ಮಾಡಲು ನಮಗೆ ಇಷ್ಟವಾಗುವುದಿಲ್ಲ. ಆದರೆ ಭಗವಂತ ಯಾವುದೇ ಮೋಹವಿಲ್ಲದೆ ತಾನು ಸೃಷ್ಟಿಸಿದ್ದನ್ನು ಪ್ರಳಯ ಕಾಲದಲ್ಲಿ ತಾನೇ ನಾಶಮಾಡುತ್ತಾನೆ. ಇದಕ್ಕಾಗಿ ಇಲ್ಲಿ ಭಗವಂತನನ್ನು ‘ಅದಿತಿ’ ಎಂದು ಸ್ತ್ರೀ ರೂಪದಲ್ಲಿ ಹೇಳಿದ್ದಾರೆ.
ಅದಿತಿ ಎಂದರೆ ಎಲ್ಲವನ್ನೂ ತಿನ್ನುವವ ಎಂದರ್ಥ. ನಮ್ಮೊಳಗಿದ್ದು, ಸಮಸ್ತ ವಿಷಯಗಳನ್ನು ಅನುಭವಿಸುವವ ಮತ್ತು ಸಮಸ್ತ ವಿಶ್ವವನ್ನು ಸಂಹಾರ ಮಾಡುವ ಭಗವಂತ ‘ಅದಿತಿ’. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ-ಭಗವಂತನನ್ನು  ಸ್ತ್ರೀಲಿಂಗದಿಂದ ಸಂಬೋಧಿಸಿರುವುದು. ಲೋಕದಲ್ಲಿ ಕೆಲವೊಮ್ಮೆ ಪುಲ್ಲಿಂಗದಿಂದ ಹೆಣ್ಣನ್ನೂ, ಸ್ತ್ರೀಲಿಂಗದಿಂದ ಗಂಡನ್ನೂ ಸಂಬೋಧಿಸುತ್ತಾರೆ. ಉದಾಹರಣೆಗೆ ಸಂಸ್ಕೃತದಲ್ಲಿ  ಹೆಂಡತಿಯನ್ನು ‘ದಾರಾ’  ಎಂದು ಪುಲ್ಲಿಂಗ ಮತ್ತು ಬಹುವಚನದಿಂದ ಕರೆಯುತ್ತಾರೆ. ಇದು ಕೇವಲ ಶಬ್ದದ ಸ್ವಭಾವ ಮತ್ತು ವ್ಯಾಕರಣಕ್ಕೆ ಸಂಬಂಧಿಸಿದ ವಿಚಾರ. ಆದರೆ ಎಲ್ಲಾ ಲಿಂಗಗಳೂ ಸಾರ್ಥಕವಾಗುವುದು ಕೇವಲ ಭಗವಂತನಲ್ಲಿ ಮಾತ್ರ. ಏಕೆಂದರೆ ಭಗವಂತ ಪುರುಷರೂಪನೂ ಹೌದು, ಸ್ತ್ರೀ ರೂಪನೂ ಹೌದು. ಹಾಗಾಗಿ ಪುಲ್ಲಿಂಗ-ಸ್ತ್ರೀಲಿಂಗ ಶಬ್ದ ಅವನಲ್ಲಿ ಅನ್ವಯವಾಗುತ್ತದೆ. ಧನ್ವಂತರೀಯೂ ಅವನೇ, ಮೋಹಿನಿಯೂ ಅವನೇ. ಸ್ತ್ರೀಯರಲ್ಲಿ ಅಂತರ್ಯಾಮಿಯಾಗಿ ಬಿಂಬರೂಪದಲ್ಲಿ ಸ್ತ್ರೀರೂಪ, ಪುರುಷರಲ್ಲಿ ಅಂತರ್ಯಾಮಿಯಾಗಿ ಬಿಂಬರೂಪದಲ್ಲಿ  ಪುರುಷ ರೂಪನಾಗಿದ್ದಾನೆ ಭಗವಂತ.  ಇಲ್ಲಿ ‘ಅದಿತಿ’ ಎನ್ನುವ ಪದ ಸ್ತ್ರೀ ಲಿಂಗ. ಇದಕ್ಕೆ ಕಾರಣ ಭಗವಂತ ಸಂಹಾರ ಮಾಡಲು ಮಾಧ್ಯಮವಾಗಿ ಬಳಸುವುದು ತಾಯಿ ದುರ್ಗೆಯನ್ನು. ಸಂಹಾರಶಕ್ತಿಯಾಗಿ ದುರ್ಗೆಯಲ್ಲಿ ಸನ್ನಿಹಿತವಾದ ರೂಪವಾದ್ದರಿಂದ ಇಲ್ಲಿ ಸ್ತ್ರೀ ಲಿಂಗ ಬಳಕೆಯಾಗಿದೆ.
ಭಗವಂತನನ್ನು ನಪುಂಸಕ ಲಿಂಗದಿಂದಲೂ ವಾಚಿಸುತ್ತಾರೆ. ಅಂದರೆ ಭಗವಂತ ಸ್ತ್ರೀ-ಪುರುಷ ಅಲ್ಲದವನು ಎಂದರ್ಥವಲ್ಲ. ಸ್ತ್ರೀ-ಪುರುಷರಲ್ಲಿರುವ ಯಾವ ದೋಷವೂ ಭಗವಂತನಲ್ಲಿಲ್ಲ ಎನ್ನುವುದನ್ನು ನಪುಂಸಕ ವಾಚಕ ಪದ ಸೂಚಿಸುತ್ತದೆ. ಹೀಗೆ ಮೂರೂ ಲಿಂಗಗಳನ್ನು ಭಗವಂತನ ಪರವಾಗಿ ಮಾತ್ರ ಅನ್ವಯಿಸಬಹುದು. ಉದಾಹರಣೆಗೆ: ಗಾಯತ್ತ್ರಿ ಮಂತ್ರದಲ್ಲಿ ಸ್ತ್ರೀರೂಪದಲ್ಲಿ ಭಗವಂತನಿದ್ದಾನೆ. ಯಾವುದು ಸ್ತ್ರೀಲಿಂಗ ಶಬ್ದವಿದೆಯೋ ಅದು ಭಗವಂತನ ಸ್ತ್ರೀರೂಪ, ಪುಲ್ಲಿಂಗ ಶಬ್ದ ಭಗವಂತನ ಪುರುಷರೂಪ. ಇದನ್ನು ಸ್ಪಷ್ಟಪಡಿಸುವುದಕ್ಕೊಸ್ಕರವೇ ಹಿಂದಿನ ಶ್ಲೋಕದಲ್ಲಿ “ಗುಹಾಂ ಪ್ರವಿಶ್ಯ ತಿಷ್ಠಂತಂ” ಎಂದು ಪುಲ್ಲಿಂಗದಲ್ಲಿ ಹೇಳಿ, ಇಲ್ಲಿ  “ಗುಹಾಂ ಪ್ರವಿಶ್ಯ ತಿಷ್ಠಂತೀಂ” ಎಂದು ಸ್ತ್ರೀಲಿಂಗ ಪ್ರಯೋಗಿಸಿ ಹೇಳಿದ್ದಾರೆ.
ಯಮ ಹೇಳುತ್ತಾನೆ: “ಸೃಷ್ಟಿ –ಸಂಹಾರದಲ್ಲಿ ಭಗವಂತನ ನಿತ್ಯ ಸಂಗಾತಿಯಾಗಿ  ಪ್ರಾಣದೇವರಿರುತ್ತಾರೆ” ಎಂದು. ವಿಷ್ಣು ಸಹಸ್ರನಾಮದಲ್ಲಿ ಭಗವಂತನನ್ನು ವಾಯು ವಾಹನಃ ಎಂದು ಕರೆದಿರುವುದು ಇದಕ್ಕಾಗಿ. ಪ್ರಾಣ ದೇವರು ಭಗವಂತನ ಸಾರಥಿ ಇದ್ದಂತೆ.
ಸ್ತ್ರೀಯರಲ್ಲಿ ಸ್ತ್ರೀರೂಪದಲ್ಲಿ,  ಪುರುಷರಲ್ಲಿ ಪುರುಷ ರೂಪದಲ್ಲಿರುವ ಭಗವಂತ, ಪಂಚಭೂತಗಳನ್ನು ಸೃಷ್ಟಿ ಮಾಡಿ, ಪಂಚಭೂತಾತ್ಮಕವಾದ ಪ್ರಪಂಚದಲ್ಲಿ ತಾನು ಅವತಾರ ಮಾಡಿ, ನಾನಾ ವಿಧದ ಲೀಲೆಗಳನ್ನು ತೋರಿಸುತ್ತಾನೆ. ಯಾವುದು ಭೂಮಿಯಲ್ಲಿ ಅವತರಿಸಿ ನಾನಾ ಲೀಲೆಗಳನ್ನು ತೋರಿಸುತ್ತದೋ, ಯಾವುದು ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣವೋ, ಯಾವುದು ಸ್ತ್ರೀರೂಪದಲ್ಲಿ ಸ್ತ್ರೀಯರಲ್ಲಿ, ಪುರುಷರೂಪದಲ್ಲಿ ಪುರುಷರೊಳಗೆ ಅಂತರ್ಯಾಮಿಯಾಗಿದೆಯೋ, ಅದೇ ತತ್ವ ಮುಕ್ತಿ ನಿಯಾಮಕವಾದುದ್ದು. “ನಿನ್ನ ಪ್ರಶ್ನೆಗೆ ಉತ್ತರ ರೂಪವಾದ ಭಗವದ್ ತತ್ವ ಇದೇ” ಎನ್ನುತ್ತಾನೆ ಯಮ.

Wednesday, July 18, 2012

Kathopanishad in Kannada Chapter-02 Canto-01 Shloka-03

             ಯ ಏಷ ಸುಪ್ತೇಷು ಜಾಗರ್ತಿ ಕಾಮಂ ಕಾಮಂ ಪುರುಷೋ ನಿರ್ಮಿಮಾಣಃ
              ತದೇವ ಶುಕ್ರಂ ತದ್ಬ್ರಹ್ಮ ತದೇವಾಮೃತಮುಚ್ಯತೇ
              ತಸ್ಮಿಂಲ್ಲೋಕಾಃ ಶ್ರಿತಾಃ ಸರ್ವೇ ತದು ನಾತ್ಯೇತಿ ಕಶ್ಚನ ಏತದ್ವೈ ತತ್ ೨-೨-೮

ಭಗವಂತನ ಕುರಿತು ವಿವರಿಸುತ್ತಾ ಯಮ ಹೇಳುತ್ತಾನೆ: “ಭಗವಂತ ಎಲ್ಲರೂ ಮಲಗಿದ್ದಾಗಲೂ ತಾನು ಎಚ್ಚರವಾಗಿದ್ದು, ಪ್ರಪಂಚದ ಎಲ್ಲಾ ಕಡೆ ಇರುವ ಎಲ್ಲಾ ಜೀವರನ್ನು ನಿಯಂತ್ರಿಸುತ್ತಿರುತ್ತಾನೆ” ಎಂದು. ಎಲ್ಲರೂ ನಿದ್ರಿಸುವ ಸಮಯ ಪ್ರಳಯ ಕಾಲ. ಪ್ರಳಯ ಕಾಲದಲ್ಲೂ ಕೂಡಾ ಎಚ್ಚರವಾಗಿರುವ ಭಗವಂತ, ನಿರಂತರ ಸೃಷ್ಟಿ ಕ್ರಿಯೆಯಲ್ಲಿ ತೊಡಗಿ ಎಂದೂ ನಿದ್ದೆ ಮಾಡದ ನಿತ್ಯ ಚೈತನ್ಯ.   ಇಲ್ಲಿ ಯಮ ಭಗವಂತನನ್ನು ‘ಪುರುಷಃ’ ಎಂದು ಸಂಬೋಧಿಸಿದ್ದಾನೆ. ಶರೀರ ಎನ್ನುವ ಪುರದಲ್ಲಿರುವವ, ಬ್ರಹ್ಮಾಂಡವೆನ್ನುವ ಪುರದಲ್ಲಿರುವವ, ಇಡೀ ವಿಶ್ವವನ್ನು ವ್ಯಾಪಿಸಿ ನಿಂತವ-ಪುರುಷಃ ನಾಮಕ ಭಗವಂತ.
ದುಃಖವಿಲ್ಲದ, ಯಾವ ದೋಷದ ಸ್ಪರ್ಶವೂ ಇಲ್ಲದ ವಸ್ತು ಆ ಭಗವಂತನೊಬ್ಬನೇ. “ಇಂತಹ ಭಗವಂತನನ್ನು ‘ಬ್ರಹ್ಮ’ ಎಂದು ಕರೆಯುತ್ತಾರೆ” ಎನ್ನುತ್ತಾನೆ ಯಮ.  ಬ್ರಹ್ಮ ಎಂದರೆ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣವಾದುದ್ದು. ಗುಣದಿಂದ, ಕಾಲದಿಂದ, ದೇಶದಿಂದ ಪರಿಪೂರ್ಣನಾದ ಭಗವಂತ ‘ಬ್ರಹ್ಮಃ’. 
ನಾಶರಹಿತ ಆನಂದಮಯ ಆ ಭಗವಂತನೊಬ್ಬನೇ. ಇಡೀ ಪ್ರಪಂಚದಲ್ಲಿ ಚತುರ್ಮುಖನಿಂದ ಹಿಡಿದು ಒಂದು ಹುಲ್ಲುಗರಿಯ ತನಕ ಸಮಸ್ತ ಜೀವಜಾತವೂ ಕೂಡ ಆ ಅನಾಧಿ ಅನಂತವಾದ ನಿತ್ಯ-ತತ್ವವನ್ನು ಆಶ್ರಯಿಸಿಕೊಂಡಿವೆ. ಯಾರೂ ಕೂಡಾ ಭಗವಂತನನ್ನು ಮೀರಿ ಹೋಗುವುದು ಸಾಧ್ಯವಿಲ್ಲ. ಇಡೀ ವಿಶ್ವ ಭಗವಂತನಿಂದ ನಿಯತವಾಗಿದೆ ಮತ್ತು ಅವನ ಅಧೀನದಲ್ಲಿದೆ. “ನೀನು ತಿಳಿಯಬೇಕು ಎಂದಿರುವ ಬ್ರಹ್ಮತತ್ವ ಇವನೇ” ಎನ್ನುತ್ತಾನೆ ಯಮ.

ಯೇನ ರೂಪಂ ರಸಂ ಗಂಧಂ ಶಬ್ದಾನ್ ಸ್ಪರ್ಶಾಂಶ್ಚ ಮೈಥುನಾನ್
ಏತೇನೈವ ವಿಜಾನಾತಿ ಕಿಮತ್ರ ಪರಿಶಿಷ್ಯತೇ ಏತದ್ವೈ ತತ್            

ಮುಂದುವರಿದು ಯಮ ಹೇಳುತ್ತಾನೆ: ನಿನ್ನ ಒಂದೊಂದು ಇಂದ್ರಿಯಗಳ ಹಿಂದಿರುವ ಶಕ್ತಿಯ ಬಗ್ಗೆ ಯೋಚಿಸು. ಆಗ ಅದು ಅನಂತಶಕ್ತ ಭಗವಂತನ ಲೀಲೆ ಎಂದು ತಿಳಿಯುತ್ತದೆ” ಎಂದು. ನಮ್ಮ ಕಣ್ಣು ರೂಪವನ್ನು ಗ್ರಹಿಸುವ ಇಂದ್ರಿಯ. ಪ್ರಪಂಚದಲ್ಲಿರುವ ಅನಂತ ರೂಪವನ್ನು  ಬೇರೆಬೇರೆಯಾಗಿ ಪ್ರತ್ಯೇಕಿಸಿ ಗ್ರಹಿಸುವ ಶಕ್ತಿ ಕಣ್ಣಿಗಿದೆ. ನಾಲಿಗೆ ರಸವನ್ನು ಗ್ರಹಿಸುವ ಇಂದ್ರಿಯ. ಮೇಲ್ನೋಟದಲ್ಲಿ ನೋಡಿದರೆ ಒಂದು ಪುಟ್ಟ ಮಾಂಸದ ತುಂಡು. ಆದರೆ ಈ ನಾಲಿಗೆಯ ಹಿಂದಿರುವ ರಸಗ್ರಹಣ ಶಕ್ತಿ ಅದ್ಭುತವಾದುದ್ದು. ಒಂದೊಂದು ರಸವನ್ನೂ ಪ್ರತ್ಯೇಕಿಸಿ ಗ್ರಹಿಸುವ ಶಕ್ತಿ ಈ ನಾಲಿಗೆಗಿದೆ. ಮೂಗು ಗಂಧವನ್ನು ಗ್ರಹಿಸುವ ಇಂದ್ರಿಯ. ಪರಿಮಳಗಳಲ್ಲಿ ಅನೇಕಾನೇಕ ವಿಧ. ಈ ಪ್ರಪಂಚದಲ್ಲಿ ವಿಧವಿಧವಾದ ಹೂವುಗಳಿವೆ ಮತ್ತು ಅವುಗಳಿಗೆ ಬಗೆಬಗೆಯ ಕಂಪು. ಎಲ್ಲವನ್ನೂ ಬೇರೆಯಾಗಿ ಗ್ರಹಿಸುವ ಶಕ್ತಿ ನಮ್ಮ ಮೂಗಿಗಿದೆ.
ಕಣ್ಣು, ನಾಲಿಗೆ ಮತ್ತು ಮೂಗಿನ ಬಗ್ಗೆ ಹೇಳಿದ ಮೇಲೆ ಇಲ್ಲಿ ಕಿವಿಯ ಬಗ್ಗೆ ಹೇಳುವಾಗ ‘ಶಬ್ದಗಳು’ ಎಂದು ಬಹುವಚನದಲ್ಲಿ ಹೇಳಿದ್ದಾರೆ. ಕಾರಣ ಏನೆಂದರೆ ಪದ ಒಂದೇ ಆದರೂ ಕೂಡಾ ಅದನ್ನು ಉಚ್ಛರಿಸಿದಾಗ ಹೊರಹೊಮ್ಮುವ ಶಬ್ದದ ಬಗೆ ಒಂದೇ ಅಲ್ಲ. ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಒಂದೇ ಪದವನ್ನು ಅನೇಕ ರೀತಿಯಲ್ಲಿ ಉಚ್ಛರಿಸುತ್ತಾರೆ. ಇದನ್ನು ಕಿವಿ ಪ್ರತ್ಯೇಕಿಸಿ ಗುರುತಿಸಬಲ್ಲುದು.
ಶಬ್ದದ ನಂತರ ಸ್ಪರ್ಶ. ನಮ್ಮ ಚರ್ಮ ಪ್ರತಿಯೊಂದು ಸ್ಪರ್ಷವನ್ನು ಬೇರೆಬೇರೆಯಾಗಿ ಗ್ರಹಿಸಿ ನಮಗೆ ಆ ಅನುಭವವನ್ನು ಕೊಡುತ್ತದೆ. ಸ್ಪರ್ಶದ ಪರಾಕಾಷ್ಠೆ ಗಂಡು ಹೆಣ್ಣಿನ ಪರಸ್ಪರ ಸ್ಪರ್ಶಸುಖ. ಇದು ಇಂದ್ರಿಯಗಳಲ್ಲೇ ಅತ್ಯಂತ ಗರಿಷ್ಠ ಅನುಭವ ಕೊಡುವಂತಹದ್ದು. ಆದ್ದರಿಂದ ಅದನ್ನು ಸ್ಪರ್ಶದಿಂದ ಪ್ರತ್ಯೇಕಿಸಿ ‘ಮೈಥುನ’ ಎಂದು ವಿಶೇಷವಾಗಿ ಇಲ್ಲಿ ಉಲ್ಲೇಖಿಸಿದ್ದಾರೆ.
ಯಾರಿಂದ ಈ ಇಂದ್ರಿಯಗಳು ನಮಗೆ ಅನಂತ ಅನುಭವಗಳನ್ನು ಕೊಡುತ್ತವೆ? ಎಲ್ಲಿಂದ ಬಂತು ಈ ಇಂದ್ರಿಯಗಳಿಗೆ ಈ ಶಕ್ತಿ? ಇವೆಲ್ಲವೂ ಆ ಭಗವಂತನ ಕೊಡುಗೆ. ಯಾರು ಎಲ್ಲರೂ ನಿದ್ರಿಸುವಾಗ ಎಚ್ಚರವಾಗಿರುತ್ತಾನೋ ಅದೇ ಭಗವಂತನೇ ಇಲ್ಲಿ ಇಂದ್ರಿಯಗಳ ಮೂಲಕ ಅನುಭವವನ್ನು ಕೊಡುತ್ತಾನೆ. ಅವನೇ ಮೋಕ್ಷದಲ್ಲಿ ನಮ್ಮ ಸ್ವರೂಪೇಂದ್ರಿಯಗಳ ಮೂಲಕ ದುಃಖದ ಸ್ಪರ್ಶವೇ ಇಲ್ಲದ ಆನಂದದ ಅನುಭವವನ್ನು ಕೊಡುತ್ತಾನೆ.  ಜೀವ ಸಂಸಾರ ಬಂಧವನ್ನು ಕಳಚಿಕೊಂಡು ಹೋದ ಮೇಲೆ ಜೀವನೊಂದಿಗೆ ಉಳಿಯುವವನು ‘ಆ ಭಗವಂತ’.

Monday, July 16, 2012

Kathopanishad in Kannada Chapter-02 Canto-01 Shloka 01-02


ಅಧ್ಯಾಯ-೨

ವಲ್ಲೀ-೧

ಪರಾಂಚಿ ಖಾನಿ ವ್ಯತೃಣತ್ ಸ್ವಯಂಭೂಸ್ತಸ್ಮಾತ್ಪರಾಙ್ಪಶ್ಯತಿ ನಾಂತರಾತ್ಮನ್
ಕಶ್ಚಿದ್ಧೀರಃ ಪ್ರತ್ಯಗಾತ್ಮಾನಮೈಕ್ಷದಾವೃತ್ತಚಕ್ಷುರಮೃತತ್ವಮಿಚ್ಛನ್     

ಸ್ವತಂತ್ರವಾಗಿ/ತನ್ನಿಚ್ಛೆಯಂತೆ ತಾನಿರುವ ಭಗವಂತ(ಸ್ವಯಂಭೂಃ), ಮೊದಲು ಇಂದ್ರಿಯಗಳನ್ನು ಸೃಷ್ಟಿ ಮಾಡಿದನಂತೆ. ಹೀಗೆ ಸೃಷ್ಟಿ ಮಾಡುವಾಗ ಆತ ಬಹಳ ತಿರಸ್ಕಾರದಿಂದ ಬಹಿರ್ಮುಖವಾಗಿ ಸೃಷ್ಟಿಸಿದನಂತೆ. ಈ ಕಾರಣದಿಂದಾಗಿ ನಮ್ಮ ಯಾವ ಇಂದ್ರಿಯಗಳೂ ಅಂತರಂಗದ ಸತ್ಯವನ್ನು ಗ್ರಹಿಸಲಾರದಾದವು. ಭಗವಂತ ಇಂದ್ರಿಯಗಳನ್ನು ಈ ರೀತಿ ಸೃಷ್ಟಿ ಮಾಡಲು ಕಾರಣವೇನೆಂದರೆ: ಯಾರಿಗೆ ನಿಜವಾದ ಅರ್ಹತೆ ಇದೆಯೋ ಅವರಷ್ಟೇ ಅಂತರಂಗವನ್ನು ತಿಳಿಯಬೇಕು ಎನ್ನುವುದು. ಧೀರನಾದವನಿಗೆ ಅಂತರಂಗವನ್ನು ಕಾಣುವ ಅವಕಾಶವನ್ನು ಭಗವಂತ ಕಲ್ಪಿಸಿದ್ದಾನೆ. ಈ ಹಿಂದೆ ಹೇಳಿದಂತೆ ಭಗವಂತನತ್ತ ಪಯಣ ಮಾಡುವ ಮಾರ್ಗ ಬಹಳ ದುರ್ಗಮ. ಅದು ಕತ್ತಿಯ ಅಲುಗಿನ ನಡೆ. ಅರಿವಿನ ಹಸಿವುಳ್ಳವರಲ್ಲಿ, ಅಧಮ್ಯ ಬಯಕೆಯುಳ್ಳವರಲ್ಲಿ, ಏನೇ ಬರಲಿ ಭಗವಂತನನ್ನು ಸೇರಿಯೇ ಸೇರುತ್ತೇನೆ ಎನ್ನುವ ಛಲ ಉಳ್ಳವರಲ್ಲಿ ಯಾರೋ ಒಬ್ಬ(ಧೀರ) ಹಠದಿಂದ ಮುಂದುವರಿದು ತನ್ನ ಅಂತರಾತ್ಮನಾದ ಭಗವಂತನನ್ನು ಕಾಣುತ್ತಾನೆ.
ಭಗವಂತನನ್ನು ಕಾಣಬೇಕಾದರೆ ಮೊದಲು ನಾವು ನಮ್ಮ ಹೊರಗಣ್ಣನ್ನು ಮುಚ್ಚಿ ನಮ್ಮ ಒಳಗಣ್ಣನ್ನು ತೆರೆಯಬೇಕು. ಇಲ್ಲಿ ಮರಳಿ ಹುಟ್ಟಬಾರದು ಎನ್ನುವ ಅಧಮ್ಯ ಬಯಕೆ ಬಹಳ ಮುಖ್ಯ. ಜ್ಞಾನದಿಂದ ಬರುವ ಸ್ವರೂಪಾನಂದವನ್ನು ಬಯಸುವವನು ಅಂತರ್ಮುಖನಾಗಿ ಕುಳಿತು ತನ್ನೊಳಗಿರುವ ಭಗವಂತನನ್ನು ಕಾಣಬಲ್ಲ. ಈ ಶ್ಲೋಕದಲ್ಲಿ ಮುಖ್ಯವಾಗಿ ಮೂರು ವಿಚಾರಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ. (೧) ನಮ್ಮ ಬಾಹ್ಯ ಇಂದ್ರಿಯಗಳಿಂದ ದೇವರನ್ನು ಒಲಿಸಿಕೊಳ್ಳುವ ಪ್ರಯತ್ನ ವ್ಯರ್ಥ. (೨) ಭಗವಂತನನ್ನು ಕಾಣಬೇಕಾದರೆ ಹೊರಗಿನ ಇಂದ್ರಿಯಗಳನ್ನು ಮುಚ್ಚಿ ಒಳಗಿನ ಇಂದ್ರಿಯವನ್ನು  ತೆರೆಯಬೇಕು. (೩) ಜ್ಞಾನದ ಹಸಿವು ಮತ್ತು ಸಾಧನೆಯ ಹಾದಿಯಲ್ಲಿ ಯಾವುದೇ ವಿಘ್ನ ಬಂದರೂ, ವಿಚಲಿತನಾಗದೇ ಮುನ್ನೆಡೆಯುವ ಧೈರ್ಯ ನಮ್ಮಲ್ಲಿರಬೇಕು.
ಇಲ್ಲಿ ನಮಗೊಂದು ಪ್ರಶ್ನೆ ಬರಬಹುದು. ಸಾಧನೆಯ ಹಾದಿಯಲ್ಲಿ ಅನೇಕ ವಿಘ್ನಗಳು ಏಕೆ ಬರುತ್ತವೆ ಎಂದು. ಸಾಧನೆಯ ಹಾದಿಯಲ್ಲಿ ಸಾಮಾನ್ಯವಾಗಿ ವಿಘ್ನ ತಂದೊಡ್ಡುವವರು ದೇವತೆಗಳು! ಇದು ಯಾವುದೋ ಹಗೆತನದಿಂದಲ್ಲ,  ಕೇವಲ ನಮ್ಮ ಪರೀಕ್ಷೆಗಾಗಿ ಅವರು ತಂದೊಡ್ಡುವ ಸವಾಲುಗಳಿವು. ನಾವು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂದೆ ಸಾಗಬೇಕು ಎನ್ನುವುದು ಅವರ ಹಾರೈಕೆಯಾಗಿರುತ್ತದೆ. ಇದಕ್ಕಾಗಿ ನಾವು ಅಧ್ಯಾತ್ಮ ಸಾಧನೆಯಲ್ಲಿ ಎಂದೂ ಧೈರ್ಯಗೆಡಬಾರದು. ಇದಕ್ಕೆ ಉತ್ತಮ ಉದಾಹರಣೆ ಧ್ರುವ. ಐದು ವರ್ಷದ ಮಗು ಭಗವಂತನನ್ನು ಕಾಣಬೇಕು ಎನ್ನುವ ಅಧಮ್ಯ ಬಯಕೆಯಿಂದ ಕಾಡಿನಲ್ಲಿ ತಪಸ್ಸನ್ನಾಚರಿಸುತ್ತಿರುವಾಗ ಆತನಿಗೆ ಬ್ರಹ್ಮರಾಕ್ಷಸರಂತಹ ಭೀಕರ ದೃಶ್ಯ ಎದುರಾಗುತ್ತದೆ. ಆದರೆ ಆತ ವಿಚಲಿತನಾಗಲಿಲ್ಲ. ಧೈರ್ಯದಿಂದ ಹಠ ಹಿಡಿದು ಕುಳಿತಿದ್ದರಿಂದ ಆತನಿಗೆ  ಭಗವಂತನ ದರ್ಶನವಾಯಿತು. ಹೀಗೆ ನಮ್ಮ ಮುಂದೆ ಎಂತಹ ಪರೀಕ್ಷೆ ಎದುರಾದರೂ ಕೂಡಾ,  ನಾವು ಕಂಗೆಡದೆ ಮುಂದೆ ಸಾಗಿದರೆ ಆಗ ಭಗವಂತನ ದರ್ಶನ ಸಾಧ್ಯ.         

ಪರಾಚಃ ಕಾಮಾನನುಯಂತಿ ಬಾಲಾ  ಸ್ತೇ ಮೃತ್ಯೋರ್ಯಂತಿ ವಿತತಸ್ಯ ಪಾಶಮ್
ಅಥ ಧೀರಾ ಅಮೃತತ್ವಂ ವಿದಿತ್ವಾ ಧ್ರುವಮಧ್ರುವೇಷ್ವಿಹ ನ ಪ್ರಾರ್ಥಯಂತೇ

ಸಾಧನೆಯ ಹಾದಿಯಲ್ಲಿ ಬಾಲಿಷರು ಬಹಿರ್ಮುಖಿಗಳಾಗಿ ದಾರಿ ತಪ್ಪುತ್ತಾರೆ.  ವಿಶ್ವಾಮಿತ್ರರಂತಹ ಮಹಾಮುನಿಗಳೂ ಇದಕ್ಕೆ ಹೊರತಲ್ಲ. ಸಾಮಾನ್ಯವಾಗಿ ಬಾಲಕರು ಬಾಹ್ಯ ಕಾಮನೆಯ ಬೆನ್ನು ಹತ್ತಿ ಹೋಗುವುದು ಸಹಜ. ಆದರೆ ನಚಿಕೇತನನ್ನು ಯಾವ ಪ್ರಲೋಭನೆಯೂ ಕಾಡಲಿಲ್ಲ. ಕೇವಲ ಬಾಹ್ಯ ಕಾಮನೆಯ ಬೆನ್ನುಹತ್ತುವ ಮಂದಿ ಸುಲಭವಾಗಿ ಮೃತ್ಯುವಿನ ಪಾಶಕ್ಕೆ ಬಲಿಯಾಗುತ್ತಾರೆ. ಅವರೆಂದೂ ಅಮೃತತ್ವವನ್ನು ಪಡೆಯುವುದಿಲ್ಲ.  ಧೀರನಾದವನು ಚಂಚಲವಾದ ಈ ಪ್ರಪಂಚದಲ್ಲಿದ್ದುಕೊಂಡೇ, ಅಸ್ಥಿರ, ನಶ್ವರ ಮತ್ತು ಅಶಾಶ್ವತವಾದ ಬಾಹ್ಯ ವಿಷಯಗಳಿಗೆ ಬಲಿಬೀಳದೇ, ಧೈರ್ಯದಿಂದ ಮುನ್ನೆಡೆಯುತ್ತಾನೆ.
[ಈ ವಲ್ಲಿಯಲ್ಲಿನ ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ, ಅರ್ಥಾನುಸಂಧಾನಕ್ಕೆ ಇಲ್ಲಿ ಹೆಚ್ಚು ಅನ್ವಿತವಾಗುವ, ಈ ಅಧ್ಯಾಯದ ಎರಡನೇ ವಲ್ಲಿಯಲ್ಲಿ ಬರುವ ಮೂರು ಮಂತ್ರಗಳ ವಿಶ್ಲೇಷಣೆ ಈ ಕೆಳಗೆ ನೀಡಲಾಗಿದೆ. ಮೊದಲು ಪ್ರತಿಜ್ಞೆ ಮಾಡಿ ಆ ನಂತರ ಉಪದೇಶ ಮಾಡುವುದು ಸಾಮಾನ್ಯವಾದುದರಿಂದ, ಈ ಮೂರು ಶ್ಲೋಕಗಳ ವಿಶ್ಲೇಷಣೆಯನ್ನು ಇಲ್ಲಿ ನೀಡಲಾಗಿದೆ.]

ಹಂತ ತ ಇದಂ ಪ್ರವಕ್ಷ್ಯಾಮಿ ಗುಹ್ಯಂ ಬ್ರಹ್ಮ ಸನಾತನಮ್
ಯಥಾ ಚ ಮರಣಂ ಪ್ರಾಪ್ಯ ಆತ್ಮಾ ಭವತಿ ಗೌತಮ                         ೨-೨-೬

ಯಮ ನಚಿಕೇತನ ಅಧ್ಯಾತ್ಮ ಆಸಕ್ತಿಯನ್ನು ಮೆಚ್ಚಿ ಹೇಳುತ್ತಾನೆ: “ ಈ ಚಿಕ್ಕ ವಯಸ್ಸಿನಲ್ಲಿ ಅಧ್ಯಾತ್ಮವೇ ಬೇಕು ಎಂದು ನೀನು ಬಯಸುತ್ತಿರುವುದು ಬಹಳ ಆಶ್ಚರ್ಯ(ಹಂತ). ನಿನ್ನಲ್ಲಿ ಇಷ್ಟೊಂದು ಆಸಕ್ತಿ ಇರುವುದರಿಂದ, ಪರಮ ಗುಹ್ಯವೂ, ಸನಾತನವೂ ಆದ ಈ ವಿದ್ಯೆಯನ್ನು ನಿನಗೆ ಪ್ರವಚನ ಮಾಡುತ್ತೇನೆ” ಎಂದು.  ಇಲ್ಲಿ ‘ಪ್ರವಕ್ಷ್ಯಾಮಿ’ ಎನ್ನುವ ಪದ ಬಳಕೆಯಾಗಿದೆ. ಪ್ರವಕ್ಷ್ಯಾಮಿ ಎಂದರೆ ಪ್ರವಚನ ಮಾಡುವುದು. ‘ಪ್ರವಚನ ಎನ್ನುವ ಪದಕ್ಕೆ ಬಹಳ ಹಿರಿದಾದ ಅರ್ಥವಿದೆ. ಸರ್ವೋತ್ಕೃಷ್ಟನಾದ ಭಗವಂತನ ಬಗೆಗಿನ ಮಾತು –ಪ್ರವಚನ(ಪ್ರಕೃಷ್ಟಂ ವಚನಮ್); ಪ್ರಾಚೀನರು ಕಂಡ ಭಗವಂತನ ಬಗೆಗಿನ ಮಂತ್ರಗಳನ್ನು ಇಂದಿನ ಜನರಿಗೆ ಅರ್ಥವಾಗುವಂತೆ ಹೇಳುವುದು-ಪ್ರವಚನ(ಪ್ರಥನಂ ವಚನಮ್).  “ಸರ್ವಕಾಲದಲ್ಲೂ ಇರತಕ್ಕಂತಹ, ಸರ್ವನಿಯಾಮಕನಾದ, ಎಲ್ಲಕ್ಕಿಂತಲೂ ಹಿರಿದಾದ, ಗುಣಪೂರ್ಣ ಭಗವಂತನ ಬಗೆಗೆ ಹೇಳುತ್ತೇನೆ” ಎನ್ನುತ್ತಾನೆ ಯಮ.
ಮೊದಲ ಅಧ್ಯಾಯದಲ್ಲಿ ನಾವು ಈಗಾಗಲೇ ನೋಡಿದಂತೆ  'ಜೀವ ಕೊನೆಯದಾಗಿ ಸತ್ತ ಮೇಲೆ ಏನಾಗುತ್ತಾನೆ, ಮೋಕ್ಷದಲ್ಲಿ ಜೀವನ ಸ್ಥಿತಿ ಏನು' ಎಂದು ತಿಳಿಯುವ ಜಿಜ್ಞಾಸೆಯನ್ನು ನಚಿಕೇತ  ಯಮನ ಮುಂದೆ ಇಟ್ಟಿದ್ದ.  ಆತನ ಪ್ರಶ್ನೆಗೆ ಉತ್ತರ ರೂಪವಾಗಿ ಯಮ ಹೇಳುತ್ತಾನೆ: “ ಒಬ್ಬ ಮನುಷ್ಯ ಸತ್ತ ನಂತರ ಏನಾಗುತ್ತಾನೆ, ಸಂಸಾರ ಚಕ್ರದಲ್ಲಿ ಸುತ್ತಿ ಕೊನೇಯ ಸಾವು ಬಂದಾಗ  ಮೋಕ್ಷದಲ್ಲಿ ಜೀವನ ಸ್ಥಿತಿ ಏನು ಎನ್ನುವುದನ್ನು ನಿನಗೆ ವಿವರಿಸುತ್ತೇನೆ” ಎಂದು.
ಈ ಶ್ಲೋಕದಲ್ಲಿ ಯಮ ನಚಿಕೇತನನ್ನು ‘ಗೌತಮನೇ’ ಎಂದು ಸಂಬೋಧಿಸಿದ್ದಾನೆ.  ನಚಿಕೇತ ಗೌತಮ ಗೋತ್ರದವನಾದ್ದರಿಂದ ಈ ಸಂಬೋಧನೆ. “ಒಳ್ಳೆಯ ಋಷಿ ಪರಂಪರೆಯಲ್ಲಿ ಬಂದಿರುವ ನಿನಗೆ ಅನುವಂಶೀಯವಾಗಿ ವಿಷಯವನ್ನು ಗ್ರಹಣ ಮಾಡುವ ಶಕ್ತಿ ಇದೆ. ಹಾಗಾಗಿ ನಿನಗೆ ಭಗವಂತನ ಬಗೆಗೆ ಹಾಗೂ ಸತ್ತ ನಂತರ ಜೀವದ ಗತಿ ಏನು ಎನ್ನುವುದನ್ನು ವಿವರಿಸುತ್ತೇನೆ” ಎನ್ನುವುದು ಈ ಸಂಬೋಧನೆಯ ಹಿಂದಿರುವ ಧ್ವನಿ.     

ಯೋನಿಮನ್ಯೇ ಪ್ರಪದ್ಯಂತೇ ಶರೀರತ್ವಾಯ ದೇಹಿನಃ
ಸ್ಥಾಣುಮನ್ಯೇಽನುಸಂಯಂತಿ ಯಥಾಕರ್ಮ ಯಥಾಶ್ರುತಮ್            ೨-೨-೭

ಸತ್ತಮೇಲೆ ಜೀವ ತನ್ನ ಪುಣ್ಯ-ಪಾಪ ಫಲಕ್ಕನುಗುಣವಾಗಿ ಪುಣ್ಯಲೋಕದಲ್ಲೋ  ಅಥವಾ ನರಕ ಲೋಕದಲ್ಲೋ ತಾನು ಪಡೆದ ಫಲವನ್ನು ಅನುಭವಿಸುತ್ತಾನೆ. ಆನಂತರ ಪರ್ಜನ್ಯ ಲೋಕದಿಂದ ವಾತಾವರಣವನ್ನು ಸೇರಿ ಅಲ್ಲಿಂದ ಮಳೆಯೊಂದಿಗೆ ಭೂಮಿಗಿಳಿದು, ಭೂಮಿಯಲ್ಲಿ ಮರಳಿ ಹುಟ್ಟುತ್ತಾನೆ. ಈ ರೀತಿ ಹುಟ್ಟಿನಲ್ಲಿ ಮುಖ್ಯವಾಗಿ ಎರಡು ಬಗೆ. ಒಂದು ನಾವು ತಿನ್ನುವ ಗಿಡ ಬಳ್ಳಿಯಲ್ಲಿ ಸೇರಿಕೊಂಡು ಅದರ ಮೂಲಕ ಗಂಡಿನ ದೇಹವನ್ನು ಪ್ರವೇಶಿಸಿ, ಅಲ್ಲಿಂದ ಹೆಣ್ಣಿನ ಗರ್ಭವನ್ನು ಸೇರಿ, ಅಲ್ಲಿ ದೇಹವನ್ನು ಪಡೆದು ಹುಟ್ಟುವುದು; ಇನ್ನೊಂದು ನೇರವಾಗಿ ಗಿಡ ಬಳ್ಳಿಯಾಗಿ ಹುಟ್ಟುವುದು. ಅವರವರ ಕರ್ಮ ಮತ್ತು ಜ್ಞಾನಕ್ಕನುಗುಣವಾಗಿ ಅವರವರ ಜನನ ನಿರ್ಧಾರವಾಗುತ್ತದೆ. ಕೆಲವೊಮ್ಮೆ ಜೀವ ತಾಯಿಯ ಗರ್ಭವನ್ನು ಸೇರಲು ಅನೇಕ ಯುಗಗಳನ್ನೇ ಕಾಯಬೇಕಾಗಬಹುದು. ನೂರಾರು ಜೀವಾಣುಗಳಲ್ಲಿ ಕೇವಲ ಒಂದು ಜೀವಾಣು ಮಾತ್ರ ತಾಯಿಯ ಗರ್ಭವನ್ನು ಸೇರುವುದರಲ್ಲಿ ಯಶಸ್ವಿಯಾಗುತ್ತದೆ ಹಾಗೂ ಉಳಿದ ಜೀವಾಣುಗಳು ಮರಳಿ ಪ್ರಯತ್ನಿಸಬೇಕಾಗುತ್ತದೆ. ಎಲ್ಲವೂ ನಮ್ಮ ಕರ್ಮಫಲಕ್ಕನುಗುಣವಾಗಿಯೇ ನಡೆಯುತ್ತದೆ.      

Saturday, July 14, 2012

Kathopanishad in Kannada Chapter-01 Canto-03 Shloka 15-17


ಅಶಬ್ದಮಸ್ಪರ್ಶಮರೂಪಮವ್ಯಯಂ ತಥಾಽರಸಂ ನಿತ್ಯಮಗಂಧವಚ್ಚ ಯತ್
ಅನಾದ್ಯನಂತಂ ಮಹತಃ ಪರಂ ಧ್ರುವಂ ನಿಚಾಯ್ಯ ತನ್ಮೃತ್ಯುಮುಖಾತ್ ಪ್ರಮುಚ್ಯತೇ ೧೫

ಈ ಶ್ಲೋಕ ಮೊದಲ ಅಧ್ಯಾಯದ ಉಪಸಂಹಾರ ರೂಪದಲ್ಲಿದೆ. ಭಗವಂತನನ್ನು ಚಿಂತಿಸಲು ಪ್ರಾಕೃತವಾದ ಪ್ರಪಂಚದಿಂದ ಸ್ವಲ್ಪ ಬೇರೆಯಾದ ದೃಷ್ಟಿಕೋನ ಬೇಕು ಎನ್ನುವುದನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಈ ಪ್ರಪಂಚದಲ್ಲಿ ನಮಗೆ ತಿಳಿದಿರುವುದು ಪಂಚಭೂತಗಳು ಮತ್ತು ಪಂಚತನ್ಮಾತ್ರೆಗಳು(ಗಂಧ, ರಸ, ರೂಪ, ಸ್ಪರ್ಶ, ಶಬ್ದ). ನಮ್ಮ ಎಲ್ಲಾ ಅನುಭವಗಳೂ ಕೂಡಾ ಈ ಐದು ವಿಷಯಗಳ ಸುತ್ತವೇ ಸುತ್ತುತ್ತಿರುತ್ತವೆ. ನಾವು ಈ ಐದು ವಿಷಯಗಳನ್ನು ದಾಟಿ ಹೋಗದೇ ಭಗವಂತ ತಿಳಿಯುವುದಿಲ್ಲ. ಭಗವಂತ ಭೌತಿಕವಾಗಿ ಮೂಸುವ, ರುಚಿಸುವ, ಕಾಣುವ, ಮುಟ್ಟುವ ಮತ್ತು ಕೇಳುವ ಯಾವ ಬಗೆಯಲ್ಲೂ ಇಲ್ಲ.  ನಾವು ಭೌತಿಕವಾಗಿ ಕಾಣುವ ಎಲ್ಲಾ ವಸ್ತುಗಳಿಗೂ ಹುಟ್ಟು-ಸಾವಿದೆ. ಆದರೆ ಭಗವಂತ ನಿತ್ಯ-ಸತ್ಯ. ಆತನಿಗೆ ತುದಿ-ಮೊದಲಿಲ್ಲ. ನಮ್ಮೆಲ್ಲರ ತಂದೆ ಆತ, ಆದರೆ ಆತನನ್ನು ಸೃಷ್ಟಿ ಮಾಡಿದ ಹಿರಿದಾದ ಶಕ್ತಿ ಇನ್ನೊಂದಿಲ್ಲ. ಇದಕ್ಕಾಗಿ ಪುರಂದರದಾಸರು “ನನಗೆ ನಿನ್ನಂತಹ ಅಪ್ಪನುಂಟು, ನಿನ್ನ ಅಪ್ಪನ ತೋರೋ” ಎಂದು ಹಾಡಿರುವುದು. ಜೀವಗಳಲ್ಲೇ ಶ್ರೇಷ್ಠತತ್ವವಾದ ಬ್ರಹ್ಮ-ವಾಯುವಿಗಿಂತಲೂ ಆಚೆಗಿರುವ, ಎಂದೂ ಬದಲಾಗದ ಅಂತಹ ಭಗವಂತನನ್ನು ನಿಶ್ಚಯವಾಗಿ, ಅರ್ಥಮಾಡಿಕೊಂಡು, ಸಾಕ್ಷಾತ್ಕರಿಸಿಕೊಂಡು, ಉಪಾಸನೆ ಮಾಡುವವರು ಎಂದೂ ಮೃತ್ಯುವಿನ ಸುಳಿಗೆ ಸಿಗುವುದಿಲ್ಲ. ಭಗವದ್ ಭಕ್ತರನ್ನು ತಡೆಯುವ ಅಧಿಕಾರ ನನಗೂ ಇಲ್ಲಾ ಎಂದಿದ್ದಾನೆ ಯಮ. ಭಾಗವತದಲ್ಲಿ ಬರುವ ಅಜಾಮಿಳನ ಕಥೆ ಇದಕ್ಕೆ  ಶ್ರೇಷ್ಠ ದೃಷ್ಟಾಂತ.

ಮೊದಲ ಅಧ್ಯಾಯದ ಕೊನೆಯಲ್ಲಿ ಯಮ ಇಲ್ಲಿ ವಿವರಿಸಿದ ಭಗವಂತನ ಜ್ಞಾನವನ್ನು ತಿಳಿದು ಉಪಾಸನೆ ಮಾಡುವುದರ ಫಲವನ್ನು ವಿವರಿಸಿದ್ದಾನೆ. ಮುಂದಿನ ಎರಡು ಶ್ಲೋಕ ಈ ಅಧ್ಯಾಯದ  ಫಲಶ್ರುತಿ ರೂಪದಲ್ಲಿದೆ.     

ನಾಚಿಕೇತಮುಪಾಖ್ಯಾನಂ ಮೃತ್ಯುಪ್ರೋಕ್ತಂ ಸನಾತನಮ್
ಉಕ್ತ್ವಾ ಶ್ರುತ್ವಾ ಚ ಮೇಧಾವೀ ಬ್ರಹ್ಮಲೋಕೇ ಮಹೀಯತೇ ೧೬

ಯಮ ಹೇಳುತ್ತಾನೆ: ಇದು ನಚಿಕೇತನಿಗೆ ಉಪದೇಶ ಮಾಡಿರುವ, ನಾಚಿಕೇತಾಗ್ನಿಯಲ್ಲಿ ಸನ್ನಿಹಿತನಾಗಿರುವ ಭಗವಂತನ ಉಪಾಖ್ಯಾನ(ಶ್ರೇಷ್ಠವಾದ ವಿವರಣೆ). ಮೃತ್ಯು ದೇವತೆಯಾದ ನಾನು ಹೇಳಿರುವ ಈ ಉಪಾಖ್ಯಾನ ಸನಾತನವಾದುದ್ದು.  ಅನಾದಿ-ಅನಂತ ಕಾಲದಲ್ಲೂ ಜ್ಞಾನಿಗಳು ಈ ಉಪಾಸನೆಯಿಂದಲೇ ಭಗವಂತನನ್ನು ಪಡೆದರು. ಎಂದೆಂದೂ ಇರುವ ಈ ಉಪಾಖ್ಯಾನದಲ್ಲಿ, ಈ ಉಪಾಸನೆಯಲ್ಲಿ ಬದಲಾವಣೆ ಇಲ್ಲ. ಎಲ್ಲಾ ಕಾಲದಲ್ಲೂ ಭಗವಂತನನ್ನು ಪಡೆಯಲು ಇರುವ ಏಕಮಾತ್ರ ವಿಧಾನವಿದು. ಇದನ್ನು ಹೇಳಿ ಮತ್ತು ಕೇಳಿ ಯಾರು ಜ್ಞಾನವನ್ನು ಬೆಳೆಸಿಕೊಳ್ಳುತ್ತಾರೋ ಅವರಿಗೆ ಭಗವದ್ ಲೋಕ ಪ್ರಾಪ್ತಿಯಾಗುತ್ತದೆ.

ಯ ಇಮಂ ಪರಮಂ ಗುಹ್ಯಂ ಶ್ರಾವಯೇದ್ ಬ್ರಹ್ಮಸಂಸದಿ
ಪ್ರಯತಃ ಶ್ರಾದ್ಧಕಾಲೇ ವಾ ತದಾನಂತ್ಯಾಯ ಕಲ್ಪತೇ
ತದಾನಂತ್ಯಾಯ ಕಲ್ಪತ ಇತಿ                               ೧೭

ಪರಮ ಗುಹ್ಯವಾದ ಈ ವಿದ್ಯೆ ಯೋಗ್ಯತೆ ಇಲ್ಲದವರಿಗೆ ಮತ್ತು ದುರುಪಯೋಗ ಮಾಡಿಕೊಳ್ಳುವವರಿಗೆ ಹೇಳುವಂತಹುದ್ದಲ್ಲ. “ಜ್ಞಾನಿಗಳ ಸಭೆಯಲ್ಲಿ ಈ ವಿದ್ಯೆಯ ಪ್ರವಚನ  ಮಾಡಿದರೆ ಅನಂತ ಫಲ” ಎನ್ನುತ್ತಾನೆ ಯಮ. ಶ್ರಾದ್ಧ ಕಾಲದಲ್ಲಿ ಜ್ಞಾನಿಗಳ ಸಮ್ಮುಖದಲ್ಲಿ  ಕಾಠಕೋಪನಿಷತ್ತಿನ ಪ್ರವಚನ ಬಹಳ ಶ್ರೇಷ್ಠ.
ಇಲ್ಲಿ ಎರಡು ಬಾರಿ “ತದಾನಂತ್ಯಾಯ ಕಲ್ಪತ” ಎನ್ನುವ ವಾಕ್ಯವನ್ನು ಬಳಸಲಾಗಿದೆ. ಇದು ಹಿಂದಿನ ಕಾಲದ ಸಂಪ್ರದಾಯ. ಒಂದು ಅಧ್ಯಾಯ ಮುಗಿಯಿತು ಎಂದು ತೋರಿಸಲು ಕೊನೇಯ ವಾಕ್ಯವನ್ನು ಎರಡು ಸಲ ಹೇಳುತ್ತಾರೆ. ಮೊದಲ ಅಧ್ಯಾಯ ಇಲ್ಲಿಗೆ ಮುಗಿಯಿತು ಎನ್ನುವುದು ಇದರ ಅರ್ಥ. ಇಲ್ಲಿಗೆ  ಯಮನ ಉಪದೇಶದ ಒಂದು ಘಟ್ಟ ಮುಗಿಯಿತು. 

ಇತಿ ಕಾಠಕೋಪನಿಷದಿ ಪ್ರಥಮಾಧ್ಯಾಯೇ ತೃತೀಯಾ ವಲ್ಲೀ
ಇಲ್ಲಿಗೆ ಕಾಠಕೋಪನಿಷತ್ತಿನ ಮೊದಲ ಅಧ್ಯಾಯ ಮುಗಿಯಿತು 

Wednesday, July 11, 2012

Kathopanishad in Kannada Chapter-01 Canto-03 Shloka 12-14


ಏಷ ಸರ್ವೇಷು ಭೂತೇಷು ಗೂಢೋಽಽತ್ಮಾ ನ ಪ್ರಕಾಶತೇ
ದೃಶ್ಯತೇ ತ್ವಗ್ರ್ಯಯಾ ಬುದ್ಧ್ಯಾ ಸೂಕ್ಷ್ಮಯಾ ಸೂಕ್ಷ್ಮದರ್ಶಿಭಿಃ                 ೧೨

ಭಗವಂತ ಪ್ರತಿಯೊಬ್ಬನ ಒಳಗೂ, ಜೀವಸ್ವರೂಪದ  ಅತ್ಯಂತ ಸಮೀಪದಲ್ಲಿ, ನಿಗೂಢವಾಗಿ ನೆಲೆಸಿದ್ದಾನೆ. ನಮ್ಮೆಲ್ಲರ ಸ್ವಾಮಿ, ಅಂತರ್ಯಾಮಿ ಭಗವಂತನನ್ನು ಭೌತಿಕವಾದ ಯಾವುದೇ ಸಾಧನಗಳಿಂದ ಕಾಣಲು ಸಾಧ್ಯವಿಲ್ಲ. ಭಗವಂತನನ್ನು ಕಾಣಬೇಕಾದರೆ ಮೊದಲು ನಾವು ನಮ್ಮ ಜೀವಸ್ವರೂಪವನ್ನು ತಿಳಿಯಬೇಕು. ಭಗವಂತ ನಮ್ಮ ಜೀವಸ್ವರೂಪದ ಸ್ವರೂಪಭೂತವಾದ ಬುದ್ಧಿಗೆ ಮಾತ್ರ ಗೋಚರವಾಗುತ್ತಾನೆ. ನಮ್ಮ ಸ್ವರೂಪಜ್ಞಾನ ತೆರೆದುಕೊಂಡಾಗ,  ಆ ಸ್ವರೂಪದ ತಿಳಿವಿನಿಂದ  ಭಗವಂತನನ್ನು ತಿಳಿಯಬಹುದು. “ಸೂಕ್ಷ್ಮಕ್ಕಿಂತ ಸೂಕ್ಷ್ಮನಾದ ಅಂತರ್ಯಾಮಿ ಭಗವಂತನನ್ನು, ಆತ್ಮಸ್ವರೂಪಭೂತವಾದ ಬುದ್ಧಿ ತೆರೆದುಕೊಂಡಾಗ ಕಾಣಬಹುದು” ಎಂದಿದ್ದಾನೆ ಯಮ. ಎಲ್ಲಕ್ಕಿಂತ ಸೂಕ್ಷ್ಮವಾದ ಜೀವಸ್ವರೂಪವನ್ನು ಕಂಡವರಿಗೆ, ಜೀವಸ್ವರೂಪದಲ್ಲಿರುವ ಜ್ಞಾನ ಆವಿರ್ಭಾವವಾಗುತ್ತದೆ ಹಾಗೂ ಆ ಜ್ಞಾನದ ಕಣ್ಣಿನಿಂದ ಅವರು ಭಗವಂತನನ್ನು ಕಾಣಬಲ್ಲರು. ಇದಕ್ಕಾಗಿ ಮೊದಲು ನಾವು ನಮ್ಮ ಜೀವಸ್ವರೂಪದ ಗ್ರಹಣ ಮಾಡಬೇಕು. ಜೀವಸ್ವರೂಪದ ದರ್ಶನವಾದರೆ, ಜೀವಸ್ವರೂಪದ ಜ್ಞಾನಾನಂದಮಯವಾದ ಕಣ್ಣಿನಿಂದ, ಜ್ಞಾನಾನಂದಮಯನಾದ ಭಗವಂತನನ್ನು ಕಾಣಬಹುದು.  

ಯಚ್ಛೇದ್ವಾಙ್ಮನಸೀ ಪ್ರಾಜ್ಞಸ್ತದ್ಯಚ್ಛೇಜ್ಜ್ಞಾನ ಆತ್ಮನಿ
ಜ್ಞಾನಮಾತ್ಮನಿ ಮಹತಿ ನಿಯಚ್ಛೇತ್ ತದ್ಯಚ್ಛೇಚ್ಛಾಂತ ಆತ್ಮನಿ            ೧೩

ಒಮ್ಮಿಂದೊಮ್ಮೆಗೆ  ಭಗವಂತನ ದರ್ಶನವಾಗಬೇಕು ಎಂದರೆ ಅದು ಸಾಧ್ಯವಿಲ್ಲ. ಅದಕ್ಕಾಗಿ ಇಲ್ಲಿ ಯಮ ಕೆಲವು ಹಂತಗಳನ್ನು ವಿವರಿಸಿದ್ದಾನೆ. ಮೊದಲು ನಮ್ಮನ್ನು ನಿಯಂತ್ರಿಸತಕ್ಕ ಉಚ್ಚ ಶಕ್ತಿಗಳನ್ನು ಅಂತರಂಗದಲ್ಲಿ ಧ್ಯಾನ ಮಾಡಬೇಕು. ಇಂದ್ರನ ತನಕ ಇರುವ ನಮ್ಮ ಎಲ್ಲಾ ಇಂದ್ರಿಯಾಭಿಮಾನಿ ದೇವತೆಗಳೂ ಕೂಡಾ ವಾಗ್ದೇವತೆ ಪಾರ್ವತಿಗೆ ಅಧೀನ ದೇವತೆಗಳು. ಹಾಗಾಗಿ ಇಂದ್ರಿಯಾಭಿಮಾನಿ ದೇವತೆಗಳನ್ನು ವಾಗ್ದೇವತೆ ಪಾರ್ವತಿಯಲ್ಲಿ ಚಿಂತನೆ ಮಾಡಬೇಕು. ಪಾರ್ವತಿ ಮನೋಭಿಮಾನಿ ದೇವತೆ ಶಿವನ ಅಧೀನ ದೇವತೆ. ಶಿವ ಮತ್ತು ಪಾರ್ವತಿ ದಂಪತಿಗಳು. ಇವರದ್ದು ಅನ್ಯೋನ್ಯ ದಾಂಪತ್ಯ. ಮನಸ್ಸು ಏನನ್ನು ಯೋಚಿಸುತ್ತದೋ ಅದನ್ನೇ ಬಾಯಿ ನುಡಿಯುತ್ತದೆ. ಆದ್ದರಿಂದ ಅಧ್ಯಾತ್ಮ ಸಾಧನೆಯಲ್ಲಿ ಮೊಟ್ಟಮೊದಲು ನಮ್ಮಿಂದ 'ನುಡಿಸುವ' ಪಾರ್ವತಿ ಮತ್ತು ಅದನ್ನು ಪ್ರೇರಣೆ ಮಾಡುವ ಶಿವನ ಧ್ಯಾನ ಬಹಳ ಮುಖ್ಯ. ಶಿವ-ಪಾರ್ವತಿಯರ ಅನುಗ್ರಹವಿಲ್ಲದೇ ಮುಂದಿನ ಪಯಣ ಸಾಧ್ಯವಿಲ್ಲ. [ಈ ಶ್ಲೋಕದಲ್ಲಿ ವಾಕ್ ನ್ನು ಮನಸ್ಸಿನಲ್ಲಿ ನಿಯಂತ್ರಣ ಮಾಡಬೇಕು ಎಂದು ಹೇಳಲಾಗಿದೆ. ಇದರ ಅರ್ಥ ಮೇಲೆ ವಿವರಿಸಿದ ಅಭಿಮಾನಿ ದೇವತೆಯರ ತಾರತಮ್ಯ ಚಿಂತನೆ.]
ಮನೋಭಿಮಾನಿಯಾದ ಶಿವನಿಗಿಂತ ಎತ್ತರದಲ್ಲಿ ಬುದ್ಧಿಯ ಅಭಿಮಾನಿ ದೇವತೆಯರಾದ ಸರಸ್ವತಿ-ಭಾರತಿಯರಿದ್ದಾರೆ. ಅವರು ನಮ್ಮೊಳಗಿರುವ, ನಮ್ಮ ನಿಯಾಮಕ ಶಕ್ತಿಗಳಾದ ಜ್ಞಾನಾತ್ಮರು. ಜ್ಞಾನ ಸ್ವರೂಪರೂಪರಾಗಿರುವ ಸರಸ್ವತಿ-ಭಾರತಿಯರನ್ನು ಮಹತತ್ವದ ದೇವತೆಗಳಾದ ಬ್ರಹ್ಮ-ವಾಯುವಿನಲ್ಲಿ ಚಿಂತನೆ ಮಾಡಬೇಕು. ಸರಸ್ವತಿ-ಭಾರತಿಯರು ಜ್ಞಾನವನ್ನು ಕೊಡಬೇಕು, ಬ್ರಹ್ಮ-ವಾಯು ಭಕ್ತಿಯನ್ನು ಕೊಡಬೇಕು. ಇಂತಹ ಬ್ರಹ್ಮ-ವಾಯುವನ್ನು ಸ್ವರೂಪಸುಖದ ಪರಾಕಾಷ್ಠೆಯಾದ ಭಗವಂತನಲ್ಲಿ ಚಿಂತನೆ ಮಾಡಬೇಕು. ಹೀಗೆ ಭಗವದ್ ಚಿಂತನೆ ಮಾಡುತ್ತಾ ಭಗವಂತನೆಡೆಗೆ ಹೆಜ್ಜೆ ಇಡಬೇಕು.
   
ಉತ್ತಿಷ್ಠತ ಜಾಗ್ರತ   ಪ್ರಾಪ್ಯ ವರಾನ್ ನಿಬೋಧತ
ಕ್ಷುರಸ್ಯ ಧಾರಾ ನಿಶಿತಾ ದುರತ್ಯಯಾ ದುರ್ಗಂ ಪಥಸ್ತತ್ ಕವಯೋ ವದಂತಿ ೧೪

ಯಮನ ಉಪದೇಶವನ್ನು ನಚಿಕೇತನ ಜೊತೆಗೆ ಕೇಳುತ್ತಿರುವ ಎಲ್ಲರನ್ನು ಉದ್ದೇಶಿಸಿ ಯಮ ಹೇಳುತ್ತಾನೆ:  “ಏಳಿ, ಎದ್ದೇಳಿ, ಅಜ್ಞಾನವೆಂಬ ಹೊದಿಕೆಯನ್ನು ಹೊದ್ದುಕೊಂಡು ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ;  ಜ್ಞಾನಿಗಳಲ್ಲಿ ತಿಳುವಳಿಕೆಯ ವರವನ್ನು ಕೇಳಿ ಪಡೆಯಿರಿ” ಎಂದು. ಭಗವಂತನ ಕಡೆಗೆ ಸಾಗುವ ಮಾರ್ಗ ಬಹಳ ದುರ್ಗಮ. ಅದು ಕತ್ತಿಯ ಅಲುಗಿನ ಮೇಲಿನ ನಡೆಯಂತೆ. “ಇಂತಹ ಮಾರ್ಗದಲ್ಲಿನ ಕಷ್ಟಗಳನ್ನು ಸಹಿಸಿಕೊಂಡು ಮುನ್ನೆಡೆಯಬಲ್ಲವರು, ಭಗವಂತನನ್ನು ಸೇರಬಲ್ಲರು ಎಂದು ಜ್ಞಾನಿಗಳು ಹೇಳುತ್ತಾರೆ” ಎನ್ನುತ್ತಾನೆ ಯಮ. [ಈ ಶ್ಲೋಕದಲ್ಲಿ ಕವಿಗಳು ಎನ್ನುವ ಪದ ಬಳಕೆಯಾಗಿದೆ. ಇಲ್ಲಿ ಕವಿಗಳು ಎಂದರೆ: ಎಲ್ಲಾ ಶಬ್ದಗಳ ಅರ್ಥವನ್ನು ತಿಳಿದು ಪ್ರಯೋಗಿಸಬಲ್ಲ ಜ್ಞಾನಿಗಳು ಎಂದರ್ಥ].  ಆದ್ದರಿಂದ “ಅಜ್ಞಾನದ ನಿದ್ರೆ ಸಾಕು, ಮೈಕೊಡವಿ ಎದ್ದೇಳಿ, ಹೋಗುವ ಮಾರ್ಗ ದುರ್ಗಮವಾದರೂ ಹೋಗಿ ಸೇರಲೇಬೇಕಾದ ಆನಂದಸಾಗರದಿಂದ ವಂಚಿತರಾಗದಿರಿ” ಎಂದು ಇಲ್ಲಿ ಯಮ ಇಡೀ ಮಾನವ ಜನಾಂಗವನ್ನು ಎಚ್ಚರಿಸಿದ್ದಾನೆ.    

Sunday, July 8, 2012

Kathopanishad in Kannada Chapter-01 Canto-03 Shloka 9-11


ವಿಜ್ಞಾನಸಾರಥಿರ್ಯಸ್ತು ಮನಃ ಪ್ರಗ್ರಹವಾನ್ ನರಃ
ಸೋಽಧ್ವನಃ ಪಾರಮಾಪ್ನೋತಿ ತದ್ವಿಷ್ಣೋಃ ಪರಮಂ ಪದಮ್           

ನಾವು ಎಚ್ಚರದಿಂದ ನಿಯಂತ್ರಿಸಬೇಕಾದುದ್ದು  ಮನಸ್ಸು ಮತ್ತು ಬುದ್ಧಿಯನ್ನು. ಈ ಎರಡು ಹಿಡಿತದಲ್ಲಿದ್ದಾಗ ಇಂದ್ರಿಯಗಳು ತಾನೇ ತಾನಾಗಿ ಹಿಡಿತಕ್ಕೆ ಬರುತ್ತವೆ. ಈ ಹಿಂದೆ ಹೇಳಿದಂತೆ, ಮನಸ್ಸಿನ ಅಭಿಮಾನಿ ದೇವತೆ ಶಿವ. ಆದ್ದರಿಂದ ನಾವು “ನಮ್ಮ ಮನಸ್ಸು ದಾರಿ ತಪ್ಪದಂತೆ ಮಾಡು” ಎಂದು ಶಿವನಲ್ಲಿ ಪ್ರಾರ್ಥಿಸಬೇಕು. ನಂತರ “ನನಗೆ ವಿವೇಕಪ್ರಜ್ಞೆಯನ್ನು ಕೊಡು ತಾಯೇ” ಎಂದು ಸರಸ್ವತಿಯನ್ನು ಪ್ರಾರ್ಥಿಸಬೇಕು. ಇದರಿಂದ ನಮ್ಮ ಮನಸ್ಸು ಮತ್ತು ಬುದ್ಧಿ ಹಿಡಿತಕ್ಕೆ ಬರುತ್ತದೆ. ಒಮ್ಮೆ ಮನಸ್ಸು-ಬುದ್ದಿ ಹಿಡಿತಕ್ಕೆ ಬಂದಿತೆಂದರೆ ಮತ್ತೆ ಇನ್ನೇನೂ ಸಮಸ್ಯೆ ಇಲ್ಲ. ಇದರಿಂದ ನಾವು ನಮ್ಮ ಪಯಣದ ಕೊನೇಯ ಗುರಿಯಾದ ವಿಷ್ಣುವಿನ ಪರಮಪದವನ್ನು  ತಲುಪಬಹುದು.
ಇಲ್ಲಿ ‘ವಿಷ್ಣುಃ’ ಎನ್ನುವ ಭಗವಂತನ ನಾಮವನ್ನು ಬಳಸಲಾಗಿದೆ. ಸಾಮಾನ್ಯವಾಗಿ ವಿಷ್ಣುಃ ಅನ್ನುವ ನಾಮ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು ಎಂದು ತಿಳಿಯುವವರೇ ಹೆಚ್ಚು. ಆದರೆ ಹಿಂದೂ-ಮುಸ್ಲಿಂ-ಕ್ರೈಸ್ತ ಧರ್ಮದಲ್ಲಿ ದೇವರು ಎನ್ನುವುದಕ್ಕೆ ಯಾವ ವಿಶ್ಲೇಷಣೆ ಇದೆಯೋ, ಅದರ ಸಂಸ್ಕೃತ ಪದ ವಿಷ್ಣು. ವಿಷ್ಣು ಎಂದರೆ ಸರ್ವಶಬ್ದವಾಚ್ಯನಾದ, ಸರ್ವಗತನಾದ ಭಗವಂತ (omnipotent and omnipresent) ಎಂದರ್ಥ. ಇದು ಜಾತಿ ಧರ್ಮವನ್ನು ಮೀರಿ ಎಲ್ಲರೂ ಒಪ್ಪುವಂತಹ ಅರ್ಥ. ಇನ್ನು ಈ ಪದವನ್ನು ಒಡೆದು ನೋಡಿದರೆ ವಿ-ಷ-ಣು ಆಗುತ್ತದೆ. ವಿಷಣು ಎಂದರೆ-ವಿಶಿಷ್ಟವಾದ ಜ್ಞಾನ(ವಿ) ಕೊಡುವವನು. ಒಳಗೆ ಇದ್ದು, ಸಂಸಾರ ವಿಷವನ್ನು ಪರಿಹರಿಸಿ, ನಮ್ಮ ಕ್ರಿಯೆಯನ್ನು ನಿಯಂತ್ರಿಸುವ ಪರಿಪೂರ್ಣವಾದ (ಷ) ಪ್ರಾಣಶಕ್ತಿ . ಎಲ್ಲರನ್ನೂ ರಕ್ಷಿಸುವ ಬಲ ಇರುವ (ಣ)ಸರ್ವಶಕ್ತ ಭಗವಂತ  ವಿಷ್ಣುಃ.

ಇಂದ್ರಿಯೇಭ್ಯಃ ಪರಾ ಹ್ಯರ್ಥಾ ಅರ್ಥೇಭ್ಯಶ್ಚ ಪರಂ ಮನಃ
ಮನಸಸ್ತು ಪರಾ ಬುದ್ಧಿರ್ಬುದ್ಧೇರಾತ್ಮಾ ಮಹಾನ್ ಪರಃ         ೧೦

ಮಹತಃ ಪರಮವ್ಯಕ್ತಮವ್ಯಕ್ತಾತ್ ಪುರುಷಃ ಪರಃ
ಪುರುಷಾನ್ನ ಪರಂ ಕಿಂಚಿತ್ ಸಾ ಕಾಷ್ಠಾ ಸಾ ಪರಾ ಗತಿಃ       ೧೧

ಭಗವಂತನ ಕಡೆಗೆ ಪಯಣಿಸುವ ಕುರಿತ ಉಪದೇಶದ ಉಪಸಂಹಾರ ರೂಪದಲ್ಲಿ ಈ ಎರಡು ಶ್ಲೋಕಗಳಿವೆ. ಇಲ್ಲಿ ಯಮ ಹೇಳುತ್ತಾನೆ: ಭಗವಂತನ ಕಡೆಗೆ ಪಯಣಿಸಲು ಮೊದಲು ಬೇಕಾಗಿರುವುದು ಸಾಧನ ಶರೀರ. ಸಾಧನಾ ಶರೀರಕ್ಕಿಂತ ಇಂದ್ರಿಯಗಳು ಮುಖ್ಯ, ಇಂದ್ರಿಯಗಳಿಗಿಂತ  ಇಂದ್ರಿಯ ವಿಷಯಗಳು ಮುಖ್ಯ, ವಿಷಯಗಳಿಗಿಂತ ಅದನ್ನು ಗ್ರಹಿಸುವ ಮನಸ್ಸು ಮುಖ್ಯ, ಮನಸ್ಸಿಗಿಂತ ಬುದ್ಧಿ ಮುಖ್ಯ, ಬುದ್ಧಿಗಿಂತ ಆತ್ಮ ಮುಖ್ಯ. ಈ ಎಲ್ಲಾ ಪರಿಕರಗಳೊಂದಿಗೆ ಭಗವಂತನನ್ನು ಸೇರಲು ತಾಯಿ-ತಂದೆಯ ಅನುಗ್ರಹ ಬಹಳ ಮುಖ್ಯ. ಪ್ರಕೃತಿ ಮಾತೆಯಾದ ಲಕ್ಷ್ಮಿ, ಪುರುಷನಾದ ನಾರಾಯಣ –ಇವರ ಅನುಗ್ರಹ ಇಚ್ಛೆ ಇಲ್ಲದೇ ನಮ್ಮ ರಥ ಗುರಿಯನ್ನು ಸೇರುವುದಿಲ್ಲ.
ಈ ಶ್ಲೋಕಗಳಲ್ಲಿ ದೇವತಾತಾರತಮ್ಯ ವಿವರಣೆ ಕೂಡಾ ಅಡಗಿದೆ. ಇಲ್ಲಿ ಹೇಳಿರುವ ಪ್ರತಿಯೊಂದು ವಿಷಯದ ಅಭಿಮಾನಿ ದೇವತೆಗಳನ್ನು ನೋಡಿದರೆ ಈ ವಿಚಾರ ತಿಳಿಯುತ್ತದೆ. ಮೊದಲಿಗೆ ಇಂದ್ರಿಯಗಳು. ಇಂದ್ರಿಯಗಳಲ್ಲಿ ಮುಖ್ಯವಾಗಿ ಎರಡು ಗುಂಪು. ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯ. ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಐದು ಜ್ಞಾನೇಂದ್ರಿಯಗಳು. ಬಾಯಿ, ಕೈ, ಕಾಲು, ಪಾಯು ಮತ್ತು ಉಪಸ್ಥ ಐದು ಕರ್ಮೇಂದ್ರಿಯಗಳು. ಕಿವಿಯ ಅಭಿಮಾನಿ ದೇವತೆ ಚಂದ್ರ (೧೨ನೇ ಕಕ್ಷೆ); ತ್ವಕ್ ಅಭಿಮಾನಿ ದೇವತೆ ಕುಬೇರ(೧೮ನೇ ಕಕ್ಷೆ); ಕಣ್ಣಿನ ಅಭಿಮಾನಿ ದೇವತೆ ಸೂರ್ಯ(೧೨ನೇ ಕಕ್ಷೆ); ನಾಲಿಗೆಯ ಅಭಿಮಾನಿ ದೇವತೆ ವರುಣ (೧೩ನೇ ಕಕ್ಷೆ); ಮೂಗಿನ ಅಭಿಮಾನಿ ದೇವತೆಯರು ಅಶ್ವಿಗಳು(೧೮ನೇ ಕಕ್ಷೆ); ಮಾತಿನ ಅಭಿಮಾನಿ ದೇವತೆ ಅಗ್ನಿ (೧೫ನೇ ಕಕ್ಷೆ); ಕೈ ಯ ಅಭಿಮಾನಿ ದೇವತೆ ಇಂದ್ರ(೮ನೇ ಕಕ್ಷೆ); ಕಾಲಿನ ಅಭಿಮಾನಿ  ದೇವತೆ ಇಂದ್ರ ಪುತ್ರ ಜಯಂತ(೧೯ನೇ ಕಕ್ಷೆ); ಪಾಯು ಅಭಿಮಾನಿ ದೇವತೆ ಯಮ(೧೨ನೇ ಕಕ್ಷೆ); ಉಪಸ್ಥ ಅಭಿಮಾನಿ ದೇವತೆ ದಕ್ಷ ಪ್ರಜಾಪತಿ(೧೦ನೇ ಕಕ್ಷೆ). ಒಟ್ಟಿನಲ್ಲಿ ಇಲ್ಲಿ ೮ನೇ ಕಕ್ಷೆಯಿಂದ ೧೯ನೇ ಕಕ್ಷೆಯ ತನಕದ ದೇವತೆಗಳ ಗುಂಪನ್ನು ಕಾಣುತ್ತೇವೆ.
ಇಂದ್ರಿಯಗಳ ನಂತರ ಇಂದ್ರಿಯ ವಿಷಯಗಳು. ಇಂದ್ರಿಯ ವಿಷಯಗಳು ಹತ್ತು.  ಗಂಧ, ರಸ, ರೂಪ, ಸ್ಪರ್ಶ, ಶಬ್ದ, ವಾಕ್, ಪಾಣಿ, ಪಾದ, ಪಾಯು(ವಿಸರ್ಗ) ಮತ್ತು ಉಪಸ್ಥ(ಸಂತಾನ). ಶಬ್ದ ಮತ್ತು ಸ್ಪರ್ಶದ ಅಭಿಮಾನಿ ದೇವತೆ ಗರುಡ ಪತ್ನಿ ಸುಪರ್ಣಿ, ರೂಪ ಮತ್ತು ಸ್ಪರ್ಶದ ಅಭಿಮಾನಿ ದೇವತೆ ಶೇಷ ಪತ್ನಿ ವಾರುಣಿ, ಗಂಧದ ಅಭಿಮಾನಿ ದೇವತೆ ಶಿವ ಪತ್ನಿ ಪಾರ್ವತಿ. ಅದೇ ರೀತಿ ವಾಕ್ ಮತ್ತು ಪಾಣಿ  ಅಭಿಮಾನಿ ಸುಪರ್ಣಿ, ಪಾದ ಮತ್ತು ವಿಸರ್ಗ ಅಭಿಮಾನಿ ದೇವತೆ ವಾರುಣಿ, ಸಂತಾನದ ಅಭಿಮಾನಿ ದೇವತೆ ಪಾರ್ವತಿ. ಈ ಮೂವರೂ ೭ನೇ ಕಕ್ಷೆಯ ದೇವತೆಗಳು.
ಇಂದ್ರಿಯ ವಿಷಯಗಳ ನಂತರ ವೇದ ವಿದ್ಯೆಯ ಅರಿವಿನ ಅಭಿಮಾನಿ ದೇವತೆ ಗರುಡ; ಇತರ ವಿದ್ಯೆಯ ಅರಿವಿನ ಅಭಿಮಾನಿ ದೇವತೆ ಶೇಷ ಮತ್ತು ಮನೋಭಿಮಾನಿ ದೇವತೆ ಶಿವ. ಈ ಮೂವರೂ ಕೂಡ ೫ನೇ ಕಕ್ಷೆಯ ದೇವತೆಗಳು. ಮನಸ್ಸಿನ ನಂತರ ಬುದ್ದಿ. ಸರಸ್ವತಿ ಮತ್ತು ಭಾರತೀಯರು ಬುದ್ಧಿಯ ಅಭಿಮಾನಿ ದೇವತೆಗಳು. ಇವರು ನಾಲ್ಕನೇ  ಕಕ್ಷೆಯ ದೇವತೆಗಳು. ಬುದ್ಧಿಯ ನಂತರ ಆತ್ಮ. ಜೀವ ಸ್ವರೂಪಾಭಿಮಾನಿಯಾರಾದ ಬ್ರಹ್ಮ-ವಾಯು ಆತ್ಮದ ಅಭಿಮಾನಿ ದೇವತೆಗಳಾಗಿ  ಮೂರನೇ ಕಕ್ಷೆಯಲ್ಲಿದ್ದಾರೆ. ಇವರಿಗಿಂತ ಮೇಲೆ ಅವ್ಯಕ್ತ ತತ್ವ, ಪ್ರಕೃತಿ ಮಾತೆ ಶ್ರೀಲಕ್ಷ್ಮಿ. ಲಕ್ಷ್ಮೀಪತಿ ಭಗವಂತ ಸರ್ವೋತ್ತಮ ತತ್ವ. “ಅದಕ್ಕಿಂತ ಎತ್ತರದ ಇನ್ನೊಂದು ತತ್ವವಿಲ್ಲ” ಎಂದಿದ್ದಾನೆ ಯಮ. ಅದು ಎತ್ತರದ ತುತ್ತತುದಿ. ಈ ತಾರತಮ್ಯಕ್ಕೆ ಅನುಗುಣವಾಗಿ ಭಗವಂತನ ಪರಿವಾರದ ಚಿಂತನೆ ಮಾಡಿ, ತುತ್ತತುದಿಯಲ್ಲಿರುವ ಭಗವಂತನ ಉಪಸನೆಯೇ ನಮ್ಮ ಧ್ಯಾನವಾಗಬೇಕು.