Sunday, June 17, 2012

Kathopanishad in Kannada Chapter-01 Canto-02 Shloka 13-15

                ಏತಚ್ಛ್ರುತ್ವಾ ಸಂಪರಿಗೃಹ್ಯ ಮರ್ತ್ಯಃ   ಪ್ರವೃಹ್ಯ ಧರ್ಮ್ಯಮಣುಮೇತಮಾಪ್ಯ
                ಸ ಮೋದತೇ ಮೋದನೀಯಂ ಹಿ ಲಬ್ಧ್ವಾ  ವಿವೃತಂ ಸದ್ಮ ನಚಿಕೇತಸಂ ಮನ್ಯೇ            ೧೩

ಈ ಶ್ಲೋಕದಲ್ಲಿ ‘ಸಂಪರಿಗೃಹ’ ಎನ್ನುವ ಪದ ಬಳಕೆಯಾಗಿದೆ. ಪರಿಗ್ರಹ ಎಂದರೆ ‘ಆತ್ಮಸಾತ್’ ಮಾಡಿಕೊಳ್ಳುವುದು. ಎಲ್ಲವನ್ನೂ ಕೇಳಿ ತಿಳಿದುಕೊಂಡು, ನಿಜವಾದ ದಾರಿ ಯಾವುದೆಂದು ಗುರುತಿಸಿಕೊಂಡು, ಆ ದಾರಿಯಲ್ಲಿ ಹೋಗುವುದು. ಯಾವುದು ಸಮೀಚೀನವಾದದ್ದು ಅದನ್ನು ಗ್ರಹಣ ಮಾಡುವುದು ಸಂಪರಿಗ್ರಹ.  ಇದೇ ರೀತಿ ಇಲ್ಲಿ ‘ಪ್ರವೃಹ್ಯ’ ಎನ್ನುವ ಇನ್ನೊಂದು ಪದ ಬಳಕೆಯಾಗಿದೆ. ಪ್ರವೃಹ್ಯ ಎಂದರೆ ಬೇರ್ಪಡಿಸಿ ತಿಳಿಯುವುದು. ನಮಗೆ ಗೊತ್ತಿರುವ ಪ್ರಪಂಚಕ್ಕಿಂತ ಬೇರೆಯಾದ ಸತ್ಯವನ್ನು ಅರಸುವ ಪ್ರಯತ್ನ; ಜೀವಕ್ಕಿಂತ ಬೇರೆಯಾದ, ಜೀವನನ್ನು  ನಿಯಂತ್ರಿಸುವ ಒಂದು ಶಕ್ತಿ ಇದೆ ಎಂದು ಗುರುತಿಸುವುದು ಪ್ರವೃಹ್ಯ.
ಅಧ್ಯಾತ್ಮದ ಸಂಗತಿಯನ್ನು ಕೇಳಿ ತಿಳಿದು, ನಿಜವಾದ ದಾರಿಯನ್ನು ಗುರುತಿಸಿ,  ನಮ್ಮ ಮನಸ್ಸು ಗ್ರಹಿಸಬಲ್ಲಂತಹ ಎಲ್ಲಾ ಭೌತಿಕ ಪ್ರಪಂಚವನ್ನು ಬೇರ್ಪಡಿಸಿ, ಅಪ್ರಾಕೃತವಾದ, ಅಭೌತಿಕವಾದ, ನನ್ನ ಜೀವ ಸ್ವರೂಪಕ್ಕಿಂತಲೂ ವಿಲಕ್ಷಣವಾದ ಒಂದು ಶಕ್ತಿಯನ್ನು, ಇಡೀ ಪ್ರಪಂಚವನ್ನು ಧಾರಣೆ ಮಾಡಿರುವ ಭಗವಂತನನ್ನು, ಜ್ಞಾನಿಗಳ ಒಡನಾಟ ಮತ್ತು ಸೇವೆಯಿಂದ ತಿಳಿದಾಗ-ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಇದು ನಿಜವಾದ ಆನಂದದ ಅನುಭವ. “ನಚಿಕೇತನಿಗೆ ಇಂತಹ ಆನಂದದ ಮನೆಯ ಬಾಗಿಲು ತೆರೆದಿದೆ” ಎನ್ನುತ್ತಾನೆ ಯಮ.

ಅನ್ಯತ್ರ ಧರ್ಮಾದನ್ಯತ್ರಾಧರ್ಮಾ  ದನ್ಯತ್ರಾಸ್ಮಾತ್ಕೃತಾಕೃತಾತ್
ಅನ್ಯತ್ರ ಭೂತಾಚ್ಚ ಭವ್ಯಾಚ್ಚ  ಯತ್ತತ್ಪಶ್ಯಸಿ ತದ್ವದ              ೧೪

ಇಲ್ಲಿಯ ತನಕ ಯಮನ ಹೊಗಳಿಕೆಯ ಮಾತನ್ನು ಕೇಳಿದ ನಚಿಕೇತ ಹೇಳುತ್ತಾನೆ: ನನಗೆ ನಿನ್ನ ಯಾವ ಹೊಗಳಿಕೆಯ ಮಾತೂ ಬೇಕಾಗಿಲ್ಲ. ನನಗೆ ನಾನು ಕೇಳಿದ ಪ್ರಶ್ನೆಗೆ ಉತ್ತರಬೇಕು. ಪ್ರಪಂಚದಲ್ಲಿ ಧರ್ಮ ಮತ್ತು ಅಧರ್ಮವನ್ನು ಮೀರಿನಿಂತ, ಪಾಪ ಪುಣ್ಯಗಳ ಗೊಂದಲವೇ ಇಲ್ಲದ ಸ್ಥಿತಿಯನ್ನು ನನಗೆ ವಿವರಿಸು. ಕೃತಾಕೃತಗಳಿಂದ ಅತೀತವಾದ, ಧರ್ಮಾಧರ್ಮಗಳಿಂದ ಅತೀತವಾದ, ನೀನು ಕಂಡಿರುವ ತತ್ವದ ಬಗ್ಗೆ ಹೇಳು ಎನ್ನುತ್ತಾನೆ ನಚಿಕೇತ. ಇಲ್ಲಿ ನಚಿಕೇತ ಯಮನ ಹೊಗಳಿಕೆಯಿಂದ ಯಾವುದೇ ರೀತಿ ವಿಚಲಿತನಾಗದೆ, ತನ್ನ ಜ್ಞಾನ ಪೀಪಾಸುವನ್ನು ನೇರವಾಗಿ ಯಮನಲ್ಲಿ ತೋಡಿಕೊಳ್ಳುವುದು ನಮಗೆ ಸ್ಪಷ್ಟವಾಗಿ ಕಾಣುತ್ತದೆ. ನಚಿಕೇತನ ಈ ಧೃಡ ಮನಸ್ಸನ್ನು ಕಂಡ ಯಮ ನೇರವಾಗಿ ಆತನ  ಪ್ರಶ್ನೆಗೆ ಉತ್ತರಿಸುವುದನ್ನು ಮುಂದಿನ ಶ್ಲೋಕದಲ್ಲಿ ಕಾಣಬಹುದು.

            ಸರ್ವೇ ವೇದಾ ಯತ್ಪದಮಾಮನಂತಿ  ತಪಾಂಸಿ ಸರ್ವಾಣಿ ಚ ಯದ್ವದಂತಿ
            ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ  ತತ್ತೇ ಪದಂ ಸಂಗ್ರಹೇಣ ಬ್ರವೀಮ್ಯೋಮಿತ್ಯೇತತ್ ೧೫ 

ನಚಿಕೇತನ ಪ್ರಶ್ನೆಗೆ ಉತ್ತರಿಸುತ್ತಾ ಯಮ ಹೇಳುತ್ತಾನೆ: “ಸರ್ವ ವೇದಗಳು ಯಾರನ್ನು ಪ್ರತಿಪಾದಿಸುತ್ತವೋ, ಎಲ್ಲಾ ತರ್ಕಗಳು ಯಾರಲ್ಲಿ ಅಂತ್ಯವಾಗುತ್ತವೋ, ಯಾರನ್ನು ಇಚ್ಛಿಸುತ್ತಾ ಬ್ರಹ್ಮಚರ್ಯವನ್ನು ಆಚರಿಸುತ್ತಾರೋ-ಆ ಪದವನ್ನು ಅಡಕವಾಗಿ ನಿನಗೆ ಹೇಳುತ್ತಾನೆ: ಅದುವೇ ‘ಓಂ’ ”  ಎಂದು.
ಇಲ್ಲಿ ಯಮ  “ಸರ್ವ ವೇದಗಳೂ ಅಂತತಃ ಹೇಳುವುದು ಸರ್ವೋತ್ತಮನಾದ ಭಗವಂತನನ್ನಲ್ಲದೇ ಇನ್ನೇನನ್ನೂ ಅಲ್ಲ” ಎಂದಿದ್ದಾನೆ. ವೇದದಲ್ಲಿ ಬರುವ ‘ಅಗ್ನಿ, ವರುಣ, ಮಿತ್ರ, ವಾಯು, ಇತ್ಯಾದಿ ನಾಮಗಳು ಮೂಲತಃ ಭಗವಂತನ ನಾಮಗಳು. ಇದನ್ನು ನಮಗೆ ತಿಳಿಸುವುದಕ್ಕೋಸ್ಕರವೇ ವೇದವ್ಯಾಸರು ಸಹಸ್ರನಾಮ ಗ್ರಂಥ ರಚನೆ ಮಾಡಿದರು. ದೇವರ ಕುರಿತು ಅನ್ವೇಷಣೆಗೆ ಹೊರಟ ಎಲ್ಲಾ ಭಾಷೆಯ, ಎಲ್ಲಾ ಜಾತಿಯ, ಎಲ್ಲಾ ಗ್ರಂಥಗಳೂ ಕೂಡಾ, ಒಬ್ಬನೇ  ಒಬ್ಬ ದೇವರನ್ನು ಹೇಳುತ್ತವೆ. ಪ್ರಪಂಚದ ಎಲ್ಲಾ ಬುದ್ಧಿಜೀವಿಗಳ, ಎಲ್ಲಾ ತರ್ಕಗಳೂ ಕೂಡ ದೇವರ ಅಸ್ತಿತ್ವವನ್ನೇ ರುಜುವಾತು ಮಾಡುತ್ತವೆ. ತರ್ಕದ ಪರಿಸಮಾಪ್ತಿ ಕೇವಲ ಭಗವಂತ. ಈ ಕಾರಣದಿಂದ “ಭಗವಂತನನ್ನು  ಬಯಸಿ ಬ್ರಹ್ಮಚರ್ಯದಿಂದ ಭಗವಂತನೆಡೆಗೆ ಸಾಗು” ಎನ್ನುತ್ತಾನೆ ಯಮ. [ಇಲ್ಲಿ ಬ್ರಹ್ಮಚರ್ಯ ಎಂದರೆ:  (೧) ದೈಹಿಕವಾಗಿ ಇಂದ್ರಿಯ ನಿಗ್ರಹ; (೨) ಭಗವಂತನನ್ನು ತಿಳಿಸುವ ವೇದಾಧ್ಯಯನಕ್ಕಾಗಿ ಇಂದ್ರಿಯ ನಿಗ್ರಹ (೩) ಅಧ್ಯಯನದಿಂದ ಭಗವಂತನೆಡೆಗೆ ಸಾಗುವುದು. ಇತ್ಯಾದಿ.]
ಇಲ್ಲಿ ಯಮ  “ಸಮಸ್ತ ವೈದಿಕ ವಾಙ್ಮಯ ಹೇಳುವ, ಭಗವಂತನ ಮಹಿಮೆಯ ಬಿತ್ತರವನ್ನು ಹೇಳುವ ಬೀಜಾಕ್ಷರವನ್ನು ನಿನಗೆ ಹೇಳುತ್ತೇನೆ: ಅದುವೇ ‘ಓಂ’ ” ಎಂದಿದ್ದಾನೆ. ‘ಓಂ’ ಅನ್ನುವುದು ಕೇವಲ ಭಗವಂತನಿಗೆ ಮೀಸಲಾದ(exclusive) ಹೆಸರು. ಇದನ್ನು ಯಾವ ವ್ಯಕ್ತಿಗಾಗಲೀ, ದೇವತೆಗಳಿಗಾಗಲೀ ಬಳಸುವುದಿಲ್ಲ.  ಇದು ಭಗವಂತನ ವಿಶಿಷ್ಠ ನಾಮಧೇಯ. ‘ಓಂ’ ಸರ್ವ ವೇದವಾಙ್ಮಯದ ಬೀಜಾಕ್ಷರ. ಅದರಲ್ಲಿ ಸಮಸ್ತ ವೇದದ ಸಮಸ್ತ ಅರ್ಥಗಳೂ ಸೇರಿಕೊಂಡಿದೆ. ಜೈನ, ಬೌದ್ಧ ಧರ್ಮದವರಿಗೆ, ಹಿಂದೂ ಧರ್ಮದ ವಿವಿಧ ಕವಲಿನವರಿಗೂ ಕೂಡಾ ‘ಓಂ’ ಮೂಲ ಬೀಜಾಕ್ಷರ. ವಿದೇಶದವರು ಬಳಸುವ ‘ಆಮಿನ್, ಓಮ್ನಿ’, ಇತ್ಯಾದಿ ಕೂಡಾ ಮೂಲತಃ ಸಂಸ್ಕೃತದ ‘ಓಂ’ನ ವಿಕಾರ ರೂಪ. ಹೀಗೆ ವಿಶ್ವವ್ಯಾಪಿ ಓಂಕಾರ ಎಲ್ಲಾ ರೂಪದಲ್ಲೂ ಭಗವಂತನನ್ನು ಹೇಳುವ ಶಬ್ದ. ದೇವರನ್ನು ಕುರಿತು ಧ್ಯಾನ ಮಾಡಲು ಒಂದು ಮಂತ್ರ ಬೇಕು ಎಂದರೆ ಅದರಲ್ಲಿ ಅತ್ಯಂತ ಶ್ರೇಷ್ಠವಾದ ಮಂತ್ರ/ಬೀಜಾಕ್ಷರ ಓಂಕಾರ.
ಇಲ್ಲಿ ನಿಮಗೊಂದು ಪ್ರಶ್ನೆ ಮೂಡಬಹುದು. ಭಗವಂತನ ವಿಶೇಷ ನಾಮವಾದ ಓಂಕಾರವನ್ನು ಸ್ತ್ರೀಯರು ಏಕೆ ಹೇಳಬಾರದು ಎಂದು. ಸ್ತ್ರೀಯರು ಓಂಕಾರ ಹೇಳಬಾರದು ಎನ್ನುವುದು ಪೂರ್ಣ ಅವೈಜ್ಞಾನಿಕ. ಓಂ ಎನ್ನುವುದು ಅಕ್ಷರ ಮಾಲಿಕೆಯಲ್ಲಿ ಒಂದು ಅಕ್ಷರ ಕೂಡಾ ಹೌದು. ಯಾವ ಅಕ್ಷರ ಮಾಲಿಕೆಯೂ ಯಾರಿಗೂ ನಿಷಿದ್ಧವಲ್ಲ. ಆದ್ದರಿಂದ ‘ಓಂಕಾರವನ್ನು ಎಲ್ಲರೂ ಹೇಳಬಹುದು. ಆದರೆ ಓಂಕಾರ ಜಪ ಮಾತ್ರ ಎಲ್ಲರೂ ಮಾಡುವಂತಿಲ್ಲ. ಕಾರಣ:   ಓಂಕಾರದ ಹಿಂದಿರುವ ಎಲ್ಲಾ ಅರ್ಥಾನುಸಂಧಾನದೊಂದಿಗೆ  ಜಪ ಮಾಡಿದರೆ ಅದು ಅತ್ಯಂತ ಪರಿಣಾಮಕಾರಿ. ಸಾಮಾನ್ಯವಾಗಿ ಸನ್ಯಾಸಿಗಳು ಓಂಕಾರ ಜಪವನ್ನು ಮಾಡುತ್ತಾರೆ. ಗ್ರಹಸ್ಥನಾದವನು ನಿರಂತರ ಓಂಕಾರ ಜಪ ಮಾಡುವುದು ಅಷ್ಟು ಸೂಕ್ತವಲ್ಲ. ಗಂಡಸರು ಗರಿಷ್ಠ ಹತ್ತು ಬಾರಿ ಮಾಡಬಹುದಾದರೆ, ಸಂಸಾರ ಜೀವನ ನಡೆಸುವ ಹೆಂಗಸರು ಓಂಕಾರ ಜಪ ಮಾಡದಿರುವುದು ಒಳ್ಳೆಯದು. ಏಕೆಂದರೆ ಓಂಕಾರವನ್ನು ಪೂರ್ಣ ತೊಡಗಿಸಿಕೊಂಡು, ಅರ್ಥಾನುಸಂಧಾನದಿಂದ ಜಪ  ಮಾಡುವುದರಿಂದ ಅದು ಮನಸ್ಸಿನ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರುತ್ತದೆ. ಇದು ಒಂದು ರೀತಿಯ ಧ್ಯಾನವಿದ್ದಂತೆ. ಇದರಿಂದ ಮನಸ್ಸು ಮಗ್ನವಾಗಿ, ಸಾಂಸಾರಿಕ ಜೀವನದಲ್ಲಿ ವೈರಾಗ್ಯ ಬರುವ ಅಪಾಯವಿದೆ. ಆದರೆ ಸನ್ಯಾಸಿಗೆ ಈ ರೀತಿಯ ಯಾವ ಸಮಸ್ಯೆಯೂ ಇಲ್ಲ. ಆತ ತನ್ನ  ದೇಹ ತಡೆದುಕೊಳ್ಳುವಷ್ಟು(೧೨,೦೦೦) ಬಾರಿ ಓಂಕಾರ ಜಪ ಮಾಡಬಹುದು. 

No comments:

Post a Comment