Sunday, May 6, 2012

Katopanishad kannada ch-01 canto-2 shloka 04-09


ದೂರಮೇತೇ ವಿಪರೀತೇ ವಿಷೂಚೀ ಅವಿದ್ಯಾ ಯಾ ಚ ವಿದ್ಯೇತಿ ಜ್ಞಾತಾ
ವಿದ್ಯಾಭೀಪ್ಸಿನಂ ನಚಿಕೇತಸಂ ಮನ್ಯೇ ನ ತ್ವಾ ಕಾಮಾ ಬಹವೋಽಲೋಲುಪಂತ        

ಬಹಳ ಮಂದಿ ತತ್ಕಾಲದ ಚಪಲಕ್ಕೆ ಬಿದ್ದು ಶ್ರೇಯಸ್ಸಿನ ದಾರಿಯನ್ನು ಬಿಟ್ಟು ಪ್ರೇಯಸ್ಸಿನ ದಾರಿಯನ್ನೇಕೆ ಹಿಡಿಯುತ್ತಾರೆ ಎನ್ನುವುದನ್ನು ಇಲ್ಲಿ ಯಮ ವಿವರಿಸಿದ್ದಾನೆ. ಮುಖ್ಯವಾಗಿ ಮಾನವನಿಗಿರುವುದು ಎರಡು ದಾರಿಗಳು. ಒಂದು ಶ್ರೇಯಸ್ಸಿನ ಕಡೆಗೆ ಹೋಗುವ ಜ್ಞಾನದ ದಾರಿ ಹಾಗೂ ಇನ್ನೊಂದು ತತ್ಕಾಲದ ಸೆಳತಕ್ಕೆ ಬಲಿಯಾಗುವಂತೆ ಮಾಡುವ ಅಜ್ಞಾನದ ದಾರಿ. ಜಗತ್ತಿನಲ್ಲಿ ವ್ಯಾಪಿಸಿರುವುದು ಜ್ಞಾನಕ್ಕಿಂತ ಹೆಚ್ಚು ಅಜ್ಞಾನ. ಅಜ್ಞಾನಿಗಳಿಗೆ ತಮಗೆ ಏನೂ ತಿಳುವಳಿಕೆ ಇಲ್ಲಾ ಎನ್ನುವ ವಿಷಯವೂ ತಿಳಿದಿರುವುದಿಲ್ಲ. ಹಾಗಾಗಿ ಅಜ್ಞಾನಿ ಸುಲಭವಾಗಿ ಪ್ರೇಯಸ್ಸಿನ ಸೆಳತಕ್ಕೆ ಬಲಿಯಾಗುತ್ತಾನೆ. ಆದರೆ ತಿಳುವಳಿಕೆಯುಳ್ಳವ ಎಷ್ಟೇ ಆಕರ್ಷಣೆ ಇದ್ದರೂ, ಅದಕ್ಕೆ ಬಲಿಯಾಗದೆ, ಗಟ್ಟಿಯಾಗಿ ನಿಂತುಬಿಡುತ್ತಾನೆ. ಆದ್ದರಿಂದ ಮೂಲಭೂತವಾಗಿ ಶ್ರೇಯಸ್ಸು-ಪ್ರೇಯಸ್ಸು ಎನ್ನುವುದರ ಆಯ್ಕೆ  ಜ್ಞಾನ-ಅಜ್ಞಾನ, ವಿದ್ಯೆ-ಅವಿದ್ಯೆಗೆ ಸಂಬಂಧಪಟ್ಟದ್ದು.   ಇವು ಪರಸ್ಪರ ವಿರುದ್ಧ  ಸ್ವಭಾವವುಳ್ಳ ಹಾಗೂ ವಿರುದ್ಧ ಫಲವನ್ನು ಕೊಡುವ, ವಿರುದ್ಧ ದಿಕ್ಕಿಗೆ ಸಾಗುವಂತವು. ಇಲ್ಲಿ ಯಮ ನಚಿಕೇತನನ್ನು ಪ್ರಶಂಸಿಸುತ್ತಾ ಹೇಳುತ್ತಾನೆ: “ನೀನು ಅವಿದ್ಯೆಯ ಬೆನ್ನು ಹತ್ತಿದ್ದರೆ ಪ್ರೇಯಸ್ಸಿನ ಕಡೆ ಸಾಗುತ್ತಿದ್ದೆ, ಆದರೆ ನೀನು ಹಾಗೆ ಮಾಡದೇ ವಿದ್ಯೆಯ ಬೆನ್ನು ಹತ್ತಿದ್ದುದರಿಂದ ನಿನಗೆ ಶ್ರೇಯಸ್ಸು ಇಷ್ಟವಾಯಿತು. ಈ ಕಾರಣದಿಂದ ಯಾವ ಕಾಮನೆಗಳೂ ನಿನ್ನನ್ನು ಮರಳುಗೊಳಿಸಲಿಲ್ಲ” ಎಂದು

ಅವಿದ್ಯಾಯಾಮಂತರೇ ವೇಷ್ಟ್ಯಮಾನಾಃ ಸ್ವಯಂ ಧೀರಾಃ ಪಂಡಿತಂಮನ್ಯಮಾನಾಃ
ದಂದ್ರಮ್ಯಮಾಣಾಃ ಪರಿಯಂತಿ ಮೂಢಾ ಅಂಧೇನೈವ ನೀಯಮಾನಾ ಯಥಾಂಧಾಃ   

[ಇತ್ತೀಚೆಗೆ ಪ್ರಕಟವಾಗುತ್ತಿರುವ ಹೆಚ್ಚಿನ ಪುಸ್ತಕಗಳಲ್ಲಿ ಈ ಶ್ಲೋಕದ ಮೊದಲ ಸಾಲು “ಅವಿದ್ಯಾಯಾಮಂತರೇ ವರ್ತಮಾನಾಃ” ಎಂದು ಮುದ್ರಣವಾಗಿರುವುದನ್ನು ಕಾಣುತ್ತೇವೆ. ಆದರೆ ಇದು ಕಠೋಪನಿಷತ್ತಿನ ಪಾಠವಲ್ಲ. ಇದು ಮುಂಡಕ ಉಪನಿಷತ್ತಿನ ಪಾಠ[೧-೨-೮].  “ಅವಿದ್ಯಾಯಾಮಂತರೇ ವೇಷ್ಟ್ಯಮಾನಾಃ” ಎನ್ನುವುದು  ಕಠೋಪನಿಷತ್ತಿನ ಪಾಠ. ಅದೇ ರೀತಿ “ದಂದ್ರಮ್ಯಮಾಣಾಃ ಪರಿಯಂತಿ ಮೂಢಾ” ಎನ್ನುವುದು ಕಠೋಪನಿಷತ್ತಿನ ಪಾಠವಾದರೆ “ಜಂಘನ್ಯಮಾನಾಃ ಪರಿಯಂತಿ ಮೂಢಾ” ಎನ್ನುವುದು ಮುಂಡಕ ಉಪನಿಷತ್ತಿನ ಪಾಠ.]

ಮನುಷ್ಯನ ವ್ಯಕ್ತಿತ್ವವನ್ನು ಸುಂದರವಾಗಿ ಮತ್ತು ಕರಾರುವಕ್ಕಾಗಿ ಯಮ ಇಲ್ಲಿ ಚಿತ್ರಿಸಿದ್ದಾನೆ. ಇಂದು ಪ್ರತಿಯೊಬ್ಬನೂ ಕೂಡಾ ಅಜ್ಞಾನದಲ್ಲಿ ಮುಳುಗಿದ್ದಾನೆ. ಸತ್ಯದ ಜ್ಞಾನ ಯಾರಿಗೂ ಇಲ್ಲ. ನಾವು ಎಷ್ಟೇ ಓದಿದ್ದರೂ ಕೂಡಾ ಜಗತ್ತಿನ ಮೂಲ ರಹಸ್ಯ ಅರಿಯುವುದು ನಮ್ಮಿಂದ ಸಾಧ್ಯವಿಲ್ಲ. ಅಮೆರಿಕಾದ ಭೌತಶಾಸ್ತ್ರಜ್ಞ ಮತ್ತು ವಿಜ್ಞಾನಿ Fritjof Capra[author of 'The Tao of Physics']ಹೇಳುವಂತೆ: “ಜಗತ್ತಿನ ಮೂಲ ಸತ್ಯ ಎಂದೂ ವಿಜ್ಞಾನಕ್ಕೆ ತಿಳಿಯುವುದಿಲ್ಲ. ಅದು ಎಂದೆಂದೂ ಅವೇದ್ಯವಾಗಿಯೇ ಉಳಿಯುತ್ತದೆ.” ಮಹಾಭಾರತದ ದ್ರೌಪದೀ ವಸ್ತ್ರಾಪಹರಣ ಇದೇ ಸಂದೇಶವನ್ನು ಕೊಡುತ್ತದೆ. ಅಲ್ಲಿ ದುರ್ಯೋಧನ ಮತ್ತು ದುಶ್ಯಾಸನ ಸತ್ಯವನ್ನು ನಿರಾಕರಣೆ ಮಾಡಿ ಪ್ರಕೃತಿ [ದ್ರೌಪದಿ] ಯನ್ನು ಬತ್ತಲೆ ಮಾಡಬೇಕೆಂದು ಪ್ರಯತ್ನಿಸಿದರೂ, ರಹಸ್ಯ ಭೇದನೆ ಅವರಿಂದ ಅಸಾಧ್ಯವಾಯಿತು.  ಆದ್ದರಿಂದ ನಾವು ತಿಳಿಯಬೇಕಾದ ಮೂಲ ಸತ್ಯ ಏನೆಂದರೆ: “ಜಗತ್ತಿನ ಮೂಲ ಸತ್ಯ ನಮಗೆ ತಿಳಿದಿಲ್ಲ” ಎನ್ನುವ ಸತ್ಯ.  ಇಲ್ಲಿ ಯಮ ಹೇಳುತ್ತಾನೆ: “ಇಂದು ಪ್ರತಿಯೊಬ್ಬರೂ ಅಜ್ಞಾನದ ಬೇಲಿ ಹಾಕಿಕೊಂಡು ತಾವು ಸುಭದ್ರರು ಎಂದು ತಿಳಿದು ಕುಳಿತಿದ್ದಾರೆ. ಆದರೆ ಅವರು ಮೂಲತಃ ಅಜ್ಞಾನವೆಂಬ ಬೇಲಿಯಿಂದ ತಮ್ಮನ್ನೇ ತಾವು ಸುತ್ತಿಕೊಂಡವರು” ಎಂದು. ಈ ರೀತಿ ಬದುಕುವವರನ್ನು ಇಲ್ಲಿ “ದಂದ್ರಮ್ಯಮಾಣಾಃ” ಎಂದು ವರ್ಣಿಸಲಾಗಿದೆ. ಅಂದರೆ ಮರದಂತೆ ಬದುಕುವವರು ಎಂದರ್ಥ. ಮರವಾಗಿ ಹುಟ್ಟುವ ಜೀವ ಇನ್ನೊಬ್ಬರಿಗೆ ಆಸರೆಯಾಗಿರಬಹುದು. ಆದರೆ ಅಲ್ಲಿ ಆ ಜೀವಕ್ಕೆ ನೂರಾರು ವರ್ಷ ಯಾವ ಭೌದ್ಧಿಕ ವಿಕಾಸವೂ ಇಲ್ಲ. ಹಾಗೇ  ಏನೂ ಗೊತ್ತಿಲ್ಲದಿದ್ದರೂ ಕೂಡ ಎಲ್ಲಾ ಗೊತ್ತಿದೆ ಎಂದು ತಿಳಿಯುವ ಜನರು ಕುರುಡರ ಬೆನ್ನು ಹತ್ತಿದ ಕುರುಡರ ಸಂತೆಯಂತೆ.  ಹಿಂದಿನವರು ‘ಕಂಡವರ ಬೆನ್ನು ಹತ್ತು’ ಎಂದರೆ –ಇಂದು ನಾವು 'ಕಂಡವರು' ಯಾರು ಎಂದು ಅರಿಯದೇ ಕಂಡಕಂಡವರ ಬೆನ್ನುಹತ್ತಿ ಅಧಃಪಾತವನ್ನು ಹೊಂದುತ್ತಿದ್ದೇವೆ. ಹೀಗೆ ಈ ಶ್ಲೋಕದಲ್ಲಿ ಬಹಳ ರೋಚಕವಾಗಿ ಮನುಷ್ಯ ಸ್ವಭಾವದ ದುರಂತವನ್ನು ಯಮ ವಿವರಿಸಿದ್ದಾನೆ.

ನ ಸಾಂಪರಾಯಃ ಪ್ರತಿಭಾತಿ ಬಾಲಂ  ಪ್ರಮಾದ್ಯಂತಂ ವಿತ್ತಮೋಹೇನ ಮೂಢಮ್ 
ಅಯಂ ಲೋಕೋ ನಾಸ್ತಿ ಪರ ಇತಿ ಮಾನೀ ಪುನಃ ಪುನರ್ವಶಮಾಪದ್ಯತೇ ಮೇ                      

ಮುಂದುವರಿದು ಯಮ ಹೇಳುತ್ತಾನೆ: ಯಾರು ಬಾಲಿಶರೋ ಅವರಿಗೆ ಸತ್ಯ ತಿಳಿಯುವುದಿಲ್ಲ. ಅವರು ಸದಾ ಕೆಳಕ್ಕೆ ಜಾರುತ್ತಿರುತ್ತಾರೆ. ದುಡ್ಡಿನ ಆಸೆಯಿಂದ ಸದಾ ತಪ್ಪು ಮಾಡುತ್ತಿರುತ್ತಾರೆ. ಯಾರಿಗೆ ವೇದಾಂತ ಹಿಡಿಸುವುದಿಲ್ಲ ಅವರು ಬಾಲಿಶರಿರುತ್ತಾರೆ ಮತ್ತು ಬಾಲಿಶರಾದವರಿಗೆ ವೇದಾಂತ ಹಿಡಿಸುವುದಿಲ್ಲ. ಇವರು ದೇವರನ್ನು ಒಪ್ಪಿದರೂ ಕೂಡಾ ದೇವರ ಬಗ್ಗೆ ಕಾಳಜಿ ಹೊಂದಿರುವುದಿಲ್ಲ. ಇವರು ದುಡ್ಡಿನ ಆಸೆಯಿಂದ ಪರಲೋಕ, ಭಗವಂತ, ಮೋಕ್ಷ ಇತ್ಯಾದಿ ನಂಬಿಕೆಯನ್ನು ಕಳೆದುಕೊಂಡು ಭ್ರಮೆಗೆ ಬಲಿಬಿದ್ದು, ನನಗೆ ಕಾಣುವುದಷ್ಟೇ ಪ್ರಪಂಚ, ಅದರಿಂದಾಚೆಗೆ ಏನೂ ಇಲ್ಲ ಎಂದು ತಿಳಿದಿರುತ್ತಾರೆ[ಅಥವಾ ಈ ಲೋಕವೂ ಮಿಥ್ಯ, ಪರಲೋಕವೂ ಮಿಥ್ಯ, ನಾನೊಬ್ಬನೇ ಸತ್ಯ ಎಂದು ತಿಳಿದಿರುತ್ತಾರೆ]. ಇದರ ಪರಿಣಾಮ ಇವರು ಹುಟ್ಟು ಸಾವಿನ ಚಕ್ರಭ್ರಮಣದಲ್ಲಿ ಸದಾ ಸುತ್ತುವಂತಾಗುತ್ತದೆ.

ಶ್ರವಣಾಯಾಪಿ ಬಹುಭಿರ್ಯೋ ನ ಲಭ್ಯಃ  ಶೃಣ್ವಂತೋಽಪಿ ಬಹವೋ ಯಂ ನ ವಿದ್ಯುಃ
ಆಶ್ಚರ್ಯೋ ವಕ್ತಾ ಕುಶಲೋಽಸ್ಯ ಲಬ್ಧಾ  ಆಶ್ಚರ್ಯೋ ಜ್ಞಾತಾ ಕುಶಲಾನುಶಿಷ್ಟಃ                        

ವೇದಾಂತ ಕೇಳಿ ಸಾಧನೆ ಸಾಧ್ಯ ಎಂದುಕೊಂಡರೆ ಅದು ಅಷ್ಟು ಸುಲಭದ ವಿಷಯವಲ್ಲ. ಇಲ್ಲಿ ಯಮ ಹೇಳುತ್ತಾನೆ “ಬಹಳ ಸಂದರ್ಭದಲ್ಲಿ ಆಧ್ಯಾತವನ್ನು ತಿಳಿಯಬೇಕು ಎಂದುಕೊಂಡರೂ ಹೇಳುವವರು ಸಿಗುವುದಿಲ್ಲ ಮತ್ತು ಹೇಳುವವರಿದ್ದಾಗ ಕೇಳಬೇಕು ಎನಿಸುವುದಿಲ್ಲ” ಎಂದು.  ಹೀಗಾಗಿ ಕೇಳುವ ಅವಕಾಶವೇ ಬಹಳ ಮಂದಿಗೆ ಇಡೀ ಜೀವಮಾನದಲ್ಲೇ  ಸಿಗುವುದಿಲ್ಲ.  ಕೆಲವರಿಗೆ ಕೇಳುವ ಯೋಗವಿರುವುದಿಲ್ಲ, ಇನ್ನು ಕೆಲವರಿಗೆ ಕೇಳಿದರೂ ಅರ್ಥವಾಗುವುದಿಲ್ಲ. ಯಾರಾದರೊಬ್ಬರು ಆಧ್ಯಾತ್ಮದ ಬಗ್ಗೆ, ವೇದೋಪನಿಷತ್ತುಗಳ ಬಗ್ಗೆ ಮಾತನಾಡುತ್ತಾರೆ ಅಂದರೆ ಅದೊಂದು ವಿಸ್ಮಯ. ಅಂತಹ ಶಕ್ತಿ ದೇವರು ಯಾರಿಗಾದರೂ ಕೊಟ್ಟಿದ್ದರೆ ಅದು ಅವನ ಭಾಗ್ಯ. ಹೇಳಿದ್ದನ್ನು ಕೇಳಿಸಿಕೊಳ್ಳುವುದೂ ಒಂದು ಭಾಗ್ಯ, ಕೇಳಿದ್ದು ಅರ್ಥವಾದರೆ ಅದು ಅದ್ಭುತ. ಒಬ್ಬ ನುರಿತ ಶಾಸ್ತ್ರಜ್ಞನಿಂದ ಕೇಳಿ ತಿಳಿದುಕೊಳ್ಳುವುದು ಇನ್ನೊಂದು ಆಶ್ಚರ್ಯ.   

ನ ನರೇಣಾವರೇಣ ಪ್ರೋಕ್ತ ಏಷ  ಸುವಿಜ್ಞೇಯೋ ಬಹುಧಾ ಚಿಂತ್ಯಮಾನಃ
ಅನನ್ಯಪ್ರೋಕ್ತೇ ಗತಿರತ್ರ ನಾಸ್ತಿ  ಅಣೀಯಾನ್ ಹ್ಯತರ್ಕ್ಯಮಣುಪ್ರಮಾಣಾತ್  

 ದೇವರ ಬಗ್ಗೆ ಏನೂ ತಿಳುವಳಿಕೆ ಇಲ್ಲದೇ ಮಾತನಾಡುವ ಅನೇಕ ಮಂದಿಯನ್ನು ನಾವು ಪ್ರಪಂಚದಲ್ಲಿ ಕಾಣುತ್ತೇವೆ. ಇವರಿಗೆ ದೇವರ ಬಗ್ಗೆ ಅನುಭೂತಿ ಇರುವುದಿಲ್ಲ. ದೇವರ ಎತ್ತರವನ್ನು ತಿಳಿಯದ ಇವರು ದೇವರನ್ನು  ಅವನ ಎತ್ತರಕ್ಕಿಂತ ಕೆಳಗೆಳೆದು ತಪ್ಪಾಗಿ ತಿಳಿಸುತ್ತಾರೆ. ಪ್ರಪಂಚದಲ್ಲಿ ದೇವರ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುವುದನ್ನು ಕಾಣುತ್ತೇವೆ. ಕಾರಣವೇನೆಂದರೆ ಅವರು ದೇವರನ್ನು ಕಂಡು ಮಾತನಾಡುವವರಲ್ಲ. ಇವರು ದೇವರ ವ್ಯಕ್ತಿತ್ವವನ್ನು ಕುಗ್ಗಿಸಿ ದೇವರನ್ನು ತಮ್ಮ ಸೀಮೆಯಲ್ಲಿ ಕಟ್ಟಿಹಾಕಿ ವಿವರಿಸುತ್ತಾರೆ. ಇಂತವರಿಂದ ಭಗವಂತನನ್ನು ಅರಿಯಲು ಸಾಧ್ಯವಿಲ್ಲ. ದೇವರ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೇ ‘ನನ್ನಿಂದ ಭಗವಂತ ಅನ್ಯನಲ್ಲ’ ಎಂದು ಹೇಳುವವರಿಂದ ಪಾಠ ಕೇಳಿದರೆ ತಿಳುವಳಿಕೆ ಬರುವುದಿಲ್ಲ. ಮಹತೋಮಯನಾದ ಭಗವಂತ ಅಣೋರಣೀಯನೂ ಹೌದು. ಇಂತಹ ಭಗವಂತ ನಮ್ಮ ತರ್ಕಕ್ಕೆ ಎಟುಕುವವನಲ್ಲ.

ನೈಷಾ ತರ್ಕೇಣ ಮತಿರಾಪನೇಯಾ ಪ್ರೋಕ್ತಾಽನ್ಯೇನೈವ ಸುಜ್ಞಾನಾಯ ಪ್ರೇಷ್ಠ
ಯಾಂ ತ್ವಮಾಪಃ ಸತ್ಯಧೃತಿರ್ಬತಾಸಿ ತ್ವಾದೃಙ್ನೋ ಭೂಯಾನ್ನಚಿಕೇತಃ ಪ್ರಷ್ಟಾ

ಭಗವಂತನನ್ನು ತರ್ಕದಿಂದ 'ಇಲ್ಲಾ' ಎಂದು ನಿರಾಕರಣೆ ಮಾಡುವುದಾಗಲೀ, 'ಇದ್ದಾನೆ' ಎಂದು ಸಾಧಿಸಿ ತೋರಿಸುವುದಾಗಲೀ ಸಾಧ್ಯವಿಲ್ಲ. ಆತ್ಮಜ್ಞಾನವನ್ನು ತರ್ಕದಿಂದ ಪಡೆಯುವುದು ಅಸಾಧ್ಯ. ಇದು ಭಗವಂತನ ಹಿರಿಮೆಯನ್ನರಿತ  ಜ್ಞಾನಿಗಳಿಂದ ತಿಳಿಯಲ್ಪಡುವಂತಹದ್ದು ಮತ್ತು ಅನುಭವದಿಂದ ತಿಳಿಯುವಂತಹದ್ದು. ಓ ನಚಿಕೇತಾ, ನೀನು ತರ್ಕದ ಬೆನ್ನು ಹತ್ತಿದವನಲ್ಲ. ಭಗವಂತನ ಬಗೆಗೆ ಭರವಸೆ ಉಳ್ಳವನು ನೀನು. ನಿನ್ನಂತೆ ಅನುಭವದಿಂದ ಆಧ್ಯಾತ್ಮ ತಿಳಿಯಬೇಕು ಎನ್ನುವ ಅಭಿಲಾಷೆಯುಳ್ಳ ವಿದ್ಯಾರ್ಥಿಗಳು ನಮಗೆ ಸಿಗಲಿ ಎಂದು ಯಮ ನಚಿಕೇತನನ್ನು ಪ್ರಶಂಶಿಸಿತ್ತಾನೆ. 

No comments:

Post a Comment