Thursday, March 29, 2012

ಪ್ರಸ್ತಾವನೆ

ಉಪನಿಷತ್ತಿನಲ್ಲಿ ಬಹಳ ಪ್ರಸಿದ್ಧವಾದ, ಕೃಷ್ಣ ಯಜುರ್ವೇದದ ಕಠ ಎನ್ನುವ ಶಾಖೆಯಿಂದ ಬಂದಿರುವ,  ‘ಕಠ’ ಎನ್ನುವ ಋಷಿ ಪರಂಪರೆಯಲ್ಲಿ ಅನುಷ್ಠಾನಕ್ಕೆ ಬಂದ   ಉಪನಿಷತ್ತು ಈ ಕಾಠಕೋಪನಿಷತ್ತು. ಈ ಉಪನಿಷತ್ತನ್ನು ಉಳಿಸಿಕೊಂಡು ಬಂದವರು ‘ಕಠ’ ಎನ್ನುವ ಋಷಿ ಮನೆತನವಾದರೆ, ಈ ಉಪನಿಷತ್ತಿನ ನಿಜವಾದ ಋಷಿ ಯಮ ಮತ್ತು ನಚಿಕೇತ. ಶಿಷ್ಯನಾಗಿ ನಚಿಕೇತ ಹಾಕುವ ಪ್ರಶ್ನೆಗೆ ಯಮ ಕೊಡುವ ಉತ್ತರವೇ(ಉಪದೇಶವೇ) ಕಠೋಪನಿಷತ್ತು.
ಇಂದು  ನಮಗೆ 'ಕಠ' ಎನ್ನುವ ಹೆಸರು ಬಹಳ ವಿಚಿತ್ರವಾಗಿ ಕಾಣಿಸಬಹುದು. ಇದು ವೇದಕಾಲದ ಋಷಿಯ ಹೆಸರು. ಇಂದು ವೇದಕಾಲದ ಋಷಿಗಳ ಹೆಸರು ರೂಢಿಯಲ್ಲಿಲ್ಲ.  ಕೇಳುವುದಕ್ಕೆ  ವಿಚಿತ್ರವಾಗಿದೆ ಎನಿಸುವ ಈ ಹೆಸರು ತುಂಬಾ ಅರ್ಥಪೂರ್ಣವಾಗಿದ್ದು, ನಮಗೆ ಆ ನಾಮದ ಹಿಂದಿರುವ ಅರ್ಥ ತಿಳಿಯದೇ ಇರುವುದರಿಂದ ಅದು ವಿಚಿತ್ರವೆನಿಸುತ್ತದೆ. ಸಂಸ್ಕೃತದ ‘ಕಠ’ ಎನ್ನುವ ದಾತುವಿನಿಂದ ಈ ಶಬ್ದ ನಿಷ್ಪನ್ನವಾಗಿದೆ. ‘ಕಠ’ ಎಂದರೆ ಜೀವನದಲ್ಲಿ ಪರಿಶ್ರಮಪಟ್ಟು ದುಡಿಯುವವರು ಎಂದರ್ಥ.  ಈ ಉಪನಿಷತ್ತು ನಮಗೆ ಅರ್ಥವಾಗಬೇಕಾದರೆ ನಾವೂ ಕೂಡ ಸ್ವಲ್ಪ ‘ಕಠ’ರಾಗಬೇಕು. ಅರ್ಥ ಮಾಡಿಕೊಳ್ಳಲೇಬೇಕು ಎನ್ನುವ ಹಠದಿಂದ ಪರಿಶ್ರಮಪಟ್ಟು ಅಧ್ಯಯನ ಮಾಡಬೇಕು.
ಇಂದಿನ ಸಾಮಾಜಿಕ ಜೀವನದಲ್ಲಿ ಸತ್ಯವನ್ನು ಯಥಾರ್ಥವಾಗಿ ತಿಳಿಯಬಯಸುವವರಿಗೆ ಕಾಠಕೋಪನಿಷತ್ತು ತುಂಬಾ ಸಹಾಯಕ. ಭಾರತೀಯ ತತ್ವಶಾಸ್ತ್ರದಲ್ಲಿ ಹೇಳಲಾದ -ಅತೀಂದ್ರಿಯವಾದ ವಸ್ತುಗಳು,  ಕಣ್ಣಿಗೆ ಕಾಣದ ಸೂಕ್ಷ್ಮಲೋಕ, ಅಲ್ಲಿನ ಸುಖ-ದುಃಖದ ಅನುಭವ, ಅದನ್ನು ಅನುಭವಿಸಲು ಭೂಲೋಕದಿಂದ ಅಲ್ಲಿಗೆ ಹೋಗುವ ಜೀವ, ಆ ಜೀವನನ್ನು ನಿಯಂತ್ರಿಸುವ ದೇವರು ಇತ್ಯಾದಿಯನ್ನು ಇಂದು ನಿಜವೋ ಸುಳ್ಳೋ ಎಂದು ತಿಳಿದುಕೊಳ್ಳುವುದು ಕಷ್ಟವಾಗುತ್ತಿದೆ. ಇದರ ಜಿಜ್ಞಾಸೆಗೋಸ್ಕರವೇ ಮೀಸಲಾದ ಉಪನಿಷತ್ತು ಕಠೋಪನಿಷತ್ತು.
ಈ ಉಪನಿಷತ್ತಿನ ವಿಶೇಷವೆಂದರೆ ಇಲ್ಲಿ ಉತ್ತರ ಕೊಡುವವ ಯಮ. ಪರಲೋಕ ಅಸ್ತಿತ್ವವಿದ್ದರೆ ಮಾತ್ರ ಯಮನಿಗೆ ಅಸ್ತಿತ್ವ. ಸೂಕ್ಷ್ಮಲೋಕದ ಅಸ್ತಿತ್ವ, ಅಲ್ಲಿನ ಸುಖ-ದುಃಖವನ್ನು ಅರಿತ ಯಮನಲ್ಲಿ ಪ್ರಶ್ನೆ ಕೇಳುವವ ಭೂಲೋಕದ ಒಬ್ಬ ಪುಟ್ಟ ಬಾಲಕ. ಈ ಉಪನಿಷತ್ತಿನ ಪ್ರತಿಪಾದ್ಯ ದೇವತೆ ಮೋಕ್ಷ ನಿಯಾಮಕನಾದ ಭಗವಂತ. ಭಗವಂತ ನಮ್ಮನ್ನು ಸಂಸಾರದಲ್ಲಿ ಮಾತ್ರ ನಿಯಮಿಸುವುದೋ ಅಥವಾ ಮೊಕ್ಷದಲ್ಲೂ ಆತನ ನಿಯಂತ್ರಣವಿದೆಯೋ? ಮೋಕ್ಷಕ್ಕೆ ಹೋದ ಜೀವದ ಇರವು ಹೇಗಿರುತ್ತದೆ? ಮೋಕ್ಷಕ್ಕೆ ಹೋದ ಮೇಲೆ ಏನಾಗುತ್ತದೆ? ಇತ್ಯಾದಿ ನಚಿಕೇತನ ಮುಖ್ಯವಾದ ಪ್ರಶ್ನೆಗಳು. ಮುಗ್ಧ ಬಾಲಕನ ಪ್ರಶ್ನೆಗೆ ಯಮನ ಉತ್ತರವೇ ಈ ಕಠೋಪನಿಷತ್ತು.
ಇಲ್ಲಿ ಪ್ರಶ್ನೆ ಹಾಕುವ ಬಾಲಕನ ಹೆಸರು ‘ನಚಿಕೇತ’. ನಚಿಕೇತ ಎನ್ನುವ ಶಬ್ದದ ಅರ್ಥ – ನ ಕಿಂಚಿತ್  ಚಿಕೇತಃ  ಇತಿ ನಚಿಕೇತಃ. ಅಂದರೆ ಏನೂ ಮಾಡದವ ಎಂದರ್ಥ! ಈ ಅರ್ಥವನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಏನೂ ಮಾಡದವನಿಗೆ ಯಮನೇಕೆ ಉಪದೇಶಕೊಟ್ಟ? ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ನಾವು ನಚಿಕೇತನ ಹಿನ್ನೆಲೆಯನ್ನು ತಿಳಿಯಬೇಕಾಗುತ್ತದೆ. ವಾಜಶ್ರವಸ್ಸಿನ ಮಗಳು ಅರುಣಾ. ಅರುಣೆಯ ಮಗನಾದ ಉದ್ಧಾಲಕ ಎನ್ನುವ ಋಷಿ ಕುಟುಂಬದಲ್ಲಿ ಹುಟ್ಟಿದವ ನಚಿಕೇತ. ಉದ್ಧಾಲಕ ಮಹಾಜ್ಞಾನಿ. ಆದರೆ ಆತ ತನ್ನ ಮನಸ್ಸಿನ ಕಾಮ-ಕ್ರೋಧ-ಮೋಹವನ್ನು ಪೂರ್ತಿ ಬಿಡಲಾಗದೆ ಲೋಭಿಯಾಗಿದ್ದ. ಈ ಕಾರಣದಿಂದ ಆತ ತಪ್ಪು ಮಾಡುತ್ತಿದ್ದ. ಆತನಿಗೆ ಇಬ್ಬರು ಮಕ್ಕಳು. ಮೊದಲನೆಯವ ಶ್ವೇತಕೇತು ಹಾಗೂ ಎರಡನೇಯವ ನಚಿಕೇತ. ಚಿಕ್ಕವನಿದ್ದಾಗ ನಚಿಕೇತ ಬಹಳ ಮೌನಿಯಾಗಿದ್ದ. ಹಾಗಾಗಿ ಆತನ ತಂದೆ-ತಾಯಿ ಆತನ ಅಂತರಂಗದ ಬೆಳವಣಿಗೆಯನ್ನು ಗುರುತಿಸಲಿಲ್ಲ. ಏನೂ ಮಾಡದವನೆಂದು ತಿಳಿದು ಆತನನ್ನು ಗುರುಕುಲಕ್ಕೆ ಕಳುಹಿಸದೆ, ಮನೆಯಲ್ಲೇ ಇರಿಸಿಕೊಂಡರು. ಶಿಕ್ಷಣದಿಂದ ವಂಚಿತನಾದ ನಚಿಕೇತ ಮನೆಯಲ್ಲಿ ತಂದೆ ತಾಯಿ ಚಾಕರಿ ಮಾಡಿಕೊಂಡಿದ್ದ. ಇಂಥಹ ನಚಿಕೇತನೇ ಈ ಉಪನಿಷತ್ತಿನ ಒಬ್ಬ ಋಷಿ(ಶಿಷ್ಯ) ಹಾಗೂ ಯಮ ಉಪದೇಶ ಮಾಡಿದ ಇನ್ನೊಬ್ಬ ಋಷಿ(ಗುರು). 
ಬನ್ನಿ, ಮೋಕ್ಷ ನಿಯಾಮಕನಾದ ಭಗವಂತನ ಕುರಿತಾಗಿರುವ ಈ  ಕೃತಿಯನ್ನು  ಆ ಭಗವಂತನ ಅನುಗ್ರಹ ಬೇಡಿ ನಮ್ಮ ಯೋಗ್ಯತೆ ಇದ್ದಷ್ಟು ಅರಿಯಲು ಪ್ರಯತ್ನಿಸೋಣ.

ಓಂ ಸಹ ನಾವವತು ಸಹ ನೌ ಭುನಕ್ತು ಸಹವೀರ್ಯಂ ಕರವಾವಹೈ
ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ ॥ ಓಂ ಶಾಂತಿಃ ಶಾಂತಿಃ ಶಾಂತಿಃ

No comments:

Post a Comment